ಭಾನುವಾರ, ಮಾರ್ಚ್ 26, 2023
21 °C

ಭೂತಾಯಿ ಬೆದರಿ ನಿಂತಾಳ...

ರೂಪ ಹಾಸನ Updated:

ಅಕ್ಷರ ಗಾತ್ರ : | |

ಭೂತಾಯಿ ಸಹನೆಗೆಟ್ಟು ಈಗಷ್ಟೇ ತನ್ನ ಮೈ ಕೊಡವಿಕೊಳ್ಳುತ್ತಿರಬಹುದೇ? ಆ ಸಣ್ಣ ಅಲುಗುವಿಕೆಯನ್ನೇ ತಾಳಲಾಗದೇ ನಾವು ಕಟ್ಟಿಕೊಂಡ ಬದುಕು, ಮನೆ, ತೋಟ, ರಸ್ತೆ, ಸೇತುವೆಗಳು.... ಹೀಗೆ ಪುತಪುತನೆ ಉರುಳಿ ಬೀಳುತ್ತಿವೆಯೇ?

ಹುಚ್ಚು ಮಳೆ, ಭೀಕರ ಬರ, ಸರ್ವನಾಶದ ಪ್ರವಾಹ, ಗುಡ್ಡ/ ಭೂಕುಸಿತ, ಕಾಳ್ಗಿಚ್ಚೋ, ಸುಟ್ಟು ಕರಕಲಾಗುತ್ತಿರುವ ಜೀವಜಾಲವೋ, ತುಂಡರಿಸಿ ಬೀಳುತ್ತಿರುವ ಮರದ ರಾಶಿಯೋ... ಭೂಮಿತಾಯಿ ಹೀಗೆ ಪ್ರತಿಕ್ಷಣ ಛಿದ್ರಗೊಳ್ಳುತ್ತಾ ವಿಲವಿಲನೆ ಒದ್ದಾಡುತ್ತಿರುವಾಗ ಮತ್ತೆ ಮತ್ತೆ ನಮ್ಮ ಮಹಾಕವಿ ದ.ರಾ. ಬೇಂದ್ರೆಯವರು ಬಹುಶಃ 50 ವರ್ಷಗಳ ಹಿಂದೆಯೇ ಬರೆದ ‘ಚಿಗರಿಗಂಗಳ ಚೆಲುವಿ’ ಪದ್ಯ ನೆನಪಾಗುತ್ತದೆ. ಆ ಕವನದ ಕೆಲ ಸಾಲುಗಳು ಹೀಗಿವೆ...

ಚಿಗರಿಗಂಗಳ ಚೆಲುವಿ ಚೆದರಿ ನಿಂತಾಳ ನೋಡೋ,
ಬೆದರಿ ನಿಂತಾಳ

ಹೊಳಿಹಳ್ಳ ತೊರೆದಾವೋ, ಗೆಣಿಹಕ್ಕಿ ಬೆರೆದಾವೋ,

***‌

ಹೂ ಕಾಯಿ ಹಣ್ಣು ತುಂಬಿದ ಬನದಾಗ

ಬ್ಯಾಟಿ ನಾಯೊದರ‍್ಯಾವೋ, ಹಸುಜೀವ ಬೆದರ‍್ಯಾವೋ,

ಗಳಗಳನೆ ಗಿಡದೇಲಿ ಉದರ್‍ಯಾವೋ ಗೆಳೆಯ ಉದರ‍್ಯಾವ

ದಿನ್ನಿ ಮಡ್ಡಿಗುಡ್ಡ ಅದರ್‍ಯಾವ, ಅದನ ತಾ ಕಂಡು

ನೊಂದಾಳೊ, ಬೆಂದಾಳೊ, ಅಂದಾಳೊ

‘ಇದು ಎಂಥ ಜೀವದ ಬ್ಯಾಟಿ ಹಾಡೇ ಹಗಲ‌’

***

ಉಕ್ಕುಕ್ಕುವ ದುಃಖ ಒಳಗೊತ್ಯಾಳೋ

ನಿಂತ ನೆಲವೆಂದು ಕಡಿಲಾಕೊ, ಬಡಿಲಾಕೊ, ಒಡಿಲಾಕೊ

‘ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾಳೋ’.

ತನ್ನ ಒಡಲಲ್ಲೇ ಹುಟ್ಟಿ, ತನ್ನ ಉಳಿವಿಗೇ ಕಂಟಕವಾಗಿರುವ ಮನುಷ್ಯನಿಗೆ ಕೇಳಿಸಬಹುದು ಎಂದು ಭೂತಾಯಿ ಆರ್ತವಾಗಿ ‘ಒಡವ್ಯಲ್ಲೋ ಮಗನೇ ಉಸಿರಿದ್ದೊಡಲು’ ಎಂದು ಚೀತ್ಕಾರ ಮಾಡುತ್ತಿದ್ದಾಳೆ. ಆದರೆ, ಮನುಷ್ಯನಿಗಿದೆಲ್ಲಿ ಕೇಳಿಸುತ್ತದೆ? ಅವನು ಅವಳನ್ನು ಬಿಕರಿಗಿಟ್ಟಿದ್ದಾನೆ!

ಭೂತಾಯಿ ಸಹನೆಗೆಟ್ಟು ಈಗಷ್ಟೇ ತನ್ನ ಮೈ ಕೊಡವಿಕೊಳ್ಳುತ್ತಿರಬಹುದೇ? ಆ ಸಣ್ಣ ಅಲುಗುವಿಕೆಯನ್ನೇ ತಾಳಲಾಗದೇ ನಾವು ಕಟ್ಟಿಕೊಂಡ ಬದುಕು, ಮನೆ, ತೋಟ, ರಸ್ತೆ, ಸೇತುವೆಗಳು.... ಹೀಗೆ ಪುತಪುತನೆ ಉರುಳಿ ಬೀಳುತ್ತಿವೆಯೇ? ನದಿಗಳು ಹೀಗೆ ದಿಕ್ಕೆಟ್ಟು ಉಕ್ಕಿ ಹರಿದು, ಚಂಡಮಾರುತವೆದ್ದು ಸಮುದ್ರ ಅಬ್ಬರಿಸಿ ನಾಡುಗಳನ್ನೇ ನುಂಗುತ್ತಿದೆಯೇ? ಇನ್ನೂ ನಮ್ಮ ಆಟಾಟೋಪ ಹೀಗೇ ಮುಂದುವರಿದರೆ... ಈ ಜೀವ ಹಿಂಡುವ ಸಂಕಟವನ್ನು ತಾಳಲಾಗದೇ ಆ ತಾಯಿಯೇನಾದರೂ ಮಗ್ಗುಲು ಹೊರಳಿದರೆ ಏನಾಗಬಹುದು? ಇಡೀ ಜಗತ್ತೇ ಮುಳುಗಡೆಯಾಗಿ ಹೋಗಬಹುದೇ? ಏಕೋ ಆ ದಿನಗಳು ದೂರವಿಲ್ಲವೆನಿಸುತ್ತಿದೆ. ಏಕೆಂದರೆ ನಮಗೆ ಭೂಮಿ ಅನಿವಾರ್ಯವೇ ಹೊರತು, ಭೂಮಿಗೆ ನಾವಲ್ಲ!

ನಾವು ಮನುಷ್ಯರು... ನಾವು ಸೃಷ್ಟಿಸಿಕೊಂಡ ಆಸ್ತಿಪಾಸ್ತಿಗಾದ ಹಾನಿಯ ಲೆಕ್ಕಾಚಾರ ಹಾಕಿ, ನಷ್ಟದ ಅಂದಾಜು ಪಟ್ಟಿ ತಯಾರಿಸಿ, ಇಷ್ಟಿಷ್ಟು ಪರಿಹಾರ ಸಿಗಬೇಕೆಂದು ಜಗಳವಾಡುತ್ತೇವೆ. ವ್ಯಾಜ್ಯ ಹೂಡುತ್ತೇವೆ. ಆದರೆ... ಇಷ್ಟೆಲ್ಲಾ ವರ್ಷಗಳಿಂದ ನಾವು ‘ಮನುಷ್ಯರು’ ಮಾತ್ರವೇ ಶ್ರೇಷ್ಠವೆಂದು ಭ್ರಮಿಸಿ, ಈ ಭೂಮಿಯೊಡಲನ್ನು ಬಗೆದು, ಅರಣ್ಯವನ್ನು ಸಿಗಿದು ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆದಿದ್ದೇವೆಯಲ್ಲಾ... ಅವಳ ಕಂದಮ್ಮಗಳಾದ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಹುಳುಹುಪ್ಪಟೆಗಳನ್ನು ಕೋಟ್ಯಂತರ ಸಂಖ್ಯೆಯಲ್ಲಿ ಕೊಲೆ ಮಾಡಿದ್ದೇವಲ್ಲಾ? ಎಷ್ಟೊಂದು ಸಸ್ಯ, ಜೀವ ಪ್ರಭೇದಗಳನ್ನೇ ಶಾಶ್ವತವಾಗಿ ಮುಗಿಸಿಬಿಟ್ಟಿದ್ದೇವಲ್ಲಾ? ಮನುಷ್ಯರಿಂದ ತನಗಾದ ಈ ಎಲ್ಲಾ ಹಾನಿ, ನಷ್ಟದ ಅಂದಾಜು ವೆಚ್ಚವನ್ನು ಭೂತಾಯಿ ಯಾರಲ್ಲಿ ಮರಳಿ ಕೇಳಬೇಕು? ಅವಳೆದೆಯ ದಳ್ಳುರಿಯನ್ನು ಯಾವ ಪ್ರಭುತ್ವದೆದುರು ಹೇಗೆಂದು ನಿವೇದಿಸಿಕೊಳ್ಳಬೇಕು?

ಜಾಗತೀಕರಣಕ್ಕೆ ಜಗತ್ತು ತೆರೆದುಕೊಳ್ಳುವ ಮೊದಲೂ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗ ಸ್ವಲ್ಪ ಪ್ರಮಾಣದಲ್ಲಿ ಆಗುತ್ತಿತ್ತು; ಇಲ್ಲವೆಂದಲ್ಲ. ಆದರೆ, ಜಾಗತೀಕರಣದೊಂದಿಗೇ ಬಿರುಗಾಳಿಯಂತೆ ನುಗ್ಗಿ ಬಂದ ಉದಾರೀಕರಣ, ಖಾಸಗೀಕರಣಗಳೆಂಬ ಬಕಾಸುರರು, ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲವನ್ನೂ ಬಿಕರಿಗಿಟ್ಟು, ನುಂಗಿ ನೊಣೆಯುತ್ತಿದ್ದಾರೆ.

ನಮ್ಮಲ್ಲೆ ನೋಡುವುದಾದರೆ, ಪಶ್ಚಿಮಘಟ್ಟದ ದಟ್ಟ ಅರಣ್ಯದೊಳಗೆ ‘ಅಭಿವೃದ್ಧಿ’ ಹೆಸರಿನ ಅದೆಷ್ಟೊಂದು ಅವೈಜ್ಞಾನಿಕ ಕಾಮಗಾರಿಗಳು ನಡೆದು ಹೋಗಿವೆ! ಬೃಹತ್ ಯಂತ್ರಗಳ ರಾಕ್ಷಸಾಕಾರದ ಹಲ್ಲುಗಳ ಮೂಲಕ ಭೂಮಿಯನ್ನು ಬಗೆದು, ಬಗೆದು, ಮರಗಳನ್ನು ಕಡಿದುರುಳಿಸಿ, ದಟ್ಟ ಅರಣ್ಯವನ್ನು ನಾಶ ಮಾಡಲಾಗಿದೆ. ಹೀಗಾಗಿ ಭೂಮಿಯ ಮೇಲ್ಮೈಪದರ ಆಳವಾಗಿ ನಾಶವಾಗಿ ಹೋಗಿದೆ. ಮರಗಳಿಂದ ಕೂಡಿದ್ದ ಬೆಟ್ಟ ಪ್ರದೇಶಗಳಿಂದು, ಬೋಡು ಗುಡ್ಡಗಳಾಗಿಹೋಗಿವೆ. ಇಲ್ಲವೇ ಕೃಷಿ ಭೂಮಿಯಾಗಿ ಪರಿವರ್ತನೆ ಹೊಂದಿವೆ. ಅದರಲ್ಲೀಗ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯೇ ನಾಶವಾಗಿ ಕುಸಿದು ಬೀಳುತ್ತಿವೆ. ಮಾಡಿದ್ದುಣ್ಣೋ ಮಾರಾಯ, ಅಷ್ಟೆ. ಕೇವಲ ಕಳೆದ 2015 ರಿಂದ 2019ರ ಇತ್ತೀಚಿನವರೆಗೆ ‘ಅಭಿವೃದ್ಧಿ’ಗಾಗಿ ಒಂದೂ ಕಾಲು ಕೋಟಿ ಮರಗಳನ್ನು ಕಡಿಯಲು ಸರ್ಕಾರವೇ ಆದೇಶ ನೀಡಿದ್ದಾಗಿ ಕೇಂದ್ರ ಪರಿಸರ ಸಚಿವಾಲಯ ಇತ್ತೀಚೆಗಿನ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ! ಇದು ಕೇವಲ ದಾಖಲಾದ ಮಾಹಿತಿ.

ಕೆಳಗಿನಿಂದ ಮೇಲಿನವರೆಗೂ ಕೊಂಡಿಯಂತೆ ಹಬ್ಬಿರುವ ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಇದಕ್ಕಿಂತ ಎರಡೋ, ಮೂರೋ ಪಟ್ಟು ಹೆಚ್ಚಾಗಿಯೇ ಮರಗಳು ಉರುಳಿರುವ ಸಾಧ್ಯತೆಯಿದೆ. ಇಷ್ಟು ಪ್ರಮಾಣದಲ್ಲಿ, ಇಷ್ಟು ತೀವ್ರಗತಿಯಲ್ಲಿ ಮರಗಳ, ಅರಣ್ಯದ ಮಾರಣಹೋಮವಾದರೆ ಅದನ್ನು ಅವಲಂಬಿಸಿರುವ ಆದಿವಾಸಿಗಳು, ಪ್ರಾಣಿ, ಪಕ್ಷಿ, ಜೀವಜಂತುಗಳೂ ದಿಕ್ಕೆಡುತ್ತವೆ. ನಿರ್ನಾಮವಾಗುತ್ತವೆ. ಈ ಪರಿಪಾಟ ಹೀಗೇ ಮುಂದುವರಿದರೆ ಭೂಮಿಯ ಸಮತೋಲನ ಉಳಿಯಲು ಹೇಗೆ ತಾನೇ ಸಾಧ್ಯ?
ಮೀತಿಮೀರಿದ ರಾಸಾಯನಿಕ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದ ಬೆಳೆಗೆ ಮಾರಕವಾಗಿದ್ದ ಕ್ರಿಮಿಗಳಷ್ಟೇ ಸಾಯುತ್ತಿಲ್ಲ. ಪರಾಗಸ್ಪರ್ಶ ಕ್ರಿಯೆಯಲ್ಲಿ ನಿರತವಾಗಿ ಹೂವನ್ನು ಕಾಯಾಗಿಸಿ, ನಮಗೆ ತಿನ್ನುವ ಆಹಾರವಾಗಿಸುತ್ತಿದ್ದ ಜೇನ್ನೊಣಗಳಂತಹ ಉಪಯೋಗಿ ಕೀಟ ಪ್ರಭೇದಗಳೂ ನಿರ್ನಾಮದ ಹಂತ ತಲುಪಿವೆ. ಕೇವಲ ಜೇನುಹುಳಗಳ ಒಂದು ಪ್ರಭೇದ ಸಂಪೂರ್ಣ ನಾಶವಾದರೆ, ಕೊನೆಗದು ಮನುಷ್ಯ ಸಂತತಿಯ ಅವಸಾನಕ್ಕೆ ಕಾರಣವಾಗುತ್ತದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಅವರ ಮಾತನ್ನೂ ನಾವು ನಿರ್ಲಕ್ಷಿಸಿದ್ದೇವೆ.

ಹಾಗಿದ್ದರೆ ನಾವು ನಾಶ ಮಾಡಿ ಮುಗಿಸಿರುವ ಜೀವ ಪ್ರಭೇದಗಳು ಕಣ್ಣಿಗೆ ಕಾಣದಂತಹ ಏನೇನು ಅವಘಡಗಳನ್ನು ತಂದಿಟ್ಟಿವೆಯೋ, ತರುತ್ತವೋ ಬಲ್ಲವರಾರು? ಏಕೆಂದರೆ, ಪ್ರಕೃತಿಯಲ್ಲಿನ ಇಡೀ ಜೀವ ವ್ಯವಸ್ಥೆ ಒಂದಕ್ಕೊಂದು ಪೂರಕವಾದುದು!

ಇದೊಂದು ಸಂಪೂರ್ಣ ಒಕ್ಕೂಟ ವ್ಯವಸ್ಥೆ. ಒಂದಕ್ಕೆ ಕುತ್ತು ಬಂದರೆ, ಸಾಲಾಗಿ ಹೆಣೆದ ಪಟಾಕಿ ಸರದಂತೆ ಮುಂದಿನ ಅವಲಂಬಿತ ಜೀವಗಳು ಒಂದೊಂದಾಗಿ ನಾಶವಾಗುತ್ತಾ ಸಾಗುತ್ತವೆ! ನಿಧಾನಕ್ಕೆ ಇಂಚಿಂಚೇ ಸಾಯುತ್ತಾ ಸಾಗುತ್ತ ಮಾನವ ಕುಲದ ಸಾವು ಹತ್ತಿರ ಹತ್ತಿರ ಬರುತ್ತದೆ.

ಪ್ರಕೃತಿಯಲ್ಲಿ ಪ್ರತಿ ಜೀವಿಗೂ ತನ್ನದೇ ಉದ್ದೇಶವಿದೆ. ಹಾಗಿಲ್ಲದಿದ್ದರದು ಸೃಷ್ಟಿಯೇ ಆಗುತ್ತಿರಲಿಲ್ಲ ಎಂಬ ಸತ್ಯವನ್ನು ನಾವು ತುರ್ತಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಮೂಲರೋಗದೆಡೆಗೆ ಕಣ್ಣೆತ್ತಿಯೂ ನೋಡದೆ ಪ್ರಭುತ್ವಗಳು ಮೇಲು ಮೇಲಿನ ರೋಗ ಲಕ್ಷಣಕ್ಕೆ ತಾತ್ಕಾಲಿಕ ಮದ್ದು ಕೊಟ್ಟುಕೊಳ್ಳುತ್ತಾ ಸಾಗಿವೆ. ಜನ- ಅಂದರೆ ನಾವು ಏನನ್ನೂ ಪ್ರಶ್ನಿಸದೇ, ವಿವೇಚಿಸದೇ ಸುಮ್ಮನಿದ್ದೇವೆ!

ದುರಂತವೆಂದರೆ, ಮನುಷ್ಯನ ಐಷಾರಾಮಿ ಜೀವನಶೈಲಿಯಿಂದಾಗಿ ಕಳೆದ 250-300 ವರ್ಷಗಳ ಅವಧಿಯಲ್ಲಿ ಭೂಗ್ರಹದ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಷಿಯಸ್ ಹೆಚ್ಚಾಗಿದೆ. ಇನ್ನೂ 0.5 ಅಥವಾ 1 ಡಿಗ್ರಿ ತಾಪಮಾನ ಹೆಚ್ಚಾದರೆ ಮುಂದಿನ 50 ವರ್ಷಗಳಲ್ಲಿ ಭೂಮಿಯ ಸಮಸ್ತ ಜೀವಸಂಕುಲ ನಾಶವಾಗುತ್ತದೆಂದು ಪರಿಸರ ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಕಳೆದ ಅರ್ಧ ಶತಮಾನದಲ್ಲಿ ಶೇಕಡ 50ಕ್ಕಿಂತ ಹೆಚ್ಚು ವೈವಿಧ್ಯದ ಜೀವಿ ಪ್ರಭೇದಗಳು ಅಭಿವೃದ್ಧಿಯ ದಾಳಿಗೆ ಸಿಕ್ಕಿ ನಿರ್ನಾಮವಾಗಿ, ಈಗಾಗಲೇ ಅಸಮತೋಲನ ಸೃಷ್ಟಿಯಾಗಿದೆ. ಮನುಷ್ಯನ ಅನೈಸರ್ಗಿಕ ಮೂರ್ಖ ಯೋಜನೆಗಳ ಹೊಡೆತಕ್ಕೆ ಸಿಕ್ಕಿ ಪ್ರತಿದಿನ ಸುಮಾರು 200 ಜೀವ ಪ್ರಭೇದಗಳು ಇನ್ನಿಲ್ಲದಂತೆ ನಾಶವಾಗುತ್ತಿವೆಯಂತೆ.

ಒಂದೆಡೆ ನಮ್ಮ ದೇಶದ ಹೆಚ್ಚಿನ ಕೃಷಿಭೂಮಿ ನಿಧಾನಕ್ಕೆ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಇನ್ನೊಂದೆಡೆ ಮಿತಿ ಮೀರಿದ ರಾಸಾಯನಿಕ, ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ, ಬರ, ಪ್ರವಾಹಗಳ ದಾಳಿಯಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಪ್ರತಿದಿನ 2000ದಷ್ಟು ರೈತರು ಬೇಸಾಯ ಬಿಟ್ಟು, ನಿರ್ಗತಿಕರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆಂದು, ವರದಿಯೊಂದು ಆತಂಕಿಸುತ್ತದೆ. ಕಳೆದೊಂದು ದಶಕದಲ್ಲಿ ಸುಮಾರು 4 ಲಕ್ಷದಷ್ಟು ರೈತರು ಬದುಕಲು ದಿಕ್ಕು ಕಾಣದೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.

ತೀವ್ರ ಬರ ಮತ್ತು ರಣ ಪ್ರವಾಹದಿಂದ ಕೊಚ್ಚಿಹೋದ ಜನರ ಬದುಕು ಸಮಸ್ಥಿತಿಗೆ ಬರಲು ಅದಿನ್ನೆಷ್ಟು ವರ್ಷಗಳು ಬೇಕೋ? ಆದರೆ ಇದ್ಯಾವ ಭೀಕರತೆಯೂ ನಮ್ಮನ್ನಾಳುವವರನ್ನು ಕಂಗೆಡಿಸಿಲ್ಲ. ಯಾವುದೇ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಸಂತ್ರಸ್ತರಿಗೊಂದಿಷ್ಟು ಪುಡಿಗಾಸು ಚೆಲ್ಲಿದರೆ ಮುಗಿಯಿತು! ಸಂತ್ರಸ್ತರ ಹೆಸರು ಹೇಳಿಕೊಂಡು ಕೋಟಿಗಟ್ಟಲೆ ಲೂಟಿ ಹೊಡೆಯಲು ಇಡೀ ವ್ಯವಸ್ಥೆಯ ಬಕಾಸುರರು, ಸಾಲುಗಟ್ಟಿ ನಾಲಿಗೆ ಹಿರಿದು ನಿಂತುಕೊಳ್ಳುತ್ತಾರೆ. ಈ ನಿರ್ಲಜ್ಜರಿಗೆ ಬರ ಬಂದರೂ, ಪ್ರವಾಹ ಬಂದರೂ, ಕಾಡು ಸುಟ್ಟರೂ, ಭೂಮಿ ಕುಸಿದರೂ.... ಸಂತೋಷವೇ. ಏಕೆಂದರೆ ಈ ಎಲ್ಲದರಿಂದ ಅವರಿಗೆ ಲಾಭವಿದೆಯಲ್ಲ!

ದೂರದ ಬ್ರೆಜಿಲ್‍ನ ಅಮೆಜಾನ್ ಕಾಡು ಧಗಧಗಿಸಿದರೆ, ಆ ಬಿಸಿಗೆ ಇನ್ನೆಲ್ಲೋ ಜಡಿ ಮಳೆ ಸುರಿಯುತ್ತದೆ. ನಾವಿಲ್ಲಿ ವಿಪರೀತ ಇಂಧನ ಉರಿಸಿ ಭೂಮಿ ಬಿಸಿಯೇರಿಸಿದರೆ, ದೂರದ ಹಿಮ ನದಿಗಳು ಕರಗಿ ಹರಿಯುತ್ತವೆ. ಸಮುದ್ರದ ವಿಸ್ತಿರ್ಣ ಹೆಚ್ಚುತ್ತದೆ. ಅಲ್ಲೆಲ್ಲೋ ಸಮುದ್ರದಲ್ಲಿ ಚಂಡಮಾರುತವೆದ್ದರೆ ಇಲ್ಲಿ ಧೋ ಮಳೆ ಸುರಿದು ಪ್ರವಾಹ ಉಕ್ಕುತ್ತದೆ. ಭೂಮಿಯ ಪ್ರತಿ ಚಲನೆಯೂ ಪರಸ್ಪರ ಪೂರಕ. ಒಂದಕ್ಕೊಂದು ಸಂಬಂಧಿತ. ಭೂಮಿಗೆ ಸ್ಥಳೀಯತೆಯೆಂಬುದೇ ಇಲ್ಲ!

ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯಾವುದೋ ಸಣ್ಣ ನೈಸರ್ಗಿಕ ವಿದ್ಯಮಾನವೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಇಡೀ ವಿಶ್ವದ ಪರಿಸರದ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಹೀಗಾಗೇ ಈ ಎಲ್ಲಾ ಪ್ರಕೋಪಗಳನ್ನೂ ಭೂಮಿಗೊದಗಿದ ತುರ್ತು ಪರಿಸ್ಥಿತಿಯೆಂದು ಇಡೀ ವಿಶ್ವ ಸಮುದಾಯ ಇನ್ನಾದರೂ ತುರ್ತಾಗಿ ಗಂಭೀರವಾಗಿ ಪರಿಗಣಿಸಿ, ಯುದ್ಧೋಪಾದಿಯಲ್ಲಿ ಕಾರ್ಯ ಸನ್ನದ್ಧವಾಗಲೇಬೇಕಿದೆ.

ಅದಕ್ಕಾಗಿ ಇಡೀ ವಿಶ್ವದ ಎಲ್ಲ ಪ್ರಭುತ್ವಗಳೂ ಎಚ್ಚೆತ್ತು ಭೂಮಿಯುಳಿವಿಗಾಗಿ ಸಶಕ್ತ ನೀತಿ ನಿಯಮಗಳನ್ನು ರೂಪಿಸಿ, ಅನುಸರಿಸಬೇಕಾಗಿದೆ. ಇದು ಕಾಲದ ಕರೆ. ಇದರ ಮಧ್ಯೆಯೂ ಸ್ವೀಡನ್ನಿನ 16ರ ಬಾಲೆ, ಭೂಮಿಯ ಮಗಳು, ಗ್ರೇತಾ ಥನ್‌ಬರ್ಗ್ ಬೆಳಕಿನ ಕಿರಣದಂತೆ ಗೋಚರಿಸುತ್ತಿದ್ದಾಳೆ.

ವಿಶ್ವಸಂಸ್ಥೆಯಲ್ಲಿ ನಿಂತು ‘ನೀವು ನಿಮ್ಮ ಮಕ್ಕಳನ್ನು ಎಲ್ಲಕ್ಕೂ ಮಿಗಿಲಾಗಿ ಪ್ರೀತಿಸುವುದಾದರೆ, ಹೀಗೆ ಪ್ರಾಕೃತಿಕ ಸಂಪತ್ತನ್ನೆಲ್ಲಾ ಲೂಟಿ ಮಾಡಿ, ನಮ್ಮ ಕಣ್ಣೆದುರೆ, ನಮ್ಮ ಭವಿಷ್ಯಕ್ಕೆ ನೀವೇ ಬೆಂಕಿ ಇಡುತ್ತಿರಲಿಲ್ಲ. ನಿಮಗೆಷ್ಟು ಧೈರ್ಯ? ಪರಿಸರ ವ್ಯವಸ್ಥೆಯನ್ನು ಇಂದು ಸಂಪೂರ್ಣವಾಗಿ ನಾಶ ಮಾಡಿದ್ದೀರಿ. ಜೀವಸಂಕುಲವನ್ನು ಸಾಮೂಹಿಕ ಅಳಿವಿನ ಪ್ರಾರಂಭದ ಘಟ್ಟಕ್ಕೆ ತಂದು ನಿಲ್ಲಿಸಿದ್ದೀರಿ. ಇಂಥಹ ಸಮಯದಲ್ಲಿ ನೀವು ದುಡ್ಡು ಮತ್ತು ಆರ್ಥಿಕ ಬೆಳವಣೆಗೆಯ ಚೆಂದದ ಕಥೆಗಳ ಬಗ್ಗೆ ಮಾತನಾಡುತ್ತೀರಿ! ನಿಮಗೆಷ್ಟು ಧೈರ್ಯ? ಇನ್ನಾದರೂ ನೀವು ಭೂಮಿ ಉಳಿಸಲು, ಮಾಡಲೇಬೇಕಾದ್ದೆಲ್ಲವನ್ನೂ ಮಾಡಲೇಬೇಕು. ಇದರಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಬಿಡುವುದಿಲ್ಲ. ಇಲ್ಲಿಯೇ, ಇದೇ ಸಮಯದಲ್ಲಿ ನಾವು ಯುವಜನರು ಗೆರೆ ಎಳೆಯುತ್ತಿದ್ದೇವೆ. ಜಗತ್ತು ಎಚ್ಚೆತ್ತುಕೊಳ್ಳುತ್ತಿದೆ. ಬದಲಾವಣೆ ಬರುತ್ತಿದೆ. ನಿಮಗಿಷ್ಟವಾಗಲಿ, ಆಗದೇ ಇರಲಿ ಬದಲಾವಣೆ ಬರುತ್ತಿದೆ.’ ಎಂದು ಗಟ್ಟಿಸಿ ಮಾತನಾಡಿ ಜಗತ್ತಿನ ಎಲ್ಲ ಸರ್ಕಾರಗಳು, ಎಲ್ಲ ಕಾರ್ಪೊರೇಟ್ ಬಂಡವಾಳಶಾಹಿ, ಅಧಿಕಾರಶಾಹಿ ಮತ್ತು ನಾವು- ಹೀಗೆ ಎಲ್ಲರೂ ನಾಚಿ ತಲೆತಗ್ಗಿಸುವಂತೆ ಮಾಡಿದ್ದಾಳೆ. ಆದರೆ ಈ ಲಜ್ಜಾಹೀನರು ಎಚ್ಚೆತ್ತುಕೊಳ್ಳುತ್ತಾರೊ, ಇಲ್ಲವೊ ಗೊತ್ತಿಲ್ಲ. ಗ್ರೇತಾ ಥನ್‌ಬರ್ಗ್ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನನಗರಿವಿಲ್ಲದೆ ಕಣ್ಣೀರು ಹರಿಯುತ್ತ ಆ ಬಿಸಿಯಿಂದ ಎಚ್ಚೆತ್ತೆ. ನನ್ನ ಆಳದಿಂದ ಅನ್ನಿಸಿತು- ನನಗೂ, ನಮಗೂ ಗ್ರೇತಾ ನಾಯಕಿಯಾಗಿ ಸಿಕ್ಕಿದಳು. ನಮಗಷ್ಟೆ ಅಲ್ಲಾ, ಜಗತ್ತಿಗೂ ಒಬ್ಬಳು ನಾಯಕಿ ಸಿಕ್ಕಿದಳು! ಬದುಕಬೇಕೆನ್ನುವ ಮನುಷ್ಯರು, ಅವಳ ಮಾತನ್ನು ಕೇಳಿಸಿಕೊಳ್ಳದಿದ್ದರೆ? -ಉಳಿಗಾಲವಿಲ್ಲ.

ಉಳಿಯಲು, ಗ್ರೇತಾ ತನ್ನಂತಹ ಸಹಸ್ರಾರು ಮಕ್ಕಳನ್ನೂ, ಭೂಮಿ ಪ್ರೀತಿಯ ಹಿರಿಯರನ್ನೂ ಸೇರಿಸಿಕೊಂಡು, ‘ಕ್ಲೈಮೇಟ್‍ಗಾಗಿ ಮುಷ್ಕರ’ ಘೋಷ ವಾಕ್ಯದಡಿ ವಿಶ್ವದ ಮುನ್ನೂರಕ್ಕೂ ಹೆಚ್ಚು ನಗರಗಳಲ್ಲಿ ಹುಟ್ಟು ಹಾಕಿರುವ ‘ಸೇವ್ ಅವರ್ ಅರ್ಥ್’ ಆಂದೋಲನಕ್ಕೆ ಪ್ರತಿಯೊಬ್ಬರೂ ಸಾಧ್ಯವಿರುವ ಎಲ್ಲಾ ‘ರಚನಾತ್ಮಕ ಕೆಲಸ’ಗಳ ಮೂಲಕ ಜೊತೆಯಾಗಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು