ಬುಧವಾರ, ಆಗಸ್ಟ್ 17, 2022
28 °C

PV Web Exclusive: ಬನ್ನಿ, ಕಾಡಿನಲ್ಲಿ ಒಂದು ಡ್ರೈವ್‌ ಹೋಗೋಣ...

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಶೇಕಡ 50ರಷ್ಟು ಹಸಿರನ್ನು ಹೊದ್ದುಕೊಂಡಿರುವ ಗಡಿ ಜಿಲ್ಲೆ ಚಾಮರಾಜನಗರವು ಪ್ರಾಕೃತಿಕವಾಗಿ ಅತ್ಯಂತ ಸಿರಿವಂತ ಜಿಲ್ಲೆ. ಎರಡು ಹುಲಿ ಸಂರಕ್ಷಿತ ಪ್ರದೇಶಗಳನ್ನು (ಬಂಡೀಪುರ ಮತ್ತು ಬಿಆರ್‌ಟಿ), ಎರಡು ವನ್ಯಧಾಮಗಳನ್ನು (ಮಲೆ ಮಹದೇಶ್ವರ ಮತ್ತು ಕಾವೇರಿ) ಒಡಲಲ್ಲಿ ಇಟ್ಟು ಪೋಷಿಸುತ್ತಿರುವ ಜಿಲ್ಲೆಯಲ್ಲಿ ಭೂರಮೆಯೇ ಅವತರಿಸಿದ್ದಾಳೆ. 

ಕಾಡನ್ನು ನೋಡಬೇಕು ಎಂಬ ಹಂಬಲ ಇರುವವರು ಜಿಲ್ಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು. 5,100 ಚದರ ಕಿಲೊಮೀಟರ್‌ ವ್ಯಾಪ್ತಿಯಲ್ಲಿ ಹರಡಿರುವ ಜಿಲ್ಲೆಯ ಯಾವ ಭಾಗಕ್ಕೂ ಭೇಟಿ ನೀಡಿದರೂ ನಿಮಗೆ ಒಂದಿಲ್ಲೊಂದು ಅರಣ್ಯ ಸಿಗುತ್ತದೆ. ಇಲ್ಲಿ ಕಂಡು ಬರುವ ಬಹುತೇಕ ಎಲ್ಲ ಕಾಡು ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಬರುವುದರಿಂದ ಜನರ ಓಡಾಟಕ್ಕೆ ಹಲವು ನಿಬಂಧನೆಗಳಿವೆ. ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗುವಂತಹ ಯಾವ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ಇಲ್ಲ. ಅರಣ್ಯದೊಳಕ್ಕೆ ತೆರಳಲು ಅನುಮತಿಯೇ ಇಲ್ಲ (ಬಂಡೀಪುರದ ಸಫಾರಿ ಅಥವಾ ಬಿಆರ್‌ಟಿಯ ಕೆ.ಗುಡಿಯಲ್ಲಿರುವ ಸಫಾರಿ ಬಿಟ್ಟು. ಎರಡೂ ಕಡೆಗಳಲ್ಲಿ ಅರಣ್ಯ ಇಲಾಖೆಯೇ ಸಫಾರಿಗಳನ್ನು ನಿರ್ವಹಿಸುತ್ತಿದೆ).


ಹಸಿರು ಹೊದ್ದ ಬೆಟ್ಟಗುಡ್ಡಗಳ ಸಾಲುಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತವೆ

ನಿರ್ಬಂಧಗಳಿದ್ದರೂ, ಹಣ ಖರ್ಚು ಮಾಡದೆ ಹಸಿರನ್ನು ಕಣ್ತುಂಬಿಕೊಳ್ಳಬೇಕು, ಕಾಡಿನ ರಮ್ಯತೆ ಅನುಭವಿಸಬೇಕು, ಪ್ರಕೃತಿಯ ಮಡಿಲಲ್ಲಿ ಮಗುವಾಗಬೇಕು ಎಂಬುವವರಿಗೆ ಅವಕಾಶವಂತೂ ಇದ್ದೇ ಇದೆ. ಜಿಲ್ಲೆಯತ್ತ ಒಂದು ಲಾಂಗ್‌ ಡ್ರೈವ್ ಬಂದರೆ ಸಾಕು. ಬೈಕ್‌ ಸವಾರಿಯಾದರೂ ಅಡ್ಡಿ ಇಲ್ಲ. ರಸ್ತೆಯಲ್ಲಿ ಸಂಚರಿಸುತ್ತಲೇ ವಿಶಾಲವಾದ ಅರಣ್ಯ, ಗಿಡ ಮರಗಳು, ಬೆಟ್ಟ, ಗುಡ್ಡಗಳನ್ನು ಕಣ್ತುಂಬಿಕೊಂಡು ಅವರ್ಣನೀಯ ಆನಂದ ಪಡೆಯಬಹುದು. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಕಾಡು ಪ್ರಾಣಿಗಳು ಕೂಡ ದರ್ಶನ ಕೊಡಬಹುದು. ಮಳೆಗಾಲ ಮತ್ತು ಚಳಿಗಾಲದಲ್ಲಿ ಬಂದರೆ ನಿಮ್ಮ ಡ್ರೈವ್‌ ಇಲ್ಲವೇ ಬೈಕ್‌ ಸವಾರಿ ಸ್ಮರಣೀಯವಾಗಿರುವುದರಲ್ಲಿ ಸಂಶಯವಿಲ್ಲ. ಪ್ರವಾಸಿ ತಾಣಗಳನ್ನು ನೋಡಿದ್ದಕ್ಕಿಂತ ಹೆಚ್ಚು ಖುಷಿ ಡ್ರೈವ್‌, ಬೈಕ್‌ ಸವಾರಿಯಲ್ಲಿ ಅನುಭವಿಸಬಹುದು. 

ಮೊದಲೇ ಹೇಳಿದಂತೆ, ಜಿಲ್ಲೆಯ ಯಾವುದೇ ಭಾಗಕ್ಕೆ ಹೋಗಿ, ಕಾಡು ನಿಮ್ಮನ್ನು ಸ್ವಾಗತಿಸುತ್ತದೆ. ಪ್ರಸಿದ್ಧ ಪ್ರವಾಸಿ ತಾಣಗಳೆಲ್ಲ ಕಾಡಿನ ಮಧ್ಯವೇ ಇದೆ (ಉದಾ: ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ, ಬಂಡೀಪುರ, ಹೊಗೇನಕಲ್‌ ಜಲಪಾತ). ಇಲ್ಲಿಗೆ ತೆರಳಬೇಕೆಂದರೆ ರಕ್ಷಿತಾರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲೇ ಸಾಗಬೇಕು.

ಇದು ಮಾತ್ರವಲ್ಲ, ಜಿಲ್ಲೆಯ ಮೂಲಕ ತಮಿಳುನಾಡು, ಕೇರಳಕ್ಕೆ ಹೋಗಬೇಕಾದರೂ ಅರಣ್ಯದಲ್ಲಿ ನಿರ್ಮಿಸಲಾಗಿರುವ ರಸ್ತೆಗಳನ್ನು ಅವಲಂಬಿಸಬೇಕು (ಬಂಡೀಪುರದ ಮೂಲಕ ತಮಿಳುನಾಡಿನ ಊಟಿ, ಕೇರಳದ ಸುಲ್ತಾನ್‌ ಬತ್ತೇರಿ, ಬಿಆರ್‌ಟಿ ಮೂಲಕ ತಮಿಳುನಾಡಿನ ಸತ್ಯಮಂಗಲ, ಹನೂರು ಭಾಗದಲ್ಲಿ ತಮಿಳುನಾಡಿನ ಮೆಟ್ಟೂರು ಕಡೆಗೆ ತೆರಳಲು). ಹೊರ ರಾಜ್ಯಗಳಿಗೆ ತೆರಳುವಾಗ ಜಿಲ್ಲೆಯ ಅರಣ್ಯ ಮಾತ್ರ ಅಲ್ಲ, ಆ ರಾಜ್ಯಗಳಲ್ಲಿ ಹರಡಿರುವ ಹಸಿರ ಸೌಂದರ್ಯವನ್ನೂ ಆಸ್ವಾದಿಸಬಹುದು (ಊಟಿಗೆ ತೆರಳುವಾಗ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ, ಕೇರಳ ಮಾರ್ಗದಲ್ಲಿ ವಯನಾಡು ರಕ್ಷಿತಾರಣ್ಯ, ಸತ್ಯಮಂಗಲಕ್ಕೆ ತೆರಳುವಾಗ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಮೆಟ್ಟೂರು ಕಡೆ ತೆರಳುವಾಗ ಮೀಸಲು ಅರಣ್ಯ).


ಮೋಡ ಕವಿದ ವಾತಾವರಣ ಇದ್ದರಂತೂ ಪ್ರಕೃತಿ ಸೌಂದ‌ರ್ಯ ಇಮ್ಮಡಿಯಾಗುತ್ತದೆ

ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ, ಕೊಳ್ಳೇಗಾಲ– ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ, ಗೋಪಿನಾಥಂ ಮೂಲಕ ಹೊಗೇನಕಲ್‌ಗೆ ಹೋಗುವಾಗ 80 ಕಿಲೊಮೀಟರ್‌ ದೂರವನ್ನು ಅರಣ್ಯದಲ್ಲಿ ಕ್ರಮಿಸಬೇಕು. ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಯಳಂದೂರಿನಿದ ತೆರಳುವುದಾದರೆ ಕನಿಷ್ಠ 20 ಕಿಲೊಮೀಟರ್‌, ಚಾಮರಾಜನಗರದಿಂದ ಹೋಗುವುದಾದರೆ 30 ಕಿಲೊಮೀಟರ್‌ ದೂರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಸಾಗಬೇಕು. ಯಳಂದೂರು ಮಾರ್ಗದಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಬಂದು ಅಲ್ಲಿಂದ ಕೆ.ಗುಡಿ ಮಾರ್ಗದಲ್ಲಿ ಚಾಮರಾಜನಗರ ಬರುತ್ತೀರಿ ಎಂದಾದರೆ, ನೀವು ಅರಣ್ಯದಲ್ಲಿ ಸಂಚರಿಸುವ ದೂರ 50 ಕಿಲೊಮೀಟರ್‌ ದಾಟುತ್ತದೆ. 

ವಿಶಿಷ್ಟ ಅನುಭವ

ರಕ್ಷಿತಾರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಗಳಲ್ಲಿನ ಸಂಚಾರ ವಿಶಿಷ್ಟ ಅನುಭವ ನೀಡುತ್ತದೆ. ಚಾಲಕನಿಗೆ ಒಂದು ರೀತಿಯ ಅನುಭವವಾದರೆ, ಪ್ರಯಾಣಿಕರಿಗೆ ಮತ್ತೊಂದು ರೀತಿಯದ್ದು.

ಇತರ ಕಡೆಗಳಲ್ಲಿ ವಾಹನ ಚಲಾಯಿಸುವ ರೀತಿಯಲ್ಲಿ ಕಾಡಿನ ರಸ್ತೆಯಲ್ಲಿ ಚಲಾಯಿಸಲು ಆಗುವುದಿಲ್ಲ. ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಾಹನ ಚಾಲನೆಗೂ ನಿಯಮಗಳಿರುತ್ತವೆ. ರಸ್ತೆಯಲ್ಲಿ ಅಲ್ಲಲ್ಲಿ ಉಬ್ಬುಗಳಿರುತ್ತವೆ. ವೇಗದ ಚಾಲನೆ ಮಾಡುವಂತಿಲ್ಲ. ಪ್ರಾಣಿಗಳು ಓಡಾಡುವ ಜಾಗ ಆಗಿರುವುದರಿಂದ ನಿಗದಿತ ವೇಗ ಮಿತಿಯಲ್ಲೇ ಓಡಿಸಬೇಕು. ಹಾಗಾಗಿ, ಚಾಲಕನಿಗೆ ಸುತ್ತಲಿನ ಹಸಿರನ್ನು ಆಸ್ವಾದಿಸುವುದಕ್ಕೆ ಹೆಚ್ಚು ಅವಕಾಶ ಇಲ್ಲ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಾಹನದ ಚಾಲಕ ರಸ್ತೆಯ ಕಡೆಗೆ ಹೆಚ್ಚು ಗಮನ ನೀಡುವುದು ಒಳ್ಳೆಯದು. 

ಪ್ರಯಾಣಿಕರಿಗೆ ಅಂತಹ ನಿಯಮಗಳೇನಿಲ್ಲ. ಒಂದು ಒಂದು ನಿರ್ಬಂಧ ಎಂದರೆ, ವಾಹನದ ಒಳಗಡೆ ಅರಚಾಡುವುದು, ಕೂಗಾಡುವುದು ಮಾಡಬಾರದು. ರಸ್ತೆಯಲ್ಲಿ ವಾಹನ ಸಾಗುವಾಗ ಮೌನವಾಗಿದ್ದು, ಗಿರಿ– ಕಂದರ,  ಗಿಡಮರಗಳನ್ನೊಳಗೊಂಡ ರಮಣೀಯ ಹಸಿರು ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುತ್ತಾ, ತಂಪಾದ ಗಾಳಿ, ವಾತಾವರಣವನ್ನು ಆಸ್ವಾದಿಸುತ್ತಾ, ಹಸಿರು ಲೋಕದಲ್ಲಿ ಕಳೆದು ಬಿಡಬಹುದು. 

ಪರಿಸರದ ಬಗ್ಗೆ ಕಾಳಜಿ, ಎಚ್ಚರಿಕೆ ಇರಲಿ...


ದೂರದಲ್ಲಿ ಕಂಡ ಬೆಟ್ಟ ಹತ್ತಿರವಾಗುತ್ತಿರುವಂತೆಯೇ ಮನಸ್ಸು ಅರಳುತ್ತದೆ

ಕಾನನದಲ್ಲಿ ಡ್ರೈವ್‌ ಹೋಗುವುದೇನೋ ಸರಿ. ಪ‍್ರಯಾಣ ಆರಂಭಿಸುವುದಕ್ಕೂ ಮುನ್ನ ಕೆಲವು ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. 

ರಕ್ಷಿತಾರಣ್ಯ ಆಗಿರುವುದರಿಂದ ಮಾನವ ಚಟುವಟಿಕೆಗಳಿಗೆ ನಿರ್ಬಂಧವಿದೆ. ದಾರಿ ಮಧ್ಯೆ ಎಲ್ಲೂ ವಾಹನ ನಿಲ್ಲಿಸುವಂತಿಲ್ಲ. ಆಹಾರ ಸೇವಿಸುವುದು, ಪಾರ್ಟಿ ಮಾಡುವುದು, ಫೋಟೊ ತೆಗೆಯುವುದು ಮುಂತಾದ ಚಟುವಟಿಕೆಗಳನ್ನು ನಡೆಸಬಾರದು. ನಮ್ಮ ಸುರಕ್ಷತೆ, ವನ್ಯಜೀವಿಗಳ ಸ್ವಚ್ಛಂದ ಜೀವನದ ದೃಷ್ಟಿಯಿಂದ ಈ ನಿಯಮವನ್ನು ಪಾಲಿಸಲೇಬೇಕು. ನಿಯಮ ಉಲ್ಲಂಘಿಸಿದರೆ ₹1,500 ದಂಡ ಪಾವತಿಸಬೇಕಾಗಬಹುದು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಾ ಇರುತ್ತಾರೆ. 

ಕೋತಿಗಳು, ಜಿಂಕೆಗಳು ಮುಂತಾದ ಪ್ರಾಣಿಗಳು ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಇರುತ್ತವೆ. ಅವುಗಳಿಗೆ ಆಹಾರ ಕೊಡುವುದಕ್ಕೆ ಹೋಗಬಾರದು. ಅವುಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು. ಪ್ರಾಣಿಗಳನ್ನು ಕಂಡರೆ ದೂರದಲ್ಲೇ ವಾಹನ ನಿಲ್ಲಿಸಬೇಕು. ಹಾರ್ನ್‌ ಮಾಡಲು, ಹೆಡ್ ಲೈಟ್‌ ಉರಿಸಲು ಹೋಗಬೇಡಿ. ಪ್ರಾಣಿಗಳು ಕೆರಳುವ ಸಾಧ್ಯತೆ ಇರುತ್ತದೆ. ಈ ವಿಚಾರದಲ್ಲಿ ದ್ವಿಚಕ್ರ ವಾಹನಗಳ ಸವಾರರು ಹೆಚ್ಚು ಜಾಗರೂಕರಾಗಿರಬೇಕು. ಅರಣ್ಯಗಳು ಪ್ಲಾಸ್ಟಿಕ್‌ ಮುಕ್ತ ವಲಯ ಆಗಿರುವುದರಿಂದ ಪ್ಲಾಸ್ಟಿಕ್‌ ಹಾಗೂ ಇತರ ತ್ಯಾಜ್ಯಗಳನ್ನು ಎಸೆಯಬಾರದು.

ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವುದರ ಜೊತೆಗೆ, ನಾವು ಜವಾಬ್ದಾರಿಯನ್ನು ಅರಿತು ಪ್ರಯಾಣಿಸಿದರೆ ಅರಣ್ಯದೊಳಗಿನ ಪ್ರಯಾಣ ಸ್ಮರಣೀಯ ಆಗುವುದರಲ್ಲಿ ಅನುಮಾನ ಬೇಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು