ಭಾನುವಾರ, ಜನವರಿ 19, 2020
21 °C

ಕುಮಟಾ ಯುವಕನಮಾಡೆಲಿಂಗ್‌ ಕನಸು...

ಎಂ.ಜಿ. ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ಪೈರುಗದ್ದೆಯ ಯುವಕ ಸಚಿನ್‌ ನಾಯ್ಕ, ಔಷಧ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾರೆ. ಆದರೆ, ಸಂಜೆ ಐದು ಗಂಟೆಯಾಗುತ್ತಿದ್ದಂತೆ ಮಾಲೀಕರ ಅನುಮತಿ ಪಡೆದು, ಸೈಕಲ್ ಏರಿ ಸಮೀಪದ ವನ್ನಳ್ಳಿ ಸಮುದ್ರ ತೀರಕ್ಕೆ ತೆರಳುತ್ತಾರೆ. ಅಲ್ಲಿ ಎರಡು ತಾಸು ಕಸರತ್ತು ಮಾಡಿ, ಬೆವರಿಳಿಸಿ, ಪುನಃ ಅಂಗಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ !

ಆಹಾರದಲ್ಲಿ ಕಟ್ಟುನಿಟ್ಟು, ವ್ಯಾಯಾಮದಲ್ಲೂ ಅಚ್ಚುಕಟ್ಟು. ವ್ಯಾಯಾಮ (ಜಿಮ್‌) ಶಾಲೆಯಲ್ಲಿ ಗುರುಗಳು ನೀಡುವ ನಿರ್ದೇಶನವನ್ನೂ ಶ್ರದ್ಧೆಯಿಂದ ಪಾಲಿಸುತ್ತಾರೆ. ಇಂಥ ಶಿಸ್ತು ಪಾಲನೆಯ ಕಾರಣದಿಂದಾಗಿಯೇ, ರಾಜ್ಯ ಹಾಗೂ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಬಾಡಿಬಿಲ್ಡಿಂಗ್‌ಗಾಗಿ ನಿರಂತರ ಅಭ್ಯಾಸ ಮಾಡುತ್ತಿದ್ದ ಸಚಿನ್‌ ನಾಯ್ಕ, ಹಂತ ಹಂತವಾಗಿ ಬಾಡಿಬಿಲ್ಡರ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಬಹುಮಾನವನ್ನೂ ಪಡೆದರು. ದೇಹದಾರ್ಢ್ಯ ಸ್ಪರ್ಧೆಯಲ್ಲದೇ ಹುಬ್ಬಳ್ಳಿಯಲ್ಲಿ 2018ರಲ್ಲಿ ನಡೆದ ಅಂತರರಾಷ್ಟ್ರೀಯ ಸೈಕಲ್ ಉತ್ಸವ, ಕರಾವಳಿ ಮ್ಯಾರಥಾನ್‌ನಲ್ಲೂ ಬಹುಮಾನ ಪಡೆದಿದ್ದಾರೆ. 2019ರಲ್ಲಿ ಗೋವಾದಲ್ಲಿ ನಡೆದ ಮಿ.ಇಂಡಿಯಾ ಪರ್ಫೆಕ್ಟ್ ಮಾಡೆಲಿಂಗ್ ಸ್ಪರ್ಧೆಯಲ್ಲಿ ರನ್ನರ್ ಅಪ್, ಕಳೆದ ಜುಲೈ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ‘ಮಾಡೆಲ್ ಹಂಟ್ – 2019’ ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕದ ಚಾಂಪಿಯನ್ ಆಗಿದ್ದಾರೆ.

ಬಾಲ್ಯದಿಂದಲೇ ಕಂಡ ಕನಸಿದು..

ಸಚಿನ್‌, ಇಂಥ ಕಸರತ್ತನ್ನು ಶಾಲಾದಿನಗಳಿಂದಲೇ ರೂಢಿಸಿಕೊಂಡಿದ್ದಾರೆ. ಆಗ ಗಿಬ್ ಹೈಸ್ಕೂಲ್ ಆವರಣದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆ ನೋಡುತ್ತಾ, ತಾನು ಅವರ ಹಾಗೆ ಬಾಡಿಬಿಲ್ಡರ್‌ ಆಗಬೇಕೆಂದು ಕನಸು ಕಂಡಿದ್ದರು. ’ನೀನು ಅವರಂತೆ ಮೈಕಟ್ಟು ಬೆಳೆಸಿಕೊಳ್ಳಬೇಕೆಂದರೆ ಮೊಳಕೆ ಕಾಳು, ಕೋಳಿ ಮೊಟ್ಟೆ ತಿನ್ನಬೇಕು. ಜಿಮ್‌ಗೆ ಹೋಗಬೇಕು. ದೇಹ ದಂಡಿಸಬೇಕು’ ಎಂದು ಯಾರೋ ಹೇಳಿದ್ದರು. ಒಮ್ಮೆ ಹೀಗೆ ಊರಿನ ಮುನ್ಸಿಪಲ್‌ ಜಿಮ್‌ಗೆ ಹೋದಾಗ ಅಲ್ಲಿ ಇವರಿಗಿಂತ ದೊಡ್ಡವರೆಲ್ಲ ಕಸರತ್ತು ಮಾಡುವುದನ್ನು ಸಚಿನ್‌ ನೋಡಿದ್ದರು. ಇವರನ್ನು ನೋಡಿದ ಗೆಳೆಯರೊಬ್ಬರು ’ಅವರಿಗಿಂತ ನಿನಗೆ ಚೆಂದದ ಮೈಕಟ್ಟಿದೆ. ನೀನೂ ಜಿಮ್‌ಗೆ ಹೋಗು. ಬಾಡಿಬಿಲ್ಡರ್‌ ಆಗುತ್ತೀಯ’ ಎಂದು ಸಲಹೆ ನೀಡಿದ್ದರು.

ಗೆಳೆಯರ ಮಾತು ಕೇಳಿ, ಮನೆಗೆ ಬಂದು, ಕನ್ನಡಿ ಎದುರು ನಿಂತು, ತನ್ನ ಮೈಕಟ್ಟು ನೋಡಿಕೊಂಡ ಸಚಿನ್‌ಗೆ ಸ್ನೇಹಿತರ ಮಾತು ನಿಜ ಎನ್ನಿಸಿತು. ಮಾರನೆಯ ದಿನದಿಂದಲೇ ಆಹಾರ ಪಥ್ಯದ ಜತೆಗೆ, ಜಿಮ್‌ಗೆ ಹೋಗಲು ತೀರ್ಮಾನಿಸಿದರು. ತಾಯಿಗೆ ನಿತ್ಯ ನಾಲ್ಕು ಮೊಟ್ಟೆ ಬೇಯಿಸಿಕೊಡುವಂತೆ ಕೇಳಿದರು. ಅದಕ್ಕೆ ಅವರ ಅಮ್ಮ, ‘ಮೊಟ್ಟೆ ಬೇಯಿಸಿಕೊಡುವುದು ಕಷ್ಟ. ಮೊಟ್ಟೆ ಬದಲು ರಾಗಿ ರೊಟ್ಟಿ ಮಾಡಿಕೊಡುತ್ತೇನೆ. ಸಾರು ಮಾಡಿದ ಮೀನು ಜಾಸ್ತಿ ತಿನ್ನು’ ಎಂದು ಹೇಳಿದರಂತೆ. ಕೊನೆಗೆ, ಇವರು ಜಿಮ್‌ಗೆ ಹೋಗಲು ಆರಂಭಿಸಿದ ಮೀನು, ಬಸಳೆ-ಬೆಳಚಿನ ಸಾರು, ತಗಟೆ ಸೊಪ್ಪಿನ ಪಲ್ಯದ ಅಡುಗೆ ಮಾಡಿಕೊಟ್ಟರು ಎಂದು ಸಚಿನ್‌ ನೆನಪಿಸಿಕೊಳ್ಳುತ್ತಾರೆ.

ಜಿಮ್ ಸೇರಿದ ಮೇಲೆ ಶಿಕ್ಷಕ ಗುರು ಉಪ್ಪಾರ, ವ್ಯಾಯಾಮ ಹೇಳಿಕೊಡುತ್ತಲೇ, ’ಹೊರಗಡೆ ಎಣ್ಣೆಯಲ್ಲಿ ಕರಿದ ತಿಂಡಿ, ಸಿಹಿ ತಿನಿಸು ತಿನ್ನಬೇಡ. ನಿತ್ಯ ಜಿಮ್‌ಗೆ ಬಂದು ಅಭ್ಯಾಸ ಮಾಡಬೇಕು. ನಿನ್ನನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳಿಸುತ್ತೇನೆ’ ಎಂದು ಹೇಳಿದ್ದರು. ’ಅವರು ಹೇಳಿಕೊಟ್ಟಂತೆ ಅಭ್ಯಾಸ ಮಾಡಿದೆ. ಮುಂದೆ ಭಟ್ಕಳದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ಅಲ್ಲಿ ಒಂದು ಬಹುಮಾನ ಬಂದಿತು' ಎಂದು ಸಚಿನ್‌ ಖುಷಿಯಿಂದ ಹೇಳಿಕೊಂಡರು.

ಆಹಾರದ ಬಗ್ಗೆ ಕಾಳಜಿ..

ಮಾಡೆಲಿಂಗ್ ಅಥವಾ ಬಾಡಿ ಬಿಲ್ಡಿಂಗ್ ಸ್ಪರ್ಧೆ ಇಲ್ಲದಿದ್ದರೂ ಆಹಾರ ವಿಷಯದಲ್ಲಿ ಸಚಿನ್ ನಾಯ್ಕ ಎಂದೂ ರಾಜಿಯಿಲ್ಲ. ಓಟ್ಸ್, ತರಕಾರಿ-ಹಣ್ಣು ತುಣುಕು, ಐದು ಮೊಟ್ಟೆ ಬಿಳಿ ಭಾಗ ಇವರ ಬೆಳಗಿನ ಉಪಹಾರ. ಮಧ್ಯಾಹ್ನ ಊಟದಲ್ಲಿ ಮಸಾಲೆಯಿಲ್ಲದ ಮೀನು, ಕೋಳಿ ಹಾಗೂ ಚಪಾತಿ, ರೊಟ್ಟಿ, ಬೇಯಿಸಿದ ಕಪ್ಪೆಚಿಪ್ಪು, ಕಲಗ ಇರುತ್ತದೆ. ’ಮೊದಲು ಆರೋಗ್ಯ, ನಂತರ ದೇಹ ಸೌಂದರ್ಯ. ಮನಸ್ಸು ಹಗುರವಾಗಿದ್ದರೆ ಮುಖದಲ್ಲಿ ಆರೋಗ್ಯ, ಸೌಂದರ್ಯ ತಾನಾಗಿಯೇ ಸೂಸುತ್ತದೆ' ಎನ್ನುವುದು ಸಚಿನ್ ನಂಬಿಕೆ. ದೇಹ ಸೌಂದರ್ಯ, ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಚಿನ್ ನಾಯ್ಕ, ತನ್ನ ಜೊತೆ ಜಿಮ್ ಬರುವ ಗೆಳೆಯರಿಗೂ ಅಷ್ಟಿಷ್ಟು ಆರೋಗ್ಯದ ಬಗ್ಗೆ ಟಿಪ್ಸ್‌ ನೀಡುತ್ತಾರೆ.

ಮಾಡೆಲಿಂಗ್‌ಗಾಗಿ ತಯಾರಿ

ಸಚಿನ್‌ಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಬೇಕೆಂಬ ಕನಸು ಕಂಡ ಮೇಲೆ, ಜಿಮ್‌ನಲ್ಲಿ ಮಾಡುವ ದೈಹಿಕ ಕಸರತನ್ನು ತುಸು ಬದಲಾಯಿಸಿ ಕೊಂಡಿದ್ದಾರೆ. ‘ಬಾಡಿಬಿಲ್ಡಿಂಗ್ ಹಾಗೂ ಮಾಡೆಲಿಂಗ್‌ಗಾಗಿ ದೇಹ ಹದಗೊಳಿಸಲು ಪ್ರತೇಕ ವ್ಯಾಯಾಮಗಳಿವೆ. ಅತಿಯಾದ ವ್ಯಾಯಾಮ ಮಾಡೆಲಿಂಗ್‌ಗೆ ಸರಿ ಹೊಂದುವುದಿಲ್ಲ’ ಎನ್ನುತ್ತಾರೆ ಅವರು. ಸದ್ಯಕ್ಕೆ ಎಳೆ ಬಿಸಿಲಲ್ಲಿ ನಿಯಮಿತವಾಗಿ ಸೈಕಲ್ ಓಡಿಸುತ್ತಾರೆ. ಮಧ್ಯಾಹ್ನದ ನಿದ್ದೆ ಮಾಡುವುದಿಲ್ಲ. ಕಡು ಬಿಸಿಲಲ್ಲಿ ಓಡಾಡುವುದಿಲ್ಲ. ಇದರ ಜತೆಗೆ, ನಿತ್ಯ ಕನಿಷ್ಠ ಒಂದು ತಾಸು ಸಾರ್ವಜನಿಕ ವಾಚನಾಲಯದಲ್ಲಿ ಬೇರೆ ಬೇರೆ ಮಾಡೆಲ್‌ಗಳ ಬಗ್ಗೆ ಓದುತ್ತಾರೆ. ಅವರ ಆಹಾರ, ಜೀವನ ಕ್ರಮ, ಶ್ರಮದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್ ಖಾನ್, ಸಚಿನ್‌ನ ನೆಚ್ಚಿನ ಮಾಡೆಲ್. ಸಲ್ಮಾನ್ ದೇಹ ಪ್ರದರ್ಶಿಸುವ ಸಿನಿಮಾಗಳು ಬಂದರೆ ಕನಿಷ್ಠ ನಾಲ್ಕು ಬಾರಿಯಾದರೂ ನೋಡುತ್ತಾರಂತೆ. ಸಲ್ಮಾನ್ ಸುಂದರ ದೇಹದ ಹಿಂದಿನ ಶಿಸ್ತು, ಛಲ ಕಠಿಣ ಶ್ರಮವನ್ನು ನಾವು ಅರಿಯಬೇಕು. ಆರೋಗ್ಯ, ದೇಹ ಸೌಂದರ್ಯ ಕಾಪಾಡಲು ಸಿದ್ಧ ಆಹಾರಕ್ಕಿಂತ ನಮ್ಮ ಸ್ಥಳೀಯವಾಗಿ ಸಿಗುವ (ಕರಾವಳಿಯಲ್ಲಿ) ಮೀನು, ಬೆಳಚು, ಕಲಗ, ಶಿಗಡಿ ಹಾಗೂ ಅದರೊಟ್ಟಿಗೆ ಸಾವಯವ ತರಕಾರಿ, ರಾಗಿ ಉತ್ಪನ್ನಗಳು ಅತ್ಯುತ್ತಮ ಆಹಾರ' ಎನ್ನುವುದು ಸಚಿನ್ ಅನುಭವದ ಮಾತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು