ಭಾನುವಾರ, ಫೆಬ್ರವರಿ 23, 2020
19 °C

ಹಕ್ಕಿಯ ಕೂಗಲ್ಲಿ ಅರಳಿದ ಸಂಸ್ಕೃತಿ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

Prajavani

ಮಾನವನ ಬದುಕಿನಲ್ಲಿ ಪಕ್ಷಿಗಳು ಹಾಸುಹೊಕ್ಕಾಗಿವೆ. ವಿಕಾಸದ ಪಥದಲ್ಲಿ ಅವು ರೆಕ್ಕೆ ಕಟ್ಟಿಕೊಂಡು ಬಾನಿಗೆ ಹಾರಿದ್ದು; ಬದುಕುಳಿಯುವ ತಂತ್ರವಾಗಿ ಬಣ್ಣ ಮೆತ್ತಿಕೊಂಡಿದ್ದು ವಿಸ್ಮಯಗಳ ಸರಮಾಲೆ. ನಿಸರ್ಗದ ಅಡೆತಡೆ ದಾಟಲು ಹಿಂಜರಿಯುವುದಿಲ್ಲ. ಶೃಂಗಸಭೆಗಳಲ್ಲಿ ಕುಳಿತು ದೇಶ, ವಿದೇಶಗಳ ರಾಜಕೀಯ ಧುರೀಣರು ರೂಪಿಸುವ ಗಡಿರೇಖೆಗಳನ್ನು ಮೀರುವ ಸಾಮರ್ಥ್ಯವಿರುವುದು ಅವುಗಳಿಗೆ ಮಾತ್ರ. 

ಮನುಷ್ಯನನ್ನು ಹೆಚ್ಚು ಆಕರ್ಷಿಸಿರುವುದು ಹಕ್ಕಿಗಳ ಹಾರಾಟ ಶಕ್ತಿ. ಮರಿಗಳಿಗೆ ಗುಟುಕು ನೀಡಿ, ಬದುಕಿನ ಪಾಠ ಹೇಳಿ ಭಾವನಾತ್ಮಕ ನಂಟಿನ ಮಹತ್ವ ಸಾರುವ ಅವುಗಳಿಗೆ ಮನುಷ್ಯರು ಮನಸೋತಿರುವುದಕ್ಕೆ ಅಚ್ಚರಿಯೇನೂ ಇಲ್ಲ. ಅವುಗಳ ವೈವಿಧ್ಯಮಯ ರೂಪವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಆನಂದ. ಪಕ್ಷಿಸಂಕುಲದ ಮೋಹಕ ಗಾಯನಕ್ಕೆ ಮನಸೋಲದವರು ವಿರಳ. ಬಹುಶಃ ಮುಂಜಾನೆ ಅವುಗಳ ಕೂಗು ಕೇಳದವರು ಇಲ್ಲವೆಂದೇ ಹೇಳಬಹುದು. ಮನುಷ್ಯರ ಪ್ರತಿನಿತ್ಯದ ಗದ್ದಲದ ನಡುವೆಯೂ ಅವು ಹಾಡುವುದನ್ನು ಮರೆತಿಲ್ಲ. 

ಹಕ್ಕಿಗಳೇಕೆ ಕೂಗುತ್ತವೆ?

ಹಕ್ಕಿಗಳು ಹೊಮ್ಮಿಸುವ ಶಬ್ದಗಳನ್ನು ಕರೆ (call) ಮತ್ತು ಗಾಯನ (song) ಎಂದು ವರ್ಗೀಕರಿಸಿದ್ದಾರೆ ಪಕ್ಷಿತಜ್ಞರು. ಎಲ್ಲಾ ಪಕ್ಷಿಗಳು ‘ಕರೆ’ ಅಥವಾ ‘ಕೂಗು’ತ್ತವೆ. ತಮ್ಮ ಆವಾಸ ಗುರುತಿಸುವಿಕೆ, ಶತ್ರುಗಳಿಂದ ಎಚ್ಚರದಿಂದ ಇರಲು ಅವುಗಳಿಗೆ ಕೂಗು ಅನಿವಾರ್ಯ. ಕೆಲವು ಪಕ್ಷಿಗಳ ಗಟ್ಟಿಧ್ವನಿಯ ಹಿಂದೆ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಉಮೇದು ಇರುತ್ತದೆ. ಖಗಸಂಕುಲದಲ್ಲಿ ಅರ್ಧದಷ್ಟು ಗಂಡುಹಕ್ಕಿಗಳು ಮಾತ್ರವೇ ಗಾಯನದ ಸಾಮರ್ಥ್ಯ ಪಡೆದಿವೆ. ಈ ಪೈಕಿ ಬಹುತೇಕ ಹಕ್ಕಿಗಳು ಸಂಗಾತಿಯ ಆಕರ್ಷಣೆಗಾಗಿ ಹಾಡುತ್ತವೆ.  

ಹಕ್ಕಿಮರಿಗಳ ಹಾಡುಗಾರಿಕೆಯ ಕಲಿಕೆ ಸೋಜಿಗ ಹುಟ್ಟಿಸುತ್ತದೆ. ಮಕ್ಕಳು ತೊದಲುವಿಕೆಯಿಂದ ಆರಂಭಿಸಿ ಹಂತ ಹಂತವಾಗಿ ಮಾತನಾಡಲು ಕಲಿಯುವಂತೆಯೇ ಅವುಗಳ ಕಲಿಕೆ ಆರಂಭವಾಗುತ್ತದೆ. ಒಂದು ವರ್ಷ ತುಂಬುವುದರೊಳಗೆ ಅವುಗಳಿಗೆ ಗಾಯನದ ಕಲೆ ಕರಗತವಾಗುತ್ತದೆ. ದಿನನಿತ್ಯ ತನ್ನ ಸುತ್ತಮುತ್ತ ಇತರೇ ಹಕ್ಕಿಗಳು ಹಾಡುವುದನ್ನು ನೋಡುತ್ತಾ ಹಾಡುಗಾರಿಕೆಯಲ್ಲಿ ನಿಷ್ಣಾತವಾಗುತ್ತವೆ ಎಂಬುದು ಪಕ್ಷಿತಜ್ಞರ ವಿವರಣೆ.

ಜನಪದ ನಂಬಿಕೆ

ಹಕ್ಕಿಗಳ ಕೂಗು ಮತ್ತು ಜನಪದಕ್ಕೆ ಬಿಡಿಸಲಾಗದ ನಂಟು. ಅವುಗಳ ಕೂಗು ಜನಪದೀಯ ಕಥೆಗಳಾಗಿ ರೂಪತಾಳಿವೆ. ಭಾರತದ ಹಲವು ಭಾಗಗಳಲ್ಲಿ ಇಂದಿಗೂ ಈ ಕಥೆಗಳು ಜನಜನಿತ. ಕೋಗಿಲೆಯ ಸ್ವರ ಮಾಧುರ್ಯಕ್ಕೆ ಮನಸೋಲದವರು ಕಡಿಮೆ. ಅದರ ಕುಕಿಲು ಸಂಗೀತದ ಪಂಚಮಸ್ವರ. ಆ ಕೂಗಿನ ಹಿಂದಿರುವ ಕಥೆಗಳು ಕೌತುಕಮಯ. ತಮಿಳುನಾಡಿನ ಕೆಲವು ಭಾಗಗಳಲ್ಲಿ ಪೊಂಗುಳಿ ಕೋಗಿಲೆ(common hawk cuckoo)ಗೆ ‘ಅಕ್ಕ ಕುಯಿಲ್’ ಎಂದು ಕರೆಯುತ್ತಾರೆ. ‘ಅಕ್ಕ’ ಎಂದರೆ ಮನೆಯ ಹಿರಿಯ ಸಹೋದರಿ. ಸ್ಥಳೀಯವಾಗಿ ಅಲ್ಲಿ ಈ ಕೋಗಿಲೆಗೆ ಕುಯಿಲ್ ಎನ್ನುತ್ತಾರೆ. 

ಅದೊಂದು ದಟ್ಟಕಾಡು. ಅಲ್ಲಿ ಹರಿಯುತ್ತಿದ್ದ ನದಿಯಲ್ಲಿ ಒಂದು ದಿನ ಕೋಗಿಲೆ ಮತ್ತು ಆಕೆಯ ಹಿರಿಯ‍ಕ್ಕ ಸ್ನಾನ ಮಾಡುತ್ತಿದ್ದರು. ಒಮ್ಮೆಲೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಇಬ್ಬರೂ ತಬ್ಬಿಬ್ಬುಗೊಂಡರು. ನದಿಯಲ್ಲಿ ಪ್ರವಾಹವೂ ಹೆಚ್ಚಿತು. ಕೋಗಿಲೆಯ ಅಕ್ಕ ನೀರಿನಲ್ಲಿ ಕೊಚ್ಚಿಹೋದಳಂತೆ. ಅಂದಿನಿಂದಲೂ ಅದು ‘ಅಕ್ಕ... ಅಕ್ಕ...’ ಎಂದು ತನ್ನ ಸಹೋದರಿಯನ್ನು ಕರೆಯುತ್ತಿದೆ ಎಂಬ ಸುಂದರವಾದ ಜನ‍ಪದ ಕಥೆ ಆ ಭಾಗದಲ್ಲಿದೆ.

ಉತ್ತರಾಖಂಡ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಪೊಂಗುಳಿ ಕೋಗಿಲೆಯ ಕಥೆ ತುಂಬಾ ಭಿನ್ನ ಹಾಗೂ ಕುತೂಹಲಕಾರಿ. ಕುಮಾವೂನ್‌ ಅಲ್ಲಿನ ಆಡಳಿತದ ಒಂದು ಭಾಗ. ಚಂಪಾವತ್, ನೈನಿತಾಲ್ ಪ್ರದೇಶ ಬರುವುದು ಅಲ್ಲಿಯೇ. ಹಾಗಾಗಿಯೇ, ಈ ಪ್ರದೇಶ ಪ್ರವಾಸಿಗರಿಗೆ ಸ್ವರ್ಗ ತಾಣ. ಹಿಮಾಲಯದ ಎತ್ತರ ಪ್ರದೇಶಗಳಲ್ಲಿ ಬೆಳೆಯುವ ರೋಡೋಡೆಂಡ್ರಾನ್ ಸಸ್ಯಸಂಕುಲದಲ್ಲಿ ಹೂವು ಅರಳುವುದು ಬೇಸಿಗೆ ಕಾಲದಲ್ಲಿ. ಈ ಕೋಗಿಲೆ ಅಲ್ಲಿಗೆ ವಲಸೆ ಬರುವುದು ಈ ಋತುವಿನಲ್ಲಿಯೇ. ಈ ಗಿಡಗಳಲ್ಲಿ ಹೂವು ಅರಳಿ ನಿಂತಿವೆ ಎಂದು ಕೋಗಿಲೆಯು ಸ್ಥಳೀಯರಿಗೆ ಕೂಗಿ ಹೇಳುತ್ತದೆಯಂತೆ.

ಹಿಮಾಚಲ ಪ್ರದೇಶದಲ್ಲಿ ಇರುವ ಪೊಂಗುಳಿ ಕೋಗಿಲೆಯ ಕಥೆ ರೋಚಕವಾಗಿದೆ. ಯಾರಾದರು ಕೆಲಸ ಮಾಡುತ್ತಿದ್ದಾಗ ಇದರ ಕೂಗು ಕೇಳಿಸಿಕೊಂಡರೆ ಅವರು ಅದೇ ಕೆಲಸವನ್ನು ಮುಂದುವರಿಸುತ್ತಾರೆ ಎಂಬುದು ಅಲ್ಲಿನವರ ನಂಬಿಕೆ. ಒಂದು ವೇಳೆ ಒಂಟಿಯಾಗಿ ನಡೆಯುವಾಗ ಅದರ ಕೂಗು ಕಿವಿಗೆ ಬಿದ್ದರೆ ಆ ವ್ಯಕ್ತಿ ಜೀವನಪರ್ಯಂತ ನಡೆಯುತ್ತಲೇ ಇರುತ್ತಾನೆ ಎನ್ನುವ ಕಥೆ ಪ್ರಚಲಿತದಲ್ಲಿದೆ.

ಸರಳೆ ಸಿಳ್ಳಾರದ ಕಥಾನಕ

ಸರಳೆ ಸಿಳ್ಳಾರ (malabar whistling thrush) ತನ್ನ ಇಂಪಾದ ಕೂಗಿನಿಂದ ಪ್ರಸಿದ್ಧಿ ಪಡೆದಿರುವ ಪಕ್ಷಿ. ಭಾರತದ ಪಕ್ಷಿಶಾಸ್ತ್ರದ ಪಿತಾಮಹ ಸಲೀಂ ಅಲಿ ಅವರು ಇದಕ್ಕೆ ‘ಸೋಂಬೇರಿ ಶಾಲಾ ಹುಡುಗ’ ಎಂದು ಕರೆದಿದ್ದಾರೆ. ಅದರ ಕೂಗು ಮೋಹಕವಾದುದು. ಕೇರಳ ಮತ್ತು ತಮಿಳುನಾಡಿನ ಕೆಲವು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾದರ್ ಬುಡಕಟ್ಟು ಜನರು ವಾಸಿಸುತ್ತಾರೆ. ಅವರ ಬದುಕಿಗೂ ಮತ್ತು ಈ ಹಕ್ಕಿಗೂ ಅನನ್ಯ ಸಂಬಂಧ. ಮನೆಯ ಹಿರಿಯಣ್ಣ ಸತ್ತಾಗ ಆತ ಸರಳೆ ಸಿಳ್ಳಾರನಾಗಿ ಮತ್ತೆ ಹುಟ್ಟುತ್ತಾನೆ ಎಂಬುದು ಆ ಸಮುದಾಯದ ಜನರ ನಂಬಿಕೆ. ಕಾಡಿನಲ್ಲಿ ಅವರು ಒಬ್ಬರೇ ಸಂಚರಿಸುವಾಗ ಈ ಹಕ್ಕಿ ಕೂಗಿದರೆ ‘ನಾವು ಏಕಾಂಗಿಯಲ್ಲ; ತನ್ನ ಸಹೋದರ ಕೂಡ ನಮ್ಮೊಡನೆ ಇದ್ದಾನೆ’ ಎಂದು ನಂಬಿಕೊಂಡು ಹೆಜ್ಜೆ ಹಾಕುತ್ತಾರಂತೆ.

ಶಕುನದ ಹಕ್ಕಿ

ಹಾಲಕ್ಕಿ (spotted owlet)ಗೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ‘ಶಕುನದ ಹಕ್ಕಿ’ ಎಂದು ಕರೆಯುತ್ತಾರೆ. ಇದರ ಕೂಗಿನ ಹಿಂದೆಯೂ ಜನಪದೀಯ ಕಥೆಯೊಂದಿದೆ.

ರಾಜ್ಯದ ಕೆಲವೆಡೆ ಬುಡಬುಡಿಕೆ ಜನಾಂಗದವರು ಇದ್ದಾರೆ. ಹಾಲಕ್ಕಿ ಶಕುನ ನುಡಿದೈತೆ... ಜಯವಾಗುತೈತೆ ಶುಭವಾಗತೈತೆ ಶುಭವಾಗತೈತೆ ಜಯವಾಗತೈತೆ... ಎಂದು ನುಡಿಯುತ್ತಾ ಹಳ್ಳಿಯಿಂದ ಹಳ್ಳಿಗೆ ಅಲೆಯುವ ಈ ಸಮುದಾಯದವರು ಒಂದರ್ಥದಲ್ಲಿ ಸಂಚಾರಿ ಸಾಂಸ್ಕೃತಿಕ ರಾಯಭಾರಿಗಳೂ ಹೌದು.

‘ಜಾವ ಕಟ್ಟುವುದು’ ಅವರ ಸಂಪ್ರದಾಯ. ಮಧ್ಯರಾತ್ರಿ ರುದ್ರಭೂಮಿಯಲ್ಲಿ ಸಂಚರಿಸಿ ಅಲ್ಲಿ ಹಾಲಕ್ಕಿ ನುಡಿಯುವುದನ್ನು ಆಲಿಸುತ್ತಾರಂತೆ. ಅದರ ನುಡಿ ಅವರಿಗಷ್ಟೇ ಅರ್ಥವಾಗುತ್ತದೆ ಎಂಬುದು ಗ್ರಾಮೀಣರ ನಂಬಿಕೆ. ಹಾಲಕ್ಕಿಯ ನುಡಿ ಕೇಳಿಸಿಕೊಂಡು ಬೆಳಗಿನ ಜಾವ ಹಳ್ಳಿಯ ಬೀದಿಗಳಲ್ಲಿ ಏಕಾಂಗಿಯಾಗಿ ಬುಡಬುಡಿಕೆ ನುಡಿಸುತ್ತಾರೆ ಎಂದು ಹಳ್ಳಿಗರು ನಂಬುತ್ತಾರೆ. 

ಹಕ್ಕಿಗಳು ಮತ್ತು ಮಾನವನ ನಡುವಿನ ಒಡನಾಟದಿಂದ ಜನಪದ ಕಥೆಗಳು ಹುಟ್ಟಿವೆ. ಆದರೆ, ದಿನ ಕಳೆದಂತೆ ತನ್ನ ಸುತ್ತಲಿನ‌ ಪರಿಸರದಿಂದ ಮನುಷ್ಯ ದೂರ ಸರಿಯುತ್ತಿರುವುದು ವಿಪರ್ಯಾಸ. ಮತ್ತೊಂದೆಡೆ ಅವುಗಳ ‌ನೆಲೆಯನ್ನೂ ನಾಶ ಮಾಡುತ್ತಿದ್ದಾನೆ. ಹಾಗಾಗಿ, ಹಕ್ಕಿಗಳ ಜೊತೆಗೆಯೇ ಅರಳಿದ ಮನುಷ್ಯನ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಈ ಸಂಬಂಧವನ್ನು ಮುಂದುವರಿಸುವ ಅಗತ್ಯತೆ ಹೆಚ್ಚಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)