ಚಿಣ್ಣರ ಚೆನ್ನರ ಸಿನಿಮಾ (‘ಚೈಲ್ಡಿಷ್’ ಸಿನಿಮಾ ಎನ್ನುವುದನ್ನು ಕೆಲವರು ಹೀಗೆ ಸಮರ್ಥಿಸಿಕೊಳ್ಳುತ್ತಾರೆ) ಮಾಡಿದರೆ ಹೇಗಿರಬಹುದು ಎನ್ನುವುದಕ್ಕೆ ‘ಪಠಾಣ್’ನಲ್ಲಿ ಚಿತ್ರಕಥಾ ಬರಹಗಾರ ಶ್ರೀಧರ್ ರಾಘವನ್ ಸುಳಿವುಗಳನ್ನು ಕಾಣಿಸಿದ್ದರು. ಅವರದ್ದೇ ಬರಹವಿದ್ದ ‘ವಾರ್’ ಹಿಂದಿ ಚಿತ್ರದ ಜಾಯಮಾನವೂ ಅದೇ. ಮಿಕ್ಕಿ–ಮೌಸ್ ಕಾರ್ಟೂನುಗಳ ಭಾವದ ಮೀಟುಗಳಿಗೆ ಹೊರತೇ ಆದ ‘ಕಾರ್ಟೂನ್ ಚಿತ್ರಗಳು’ ಬರುತ್ತಿರುವ ಈ ಕಾಲದಲ್ಲಿ ‘ಟೈಗರ್ 3’ ಕೂಡ ಅಂಥದ್ದಕ್ಕೇ ಇನ್ನೊಂದು ಸೇರ್ಪಡೆ.
‘ಟೈಗರ್ 3’ ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಪಠಾಣ್ ಅರ್ಥಾತ್ ಶಾರುಕ್ ಖಾನ್ ಬರುತ್ತಾರೆ; ‘ಆರ್‌ಆರ್‌ಆರ್’ ಸಿನಿಮಾದಲ್ಲಿ ರಾಮ್‌ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಇಬ್ಬರೂ ಭೇಟಿಯಾಗುವ ದೃಶ್ಯದ ದುರ್ಬಲ ಅನುಕರಣೆಯಂತೆ. ಅಲ್ಲಿ ಸೇತುವೆ ಮೇಲಿನ ಗೂಡ್ಸ್ ಬೋಗಿಗಳು ಹೊತ್ತಿ ಉರಿಯುತ್ತವೆ. ಇಲ್ಲಿ ಸೇತುವೆಯೇ ಮುರಿದು, ಅಲ್ಲಿ ಶಸ್ತ್ರಾಸ್ತ್ರಗಳ ಮೊರೆತದ ಸದ್ದು. ಸಲ್ಮಾನ್, ಶಾರುಕ್ ಇಬ್ಬರೂ ಉಕ್ಕಿನ ಹಗ್ಗಗಳನ್ನು ಹಿಡಿದು ಎತ್ತಲಿಂದ ಎತ್ತಿಲೋ ಹಾರಾಡುತ್ತಾ, ಹೆಲಿಕಾಪ್ಟರನ್ನೂ ವಶಕ್ಕೆ ತೆಗೆದುಕೊಂಡು ಇನ್ನೆತ್ತಲೋ ಸಾಗುವ ಕಾರ್ಟೂನಿಷ್ ಧೋರಣೆ. ಈ ಸಾಹಸಗಳನ್ನು ನೋಡಿ ರೋಮಾಂಚನವಾಗುವುದಕ್ಕಿಂತ ನಗು ಬರುವುದೇ ಹೆಚ್ಚು.
ಈ ಸಲ ಪಾಕಿಸ್ತಾನದ ಪ್ರಧಾನಿಯ ಇಮೇಜನ್ನು ಉಳಿಸುವ ಕೆಲಸವನ್ನು ನಿರ್ದೇಶಕರು ಟೈಗರ್ ಕೈಗೆ ಕೊಟ್ಟುಬಿಟ್ಟಿದ್ದಾರೆ. ಪಾಕಿಸ್ತಾನದ ಭಕ್ತನಂತೆ ಭಾಷಣ ಹೊಡೆದು, ಭಾರತವನ್ನು ಮುಗಿಸುವ ಹುಚ್ಚು ಕನಸು ಕಾಣುವ ಖಳನ ಪಾತ್ರದ ಬರವಣಿಗೆ ಅತಿ ಬಾಲಿಶವಾಗಿದೆ. ಹೀಗಾಗಿ ಟೈಗರನ ಸಾಹಸಗಳನ್ನೆಲ್ಲ ಗಾಳಿಪಟದ ಹಾರಾಟಕ್ಕೆ ಸಮೀಕರಿಸಬಹುದು. ಕತ್ರಿನಾ ಕೈಫ್ ನೃತ್ಯ ಮಾಡದೆ, ಹೆಚ್ಚಾಗಿ ಹೊಡೆದಾಟವನ್ನೇ ಮಾಡಿರುವುದು ರಸಿಕರಿಗೆ ಬಗೆದ ದ್ರೋಹ. ಹಿಂದೆ ಗಿರೀಶ ಕಾರ್ನಾಡರು ನಿರ್ವಹಿಸಿದ್ದ ಪಾತ್ರಕ್ಕೆ ರೇವತಿ ನ್ಯಾಯ ಸಲ್ಲಿಸಿದ್ದಾರೆ.
ಅನಯ್ ಗೋಸ್ವಾಮಿ ಸಿನಿಮಾಟೊಗ್ರಫಿಯು ಕಣ್ಣಿಗೆ ವಿವರಗಳನ್ನು ಕಟ್ಟುವಂತೆ ಮಾಡುವುದಲ್ಲದೆ ತಪ್ಪುಗಳನ್ನೂ ಎತ್ತಿ ತೋರಿಸುತ್ತದೆ. ಸಲ್ಮಾನ್ ಖಾನ್ ಅಭಿನಯಿಸುವ ಕಷ್ಟ ತೆಗೆದುಕೊಂಡಿಲ್ಲ. ಬಟ್ಟೆ ಮಳಿಗೆ ಎದುರಿನ ಹೆಣ್ಣುಬೊಂಬೆಯಂತಿರುವ ಕತ್ರಿನಾ, ಗಂಡುಬೊಂಬೆಯಂತಿರುವ ಇಮ್ರಾನ್ ಹಶ್ಮಿ ತಮಗೂ ನಟನಾ ಕೌಶಲಕ್ಕೂ ಸಂಬಂಧವಿಲ್ಲ ಎಂಬಂತೆ ಇದ್ದುಬಿಟ್ಟಿದ್ದಾರೆ. ಪ್ರೀತಂ ಸಂಗೀತವಾಗಲೀ, ಕುಮುದ್ ಮಿಶ್ರಾ ಹದವರಿತ ಅಭಿನಯವಾಗಲೀ, ಶಾರುಕ್ ಖಾನ್ ಕಾಮಿಡಿ ಟೈಮಿಂಗ್ ಆಗಲೀ ಮೂರನೇ ಟೈಗರ್ ಗರ್ಜಿಸುವಂತೆ ಮಾಡಲು ಸಾಕಾಗುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.