ಅಸ್ಸಾಮಿನಲ್ಲಿ ಇತ್ತೀಚೆಗೆ 18 ಆನೆಗಳು ದುರ್ಮರಣವನ್ನು ಕಂಡವು. ತನ್ನ ಕುಟುಂಬದ ಈ ದಾರುಣ ಸ್ಥಿತಿ ಕುರಿತು ಗುಂಪಿನ ಅಧಿನಾಯಕಿ, ಮನುಕುಲಕ್ಕೆ ಬರೆದ ಮನಕಲುಕುವ ಪತ್ರದ ಸಾಲುಗಳಿವು...

ನಿಮಗಿದೋ ಕೋವಿಡ್ ಸಮಯ. ಕುಶಲವೇ ಎಂದಾದರೂ ಹೇಗೆ ಕೇಳೋದು? ಎಂತೆಂಥವರೆಲ್ಲ ಹೋಗಿಬಿಟ್ರು. ಮೂಕಜೀವಿಗಳಾದ ನಮ್ಮಂಥವರ ಧ್ವನಿಯಾಗಿದ್ದ ಹಸಿರಿನ ಸಂತ ಸುಂದರಲಾಲ ಬಹುಗುಣ ಅವರಂಥವರೂ ಅಗಲಿಬಿಟ್ಟರಲ್ಲ? ಅವರಿಗೆ ಕಾಡಿನ ಪರಿವಾರದ ಪರವಾಗಿ ನಮ್ಮ ಶ್ರದ್ಧಾಂಜಲಿ. ನಮ್ಮದೂ ಇಂತಹ ಸಾವು, ನೋವಿನ ಕಥೆಯೇ. ಮರೆಮಾಡುವುದೇಕೇ? ಅದಕ್ಕೆ ಕಾರಣವಾದವರು ನೀವೇ, ಮನುಷ್ಯರು.

ನಾವುಗಳು, ಅದೇ ಆನೆಗಳು, ನೆಲದ ಮೇಲಿನ ಎಲ್ಲ ಪ್ರಾಣಿಗಳಿಗಿಂತ ದೊಡ್ಡ ಜೀವಿಗಳು. ವಿಕಾಸವಾಗುತ್ತಲೇ ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ಬದುಕುವುದನ್ನು ಕಲಿತುಕೊಂಡಿದ್ದೇವೆ. ನಲವತ್ತು ಆನೆಗಳ ಹಿಂಡಿನ ಒಡತಿಯಾದ ನಾನು, ನಿಮ್ಮ ಭೌಗೋಳಿಕ ವಿಭಜನೆಯ ಪ್ರಕಾರ, ಅಸ್ಸಾಂನ ನಗೋಂವ ಜಿಲ್ಲೆಯಲ್ಲಿ ವಾಸಿಸುತ್ತೇನೆ. ಈ ರಾಜ್ಯದಲ್ಲಿ ನಮ್ಮ ಸಂಖ್ಯೆ ಸುಮಾರು ಆರು ಸಾವಿರ. ನಿಮಗೆ ಹೇಗೆ ನಿಮ್ಮ ಮನೆಯೋ, ಹಾಗೇ ನಾವು ವಾಸಿಸುವ ಕಾಡು ನಮ್ಮ ಮನೆ. ಇಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ನಮ್ಮ ಆವಾಸತಾಣಗಳನ್ನು ದುರಾಸೆಯಿಂದ ನೀವು ಹಾಳು ಮಾಡಿದ್ದೀರಿ. ಅಲ್ಲ, ನಮ್ಮ ನೆಲ ನಿಮ್ಮದು ಹೇಗಾಗುತ್ತದೆ? ನಮ್ಮ ನೆಲೆಯಲ್ಲಿ ನಾವು ಓಡಾಡಿಕೊಂಡಿದ್ದರೂ ನೀವು ವಿನಾಕಾರಣ ನಮ್ಮನ್ನು ಕೊಲ್ಲುತ್ತೀರಿ ಮತ್ತು ಅದಕ್ಕೆ ವನ್ಯಜೀವಿ ದಾಳಿ ಎಂಬ ಹೆಸರನ್ನಿಟ್ಟು ನಿಮ್ಮ ಕ್ರಮವನ್ನೇ ಸಮರ್ಥಿಸಿಕೊಳ್ಳುತ್ತೀರಿ.

ಕೇರಳದಲ್ಲಿ ನಮ್ಮ ಕುಲದ ಗರ್ಭಿಣಿಯನ್ನು ಅನಾನಸ್ ಬಾಂಬ್ ಇಟ್ಟು ದಾರುಣವಾಗಿ ಕೊಂದವರು ನೀವು, ಬಂಗಾಳದಲ್ಲಿ ನಮ್ಮ ಗುಂಪಿನ ಮೇಲೆ ಪೆಟ್ರೋಲ್ ಬಾಂಬುಗಳನ್ನು ಎಸೆದು ಕ್ರೌರ್ಯ ಮೆರೆದವರೂ ನೀವೇ. ಅರೆ, ತಮಿಳುನಾಡಿನ ಮಸಿನಗುಡಿಯ ರೆಸಾರ್ಟ್ವೊಂದಕ್ಕೆ ಬಂದ ನಮ್ಮ ಸಹಚರನ ಮೇಲೆ ಟೈರಿಗೆ ಬೆಂಕಿಹಚ್ಚಿ ಎಸೆದಿದ್ದನ್ನು ಮರೆತುಬಿಟ್ಟಿರಾ? ಹಾದಿ ತಪ್ಪಿ ಬಂದವರನ್ನು ಕಳಿಸುವ ಕ್ರಮವೇ ಇದು? ಆ ಟೈರು, ಮೊರದಂತಹ ಕಿವಿಯಲ್ಲಿ ಸಿಕ್ಕಿ, ಬೆಂಕಿ ಹೊತ್ತಿಕೊಂಡ ಕಾರಣ ನಮ್ಮ ಸಹಚರ ನರಳಿ ನರಳಿ ಸತ್ತ. ನಿಮ್ಮ ಇಂತಹ ದೌರ್ಜನ್ಯಗಳು ಒಂದೇ, ಎರಡೇ?

ದಂತಚೋರ ವೀರಪ್ಪನ್ ಸತ್ತ ನಂತರದಲ್ಲಿ ಕರ್ನಾಟಕ–ತಮಿಳುನಾಡಿನಲ್ಲಿ ನಮ್ಮಗಳ ಬೇಟೆ ಏನೋ ಕಡಿಮೆಯಾಗಿದೆ. ಆದರೆ, ವಿದ್ಯುತ್ ಸ್ಪರ್ಶದಿಂದ ನಮ್ಮವರು ಸಾವನ್ನಪ್ಪುತ್ತಿರುವುದನ್ನು ಮನುಷ್ಯರಾದ ನೀವು ಯಾವ ರೀತಿ ಸಮರ್ಥಿಸುತ್ತೀರಿ? ಎಂತೆಂತಹ ವಿಶ್ವವಿದ್ಯಾಲಯ ಕಟ್ಟಿ, ಅದರಲ್ಲಿ ಓದಿ ಬಂದವರು ನೀವು. ಅರಣ್ಯದಲ್ಲಿ ನಿಮ್ಮ ಅಭಿವೃದ್ಧಿ ಯೋಜನೆಗಳು ನಮ್ಮ ಪಾಲಿಗೆ ಮರಣಶಾಸನಗಳು ಎನ್ನುವ ಸಣ್ಣ ಸಂಗತಿ ನಿಮ್ಮ ತಲೆಗೆ ಏಕೆ ಹೋಗಲಿಲ್ಲ? ನಮ್ಮ ಪಥಗಳಿಗೆ ಅಡ್ಡಲಾಗಿ ರೈಲುಗಳನ್ನು ಓಡಿಸಿ ನಮ್ಮಲ್ಲಿ ಎಷ್ಟು ಜನರನ್ನು ಕೊಂದಿಲ್ಲ ನೀವು? ಸಕಲೇಶಪುರ-ಮಂಗಳೂರು ರೈಲಿಗೆ ಇತ್ತೀಚೆಗೆ ಸಿಕ್ಕ ನಮ್ಮ ಸಹಚರನ ಕಳೇಬರದ ಚಿತ್ರವನ್ನು ನೀವು ನೋಡಿರಬಹುದು. ಹೇಳಿ ಇದ್ಯಾವ ನ್ಯಾಯ? ಇನ್ನು ಈ ಅಸ್ಸಾಮಿನಲ್ಲಿ ಏನಾಗಿದೆ ಕೊಂಚ ನೋಡಿ.

ಅಸ್ಸಾಂ ಕಾಜಿರಂಗ ವನ್ಯಜೀವಿ ಅಭಯಾರಣ್ಯದ ಹೊರವಲಯದ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಎನ್.ಆರ್.ಎಲ್ ಹೆಸರಿನ ಪೆಟ್ರೋಲ್ ರಿಫೈನರಿ ತಲೆಯೆತ್ತಿದೆ. ಆ ಕಂಪನಿಯು ತನ್ನ ನೌಕರರ ಮನರಂಜನೆಗಾಗಿ ಒಂದು ಗಾಲ್ಫ್ ಕ್ಲಬ್ ನಿರ್ಮಿಸಿದೆ. ಗಾಲ್ಫ್ ಮೈದಾನದ ಗಡಿಯಂಚಿಗೆ ಬಲವಾದ ಕಾಂಕ್ರೀಟ್ ಗೋಡೆಯನ್ನೂ ಕೆಲವೆಡೆ ಕಟ್ಟಿ ನಿಲ್ಲಿಸಿತ್ತು. ಆದರೆ, ಈ ಮೈದಾನ ನಿರ್ಮಾಣವಾದ ಪ್ರದೇಶ ನಮ್ಮ ಪಾರಂಪರಿಕ ಪಥದ ನಡುವೆಯಿತ್ತು. ವಾಡಿಕೆಯಂತೆ, ಒಮ್ಮೆ ಆ ಮಾರ್ಗದಲ್ಲಿ ಹೋಗುತ್ತಿದ್ದ ನಮ್ಮ ಗುಂಪಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ನಮ್ಮ ಪಥದಲ್ಲಿ ಎತ್ತರದ ಕಾಂಕ್ರೀಟ್ ಗೋಡೆ ಅಡ್ಡ ನಿಂತಿತ್ತಲ್ಲ?

ನಿಮ್ಮ ಪೋಷಕರು ಚಿಕ್ಕಂದಿನಲ್ಲಿ ನಿಮ್ಮನ್ನು ಶಾಲೆಗೆ ಕಳುಹಿಸುವಾಗ ಹೇಗೆ ರಸ್ತೆಯ ಎಡಬದಿಯಲ್ಲೇ ಸಾಗಬೇಕು ಎಂಬ ಪಾಠ ಹೇಳಿಕೊಡುತ್ತಾರೋ ಹಾಗೇ ನಮ್ಮ ಮರಿಗಳಿಗೂ ನಾವು, ‘ಇದು ನಮ್ಮ ನಡೆಯುವ ದಾರಿ. ಈ ದಾರಿಯನ್ನು ಬಿಟ್ಟು ಹೋಗಬಾರದು’ ಎಂಬ ಸೂಚನೆ ಕೊಟ್ಟಿರುತ್ತೇವೆ. ಬೇರೆ ದಾರಿಯಲ್ಲಿ ನಾವು ಸಾಮಾನ್ಯವಾಗಿ ಸಂಚರಿಸುವುದಿಲ್ಲ. ಪ್ರಾಯಕ್ಕೆ ಬಂದ ಗುಂಪಿನ ಸದಸ್ಯೆಯೊಬ್ಬಳು ಕಾಂಕ್ರೀಟ್ ಗೋಡೆಯನ್ನು ಕೆಡವಲು ತನ್ನ ತಲೆಯನ್ನು ಘಟ್ಟಿಸಿದಳು. ಕಾಂಕ್ರೀಟ್ ಗೋಡೆ ಜಗ್ಗಲಿಲ್ಲ. ಆಕೆ ಪದೇ ಪದೇ ತನ್ನ ಪ್ರಯತ್ನವನ್ನು ಮುಂದುವರೆಸಿದಳು. ತನಗೆ ಮತ್ತು ಕಾಯುತ್ತಿರುವ ತನ್ನ ಹಿಂಡಿಗೆ ದಾರಿ ಮಾಡುವ ಅವಳ ಪ್ರಯತ್ನ ಸಂಜೆಯ ಹೊತ್ತಿಗೆ ವಿಫಲವಾಯಿತು. ಮೆದುಳಿನಲ್ಲಿ ರಕ್ತಸ್ರಾವವಾಗಿ ಅವಳು ತೀರಿಕೊಂಡಳು.

ಯಾರೋ ಕೆಲವರು ಪುಣ್ಯಾತ್ಮರು ಎನ್.ಆರ್.ಎಲ್. ಘಟಕ ಸೂಕ್ಷ್ಮ ಪ್ರದೇಶದಲ್ಲಿ ನಡೆಸಿದ್ದ ಕಿತಾಪತಿಯ ವಿರುದ್ಧ ಕೋರ್ಟ್ಗೆ ಹೋದರು. ಹಸಿರು ನ್ಯಾಯಮಂಡಳಿಗೂ ದೂರು ಹೋಯಿತು. ನನ್ನ ಗುಂಪಿದೆಯಲ್ಲ, ಇಂತಹ ಇನ್ನೂ ಕೆಲವು ಹಿಂಡುಗಳು ಈ ಮಾರ್ಗದಲ್ಲಿ ಓಡಾಡುವುವು. ಆದರೆ, ಅಲ್ಲಿ ನಮ್ಮ ಪಥವೇ ಇಲ್ಲ ಎಂದು ವಕೀಲರು ವಾದಿಸಿದರಂತೆ. ನಾವೇನು ಇರುವೆಗಳೇ? ಯಾರಿಗೂ ಕಾಣಿಸದಿರಲು! ‘ಆ ಪ್ರದೇಶದಲ್ಲಿ ಆನೆಗಳೇ ಇಲ್ಲ’ ಎಂದೂ ಅವರು ವಾದಿಸಿದರಂತೆ. ಪಾಟೀಸವಾಲು ಹಾಕಲು ನಮಗೆ ಅವಕಾಶವಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಇರಲಿ, ಅಂತಿಮವಾಗಿ ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಿರುವುದು ತಪ್ಪು, ಅದನ್ನು ತೆರವುಗೊಳಿಸಬೇಕು ಎಂಬ ತೀರ್ಪು ಬಂತು. ನಮ್ಮ ಪರವಾಗಿ ಕೋರ್ಟ್ ಮೆಟ್ಟಿಲೇರಿದವರ ಹೊಟ್ಟೆ ತಣ್ಣಗಿರಲಿ. ಆದರೆ, ತೀರ್ಪು ಬರುವ ಮೊದಲು ಆದ ಅನಾಹುತ ಏನು ಕಡಿಮೆಯೇ? ಕಾಂಕ್ರೀಟ್ ಗೋಡೆಗೆ ತಲೆ ಘಟ್ಟಿಸಿಕೊಂಡು, ಮೆದುಳಿನಲ್ಲಿ ರಕ್ತಸ್ರಾವವಾಗಿ ನಮ್ಮ ಪರಿವಾರದ 12 ಸದಸ್ಯರು ಸತ್ತಿದ್ದರು.

ಕಳೆದ ವಾರ ಪತ್ರಿಕೆಗಳಲ್ಲಿ ನೀವು ಒಂದು ಸುದ್ದಿಯನ್ನು ಗಮನಿಸಿರಲಿಕ್ಕೆ ಸಾಕು, ‘ಸಿಡಿಲು ಬಡಿದು ಹದಿನೆಂಟು ಆನೆಗಳ ಸಾವು’ ಎಂದು ದಪ್ಪಕ್ಷರದಲ್ಲಿ ಪ್ರಕಟವಾಗಿತ್ತು. ಈ ಘಟನೆ ನಡೆದಿದ್ದು ಅಸ್ಸಾಮಿನ ಬಾಮುನಿ ಬೆಟ್ಟ ಪ್ರದೇಶದಲ್ಲಿ. ಸತ್ತ ನಮ್ಮ ಕುಟುಂಬದ ಸದಸ್ಯರಿಗೆ ಹೂಹಾಕಿ ಪೂಜಿಸುತ್ತಿರುವ ಫೋಟೊಗಳು ಎಲ್ಲೆಡೆ ಹರಿದಾಡಿದವು. ಸಿಡಿಲಿನಿಂದ ಅವರೆಲ್ಲ ಸತ್ತರು ಎಂದು ಅರಣ್ಯಾಧಿಕಾರಿಗಳು ಹೇಳಿದರು. ಕಾಡಿನಲ್ಲಿ ನಾವು ಎಂತೆಂಥ ಮಳೆಯಲ್ಲಿ ಓಡಾಡಿಲ್ಲ. ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ ಕೃತಿಯಲ್ಲೋ ಅಥವಾ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲೋ ವರ್ಣಿಸಿರುವಂತೆ ಖಡ್ ಖಡಲ್ ಎನ್ನುವಂತಹ ಕುಂಭದ್ರೋಣ ಮಳೆ ಸುರಿದರೂ ಜಗ್ಗಿದವರಲ್ಲ ನಾವು. ಈಗ ಸಿಡಿಲಿಗೆ ನಮ್ಮ ಗಜಬಳಗದಲ್ಲಿ ಇಷ್ಟು ಸಾವಂತೆ! ವಿಷಪ್ರಾಶನದಿಂದ ಕೊಂದಿರಬಹುದು ಎಂದು ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ ಕಡೆಗೆ ಸ್ವಲ್ಪ ಗಮನಕೊಡಿ. ಏನೋ ತನಿಖೆಯಂತೆ, ಹ್ಞುಂ... ಕಾಯೋಣ.

ನಮ್ಮವರು ಹದಿನೆಂಟು ಮಂದಿ ಸತ್ತರಲ್ಲ? ಅದರಲ್ಲಿ 14 ಸಾವುಗಳು ಗುಡ್ಡದ ಮೇಲೆ ಸಂಭವಿಸಿದರೆ, ಇನ್ನುಳಿದ ನಾಲ್ಕು ಮರಿಗಳು –ಪಾಪ, ದೊಡ್ಡದಾಗಿ ಬೆಳೆದು, ಬಾಳಿ ಬದುಕಬೇಕಾದಂಥವು– ಗುಡ್ಡದ ಬುಡದಲ್ಲಿ ಪ್ರಾಣಬಿಟ್ಟಿವೆ. ಇದೇ ಪ್ರದೇಶದಲ್ಲಿ ವಾಸಿಸುವ ಕರ್ಬಿ ಆದಿವಾಸಿಗಳ ಕೃಷಿ ಜಮೀನನ್ನು ಸೌರ ವಿದ್ಯುತ್ ಕಂಪನಿಯೊಂದು ಅಕ್ರಮವಾಗಿ ಕಬಳಿಸಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ವಿದ್ಯುತ್ ಘಟಕ ಇರುವ ಪ್ರದೇಶವೂ ನಮ್ಮ ಪಥವಾಗಿತ್ತು ಎಂಬುದನ್ನು ಲಿಯೊ ಸಲ್ಡಾನ ಎತ್ತಿ ತೋರಿದ್ದಾರೆ. ‘ಆನೆತಜ್ಞ’ರೆಂದೇ ಖ್ಯಾತರಾದ ವಿಜಯಾನಂದ ಚೌಧರಿಯವರು ‘ಸಿಡಿಲು ಬಡಿದ ಯಾವ ಕುರುಹುಗಳೂ ಮೃತಪಟ್ಟ ಆನೆಗಳ ಮೇಲೆ ಇಲ್ಲ. ಬಹುಶಃ ವಿಷಪ್ರಾಶನದಿಂದ ಅವುಗಳು ಸತ್ತಿರಬೇಕು’ ಎಂದಿರುವುದನ್ನೂ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ ನಮ್ಮ ಕುಲದ ಸಾವಿರಾರು ಗಂಡಾಳುಗಳನ್ನು ದಂತಕ್ಕಾಗಿ ಬೇಟೆಯಾಡಿದ್ದ. ಏಷ್ಯಾದಲ್ಲಿ ನಮ್ಮ ಗಂಡಾಳುಗಳಿಗೆ ಮಾತ್ರ ಹೊರಗೆ ಚಾಚಿದ ಕೋರೆಗಳಿರುತ್ತವೆ. ಅದೇ ಆಫ್ರಿಕಾದ ನಮ್ಮ ಬಾಂಧವರಲ್ಲಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಕೋರೆಗಳಿರುತ್ತವೆ. ದಂತಕ್ಕಾಗಿ ನೀವು ನಮ್ಮ ಗಂಡಾಳುಗಳನ್ನು ಬೇಟೆಯಾಡುತ್ತಿರುವುದರ ಪರಿಣಾಮದ ಕುರಿತು ಹೇಳಿಕೊಳ್ಳಲು ಮುಜುಗರವಾಗುತ್ತದೆ. ಈಗ ನಮ್ಮಲ್ಲಿ 80 ವಯಸ್ಕ ಹೆಣ್ಣಾನೆಗಳಿಗೆ ಒಂದು ಗಂಡಾಳು ಇರುವುದು. ಹೀಗಾದರೆ ನಮ್ಮ ಸಂತತಿ ಬೆಳೆಯುವುದು ಹೇಗೆ?

ಏಷ್ಯಾ ಆನೆಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿರುವುದು ಭಾರತದಲ್ಲಿಯೇ. ಉಳಿದಂತೆ ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ ದೇಶಗಳಲ್ಲಿ ನಮ್ಮ ಪರಿವಾರ ಇದೆ. ಭೌಗೋಳಿಕವಾಗಿ ನಿಮಗಿಂತ ಮೂರುಪಟ್ಟು ಹೆಚ್ಚು ಪ್ರದೇಶ ಹೊಂದಿದ ಚೀನಾದಲ್ಲಿ ನಮ್ಮವರ ಸಂಖ್ಯೆ 250 ಮಾತ್ರ. ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಪಾಕಿಸ್ತಾನದಲ್ಲಿ ಈಗ ನಮ್ಮ ಪರಿವಾರದ ಒಬ್ಬರೂ ಇಲ್ಲ.

ಕೊನೆಯದಾಗಿ, ಜೀವಜಾಲದ ಸರಪಣಿಯಲ್ಲಿ ನಮ್ಮ ಪಾತ್ರ ಬಹುಮುಖ್ಯ. ನಮ್ಮಗಳ ಆವಾಸತಾಣಗಳು ಉಳಿದರೆ, ನಿಮ್ಮ ಸಂತತಿಗೂ ಕ್ಷೇಮ. ನಮ್ಮನ್ನು ಉಳಿಸಿಕೊಳ್ಳುವುದು ಅಥವಾ ಅಳಿಸಿಹಾಕುವುದು ನಿಮಗೆ ಬಿಟ್ಟಿದ್ದು. ಈ ನಿರ್ಧಾರ, ನಿಮ್ಮ ಅಳಿವು–ಉಳಿವಿನ ಪ್ರಶ್ನೆಗೂ ಉತ್ತರವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

ನಮಸ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.