ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳ ಬಾಲದ ನೀಲಿ ಗಿಳಿ ಸ್ಪಿಕ್ಸ್ ಮಕಾವ್

Last Updated 28 ಜುಲೈ 2019, 13:46 IST
ಅಕ್ಷರ ಗಾತ್ರ

ಹಲವರ ನೆಚ್ಚಿನ ಹಕ್ಕಿಯಾದ ಗಿಳಿಗಳ ಸಂತತಿ ವಿಶ್ವದಾದ್ಯಂತ ವಿಸ್ತರಿಸಿದೆ. ಕೆಲವು ಗಿಳಿಗಳು ಸೀಮಿತ ಭೂ ಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ. ಅಂತಹ ಗಿಳಿಗಳಲ್ಲಿ ಸ್ಪಿಕ್ಸ್‌ ಮಕಾವ್ (Spix's Macaw) ಕೂಡ ಒಂದು.ಇದರ ವೈಜ್ಞಾನಿಕ ಹೆಸರು ಕ್ಯಾನೊಪ್ಸಿಟ್ಟ ಸ್ಪಿಕ್ಸೀ (Cyanopsitta spixii). ಇದು ಪಿಸ್ಟಿಯಾಸಿಡೇ (Psittacidae) ಕಟುಂಬಕ್ಕೆ ಸೇರಿದ ಗಿಳಿ.

ಹೇಗಿರುತ್ತದೆ?

ಪುಟ್ಟ ಗಾತ್ರದ ಮಕಾವ್‌ಗಳಲ್ಲಿ ಇದು ಕೂಡ ಒಂದು. ಲಿಟಿಲ್ ಬ್ಲೂ ಮಕಾವ್ ಎಂದೂ ಇದನ್ನು ಕರೆಯುತ್ತಾರೆ. ಆಕರ್ಷಕ ನೀಲಿ ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ಕೆಲವು ಮಕಾವ್‌ಗಳ ಪುಕ್ಕ ಗಾಢ ನೀಲಿ ಬಣ್ಣದಲ್ಲಿದ್ದರೆ, ಕೆಲವು ಮಕಾವ್‌ಗಳು ಸಾಮಾನ್ಯ ನೀಲಿ ಬಣ್ಣದಲ್ಲಿರುತ್ತವೆ. ಕುತ್ತಿಗೆ ಮತ್ತು ತಲೆ ಭಾಗದಲ್ಲಿ ಬೂದು ಬಣ್ಣದ ಪುಕ್ಕ ಬೆಳೆದಿರುತ್ತದೆ. ರೆಕ್ಕೆಗಳೂ ಕೂಡ ನೀಲಿ ಬಣ್ಣದಲ್ಲಿರುತ್ತವೆ. ಬಾಲ ನೀಳವಾಗಿದ್ದು, ನೀಲಿ ಬಣ್ಣದಲ್ಲಿರುತ್ತದೆ. ಕೆನ್ನೆ ಮತ್ತು ಕಣ್ಣಿನ ಭಾಗದಲ್ಲಿ ಬಿಳಿ ಅಥವಾ ಕಪ್ಪು ಬಣ್ಣದ ಚರ್ಮವಿರುತ್ತದೆ. ದೃಢವಾದ ಕೊಕ್ಕು ಕಪ್ಪು ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ಕಾಲುಗಳು ಕಪ್ಪು ಬಣ್ಣದಲ್ಲಿದ್ದು, ಪೊರೆಯಂತಹ ಚರ್ಮದಿಂದ ಕೂಡಿರುತ್ತವೆ. ಉಗುರುಗಳು ನೀಳವಾಗಿರುತ್ತವೆ. ಕಣ್ಣುಗಳು ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್ ರಾಷ್ಟ್ರ ಈ ಹಕ್ಕಿಯ ಮೂಲ ನೆಲೆ. ಇದನ್ನು ಸಾಕು ಹಕ್ಕಿಯಾಗಿ ಮನೆಗಳಲ್ಲಿ ಸಾಕಿಕೊಳ್ಳುವ ಪರಿಪಾಠ ಹೆಚ್ಚಾಗಿರುವುದರಿಂದ ವಿಶ್ವದ ಇತರೆ ಖಂಡಗಳಿಗೂ ಇದನ್ನು ಪರಿಚಯಿಸಲಾಗಿದೆ. ಮರಗಳು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಈ ಹಕ್ಕಿ ಹೆಚ್ಚಾಗಿ ವಾಸಿಸುತ್ತದೆ. ಉಷ್ಣ ವಲಯ ಪ್ರದೇಶ ಮತ್ತು ಅರೆ ಮರುಭೂಮಿ ಪ್ರದೇಶಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಈ ಹಕ್ಕಿಗೆ ಇದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿ. ಪುಟ್ಟ ಗುಂಪುಗಳನ್ನು ರಚಿಸಿಕೊಂಡಿರುತ್ತದೆ. ಸದಾ ಸಂಗಾತಿಯೊಂದಿಗೆ ಇರಲು ಇಷ್ಟಪಡುತ್ತದೆ. ನೀರು ಹೆಚ್ಚಾಗಿರುವ ನದಿ ಪಾತ್ರ ಪ್ರದೇಶಗಳಲ್ಲಿ ಆಹಾರ ಅರಸುತ್ತಾ ಸುತ್ತುತ್ತಿರುತ್ತದೆ. ಮರಗಳ ಮೇಲೆ ವಾಸಿಸುತ್ತದೆ. ಕಾಡಿನಲ್ಲಿದ್ದಾಗ ಸೋಮಾರಿಯಾಗಿ ವರ್ತಿಸುತ್ತದೆ. ಹಗಲಿನಲ್ಲಿ ಮಾತ್ರ ಚುರುಕಾಗಿರುತ್ತದೆ. ಸದಾ ಭಯದಿಂದಲೇ ಬದುಕುತ್ತದೆ. ಅಪಾಯದ ಮುನ್ಸೂಚನೆಗಳು ಎದುರಾದರೆ ಗೂಡಿನಿಂದ ಹೊರಬರುವುದಿಲ್ಲ. ಇತರೆ ಪ್ರಾಣಿ ಪಕ್ಷಿಗಳ ಶಬ್ದಗಳನ್ನು ಉತ್ತಮವಾಗಿ ಅನುಕರಿಸುತ್ತದೆ. ಮನುಷ್ಯರ ಮಾತುಗಳನ್ನು ಪುನರುಚ್ಛರಿಸುತ್ತದೆ. ಸದಾ ಸದ್ದು ಮಾಡುತ್ತಾ ಸುತ್ತುತ್ತಿರುತ್ತದೆ.

ಆಹಾರ

ವಿವಿಧ ಬಗೆಯ ಕಾಳುಗಳು ಮತ್ತು ಸ್ಥಳೀಯವಾಗಿ ದೊರೆಯುವ ಹಣ್ಣುಗಳೇ ಇದರ ನೆಚ್ಚಿನ ಆಹಾರ. ಬ್ರೆಜಿಲ್‌ನಲ್ಲಿ ಬೆಳೆಯುವ ಇಕ್ಯೂರಿ ಪಾಮ್‌ (ಖರ್ಜೂರದಂತಹ ಗಿಡ) ಬೀಜಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಪೋಷಕಾಂಶಗಳಿಗಾಗಿ ಕಳ್ಳಿಗಿಡಗಳ ಕಾಂಡ ಮತ್ತು ಮೃದುವಾದ ಮರದ ತೊಗಟೆಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಜೀವಿತಾವಧಿಯಲ್ಲಿ ಒಂದೇ ಹಕ್ಕಿಯೊಂದಿಗೆ ಜೊತೆಯಾಗಿರುತ್ತದೆ. ಸುರಕ್ಷಿತ ಸ್ಥಳಗಳಿಗಾಗಿ ಮತ್ತು ಹೆಣ್ಣು ಮಕಾವ್‌ಗಳಿಗಾಗಿ ಗಂಡು ಮಕಾವ್‌ಗಳು ಕಾಳಗ ನಡೆಸುತ್ತವೆ. ಕಾಡಿನಲ್ಲಿದ್ದಾಗ ನವೆಂಬರ್‌ನಿಂದ ಮಾರ್ಚ್‌ವರೆಗೆ ಸಂತಾನೋತ್ಪತ್ತಿ ನಡೆಸುತ್ತದೆ. ಸಾಮಾನ್ಯವಾಗಿ 2ರಿಂದ 3 ಮೊಟ್ಟೆಗಳನ್ನು ಇಡುತ್ತದೆ. ಸಾಕು ಗಿಳಿಯಾಗಿದ್ದಾರೆ, 4ರಿಂದ 7 ಮೊಟ್ಟೆಗಳನ್ನು ಇಡುತ್ತದೆ. 25ರಿಂದ 28 ದಿನಗಳ ವರೆಗೆ ಹೆಣ್ಣು ಹಕ್ಕಿ ಮಾತ್ರ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಗಂಡು ಮಕಾವ್‌ಗಳು ಹೆಣ್ಣಿಗೆ ಆಹಾರ ಒದಗಿಸುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಪುಕ್ಕ ಇರುವುದಿಲ್ಲ. ಹೀಗಾಗಿ ಎರಡೂ ಹಕ್ಕಿಗಳು ಜೋಪಾನವಾಗಿ ಮರಿಗೆ ಆಹಾರ ಉಣಿಸಿ ಬೆಳೆಸುತ್ತವೆ. ಎರಡು ತಿಂಗಳ ಅವಧಿಯಲ್ಲಿ ಪುಕ್ಕ ಮೂಡುತ್ತದೆ. ಆನಂತರ ಹಾರಲು ಆರಂಭಿಸುತ್ತವೆ. ಮೂರು ತಿಂಗಳ ವರೆಗೆ ಮರಿಗಳು ಪೋಷಕ ಹಕ್ಕಿಗಳ ರಕ್ಷಣೆಯಲ್ಲಿ ಇರುತ್ತವೆ. 7 ವರ್ಷದ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

l ಇದು ಮನುಷ್ಯರ ಮಾತುಗಳನ್ನು ಉಚ್ಛರಿಸುವುದರಿಂದ ಇದಕ್ಕೆ ಟಾಕಿಂಗ್ ಮಕಾವ್ ಎಂದೂ ಕರೆಯುತ್ತಾರೆ.

l ಮೊಟ್ಟೆಗಳು ಮರಿಗಳ ರಕ್ಷಣೆಗೆ ವಿಶೇಷ ಕಾಳಜಿ ತೋರುವ ಈ ಮಕಾವ್ ಅಪಾಯ ಎದುರಾದರೆ ತೀವ್ರವಾಗಿ ಪ್ರತಿರೋಧಿಸುತ್ತದೆ.

l ಇದರ ಕೊಕ್ಕು ಎಷ್ಟು ದೃಢವಾಗಿರುತ್ತದೆ ಎಂದರೆ, ಬ್ರೆಜಿಲ್‌ ನಟ್‌ ಅನ್ನೂ ಪುಡಿ ಮಾಡುತ್ತದೆ. ಮನುಷ್ಯರ ಕೈ ಬೆರಳುಗಳು, ಗೆಣ್ಣುಗಳನ್ನೂ ಕಚ್ಚಿ ಗಾಯಗೊಳಿಸುವ ಶಕ್ತಿ ಇದಕ್ಕಿದೆ.

l ವಯಸ್ಸಾದಂತೆಲ್ಲಾ ಇವುಗಳ ಪುಕ್ಕದ ಬಣ್ಣದಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ.

l ಇದರ ನಾಲಗೆ ಮೂಳೆಯಿಂದ ಕೂಡಿದ್ದು, ದೃಢವಾಗಿರುತ್ತದೆ. ಇದು ಆಹಾರ ತಿನ್ನುವುದಕ್ಕೂ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT