ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ.20ರಿಂದ ಶಾರುಖ್​ ಖಾನ್–ದೀಪಿಕಾ ಅಭಿಯನದ ‘ಪಠಾಣ್‌’ ಮುಂಗಡ ಬುಕ್ಕಿಂಗ್‌

Last Updated 18 ಜನವರಿ 2023, 5:37 IST
ಅಕ್ಷರ ಗಾತ್ರ

‘ಬೇಷರಂ ರಂಗ್’ ಗೀತೆಯಿಂದಲೇ ಸದ್ದುಗದ್ದಲವೆಬ್ಬಿಸಿರುವ ಶಾರುಖ್​ ಖಾನ್–ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್​’ ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್‌ ಚಿತ್ರ. ವಿಶೇಷವಾಗಿ ಶಾರುಖ್​ ಖಾನ್ ಈ ಚಿತ್ರದ ಕುರಿತು ಬಹಳ ಆತ್ಮವಿಶ್ವಾಸ ಹೊಂದಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಎದುರು ನೋಡುತ್ತಿದ್ದಾರೆ.

ಜ.25ಕ್ಕೆ ಪಠಾಣ್‌ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಹೀಗಾಗಿ 5 ದಿನ ಮೊದಲು, ಅಂದರೆ ಜ.20ರಿಂದ ಚಿತ್ರದ ಮುಂಗಡ ಬುಕ್ಕಿಂಗ್‌ ಆರಂಭವಾಗಲಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಯಶ್‌ ರಾಜ್‌ ಫಿಲಂಸ್‌ ಹೇಳಿದೆ.

ನಾಲ್ಕು ವರ್ಷಗಳ ವಿರಾಮದ ನಂತರ ಶಾರುಖ್​ ಖಾನ್ ಈ ಚಿತ್ರ ಮಾಡಿದ್ದಾರೆ. ಜೀರೊ, ಜಬ್‌ ಹ್ಯಾರಿ ಮೆಟ್‌, ರಾಯಿಸ್‌ನಂತಹ ಚಿತ್ರಗಳ ಸೋಲಿನ ನಂತರ ಶಾರುಖ್‌ ಒಂದು ದೊಡ್ಡ ಗೆಲುವು ಎದುರು ನೋಡುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ತುಂಬ ನಿರೀಕ್ಷೆ ಇದೆ.

ಚಿತ್ರದ ‘ಬೇಷರಂ ರಂಗ್’ ಗೀತೆ ವಿವಾದ ಸೃಷ್ಟಿಸಿತ್ತು. ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎಂದು ಒಂದು ಗುಂಪು ಚಿತ್ರಕ್ಕೆ ಬಾಯ್ಕಾಟ್‌ ಕರೆ ನೀಡಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಪಡ್ಡಿಸುವ ಬೆದರಿಕೆಯೂ ಕೆಲ ಸಂಘಟನೆಗಳಿಂದ ಇದೆ. ಈ ಚಿತ್ರ ತೆರೆಗೆ ಬಂದರೆ ಚಿತ್ರ ಮಂದಿರವನ್ನೇ ಸುಟ್ಟು ಹಾಕುವುದಾಗಿ ಅಯೋಧ್ಯೆಯ ಸಂತರೊಬ್ಬರು ಹೇಳಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು.

‘ಸಲಾಂ ನಮಸ್ತೆ’ ಖ್ಯಾತಿಯ ಸಿದ್ದಾರ್ಥ್​ ಆನಂದ್​ ಈ ಚಿತ್ರಕ್ಕೆ ನಿರ್ದೇಶಕರು. ಚಿತ್ರದ ಟ್ರೇಲರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಭರ್ಜರಿ ಆ್ಯಕ್ಷನ್‌ ಸಿನಿಮಾ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಾರುಖ್‌ ಜೊತೆ ಅಭಿಮಾನಿಗಳ ಕಣ್ಣಿಗೆ ಹಬ್ಬವೆನಿಸುವ ಒಂದು ಭರ್ಜರಿ ಫೈಟ್‌ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ದೀಪಿಕಾ ಪಡುಕೋಣೆ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿಲನ್​ ಪಾತ್ರದಲ್ಲಿ ಜಾನ್​ ಅಬ್ರಾಹಂ ನಟಿಸಿದ್ದಾರೆ. ವಿವಿಧ ದೇಶಗಳಲ್ಲಿ ‘ಪಠಾಣ್​’ ಚಿತ್ರೀಕರಣ ಮಾಡಲಾಗಿದ್ದು, ಶಾರುಖ್​ ಖಾನ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ.

2 ಗಂಟೆ 26 ನಿಮಿಷದ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ, 13 ಕಡೆಗಳಲ್ಲಿ ಬದಲಾವಣೆಗೆ ಸೂಚಿಸಿತ್ತು. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ 2ಡಿ ಆವೃತಿಯಲ್ಲಿ ಚಿತ್ರ ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT