ಸೋಮವಾರ, ಡಿಸೆಂಬರ್ 6, 2021
27 °C
ಪ್ರಾಣಿ ಕಾಳಜಿ

ಮುದ್ದಿನ ನಾಯಿಮರಿಗಿರಲಿ ತರಬೇತಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಮನೆಯಲ್ಲಿ ಮುದ್ದಾದ ನಾಯಿಮರಿ ಸಾಕಬೇಕು ಎಂಬ ಆಸೆ ಹಲವರಲ್ಲಿ ಇದ್ದೇ ಇರುತ್ತದೆ. ಎಲ್ಲೋ ಪಾರ್ಕ್‌ನಲ್ಲಿ, ರಸ್ತೆಬದಿಯಲ್ಲಿ ನಾಯಿಮರಿ ಹಿಡಿದುಕೊಂಡು ವಾಕಿಂಗ್ ಮಾಡುವವರನ್ನು ನೋಡಿದರೆ ನಮ್ಮ ಮನೆಯಲ್ಲೂ ಇಂತಹ ನಾಯಿಮರಿ ಇದ್ದರೆ ಎಷ್ಟು ಚೆಂದ ಎನ್ನಿಸುವುದು ಸುಳ್ಳಲ್ಲ. ಮನೆಗೆ ನಾಯಿಮರಿ ತರುವುದು ಸುಲಭ. ತಂದ ಮೇಲೆ ಅದನ್ನು ಸಾಕಿ–ಸಲುಹುವುದು ಕೊಂಚ ಕಷ್ಟವೇ. ಆದರೆ, ಕೊಂಚ ತರಬೇತಿ ನೀಡುವ ಮೂಲಕ ಮುದ್ದಿನ ಪಪ್ಪಿಯನ್ನು ಮನೆಯ ಸದಸ್ಯನಂತೆ ಮಾಡಿಕೊಳ್ಳಬಹುದು. 

ಮನೆಯ ಅತಿಥಿಯಂತೆ ನೋಡಿಕೊಳ್ಳಿ 
‘ನಾಯಿಮರಿ ಮನೆಗೆ ಬರುವ ಹೊಸ ಅತಿಥಿಯಂತೆ. ಅದಕ್ಕೆ ಮನೆಯಲ್ಲಿ ಎಲ್ಲವೂ ಹೊಸತಾಗಿರುತ್ತದೆ. ನಾಯಿಮರಿಗೆ ಎಲ್ಲವನ್ನೂ ತೋರಿಸಿ ಮನೆಯ ಪದ್ಧತಿ, ಕ್ರಮಗಳನ್ನು ಅಭ್ಯಾಸ ಮಾಡಿಸಬೇಕು. ಮನೆಯ ಪ್ರತಿ ಜಾಗವನ್ನು ಪರಿಚಯಿಸಬೇಕು. ಪ್ರತಿದಿನ ಅರ್ಧ ಗಂಟೆಗೊಮ್ಮೆ ನಿಮ್ಮ ಪಪ್ಪಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ ಮಲ, ಮೂತ್ರ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು. ಮೊದಲ ದಿನವೇ ಹೆದರಿಸುವುದು ಗದರುವುದು ಮಾಡಬಾರದು’ ಎನ್ನುವುದು ಬೆಂಗಳೂರಿನ ಬಸವನಗುಡಿಯಲ್ಲಿರು ಕೆ9 ಗುರುಕುಲದ ನಾಯಿಗಳ ತರಬೇತುದಾರ ಶಿವಸ್ವಾಮಿ ಅವರ ಅಭಿಪ್ರಾಯ.  

ನಿಮ್ಮ ಮುದ್ದಿನ ಪಪ್ಪಿ ಮನೆಗೆ ಬಂದ ಆರಂಭದ ದಿನಗಳಲ್ಲಿ ಸ್ವಚ್ಛತೆಯ ವಿಷಯಗಳಲ್ಲಿ ತಪ್ಪುಗಳನ್ನು ಮಾಡುತ್ತದೆ. ಅದು ಸಹಜ ಕೂಡ. ಆದರೆ ತಪ್ಪು ಮಾಡುವುದನ್ನು ತಡೆಯುವ ಬದಲು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ. ಮನುಷ್ಯರಂತೆ ಪ್ರೀತಿಯಿಂದ ಕಲಿಸಿದರೆ ಅದು ಬೇಗನೇ ಕಲಿಯುತ್ತದೆ. ಅದಕ್ಕೆ ಬಾತ್‌ರೂಮ್‌ಗೆ ಹೋಗಿ ಮೂತ್ರ ಮಾಡಲು ಅಭ್ಯಾಸ ಮಾಡಿಸಿ. ಮಲ–ಮೂತ್ರ ಬಂದಾಗ ಬೊಗಳುವ ಮೂಲಕ ನಿಮ್ಮನ್ನು ಎಚ್ಚರಿಸುವುದನ್ನು ಅಭ್ಯಾಸ ಮಾಡಿಸಿ.

ಸಮಯ ನಿಗದಿಪಡಿಸಿ
‘ನಿಮ್ಮ ದಿನಚರಿಗೆ ತಕ್ಕಂತೆ ಹೇಗೆ ಬದುಕುತ್ತಿರೋ ನಾಯಿಮರಿಗೂ ದಿನಚರಿಗೆ ತಕ್ಕಂತೆ ಬದುಕುವುದನ್ನು ಕಲಿಸಿ. ಅದಕ್ಕೆಂದೇ ಒಂದಷ್ಟು ಸಮಯ ನಿಗದಿಪಡಿಸಿ. ಪ್ರತಿದಿನ ಒಂದೇ ಸಮಯಕ್ಕೆ ಸರಿಯಾಗಿ ಅದಕ್ಕೆ ಆಹಾರ ನೀಡಿ. ಪ್ರತಿದಿನ ಆಹಾರ ನೀಡುವ ಮೊದಲು 15– 20 ನಿಮಿಷ ವಾಕಿಂಗ್ ಮಾಡಿಸಿ’ ಎನ್ನುತ್ತಾರೆ ಶಿವಸ್ವಾಮಿ.

ನಾಯಿಮರಿಯ ಮೇಲೆ ಸದಾ ಒಂದು ಕಣ್ಣಿಟ್ಟಿರಿ. ಒಂದು ವೇಳೆ ನೀವು ಮನೆಯಲ್ಲಿ ಕಾಣಿಸದಿದ್ದರೆ ಅದು ಮನೆಯಲ್ಲೆಲ್ಲಾ ಹುಡುಕಾಡಿ ತೊಂದರೆಗೆ ಸಿಲುಕಬಹುದು. ನೀವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಾಯಿಮರಿಯ ಗಾತ್ರಕ್ಕೆ ಅನುಗುಣವಾದ ಗೂಡಿನಲ್ಲಿ ಇರಿಸುವುದು ಉತ್ತಮ. ಆಗ ನಿಮ್ಮ ಮುದ್ದಿನ ಪಪ್ಪಿ ಎಲ್ಲೆಲ್ಲೋ ತಿರುಗಾಡಿ, ನಿಮ್ಮನ್ನು ಹುಡುಕಾಡುವ ನೆಪದಲ್ಲಿ ತೊಂದರೆಗೆ ಸಿಲುಕುವುದನ್ನು ತಡೆಯಬಹುದು. ಆದರೆ ಒಂದು ವಿಷಯ ನೆನಪಿಡಿ, ನಾಯಿಮರಿಯನ್ನು ಒಂದು ಗಂಟೆಗಿಂತ ಹೆಚ್ಚು ಸಮಯ ಗೂಡಿನಲ್ಲಿ ಇರಿಸುವುದು ಸರಿಯಲ್ಲ.

ನಾಯಿಮರಿ ತಪ್ಪು ಮಾಡಿದಾಗ ಶಿಕ್ಷಿಸಬೇಡಿ. ಅದು ಒಳ್ಳೆಯ ಬುದ್ಧಿ ತೋರಿದಾಗ ಅದಕ್ಕೆ ಖುಷಿಯಾಗುವ ಕೆಲಸ ಮಾಡಿ. ಮನೆಯಲ್ಲಿ ಹೇಗಿರಬೇಕು, ಅತಿಥಿಗಳು ಬಂದಾಗ ಹೇಗಿರಬೇಕು, ಹೊರಗಡೆ ಹೋದಾಗ ಹೇಗಿರಬೇಕು ಎಂಬೆಲ್ಲಾ ಗುಣಗಳನ್ನು ಅದಕ್ಕೆ ರೂಢಿಸಿ. ಅವು ಮಗುವಿನಂತೆ ಎಲ್ಲವನ್ನೂ ನಿಧಾನವಾಗಿ ಕಲಿಯುತ್ತವೆ. ‘ಬೇಕು’ ಹಾಗೂ ‘ಬೇಡ’ ಪದದ ಅರ್ಥವನ್ನು ಮಾಡಿಸಿ. ಇದರಿಂದ ನಿಮಗೆ ಅದರ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು