ಕರ್ನಾಟಕಕ್ಕೆ ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮೊದಲ ಸ್ಥಾನಗಳಿಸಲು ಎಲ್ಲಾ ಅವಕಾಶಗಳಿವೆ. ಆದರೆ, ಆನೆ-ಕಾಟಿಗಳ ವರ್ತನೆಯನ್ನು ಅಭ್ಯಾಸ ಮಾಡಿದ ತಜ್ಞರ ಸಲಹೆಯನ್ನು ಕೇಳಲು ಇಲಾಖೆ ತಯಾರಿಲ್ಲ. ಜೊತೆಗೆ ಇಚ್ಛಾಶಕ್ತಿಯ ಕೊರತೆಯೂ ಇದೆ ಎಂದು ಲೇಖಕರು ವಿಶ್ಲೇಷಿಸಿದ್ದಾರೆ.

ಬದಲಾದ ಕಾಲಮಾನದಲ್ಲಿ ಜಗತ್ತಿನ ಹಲವು ದೇಶಗಳು ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ಕೊಡುತ್ತಿವೆ. ಸಹ್ಯಾದ್ರಿ ಶ್ರೇಣಿಯ ಬಹುಪಾಲು ಪ್ರದೇಶವನ್ನು ಹೊಂದಿದ ಕರ್ನಾಟಕ ಕೂಡಾ ಸಹ್ಯಾದ್ರಿ ಸಂರಕ್ಷಣೆಗೆ ಹೆಚ್ಚು ಒತ್ತು ಕೊಡಲಿದೆ. 2025-2026ನೇ ಸಾಲಿಗೆ ಹೆಚ್ಚು ಹಣವನ್ನು ಬಜೆಟ್ ನಲ್ಲಿ ಮೀಸಲಾಗಿ ಇಡಬಹುದು ಎಂಬ ಪರಿಸರ ಪ್ರೇಮಿಗಳ ನಿರೀಕ್ಷೆ ಹುಸಿಯಾಗಿದೆ.

ಅರಣ್ಯ, ವನ್ಯ ಸಂಪತ್ತು ಮತ್ತು ಜೀವಿವೈವಿಧ್ಯ ನೆಲೆಗಳಿಗೆ ರಕ್ಷಣೆ ಮತ್ತು ಭದ್ರತೆ ನೀಡುವ ಕೆಲಸವನ್ನು ಮಾಡುವುದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಪ್ರಮುಖ ಕರ್ತವ್ಯ ಮತ್ತು ಹೊಣೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಭವನದಲ್ಲಿ ಕುಳಿತವರ ಧೋರಣೆ ಬದಲಾಗಿದೆ. ರಕ್ಷಣೆ ಮತ್ತು ಭದ್ರತೆಗಳಿಗೆ ಬದಲಾಗಿ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಈ ಬಾರಿಯ ಬಜೆಟ್ ಎತ್ತಿ ತೋರಿಸುತ್ತಿದೆ. ಕಳೆದ ಕಾಲು ಶತಮಾನದಲ್ಲಿ ಸಹ್ಯಾದ್ರಿಯ ಅರಣ್ಯ ಕಿರಿದಾಗುತ್ತಲೇ ಇದೆ. ವನ್ಯಜೀವಿಗಳ ಆವಾಸಸ್ಥಾನ ಕ್ಷೀಣಿಸುತ್ತಿದೆ. ಮಾನವನ ಕಾರ್ಯವ್ಯಾಪ್ತಿ ಮತ್ತು ಚಟುವಟಿಕೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಇದು ನೇರವಾಗಿ ಮನುಷ್ಯನೊಂದಿಗೆ ಸಂರ್ಘಷಕ್ಕೆ ಕಾರಣವಾಗುತ್ತಿದೆ. ಕೃಷಿ ಪ್ರದೇಶಕ್ಕೆ ಕಾಡಾನೆಗಳು, ಕಾಟಿಗಳು ಬರುತ್ತಿವೆ. ಆಯಾ ಪ್ರದೇಶದಲ್ಲಿ ವಾಸಿಸುತ್ತಿರುವ ವನ್ಯಪ್ರಾಣಿಗಳ ನಿಯಂತ್ರಣ ನೈಸರ್ಗಿಕವಾಗಿಯೇ ಆಗುತ್ತದೆ. ಆದರೆ, ನೈಸರ್ಗಿಕವಾಗಿ ನಿಯಂತ್ರಣಗೊಳ್ಳುವ ಪ್ರಕ್ರಿಯೆ ಸಮಯ ಬೇಡುತ್ತದೆ.

ದೇಶದಲ್ಲಿ ಹೆಚ್ಚು ಆನೆಗಳನ್ನು ನಮ್ಮ ರಾಜ್ಯ ಹೊಂದಿದೆ. ಅರಣ್ಯ ಇಲಾಖೆಯ ಅತಿಯಾದ ಹಸ್ತಕ್ಷೇಪ ಮತ್ತು ಕಳಪೆ ನಿರ್ವಹಣೆಯಿಂದಾಗಿ, ಮಾನವ-ಆನೆ ಸಂಘರ್ಷ ತಾರಕಕ್ಕೇರಿದೆ. ಸಂಘರ್ಷವನ್ನು ನಿರ್ವಹಿಸುವಲ್ಲಿ ಇಲಾಖೆ ಪದೇ ಪದೇ ವಿಫಲವಾಗುತ್ತಿದೆ. ರೈತರ ಬೆಳೆ ನಾಶ ಮಾಡುವ ಹಾಗೂ ಮನುಷ್ಯರನ್ನು ಕಂಡರೆ, ಬೆನ್ನೆತ್ತುವ ಆನೆಗಳನ್ನು ಪುಂಡಾನೆಗಳು ಎಂದು ಕರೆಯಲಾಗುತ್ತದೆ. ಇಂತಹ ಆನೆಗಳನ್ನು ಗುರುತಿಸಿ, ಅವುಗಳಿಗೆ ಅರಿವಳಿಕೆ ಮದ್ದು ನೀಡಿ, ಅವುಗಳನ್ನು ಬೇರೆಯಾಗಿ ಇಡುವ ಯೋಜನೆಗೆ ₹ 20 ಕೋಟಿ ಮೀಸಲಾಗಿಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ 2,000 ಹೆಕ್ಟೇರ್ ಪ್ರದೇಶದಲ್ಲಿ ಪುಂಡಾನೆಗಳನ್ನು ಕೂಡಿಡುವ ಈ ಯೋಜನೆಗೆ ‘ಕಾಡಾನೆ ಬಿಡುವ ಧಾಮ’ ವೆಂದು ಕರೆಯಲಾಗಿದೆ. ಚೋದ್ಯವೆಂದರೆ, ಯಾವುದಾದರೂ ಸಾಕಿದ ಅಥವಾ ಬಂಧನದಲ್ಲಿಟ್ಟ ಪ್ರಾಣಿಗಳ ಮರಿಗಳನ್ನು ಮತ್ತೆ ವಾಪಾಸು ಕಾಡಿಗೆ ಬಿಡುವ ಪೂರ್ವ ತಯಾರಿಯಾಗಿ ಈ ಧಾಮವನ್ನು ಸ್ಥಾಪಿಸಲಾಗುತ್ತದೆ. ಒಂದು ಸೀಮಿತ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ಬಿಟ್ಟು, ಅವುಗಳನ್ನು ಹಲವು ದಿನಗಳ ಕಾಲ ಗಮನಿಸಲಾಗುತ್ತದೆ. ನಂತರದಲ್ಲಿ, ಆ ಪ್ರಭೇದದ ಮರಿಗಳು ನೈಸರ್ಗಿಕ ಕಾಡಿಗೆ ಹೊಂದಿಕೊಳ್ಳಬಲ್ಲವು ಎಂಬ ವಿಶ್ವಾಸ ಮೂಡಿದ ಮೇಲೆ, ಅವುಗಳನ್ನು ಶಾಶ್ವತವಾಗಿ ಕಾಡಿಗೆ ಬಿಡಲಾಗುತ್ತದೆ. ಆದರೆ, ಈಗಿನ ಈ ಯೋಜನೆ ಇದಕ್ಕೆ ತದ್ವಿರುದ್ದವಾಗಿದೆ. ಕಾಡಿನಲ್ಲಿರುವ ಕಾಡಾನೆಗಳನ್ನು ಹಿಡಿದು ತಂದು ಸೀಮಿತ ಪ್ರದೇಶದಲ್ಲಿ ಬಿಡುವುದು. 2,000 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚೆಂದರೆ, ನಾಲ್ಕರಿಂದ ಐದು ಆನೆಗಳನ್ನು ಬಿಡಬಹುದಾಗಿದೆ. ಹೆಚ್ಚು ಆನೆಗಳನ್ನು ಬಿಟ್ಟಲ್ಲಿ, ಅವುಗಳಲ್ಲೇ ಸಂಘರ್ಷ ಉಂಟಾಗುವ ಸಾಧ್ಯತೆಗಳಿವೆ. ಇದಕ್ಕಿಂತ ಕಡಿಮೆ ವೆಚ್ಚದಲ್ಲಿ, ಕಾಡಿನ ಪುಂಡಾನೆಗಳ ಸಂಚಾರ ಪಥ ಮತ್ತು ಚಲನವಲನಗಳನ್ನು ಗುರುತಿಸಿ, ಮುನ್ನೆಚರಿಕೆಯಾಗಿ ಅವು ಸಾಗುವ ಮಾರ್ಗದಲ್ಲಿ ಬರುವ ಹಳ್ಳಿಗರಿಗೆ ಮೊದಲೇ ಎಚ್ಚರಿಕೆ ನೀಡುವುದರಿಂದ ಮಾನವ–ಆನೆ ಸಂಘರ್ಷವನ್ನು ತಪ್ಪಿಸಬಹುದಾಗಿದೆ. ಹಾಗೂ ಬೇರೆ ರಾಜ್ಯಗಳಲ್ಲಿ ಈ ಪ್ರಯತ್ನ ಯಶಸ್ವಿಯಾಗಿದೆ.

ಆನೆ–ಕಾಟಿ ದೇಹದಲ್ಲಿ ಚರೆಗಳ ಗುರುತು!

ಆನೆ-ಕಾಟಿಗಳು ಮರಣ ಹೊಂದಿದಾಗ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಲೆನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಈ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಅಚ್ಚರಿಯ ವಿಷಯ ಬಹಿರಂಗವಾಯಿತು. ಕಾಟಿಯ ದೇಹದಲ್ಲಿ 30-40 ಬಂದೂಕಿನಿಂದ ಹಾರಿಸಿದ ಚರೆಗಳು ಸಿಕ್ಕಿದರೆ, ಆನೆಗಳಲ್ಲಿ 80-100 ಚರೆಗಳು ಸಿಕ್ಕಿವೆ. ಈ ವಿದ್ಯಮಾನಕ್ಕೆ ಕಾರಣವೇನು? ವನ್ಯಜೀವಿಗಳ ಆವಾಸಸ್ಥಾನಗಳನ್ನು ಒತ್ತುವರಿ ಮಾಡಿಕೊಂಡು ಕೃಷಿ-ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಈಗ ಕಾನೂನುಬಾಹಿರ ಎಂದು ಪರಿಗಣಿತವಾಗುತ್ತಲೇ ಇಲ್ಲ. ತೋಟವಾಗಿ ಪರಿವರ್ತನೆಯಾದ ತನ್ನ ಮೂಲಸ್ಥಾನಕ್ಕೆ ಆನೆ-ಕಾಟಿಗಳು ಬರುವುದು ಸಾಮಾನ್ಯ ವಿದ್ಯಮಾನ. ಅದು ಒತ್ತುವರಿಯೇ ಇರಲಿ, ಅಲ್ಲಿ ರೈತ ಸಾಲ-ಸೂಲ ಮಾಡಿಯೇ ಬೆಳೆ ಬೆಳೆದಿರುತ್ತಾನೆ. ಬೃಹತ್ ದೇಹಿಗಳು ತೋಟಕ್ಕೆ ಬಂದಾಗ ಬೆಳೆ ನಾಶ ಆಗುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಸಂರಕ್ಷಣೆಯಾದ ಯಾವುದೇ ಪ್ರಾಣಿಯನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ, ನೇರವಾಗಿ ಯಾರೂ ದೊಡ್ಡ ದೇಹಿಗಳನ್ನು ಕೊಲ್ಲುವ ಅತಿರೇಕದ ಕೆಲಸ ಮಾಡುವುದಿಲ್ಲ. ಕುಪಿತಗೊಂಡ ಕೃಷಿಕ ಇದಕ್ಕೊಂದು ಉಪಾಯ ಹುಡುಕಿಕೊಂಡಿದ್ದಾನೆ. ನಾಡಬಂದೂಕನ್ನು ಬಳಸಿ, ಚಿಕ್ಕ ಚರೆಗಳಿಂದ ಅವುಗಳಿಗೆ ಗಾಯ ಮಾಡುವುದು. ಈ ಪ್ರಕ್ರಿಯೆಯಲ್ಲಿ ಚಿಕ್ಕ ಚಿಕ್ಕ ಚರೆಗಳು ಆನೆ-ಕಾಟಿಗಳ ದೇಹವನ್ನು ಸೇರುತ್ತವೆ. ಕಲ್ಪನೆ ಮಾಡಿ, ನಮಗೆ ಚಿಕ್ಕದೊಂದು ಮುಳ್ಳು ಚುಚ್ಚಿದರೂ ಯಾತನೆಯಾಗುತ್ತದೆ. ಅಂಥದರಲ್ಲಿ ಹತ್ತಾರು ಸುಡುವ ಚರೆಗಳು ಪ್ರಾಣಿಗಳ ಮೈ ಸೇರಿದರೆ ಅವುಗಳಿಗೆ ಎಷ್ಟು ಯಾತನೆಯಾಗಬಹುದು. ಮೈ ತುಂಬಾ ಗಾಯಗಳಾಗುತ್ತವೆ. ಸೋಂಕಾದ ಗಾಯ ಮಾಯುವುದಿಲ್ಲ. ಯಮ ಯಾತನೆಯನ್ನು ಅನುಭವಿಸುವ ದೊಡ್ಡ ದೇಹಿಗಳು, ನಿಧಾನಕ್ಕೆ ಸಾವಿನ ದವಡೆಗೆ ಜಾರುತ್ತವೆ. ಬೆಳೆ ರಕ್ಷಣೆಗಾಗಿ ಎಂದು ಪರವಾನಿಗೆ ಪಡೆದ ಬಂದೂಕಿನಿಂದ ಈ ತರಹದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದ ದೊಡ್ಡ ದೇಹಿಗಳು ಮಾನವನೆಡೆಗೆ ತಮ್ಮ ಅಸಹನೆ ಬೆಳೆಸಿಕೊಳ್ಳುತ್ತವೆ. ಇದೇ ಘಟನೆ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಈ ಹಂತದಲ್ಲಿ ದಾರಿಯಲ್ಲಿ ಅಡ್ಡ ಬಂದ ಮನುಷ್ಯನನ್ನು ತನ್ನ ಶತ್ರುವೆಂದೇ ಅವು ಪರಿಗಣಿಸುತ್ತವೆ. ಇದರಲ್ಲಿ ಅಮಾಯಕ ಮನುಷ್ಯರು ಬಲಿಯಾಗುತ್ತಾರೆ. ಪ್ರಾಣಿಗಳ ಈ ವರ್ತನೆಗೆ ಮನುಷ್ಯನ ವಿಪರೀತವೇ ಕಾರಣವಾದರೂ, ಮನುಷ್ಯನೆಡೆಗೆ ಅಸಹನೆ ಹೊಂದಿದ ಆನೆಗಳಿಗೆ ‘ಪುಂಡಾನೆ’ ಎಂಬ ಪಟ್ಟವನ್ನು ಕಟ್ಟಿ, ಅವುಗಳನ್ನು ಸ್ಥಳಾಂತರಿಸುವ ಯೋಜನೆ ರೂಪಿಸುತ್ತಾರೆ ಎಂದರೆ ವಿಪರ್ಯಾಸವಲ್ಲದೇ ಮತ್ತೇನು?

ಅಕ್ರಮ ನಾಡ ಬಂದೂಕು ತಯಾರಿಕೆ

ಮಲೆನಾಡಿನಲ್ಲಿ ಹೋಬಳಿಗೆ ಒಂದರಂತೆ, ನಾಡ ಬಂದೂಕು ತಯಾರಿಸುವ ಘಟಕಗಳಿವೆ. ಅಕ್ರಮ ಬಂದೂಕು ತಯಾರಿಕೆಯನ್ನು ಮಟ್ಟ ಹಾಕಲು ಪೋಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕಾರಣ ಮಾಹಿತಿ ಕೊರತೆ. ಜೊತೆಗೆ ಬಂದೂಕು ತಯಾರಿಸುವವರು, ಬರೀ ಬಂದೂಕು ಮಾತ್ರ ತಯಾರಿಸುವುದಿಲ್ಲ. ಕೃಷಿ ಉಪಕರಣಗಳನ್ನು ತಯಾರಿಸುತ್ತಾರೆ. ಬಂದೂಕಿಗೆ ಬೇಡಿಕೆ ಬಂದಾಗ ಕಳ್ಳತನದಲ್ಲೇ ಮಾಡಿಕೊಡುತ್ತಾರೆ. ಮಲೆನಾಡಿನಲ್ಲಿ ಒಂದು ಅಕ್ರಮ ನಾಡ ಬಂದೂಕಿಗೆ ₹15-20 ಸಾವಿರ ಬೆಲೆಯಿದೆ. ಜೊತೆಗೆ ನಾಡ ಬಂದೂಕಿಗೆ ಬೇಕಾಗುವ ಸಾಮಾಗ್ರಿಗಳನ್ನು ಮಾರುವ ಅಧಿಕೃತ ಮಳಿಗೆಗಳಲ್ಲಿ ಯಾರೂ ಬೇಕಾದರೂ ಮಸಿ, ಚರೆ, ಮದ್ದುಗುಂಡುಗಳನ್ನು ಸುಲಭವಾಗಿ ಪಡೆಯಬಹುದು. ಪರವಾನಿಗೆ ಹೊಂದಿದವರಿಗೆ ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ. ಯಾರು ಎಷ್ಟು ಮದ್ದುಗುಂಡುಗಳನ್ನು ಖರೀದಿಸಿದರು ಎಂಬ ಲೆಕ್ಕವೂ ಸಿಗುವುದಿಲ್ಲ. ಇದರ ಮೇಲೆ ನಿಯಂತ್ರಣ ಹೇರಲು ಅರಣ್ಯ ಇಲಾಖೆಗೆ ಅಧಿಕಾರವಿಲ್ಲ. ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ಕ್ರಮ ತೆಗೆದುಕೊಳ್ಳಬೇಕಾದ ಹೊಣೆ ಇರುವುದು ಗೃಹ ಇಲಾಖೆಗೆ ಇದುವರೆಗೂ ಯಾವುದೇ ಕಾಟಿಯಾಗಲಿ ಅಥವಾ ಆನೆಯಾಗಲಿ ಪೋಲೀಸರಿಗೆ ತಮಗೆ ತೊಂದರೆಯಾಗುತ್ತಿದೆಯೆಂದು ದೂರು ನೀಡಿಲ್ಲವಲ್ಲ?.

ಭಟ್ಟಿ ಇಳಿಸಲು ತುದಿಗಾಲು..

ಈಗ, ಚಿಕ್ಕಮಗಳೂರಿನಲ್ಲಿ ಮನುಷ್ಯ ಮತ್ತು ಕಾಟಿಗಳ ಸಂಘರ್ಷವಾಗುತ್ತಿದೆ. ಕಾಟಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಹೊಸ ಯೋಜನೆ ರೂಪಿಸಲು ಅರಣ್ಯ ಭವನ ತುದಿಗಾಲಲ್ಲಿ ನಿಂತಿದೆ. ಮಧ್ಯಪ್ರದೇಶದ ಭಾಂದವಖಂಡ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸ್ಥಾನಿಕವಾಗಿ ಕಾಟಿಗಳು 1998 ರಲ್ಲಿ ಅಳಿದು ಹೋಗಿದ್ದವು. 250 ಕಿ.ಮೀ ದೂರದಲ್ಲಿರುವ ಕನಾ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಕಾಟಿಗಳ ಸಂಖ್ಯೆ ಚೆನ್ನಾಗಿಯೇ ಇತ್ತು. ಮಧ್ಯಪ್ರದೇಶ ಸರ್ಕಾರವು 2011 ರಿಂದ ಕನಾ ಹುಲಿ ಸಂರಕ್ಷಿತ ಅಭಯಾರಣ್ಯದ ಕಾಟಿಗಳನ್ನು ಹಂತ ಹಂತವಾಗಿ ಭಾಂದವಖಂಡ ಹುಲಿ ಸಂರಕ್ಷಿತ ಅಭಯಾರಣ್ಯ ಪ್ರದೇಶದಲ್ಲಿ ಮರು ಪರಿಚಯಿಸಿತು. ಇಲ್ಲೀಗ ಕಾಟಿಗಳ ಸಂಖ್ಯೆ 170ಕ್ಕೆ ಬಂದು ಮುಟ್ಟಿದೆ. ಇದೊಂದು ಯಶಸ್ವಿ ಪ್ರಯತ್ನವಾಗಿದೆ. ಇದೇ ಮಾದರಿಯನ್ನು ಕರ್ನಾಟಕ ಅರಣ್ಯ ಇಲಾಖೆ ಭಟ್ಟಿ ಇಳಿಸಲು ಹೊರಟಿದೆ.

ಚಿಕ್ಕಮಗಳೂರು ಭಾಗದಲ್ಲಿ ಸಾವಿರಾರು ವರ್ಷಗಳಿಂದ ಜೀವಿಸುತ್ತಿರುವ ಕಾಟಿಗಳನ್ನು ಹಿಡಿದು ಸ್ಥಳಾಂತರಿಸುವ ಯೋಜನೆ ನಿಧಾನಕ್ಕೆ ಮುನ್ನೆಲೆಗೆ ಬರುತ್ತಿದೆ. ಚಿಕ್ಕಮಗಳೂರಿನ ಸಮಸ್ಯಾತ್ಮಕ ಕಾಟಿಗಳನ್ನು ಸೆರೆ ಹಿಡಿದು ಮತ್ತೆ ಭದ್ರಾ ಅಭಯಾರಣ್ಯ ಭಾಗದಲ್ಲಿ ಬಿಡುವ ಯೋಜನೆಗೆ ಒಂದು ತಾರ್ಕಿಕ ತಳಪಾಯವೇ ಇಲ್ಲ. ಸಕಲೇಶಪುರ, ಹಾಸನ ಮುಂತಾದ ಕಡೆಗಳಲ್ಲಿ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಕೆಲಸವನ್ನು ಕಳೆದ ವರ್ಷ ಹಮ್ಮಿಕೊಳ್ಳಲಾಗಿತ್ತು. ಸೆರೆ ಸಮಯದಲ್ಲಿ ಅರಿವಳಿಕೆ ಪ್ರಮಾಣ ಹೆಚ್ಚಾಗಿದ್ದರಿಂದ ಹಲವು ಆನೆಗಳು ಸತ್ತು ಹೋಗಿದ್ದವು.

ಗುಜರಾತಿನ ಗೀರ್ ರಾಷ್ಟ್ರೀಯ ಉದ್ಯಾನವನದಲ್ಲಿ ಅತಿ ಹೆಚ್ಚು ಸಾಂದ್ರತೆ ಹಾಗೂ ಒತ್ತಡದಲ್ಲಿ ಬದುಕುತ್ತಿರುವ ಏಷ್ಯಾಟಿಕ್ ಸಿಂಹಗಳ ಕೆಲವು ಗುಂಪುಗಳನ್ನು ಕುನೋ ಉದ್ಯಾನವನಕ್ಕೆ ಸ್ಥಳಾಂತರ ಮಾಡಬೇಕು ಎಂಬ ಪ್ರಸ್ತಾಪ ಹಿಂದೆ ಇತ್ತು. ಯಾವುದಾದರೂ ಸಾಂಕ್ರಮಿಕ ರೋಗ ಉಲ್ಬಣಗೊಂಡಲ್ಲಿ, ದೇಶದ ಮತ್ತು ಗುಜರಾತಿನ ಹೆಮ್ಮೆಯ ಸಿಂಹಗಳ ಇಡೀ ಸಂಕುಲವೇ ವಿನಾಶವಾಗಬಹುದು ಎಂಬುದು ಅತಿದೊಡ್ಡ ಕಾರಣವಾಗಿತ್ತು. ಸಿಂಹಗಳ ಸ್ಥಳಾಂತರ ಯೋಜನೆಯ ಭಾಗವಾಗಿ ಕುನೋದ 24 ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಪೂರಕವಾಗಿ 2013ರಲ್ಲಿ ಸರ್ವೋಚ್ಚ ನ್ಯಾಯಾಲಯವು 2018ರ ಹೊತ್ತಿಗೆ ಏಷ್ಯಾಟಿಕ್ ಸಿಂಹಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಿ ವರದಿ ಸಲ್ಲಿಸುವುದಕ್ಕೆ ಐದು ವರ್ಷಗಳ ಗಡುವು ನಿಗದಿ ಮಾಡಿದ್ದನ್ನು ಹಾಗೂ ನ್ಯಾಯಾಲಯದ ಆದೇಶವನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವನ್ಯಜೀವಿಗಳ ಹಾಗೂ ಅವುಗಳ ಆವಾಸಸ್ಥಾನಗಳನ್ನು ಕಾಪಿಡುವಲ್ಲಿ ಮತ್ತು ಒಟ್ಟಾರೆ ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡುವಲ್ಲಿ ಮಧ್ಯಪ್ರದೇಶವು ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಮಹಾರಾಷ್ಟ್ರವಿದೆ. ಆದರೆ, ಕರ್ನಾಟಕಕ್ಕೆ ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮೊದಲ ಸ್ಥಾನಗಳಿಸಲು ಎಲ್ಲಾ ಅವಕಾಶಗಳಿವೆ. ಆನೆ-ಕಾಟಿಗಳ ವರ್ತನೆಯನ್ನು ಅಭ್ಯಾಸ ಮಾಡಿದ ತಜ್ಞರ ಸಲಹೆಯನ್ನು ಕೇಳಲು ಇಲಾಖೆ ತಯಾರಿಲ್ಲ ಹಾಗೂ ಇಲಾಖೆಯ ಈ ರೀತಿಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.