ಗುರುವಾರ , ಸೆಪ್ಟೆಂಬರ್ 23, 2021
28 °C

ಕಾಳ್ಗಿಚ್ಚು ತಡೆಗೆ ಕಟ್ಟೆಚ್ಚರ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಜ್ಞಾನಭಾರತಿ ಆವರಣ, ಲಾಲ್‌ಬಾಗ್‌, ಕಬ್ಬನ್ ಪಾರ್ಕ್, ಐಐಎಸ್‌ಸಿ ಆವರಣ... ಇವು ಉದ್ಯಾನನಗರಿಯಲ್ಲಿ ಪ್ರಮುಖವಾಗಿ ಹಸಿರು ಕಂಗೊಳಿಸುವ ಕೆಲವೇ ಪ್ರದೇಶಗಳು. 

ಇದೀಗ ಬೇಸಿಗೆಯ ಝಳ ಆರಂಭವಾಗಿದ್ದು, ರಾಜ್ಯದ ವಿವಿಧೆಡೆಯ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚಿನದ್ದೇ ಸದ್ದು. ಒಂದಲ್ಲ ಒಂದು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸಸ್ಯ, ಪ್ರಾಣಿ, ಪಕ್ಷಿ ಸಂಪತ್ತನ್ನು ನಾಶ ಮಾಡುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯೇನೋ ಒಂದೆಡೆ ಶ್ರಮಿಸುತ್ತಿದೆ. ಆದರೆ ವಿವಿಧೆಡೆ ಒಮ್ಮೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಾಗ ಇಲಾಖೆಯ ಸಿಬ್ಬಂದಿಯೂ ಅಸಹಾಯಕರಾಗಬೇಕಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಬನ್ನೇರುಘಟ್ಟದ ಅರಣ್ಯವನ್ನು ಎಲೆ ಉದುರುವ ಕಾಡು ಪ್ರದೇಶ ಎನ್ನಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿನ ಗಿಡಗಳ ಎಲೆಗಳು ಒಣಗಿ ಕೆಳಗೆ ಬೀಳುತ್ತವೆ. ಬೇಸಿಗೆಯಲ್ಲಿ ಅವಕ್ಕೆ ಬೆಂಕಿ ಕಿಡಿ ಸ್ವಲ್ಪ ತಾಗಿದರೂ ಕ್ಷಣಾರ್ಧದಲ್ಲಿ ಕಾಳ್ಗಿಚ್ಚು ಅರಣ್ಯದ ಬಹುಭಾಗವನ್ನು ಆವರಿಸುತ್ತದೆ. ಕಳೆದ ವರ್ಷ ತೆಗೆದುಕೊಂಡ ಮುನ್ನೆಚ್ಚರಿಕೆಯ ಕ್ರಮದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚು ಕಾಣಿಸಿರಲಿಲ್ಲ. ಈ ವರ್ಷವೂ ಕಾಳ್ಗಿಚ್ಚು ಬಾರದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಬಿಬಿಎಂಪಿ, ಆನೇಕಲ್‌, ಕನಕಪುರ ವ್ಯಾಪ್ತಿಯಲ್ಲಿ ಒಟ್ಟಾರೆ 260 ಚದರ ಕಿ.ಮೀ ಪ್ರದೇಶದಲ್ಲಿ ವಿಸ್ತರಿಸಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಆನೆ, ಚಿರತೆ, ಹುಲಿ, ಕರಡಿ, ಕಿರಬ, ನರಿ, ಹಾವು ಸೇರಿದಂತೆ ಹಲವು ವನ್ಯಜೀವಿಗಳು ನೆಲೆಸಿವೆ. ಅಪಾರ ಸಸ್ಯ ಸಂಪತ್ತು ಕೂಡ ಇಲ್ಲಿದೆ.

2018ರ ನವೆಂಬರ್‌ನಲ್ಲಿ ಬರಬೇಕಿದ್ದ ವಾಡಿಕೆ ಮಳೆ ಬಾರದ ಕಾರಣ ಅರಣ್ಯ ಪ್ರದೇಶದ ಬಹುತೇಕ ಹುಲ್ಲು ಒಣಗಿರುವುದು ಅರಣ್ಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಒಮ್ಮೆ ಬೆಂಕಿ ಆವರಿಸಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ ಎಂಬುದನ್ನು ಅರಿತಿರುವ ಅರಣ್ಯಾಧಿಕಾರಿಗಳು ಕಾಳ್ಗಿಚ್ಚು ಉಂಟಾಗದಂತೆ ಕೆಲ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಬಿನಮಠ ಅವರು ನೀಡಿರುವ ಮಾಹಿತಿ ಇಲ್ಲಿದೆ.

* ಇಡೀ ಅರಣ್ಯ ಪ್ರದೇಶವನ್ನು ಸಣ್ಣ ಸಣ್ಣ ಬ್ಲಾಕ್‌ಗಳಾಗಿ ವಿಂಗಡಿಸಿ 340 ಕಿ.ಮೀ ನಷ್ಟು ಬೆಂಕಿ ಗೆರೆಗಳನ್ನು ನಿರ್ಮಿಸಿದ್ದೇವೆ. ಅಲ್ಲೆಲ್ಲ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣ ಹುಲ್ಲನ್ನು ನಾಶಪಡಿಸಿದ್ದಾರೆ. ಈ ಮೂಲಕ ಕಾಳ್ಗಿಚ್ಚು ಬಾರದಂತೆ ಅಥವಾ ಬಂದರೂ ವಿಸ್ತರಣೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

* ಅರಣ್ಯಕ್ಕೆ ಅಂಟಿಕೊಂಡು ತಟ್ಟೆಕೆರೆ, ಮುನಿನಗರ ಕೆರೆ, ದೊಡ್ಡನ ಕೆರೆ, ನೆರೆಲಹಟ್ಟಿ ಕೆರೆ, ಚಿಕ್ಕೊಂಡನಹಳ್ಳಿ ಕೆರೆಗಳಿವೆ. ಇವೇ ಅಲ್ಲದೆ ಅರಣ್ಯದೊಳಗೆ ಅರ್ಧ ಎಕರೆ, ಒಂದು ಎಕರೆ, ಎರಡು ಎಕರೆ ಪ್ರದೇಶದಲ್ಲಿ ಹತ್ತಾರು ಕೆರೆ, ಕುಂಟೆಗಳನ್ನು ನಿರ್ಮಿಸಿದ್ದೇವೆ. ಅವುಗಳಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಯಾಗಿತ್ತು. ಆದರೆ ಈಗ ಅಲ್ಲಿನ ನೀರು ಬತ್ತುತ್ತಿದೆ. ಅರಣ್ಯದ ಪ್ರಾಣಿಗಳಿಗೆ ಕುಡಿಯಲು ನೀರು ಬೇಕಾಗಿರುವುದರಿಂದ ಈ ಕೆರೆಗಳಿಗೆ ಟ್ಯಾಂಕರ್‌ಗಳ ಮೂಲಕ ಸಾಧ್ಯವಾದಷ್ಟು ನೀರು ಹರಿಸಲಾಗುತ್ತಿದೆ.

* ಬೇಸಿಗೆ ಅವಧಿಗಾಗಿಯೇ 32 ಬೆಂಕಿ ವೀಕ್ಷಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದೇವೆ. ಅವರ ಜತೆಗೆ ಕಳ್ಳಬೇಟೆ ನಿಯಂತ್ರಣ ವೀಕ್ಷಕರನ್ನೂ ನಿಯೋಜಿಸಿದ್ದೇವೆ. ಅವರಿಗೆಲ್ಲ ಬೆಂಕಿ ನಂದಿಸಲೆಂದೇ ‘ಫೈರ್‌ ಬಿಟ್ಟರ್‌’ ಹಾಗೂ ‘ಫೈರ್‌ ಬ್ಲೋವರ್‌’ಗಳನ್ನು ನೀಡಿದ್ದೇವೆ. ಬೆಂಕಿ ನಂದಿಸುವ ಸಿಬ್ಬಂದಿಗೆ ಅಗತ್ಯ ಕುಡಿಯುವ ನೀರು, ಪೌಷ್ಟಿಕ ಆಹಾರವನ್ನು ಶೇಖರಿಸಿಟ್ಟುಕೊಂಡಿದ್ದೇವೆ.

* ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ಕಾಳ್ಗಿಚ್ಚು ಆವರಿಸಿದರೆ ಯಾವ ಯಾವ ಮಾರ್ಗದಿಂದ ಬೆಂಕಿ ನಂದಿಸಲು ಈ ವಾಹನಗಳು ಹೋಗಬಹುದು ಎಂಬುದರ ನೀಲನಕ್ಷೆಯನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದೇವೆ.

* 10ಕ್ಕೂ ಹೆಚ್ಚು ವೀಕ್ಷಣಾಗೋಪುರಗಳನ್ನು ನಿರ್ಮಿಸಿ ಅಲ್ಲಿ ವೀಕ್ಷಕರನ್ನು ನಿಯೋಜಿಸಿದ್ದೇವೆ. ಅರಣ್ಯ ಪ್ರದೇಶದಲ್ಲಿ ಎಲ್ಲಿಯೇ ಬೆಂಕಿ, ಹೊಗೆ ಕಂಡು ಬಂದರೆ ಸ್ಯಾಟ್‌ಲೈಟ್‌ ನೆರವಿನಿಂದ ಪತ್ತೆ ಹಚ್ಚಿ, ನಿಖರ ಪ್ರದೇಶದ ಮಾಹಿತಿಯನ್ನು ‘ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ’ ರವಾನಿಸುತ್ತದೆ. ಆಗ ನಾವು ಕಾರ್ಯ ಮಗ್ನರಾಗುತ್ತೇವೆ.

* ಅರಣ್ಯ ಪ್ರದೇಶದಲ್ಲಿ ಇರುವ ನಾಲ್ಕರಿಂದ ಐದು ಗ್ರಾಮ ಹಾಗೂ ಅರಣ್ಯ ಸುತ್ತಲಿರುವ ನೂರಾರು ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಜನರಲ್ಲಿ ಕಾಳ್ಗಿಚ್ಚಿನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಕಾಳ್ಗಿಚ್ಚಿನಿಂದ ಆಗುವ ನಷ್ಟ, ಅಪಾಯವನ್ನು ಈ ವೇಳೆ ತಿಳಿಸಲಾಗುತ್ತದೆ. ಗೊತ್ತಿದ್ದು, ಗೊತ್ತಿಲ್ಲದೆ ಅರಣ್ಯಕ್ಕೆ ಯಾರೂ ಬೆಂಕಿ ಹಾಕಬೇಡಿ ಎಂದು ಮನವಿ ಮಾಡುತ್ತೇವೆ. ಕಾಳ್ಗಿಚ್ಚು ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಈ ಕಾರ್ಯಕ್ಕೆ ನಾಗರಿಕರ ಸಹಕಾರ ಬಹಳ ಮುಖ್ಯ.

ಜ್ಞಾನಭಾರತಿಗೂ ಬಿಡದ ಕಾಳ್ಗಿಚ್ಚು
ಸಾವಿರ ಎಕರೆಗೂ ಹೆಚ್ಚು ಭೂ ಪ್ರದೇಶ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಎರಡು ಜೈವಿಕವನಗಳಿವೆ. 300 ಎಕರೆ ಪ್ರದೇಶದಲ್ಲಿ ಜೈವಿಕವನ–1 ಹಾಗೂ 150 ಎಕರೆ ವಿಸ್ತೀರ್ಣದಲ್ಲಿ ಜೈವಿಕವನ–2 ಇದೆ. ಒಟ್ಟಾರೆ ಜ್ಞಾನಭಾರತಿ ಆವರಣವು ನಾಲ್ಕೂವರೆ ಲಕ್ಷ ಸಸ್ಯ ಸಂಪತ್ತಿನ ತಾಣ. ಇಲ್ಲಿ 5020 ಸಸ್ಯ ಪ್ರಬೇಧಗಳಿವೆ. ಶ್ರೀಗಂಧ, ಬಿಳಿ ಜಾಲಿ, ಕರಿ ಜಾಲಿ, ಹತ್ತಿ, ಅರಳೆ, ಗೋಣಿಮರ, ಬಸರಿ, ನೇರಳೆ ಸೇರಿದಂತೆ ಅಪರೂಪದ ಗಿಡ, ಮರಗಳಿವೆ.

ಮಧುವನ, ಚರಕ ವನ, ಸಂಜೀವಿನಿ ವನ, ಸಹ್ಯಾದ್ರಿ ವನಗಳಿವೆ. ಹಲವು ನವಿಲು, ಅಳಿಲು, ನರಿ, ಮುಂಗುಸಿ, ಮೊಲ, ಉರಗ, ವಿವಿಧ ಬಗೆಯ ಪಕ್ಷಿಗಳು, ಚಿಟ್ಟೆಗಳು ಇಲ್ಲಿ ನೆಲೆ ಕಂಡುಕೊಂಡಿವೆ.

ಇಷ್ಟೆಲ್ಲ ಅರಣ್ಯ ಸಂಪತ್ತು ಇದ್ದರೂ ಜ್ಞಾನಭಾರತಿ ಆವರಣದಲ್ಲಿ ಇವುಗಳಿಗೆ ಸೂಕ್ತ ರಕ್ಷಣೆ ಇಲ್ಲ. ಗಂಧದ ಮರಗಳ ಕಳ್ಳತನ ಶಾಶ್ವತವಾಗಿ ನಿಂತಿಲ್ಲ. ಅಲ್ಲದೆ ಪ್ರತಿ ಬೇಸಿಗೆಯಲ್ಲೂ ಕನಿಷ್ಠ ನಾಲ್ಕರಿಂದ ಐದು ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡು, ಇಲ್ಲಿನ ಸಸ್ಯ ಸಂಪತ್ತನ್ನು ನಾಶಪಡಿಸುತ್ತಿದೆ. ಜೈವಿಕವನ–1, ಜೈವಿಕವನ–2, ಗಾಂಧಿ ಭವನದ ಬಳಿ, ಪರೀಕ್ಷಾಂಗ ಕಟ್ಟಡದ ಬಳಿಯ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿರುತ್ತದೆ. ಪ್ರತಿ ಬಾರಿಯೂ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ವೇಳೆಗೆ ಅಪಾರ ಜೀವ ಸಂಪತ್ತು ನಾಶವಾಗಿರುತ್ತದೆ.

ಈ ವರ್ಷವೂ ಬೇಸಿಗೆ ಆರಂಭಕ್ಕೂ ಮುನ್ನವೇ ಜ್ಞಾನಭಾರತಿ ಆವರಣದಲ್ಲಿ ಮೂರು ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಜೈವಿಕವನ–1, ಅಪ್ಪೆ ಮಿಡಿ ವನ ಹಾಗೂ ಪರೀಕ್ಷಾ ಭವನದ ಸಮೀಪ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದವರು ಶ್ರಮಿಸಿ ಬೆಂಕಿ ನಂದಿಸಿದ್ದರು. ಈ ವೇಳೆ ಮೊಲ, ಕೆಲ ಪಕ್ಷಿಗಳು, ಚಿಟ್ಟೆಗಳು ಸಾವನ್ನಪ್ಪಿದ್ದವು. ಸಸ್ಯ ಸಂಪತ್ತು ನಾಶವಾಗಿತ್ತು.

‘ಜ್ಞಾನಭಾರತಿ ಆವರಣದಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಳ್ಗಿಚ್ಚು ಮಾನವ ನಿರ್ಮಿತ ಎಂಬುದು ಗೊತ್ತಾಗಿದೆ. ಕೆಲ ಕಿಡಿಗೇಡಿಗಳು ಈ ಕೃತ್ಯ ಎಸಗುತ್ತಿದ್ದಾರೆ. ವಿ.ವಿ ಆವರಣದಲ್ಲಿ ಪ್ರವೇಶಕ್ಕೆ ಮುಕ್ತ ಅವಕಾಶ ಇರುವುದರಿಂದ ಇಲ್ಲಿ ಸಿಗರೇಟ್‌ ಸೇದಿ ಅದರ ತುಂಡನ್ನು ಪೊದೆಗಳತ್ತ ಎಸೆಯುತ್ತಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಬೆಂ.ವಿ.ವಿ ಜೈವಿಕವನದ ಸಂಯೋಜಕಾಧಿಕಾರಿ ಡಾ. ಟಿ.ಜಿ.ರೇಣುಕಾ ಪ್ರಸಾದ್‌.

ಈ ವರ್ಷ ಬೇಸಿಗೆ ಮತ್ತು ಕಾಳ್ಗಿಚ್ಚನ್ನು ಎದುರಿಸಲು ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಜೈವಿಕವನ–1 ಮತ್ತು 2ರಲ್ಲಿ ತಲಾ ಮೂರು ಫೈರ್‌ ಲೈನ್‌ಗಳನ್ನು ಮಾಡಿದ್ದೇವೆ. ಗಿಡ, ಮರಗಳಿಂದ ಉದುರಿರುವ ಎಲೆಗಳನ್ನು ತುಂಬಲು 15 ಕಡೆ ಗುಂಡಿಗಳನ್ನು ನಿರ್ಮಿಸಿದ್ದೇವೆ. ನಿತ್ಯ ಅಲ್ಲಿ ಎಲೆಗಳನ್ನು ತುಂಬಿಸಿ, ಕೊಳೆಸಿ ಗೊಬ್ಬರ ಮಾಡುವ ಯೋಜನೆಯೂ ಇದೆ. ಜೈವಿಕವನದಲ್ಲಿ ಆರು ಚೆಕ್‌ಡ್ಯಾಂಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಅದರ ಜತೆಗೆ 12 ಲಕ್ಷ ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಕಲ್ಯಾಣಿ ಮತ್ತು 8 ಇಂಗು ಗುಂಡಿಗಳನ್ನು ನಿರ್ಮಿಸಿದ್ದೇವೆ. ಪ್ರಾಣಿ ಪಕ್ಷಿಗಳು ಇಲ್ಲಿ ನೀರು ಕುಡಿಯುತ್ತವೆ. ಇನ್ನೊಂದೆಡೆ ವಿ.ವಿ ಆವರಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಲು ನೆರವಾಗುತ್ತದೆ ಎನ್ನುತ್ತಾರೆ ಅವರು.

ಇದರ ಜತೆಗೆ ವಿ.ವಿ ಸಿಬ್ಬಂದಿ, ವಿದ್ಯಾರ್ಥಿಗಳು, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಜಂಟಿಯಾಗಿ ಜಾಗೃತಿ ಅಭಿಯಾನ ಕೈಗೊಳ್ಳಲಿದ್ದೇವೆ. ಕಾಳ್ಗಿಚ್ಚು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ. ಕಾಳ್ಗಿಚ್ಚು ಬಂದಾಗ ಎದುರಿಸುವುದು ಮತ್ತು ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡುತ್ತೇವೆ. ಇವುಗಳ ಜತೆಗೆ  ಜೈವಿಕವನ 1ರಲ್ಲಿ ನೂರಾರು ನವಿಲುಗಳಿವೆ. ಅಲ್ಲಿ ಎತ್ತರೆತ್ತರ ಹುಲ್ಲು ಬೆಳೆದಿವೆ. ಆ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಬಿಬಿಪಿಯಲ್ಲೂ ಕಟ್ಟೆಚ್ಚರ
‘ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೂ (ಬಿಬಿಪಿ) ಕಾಳ್ಗಿಚ್ಚು ಬಾರದಂತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರಾಣಿ ಸಂಗ್ರಹಾಲಯ, ಸಫಾರಿ ಪ್ರದೇಶದಲ್ಲಿ ಬೆಂಕಿಗೆರೆಗಳನ್ನು ನಿರ್ಮಿಸಿ, ಕಾಳ್ಗಿಚ್ಚಿಗೆ ಅವಕಾಶ ಸಿಗದಂತೆ ಕಟ್ಟೆಚ್ಚರ ವಹಿಸಿದ್ದೇವೆ. ಬಿಬಿಪಿ ಆವರಣದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡ ನಿದರ್ಶನಗಳಿಲ್ಲ. ಸಫಾರಿ ಪ್ರದೇಶದಲ್ಲಿ ಇರುವ ಪ್ರಾಣಿಗಳಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿದ್ದೇವೆ’ ಎನ್ನುತ್ತಾರೆ ಬಿಬಿಪಿ ಉಪ ನಿರ್ದೇಶಕ ಕುಶಾಲಪ್ಪ.


ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚು ತಡೆ ಉಪಕರಣಗಳೊಂದಿಗೆ ಅರಣ್ಯ ಸಿಬ್ಬಂದಿ

***
ಕೆಲ ಕಿಡಿಗೇಡಿಗಳು ಆನೆ ಲದ್ದಿಗೆ ಬೆಂಕಿಯ ಸಣ್ಣ ಕಿಡಿ ಇಟ್ಟು ಹೋಗಿ ಬಿಡುತ್ತಾರೆ. ಅದು ನಿಧಾನವಾಗಿ ಮೂರು ನಾಲ್ಕು ಗಂಟೆ ಉರಿದು, ಕೆಂಡದಂತಾಗುತ್ತದೆ. ಗಾಳಿಗೆ ಅರಣ್ಯದಲ್ಲಿನ ಒಣ ಹುಲ್ಲು, ಎಲೆಗಳಿಗೆ ಈ ಕೆಂಡದ ಕಿಡಿ ತಾಗಿದಾಗ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಹೀಗೆ ಕಾಣಿಸಿಕೊಂಡ ಬೆಂಕಿ ವನ್ಯ ಸಂಪತ್ತನ್ನು ನಾಶ ಮಾಡುತ್ತದೆ. ಬೇಸಿಗೆಯಲ್ಲಿ ಅದರ ತೀವ್ರತೆ ಹೆಚ್ಚಿರುತ್ತದೆ.
-ಪ್ರಶಾಂತ ಶಂಬಿನಮಠ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

***
ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ನಲ್ಲಿ ಅಲ್ಲಲ್ಲಿ ನೀರನ್ನು ಸಿಂಚನ ಮಾಡುವುದರಿಂದ ತೇವಾಂಶ ಇರುತ್ತದೆ. ಮರಗಳಿಂದ ಬಿದ್ದ ಎಲೆಗಳನ್ನು ನಿತ್ಯ ತೆರವುಗೊಳಿಸುವ ಮೂಲಕ ಕಾಳ್ಗಿಚ್ಚು ಬಾರದಂತೆ ನೋಡಿಕೊಂಡಿದ್ದೇವೆ. ಉದ್ಯಾನದ ಆವರಣದಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಭದ್ರತಾ ಸಿಬ್ಬಂದಿಯೂ ಕಟ್ಟೆಚ್ಚರವಹಿಸಿ ಕೆಲಸ ಮಾಡುತ್ತಿದ್ದಾರೆ. 
-ಡಾ. ಎಂ.ವಿ. ವೆಂಕಟೇಶ್‌, ನಿರ್ದೇಶಕರು, ತೋಟಗಾರಿಕಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು