ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11 ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್, ಲಾಯರ್ ಜಗದೀಶ್, ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಚೈತ್ರಾ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಮೂಲದ ಗೋಲ್ಡ್ ಸುರೇಶ್ ಅವರ ಹೆಸರನ್ನು ರಾಜ–ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿದೆ.
ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವುದು ಕಾರ್ಯಕ್ರಮ ಆರಂಭವಾದ ಬಳಿಕ ತಿಳಿದುಬರಬೇಕಿದೆ.
ಈ ಬಾರಿ ಬಿಗ್‌ಬಾಸ್ ಸ್ವರ್ಗ–ನರಕ ಎನ್ನುವ ಹೊಸ ಪರಿಕಲ್ಪನೆಯಲ್ಲಿ ಪ್ರೇಕ್ಷಕರ ಎದುರು ತೆರೆದುಕೊಳ್ಳುತ್ತಿದೆ.
ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.