ಮಂಗಳವಾರ, ಅಕ್ಟೋಬರ್ 19, 2021
24 °C
ಆಗಸ್ಟ್‌ 20; ಮಲೇರಿಯಾಗೆ ಅನಾಫಿಲಿಸ್‌ ಹೆಣ್ಣು ಸೊಳ್ಳೆ ಕಾರಣ ಎಂಬುದು ಪತ್ತೆಯಾದ ದಿನ

Pv Web Exclusive: ಸೊಳ್ಳೆಗೂ ಒಂದು ದಿನ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸೊಳ್ಳೆಗೂ ಒಂದು ದಿನವೇ? ಹೌದು. ಆನೆಗೊಂದು ದಿನ, ಹುಲಿಗೊಂದು ದಿನ, ಹಾವಿಗೊಂದು ದಿನ.. ಹೀಗೆ ಎಲ್ಲದ್ದಕ್ಕೂ ಒಂದು ದಿನ ಇರುವಾಗ ಸೊಳ್ಳೆಗೂ ಒಂದು ದಿನ ಏಕಿರಬಾರದು?

ಇದು ನಿಮಗೆ ತಮಾಷೆಯಂತೆ ಕಾಣಿಸಬಹುದು. ಆದರೆ ಎಲ್ಲ ದೊಡ್ಡ ಪ್ರಾಣಿಗಳಿಗಿಂತಲೂ ನಮ್ಮನ್ನು ಹೆಚ್ಚು ಕಾಡುವುದು ಈ ಸಣ್ಣ ಸೊಳ್ಳೆಯೇ. ಅದರಲ್ಲೂ ಹೆಣ್ಣು ಸೊಳ್ಳೆ!

ಅತಿ ಹಗುರವಾದ ಚಿಕ್ಕ ದೇಹ. ನಮ್ಮ ನಿದ್ದೆಗೆಡಿಸುವ ಮರ್ಮರ ಸಂಗೀತವನ್ನು ಹೊರಹೊಮ್ಮಿಸುವ ತೆಳುವಾದ, ಪೊರೆಯಂಥ ಎರಡು ರೆಕ್ಕೆ, ತಲೆ ಮೇಲೆರಡು ಆಂಟೆನಾ, ದೇಹಕ್ಕಿಂತಲೂ ಉದ್ದವಾದ, ಗೆರೆಯಂಥ ಆರು ಬಳುಕುವ ಕಾಲುಗಳು, ಸೂಜಿಕೊಳವೆಯಂಥ ಮೂತಿಯಿಂದ ಕಚ್ಚುವ ಹೆಣ್ಣು ಸೊಳ್ಳೆಯೇ ತನ್ನ ಮೊಟ್ಟೆಗಳ ಬೆಳವಣಿಗೆಗಾಗಿಯೇ ರಕ್ತ ಹೀರುತ್ತದೆ. ಆದರೆ, ಗಂಡು ಸೊಳ್ಳೆಗೆ ರಕ್ತ ಬೇಕಿಲ್ಲ, ಅದು ಸೌಮ್ಯ ಜೀವಿ. ಕಚ್ಚುವುದೂ ಕಡಿಮೆ! ಅದಕ್ಕೆ ಸಸ್ಯರಸ ಮತ್ತು ಮಕರಂದವಿದ್ದರೆ ಸಾಕು.

ನೂರಿಪ್ಪತ್ನಾಲ್ಕು ವರ್ಷಗಳ ಹಿಂದೆ, ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದಲೇ ಮಲೇರಿಯಾ ಹಬ್ಬುತ್ತದೆ ಎಂದು ಬ್ರಿಟಿಷ್‌ ವೈದ್ಯ ಸರ್‌ ರೊನಾಲ್ಡ್‌ ರೋಸ್‌ ಪತ್ತೆ ಹಚ್ಚಿದ ನೆನಪಿಗಾಗಿ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿರುವುದು ವಿಶೇಷ. ಸೊಳ್ಳೆ ಮತ್ತು ಮಲೇರಿಯಾ ನಡುವೆ ಅವಿನಾಭಾವ ಸಂಬಂಧವಿದೆ ಎಂಬುದನ್ನು ಪತ್ತೆ ಹಚ್ಚಿದ್ದರಿಂದಲೇ ಮಲೇರಿಯಾ ಗುರುತು ಹಚ್ಚುವಿಕೆ ಮತ್ತು ನಿಯಂತ್ರಣದ ಹೊಸ ದಾರಿಗಳು ತೆರೆದುಕೊಂಡವು. ಅಲ್ಲೀವರೆಗೂ ಜ್ವರ ಎಂದರೆ ಬೇರೆ ಬೇರೆ ರೀತಿಯ ಜ್ವರವಾಗಿತ್ತಷ್ಟೇ. ಕಾಡು ಜ್ವರ, ತೇವದಭೂಮಿಯ ಜ್ವರ, ಆಗಾಗ ಬರುವ ಜ್ವರ, ಕೆಟ್ಟ ಗಾಳಿಯಿಂದ ಬರುವ ಜ್ವರ ಹೀಗೆ. ಇಟಾಲಿಯನ್‌ ಪದಜೋಡಿ ಇರುವುದೇ ಹೀಗೆ; mal = bad, aria = air. 

ಕೈಗೆ ಸಿಕ್ಕಿದರೆ ಅಪ್ಪಚ್ಚಿಯಾಗುವ, ಸದ್ದಿಲ್ಲದೆ ಬಂದು ರಕ್ತ ಹೀರಿ, ಹೊಡೆತ ತಪ್ಪಿಸಿಕೊಂಡು ಮತ್ತೆ ಹಗುರಕ್ಕೆ ಹಾರಿ ಕಿವಿ ಬಳಿ ಬಂದು ಗುಂಯ್‌ಗುಟ್ಟುವ ಸೊಳ್ಳೆಯೇ ವೈದ್ಯಕೀಯ ಲೋಕವನ್ನು ಹೊಸ ಆವಿಷ್ಕಾರದತ್ತ ಕರೆದೊಯ್ದಿದ್ದು ತಮಾಷೆಯ ಸಂಗತಿ ಅಲ್ಲ.

ಏಕೆಂದರೆ ಶತಮಾನಗಳಿಂದ ಈ ಸೊಳ್ಳೆಯ ಅಪಾಯಕಾರಿ ಆಯಾಮ ಯಾರಿಗೂ ಗೊತ್ತಿರಲೇ ಇಲ್ಲ. ಈ ವಿಷಯವನ್ನು ಕಂಡು ಹಿಡಿದ ಕಾರಣಕ್ಕೇ ಸರ್‌ ರೊನಾಲ್ಡ್‌ ರೋಸ್‌ ಅವರಿಗೆ ಔಷಧಿ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯೂ ಬಂತು! ಈ ಸಂಶೋಧನೆಯ ಮಹತ್ವ ಸಾರಲೆಂದೇ ಅವರು, ಆಗಸ್ಟ್‌ 20 ಅನ್ನು ಸೊಳ್ಳೆ ದಿನವೆಂದು ಘೋಷಿಸಿದರು!!

ಮಲೇರಿಯಾವನ್ನು ಇಲ್ಲವಾಗಿಸುವುದು (‘Reaching the zero malaria target’) 2021ರ ಸೊಳ್ಳೆ ದಿನದ ಘೋಷ ವಾಕ್ಯ. ಈ ಉದ್ದೇಶಕ್ಕಾಗಿ ಶ್ರಮಿಸುವ ವೈದ್ಯರು–ಸಿಬ್ಬಂದಿ, ವಿವಿಧ ಇಲಾಖೆಗಳ ಸಿಬ್ಬಂದಿ, ಸಂಘ–ಸಂಸ್ಥೆಗಳ ಪ್ರತಿನಿಧಿಗಳ ಬೆನ್ನುತಟ್ಟುವ ದಿನವೂ ಹೌದು.

ಸೊಳ್ಳೆ ಹೆಚ್ಚು ಕಚ್ಚಿದ್ದು ಆಫ್ರಿಕಾವನ್ನೇ!

ಹಿಡಿಯಷ್ಟು ನಿಂತ ನೀರಿದ್ದರೂ ಸಾಕು. ಸೊಳ್ಳೆ ಹಾಯಾಗಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡಿಬಿಡುತ್ತದೆ. ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ ಸೇರಿದಂತೆ ಮಾರಕ ಕಾಯಿಲೆಗಳನ್ನು ಈ ಮರಿಗಳು ಮೌನವಾಗಿ, ಸಲೀಸಾಗಿ ಹಬ್ಬಿಸುತ್ತವೆ. ಸೊಳ್ಳೆಯ ಒಂದು ಸಾಮಾನ್ಯ ಕಡಿತ ನಮ್ಮ ಜೀವನವನ್ನೇ ಕಾಡುತ್ತದೆ. ಅದರಲ್ಲೂ ಇಂಥ ಸೊಳ್ಳೆಗಳಿಗೆ ನಮ್ಮ ದೇಶ ಹೇಳಿ ಮಾಡಿಸಿದ ತಾಣ. ಆದರೆ ಸೊಳ್ಳೆಗಳಿಂದ ಹೆಚ್ಚು ಸಂತ್ರಸ್ತಗೊಂಡಿರುವುದು ಆಫ್ರಿಕಾ ಖಂಡ.

ವಿಶ್ವ ಆರೋಗ್ಯ ಸಂಸ್ಥೆಯ 2017ರ ವಿಶ್ವ ಮಲೇರಿಯಾ ವರದಿ ಪ್ರಕಾರ, ವಿಶ್ವದಾದ್ಯಂತ 2016ರಲ್ಲಿ 21.6 ಕೋಟಿ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಶೇ 90ರಷ್ಟು ಆಫ್ರಿಕಾ ಭಾಗದಲ್ಲೇ ಕಂಡು ಬಂದಿದ್ದವು. 4.45 ಲಕ್ಷ ಸಾವುಗಳ ಪೈಕಿ ಶೇ 91ರಷ್ಟು ಆಫ್ರಿಕಾದಲ್ಲೇ ಆಗಿದ್ದವು. ಮಲೇರಿಯಾದಿಂದ ಸಂಭವಿಸಿದ ಸಾವುಗಳ ಒಟ್ಟು ಪ್ರಮಾಣದಲ್ಲಿ ಶೇ 58ರಷ್ಟು ಭಾರತ, ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ, ನೈಜಿರಿಯಾ, ಮಧ್ಯ ಆಫ್ರಿಕಾದ ಕಾಂಗೋದಲ್ಲೇ ಸಂಭವಿಸಿವೆ.

ಸೊಳ್ಳೆಯೇ ಇಲ್ಲದ ‘ಐಸ್‌ ಲ್ಯಾಂಡ್‌’!

ಸೊಳ್ಳೆಯ ಬಗ್ಗೆ ಮಾತನಾಡುವಾಗ ನಾವು ಯೂರೋಪಿನ ಐಸ್‌ ಲ್ಯಾಂಡ್ (Ice land) ಅನ್ನು ಮರೆಯುವಂತಿಲ್ಲ. ಏಕೆಂದರೆ ಅಲ್ಲಿ ಸೊಳ್ಳೆಗಳೇ ಇಲ್ಲ. ಐಸ್‌ ಲ್ಯಾಂಡ್‌ ಸುತ್ತಮುತ್ತ ಇರುವ ನಾರ್ವೆ, ಡೆನ್ಮಾರ್ಕ್‌, ಸ್ಕಾಟ್‌ಲ್ಯಾಂಡ್‌ನಲ್ಲೂ ಸೊಳ್ಳೆ ಹಾವಳಿ ಇಲ್ಲ. ಅಲ್ಲಿನ ಸಮುದ್ರದ ಹವಾಮಾನ ವೈಪರೀತ್ಯ (oceanic climate) ಸೊಳ್ಳೆಗಳಿಗೆ ನೆಲೆ ಇಲ್ಲದಂತೆ ಮಾಡಿದೆ ಎಂಬುದು ವಿಜ್ಞಾನಿಗಳ ಪ್ರತಿಪಾದನೆ.

ಇನ್ನು ಕೆಲವರ ಪ್ರಕಾರ, ಐಸ್‌ ಲ್ಯಾಂಡ್‌ನ ಮಣ್ಣು ಮತ್ತು ನೀರಿನ ರಾಸಾಯನಿಕ ಸಂಯೋಜನೆಯೇ ಸೊಳ್ಳೆಗಳು ಬಾರದಂತೆ ಮಾಡಿದೆ. ‘ಏನೇ ಆದರೂ ಎಲ್ಲೆಡೆ ಸುಲಭವಾಗಿ ಹಾರಾಡಿದಂತೆ ಐಸ್‌ ಲ್ಯಾಂಡ್‌ನಲ್ಲಿ ಹಾರಾಡಲು ಸೊಳ್ಳೆಗಳಿಗೆ ಸಾಧ್ಯವಿಲ್ಲ’ ಎಂಬುದು ಅಲ್ಲಿನ ಜೀವಶಾಸ್ತ್ರಜ್ಞ ಜಿಸ್ಲಿ ಮಾರ್‌ ಜಿಸ್ಲಾಸನ್‌ ಅವರ ಪ್ರತಿಪಾದನೆ.

ಆದರೆ ಅವರೇ ಹೇಳುತ್ತಾರೆ; ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿಯೇ ಅಲ್ಲಿ ಕಳೆದ 20 ವರ್ಷದಲ್ಲಿ ಉಷ್ಣಾಂಶವು 2 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಹೆಚ್ಚಾಗಿದೆ. 200 ಕ್ಕೂ ಹೆಚ್ಚು ಹೊಸ ಕ್ರಿಮಿಕೀಟಗಳು ಈಗ ವಾಸವಾಗಿವೆ. ತಾಪಮಾನ ಹೆಚ್ಚಾಗುತ್ತಲೇ ಇದ್ದರೆ ಮುಂದೊಂದು ದಿನ ಸೊಳ್ಳೆಗಳಿಗೂ ಐಸ್‌ಲ್ಯಾಂಡ್‌ ಅನುಕೂಲಕರವಾಗಿ ಪರಿಣಮಿಸಬಹುದು.

ಸೊಳ್ಳೆಯೇ ನೀನು ಕಳ್ಳಿಯೇ..

ಈ ಅಂಕಿ ಅಂಶಗಳಿಂದ ಸೊಳ್ಳೆಗೆ ಆಗಬೇಕಾದ್ದೇನೂ ಇಲ್ಲ. ಏಕೆಂದರೆ, ವೈರುಧ್ಯಗಳಿಂದ ಕೂಡಿದ ಅನವಶ್ಯಕ ಅನುಮಾನಗಳು ಮತ್ತು ದುರಾಸೆಗಳ ನಡುವೆ ನಾವು ಸಿಲುಕಿರುವಾಗಲೇ ಅದು ಕಚ್ಚುವ ತನ್ನ ಮೂಲಪ್ರವೃತ್ತಿಯನ್ನು ಬಿಟ್ಟುಕೊಡದೆ ಸಹಜವಾಗಿ ಮುಂದುವರಿಯುತ್ತಿರುತ್ತದೆ.

ಸೊಳ್ಳೆಗಳಿಂದ ಅತಿ ಹೆಚ್ಚು ಸಾವು–ನೋವುಗಳನ್ನು ಕಂಡಿರುವ ಆಫ್ರಿಕಾದ ಕವಿಗಳು ಅವುಗಳ ಕುರಿತೇ ಹೆಚ್ಚು ಕವಿತೆಗಳನ್ನು ಬರೆದಿರುವುದು ವಿಶೇಷ. ದಕ್ಷಿಣಾ ಆಫ್ರಿಕಾದ ಯುವ ಕವಿ ಥಾಬೋ ಜಿಜನ (thabo Jijana) ನ ಕಾವ್ಯದ ಸಾಲು ಸೊಳ್ಳೆಯ ಮೂಲಪ್ರವೃತ್ತಿಯನ್ನು ಚೆನ್ನಾಗಿ ಹಿಡಿದಿಡುತ್ತದೆ. ಆತ ಹೇಳುತ್ತಾನೆ: ’ಎಲ್ಲವೂ ಸತ್ತಿವೆ. ಆದರೆ ಸೊಳ್ಳೆಗಳು ಮಾತ್ರ ರಕ್ತದ ಹಾಡನ್ನು ಹಾಡುತ್ತಲೇ ಇವೆ’

’all is dead
but for the mosquitoes
singing
their blood song’

ಜಗತ್ತಿನ ಅತಿ ಚಿಕ್ಕ ಕೀಟಗಳಲ್ಲಿ ಮನುಷ್ಯ ಲೋಕವನ್ನು ಅತಿ ಹೆಚ್ಚು ಕಾಡುತ್ತಲೇ ಇರುವ ಸೊಳ್ಳೆಯನ್ನು ಯಾವತ್ತಿಗೂ ನಿರ್ಲಕ್ಷ್ಯಿಸುವಂತಿಲ್ಲ. ಸೊಳ್ಳೆಯ ಜೀವಿತಾವಧಿಯೂ ಕಡಿಮೆ ಎಂಬುದು ಬಹಳ ಮಂದಿಗೆ ತಿಳಿದಿಲ್ಲ. ಹೆಣ್ಣು ಸೊಳ್ಳೆ ಒಂದು ತಿಂಗಳು ಬದುಕಿದರೆ, ಗಂಡು ಸೊಳ್ಳೆ ಸುಮಾರು ಒಂದು ವಾರವಷ್ಟೇ ಬದುಕುತ್ತದೆ. ಹೆಚ್ಚು ಕಾಲ ಬದುಕದ ಸೊಳ್ಳೆ ಏನು ಮಾಡಬಲ್ಲದು ಎಂದುಕೊಳ್ಳುವುದು ಖಂಡಿತ ತಪ್ಪು. ಯಾವತ್ತಾದರೂ ಒಂದು ರಾತ್ರಿ ಒಬ್ಬರೇ ಕೊಠಡಿಯಲ್ಲಿ ಸೊಳ್ಳೆಯೊಂದಿಗೆ ನಿದ್ದೆಗೆಡಿ ನೋಡೋಣ!

ಪೂರ್ವ ಆಫ್ರಿಕಾದ ರವಾಂಡ ದೇಶದ ಲೇಖಕ ಬಂಗಾಂಬಿಕಿ ಹಬ್ಯಾರಿಮಾನ ( Bangambiki Habyarimana) ಹೇಳುತ್ತಾನೆ; ಸೊಳ್ಳೆಯಂತೆ ನಿರಂತರತೆಯನ್ನು ಕಾಯ್ದುಕೊಳ್ಳಿ, ಕೊನೆಗೆ ನಿಮಗೇ ಬೇಕಾದ್ದು ಸಿಕ್ಕೇ ಸಿಗುತ್ತದೆ’

’Be persistent like a mosquito,

at the end you will get your bite’

ಸೊಳ್ಳೆ ದೇಶ–ಕಾಲ ಮೀರಿದ ಸರ್ವಾಂತರ್ಯಾಮಿ ಕೀಟ. ಆಫ್ರಿಕಾವಷ್ಟೇ ಅಲ್ಲ, ಜಗತ್ತಿನ ಇತರೆಲ್ಲ ದೇಶಗಳ ಮನುಷ್ಯರನ್ನೂ, ಪ್ರಾಣಿಗಳನ್ನೂ ಕಾಡಿದೆ. ಈ ಕಾಡುವ ಗುಣ ಅದರ ಜೀವಂತಿಕೆಯ ಲಕ್ಷಣವೂ ಹೌದು ಎಂಬುದನ್ನು ಕೊಲಂಬಿಯಾದ ಗಾಯಕಿ ಶಕೀರಾ ಎಷ್ಟು ಚೆನ್ನಾಗಿ ಹಿಡಿದಿಟ್ಟಿದ್ದಾಳೆ ನೋಡಿ; ’ನಾನೊಂದು ಸೊಳ್ಳೆಯಂತೆ, ನನಗೆ ಆರ್ದ್ರತೆಯೇ ಇಷ್ಟ. ನಾನು ಬೆವರುವುದಿಲ್ಲ’

’I’m like a mosquito,

I love humidity. I don’t sweat’

’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾಣ್ಣುಡಿಯಂತೆ ಸೊಳ್ಳೆ ಚಿಕ್ಕದಾದರೂ ಅದರ ಶಕ್ತಿ, ಬದ್ಧತೆ, ಪರಿಣಾಮ ದೊಡ್ಡದು. ಹೀಗಾಗಿ ’ಸೊಳ್ಳೆಯನ್ನು ಅರಿಯಿರಿ. ಆದರೆ ಅದರಿಂದ ದೂರವಿರಿ, ಆರೋಗ್ಯವಾಗಿರಿ’ ಎಂಬುದಷ್ಟೇ ವಿಶ್ವ ಸೊಳ್ಳೆ ದಿನ ನೀಡಬಹುದಾದ ಸಣ್ಣ ಸಲಹೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು