ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ತಿಂಗಳಾದರೂ ರಿಕಿ ಕೈಸೇರದ ಗ್ರ್ಯಾಮಿ ಮೆಡಲ್; ಕಸ್ಟಮ್ಸ್‌ನಲ್ಲೇ ಉಳಿದ ಪ್ರಶಸ್ತಿ!

ಅಕ್ಷರ ಗಾತ್ರ

ಬೆಂಗಳೂರು: 'ಡಿವೈನ್‌ ಟೈಡ್ಸ್‌' ಸಂಗೀತದ ಆಲ್ಬಂಗೆ ಏಪ್ರಿಲ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದ ಬೆಂಗಳೂರಿನ ರಿಕಿ ಕೇಜ್‌, ತಮ್ಮ ಮೆಡಲ್‌ ಇನ್ನೂ ಕೈಸೇರದಿರುವ ಬಗ್ಗೆ ಟ್ವೀಟಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅದು ಬೆಂಗಳೂರಿನ ಕಸ್ಟಮ್ಸ್‌ನಲ್ಲೇ ಸಿಲುಕಿರುವುದಾಗಿ ಹೇಳಿದ್ದಾರೆ. ಅವರ ಮನವಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯಿಸಿದ್ದಾರೆ.

ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ರಿಕಿ ಅವರು ಪ್ರಶಸ್ತಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದರು. ಅವರು ಪಡೆದಿರುವ ಗ್ರ್ಯಾಮಿ ಮೆಡಲ್‌ ಎರಡು ತಿಂಗಳಾದರೂ ಕೈಸೇರದಿರುವ ಬಗ್ಗೆ ಟ್ವಿಟರ್‌ನಲ್ಲಿ ಕಸ್ಟಮ್ಸ್‌ ಇಲಾಖೆಯ ಮೊರೆ ಹೋಗಿದ್ದಾರೆ. ತುರ್ತು ಸಹಾಯ ಕೋರಿ ಚೆನ್ನೈ, ಮುಂಬೈ, ಬೆಂಗಳೂರು ಹಾಗೂ ಕೇಂದ್ರದ ಕಸ್ಟಮ್ಸ್‌ ಇಲಾಖೆಯ ಅಧಿಕೃತ ಟ್ವಿಟರ್‌ ಖಾತೆಗಳನ್ನು ಟ್ಯಾಗ್‌ ಮಾಡಿದ್ದಾರೆ.

'ಇತ್ತೀಚೆಗಷ್ಟೇ ನಾನು ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಬೆಂಗಳೂರಿನ ಕಸ್ಟಮ್ಸ್‌ನಲ್ಲಿ ಕಳೆದ 2 ತಿಂಗಳಿನಿಂದ ನನ್ನ ಮೆಡಲ್‌ ಸಿಲುಕಿದೆ. ಫೆಡ್‌ಎಕ್ಸ್‌, ಫೆಡ್‌ಎಕ್ಸ್‌ಇಂಡಿಯಾ ಆ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ ಹಾಗೂ ಸಹಾಯ ಮಾಡುತ್ತಿಲ್ಲ. ನನ್ನ ಮೆಡಲ್‌ ಪಡೆಯಲು ನಿಮ್ಮ ಸಹಾಯ ಕೋರುತ್ತಿದ್ದೇನೆ' ಎಂದು ರಿಕಿ ಪೋಸ್ಟ್‌ ಮಾಡಿದ್ದಾರೆ.

ಅದರ ಬೆನ್ನಲ್ಲೇ ಮತ್ತೊಂದು ಟ್ವೀಟ್‌ ಮಾಡಿರುವ ಅವರು, 'ಇದಕ್ಕೆ ಕಸ್ಟಮ್ಸ್‌ ಇಲಾಖೆಯನ್ನು ದೂಷಿಸದಂತೆ ಕಳಕಳಿಯ ಮನವಿ ಮಾಡುತ್ತೇನೆ. ಅವರಿಗೆ ಅದರಲ್ಲಿರುವ ವಸ್ತುವಿನ ಬಗ್ಗೆ ತಿಳಿಯದೆಯೇ ಇರಬಹುದು ಅಥವಾ ಉದ್ದೇಶವೂ ಗೊತ್ತಿಲ್ಲದಿರಬಹುದು. ಬಹುಶಃ ಅವರು ಪ್ರಕ್ರಿಯೆಯನ್ನು ಅನುಸರಿಸುತ್ತಿರಬಹುದು. ಅವರು ನನ್ನ ಪ್ಯಾಕೇಜ್‌ನ ಬಗ್ಗೆ ತಿಳಿಯಲಿ ಹಾಗೂ ಅದನ್ನು ಬಿಡುಗಡೆ ಮಾಡಲಿ ಎಂಬುದು ಈ ಟ್ವೀಟ್‌ನ ಉದ್ದೇಶವಾಗಿದೆ' ಎನ್ನುವ ಮೂಲಕ ಕಸ್ಟಮ್ಸ್‌ ವಿರುದ್ಧ ನೆಟ್ಟಿಗರು ಎತ್ತಬಹುದಾದ ಟೀಕೆಗಳಿಗೆ ತಾವೇ ತಡೆಯೊಡ್ಡಿದ್ದಾರೆ.

ಅವರ ಪೋಸ್ಟ್‌ಗೆ ಬೆಂಗಳೂರು ನಗರದ ಕಸ್ಟಮ್ಸ್‌ ಕಮಿಷನರ್‌ ಮತ್ತು ಸಿಬಿಐಸಿ ಟ್ವಿಟರ್‌ ಖಾತೆಗಳಿಂದ ಬಹುಬೇಗ ಪ್ರತಿಕ್ರಿಯೆ ವ್ಯಕ್ತವಾಗಿವೆ.

ಮಣಿಪಾಲ್‌ ಯೂನಿವರ್ಸಿಟಿಯ ಮುಖ್ಯಸ್ಥ ಟಿ.ವಿ.ಮೋಹನ್‌ದಾಸ್‌ ಪೈ ಅವರು ರಿಕಿ ಅವರ ಪೋಸ್ಟ್‌ ಅನ್ನು ಮರು ಹಂಚಿಕೊಂಡು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರ್ಕಾರದ ಹಲವರನ್ನು ಟ್ಯಾಗ್‌ ಮಾಡಿದ್ದರು.

ಟ್ವೀಟ್‌ಗಳನ್ನು ಗಮನಿಸಿರುವ ನಿರ್ಮಲಾ ಸೀತಾರಾಮನ್‌, 'ಬೆಂಗಳೂರು ನಗರದ ಕಸ್ಟಮ್ಸ್‌ ಮತ್ತು ಸಿಬಿಐಸಿಯು ಅದಾಗಲೇ ಅಗತ್ಯ ಕ್ರಮ ಕೈಗೊಂಡಿರುವುನ್ನು ಗಮನಿಸಿದ್ದೇನೆ. ರಿಕಿ ಕೇಜ್‌ ಅವರು ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಧ್ಯಾಹ್ನದ ನಂತರ ರಿಕಿ ಕೇಜ್‌ ಅವರ ಮೆಡಲ್‌ ಕಸ್ಟಮ್ಸ್‌ನಿಂದ ಮುಂದೆ ಸಾಗಲು ಅನುಮತಿ ಸಿಕ್ಕಿದೆ. ನಾಳೆ ಮೆಡಲ್‌ ಕೈಸೇರುವ ವಿಶ್ವಾಸವನ್ನು ರಿಕಿ ವ್ಯಕ್ತಪಡಿಸಿದ್ದಾರೆ. ಕಸ್ಟಮ್ಸ್‌, ಮೋಹನ್‌ದಾಸ್‌ ಪೈ ಹಾಗೂ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

'ಭಾರತದ ಕಸ್ಟಮ್‌ ಕ್ಷಿಪ್ರವಾಗಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಕ್ಕೆ ಧನ್ಯವಾದಗಳು. ನನ್ನ ಮೆಡಲ್‌ ಕಸ್ಟಮ್ಸ್‌ ತೊಡಕು ನಿವಾರಿಸಿಕೊಂಡಿದ್ದು, ನಾಳೆ ತಲುಪಲಿದೆ. ಫೆಡ್‌ಎಕ್ಸ್‌ನಿಂದ ಈಗಷ್ಟೇ ಕರೆ ಬಂದಿದೆ. ಕಸ್ಟಮ್ಸ್‌ ಅಧಿಕಾರಿಗಳ ಬದ್ಧತೆಯಿಂದ ಇದು ಸಾಧ್ಯವಾಗಿದೆ' ಎಂಬರ್ಥದ ಟ್ವೀಟ್‌ ಅನ್ನು ರಿಕಿ ಪ್ರಕಟಿಸಿದ್ದಾರೆ.

ಖ್ಯಾತ ರಾಕ್‌ ಸಂಗೀತಗಾರ ಸ್ಟೂವರ್ಟ್‌ ಕೋಪ್‌ಲ್ಯಾಂಡ್‌ ಅವರೊಂದಿಗೆ ರಿಕಿ ಕೇಜ್‌ ರೂಪಿಸಿರುವ ಡಿವೈನ್‌ ಟೈಡ್ಸ್‌ನಲ್ಲಿ 9 ಹಾಡುಗಳಿವೆ. ಈ ಹಾಡುಗಳ ಪೈಕಿ ಸುಮಾರು ನಾಲ್ಕು ಹಾಡುಗಳಲ್ಲಿ ಕರ್ನಾಟಕದ ಹಲವು ಪ್ರತಿಭೆಗಳು ಕೆಲಸ ಮಾಡಿದ್ದಾರೆ. 'ಬೆಸ್ಟ್‌ ನ್ಯೂ ಏಜ್‌ ಆಲ್ಬಂ' ವಿಭಾಗದಲ್ಲಿ ರಿಕಿ ಮತ್ತು ಸ್ಟೂವರ್ಟ್‌ ಅವರಿಗೆ 64ನೇ ಗ್ರ್ಯಾಮಿ ಪ್ರಶಸ್ತಿ ಸಂದಿದೆ. 2015ರಲ್ಲಿ 'ವಿಂಡ್ಸ್‌ ಆಫ್‌ ಸಂಸಾರ' ಆಲ್ಬಂಗೆ ಮೊದಲ ಗ್ರ್ಯಾಮಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT