ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಪರಿಸರ ವೈವಿಧ್ಯಕ್ಕೆ ಮಾರಕ ‘ಏಕಜಾತಿ ಸಸ್ಯಸಂಕುಲ’

Last Updated 18 ಜನವರಿ 2021, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಗದ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸಿಕೊಳ್ಳಲು ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ಗೆ (ಎಂಪಿಎಂ) ನೀಡಿದ್ದ ಅರಣ್ಯಭೂಮಿಯ ಗುತ್ತಿಗೆ ಅವಧಿಯನ್ನು ಮತ್ತೆ 40 ವರ್ಷಗಳ ಅವಧಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ನಂತರ ಅಕೇಶಿಯಾ ನೆಡುತೋಪುಗಳ ವಿರುದ್ಧ ಮಲೆನಾಡಿನ ಎಲ್ಲೆಡೆ ಪ್ರತಿರೋಧ ವ್ಯಕ್ತವಾಗುತ್ತಿದೆ.

ನೈಸರ್ಗಿಕ ಮರಗಿಡಗಳಿದ್ದ 22,500 ಹೆಕ್ಟೇರನ್ನು 1980ರಲ್ಲಿ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಡಲಾಗಿತ್ತು. ನಂತರ ಅಲ್ಲಿನ ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಸರೆಯಾಗಿದ್ದ ಶಿವನೆ, ತಾರೆ, ಶಮಿ, ಸುರಗಿ, ಮುತ್ತುಗ, ಸರ್ವ ಸಾಂಬಾರ, ಮಹಾಗನಿ, ಖದಿರಾ, ಮತ್ತಿ, ಅತ್ತಿ, ನಂಜಿನ ಕಾಯಿಮರ, ಅಳಲೆ, ವಾಟೆ, ಅಂಟುವಾಳ, ಸೀಗೆ, ಸಂಪಿಗೆ, ಬಿದಿರು ಮತ್ತು ಹಲಸು, ಮಾವು, ಪೇರಳೆ, ಸಿಹಿ ಅಮಟೆ, ಕವಳಿ, ಪರಗಿ, ಬಿಳಿ ಮುಳ್ಳು ಹಣ್ಣು, ನುರುಕಲು ಹಣ್ಣು, ಈಚಲು, ಬುಕ್ಕೆ, ನೆಲ್ಲಿ, ಮದ್ದರಸಿ ಸೇರಿದಂತೆ ನೂರಾರು ಸಸ್ಯ ಪ್ರಭೇದಗಳನ್ನು ನಾಶ ಮಾಡಿ ಅಕೇಶಿಯಾ, ನೀಲಗಿರಿ, ಫೈನಸ್‌ ಮತ್ತಿತರ ಏಕ ಜಾತಿಯ ಸಸ್ಯ ಪ್ರಭೇದಗಳನ್ನು ಒಳಗೊಂಡ ನೆಡುತೋಪುಗಳನ್ನು ಬೆಳೆಸಲಾಗಿತ್ತು.

ಮೈಸೂರು ಕಾಗದ ಕಾರ್ಖಾನೆಯು ಈಗ ಎಲ್ಲ ಬಗೆಯ ಕಾಗದಗಳ ಉತ್ಪಾದನೆಗೆ ಸ್ಥಗಿತಗೊಳಿಸಿದೆ. ಕಾರ್ಖಾನೆಗೆ ನೀಡಲಾಗಿದ್ದ ನೆಡುತೋಪುಗಳ ಗುತ್ತಿಗೆ ಅವಧಿಯೂ ಆರು ತಿಂಗಳ ಹಿಂದೆಯೇ ಮುಕ್ತಾಯವಾಗಿದೆ. ‘ಗುತ್ತಿಗೆಯನ್ನು ನವೀಕರಿಸಬಾರದು, ನೆಡುತೋಪುಗಳಲ್ಲಿ ಇರುವ ಪರಿಸರ ನಾಶಕ ಮರಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಬೇಕು’ ಎಂಬ ಕೂಗು ಎಲ್ಲೆಡೆ ಪ್ರತಿಧ್ವನಿಸುತ್ತಿದೆ.

ಸೂಕ್ಷ್ಮ ಪ್ರದೇಶಗಳಲ್ಲೂ ನೆಡುತೋಪುಗಳು: ಪ್ರಸ್ತುತ 22,500 ಹೆಕ್ಟೇರ್ ಒಳಗೊಂಡ ನೆಡುತೋಪುಗಳು ಎಂಪಿಎಂ ಅಧೀನದಲ್ಲಿವೆ. ಗೇರುಸೊಪ್ಪಾ, ಶಂಕರನಾರಾಯಣ (ವಾರಾಹಿ), ಕತಗಾಲ (ಅಘನಾಶಿನಿ), ಕಾಳಿ, ಬೇಡ್ತಿ, ಶರಾವತಿ ಕಣಿವೆಗಳು, ತುಂಗಾ, ಭದ್ರಾ, ಕಾವೇರಿ ಕಣಿವೆಗಳಲ್ಲಿ,ದಕ್ಷಿಣದ ಚಿರಾಪುಂಜಿ ಎಂದೇ ಕರೆಯುವ ಆಗುಂಬೆ ವ್ಯಾಪ್ತಿಯಲ್ಲೂ ನೆಡುತೋಪುಗಳನ್ನು ಬೆಳೆಸಲಾಗಿದೆ. ಕೋಗಾರ, ಅಮ್ಮನಘಟ್ಟ, ನಗರ, ಜೋಯಿಡಾ, ತಿನೇಘಾಟ್, ಬಿಸಗೋಡು, ನಂದೊಳ್ಳಿ, ಕದ್ರಾ, ವಾನಳ್ಳಿ, ಉಂಚಳ್ಳಿ, ಕೊಡಚಾದ್ರಿ, ಬಸರಿಕಟ್ಟೆ, ಕುಮಾರಧಾರಾ, ಕೊಪ್ಪ, ಕಳಸ, ಸಾಲ್ಕೋಡ, ಮಹಿಮೆ ಕ್ಯಾದಗಿ, ಮಸ್ಕಿ, ಹೆಗ್ಗರಣಿ ಮೊದಲಾದ ಇಳಿಜಾರು ಬೆಟ್ಟಗಳ ಸೂಕ್ಷ್ಮ ಪ್ರದೇಶಗಳಲ್ಲೂ ನೆಡುತೋಪುಗಳಿವೆ.

ಜೀವ ವೈವಿಧ್ಯಕ್ಕೆ ಮಾರಕ: ಫೈನಸ್, ಅಕೇಶಿಯಾ ಮರಗಳ ಬೆಳವಣಿಗೆ ಪರಿಣಾಮ ಮಲೆನಾಡಿನ ನೆಲದ ಪರಿಸರ ಬದಲಾಗಿದೆ. ಮೇಲ್ಮಣ್ಣು ಹೊಳೆದಂಡೆಯ ಮರಳಿನಂತೆ ಪರಿವರ್ತನೆಯಾಗಿದೆ. ಎಂಪಿಎಂ ಸ್ಥಗಿತದ ನಂತರ ದಾಂಡೇಲಿ ಕಾಗದ ಕಾರ್ಖಾನೆಯೂ ಈ ಮರಗಳನ್ನು ಖರೀದಿಸಲು ನಿರಾಕರಿಸಿದೆ. ಬೇಡಿಕೆ ಇಲ್ಲದೆ ಒಂದೂವರೆ ಸಾವಿರ ಎಕರೆ ಪ್ರದೇಶದ ನೆಡುತೋಪು ಕಟಾವಾಗದೆ ಉಳಿದಿವೆ. ಜೀವ ವೈವಿಧ್ಯಕ್ಕೆ ಮಾರಕವಾಗಿದೆ. ಹುಲ್ಲುಗಾವಲುಗಳು ನಾಶವಾಗಿವೆ. ಜಲಮೂಲಗಳು ಬತ್ತಿಹೋಗಿವೆ. ವನ್ಯ ಜೀವಿಗಳು ಆಹಾರವಾಗಿ ಬಳಸದ ಕಾರಣ ಸಮೀಪದ ಕೃಷಿ ಭೂಮಿಗೆ ದಾಳಿ ಮಾಡುತ್ತಿವೆ. ಗೂಡು ಕಟ್ಟಲೂ ಯೋಗ್ಯವಲ್ಲದ ಈ ಮರಗಳು ಪಕ್ಷಿ ಸಂಕುಲಕ್ಕೂ ಪ್ರಯೋಜನವಿಲ್ಲ.

ಕಳೆಯಂತೆ ಬೆಳೆಯುವ ವಿದೇಶಿ ಸಸ್ಯ: ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ಕೆಲವು ಭಾಗಗಳಲ್ಲಿ ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂನಲ್ಲಿ ಹೆಚ್ಚಾಗಿ ಕಂಡುಬರುವ ಆಲ್ಸ್‌ಟೊನಿಯಾ ಸಸ್ಯಗಳೂ ವ್ಯಾಪಿಸಿವೆ.

ಈ ಮರಗಳು ಬೀಜಗಳಿಂದ ಪುನರುತ್ಪತ್ತಿ ಆಗುತ್ತವೆ. ಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ಆಕ್ರಮಣಕಾರಿ ಪುನರುತ್ಪತ್ತಿ ತೋರುತ್ತವೆ.ತೇವದ ನೆಲದಲ್ಲಿ ಕಳೆಯಂತೆ ಬೆಳೆಯುತ್ತವೆ. ಇವು ಸ್ಥಳೀಯ ನೈಸರ್ಗಿಕ ಸಸ್ಯಗಳ ಬೆಳವಣಿಗೆಗೆ ಕಂಟಕ. ಕರಾವಳಿಯ ಕಾಂಡ್ಲ ಗಿಡಗಳ ನೆಲೆಯಿಂದ ಆರಂಭಿಸಿ ಸಮುದ್ರಮಟ್ಟದಿಂದ 2,900 ಮೀಟರ್ ಎತ್ತರದ ಪ್ರದೇಶಗಳಲ್ಲೂ ಬೆಳೆಯುವ ದೈತ್ಯ ಕುಲ ಇದು.

ವಿದೇಶಿ ಸಸ್ಯವಾದ ಕಾರಣ ಮೂಲ ನೆಲೆಯಲ್ಲಿರುವ ಕೀಟ, ವನ್ಯಜೀವಿಗಳ ಅವಲಂಬನೆ ಇಲ್ಲಿಲ್ಲ. ಯಾವುದೇ ಕೀಟ, ದನಕರು, ಕಾಡು ಪ್ರಾಣಿಗಳು ಇದರ ಎಲೆಯನ್ನು ತಿನ್ನುವುದಿಲ್ಲ. ದಟ್ಟಹಸಿರಿನ ಕಾರಣ ಕಾಡಿನ ಹುಲ್ಲು, ಬಳ್ಳಿಗಳ ಬೆಳವಣಿಗೆಗೆ ತಡೆಯಾಗಿದೆ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

ಇಳಿಜಾರುಗಳಲ್ಲಿ ಕಟಾವು ಅಪಾಯಕಾರಿ: ಉರುವಲು ಕಟ್ಟಿಗೆ, ಪ್ಲೈವುಡ್, ಕಾಗದ ಕಾರ್ಖಾನೆ ಮತ್ತಿತರ ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಇಲಾಖೆ ನೆಡುತೋಪುಗಳನ್ನು ಬೆಳೆಸುತ್ತದೆ. 10ರಿಂದ 15 ವರ್ಷಗಳ ನಂತರ ಈ ಮರಗಳ ಕಟಾವು ಮಾಡಿ ಹರಾಜು ಹಾಕುತ್ತದೆ.ಗುಡ್ಡಗಳು ಕುಸಿಯುತ್ತಿರುವ ಈ ಸಮಯದಲ್ಲಿ ಮಲೆನಾಡಿನ ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ಬೆಳೆಸಿರುವ ನೆಡುತೋಪುಗಳನ್ನು ಕಟಾವು ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮರಗಳು ಕಟಾವಿಗೆ ಬಂದಿವೆ.

ಕೊಡಗಿನಲ್ಲಿ ನಡೆದ ಭೂಕುಸಿತಗಳಿಗೆ ಅರಣ್ಯ ನಾಶವೇ ಕಾರಣ. ಖಾಲಿ ಇದ್ದ ಭೂಮಿಗೆ ಹಸಿರು ಹೊದಿಕೆ ನಿರ್ಮಿಸಬೇಕು ಎಂದು ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ನೆಡುತೋಪು ಕಟಾವು ಮಾಡಿದರೆ ಹಸಿರು ರಕ್ಷಾ ಕವಚಕ್ಕೆ ಧಕ್ಕೆಯಾಗಿ ಮಣ್ಣಿನ ಮೇಲ್ಪದರ ಕೊಚ್ಚಿಹೋಗುತ್ತದೆ. ಗುಡ್ಡಗಳು ಸಡಿಲಗೊಂಡು ಭೂಕುಸಿತವಾಗುತ್ತದೆ ಎನ್ನುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸುತ್ತಾರೆ.

***

ಭದ್ರಾವತಿ ಎಂಪಿಎಂ ಕಾರ್ಖಾನೆ ಮುಂಭಾಗ (ಸಂಗ್ರಹ ಚಿತ್ರ)
ಭದ್ರಾವತಿ ಎಂಪಿಎಂ ಕಾರ್ಖಾನೆ ಮುಂಭಾಗ (ಸಂಗ್ರಹ ಚಿತ್ರ)

ಅರಣ್ಯ ಭೂಮಿ ಕಬಳಿಕೆಯ ಹುನ್ನಾರ?

ಶಿವಮೊಗ್ಗ: ಎಂಪಿಎಂ ಸ್ಥಗಿತಗೊಂಡ ಐದು ವರ್ಷಗಳ ನಂತರ, ಕಾರ್ಖಾನೆ ಆರಂಭಕ್ಕೆ ಒಲವು ತೋರುತ್ತಿರುವುದಕ್ಕೆ, ಆ ಕಾರ್ಖಾನೆಗೆ ನೀಡಿದ್ದ 22,500 ಹೆಕ್ಟೇರ್‌ ಅರಣ್ಯ ಭೂಮಿಯೇ ಕಾರಣವೇ? ಅಂಥ ಸಂದೇಹ ಈಗ ಬಲವಾಗಿದೆ.

ಕಾರ್ಖಾನೆಗೆ ನೀಡಿದ್ದ ಭೂಮಿಯ ಗುತ್ತಿಗೆ ಅವಧಿಯು ಕಳೆದ ಆಗಸ್ಟ್‌ಗೆ ಮುಗಿದಿದೆ. ‘ಆ ಭೂಮಿ ಅರಣ್ಯ ಇಲಾಖೆಗೆ ವಾಪಸ್‌ ಬರಲಿ, ಆ ಜಾಗದಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಲಿ’ ಎಂದು ಒತ್ತಾಯಿಸಿ ಸ್ಥಳೀಯರಿಂದ ಹೋರಾಟ ಆರಂಭವಾಗಿದೆ. ಆದರೆ, ಕಾರ್ಖಾನೆ ಆರಂಭಿಸುವ ನೆಪದಲ್ಲಿ ಅರಣ್ಯ ಭೂಮಿಯನ್ನು ಕಬಳಿಸುವ ಹುನ್ನಾರವನ್ನು ರಾಜಕಾರಣಿಗಳು ರೂಪಿಸಿದ್ದಾರೆ ಎಂಬ ಶಂಕೆ ದಟ್ಟವಾಗುತ್ತಿದೆ.

ಕಾರ್ಖಾನೆ ಉಳಿಸುವ ನೆಪದಲ್ಲಿ ಅದರ ಖಾಸಗೀಕರಣಕ್ಕೆ ಮುಂದಾಗಿರುವಂತೆ ಕಂಡುಬರುತ್ತಿದೆ. ಹಾಗೆ ಮಾಡಿದರೆ, ಅದು ಮುಂದಿನ ಪೀಳಿಗೆಗೆ ಸರ್ಕಾರ ಮಾಡುತ್ತಿರುವ ಮಹಾ ದ್ರೋಹ ಎಂದೇ ಪರಿಗಣಿಸಬೇಕಾಗುತ್ತದೆ.

1980ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಅಂದಿನ ಸರ್ಕಾರವು ಅರಣ್ಯ ಭೂಮಿಯನ್ನು ಕಾರ್ಖಾನೆಗೆ ನೀಡಿತ್ತು. ಗುತ್ತಿಗೆ ಕರಾರಿನಲ್ಲಿ, ‘ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿದರೆ ಗುತ್ತಿಗೆ ಮುಂದುವರಿಸಬಾರದು. ನೆಡುತೋಪಿನಲ್ಲಿ ಶೇ 12ರಷ್ಟು ಸ್ವಾಭಾವಿಕ ಅರಣ್ಯ ಇರಬೇಕು. ಶ್ರೀಗಂಧ ಸೇರಿದಂತೆ ಕಾಡುಜಾತಿಯ ಗಿಡಮರ ಬೆಳೆಸಬೇಕು...’ ಮುಂತಾದ ಷರತ್ತುಗಳಿದ್ದವು. ಅವೆಲ್ಲವೂ ಉಲ್ಲಂಘನೆಯಾಗಿವೆ.

ಗುತ್ತಿಗೆ ಆಧಾರದಲ್ಲಿ ನೀಡಿದ್ದ ಒಟ್ಟಾರೆ 33,500 ಹೆಕ್ಟೇರ್‌ ಭೂಮಿಯಲ್ಲಿ 13,000 ಹೇಕ್ಟರ್ ವನ್ಯಜೀವಿ ವಿಭಾಗಕ್ಕೆ ಹಿಂದಿರುಗಿಸಿರುವುದಾಗಿ ದಾಖಲೆಗಳು ಹೇಳುತ್ತವೆ. ಆ ಭೂಮಿ ಎಲ್ಲಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೂ ಇಲ್ಲ. ಉಳಿದಿರುವ 22,500 ಹೆಕ್ಟೇರ್‌ನಲ್ಲೂ ಒತ್ತುವರಿಯಾಗಿದೆ. ‘ನೆಡುತೋಪುಗಳಿಂದಾಗಿ ಸ್ವಾಭಾವಿಕ ಅರಣ್ಯ ನಾಶವಾಗಿದೆ. ಜೀವ ವೈವಿಧ್ಯಕ್ಕೆ ಧಕ್ಕೆಯಾಗಿದೆ’ ಎಂದು ಅರಣ್ಯ ಇಲಾಖೆಯು 2012ರಿಂದ ನಿರಂತರವಾಗಿ ಸರ್ಕಾರಕ್ಕೆ ಪತ್ರ ಬರೆದಿದೆ. ವಿಪರ್ಯಾಸವೆಂದರೆ, ಅಂದು ಪತ್ರ ಬರೆದಿದ್ದವರೇ ಇಂದು ‘ಅರಣ್ಯ ಒತ್ತುವರಿ ತಡೆಯಲು ಗುತ್ತಿಗೆ ಮುಂದುವರಿಸಬೇಕು’ ಎಂದು ಶಿಫಾರಸು ಮಾಡಿದ್ದಾರೆ.

ಅತ್ತ ಕಾರ್ಖಾನೆಯ ಪುನಶ್ಚೇತನಕ್ಕೆ ತಾನೇ ಮುಂದಾಗದೆ, ಇತ್ತ ಖಾಸಗಿಯವರಿಗೂ ಗುತ್ತಿಗೆ ನೀಡದೆ ಸರ್ಕಾರವು ಮೀನಮೇಷ ಎಣಿಸುತ್ತಿದ್ದರೂ ಭೂಮಿಯ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಈ ಬೆಳವಣಿಗೆಯೇ ‘ಭೂಮಿ ಕಬಳಿಸುವ ಸಂಚು ನಡೆದಿದೆ’ ಎಂಬ ಗುಮಾನಿಗೆ ಕಾರಣ.

‘ನೆಡುತೋಪು ಭೂಮಿಯಲ್ಲಿ ಮತ್ತೆ ಅಕೇಶಿ‌ಯಾ ಬೆಳೆಯುವುದಿಲ್ಲ. ಸ್ವಾಭಾವಿಕ ಮರಗಿಡ ಬೆಳೆಯುತ್ತೇವೆ’ ಎಂದು ಹೇಳಿಕೆ ನೀಡುವ ರಾಜಕಾರಣಿಗಳೇ, ‘ಅರಣ್ಯ ಭೂಮಿ ಗುತ್ತಿಗೆ ಮುಂದುವರಿಸದಿದ್ದರೆ ಖಾಸಗಿ ಕಂಪನಿಗಳು ಕಾರ್ಖಾನೆ ನಡೆಸಲು ಮುಂದೆಬರುವುದಿಲ್ಲ’ ಎಂದು ವಾದಿಸುತ್ತಾರೆ. ₹4,000 ಕೋಟಿ ಬಂಡವಾಳ ಹೂಡುವ ಖಾಸಗಿ ಕಂಪನಿಗಳವರು ಕಾಡು ಜಾತಿಯ ಮರಗಿಡವನ್ನು ಬೆಳೆಸುವರೆ? ಅದರಿಂದ ಅವರಿಗೇನು ಲಾಭವಾಗುತ್ತೆ? ಬಂಡವಾಳ ಹೂಡುವವನಿಗೆ ಲಾಭದ ಉದ್ದೇಶದ ಹೊರತು ಸಮಾಜದ ಏಳಿಗೆಯ ಉದ್ದೇಶ ಇದ್ದೀತೇ?

ಈ ಕಾರ್ಖಾನೆ ಮೇಲೆ ₹1,000 ಕೋಟಿಗೂ ಹೆಚ್ಚು ಸಾಲವಿದೆ. 4,000 ಇದ್ದ ಕಾರ್ಮಿಕರ ಸಂಖ್ಯೆ 250ಕ್ಕೆ ಇಳಿದಿದೆ. 120 ಕಾರ್ಮಿಕರು ಬೇರೆ ಕಡೆಗೆ ನಿಯೋಜನೆಗೊಂಡಿದ್ದಾರೆ. ಕಾರ್ಖಾನೆ ಆರಂಭಿಸಲು ಕನಿಷ್ಠ ₹4,000 ಕೋಟಿ ಬಂಡವಾಳ ಹೂಡಬೇಕಿದೆ. ಜಾಗತಿಕ ಟೆಂಡರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಕಾಗದಕ್ಕೂ ಈಗ ಮೊದಲಿನ ಬೇಡಿಕೆ ಇಲ್ಲ. ಕಡಿಮೆ ಪ್ರಮಾಣದಲ್ಲಿ ಕಾಗದ ತಯಾರಿಸಲು ಎಂಪಿಎಂ ಅಧೀನದಲ್ಲೇ ಇರುವ ಸಕ್ಕರೆ ಕಾರ್ಖಾನೆಯ ಕಬ್ಬಿನ ಸಿಪ್ಪೆಯಿಂದ ಬರುವ ಬಗಾಸೆ, ಮಲೆನಾಡಿನಲ್ಲಿ ದೊರೆಯುವ ಬಿದಿರು ಸಾಕು. ತಮಿಳುನಾಡು, ದಾಂಡೇಲಿಯ ಕಾರ್ಖಾನೆಗಳು ಇದೇ ಮಾದರಿಯನ್ನು ಅನುಸರಿಸುತ್ತಿವೆ.

ಮಲೆನಾಡಿನ ಜನರ ವಿರೋಧದ ನಡುವೆಯೂ ಸಚಿವ ಸಂಪುಟದಲ್ಲಿ ಚರ್ಚಿಸದೆ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ, ಮಲೆನಾಡು ಭಾಗದ ಜನಪ್ರತಿನಿಧಿಗಳು, ಜನರ ಜನಾಭಿಪ್ರಾಯ ಪಡೆಯದೆ ಚಾಲ್ತಿಯಲ್ಲಿ ಇಲ್ಲದ ಕಾರ್ಖಾನೆಗೆ 40 ವರ್ಷದ ಅವಧಿಗೆ ಭೂಮಿಯನ್ನು ನೀಡಿರುವುದು ಸರಿಯಲ್ಲ.

‘ನಮ್ಮೂರಿಗೆ ಅಕೇಶಿಯಾ ಬೇಡ’ ಎಂಬ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಲೆನಾಡಿನ ಅರಣ್ಯ ಭೂಮಿ ಖಾಸಗಿಯವರ ಪಾಲಾಗುವುದನ್ನು ತಡೆಯಲು ಪ್ರಾಣವನ್ನು ನೀಡಲೂ ಸಿದ್ಧ. ಇರುವ ಅರಣ್ಯ ಭೂಮಿ ಖಾಸಗೀಕರಣ ಮಾಡಿ ಮಂಕಿಪಾರ್ಕ್‌, ಅಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶದ ಹೆಸರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಂಡವಾಳ ಹೆಚ್ಚಿಸಿಕೊಳ್ಳುವ ತಂತ್ರಕ್ಕೆ ಅವಕಾಶ ನೀಡೆವು. ಜೀವ ವೈವಿಧ್ಯದಿಂದ ಕೂಡಿದ ಪಶ್ಚಿಮಘಟ್ಟದ ಮಲೆನಾಡನ್ನು ಬಯಲುಸೀಮೆ ಆಗಲು ಬಿಡೆವು.

-ಕೆ.ಪಿ.ಶ್ರೀಪಾಲ

***

ಪ್ರತಿಕ್ರಿಯೆಗಳು......

ಆತಂಕ ಅನಗತ್ಯ

ಎಂಪಿಎಂ ಅರಣ್ಯಭೂಮಿ ಒಪ್ಪಂದ ಮುಂದುವರಿಸಿದ್ದಾರೆ ಅಷ್ಟೇ. ಆ ಭೂಮಿಯಲ್ಲಿ ಯಾವ ಮರಗಳನ್ನು ಬೆಳೆಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಸರ್ಕಾರ, ಅರಣ್ಯ ಇಲಾಖೆ ಮತ್ತು ಎಂಪಿಎಂ ಆಡಳಿತ ಮಂಡಳಿ ಜತೆ ಚರ್ಚಿಸಿ ಮಲೆನಾಡಿನ ಪರಿಸರಕ್ಕೆ ಮತ್ತು ಕಾರ್ಖಾನೆಗೆ ಸೂಕ್ತವಾದ ಯೋಜನೆ ರೂಪಿಸಲಾಗುವುದು. ಬಿದಿರು, ಹೆಬ್ಬೇವು ಮತ್ತಿತರ ಪರಿಸರ ಪೂರಕ ಮರಗಳಿಂದಲೂ ಕಾಗದಕ್ಕೆ ಅಗತ್ಯ ತಿರುಳು ದೊರೆಯಲಿದೆ. ಜನರು ಆತಂಕಪಡುವ ಅಗತ್ಯವಿಲ್ಲ

–ಆಗರ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ.

***

ವೋಟು ಕೇಂದ್ರಿತ ರಾಜಕಾರಣ

‘ಮಲೆನಾಡಿನ ಕಾಡನ್ನು ಇಲ್ಲಿನ ಸ್ಥಳೀಯರು ಉಳಿಸಿದ್ದಾರೆ’ ಎಂದು ಬೊಬ್ಬೆ ಇಡುವ ರಾಜಕಾರಣಿಗಳ ಹಸಿ ಸುಳ್ಳು ಎಲ್ಲರಿಗೂ ಗೊತ್ತಿದೆ. ಮಿಣಿಸುತ್ತಿನ ಮರಗಳ ಬುಡಕ್ಕೆ ಬೆಂಕಿಹಚ್ಚಿ ಸುಟ್ಟು, ಶುಂಠಿ ಬೆಳೆದ ರೈತನೀಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ವೋಟು ಕೇಂದ್ರಿತ ರಾಜಕಾರಣವು ಸಮಷ್ಟಿಯ ಬದುಕು ಕಟ್ಟುವಲ್ಲಿ ವಿಫಲವಾಗಿದೆ. ‘ಮಲೆನಾಡಿನ ವಾತಾವರಣ ಸುಸ್ಥಿತಿಯಲ್ಲಿ ಇರಬೇಕು ಎಂದರೆ ಇಲ್ಲಿ ಕನಿಷ್ಠ ಶೇ 35ರಷ್ಟು ಗುಣಮಟ್ಟದ ವೈವಿಧ್ಯಮಯ ಅರಣ್ಯ ಪ್ರದೇಶವಿರಬೇಕು. ಗುಡ್ಡಗಾಡು ಪ್ರದೇಶದಲ್ಲಿ ಶೇ 66ರಷ್ಟು ಅರಣ್ಯವಿರಬೇಕು’ ಎಂದು ರಾಷ್ಟ್ರೀಯ ಅರಣ್ಯ ನೀತಿ–1988 ಹೇಳಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 76 ಎಕರೆ ಅರಣ್ಯ ಒತ್ತುವರಿಯಾಗಿದೆ. ಈಗ ನೆಡುತೋಪು ಪ್ರದೇಶವನ್ನಾದರೂ ಉಳಿಸಿಕೊಂಡು ಸ್ವಾಭಾವಿಕ ಅರಣ್ಯ ಬೆಳೆಸುವ ತುರ್ತಿದೆ

–ಅಖಿಲೇಶ್ ಚಿಪ್ಪಳಿ, ಪರಿಸರ ಹೋರಾಟಗಾರ.

***

ಸೌಂದರ್ಯಕ್ಕೆ ಕಪ್ಪುಚುಕ್ಕೆ

ಅಕೇಶಿಯಾ ಮಲೆನಾಡಿನ ಪಾರಂಪರಿಕ ಸಸ್ಯ ಪ್ರಭೇದ ಅಲ್ಲ. ಅದು ನೈಸರ್ಗಿಕ ಗುಡ್ಡವನ್ನು ಹಸಿರು ಮಾಡುತ್ತದೆ. ಆದರೆ, ನೆಲವನ್ನು ಬರಡು ಮಾಡುತ್ತದೆ. ಮಲೆನಾಡಿನಲ್ಲಿ ಬೆಳೆಗಾರರಿಗೆ ಮಂಗ, ಕಾಡುಕೋಣ ಮೊದಲಾದ ಕಾಡುಪ್ರಾಣಿಗಳ ಹಾವಳಿ ತಂದೊಡ್ಡಿದೆ. ಅಕೇಶಿಯಾ ಪ್ಲಾಸ್ಟಿಕ್‌ ಕಾಡೇ ಹೊರತು ನೈಸರ್ಗಿಕ ಅರಣ್ಯವಾಗಲು ಸಾಧ್ಯ ಇಲ್ಲ. ಅದು ಮಲೆನಾಡಿನ ಸೌಂದರ್ಯಕ್ಕೆ ಕಪ್ಪುಚುಕ್ಕೆ

-ಸುಧೀರ್‌ಕುಮಾರ್‌ ಮುರೊಳ್ಳಿ, ವಕೀಲರು, ಕೊಪ್ಪ

***

ಅಕೇಶಿಯಾ ಪರಿಸರಕ್ಕೆ ಮಾರಕ

ಚಿಕ್ಕಮಗಳೂರು ಜಿಲ್ಲೆ ನಿತ್ಯ ಹರಿದ್ವರ್ಣ ಕಾಡುಗಳಿಗೆ ಹೆಸರಾಗಿರುವ ಪ್ರದೇಶ. ಇಲ್ಲಿ ಇರುವುದೆಲ್ಲ ಫಲವತ್ತಾದ ಜಾಗ. ಐದು ದಶಕಗಳಿಂದ ಇಲ್ಲಿನ ಕಾಡುಗಳ ಮೇಲೆ ದೌರ್ಜನ್ಯ ನಡೆದಿದೆ. ಅಕೇಶಿಯಾ, ನೀಲಗಿರಿ ಮೊದಲಾದವನ್ನು ಬೆಳೆಸಿ ಸಮಸ್ಯೆ ಸೃಷ್ಟಿಸಲಾಗಿದೆ. ಅಕೇಶಿಯಾ, ಮ್ಯಾಂಜಿಯಂ, ನೀಲಗಿರಿಯಂಥ ಸಸಿಗಳನ್ನು ನೆಡಬಾರದು. ನೆಟ್ಟ ಮರಗಳನ್ನು ಹಂತಹಂತವಾಗಿ ತೆರವುಗೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಮಾವು, ನೇರಳೆ, ಆಲ ಮೊದಲಾದ ಸಸ್ಯಗಳನ್ನು ನೆಟ್ಟು ಪೋಷಿಸಬೇಕು. 60ರ ದಶಕದಲ್ಲಿ ಮುತ್ತೋಡಿ, ಕುದುರೆಮುಖ, ದಾಂಡೇಲಿ ಮುಂತಾದ ಭಾಗದ ಅರಣಗಳಲ್ಲಿ ಸಾಗುವಾನಿ ಬೆಳೆಸಿದ್ದಾರೆ. ಸಾಗುವಾನಿ ಮರದ ಬುಡದಲ್ಲೂ ಏನೂ ಬೆಳೆಯಲ್ಲ. ಇಂಥ ಸಮಸ್ಯೆಗಳ ಸೃಷ್ಟಿಗೆ ‘ಪರಿಣತರು’ ಎನ್ನಿಸಿಕೊಂಡವರೇ ಕಾರಣಕರ್ತರು. ಏಕಜಾತಿಯ ಗಿಡಗಳನ್ನು ಬೆಳೆಸಿದರೆ ಅದು ಕಾಡು ಆಗುವುದಿಲ್ಲ. ಅಕೇಶಿಯಾ, ನೀಲಗಿರಿ ಬೆಳೆಸಿ ಪರಿಸರ ಉಳಿಸಲು ಸಾಧ್ಯವಿಲ್ಲ.

-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ, ಚಿಕ್ಕಮಗಳೂರು.

***

ನಿತ್ಯ ಹರಿದ್ವರ್ಣ ಕಾಡಿನ ತೊನ್ನು

ಅಕೇಶಿಯಾ ಮರಳುಗಾಡಿನಲ್ಲಿ ಬೆಳೆಯುವ ಸಸ್ಯ. ಈ ವೃಕ್ಷದ ಎಲೆಗಳು ಉದುರಿ ನೆಲದಲ್ಲಿ ಚಾಪೆ ಹಾಸಿದಂತೆ ಹರಡಿಕೊಳ್ಳುತ್ತವೆ. ಅವು ಬಹುಕಾಲದವರೆಗೆ ಕರಗುವುದಿಲ್ಲ, ಗೊಬ್ಬರವೂ ಆಗಲ್ಲ. ಮಳೆ ನೀರು ಇಂಗಲು ಬಿಡುವುದಿಲ್ಲ, ಅಂತರ್ಜಲ ವೃದ್ಧಿಗೆ ತೊಂದರೆ ಮಾಡುತ್ತದೆ. ಅಲ್ಲದೇ, ಈ ವೃಕ್ಷಕ್ಕೆ ಯಾವುದೇ ಬಳ್ಳಿ ಹಬ್ಬುವುದಿಲ್ಲ. ಹಕ್ಕಿಗಳೂ ಅದರ ಮೇಲೆ ಕೂರುವುದಿಲ್ಲ. ಹೂವನ್ನು ಜೇನುಹುಳುಗಳು ಮುಟ್ಟವುದಿಲ್ಲ. ಈ ವೃಕ್ಷದಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಅಂಶಗಳು ಜಾಸ್ತಿ ಇವೆ. ಅದು ನಿತ್ಯ ಹರಿದ್ವರ್ಣ ಕಾಡಿಗೆ ತೊನ್ನು ಇದ್ದಂತೆ.

ಕಾಡಿನಲ್ಲಿ ರಸ್ತೆ, ಮನೆ ನಿರ್ಮಿಸಿದರೆ ಪರಿಸರಕ್ಕೆ ಉಪಯೋಗ ಆಗುವುದಿಲ್ಲ. ಹಾಗೆಯೇ, ಅಕೇಶಿಯಾ ಗಿಡ ಬೆಳೆಯುವುದರಿಂದಲೂ ಯಾವುದೇ ಪ್ರಯೋಜನ ಇಲ್ಲ.

-ಕಲ್ಕುಳಿ ವಿಠಲ ಹೆಗ್ಡೆ, ಹೋರಾಟಗಾರ, ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT