ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಜಲಪಾತ

PV Web Exclusive-ಪ್ರಕೃತಿ ಮಡಿಲು| ಜಲಪಾತಗಳ ನೀರು ಕುಡಿಯದಿರಿ... ಅದು ಅಶುದ್ಧ!

ಆರ್. ಮಂಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಏಳು ನದಿಗಳ ಹರಿವಿನಲ್ಲಿ ಒಂದೆರಡು ಸ್ಥಳಗಳನ್ನು ಬಿಟ್ಟರೆ ಇನ್ಯಾವ ನದಿ ಅಥವಾ ಅವುಗಳ ಹರಿವಿನಲ್ಲಿ ಸೃಷ್ಟಿಯಾಗುವ ಜಲಪಾತಗಳ ನೀರು ಕುಡಿಯಲು ಯೋಗ್ಯವಲ್ಲ.... ಹೌದಾ, 'ನಮಗೆ ಗೊತ್ತಿತ್ತು, ಅದಕ್ಕೇ ನಾವಂತೂ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ತೆಗೆದುಕೊಂಡು ಹೋಗೋದು...' ಸರಿ, ಆನಂತರ ಆ ಪ್ಲಾಸ್ಟಿಕ್ ಬಾಟಲ್ ಎಲ್ಲಿ ಹೋಗುತ್ತೆ...?

ಅಬ್ಬಾ... ಎಂತಹ ಸೊಬಗು, ಎಂತಹ ಮೈಮಾಟ... ಧರೆಗಿಳಿದ ಅಪ್ಸರೆ... ಮನಮೋಹಕ ನೋಟ.. ಉಹೂಂ... ಇನ್ನಷ್ಟು ಸಮಯ ಇಲ್ಲೇ ಇದರ ಒಡಲಲ್ಲಿ ಆಡುತ್ತಲೇ ಇರುತ್ತೇನೆ. ಇಲ್ಲಿಂದ ಎದ್ದುಬರಲು ಸದ್ಯಕ್ಕೆ ಸಾಧ್ಯವೇ ಇಲ್ಲ... ಜಲಪಾತಕ್ಕಿಳಿದರೆ ಇಂತಹದ್ದೇ ಭಾವಲಹರಿಯಲ್ಲಿ ಮಿಂದುಹೋಗುತ್ತದೆ ಮೈ-ಮನ.

ನಿಜ, ಮಳೆಗಾಲದಲ್ಲಿ ಜಲಪಾತಗಳ ಸೊಬಗಿಗೆ ಸೋಲದವರಿಲ್ಲ. ಅದರತ್ತ ನೆಟ್ಟ ನೋಟ ಸರಿಸಲು ಸಾಧ್ಯವಿಲ್ಲ. ಜಲಪಾತಗಳಿಗೆ ಮೈಯೊಡ್ಡಿ ನಿಂತುಕೊಂಡರೆ ಸಮಯ ಜಾರುವುದೇ ಅರಿವಾಗುವುದಿಲ್ಲ. ಆದರೆ, ಜಲಪಾತವೆಂಬ ಜಲಪಾತದ ಕೊನೆಯಭಾಗ ಅಥವಾ ಮೂಲೆಗಳಲ್ಲಿ ಒಮ್ಮೆ ಕಣ್ಣಾಡಿಸಿದರೆ ಪಾಪಪ್ರಜ್ಞೆ ಕಾಡದಿರದು. ಏಕೆಂದರೆ, ಅಲ್ಲಿರುತ್ತದೆ ಮನ ಕಲಕುವ ದೃಶ್ಯ. ಸಾಕು ಜಲಪಾತದ ಹೊರಗೆ ನಡೆದುಬಿಡೋಣ ಎಂಬ ವಾಕರಿಕೆಯೂ ಆವರಿಸುತ್ತದೆ. ಅದೇ ತ್ಯಾಜ್ಯ.

ಹೌದು, ರಾಜ್ಯದ ಬಹಳಷ್ಟು ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಷ್ಟೇ ಉತ್ಸಾಹದಲ್ಲಿ ಈ ತ್ಯಾಜ್ಯವೂ 'ಅಣಿಯಾಗಿರುತ್ತದೆ'. ಅಸಹ್ಯ ಹುಟ್ಟಿಸುವಷ್ಟರ ಮಟ್ಟಿಗೆ ಜಲಪಾತಗಳ ಮಡಿಲಲ್ಲೇ ತ್ಯಾಜ್ಯ ವಾಸನೆಭರಿತವಾಗಿ ತನ್ನ ಸ್ಥಳ ಕಂಡುಕೊಂಡಿರುತ್ತದೆ. ಇದನ್ನು ಜಲಪಾತಗಳಿಗೆ ಹೋಗಿರುವವರಲ್ಲೆಲ್ಲ ಒಂದಲ್ಲ ಒಂದು ಮೂಲೆಯಲ್ಲಿ ಕಂಡೇ ಇರುತ್ತಾರೆ.
ಆದರೆ, ಅಸಹ್ಯಪಟ್ಟುಕೊಂಡು, 'ಛೇ ಛೇ.. ಗವರ್ನ್ಮೆಂಟ್, ಡಿಪಾರ್ಟ್ ಮೆಂಟ್ ನವರು ಕ್ಲೀನ್ ಮಾಡಿಲ್ಲ' ಎಂದು ಮೂದಲಿಸಿ, ಮೂಗಿನ ನೇರಕ್ಕೆ ಮಾತನಾಡಿಕೊಂಡು ಬಂದಿರುತ್ತಾರೆ. ಅಷ್ಟೇ ಅಲ್ಲಿಗೆ ಮುಗಿಯಿತು. ಅಲ್ಲೇ ಅವರು ಕುಡಿದ ಪೇಯದ ಬಾಟಲಿಗಳನ್ನು, ತಿನಿಸು ತಂದ ಪ್ಲಾಸ್ಟಿಕ್ ಕವರ್, ಪೇಪರ್ ಎಲ್ಲವನ್ನೂ ಅವರೇ ಜಲಪಾತಗಳಿಗೆ ಅಥವಾ ಪಕ್ಕಕ್ಕೆ ಹಾಕಿ ಬಂದಿರುತ್ತಾರೆ ಅಥವಾ ಹಾಕಿ ಹೋಗುವವರನ್ನು ನೋಡಿಯೇ ಇರುತ್ತಾರೆ. ಹೀಗೆಲ್ಲ ಹೇಳಿದರೆ ನಾವು ಒಪ್ಪುವುದಿಲ್ಲ. ಏಕೆಂದರೆ ನಾವು ತಪ್ಪು ಮಾಡುವುದಿಲ್ಲ ಎಂದೇ ಮಾಡದಿರುವವರ, ಮಾಡಿರುವವರ ವಾದ. ಆದರೆ, ಒಂದು ಬಾರಿ ಸ್ಮರಿಸಿಕೊಳ್ಳಿ, ನೀವು ಹೋಗಿರುವ ಎಷ್ಟು ಜಲಪಾತಗಳಲ್ಲಿ ನೀರು ಕುಡಿದಿದ್ದೀರಿ ಎಂದು?


ಬೆಳಗಾವಿಯ ಜನಾಕರ್ಷಣೆ ಕೇಂದ್ರವಾದ ಗೊಡಚಿನ ಮಲ್ಕಿ ಜಲಪಾತದ ಸೊಬಗು ಸವಿಯುತ್ತಿರುವ ಬಾಲಕರು   ಚಿತ್ರ: ಕೆರೆ ಮಂಜುನಾಥ್

ಒಂದೆರಡು ಸ್ಥಳಗಳು ಮಾತ್ರ ಸುರಕ್ಷಿತ!

ಜಲಪಾತಗಳಲ್ಲಿ ಅಷ್ಟೊಂದು ಸಮಯ ಆಟವಾಡಿ, ಕುಣಿದಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು, ಕ್ಯಾಮೆರಾಗೆ ವಿಭಿನ್ನ ಪೋಸು ನೀಡಿ... ಕಡೆಗೆ ಬಾಯಿಗೆ ಬಂದ ನೀರನ್ನು ಉಗಿದು, ಬ್ಯಾಗ್ ನಲ್ಲಿ ತಂದಿರುವ ಪ್ಲಾಸ್ಟಿಕ್ ಬಾಟಲಿ ನೀರನ್ನೇ ನಾವು ಕುಡಿಯೋದು ಅಲ್ಲವೇ? ನಿಜ, ಅಷ್ಟರ ಮಟ್ಟಿಗೆ ನಮ್ಮ ಜಲಪಾತಗಳು ಅಶುದ್ಧ. ನಿಮಗೆ ಗೊತ್ತಿರಲಿ, ರಾಜ್ಯದ ಏಳು ನದಿಗಳ ಹರಿವಿನಲ್ಲಿ ಒಂದೆರಡು ಸ್ಥಳಗಳನ್ನು ಬಿಟ್ಟರೆ ಇನ್ಯಾವ ನದಿ ಅಥವಾ ಅವುಗಳ ಹರಿವಿನಲ್ಲಿ ಸೃಷ್ಟಿಯಾಗುವ ಜಲಪಾತಗಳ ನೀರು ಕುಡಿಯಲು ಯೋಗ್ಯವಲ್ಲ. ಹೀಗೆಂದು ಹೇಳಿದರೆ ಪ್ರಕೃತಿ ಮಾತೆಗೆ ಮಾಡುವ ಅವಮಾನವೇ ಸರಿ. ಆದರೆ, ವಾಸ್ತವ ಸ್ಥಿತಿಯನ್ನು ಮರೆಮಾಚಲು ಸಾಧ್ಯವಿಲ್ಲ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ವರದಿ ಪ್ರಕಾರ, ರಾಜ್ಯದ ಕುಮಾರಧಾರ ಹಾಗೂ ನೇತ್ರಾವತಿ ನದಿಯ ಹರಿವಿನಲ್ಲಿರುವ ನೀರು ಮಾತ್ರ ಕುಡಿಯಲು ಯೋಗ್ಯ. ಉಳಿದೆಲ್ಲ ನದಿಗಳ ಹರಿವಿನಲ್ಲಿ ಎಲ್ಲೂ ನೀರನ್ನು ಸಂಸ್ಕರಿಸದೆ ಮಾನವ ಕುಡಿಯಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಕಲ್ಮಶ ಸೇರಿಕೊಂಡಿದೆ. ಎ-ಗ್ರೇಡ್ ನಲ್ಲಿರುವ ನದಿಗಳೆಂದರೆ, ಪಶ್ಚಿಮಘಟ್ಟದ ಕುಮಾರಾಧಾರ ಹಾಗೂ ನೇತ್ರಾವತಿ ಮಾತ್ರ. ಈ ನದಿಗಳ ನೀರು ಕಳೆದ ಜುಲೈವರೆಗೂ ಎ ಗ್ರೇಡ್ ಅನ್ನೇ ಉಳಿಸಿಕೊಂಡಿವೆ.
ರಾಜ್ಯದ ನದಿಗಳ ನೀರಿನ ಮಟ್ಟವನ್ನು ಐದು ಗ್ರೇಡ್ ಗಳಲ್ಲಿ ಮಾಪನ ಮಾಡಲಾಗಿದೆ. ಎ ಎಂದರೆ- ಸಾಂಪ್ರದಾಯಕ ಸಂಸ್ಕರಣೆ ಇಲ್ಲದೆಯೂ ನೀರು ಕುಡಿಯಬಹುದು. ಬಿ ಎಂದರೆ- ಹೊರಪ್ರದೇಶದಲ್ಲಿ ಸ್ನಾನಕ್ಕೆ ಮಾತ್ರ ಯೋಗ್ಯ. ಸಿ ಎಂದರೆ- ಕುಡಿಯುವ ನೀರಿನ ಮೂಲವಾದರೂ ಸಂಸ್ಕರಿಸದೆ ಕುಡಿಯುವಂತಿಲ್ಲ. ಡಿ ಎಂದರೆ- ವನ್ಯಜೀವಿ, ಮೀನುಗಾರಿಕೆ ಪ್ರದೇಶದಲ್ಲಿರುವ ನದಿಹರಿವು. ಇ ಎಂದರೆ- ನೀರಾವರಿ, ಕೈಗಾರಿಕೆ ಹಾಗೂ ನಿಯಂತ್ರಿತ ತ್ಯಾಜ್ಯವನ್ನು ಒಳಗೊಂಡಿರುವ ನದಿ ಹರಿವು.

ಯಾವ ನದಿ ನೀರು ಯಾವ ಗ್ರೇಡ್?

ಅರ್ಕಾವತಿ ಎಂದ ಕೂಡಲೇ ಬೆಂಗಳೂರಿನಲ್ಲಿ ವಾಸಿಸುವವರಿಗೆ ಮಾತ್ರವಲ್ಲ, ಹೊರಗಿನವರಿಗೆ ಅದೇ ಆ ಲೇಔಟ್ ಗೊತ್ತು ಎಂದೇ ಹೇಳುತ್ತಾರೆ. ಆದರೆ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯಿಂದಲೇ ಬಡಾವಣೆಗೆ ಆ ಹೆಸರು ಬಂದಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ರಾಜಧಾನಿಯಲ್ಲೂ ಹರಿಯುವ ಈ ನದಿ, ಹೆಸರುಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ನಾಗರಿಕರಿಗೆ ಕುಡಿಯುವ ನೀರನ್ನೂ ಈಗಲೂ ಕೊಡುತ್ತದೆ. ಈ ಅರ್ಕಾವತಿ ನದಿ ನೀರಿನ ಗ್ರೇಡ್-ಡಿ.
ಲಕ್ಷ್ಮಣ ತೀರ್ಥ (ಹುಣಸವಾಡಿಯಿಂದ ಕಟ್ಟೆಮಾಳವಾಡಿವರೆಗಿನ ಹರಿವು); ಮಲಪ್ರಭಾ (ಖಾನಾಪುರದಿಂದ ರಾಮದುರ್ಗ); ತುಂಗಭದ್ರಾ (ಹರಿಹರದಿಂದ ಹರ್ಲಹಳ್ಳಿ  ಸೇತುವೆ); ಭದ್ರಾ (ಹೊಳೆಹೊನ್ನೂರಿನಿಂದ ಭದ್ರಾವತಿ); ಕಾವೇರಿ (ರಂಗನತಿಟ್ಟಿನಿಂದ ಸತ್ಯಗಾಳ ಸೇತುವೆ); ಕಬಿನಿ (ನಂಜನಗೂಡಿನಿಂದ ಹೆಜ್ಜಾಜೆ); ಕಾಗಿನ (ಶಹದಾಬಾದ್ ನಿಂದ ಹೊಂಗುಂಟ)- ಈ ನದಿಗಳ ಆವರಣದಲ್ಲಿರುವ ಪ್ರದೇಶಗಳ ನಡುವೆ ಒಂದೆರಡು ಸ್ಥಳಗಳಲ್ಲಿ ನೀರಿನ ಮಟ್ಟ ಪರೀಕ್ಷಿಸಿದಾಗ ಸಿ ಗ್ರೇಡ್ ಇದೆ.

ಅದೇರೀತಿಯ ಪರೀಕ್ಷೆಯಲ್ಲಿ  ಕಾಳಿ ನದಿಯ ಹರಿವಿನಲ್ಲಿ (ಹಸನ್ ಮಾಡ್ ದಿಂದ ಬೊಮ್ಮನಹಳ್ಳಿ ಜಲಾಶಯ) ಬಿ ಗ್ರೇಡ್; ಕೃಷ್ಣಾ ನದಿಯ ಹರಿವಿನಲ್ಲಿ (ಯದುರ್ವಾಡಿಯಿಂದ ತಿಂತಿನಿ ಸೇತುವೆ) ಸಿ ಗ್ರೇಡ್ ನೀರಿದೆ. ಶಿಂಷಾ ನದಿಯ ಹರಿವು (ಯಡಿಯೂರಿನಿಂದ ಹಲಗೂರು) ಡಿ ಗ್ರೇಡ್ ನೀರು ಹೊಂದಿದೆ. ಕೃಷ್ಣಾ ಹರಿವು (ಅರಸಂಗಿ ಬ್ಯಾರೇಜ್); ಭೀಮಾ ನದಿಯ ಹರಿವಿನ (ಘಾನಗಾಪುರದಿಂದ ಯಾದಗಿರಿ); ತುಂಗಾ ನದಿಯ (ಶಿವಮೊಗ್ಗದಿಂದ ಕೂಡ್ಲಿ); ಯಗಚಿ ನದಿಯ (ಯಗಚಿಯಿಂದ ಹಾಸನದವರೆಗೆ) ನೀರಿನ ಹಿರವು ಸಿ-ಗ್ರೇಡ್ ಆಗಿದೆ.ಕುಮಾರಾಧಾರ ನದಿ (ಉಪ್ಪಿನಂಗಡಿ) ಹಾಗೂ ನೇತ್ರಾವತಿ ನದಿಯ ಹರಿವು (ಉಪ್ಪಿನಂಗಡಿಯಿಂದ ಮಂಗಳೂರು) ಏಪ್ರಿಲ್ ನಲ್ಲಿ ಬಿ-ಗ್ರೇಡ್ ಹೊಂದಿದ್ದರೂ, ನಂತರದ ತಿಂಗಳುಗಳಲ್ಲಿ ಎ-ಗ್ರೇಡ್ ನೀರಿನ ಹರಿವನ್ನೇ ಹೊಂದಿವೆ.

ಸಾಕಷ್ಟು ವೈಜ್ಞಾನಿಕ ತಂತ್ರಗಳನ್ನು, ಸೂತ್ರಗಳನ್ನು ಅಳವಡಿಸಿಕೊಂಡು ಈ ಗ್ರೇಡ್ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ನೀರು ನೋಡಿದಾಗ ಮನುಷ್ಯ ನೋಟಕ್ಕೇ ಅದರ ಶುದ್ಧತೆ, ಅಶುದ್ಧತೆ ಗೊತ್ತಾಗುತ್ತದೆ. ನೀರಿನ ಅಶುದ್ಧತೆಯೊಂದಿಗೆ ಮಾನವನೇ ಎಸೆದ ತ್ಯಾಜ್ಯವೂ ಸೇರಿಕೊಂಡರೆ ಏನಾಗಬೇಡ ಹೇಳಿ? ಇದು ಹೀಗೆ ಮುಂದುವರಿದರೆ ಜಲಪಾತಗಳಲ್ಲಿ ನೀರನ್ನು ಮುಟ್ಟಲೂ ಸಾಧ್ಯವಾಗದಿರಬಹುದು. ಕೇವಲ ಸೌಂದರ್ಯವನ್ನು ದೂರದಿಂದ ನೋಡಿ, ಅಬ್ಬಾ, ಎಂಥಾ ನೀರು... ಎಂಥಾ ಸೊಬಗು... ಎಂದ್ಹೇಳಿ ಅಲ್ಲಿಂದ ದೂರಸರಿಯಬೇಕಾಗುತ್ತದೆ. ಸದ್ಯದ ಮಟ್ಟಿಗೆ ಮುಟ್ಟಲಂತೂ ಯೋಗ್ಯವಿರುವ ಜಲಪಾತಗಳನ್ನಾದರೂ  ಶುದ್ಧವಾಗಿ ಇರಿಸಿಕೊಳ್ಳಬೇಕು. ಕೆಲವು ಜಲಪಾತಗಳಲ್ಲಿ ನೀರು ಮುಟ್ಟಲೂ ಸಾಧ್ಯವಾಗದಷ್ಟು ಕಲ್ಮಶ ತುಂಬಿಕೊಂಡಿವೆ. ಅದು ಬೇರೆ ಮಾತು. ಆದರೆ, ಜಲಪಾತದ ಸೌಂದರ್ಯ ಸವಿಯುವ ಜೊತೆಗೆ ಅವುಗಳ ರಕ್ಷಣೆ, ಸ್ವಚ್ಛತೆಯೂ ನಮ್ಮ ಜವಾಬ್ದಾರಿಯಾಗಬೇಕು ಎಂಬುದೇ ಕಳಕಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು