ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10 | ನನಗೆ ವರ್ತೂರ್‌ ಸಂತೋಷ್‌ ಗೆಲ್ಲಬೇಕು ಎಂದು ಆಸೆ: ಅವಿನಾಶ್‌ ಶೆಟ್ಟಿ

Published 26 ಡಿಸೆಂಬರ್ 2023, 10:14 IST
Last Updated 26 ಡಿಸೆಂಬರ್ 2023, 10:14 IST
ಅಕ್ಷರ ಗಾತ್ರ

ಬೆಂಗಳೂರು: ವೈಲ್ಡ್‌ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆದಿದ್ದ ಅವಿನಾಶ್‌ ಶೆಟ್ಟಿ ಅವರು ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಮೂಲಕ ನಾಲ್ಕು ವಾರಗಳ ತಮ್ಮ ಬಿಗ್‌ಬಾಸ್‌ ಪ್ರಯಾಣವನ್ನು ಮುಗಿಸಿದ್ದಾರೆ. ಮನೆಯಿಂದ ಹೊರಬಂದಿರುವ ಅವಿನಾಶ್‌ ಜಿಯೊ ಸಿನಿಮಾಗೆ ಸಂದರ್ಶನ ನೀಡಿದ್ದು ತಮ್ಮ ಬಿಗ್‌ಬಾಸ್‌ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ಉಳಿದುಕೊಳ್ಳುತ್ತೇನೆ ಅಂದುಕೊಂಡಿದ್ದೆ..

ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದಿದ್ದೀನಿ, ತುಂಬಾನೇ ಫೀಲಿಂಗ್ಸ್‌ ಇವೆ. ವೈಲ್ಡ್‌ಕಾರ್ಡ್‌ ಸ್ಪರ್ಧಿಯಾಗಿ ನಾಲ್ಕು ವಾರ ಬಿಗ್‌ಬಾಸ್‌ ಮನೆಯಲ್ಲಿ ಇದ್ದೆ. ಎಲ್ಲಾ ಟಾಸ್ಕ್‌ಗಳಲ್ಲೂ ನನ್ನ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ. ಬಿಗ್‌ಬಾಸ್‌ ಫಿನಾಲೆ ಹತ್ತಿರವಿರುವಾಗ ಮನೆಯಿಂದ ಹೊರಗೆ ಬಂದಿರುವುದಕ್ಕೆ ಸ್ವಲ್ಪ ದುಃಖವಾಗುತ್ತಿದೆ. ನಾನು ಎಲಿಮಿನೇಟ್ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಅಂದುಕೊಂಡಿದ್ದೆ ಎಂದು ಅವಿನಾಶ್‌ ತಮ್ಮ ಅಭಿಪ್ರಾಯವನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ!

ವೈಲ್ಡ್ ಕಾರ್ಡ್‌ ಸ್ಪರ್ಧಿ ಅಂದ ಕೂಡಲೇ ನಿರೀಕ್ಷೆ ಹೆಚ್ಚಿಗೆಯೇ ಇರುತ್ತದೆ. ಆ ನಿರೀಕ್ಷೆಯನ್ನು ಪೂರೈಸುವ ಹಾದಿಯಲ್ಲಿಯೇ ನಾನಿದ್ದೆ ಕೂಡ. ಒಂದು ವಾರ ಗ್ರೇಸ್ ಟೈಮ್ ಕೂಡ ಇತ್ತು. ನಾನು ಮನೆಗೆ ಹೋದ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದನ್ನು ನಾನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ ಅನಿಸುತ್ತದೆ. ಆದರೆ ಗೇಮ್‌ನಲ್ಲಿ ನನ್ನತನವನ್ನು ಬಿಟ್ಟುಕೊಡಲಿಲ್ಲ ಎಂದು ಅವಿನಾಶ್‌ ಹೇಳಿದ್ದಾರೆ.

ಸ್ನೇಹದಿಂದ ನೋಡಿಕೊಂಡರು!

ನಾನು ಮನೆಯ ಒಳಗೆ ಹೋದಾಗ ವಿನಯ್, ತನಿಷಾ, ಕಾರ್ತಿಕ್‌ ಎಲ್ಲರ ಬಗ್ಗೆಯೂ ಕೆಲವು ಪೂರ್ವನಿರ್ಧರಿತ ಅಭಿಪ್ರಾಯಗಳಿದ್ದವು. ಎಲ್ಲರಿಗಿಂತ ಮನೆಯಲ್ಲಿ ಕಡಿಮೆ ಪರಿಚಯ ಇದ್ದಿದ್ದು ವರ್ತೂರ್‌ ಸಂತೋಷ್‌ ಮತ್ತು ತುಕಾಲಿ ಅವರ ವ್ಯಕ್ತಿತ್ವ. ಐವತ್ತು ದಿನಗಳ ನಂತರ ಮನೆಗೆ ಹೋದಾಗ ಸದಸ್ಯರಿಂದ ಬೇರೆ ರೀತಿಯ ಸ್ಪಂದನೆ ಸಿಕ್ಕಿತ್ತು. ಆದರೆ, ವರ್ತೂರು ಸಂತೋಷ್‌ ಮತ್ತು ತುಕಾಲಿ ಅವರು ತುಂಬಾನೇ ಸ್ನೇಹದಿಂದ ನೋಡಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಕಲಿ–ಪ್ರಾಮಾಣಿಕ–ಅಂತಿಮ ಸ್ಪರ್ಧಿ?

ನನಗೆ ವರ್ತೂರ್‌ ಸಂತೋಷ್‌ ಅವರು ತುಂಬಾ ಪ್ರಾಮಾಣಿಕ ಮನುಷ್ಯ ಅನಿಸಿದರು. ವಿನಯ್‌ ಹಾಗೂ ತನಿಷಾ ಸ್ವಲ್ಪ ನಕಲಿ ಮಾಡುತ್ತಿದ್ದಾರೆ. ವರ್ತೂರ್‌ ಸಂತೋಷ್‌ ಅವರು ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜೊತೆಗೆ ಪ್ರತಾಪ್‌ ಕೂಡ ಬರಬಹುದು. ಸಂಗೀತಾ ಕೂಡ ಟಾಪ್‌ 5 ಸ್ಪರ್ಧಿಗಳ ಪಟ್ಟಿಯಲ್ಲಿ ಇರುತ್ತಾರೆ. ಕಾರ್ತಿಕ್‌ ಕೂಡ ತುಂಬ ಪ್ರಬಲ ಸ್ಪರ್ಧಿ, ತುಕಾಲಿ ಅವರು ಬುದ್ಧಿವಂತ ಹಾಗೂ ಸ್ವಯಂ ಕೇಂದ್ರಿತ ಮನುಷ್ಯ ಎಂದು ಹೇಳಿದ ಅವಿನಾಶ್‌ ನನಗೆ ವೈಯಕ್ತಿಕವಾಗಿ ವರ್ತೂರ್‌ ಸಂತೋಷ್‌ ಗೆಲ್ಲಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ. ಮುಂದಿನ ವಾರ ಬಿಗ್‌ಬಾಸ್‌ ಮನೆಯಿಂದ ಸಿರಿ ಅವರು ಹೊರಗೆ ಬರುತ್ತಾರೆ ಎಂದಿದ್ದಾರೆ.

ಫನ್‌ ಫ್ರೈಡೆಯಲ್ಲಿ ತುಂಬಾ ಎಂಜಾಯ್‌ ಮಾಡಿದೆ

ಫನ್‌ ಫ್ರೈಡೆ ಟಾಸ್ಕ್‌ಗಳನ್ನು ನಾನು ತುಂಬಾ ಎಂಜಾಯ್‌ ಮಾಡಿದ್ದೇನೆ. ಅದರಲ್ಲಿ ಕಣ್ಣಿಗೆ ಪಟ್ಟಿ ಹಾಕಿಕೊಂಡು ಬಾಲ್‌ ಸಂಗ್ರಹಿಸುವ ಟಾಸ್ಕ್‌ ನನಗೆ ಇಷ್ಟವಾಯಿತು.

ಶಿಸ್ತು ಕಲಿಸಿಕೊಟ್ಟ ಮನೆ ಅದು!

ಬಿಗ್‌ಬಾಸ್‌ ಮನೆ ಎಂಬುದೇ ಒಂದು ಜಾದು. ಅಲ್ಲಿ ಇರುವ ಸ್ಪರ್ಧಿಗಳಿಗಷ್ಟೇ ಅದರ ಮ್ಯಾಜಿಕ್‌ ಗೊತ್ತಾಗಲು ಸಾಧ್ಯ. ಅಲ್ಲಿನ ಶಿಸ್ತನ್ನು ಮಿಸ್‌ ಮಾಡ್ಕೋತೀನಿ. ಏಕೆಂದರೆ, ಲೈಫ್‌ನಲ್ಲಿ ಶಿಸ್ತು ಯಾಕೆ ಮುಖ್ಯ ಎಂಬುದನ್ನು ಕಲಿಸಿಕೊಟ್ಟ ಮನೆ ಅದು ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ ನನ್ನ ಗಾಡ್‌ಫಾದರ್‌

ಬಿಗ್‌ಬಾಸ್ ನನ್ನ ಜೀವನದಲ್ಲಿಯೇ ಒಂದು ಗಾಡ್‌ಫಾದರ್. ಏಕೆಂದರೆ ಮನೆಯಲ್ಲಿ ನಾಲ್ಕು ವಾರಗಳಷ್ಟೇ ಇದ್ದರೂ ಬದುಕಿನಲ್ಲಿ ನಲವತ್ತು ವರ್ಷಗಳ ಪಾಠ ಕಲಿಸಿದೆ. ಎಷ್ಟೇ ಚಿಕ್ಕ ವಿಚಾರವಾಗಲಿ, ಕೊರತೆಯಾಗಲಿ, ಸಮಸ್ಯೆಯಾಗಲಿ ತಕ್ಷಣವೇ ಅದನ್ನು ಗಮನಿಸಿ ಬಿಗ್‌ಬಾಸ್‌ ಕೊಡುವ ಪರಿಹಾರ, ಪ್ರೀತಿಗೆ ನಾನು ಆಭಾರಿಯಾಗಿದ್ದೀನಿ. ಹಾಗಾಗಿಯೇ ಬಿಗ್‌ಬಾಸ್‌ಗೆ ನಾನು ಋಣಿಯಾಗಿರುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT