ಬುಧವಾರ, ಆಗಸ್ಟ್ 10, 2022
25 °C
ಚಾಮರಾಜನಗರ: ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಪರಿಸರವಾದಿಗಳಿಂದಲೂ ವಿರೋಧ

ವನ್ಯಜೀವಿಗಳ ಆವಾಸಕ್ಕೆ ಕುತ್ತು: ಆತಂಕ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಮೇಲಾಜಿಪುರ ಸೇರಿದಂತೆ ಸುತ್ತಮುತ್ತಲಿನ ರೈತರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಪರಿಸರವಾದಿಗಳಿಂದಲೂ ಆಕ್ಷೇಪ ವ್ಯಕ್ತವಾಗಿದೆ. 

ಈಗಿನ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಜವನ ಗುಡ್ಡ (ಕರಡಿಕೊಳ ಗುಡ್ಡ) ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣಮೃಗಗಳು ಆಶ್ರಯ ಪಡೆದಿವೆ. ಚಿರತೆ, ನವಿಲು, ಕಾಡು ಹಂದಿ ಸೇರಿದಂತೆ ಸಣ್ಣ ಪುಟ್ಟ ಪ್ರಾಣಿಗಳೂ ಇವೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಗುರುತಿಸಿರುವ 1,189.09 ಎಕರೆ ಪ್ರದೇಶದಲ್ಲಿ ಈ ಪ್ರದೇಶ ಸೇರಿದೆ. ಕೆಐಡಿಬಿ ಈಗಾಗಲೇ ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿದೆ. ನೋಟಿಸ್‌ ನೀಡಿ ಜಮೀನು ಮಾಲೀಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ.  

‘ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಸ್ವಾಧೀನ ಪಡಿಸಿಕೊಂಡರೆ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ಸೇರಿದಂತೆ ವನ್ಯಪ್ರಾಣಿಗಳ ಆವಾಸ ನಾಶವಾಗಲಿದೆ. ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ, ಈ ಪ್ರದೇಶವನ್ನು ಸಂರಕ್ಷಿಸಲು ಕ್ರಮ ವಹಿಸಬೇಕು’ ಎಂಬುದು ಸ್ಥಳೀಯರು ಹಾಗೂ ಪರಿಸರವಾದಿಗಳ ಒತ್ತಾಯಿಸಿದ್ದಾರೆ. 

ಕೃಷ್ಣಮೃಗಗಳ ನೆಲೆ: ಬದನಗುಪ್ಪೆ, ಕೆಲ್ಲಂಬಳ್ಳಿ ಪ್ರದೇಶದಲ್ಲಿ ಸಾಕಷ್ಟು ಕೃಷ್ಣಮೃಗಗಳಿವೆ. ಇತ್ತೀಚೆಗೆ ನಂಜನಗೂಡು ಹೆದ್ದಾರಿಯಲ್ಲೇ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕೃಷ್ಣಮೃಗ ಮೃತಪಟ್ಟಿತ್ತು. ಜವನಗುಡ್ಡ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷ್ಣಮೃಗಗಳಿದ್ದು, ಸ್ಥಳೀಯರ ಪ್ರಕಾರ, 500ಕ್ಕೂ ಹೆಚ್ಚು ಕೃಷ್ಣಮೃಗಗಳು ಇವೆ.

‘ಸಮೀಪದ ಉಮ್ಮತ್ತೂರಿನಲ್ಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ ಇದೆ. ಅಲ್ಲಿಂದ ಈ ಪ್ರದೇಶಕ್ಕೆ ಸಂಪರ್ಕ ಇದೆ. ಎರಡೂ ಪ್ರದೇಶಗಳ ನಡುವೆ ಕೃಷ್ಣಮೃಗಗಳು ಓಡಾಡುತ್ತಿವೆ’ ಎಂದು ಹೇಳುತ್ತಾರೆ ಸ್ಥಳೀಯರು ಹಾಗೂ ಪರಿಸರವಾದಿಗಳು.

‘ನವಿಲು, ಕಾಡು ಹಂದಿ, ಮುಳ್ಳು ಹಂದಿ, ಮೊಲಗಳು, ಚಿರತೆಗಳು ಈ ಭಾಗದಲ್ಲಿದೆ. ಕೆಐಡಿಬಿ ಈಗ ಕೃಷಿ ಜಮೀನುಗಳಲ್ಲದೆ, ಪ್ರಾಣಿಗಳಿರುವ ಜಾಗವನ್ನು ಕೈಗಾರಿಕೆಗೆ ಗುರುತಿಸಿದ್ದಾರೆ. ಸ್ವಾಧೀನ ಪಡಿಸಿಕೊಂಡರೆ ಪ್ರಾಣಿಗಳಿಗೆ ತೀವ್ರ ತೊಂದರೆಯಾಗಲಿದೆ’ ಎಂದು ಮೇಲಾಜಿಪುರದ ರೈತ ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಪ್ರದೇಶ ರಕ್ಷಿಸಲು ಸ್ಥಳೀಯರು ಹಾಗೂ ವನ್ಯಪ್ರೇಮಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ
ಮಾಡುತ್ತಿದ್ದಾರೆ. 

‘ಈ ಹಿಂದೆ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಅನುಮತಿ ನೀಡುವಾಗ ಅರಣ್ಯ ಮತ್ತು ಪರಿಸರ ಇಲಾಖೆಯು ಬದನಗುಪ್ಪೆ–ಕೆಲ್ಲಂಬಳ್ಳಿ ಪ್ರದೇಶದ ಸುತ್ತಮುತ್ತಲಿರುವ ವನ್ಯಜೀವಿಗಳ ಉಪಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಅನುಮೋದನೆ ನೀಡಿದೆ’ ಎಂಬುದು ಪರಿಸರ ಪ್ರೇಮಿಗಳ ಆರೋಪ. 

ಕಂದಾಯ ಜಮೀನು ಹೆಚ್ಚು

‘ಬದನಗುಪ್ಪೆ–ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕಂದಾಯ ಜಮೀನಿದ್ದು, ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ’ ಎಂಬುದು ಸ್ಥಳೀಯರ ದೂರು. ‘ಪ್ರಾಣಿಗಳ ರಕ್ಷಣೆಗೆ ಕ್ರಮವಹಿಸುವುದು ಅವರ ಜವಾಬ್ದಾರಿ ಅಲ್ಲವೇ’ ಎಂಬುದು ಅವರ ಪ್ರಶ್ನೆ. 

‘ನಮ್ಮ ಮನವಿಯಂತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೃಷ್ಣಮೃಗಗಳ ಹಿಂಡುಗಳನ್ನು ನೇರವಾಗಿ ಕಂಡಿದ್ದಾರೆ. ಅವುಗಳ ಆವಾಸ ರಕ್ಷಣೆಗೆ ಇಲಾಖೆ ಕ್ರಮ ವಹಿಸಬೇಕು’ ಎಂದು ರೈತ ಅಶೋಕ್‌ ಒತ್ತಾಯಿಸಿದರು. 

***

ಕೈಗಾರಿಕೆಗೆ ಗುರುತಿಸಿರುವ ಜಾಗದಲ್ಲಿ ಕೃಷ್ಣಮೃಗ ಸೇರಿ ಹಲವು ಪ್ರಾಣಿಗಳಿವೆ. ಅದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಕ್ರಮ ವಹಿಸಬೇಕು

- ಡಿ.ಎಸ್‌.ದೊರೆಸ್ವಾಮಿ, ಪರಿಸರವಾದಿ

***

ಅಲ್ಲಿನ ಸ್ಥಿತಿಗತಿ ಅರಿಯಲು ಎಸಿಎಫ್‌ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ. ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು

- ಡಾ.ಸಂತೋಷ್‌ಕುಮಾರ್‌, ಡಿಸಿಎಫ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು