ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ‘ಫಾರೆಸ್ಟ್‌ ಡಾಕ್ಟರ್’ ಹಕ್ಕಿಯ ಹಾಡುಪಾಡು

Last Updated 10 ಡಿಸೆಂಬರ್ 2020, 8:54 IST
ಅಕ್ಷರ ಗಾತ್ರ
ADVERTISEMENT
""
""
""

ಹಳ್ಳಿಯ ಹೊಲ ಅಥವಾ ಗದ್ದೆ ಬಯಲಿನಲ್ಲಿ ವಿಹರಿಸುವಾಗ ಒಣಮರಗಳನ್ನು ಟಫ್‌ ಟಫ್‌ ಟಫ್‌... ಎಂದು ಜೋರಾಗಿ ಬಡಿದಂತಹ ಶಬ್ದ ನಿಮ್ಮ ಕಿವಿಗೆ ಅಪ್ಪಳಿಸಬಹುದು. ಒಂಟಿ ಇದ್ದಾಗ ಆ ವಿಚಿತ್ರ ಶಬ್ದ ಕೆಲವೊಮ್ಮೆ ಮನದಲ್ಲಿ ಭಯ ಹುಟ್ಟಿಸಿದರೂ ಅಚ್ಚರಿಪಡಬೇಕಿಲ್ಲ. ಎದೆಯಲ್ಲಿ ಭಯ ಮೂಡಿಸುವ ಈ ಶಬ್ದ ಕೇಳಿದಾಗ ಥಟ್ಟನೆ ಅದು ಮರಕುಟಿಗ ಹಕ್ಕಿಯ ಶಬ್ದ ಎಂಬುದು ಸ್ಮೃತಿಪಟಲದಲ್ಲಿ ಮೂಡುತ್ತದೆ.

ರೆಕ್ಕೆ ಬಡಿದು ಒಂದೇ ವೇಗದಲ್ಲಿ ಹಾರುತ್ತಾ ಮರದ ಕಾಂಡದ ಮೇಲೆ ಕುಳಿತುಕೊಳ್ಳುವ ಅದನ್ನು ತಧೇಕಚಿತ್ತದಿಂದ ನೋಡುತ್ತಾ ನಿಂತರೆ ನಿಮ್ಮ ಮೇಲೆ ಅದು ಸಂಶಯ ಬೀರುತ್ತದೆ. ತಕ್ಷಣವೇ ಚಕಚಕನೆ ಮರವೇರುತ್ತದೆ. ನೀವು ನೋಟ ಕದಲಿಸದಿದ್ದರೆ ಮರದ ಟೊಂಗೆಗಳಲ್ಲಿ ಮರೆಯಾಗುತ್ತದೆ.

ಕಾಮಿಕ್ಸ್‌ ಹಾಗೂ ನೋಟ್‌ಬುಕ್‌ಗಳಲ್ಲಿ ಮರಕುಟಿಗಗಳ ಬಣ್ಣ ಬಣ್ಣದ ಚಿತ್ರಗಳು ಮುದ್ರಿತವಾಗಿರುವುದು ಸರ್ವೇ ಸಾಮಾನ್ಯ. ಹಾಗಾಗಿ, ಅವುಗಳ ಬಗ್ಗೆ ಮಕ್ಕಳಿಗೂ ಗೊತ್ತು. ವಿಶ್ವದಾದ್ಯಂತ 200ಕ್ಕೂ ಹೆಚ್ಚು ಪ್ರಭೇದಕ್ಕೆ ಸೇರಿದ ಮರಕುಟಿಗಗಳನ್ನು ಪಕ್ಷಿ ತಜ್ಞರು ಪತ್ತೆ ಹಚ್ಚಿದ್ದಾರೆ. ಕರ್ನಾಟಕದಲ್ಲಿ ಹದಿಮೂರು ಪ್ರಭೇದಕ್ಕೆ ಸೇರಿದ ಮರಕುಟಿಗಗಳು ಇವೆ.

ಕೆಂಪು-ಹೊಟ್ಟೆಯ ಮರಕುಟಿಗ

ಈ ಹಕ್ಕಿಗಳ ಬದುಕು ಕುತೂಹಲಕಾರಿ. ಪ್ರಸ್ತುತ ಮನುಷ್ಯ ಸಹಜೀವನ ನಡೆಸುವುದು ಕಷ್ಟಕರ. ಆದರೆ, ಪರಿಸರ ಸಾಮರಸ್ಯ ಬೆಳೆಸಿಕೊಂಡಿರುವ ಹಕ್ಕಿಗಳ ಪೈಕಿ ಮರಕುಟಿಗಗಳಿಗೂ ಮೊದಲ ಸ್ಥಾನ ಸಲ್ಲುತ್ತದೆ. ಇದಕ್ಕೆ ಕಂದು ಮರಕುಟಿಗ (ರೂಫಸ್‌ ಉಡ್‌ಫೆಕರ್‌) ಹಕ್ಕಿಯ ಬದುಕು ನಿದರ್ಶನ.

ಈ ಹಕ್ಕಿಯ ಗೂಡು ತೀವ್ರ ಕುತೂಹಲ ಮೂಡಿಸುತ್ತದೆ. ಕೊಂಚ ಕೆಣಕಿದರೆ ಸಾಕು ರೌದ್ರಾವತಾರ ತೆಳೆದ ಯುದ್ಧಕ್ಕೆ ಸನ್ನದ್ಧವಾಗುವ ಕ್ರಿಮ್ಯಾಟೋಗ್ಯಾಸ್ಟರ್ ಇರುವೆ ಗೂಡಿನಲ್ಲಿ ರಂಧ್ರ ಕೊರೆದು, ಅಲ್ಲಿ ಮೊಟ್ಟೆ ಇಟ್ಟು ಮರಿಗಳಿಗೆ ಕಾವು ಕೊಡುತ್ತದೆ. ಈ ಇರುವೆಗಳ ಗೂಡು ಗೋಳಾಕಾರವಾಗಿರುತ್ತದೆ. ಈ ಹಕ್ಕಿಯ ಕುಟುಂಬಕ್ಕೆ ಇರುವೆಗಳು ಕಿಂಚಿತ್ತೂ ತೊಂದರೆ ಕೊಡುವುದಿಲ್ಲ. ಮೊಟ್ಟೆಯಿಂದ ಹೊರಬರುವ ಮರಿಗಳಿಗೆ ಇರುವೆಗಳು ಪ್ರತಿರೋಧ ಒಡ್ಡುವುದೇ ಇಲ್ಲ. ಅಲ್ಲದೇ, ಮರಿಗಳಿಗೆ ಇರುವೆಗಳೇ ಆಹಾರ. ಈ ಇರುವೆಗಳು ಮತ್ತು ಕಂದು ಮರಕುಟಿಗದ ಸಹಜೀವನ ಅಚ್ಚರಿ ಮೂಡಿಸುತ್ತದೆ.

ಒಣಮರಗಳೇ ಬಹುತೇಕ ಮರಕುಟಿಗಗಳ ಆವಾಸ. ಇವುಗಳ ಹವಾಮಾನದ ಪರಿಜ್ಞಾನ ಅಚ್ಚರಿ ಹುಟ್ಟಿಸುತ್ತದೆ. ಋತುಮಾನದ ಬದಲಾವಣೆ ಹಾಗೂ ಹವಾಮಾನದ ಏರಿಳಿತವನ್ನು ಮುಂಚಿತವಾಗಿಯೇ ಗ್ರಹಿಸುವ ಪರಿಣತಿ ಇವುಗಳಿಗೆ ಸ್ವಭಾವ ಸಿದ್ಧಿಯಾಗಿದೆ. ಮರದ ಆಯ್ಕೆಯಲ್ಲಿನ ಅವುಗಳ ಜಾಣ್ಮೆ ಬೆರಗು ಮೂಡಿಸುತ್ತದೆ. ಇವುಗಳ ಗೂಡು ನಿರ್ಮಿಸುವ ಕೆಲಸ ಆರಂಭವಾಗುವುದು ಮಳೆಗಾಲ ಮುಗಿದ ಮೇಲೆ. ಜೋರಾಗಿ ಮಳೆ ಸುರಿದಾಗ ಗೂಡಿನೊಳಗೆ ನೀರು ಬರದಂತಹ ಕೋನ ಹಾಗೂ ದಿಕ್ಕನ್ನು ಆಯ್ದುಕೊಂಡು ಗೂಡು ಕೊರೆಯುವ ಕಲೆ ಅವುಗಳಿಗೆ ಸಿದ್ಧಿಸಿದೆ.

ಗಟ್ಟಿಯಾದ ಒಣಮರವನ್ನು ಆಯ್ದುಕೊಳ್ಳುವ ಅವು ಮೊದಲಿಗೆ ಮರದ ಎಡಭಾಗಕ್ಕೆ, ನಂತರ ಬಲಭಾಗಕ್ಕೆ ಕೊಕ್ಕಿನಿಂದ ಬಲವಾಗಿ ಬಡಿದು ಸಿಬುರೇಳುವಂತೆ ಮಾಡುತ್ತವೆ. ನಂತರದ್ದು ಸಂತಾನೋತ್ಪತ್ತಿಗಾಗಿ ಸುಂದರವಾಗಿ ಗೂಡು ಕಟ್ಟುವ ಕಾಯಕ. ಅದು ಕೊಕ್ಕಿನಿಂದ ಹೊಡೆಯುವ ವೇಗ ಗಂಟೆಗೆ 25 ಕಿಲೊಮೀಟರ್‌ನಷ್ಟಿರುತ್ತದೆ.

ಒಣಮರಗಳಿಗೆ ಬೀಟಲ್ಸ್‌, ಇರುವೆ, ಕಂಬಳಿಹುಳುಗಳೇ ಸಾಮಾನ್ಯ ಅತಿಥಿಗಳು. ಮರದ ತೊಗಟೆಯಲ್ಲಿಯೇ ಕೆಲವು ಕೀಟಗಳು ಗೂಡು ನಿರ್ಮಿಸುವುದು ಉಂಟು. ಈ ಕೀಟಗಳೇ ಮರಕುಟಿಗಗಳಿಗೆ ಪ್ರಧಾನ ಆಹಾರ. ಪ್ರತಿದಿನ ನೂರಾರು ಕೀಟಗಳನ್ನು ಅವು ಭಕ್ಷಿಸುತ್ತವೆ. ಹಾಗಾಗಿ, ಒಣಮರಗಳು ಅವುಗಳ ಸಂತಾನಾಭಿವೃದ್ಧಿಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಈ ಹಕ್ಕಿಗಳು ಗೂಡು ಕಟ್ಟುವುದು ಕೀಟಗಳನ್ನು ಹೆಚ್ಚು ಆಕರ್ಷಿಸುವ ಮರಗಳಲ್ಲಿಯೇ. ಅವುಗಳ ಚುರುಕಾದ ಕಿವಿಗಳು ಇದಕ್ಕೆ ನೆರವಾಗುತ್ತವೆ. ಕೀಟಗಳ ಶಬ್ದವನ್ನು ಅರೆಕ್ಷಣದಲ್ಲಿ ಗ್ರಹಿಸುವ ಶಕ್ತಿ ಅವುಗಳಿಗಿದೆ. ಹಾಗಾಗಿಯೇ, ಮರಕುಟಿಗ ಹಕ್ಕಿಯನ್ನು ‘ಫಾರೆಸ್ಟ್‌ ಡಾಕ್ಟರ್’ ಎಂದು ಕರೆಯುತ್ತಾರೆ.

ಕಂದು ಮರಕುಟಿಗ

ಸಂತಾನಾಭಿವೃದ್ಧಿ ವೇಳೆ ಹೆಣ್ಣು ಹಕ್ಕಿಗಳ ಕೂಗಾಟ ಹೆಚ್ಚಿರುತ್ತದೆ. ತನ್ನ ಆವಾಸಕ್ಕೆ ಬೇರೆ ಪಕ್ಷಿಗಳು ಬಾರದಂತೆ ಎಚ್ಚರವಹಿಸುವುದು ಇದರ ಹಿಂದಿರುವ ಗುಟ್ಟು. ಗಟ್ಟಿಯಾಗಿ ಕೂಗುವ ಮೂಲಕ ಇತರೇ ಪಕ್ಷಿಗಳಿಗೆ ತನ್ನ ಇರುವಿಕೆಯನ್ನೂ ಅವು ಖಾತ್ರಿಪಡಿಸುತ್ತವೆ.

ಉದ್ದನೆಯ ಕೊಕ್ಕು ಹೊಂದಿರುವ ಇವು ಗಟ್ಟಿಯಾದ ಒಣಮರದ ತೊಗಟೆಗಳನ್ನು ಕೊರೆದು ಹೇಗೆ ಗೂಡು ನಿರ್ಮಿಸುತ್ತವೆ ಎಂಬುದು ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಈ ಪಕ್ಷಿಗಳ ಕೊಕ್ಕು ಬಡಗಿಯ ಉಳಿಯಂತೆ ಚೂಪು ಹಾಗೂ ಗಡಸು. ಅದರ ದೇಹ ರಚನಾತ್ಮಕವಾಗಿರುತ್ತದೆ. ತಲೆಬುರುಡೆ ದಪ್ಪವಿರುತ್ತದೆ. ಜೊತೆಗೆ, ಭಾರ ಇರುವುದರಿಂದ ಸುತ್ತಿಗೆಯಂತೆಯೇ ಹೊಡೆತ ಹಾಕುತ್ತದೆ. ತಲೆಬುರುಡೆಯನ್ನು ಸ್ಪಂಜಿನಂತಹ ಮೂಳೆಯು ಸುತ್ತುವರಿದಿರುತ್ತದೆ. ಅದರ ಮೆದುಳಿನ ಗಾತ್ರ 0.1ರಿಂದ 0.5 ಗ್ರಾಂ. ಕೊಕ್ಕು ಉದ್ದವಾಗಿರುತ್ತದೆ. ಕೆಳಗಿನ ಕೊಕ್ಕು ಮೇಲ್ಭಾಗಕ್ಕಿಂತ ಚಿಕ್ಕದಾಗಿರುತ್ತದೆ. ಉದ್ದವಾದ ನಾಲಿಗೆಯ ಬುಡವು ಹಕ್ಕಿಯ ತಲೆಯ ಹಿಂಭಾಗದಲ್ಲಿರುತ್ತದೆ. ನಾಲಿಗೆಯ ಬುಡದಲ್ಲಿರುವ ಮೂಳೆಯು ತಲೆಬುರುಡೆ ಸುತ್ತಲೂ ದವಡೆಯಿಂದ ತಲೆಬುರುಡೆಯ ಹಿಂಭಾಗದ ಕಿರೀಟ ಮತ್ತು ತಲೆಯ ಮುಂಭಾಗಕ್ಕೆ ಸುತ್ತಿಕೊಂಡಿರುತ್ತದೆ. ಅದು ಕೊನೆಗೊಳ್ಳುವುದು ಮೂಗಿನ ಕುಳಿಯಲ್ಲಿ. ಇದು ಬಹುತೇಕ ಕಾರಿನ ಸೀಟ್‌ಬೆಲ್ಟ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿಯೇ, ಅದರ ದೇಹದ ವಿಕಾಸ ಪಕ್ಷಿಪ್ರಿಯರಲ್ಲಿ ಅಚ್ಚರಿ ಹುಟ್ಟಿಸುತ್ತದೆ.

ಕೆಲವು ಪ್ರಭೇದದ ಮರಕುಟಿಗಗಳು ಮೂವತ್ತು ವರ್ಷಗಳವರೆಗೂ ಜೀವಿಸುತ್ತವೆ. ಮತ್ತೆ ಕೆಲವು ಪ್ರಭೇದಗಳ ಆಯಸ್ಸು 10ರಿಂದ 11 ವರ್ಷ. ಹಸಿರು ಮರಕುಟಿಗ ಸೇರಿದಂತೆ ಕೆಲವು ಮರಕುಟಿಗಗಳು ಏಳು ವರ್ಷ ಮಾತ್ರ ಬದುಕಿರುತ್ತವೆ. ಪರಿಸರ ಮಾಲಿನ್ಯ, ಕೃಷಿ ಕ್ಷೇತ್ರದಲ್ಲಾಗಿರುವ ಬದಲಾವಣೆಯೂ ಈ ಪಕ್ಷಿಸಂಕುಲದ ಮೇಲೂ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT