ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತುಂಗಭದ್ರೆ ದಡದಲ್ಲಿ 20–25 ಟ್ರ್ಯಾಕ್ಟರ್‌ನಷ್ಟು ಬಟ್ಟೆ ರಾಶಿ

ನದಿತೀರ ಸ್ವಚ್ಛಗೊಳಿಸುವ ‘ನನ್ನ ಊರು ನನ್ನ ಹೊಣೆ’ ವಾಟ್ಸ್‌ಆ್ಯಪ್‌ ಗ್ರೂಪ್‌
Last Updated 10 ಫೆಬ್ರುವರಿ 2021, 10:55 IST
ಅಕ್ಷರ ಗಾತ್ರ

ದೇಶದ ಪವಿತ್ರ ನದಿಯೆನಿಸಿದ ಗಂಗೆಯ ಸ್ವಚ್ಛತೆಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಖರ್ಚು ಮಾಡಿರುವ ಹಣ ಹಾಗೂ ಈಗಲೂ ಜಾರಿಯಲ್ಲಿರುವ ಕಾಮಗಾರಿಯ ಖರ್ಚು–ವೆಚ್ಚ ಗಮನಿಸಿದರೆ ದೇಶದ ನದಿಗಳ ಮಾಲಿನ್ಯ ಯಾವ ಪ್ರಮಾಣದಲ್ಲಿದೆ ಎಂಬ ಅರಿವಾಗುತ್ತದೆ.ದಾವಣಗೆರೆ ಜಿಲ್ಲೆಯ ಜೀವನಾಡಿ ತುಂಗಭದ್ರೆ ಗಂಗೆಯಷ್ಟು ಮಲಿನವಾಗಿಲ್ಲವಾದರೂ, ಮಾಲಿನ್ಯ ಪ್ರಮಾಣ ವರ್ಷವರ್ಷಕ್ಕೂ ಹೆಚ್ಚಳವಾಗುತ್ತಿದೆ.

ಹರಿಹರ ತಾಲ್ಲೂಕಿನಲ್ಲಿ ಅಂದಾಜು 22 ಕಿ.ಮೀ.ಗಳಷ್ಟು ಉದ್ದವಾಗಿ ಹರಿಯುವ ಈ ನದಿ ಹರಿಹರ ನಗರದಲ್ಲೇ ಸುಮಾರು 8 ಕಿ.ಮೀ.ಗಳಷ್ಟು ವ್ಯಾಪ್ತಿಯಲ್ಲಿದೆ. ಸೇತುವೆಯ ಕೆಳಗೇ ನಡೆಯುತ್ತಿರುವ ಮರಳು ಗಣಿಗಾರಿಕೆ, ಧಾರ್ಮಿಕ ಆಚರಣೆಗೆ ಬರುವವರು ಒಗೆದು ಹೋಗುವ ಬಟ್ಟೆಗಳು, ನದಿ ತೀರ ಅರಸಿ ಬರುವ ಮದ್ಯಪ್ರಿಯರು ಎಸೆದು ಹೋಗುವ ಗಾಜಿನ ಬಾಟಲ್‌ಗಳು, ಜನರು ಎಸೆದು ಹೋಗುವ ಪ್ಲಾಸ್ಟಿಕ್‌ ಕವರ್‌ ಹಾಗೂ ಬಾಟಲ್‌ಗಳು, ನಗರದಿಂದ ಹರಿದು ಬರುವ ಚರಂಡಿಯ ನೀರು ನೇರವಾಗಿ ನದಿ ಸೇರುತ್ತಿರುವುದು... ಇವು ಇಲ್ಲಿಯ ನದಿ ಮಾಲಿನ್ಯದ ಪ್ರಮುಖ ಮೂಲಗಳು.

ಧಾರ್ಮಿಕ ಆಚರಣೆಯ ಸಂದರ್ಭಗಳಲ್ಲಿ ವಿಶೇಷವಾಗಿ ಸಂಕ್ರಾಂತಿಯಂದು ನಡೆಯುವ ಹೊಳೆಯೂಟದ ಸಂದರ್ಭದಲ್ಲಿ ಇಲ್ಲಿ ನದಿ ನೀರಿನಲ್ಲಿ ಬಟ್ಟೆ ಒಗೆದು ಹೋಗುವವರ ಸಂಖ್ಯೆ ಅಪಾರ. ಹೀಗಾಗಿ ಇಲ್ಲಿ ಸಂಕ್ರಾಂತಿ ಆಚರಣೆಯ ನಂತರ ನೋಡಲಸಾಧ್ಯವೆನಿಸುವಷ್ಟು ಬಟ್ಟೆಗಳ ತ್ಯಾಜ್ಯ ಬಿದ್ದಿರುತ್ತದೆ. ಒಗೆಯುವವರು ಒಗೆದು ಹೋಗುತ್ತಾರೆ. ನಂತರ ತೆಗೆಯುವವರು ಯಾರು?

ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ‘ನನ್ನ ಊರು ನನ್ನ ಹೊಣೆ’ ತಂಡ ತ್ಯಾಜ್ಯ ಹೆಕ್ಕಿ ರಾಶಿ ಹಾಕಿರುವುದು.
ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ‘ನನ್ನ ಊರು ನನ್ನ ಹೊಣೆ’ ತಂಡ ತ್ಯಾಜ್ಯ ಹೆಕ್ಕಿ ರಾಶಿ ಹಾಕಿರುವುದು.

ತುಂಗಭದ್ರೆಯ ತೀರದಲ್ಲಿ ವಿಹರಿಸಿದ ವಿದೇಶಿ ಸ್ನೇಹಿತರೊಬ್ಬರ ಮಗ ‘ನಮ್ಮ ದೇಶದಲ್ಲಿ ನದಿ ತೀರಗಳು ಎಷ್ಟು ಸ್ವಚ್ಛವಾಗಿರುತ್ತವೆ. ಇಲ್ಲಿ ಏಕೆ ಇಲ್ಲ?’ ಎಂದು ಕೇಳಿದ ಪ್ರಶ್ನೆಗೆ ಹರಿಹರದ ನಾಗರಿಕ ಆರ್‌. ರಾಘವೇಂದ್ರ ಅವರು ಉತ್ತರ ಹುಡುಕುವಂತಾಯಿತು. ಇದೇ ಪ್ರಶ್ನೆ ಅವರನ್ನು ‘ನನ್ನ ಊರು ನನ್ನ ಹೊಣೆ’ ಎಂಬ ನದಿ ಸ್ವಚ್ಛತಾ ಅಭಿಯಾನದ ಗುಂಪನ್ನು ಹುಟ್ಟು ಹಾಕಲು ಪ್ರೇರೇಪಿಸಿತು. ಆರಂಭದಲ್ಲಿ ಅವರು, ಅವರ ಅಕ್ಕ ಹಾಗೂ ಕುಟುಂಬದವರು ನದಿತೀರದ ಸ್ವಚ್ಛತೆಗೆ ಕೈಹಾಕಿದರು. ಮುಂದೆ ನಗರದ ಪರಿಸರ ಕಾಳಜಿಯವರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ ಒಟ್ಟುಗೂಡಿಸಿತು.

2019ರ ಡಿಸೆಂಬರ್‌ನಲ್ಲಿ ‘ನನ್ನ ಊರು ನನ್ನ ಹೊಣೆ’ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಆರಂಭವಾದ ಈ ನದಿ ಸ್ವಚ್ಛತಾ ಅಭಿಯಾನ ಈಗ ಹರಿಹರದಲ್ಲಿ 350ಕ್ಕೂ ಹೆಚ್ಚು ನಾಗರಿಕರಲ್ಲಿ ನದಿ ಸ್ವಚ್ಛತೆಯ ಬಗ್ಗೆ ಕಾಳಜಿ ಹುಟ್ಟು ಹಾಕಿದೆ. ಪರಿಸರ ಪ್ರೇಮಿಗಳು ಒಟ್ಟಾಗುವಂತೆ ಮಾಡಿದೆ. ಇವರ ಗ್ರೂಪ್‌ಗೆ ಯಾವುದೇ ಪದಾಧಿಕಾರಿಗಳು ಇಲ್ಲ. ಯಾವುದೇ ಹಣ ಸಂಗ್ರಹವೂ ನಡೆಯುವುದಿಲ್ಲ. ಸಂಕ್ರಾಂತಿಗೆ 6 ಭಾನುವಾರಗಳ ಮುಂಚೆ ವಾಟ್ಸ್‌ಆ್ಯಪ್ ಗ್ರೂಪ್‌ ಆಕ್ಟಿವೇಟ್‌ ಆಗುತ್ತದೆ. ಸಂಕ್ರಾಂತಿಯ ನಂತರ ಎರಡು ಭಾನುವಾರಗಳವರೆಗೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯ ಪ್ರತಿ ಭಾನುವಾರಗಳಂದು ಬೆಳಿಗ್ಗೆ ಪರಿಸರ ಕಾಳಜಿ ಹೊಂದಿದ ಇವರಿಗೆಲ್ಲ ಸಂದೇಶ ರವಾನೆಯಾಗುತ್ತದೆ. ಬೆಳಿಗ್ಗೆ 200ಕ್ಕೂ ಹೆಚ್ಚು ಜನ ನದಿತೀರದಲ್ಲಿರುತ್ತಾರೆ. ಅವರಷ್ಟಕ್ಕವರೇ ಕೆಲಸ ಶುರು ಮಾಡುತ್ತಾರೆ. ನದಿತೀರದಲ್ಲಿ ಬಿದ್ದ ಗಾಜಿನ ಬಾಟಲ್‌ಗಳು, ಬಟ್ಟೆಗಳು, ಪ್ಲಾಸ್ಟಿಕ್‌ ಕವರ್‌ ಹಾಗೂ ಇತರ ತ್ಯಾಜ್ಯಗಳನ್ನು ಹೆಕ್ಕಿ ಒಂದೆಡೆ ರಾಶಿ ಹಾಕುತ್ತಾರೆ. ಮಾಸ್ಕ್‌, ಕೈಗಳಿಗೆ ಗ್ಲೌಸ್‌, ಟೀ ಹಾಗೂ ಉಪಾಹಾರವನ್ನೂ ಯಾರಾದರೂ ಸ್ಪಾನ್ಸರ್‌ ಮಾಡುತ್ತಾರೆ. ಕೆಲವೊಮ್ಮೆ ಸ್ವಚ್ಛತೆ ಮಾಡಲು ಬರುವ ಮಹಿಳೆಯರೂ ಸ್ವಯಂಪ್ರೇರಣೆಯಿಂದ ಉಪಾಹಾರ ಮಾಡಿಸಿಕೊಂಡು ತಂದಿದ್ದೂ ಇದೆ.

ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ಸಿಕ್ಕ ಬಟ್ಟೆ ರಾಶಿ.
ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ಸಿಕ್ಕ ಬಟ್ಟೆ ರಾಶಿ.

‘ಸಂಕ್ರಾಂತಿ ಹಬ್ಬದ ಮರುದಿನ ಬಂದು ಇಲ್ಲಿ ನೋಡಿದರೆ ಇಲ್ಲಿ 20–25 ಟ್ರ್ಯಾಕ್ಟರ್‌ಗಳಷ್ಟು ಬಟ್ಟೆ ತ್ಯಾಜ್ಯ ಬಿದ್ದಿರುತ್ತದೆ. ನದಿಗೆ ಬಟ್ಟೆ ಒಗೆಯಲು ಜನರಿಗೆ ಹೇಗಾದರೂ ಮನಸು ಬರುತ್ತದೋ ಗೊತ್ತಿಲ್ಲ. ಎಷ್ಟು ಜಾಗೃತಿ ಮೂಡಿಸಿದರೂ ಈ ರೂಢಿ ಬದಲಾಗಿಲ್ಲ’ ಎಂದು ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

‘ನನ್ನ ಊರು ನನ್ನ ಹೊಣೆ’ ಸಂಘಟನೆಯವರು ಸಂಕ್ರಾಂತಿಯ ನಂತರದ ಎರಡು ಭಾನುವಾರ ಇಲ್ಲಿಯ ತ್ಯಾಜ್ಯ ಎತ್ತಿಹಾಕುವ ಕಾರ್ಯ ಮಾಡುವುದು ಇದೇ ಕಾರಣಕ್ಕೆ. ಎತ್ತಿಹಾಕಿದ ತ್ಯಾಜ್ಯವನ್ನು ನಗರಸಭೆಯ ಪೌರ ಕಾರ್ಮಿಕರು ಸಾಗಿಸುತ್ತಾರೆ. ನಮ್ಮ ಕಾರ್ಯದಿಂದ ಪ್ರೇರಣೆಗೊಂಡು ಇಲ್ಲಿಯ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಈ ವರ್ಷ ಐದು ಭಾನುವಾರಗಳ ಕಾಲ ನಮ್ಮ ಜೊತೆ ಬಂದು ನದಿ ಸ್ವಚ್ಛತೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಸದ ಜಿ.ಎಂ. ಸಿದ್ದೇಶ್ವರ ಸೇರಿ ಹಲವು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ ಸೇರಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ನಗರದ ವೈದ್ಯರು, ವಕೀಲರು, ವ್ಯಾಪಾರಿಗಳು, ಎಂಜಿನಿಯರ್‌ಗಳು ಸೇರಿ ಬಹುತೇಕ ಎಲ್ಲ ವೃತ್ತಿಯವರೂ ಪ್ರತಿ ಭಾನುವಾರ 100ಕ್ಕೂ ಹೆಚ್ಚು ಮಂದಿ ಬರುತ್ತಾರೆ. 100ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳುತ್ತಿರುವುದು ಇನ್ನೂ ಖುಷಿ ನೀಡಿದೆ’ ಎಂದು ಅವರು ತಿಳಿಸಿದರು.

ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಮಹಿಳೆಯರು ಹಾಗೂ ನಾಗರಿಕರು.
ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಮಹಿಳೆಯರು ಹಾಗೂ ನಾಗರಿಕರು.

‘ತಮ್ಮ ಊರಲ್ಲೇ ನದಿ ಹರಿಯುತ್ತಿದ್ದರೂ ಎಷ್ಟೋ ಜನ ಇಲ್ಲಿಯವರೆಗೂ ನದಿತೀರದತ್ತ ಬಂದೇ ಇರಲಿಲ್ಲ. ಸಂಕ್ರಾಂತಿ ಸಮಯದಲ್ಲಿ ಮಾತ್ರ ಇಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಊಟ ಮಾಡಿ ವಿಹರಿಸುತ್ತಾರೆ. ಆದರೆ ಇಲ್ಲಿಯ ಆಹ್ಲಾದಕರ ವಾತಾವರಣ, ನೈರ್ಮಲ್ಯ ಹಾಗೆಯೇ ಉಳಿಸಿಕೊಳ್ಳಬೇಕೆಂಬ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆದರೆ ನಾವು ನದಿ ಸ್ವಚ್ಛತಾ ಕಾರ್ಯ ಶುರು ಮಾಡಿದ ನಂತರ ಹಲವು ಮಂದಿಗೆ ತಮ್ಮ ಊರಿನಲ್ಲೂ ನದಿ ಇದೆ. ಅದರ ರಕ್ಷಣೆ ತಮ್ಮ ಹೊಣೆ ಎಂಬ ಅರಿವಾಗಿದೆ’ ಎಂದು ಅವರು ವಿವರಿಸಿದರು.

ಸಂಕ್ರಾಂತಿಯ ನಂತರ ಸ್ವಚ್ಛತಾ ಕಾರ್ಯಕ್ಕೆ ಅಲ್ಪವಿರಾಮ ಇಡುವ ದಿನ ಇವರು ಜನಪದ ಸಂಕ್ರಾಂತಿ ಎಂಬ ಮನರಂಜನಾ ಕಾರ್ಯಕ್ರಮವನ್ನೂ ಮಾಡಿ ಭಾಗವಹಿಸಿದ ಎಲ್ಲರಿಗೂ ಖುಷಿಯ ಸಿಂಚನ ಮಾಡಿಸುತ್ತಾರೆ.

ರಾಘವೇಂದ್ರ ತೇಲ್‌ಕರ್‌, ಅಂಜು ರಾಜೇನವರ್‌, ಸಾಕ್ಷಿ ಶಿಂಧೆ, ಮಮತಾ, ರವಿಶಂಕರ್‌ ಗದಗಿಮಠ, ಅಶ್ವಿನಿ ಕೃಷ್ಣ, ರಾಘವೇಂದ್ರ ಉಪಾಧ್ಯ, ಮಹಮದ್‌ ಅಲಿ, ದೀಪಕ್‌ ಪಾಲಂಕರ್‌ ಸೇರಿ ಹಲವರು ಆರಂಭದಿಂದಲೂ ಗ್ರೂಪ್‌ನಲ್ಲಿ ಸಕ್ರಿಯವಾಗಿದ್ದು ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸುತ್ತಿದ್ದಾರೆ. ಪ್ರತಿ ಮನೆಯಲ್ಲೇ ಕಸ ವಿಲೇವಾರಿ ಮಾಡುವಂತೆ ಮಾಡಲು ಸಂಘಟನೆಯ ವತಿಯಿಂದ ಕಳೆದ ವರ್ಷದ ಆರಂಭದಲ್ಲಿ ಪೈಪ್‌ ಕಾಂಪೋಸ್ಟಿಂಗ್‌ ಕಾರ್ಯ ಆರಂಭಿಸಲಾಗಿತ್ತು. ಆದರೆ ಕೊರೊನಾ ಬಂದ ಕಾರಣ ಆ ಕಾರ್ಯಕ್ಕೆ ಅಡ್ಡಿಯುಂಟಾಯಿತು.

ಹರಿಹರದ ‘ನನ್ನ ಊರು ನನ್ನ ಹೊಣೆ’ ತಂಡವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿ ಸ್ವಚ್ಛತೆಗೆ ಕೈಜೋಡಿಸಿದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌.ಪಿ. ಹನುಮಂತರಾಯ ಹಾಗೂ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ.
ಹರಿಹರದ ‘ನನ್ನ ಊರು ನನ್ನ ಹೊಣೆ’ ತಂಡವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿ ಸ್ವಚ್ಛತೆಗೆ ಕೈಜೋಡಿಸಿದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌.ಪಿ. ಹನುಮಂತರಾಯ ಹಾಗೂ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ.

‘ಹರಿಹರೇಶ್ವರ ದೇವಸ್ಥಾನ ಹಾಗೂ ತುಂಗಭದ್ರಾ ನದಿಯಿಂದಾಗಿಯೇ ಹರಿಹರ ಪ್ರೇಕ್ಷಣೀಯ ಸ್ಥಳ ಎನಿಸಿದೆ. ಪ್ರಕೃತಿಯನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಮಾಲಿನ್ಯ ಮಾಡುತ್ತ ಮುಂದುವರಿದರೆ ಮುಂದೊಂದು ದಿನ ಎಂಥ ದುಃಸ್ಥಿತಿ ಬರಬಹುದು ಎಂಬ ಬಗ್ಗೆ ಜನ ಮುಂದಾಲೋಚನೆ ಮಾಡಬೇಕಿದೆ. ನದಿತೀರದ ಸ್ವಚ್ಛತೆಗೆ ಮುಂದಾಗದಿದ್ದರೂ ನದಿಯಲ್ಲಿ ಕಸ ಹಾಕದಿದ್ದರೆ ಸಾಕು. ಅದೇ ದೊಡ್ಡ ಕಾರ್ಯ’ ಎನ್ನುತ್ತಾರೆ ಆರ್‌. ರಾಘವೇಂದ್ರ.

ಸಂಘಟನೆಗೆ ಜನರ ಸ್ಪಂದನ

* ಹರಿಹರದ ನಂದಿಗಾವಿ ಶ್ರೀನಿವಾಸ್‌ ಬಳಗದವರು ಈ ವರ್ಷದ ಸಂಪೂರ್ಣ ಗ್ಲೌಸ್ ಹಾಗೂ ಮಾಸ್ಕ್‌ (4000 ಗ್ಲೌಸ್‌ ಹಾಗೂ 2000 ಮಾಸ್ಕ್‌)ಗಳನ್ನು ಒದಗಿಸಿದ್ದಾರೆ. ಔಷಧ ಅಂಗಡಿಗಳಿಂದ 500 ಮಾಸ್ಕ್‌, ಬಟ್ಟೆ ಅಂಗಡಿಗಳಿಂದ ಕಸ ಸಂಗ್ರಹಕ್ಕಾಗಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನೀಡಿದ್ದಾರೆ.

* ನದಿತೀರದಲ್ಲಿ ಮಾಲಿನ್ಯವಾಗದಂತೆ ತಡೆಯಲು ಕಸದ ಬುಟ್ಟಿಗಳನ್ನು ಇಡುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸುವುದಾಗಿ ಜಿಲ್ಲಾಧಿಕಾರಿಯಿಂದ ಭರವಸೆ ಲಭಿಸಿದೆ.

* ನದಿತೀರದಲ್ಲಿ ನೈಟ್‌ ಬೀಟ್‌ ವ್ಯವಸ್ಥೆ ಮಾಡಿಸುವುದಾಗಿ ಎಸ್‌ಪಿ ಹನುಮಂತರಾಯ ಅವರಿಂದಲೂ ಭರವಸೆ ಸಿಕ್ಕಿದೆ.

(ಮಾಹಿತಿಗೆ ಮೊಬೈಲ್‌– ರಾಘವೇಂದ್ರ ಆರ್‌.– 9844181001 ಸಂಪರ್ಕಿಸಬಹುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT