ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸೆಲ್‌ ಮಾರ್ಕೆಟ್‌ನಲ್ಲಿ ಬದಲಾವಣೆ ಗಾಳಿ!

Last Updated 1 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ದುರ್ವಾಸನೆ ಮತ್ತುಗಲೀಜಿನಿಂದ ವಾಕರಿಕೆ ಬರಿಸುವ ಶಿವಾಜಿ ನಗರದ ರಸೆಲ್‌ ಮಾರ್ಕೆಟ್‌ನಲ್ಲಿ ಬದಲಾವಣೆಯ ಗಾಳಿ ಬೀಸಲಿದೆ...

ಹೌದು! ಅವ್ಯವಸ್ಥೆಯ ಗೂಡಿನಂತಿರುವ ಪುರಾತನ ಮಾರುಕಟ್ಟೆಯ ಸ್ವಚ್ಛಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೆತ್ತಿಕೊಂಡಿದೆ.

ಪ್ರತಿದಿನ ಸುರಿಯುವ ಟನ್‌ ಗಟ್ಟಲೇ ತರಕಾರಿ ಮತ್ತು ಮಾಂಸದ ಕಸವನ್ನು ತಡೆಗಟ್ಟಿ, ಸ್ವಚ್ಛತೆ ಕಾಪಾಡುವ ಮೂಲಕ ಮಾರುಕಟ್ಟೆಯನ್ನು ಗ್ರಾಹಕ ಸ್ನೇಹಿಯಾಗಿಸಲು ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿರುವ ಅಂಗಡಿ ಮಾಲೀಕರ ಜತೆ ಈ ಕುರಿತು ಬಿಬಿಎಂಪಿ ಅಧಿಕಾರಿಗಳುಸಭೆ ನಡೆಸಿದ್ದಾರೆ.

ಪ್ರತಿ ಅಂಗಡಿಗಳ ಮುಂದೆ ಕಸದ ಡಬ್ಬಿ, ನಿತ್ಯ ಕಸ ವಿಲೇವಾರಿ, ನಿರಂತರ ಸ್ವಚ್ಛತಾ ಕೆಲಸಗಳಿಗೆ ಹೆಚ್ಚುವರಿ ಪೌರ ಕಾರ್ಮಿಕರ ನಿಯೋಜನೆ,ಮಾರ್ಷಲ್‌ಗಳಿಗೆ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆ ಮೇಲುಸ್ತುವಾರಿ,ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಂತಹ ಕೆಲಸಗಳನ್ನು ಪಾಲಿಕೆ ಕೈಗೆತ್ತಿಕೊಂಡಿದೆ.

ಗಬ್ಬು ನಾರುವ ಕೊಳಚೆ ನೀರು, ಕೊಳೆತ ತರಕಾರಿ, ಹಣ್ಣುಗಳ ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿರುವ ಕಸದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.ಇಲ್ಲಿಗೆ ಬಂದರೆವಾಂತಿ ಬರುತ್ತದೆ ಎನ್ನುವುದು ಇಲ್ಲಿಗೆ ಬರುವ ಜನರ ಸಾಮಾನ್ಯ ದೂರಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು, ಆದ್ಯತೆಯ ಮೇರೆಗೆ ಮಾರುಕಟ್ಟೆ ಸ್ವಚ್ಛತೆಯ ಕೆಲಸ ಕೈಗೆತ್ತಿಕೊಂಡಿದ್ದಾರೆ. 'ಇನ್ನು ಮುಂದೆ ಇಂಥ ಪರಿಸ್ಥಿತಿ ಇರಲ್ಲ.ಗ್ರಾಹಕರಿಗೆ ಬದಲಾವಣೆಯ ಹಿತಾನುಭವ ಗೋಚರಿಸಲಿದೆ. ಖುಷಿ, ಖುಷಿಯಾಗಿ ತಿರುಗಾಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಹಿತವಾದ ಅನುಭವವನ್ನು ರಸೆಲ್‌ ಮಾರುಕಟ್ಟೆ ನೀಡಲಿದೆ' ಎನ್ನುವುದು ಅಧಿಕಾರಿಗಳ ಭರವಸೆ.

ಇಲ್ಲಿಯವರೆಗೆ ದಿನಕ್ಕೆ ಮೂರು ಬಾರಿ ಮಾತ್ರ ಪೌರ ಕಾರ್ಮಿಕರು ರಸೆಲ್‌ ಮಾರುಕಟ್ಟೆಯಲ್ಲಿ ಕಸಗೂಡಿಸಿ, ಸ್ವಚ್ಛಗೊಳಿಸುತ್ತಿದ್ದರು. ಈಗ ಹಗಲು ಹೊತ್ತಿನಲ್ಲಿ ಆರು ಬಾರಿ ಮತ್ತು ಸಂಜೆ ಎರಡು ಬಾರಿಯಂತೆ ದಿನಕ್ಕೆ ಒಟ್ಟು ಎಂಟು ಸಲ ಸ್ವಚ್ಛಗೊಳಿಸುತ್ತಿದ್ದಾರೆ. ತರಕಾರಿ ತ್ಯಾಜ್ಯ ಎತ್ತಲು ನಾಲ್ಕು ಮತ್ತು ಮಾಂಸದ ತ್ಯಾಜ್ಯ ಎತ್ತಲು ಎರಡು ಆಟೊ ಟಿಪ್ಪರ್‌ ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಈ ಕೆಲಸಕ್ಕೆ ಹೆಚ್ಚುವರಿ ಪೌರ ಕಾರ್ಮಿಕರು ಮತ್ತುಕಸ ಎತ್ತಲು ಇನ್ನಷ್ಟು ವಾಹನಗಳ ನಿಯೋಜನೆ ಮಾಡುವುದಾಗಿಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಹೇಳುತ್ತಾರೆ.

ವರ್ತಕರ ವಾದವೇನು?

ಪಾಲಿಕೆ ಸದಸ್ಯರು, ಅಧಿಕಾರಿಗಳು ಆಗಾಗ ಇಲ್ಲಿಯ ವರ್ತಕರೊಂದಿಗೆ ಸಭೆ ನಡೆಸುವುದು ಮಾಮೂಲು.ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಾರುಕಟ್ಟೆಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ನಾವೂ ಪದೇ ಪದೇ ಮನವಿ ಮಾಡುತ್ತೇವೆ. ಅವರು ಭರವಸೆ ನೀಡಿ ಮರೆಯುತ್ತಾರೆ. ದಶಕಗಳಿಂದ ಇಲ್ಲಿಯ ಪರಿಸ್ಥಿತಿ ಬದಲಾಗಿಲ್ಲ. ಮುಂದೆಯೂ ಬದಲಾಗಲ್ಲ ಎನ್ನುವ ಭರವಸೆ ಇದೆ ಎನ್ನುವುದು ಇಲ್ಲಿಯ ವರ್ತಕರ ವಾದ.

‘ಇಂತಹ ಎಷ್ಟು ಸಭೆಗಳನ್ನು ನಾವು ನೋಡಿಲ್ಲ. ಸಭೆಗಳಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಸಭೆ ನಡೆಸುತ್ತಾರೆಯೇ ಹೊರತು ಕೆಲಸ ಮಾಡುವುದಿಲ್ಲ. ಅವರ ಭರವಸೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮೊಹಮ್ಮದ್‌ ಇಸ್ಮಾಯಿಲ್‌.

‘ಮೆಟ್ರೊ’ ಜತೆ ಮಾತನಾಡಿದ ಇಲ್ಲಿನ ಬಹುತೇಕ ವರ್ತಕರ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿರಲಿಲ್ಲ.

ರಸೆಲ್‌ ಮಾರ್ಕೆಟ್‌ ಪ್ರವೇಶ ದ್ವಾರದಲ್ಲಿ ಚರಂಡಿಗಳು ಕಟ್ಟಿಕೊಂಡಿರುತ್ತವೆ. ಹಾಗಾಗಿ ಕೊಳಚೆ ನೀರು ಮಾರುಕಟ್ಟೆ ಒಳಗೆ ನುಗ್ಗುತ್ತದೆ. ಇಂತಹ ದುರ್ವಾಸನೆಯಲ್ಲಿ ನಾವು ಹೇಗೆ ಇರಬೇಕು. ಗ್ರಾಹಕರಾದರೂ ಹೇಗೆ ಬರಬೇಕು’ ಎನ್ನುವುದು ಹೂವಿನ ವ್ಯಾಪಾರಿ ಕೃಷ್ಣಮೂರ್ತಿ ಪ್ರಶ್ನೆ.

ಚರಂಡಿ ನೀರಿನ ಸಮಸ್ಯೆ ಬಗೆಹರಿಸುವಂತೆ ನೂರಾರು ಬಾರಿ ಮನವಿ ಮಾಡಿದ್ದೇವೆ. ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ಸುಮ್ಮನಾಗಿದ್ದೇವೆ ಎನ್ನುತ್ತಾರೆ ದಶಕಗಳಿಂದ ಇಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಮಹಮ್ಮದ್‌ ಝಕೀರ್‌ ಹುಸೇನ್‌.

ರಸೆಲ್‌ ಹೆಸರು ಹೇಗೆ ಬಂತು?

ಬೆಂಗಳೂರು ಮಹಾನಗರದ ಹೆಗ್ಗುರುತಿನಂತಿರುವ ರಸೆಲ್‌ ಮಾರುಕಟ್ಟೆಗೆ ಶತಮಾನದ ಇತಿಹಾಸವಿದೆ. ಈ ಮಾರುಕಟ್ಟೆ 1920ರಲ್ಲಿ ಬೆಂಗಳೂರು ಮುನ್ಸಿಪಲ್‌ ಕಮಿಷನ್‌ ಅಧ್ಯಕ್ಷರಾಗಿದ್ದ ಬ್ರಿಟಿಷ್‌ ಅಧಿಕಾರಿ ಟಿ.ಬಿ. ರಸೆಲ್‌ ಅವರ ಕನಸಿನ ಕೂಸು. ಹಾಗಾಗಿ ಅವರ ಹೆಸರನ್ನೇ ಮಾರುಕಟ್ಟೆಗೆ ಇಡಲಾಗಿದೆ. 1927ರಲ್ಲಿ ಮಾರುಕಟ್ಟೆ ನಿರ್ಮಾಣ ಆರಂಭವಾಯಿತು. ಇಟ್ಟಿಗೆ ಮತ್ತು ಗಾರೆಯ ಕಟ್ಟಡ ನಿರ್ಮಾಣಕ್ಕೆ ಆರು ವರ್ಷ ತಗುಲಿತು. 1933ರಲ್ಲಿ ಸರ್‌ ಇಸ್ಮಾಯಿಲ್‌ ಸೇಠ್‌ ಈ ಕಟ್ಟಡ ಉದ್ಘಾಟಿಸಿದ್ದರು.

****

ಕಸ ಸುರಿಯುವವರ ಮೇಲೆ ಕಣ್ಣಿಡುವಂತೆ ಮಾರ್ಷಲ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಮಾರುಕಟ್ಟೆ ಸ್ವಚ್ಛಗೊಳಿಸಿ, ನೈರ್ಮಲ್ಯ ಕಾಪಾಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಮಾರುಕಟ್ಟೆಯ ಸ್ವಚ್ಛತೆಯ ಬಗ್ಗೆ ನಿಯಮಿತವಾಗಿ ತಪಾಸಣೆ ಕೂಡ ನಡೆಸಲಾಗುವುದು
-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ, ಘನ ತ್ಯಾಜ್ಯ ನಿರ್ವಹಣೆ,ಬಿಬಿಎಂಪಿ

***

ಎಲ್ಲೆಂದರಲ್ಲಿ ಬಿದ್ದಿರುವ ಕೋಳಿಗಳ ರಕ್ಕೆ, ಪುಕ್ಕ ಮತ್ತು ಹಸಿ ಮಾಂಸದ ತ್ಯಾಜ್ಯದಿಂದ ಗಬ್ಬು ವಾಸನೆ ಬರುತ್ತಿರುತ್ತದೆ. ಕೊಳಚೆ ನೀರು, ಕಸದ ರಾಶಿ ವಾಕರಿಕೆ ತರಿಸುತ್ತವೆ.ರಸೆಲ್‌ ಮಾರುಕಟ್ಟೆಗೆ ಹೋದರೆ ತಲೆಸುತ್ತು ಬಂದು ವಾಂತಿ ಬರುತ್ತದೆ
– ವನಿತಾ ರಾಮ್‌, ಗ್ರಾಹಕಿ.

***

ಮಾರುಕಟ್ಟೆ ಸ್ವಚ್ಛತೆಗೆ ಬಿಬಿಎಂಪಿ ಮುಂದಾಗಿರುವುದು ಸಂತೋಷದ ವಿಚಾರ. ರಸೆಲ್‌ ಮಾರುಕಟ್ಟೆಗೆ ಹೊಸ ರೂಪ ನೀಡುವ ಕೆಲಸಕ್ಕೆ ನಾವೂ ಕೈಜೋಡಿಸುತ್ತೇವೆ. ನಮ್ಮಿಂದಾಗುವ ಎಲ್ಲ ಸಹಾಯ, ಸಹಕಾರ ನೀಡುತ್ತೇವೆ. ಬಿಬಿಎಂಪಿ ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ವರ್ತಕರು ಅಂಗಡಿ ಮುಂದೆ ಕಸದ ಡಬ್ಬಿ ಇಡುತ್ತಿದ್ದಾರೆ
-ಮೊಹಮ್ಮದ್‌ ಇ್ರದೀಸ್‌ ಚೌಧರಿ, ರಸೆಲ್‌ ಮಾರುಕಟ್ಟೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ

ಇಲ್ಲಿರುವ ವರ್ತಕರು ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡಿದರೆ ಸಾಕು, ಅರ್ಧ ಸಮಸ್ಯೆ ಬಗೆಹರಿಯುತ್ತದೆ. ವರ್ತಕರು ಕಸವನ್ನು ಸರಿಯಾಗಿ ವಿಂಗಡನೆ ಮತ್ತು ವಿಲೇವಾರಿ ಮಾಡದಿರುವುದು ಸಮಸ್ಯೆ ಉಲ್ಬಣಿಸಲು ಪ್ರಮುಖ ಕಾರಣ. ಈ ಬಗ್ಗೆ ಅವರಿಗೆ ತಿಳಿ ಹೇಳಲಾಗಿದೆ
-ರಾಜ್‌ಬಿರ್‌ ಸಿಂಗ್‌, ಮುಖ್ಯ ಮಾರ್ಷಲ್‌

***

ಹಣ್ಣು, ತರಕಾರಿ ಮತ್ತು ಮಾಂಸದ ತ್ಯಾಜ್ಯಗಳನ್ನು ವರ್ತಕರು ಚರಂಡಿ ಮತ್ತು ಮಾರುಕಟ್ಟೆ ಪಕ್ಕ ಸುರಿಯುವುದು ಸಮಸ್ಯೆಗೆ ಕಾರಣ. ನಾವು ಎಷ್ಟು ಮನವಿ ಮಾಡಿಕೊಂಡರು ಅವರು ಕಿವಿಗೊಡುತ್ತಿಲ್ಲ. ಅದಕ್ಕಾಗಿಯೇ ಪ್ರತಿಯೊಂದು ಅಂಗಡಿಯವರಿಗೂ ಕಸದ ಡಬ್ಬಿ ನೀಡುತ್ತಿದ್ದೇವೆ
-ಬಿಬಿಎಂಪಿ ಅಧಿಕಾರಿಗಳು

***

ರಸೆಲ್‌ ಮಾರುಕಟ್ಟೆ ಸುತ್ತಮುತ್ತಲಿನ ನಿವಾಸಿಗಳು, ಚಿಕ್ಕಪುಟ್ಟ ವರ್ತಕರು, ಹೊಟೆಲ್‌ಗಳು ಕೂಡ ಬೆಳಗಿನ ಜಾವ ಇಲ್ಲಿಗೆ ತಂದು ಕಸ ಸುರಿಯುತ್ತಾರೆ. ಅದರ ಅಪವಾದ ನಮ್ಮ ಮೇಲೆ ಬರುತ್ತಿದೆ
-ರಸೆಲ್‌ ಮಾರುಕಟ್ಟೆ ವರ್ತಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT