ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಗ ಸಂರಕ್ಷಣೆಗಾಗಿ 'ಹಾವು–ನಾವು'

Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

ತುಮಕೂರಿನಿಂದ 20 ಕಿ.ಮೀ. ದೂರದಲ್ಲಿರುವ ಮಠವೊಂದರಲ್ಲಿ ಅದೊಂದಿನ ಮುಂಜಾನೆ ನಿತ್ಯ ಕರ್ಮಕ್ಕೆಂದು ಶೌಚಾಲಯ ಹೊಕ್ಕವರಿಗೆ ಆಘಾತ ಕಾದಿತ್ತು. ಅಲ್ಲಿನ ಕಮೋಡ್‌ನ ಒಳಗೆ ನಾಗರಹಾವೊಂದು ಆರಾಮಾಗಿ ಮಲಗಿತ್ತು. ಕೂಡಲೇ ಎಚ್ಚೆತ್ತ ಮಠದ ಸ್ವಾಮೀಜಿ, ‘ವಾರ್ಕೊ’ ಬಳಗದ ಸದಸ್ಯರಿಗೆ ಫೋನಾಯಿಸಿದರು. ಸ್ವಾಮೀಜಿಗೆ ಹಾವಿನ ಬಗ್ಗೆ ಪ್ರೀತಿ. ಹೀಗಾಗಿ ಆ ತಂಡದವರಿಗೆ ‘ಕಮೋಡ್ ಬೇಕಾದರೆ ಒಡೆಯಿರಿ. ಆದರೆ ಹಾವಿಗೆ ಹಾನಿ ಮಾಡದಿರಿ’ ಎಂದು ವಿನಂತಿಸಿದರು. ಕೆಲ ಹೊತ್ತು ಕಸರತ್ತು ನಡೆಸಿದ ತಂಡ ನಂತರ ಹಾವನ್ನು ಶೌಚಾಲಯದಿಂದ ಹೊರತೆಗೆದು ದೂರದಲ್ಲಿ ಬಿಟ್ಟಿತು.

ತುಮಕೂರು ಸುತ್ತಮುತ್ತ ಇಂತಹ ಸಾವಿರಾರುಹಾವುಸಂರಕ್ಷಣೆಯ ಕಥನಗಳಿಗೆ ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ (Wildlife Awareness and Reptile Conservation Organization - WARCO – ವಾರ್ಕೊ) ಸದಸ್ಯರು ಸಾಕ್ಷಿಯಾಗಿದ್ದಾರೆ. ಈ ತಂಡದವರು ಹಾವುಗಳನ್ನು ರಕ್ಷಿಸುವ ಜತೆಗೆ, ಜನರಲ್ಲಿ ಹಾವಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದಕ್ಕಾಗಿ ‘ಹಾವು–ನಾವು’ ಎಂಬ ಅಭಿಯಾನ ಆರಂಭಿಸಿದ್ದಾರೆ.‌

ತುಮಕೂರಿನಿಂದ ಆರಂಭವಾದ ಈ ಅಭಿಯಾನ ಈಗ ರಾಮನಗರ, ಮೈಸೂರು, ಬೆಳಗಾವಿ ಬಳ್ಳಾರಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿದೆ.

ಮನೆಯೊಳಗೆಹಾವುಸೇರಿಕೊಂಡಾಗ ಈ ಸಂಸ್ಥೆಯ ಸದಸ್ಯರಿಗೆ ಕರೆ ಬರುತ್ತದೆ. ಈ ತಂಡದವರು ಅಲ್ಲಿಗೆ ಭೇಟಿ ನೀಡಿ, ಜೋಪಾನವಾಗಿ ಹಾವನ್ನು ಹಿಡಿಯುತ್ತಾರೆ. ನಂತರ ಅದೇ ಹಾವಿನ ಬಗ್ಗೆ ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡುತ್ತಾರೆ. ಹಿಡಿದಿರುವಹಾವುಯಾವ ಜಾತಿಗೆ ಸೇರಿದ್ದು, ಅದರಿಂದಾಗುವ ಪ್ರಯೋಜನಗಳೇನು? ಎಂಬಿತ್ಯಾದಿ ಮಾಹಿತಿಗಳನ್ನು ನೀಡುತ್ತಾರೆ. ಒಂದು ಪಕ್ಷ ಹಿಡಿದಿರುವುದು ವಿಷದ ಹಾವಾದಲ್ಲಿ ಮಾತ್ರ ಅದನ್ನು ಕೊಂಡೊಯ್ದು ಕಾಡಿಗೆ ಬಿಡುತ್ತಾರೆ. ಕೇರೆ, ಹಸಿರು ಹಾವಿನಂತಹ ರೈತಸ್ನೇಹಿ ಉರಗಗಳು ಸಿಕ್ಕಿದರೆ, ರೈತರ ಒಪ್ಪಿಗೆ ಪಡೆದು ಹೊಲ, ಗದ್ದೆ, ತೋಟಗಳ ಸುತ್ತ ಬಿಡುತ್ತಾರೆ.

‘ಹಾವಿನ ಬಗ್ಗೆ ಜನರಲ್ಲಿರುವ ಅಪನಂಬಿಕೆಗಳನ್ನು ಹೋಗಲಾಡಿಸುವುದೇ ನಮ್ಮ ಉದ್ದೇಶ. ನಮ್ಮ ದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ಹಾವುಗಳಿವೆ. ಅವುಗಳಲ್ಲಿ 63–65 ಜಾತಿಯವು ಮಾತ್ರ ವಿಷಕಾರಿ. ನಮ್ಮಲ್ಲಿ ನಾಗರ, ಕೊಳಕುಮಂಡಲ, ಕಟ್ಟುಹಾವು, ರತ್ನಮಂಡಲದಂತಹ ವಿಷಕಾರಿ ಸರ್ಪಗಳಿವೆ. ಇವನ್ನು ಹೊರತುಪಡಿಸಿದರೆ, ಉಳಿದ ಹಾವುಗಳಿಂದ ಮನುಷ್ಯನ ಪ್ರಾಣಕ್ಕೆ ಅಪಾಯವಿಲ್ಲ. ಇದನ್ನು ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ’ ಸಂಸ್ಥೆಯ ಸಂಸ್ಥಾಪಕ ಸದಸ್ಯ ನಾಗರಾಜ ಬೇತೂರು.

ಏನಿದು ಅಭಿಯಾನ

‘ಲಿವಿಂಗ್ ವಿತ್‌ ಸ್ನೇಕ್ಸ್‌’ ಅಭಿಯಾನ ಆರಂಭಗೊಂಡಿದ್ದು ಆಸ್ಟ್ರೇಲಿಯಾದಲ್ಲಿ. ಕರ್ನಾಟಕದ ಬಳ್ಳಾರಿಯಲ್ಲಿ ಆದಿತ್ಯ ವಟ್ಟಂ ಎಂಬುವರು ‘ಹಾವು–ನಾವು’ ಹೆಸರಲ್ಲಿ ಅಭಿಯಾನ ಆರಂಭಿಸಿದರು. ನಂತರ ತುಮಕೂರಿನಲ್ಲಿ ಕಾರ್ತಿಕ್‌ ಸಿಂಗ್‌, ರಘುರಾಮ್‌ ಗೌಡ ಮತ್ತು ನಾಗರಾಜು ಬೇತೂರು ವಾರ್ಕೊ ಸಂಸ್ಥೆ ಸ್ಥಾಪಿಸಿ ಈ ಕಾರ್ಯಕ್ರಮ ಮುಂದುವರಿಸಿದ್ದಾರೆ. ಐದು ವರ್ಷಗಳಿಂದ ನಡೆಯುತ್ತಿರುವ ಈ ಅಭಿಯಾನದಲ್ಲಿ 8 ಸಾವಿರದಿಂದ 10 ಸಾವಿರ ಹಾವುಗಳನ್ನು ರಕ್ಷಣೆ ಮಾಡಲಾಗಿದೆ.

ವಾರ್ಕೊ ಸಂಸ್ಥೆಯ ಈ ಅಭಿಯಾನಕ್ಕೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಕೈ ಜೋಡಿಸಿದ್ದಾರೆ. ಯಾವುದೇ ಸಮಯದಲ್ಲಿ ಕರೆ ಬಂದರೂ ಉರಗ ಸಂರಕ್ಷಣೆಗೆ ರೆಡಿ ಎನ್ನುತ್ತಾರೆ. ಹಲವು ಸಂಘಟನೆಗಳು ಇವರಿಗೆ ಸಾಥ್‌ ನೀಡಿವೆ.ಹಾವುಹಿಡಿಯುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಕೊಂಚ ಎಚ್ಚರ ತಪ್ಪಿದರೂ ಅಪಾಯ ಖಚಿತ. ಅಷ್ಟೇ ರೋಚಕ ಅನುಭವಗಳು ಈ ಬಳಗದ ಸದಸ್ಯರಿಗೆ ಆಗಿವೆ.

‘ಒಮ್ಮೆ ಕಪ್ಪೆ ನುಂಗಲು ಬಂದ ಹಾವೊಂದು ಪುಟ್ಟ ಡಬ್ಬದಲ್ಲಿ ಸಿಲುಕಿತ್ತು. ದೇಹವೆಲ್ಲ ಒಳಗೆ, ಬಾಲ ಮಾತ್ರ ಹೊರಗೆ. ಮುಚ್ಚಳ ಬಿಡಿಸಿಹಾವುಹಿಡಿದರೆ, ಅದು ನಾಲ್ಕು ಅಡಿಯಷ್ಟು ಉದ್ದವಿತ್ತು’ ಎಂದು ವಿವರಿಸುತ್ತಾಹಾವುಹಿಡಿಯುವಾಗಿನ ಅನುಭವಗಳನ್ನು ತೆರೆದಿಟ್ಟರು ನಾಗರಾಜು. ಒಮ್ಮೆ ಬಾವಿಗೆ ಬಿದ್ದ ಹಾವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾಗೂ ಹೆಂಚಿನ ಸಂದಿಯಲ್ಲಿ ಸೇರಿಕೊಂಡ ಹಾವುಗಳನ್ನೂ ಅಷ್ಟೇ ನಾಜೂಕಾಗಿ ರಕ್ಷಿಸಿದ್ದಾರೆ. ಅದರಲ್ಲೂ ವಿಷದ ಹಾವಾಗಿದ್ದರಂತೂ ಇವರು ಮೈ ಎಲ್ಲ ಕಣ್ಣಾಗಿ ಕೆಲಸ ಮಾಡುತ್ತಾರೆ. ಹಾವುಗಳನ್ನು ಹಿಡಿಯುವಾಗ, ತಮ್ಮ ಬಗ್ಗೆ ಯೋಚಿಸುವಷ್ಟೇ, ಹಾವುಗಳಿಗೆ ತೊಂದರೆಯಾಗದಂತೆಯೂ ಎಚ್ಚರಿಕೆ ವಹಿಸುತ್ತದೆ ತಂಡ.

ಪರಿಸರದಲ್ಲಿ ಹಾವುಗಳ ಪಾತ್ರ..

ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ ಪ್ರಮುಖವಾ ದುದು. ಅವುಗಳ ಸಂಖ್ಯೆ ಕಡಿಮೆ ಆದಷ್ಟೂ ಇಲಿ, ಹೆಗ್ಗಣಗಳು ಹೆಚ್ಚಾಗಿ, ರೈತರಿಗೆ ಬೆಳೆನಷ್ಟ ಉಂಟಾಗುತ್ತದೆ. ಒಂದುಹಾವುವರ್ಷಕ್ಕೆ 200–300 ಇಲಿಗಳನ್ನು ತಿನ್ನುತ್ತದೆ. ಇದರಿಂದ ಎಷ್ಟೋ ಬೆಳೆ ಸಂರಕ್ಷಣೆ ಆಗುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಮನೆಯೊಳಗೆ ಸೇರಿರುತ್ತದೆ ಎಂಬ ಕಾರಣಕ್ಕೆ, ಹಾವನ್ನು ಕೊಲ್ಲುವುದು ಸರಿಯಲ್ಲ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡುವುದೂ ಅಭಿಯಾನದ ಉದ್ದೇಶ ಎನ್ನುತ್ತಾರೆ ವಾರ್ಕೊ ಸದಸ್ಯರು.

ಹಾವುಹಿಡಿಯ ಹೊರಟವರಿಗೆ ಮೊದಮೊದಲು ರೈತರಿಂದ ವಿರೋಧ ವ್ಯಕ್ತವಾಗುತಿತ್ತಂತೆ. ಆದರೆ, ಇಂದು ಬಹುತೇಕರು ವಿಷಕಾರಿಯಲ್ಲದ ಹಾವುಗಳನ್ನು ತಮ್ಮ ಮನೆಯ ಸುತ್ತ ಬಿಡಲು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಆ ಮಟ್ಟಿಗೆ ಈ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ.

‘ಹಾವು–ನಾವು’ ಅಭಿಯಾನದ ಮಾಹಿತಿಗಾಗಿ ವಾರ್ಕೊ ಸಂಸ್ಥೆ ಸಂಪರ್ಕ ಸಂಖ್ಯೆ : 9743635314, 9742921801,
ಇಮೇಲ್‌: warcoindia@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT