ಬುಧವಾರ, ಜನವರಿ 29, 2020
31 °C

ಅಳವಿನಂಚಿಲ್ಲಿರುವ ದನ ‘ಬಾಂಟೆಂಗ್‌’

ಪ್ರಾಣಿ ಪ್ರಪಂಚ Updated:

ಅಕ್ಷರ ಗಾತ್ರ : | |

Prajavani

ಮಾನವನ ಆರ್ಥಿಕಾಭಿವೃದ್ಧಿಗೆ ನೆರವಾಗುತ್ತಿರುವ ಸಾಕು ಪ್ರಾಣಿಗಳು ಎಂದ ಕೂಡಲೇ ನೆನಪಾಗುವುದು ಹಸು, ಎಮ್ಮೆಯಂತಹ ಪ್ರಾಣಿಗಳು. ಬಹುತೇಕ ಹಸು–ಎತ್ತುಗಳ ದೇಹರಚನೆಯನ್ನೇ ಹೋಲುವ ಬಾಂಟೆಂಗ್‌ (Banteng) ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ?

ಕಂದು ಬಣ್ಣದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ದೇಹದ ಮೇಲೆ ತೆಳುವಾಗಿ ಕಪ್ಪು ಬಣ್ಣದ ಕೂದಲೂ ಬೆಳೆದಿರುತ್ತವೆ. ಬೆನ್ನಿನ ಮೇಲೂ ತೆಳುವಾಗಿ ಬೆಳೆದಿರುತ್ತವೆ. ಮೊಣಕಾಲುಗಳಿಂದ ಕೆಳಭಾಗದ ವರೆಗೆ ಸಂಪೂರ್ಣ ಬಿಳಿ ಬಣ್ಣದ ತುಪ್ಪಳ ಇರುವುದು ಆಕರ್ಷಕವಾಗಿ ಕಾಣುತ್ತದೆ. ಹಿಂದಿನ ಕಾಲುಗಳ ಹಿಂಬದಿ ತೊಡೆಗಳ ಭಾಗವೂ ಬಿಳಿ ಬಣ್ಣದಲ್ಲೇ ಇರುತ್ತವೆ. ಬಾಲ ಕೂಡ ನೀಳವಾಗಿದ್ದು, ಕಂದು ಬಣ್ಣದಲ್ಲಿರುತ್ತದೆ. ಮಧ್ಯಭಾಗದಿಂದ ತುದಿಯ ವರೆಗೆ ದಟ್ಟವಾಗಿ ಕೂದಲು ಬೆಳೆದಿರುತ್ತವೆ. ತಲೆ ಮತ್ತು ಮುಖ ಕಾಡೆಮ್ಮೆಗಳಂತೆ ದೊಡ್ಡದಾಗಿರುತ್ತದೆ. ಕಣ್ಣುಗಳು ಮತ್ತು ಮೂಗು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಎಲೆಯಾಕಾರಾದ ಕಿವಿಗಳು ದೊಡ್ಡದಾಗಿದ್ದು, ಸದಾ ಸೆಟೆದುಕೊಂಡಿರುತ್ತವೆ. ದೊಡ್ಡಗಾತ್ರದ ಕೋಡುಗಳು ಅರ್ಧಚಂದ್ರಾಕೃತಿಯಲ್ಲಿ ಬೆಳೆದಿರುತ್ತವೆ. ಕೆಲವು ಬಾಂಟೆಂಗ್‌ಗಳ ಕೋಡುಗಳು ನೇರವಾಗಿ ಬೆಳೆದಿರುತ್ತವೆ. ಹೆಣ್ಣು ಮತ್ತು ಗಂಡು ಬಾಂಟೆಂಗ್‌ಗಳ ದೇಹರಚನೆ ಭಿನ್ನವಾಗಿದ್ದು, ಸುಲಭವಾಗಿ ಗುರುತಿಸಬಹುದು.

ವಾಸಸ್ಥಾನ

ಆಗ್ನೇಯ ಏಷ್ಯಾದ ಇಂಡೊನೇಷ್ಯಾ, ಕಾಂಬೊಡಿಯಾ, ಮ್ಯಾನ್ಮಾರ್, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ರಾಷ್ಟ್ರಗಳ ಕಾಡುಗಳಲ್ಲಿ ಇದರ ಸಂತತಿ ವಿಸ್ತಿರಿಸಿದೆ. ಉಷ್ಣವಲಯದ ಕಾಡು, ಬಯಲು ಕಾಡು ಪ್ರದೇಶ, ಸಿಹಿ ನೀರು ಹೆಚ್ಚಾಗಿರುವ ಕಾಡು ಪ್ರದೇಶ, ಕಾಡಿನ ಜೌಗು ಪ್ರದೇಶಗಳಲ್ಲಿ ಇದು ಹೆಚ್ಚಾಗಿ ವಾಸಿಸುತ್ತದೆ. ಬಯಲು ಹುಲ್ಲುಗಾವಲು ಪ್ರದೇಶ, ಕೃಷಿಭೂಮಿ, ದಟ್ಟವಾಗಿ ಮರಗಳು ಬೆಳೆದಿರುವ ಪ್ರದೇಶಗಳಲ್ಲೂ ಇದನ್ನು ಕಾಣಬಹುದು.

ಜೀವನಕ್ರಮ ಮತ್ತು ವರ್ತನೆ

ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲೂ ಇದು ಚುರುಕಾಗಿರುತ್ತದೆ. ಜನವಸತಿಗೆ ಸಮೀಪದಲ್ಲಿರುವ ಕಾಡುಗಳಲ್ಲಾದರೆ, ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಒಂದು ಗುಂಪಿನಲ್ಲಿ 2ರಿಂದ 30 ಬಾಂಟೆಂಗ್‌ಗಳು ಇರುತ್ತವೆ.

ಪ್ರತಿ ಗುಂಪಿನಲ್ಲೂ ಒಂದು ಗಂಡು ಬಾಂಟೆಂಗ್‌ ಇದ್ದರೆ, ಉಳಿದವು ಹೆಣ್ಣು ಬಾಂಟೆಂಗ್ ಮತ್ತು ಮರಿಗಳು. ಗುಂಪಿನಲ್ಲಿರುವ ಎಲ್ಲ ಬಾಂಟೆಂಗ್‌ಗಳೂ ಸದಾ ಅನೋನ್ಯದಿಂದ ಕೂಡಿ ಬಾಳುತ್ತವೆ. ಒಂದರ ದೇಹವನ್ನು ಒಂದು ನೆಕ್ಕುತ್ತಾ, ಸೌಹಾರ್ದತೆಯನ್ನು ತೋರಿಸುತ್ತವೆ. ಪರಭಕ್ಷಕ ಪ್ರಾಣಿಗಳು ದಾಳಿ ಮಾಡಲು ಬಂದರೆ, ಆಕ್ರಮಣಕಾರಿ ಸ್ವಭಾವ ತೋರುತ್ತವೆ.

ದೇಹಕ್ಕೆ ಬೇಕಾಗುವಷ್ಟು ಆಹಾರ ದೊರತರೆ ಒಂದೆ ಕಡೇ ಗಂಟೆಗಟ್ಟಲೆ ಮೆಲುಕು ಹಾಕುತ್ತಾ ಕೂರುತ್ತವೆ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತವೆ.

ಆಹಾರ

ಇದು ಸಂಪೂರ್ನ ಸಸ್ಯಾಹಾರಿ ಪ್ರಾಣಿ. ಹುಲ್ಲು ಇದರ ಪ್ರಮುಖ ಆಹಾರ. ಎಳೆ ಬಿದಿರು ಮತ್ತು ಬಿದಿರಿನ ಎಲೆಗಳು, ವಿವಿಧ ಬಗೆಯ ಹಣ್ಣುಗಳು, ಎಲೆಗಳು, ಚಿಗುರು ರೆಂಬೆಗಳನ್ನೂ ಇದು ಸೇವಿಸುತ್ತದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿರುವ ಪ್ರಬಲ ಗಂಡು ಬಾಂಟೆಂಗ್‌, ಎಲ್ಲ ಹೆಣ್ಣು ಬಾಂಟೆಂಗ್‌ಗಳ ಮೇಲೆ ಪಾರಮ್ಯ ಮೆರೆಯುತ್ತದೆ. ಮೇಯಿಂದ ಜೂನ್‌ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಬಾಂಟೆಂಗ್‌ ಸುಮಾರು 9 ತಿಂಗಳ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್‌ (Calf) ಎನ್ನುತ್ತಾರೆ.

ಮರಿ ಜನಿಸಿದ ಕೆಲವೇ ನಿಮಿಷಗಳಲ್ಲಿ ಎದ್ದು ಓಡಾಡಲು ಆರಂಭಿಸುತ್ತದೆ. ಸುಮಾರು 9 ತಿಂಗಳ ವರೆಗೆ ಮರಿಯನ್ನು ತಾಯಿ ಬಾಂಟೆಂಗ್ ಕಾಳಜಿಯಿಂದ ಪೋಷಿಸುತ್ತದೆ. 2ರಿಂದ 3 ವರ್ಷಗಳಲ್ಲಿ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಇದು ಕಾಡು ಪ್ರಾಣಿಯಾದರೂ ಸುಮಾರು 15 ಲಕ್ಷ ವರ್ಷಗಳ ಹಿಂದಿನಿಂದಲೇ ಪಳಗಿಸಿ, ಸಾಕು ಪ್ರಾಣಿಯಾಗಿ ಬೆಳೆಸುತ್ತಿದ್ದಾರೆ.

* ಸಾಕು ಬಾಂಟೆಂಗ್‌ಗಳು ಬಾಲಿ ಕ್ಯಾಟೆಲ್ ಎನ್ನುತ್ತಾರೆ.

* ಬಹುತೇಕರು ಇದನ್ನು ಕೃಷಿ ಚಟುವಟಿಕೆಗಳಿಗಾಗಿ ಮತ್ತು ಮಾಂಸಕ್ಕಾಗಿ ಬೆಳೆಸಿಕೊಳ್ಳುತ್ತಿದ್ದಾರೆ.

* ಉತ್ತರ ಆಸ್ಟ್ರೇಲಿಯಾದ ಹಲವು ಪ್ರದೇಶಗಳಿಗೂ ಇದನ್ನು ಪರಿಚಯಿಸಲಾಗಿದೆ.

ಗಾತ್ರ ಮತ್ತು ಜೀವಿತಾವಧಿ, ದೇಹದ ತೂಕ- 400 ರಿಂದ 900 ಕೆ.ಜಿ, ದೇಹದ ಎತ್ತರ -4.5ರಿಂದ 5.5 ಅಡಿ, ದೇಹದ ಉದ್ದ- 8.2ರಿಂದ 11.5 ಅಡಿ, ಜೀವಿತಾವಧಿ-16–26 ವರ್ಷ.

ಪ್ರತಿಕ್ರಿಯಿಸಿ (+)