ಮಂಗಳವಾರ, ಜುಲೈ 14, 2020
24 °C

ಇನ್ನು ವಿಮಾನ ನಿಲ್ದಾಣದಲ್ಲೇ ಸೈಕಲ್‌ ಸವಾರರ ವೀಕೆಂಡ್ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಸೈಕಲ್‌ ಸವಾರರು ಇನ್ನು ಮುಂದೆ ಪ್ರತಿ ಭಾನುವಾರವನ್ನು ಬೆಂಗಳೂರು ವಿಮಾನ ನಿಲ್ದಾಣದ ಸುಮಧುರ ಪರಿಸರದಲ್ಲಿ ಕಳೆಯುವ ಮೂಲಕ ವೀಕೆಂಡ್ ಮಜಾ ಆಸ್ವಾದಿಸಬಹುದು.

ಹೌದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ) ತನ್ನ ಆವರಣವನ್ನು ಬೈಸಿಕಲ್‌ ಸವಾರರ ಸಂಚಾರಕ್ಕೆ ಮುಕ್ತವಾಗಿ ತೆರದಿಟ್ಟಿದೆ. ಪ್ರತಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9.30ರವರೆಗೆ ವಿಮಾನ ನಿಲ್ದಾಣದ ಆವರಣದಲ್ಲಿ ಸೈಕಲ್ ಸವಾರರು ಸಂಚರಿಸಬಹುದು. 

ವೀಕೆಂಡ್‌ನಲ್ಲಿ ಬೆಳಗಿನ ಜಾವ ಸೈಕಲ್ ಏರಿ ವಿಮಾನ ನಿಲ್ದಾಣಕ್ಕೆ ಹೊರಟರೆ ಅಲ್ಲಿಯೇ ರೆಸ್ಟೋರೆಂಟ್‌ಗಳಲ್ಲಿ ಬೆಳಗಿನ ಕಾಫಿ, ತಿಂಡಿ ಸವಿಯಬಹುದು. ಮಧ್ಯಾಹ್ನ ಮತ್ತು ರಾತ್ರಿ ಅಲ್ಲಿಯ ರೆಸ್ಟೋರೆಂಟ್‌ಗಳಲ್ಲಿ ನಾನಾ ಬಗೆಯ ಭೋಜನ ಆಸ್ವಾದಿಸಿ ಮರಳಬಹುದು. 

ಸೈಕಲ್‌ ಸವಾರರ ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣ ಆವರಣದಲ್ಲಿ ಸೈಕಲ್ ಸವಾರಿಯನ್ನು ನಿರ್ಬಂಧಿಸಲಾಗಿತ್ತು. ಈಗ ರಸ್ತೆ ಮತ್ತು ಮೂಲಸೌಕರ್ಯಗಳು ಸುಧಾರಿಸಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಸೈಕಲ್ ಸವಾರರನ್ನು ಸ್ವಾಗತಿಸಲು ಮುಂದಾಗಿದೆ.

ಟ್ಯಾಕ್ಸಿಗಳಂತೆ ನೀಡಿದಂತೆ ಸೈಕಲ್‌ಗಳ ನಿಲುಗಡೆಗೆ ವಿಮಾನ ನಿಲ್ದಾಣದ ಆವರಣದಲ್ಲಿರುವ ‘ದಿ ಕ್ವಾಡ್ ಬೈ ಬೆಂಗಳೂರು’ ಎಂಬಲ್ಲಿ ಪ್ರತ್ಯೇಕ ಸ್ಥಳ ಕಲ್ಪಿಸಲಾಗಿದೆ. ಸೈಕಲ್‌ ಕಾಯಲು ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. 

ಪರಿಸರ ರಕ್ಷಣೆ ದೃಷ್ಟಿಯಿಂದ ಸೈಕಲ್ ಸವಾರಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸೈಕಲ್‌ ಸವಾರರಿಗಾಗಿ ನಮ್ಮ ಕ್ಯಾಂಪಸ್ ತೆರೆಯುವುದು ಸಂತಸ ತಂದಿದೆ. ಸೈಕಲ್‌ ಸವಾರರು ವಿಮಾನ ನಿಲ್ದಾಣ ಆವರಣದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಬಿಐಎಎಲ್‍ ಹೇಳಿದೆ.

‘ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿಯ ವಿಶಾಲವಾದ ರಸ್ತೆಗಳು ಮತ್ತು ಸುಂದರವಾದ ಪರಿಸರ ದೃಶ್ಯಗಳ ನಡುವೆ ಸೈಕಲ್ ಸವಾರಿ ಮಾಡಬೇಕು ಎನ್ನುವುದು ನಮ್ಮ ಬಹುಕಾಲದ  ಆಸೆಯಾಗಿತ್ತು. ಈಗ ಭಾನುವಾರಕ್ಕಾಗಿ ಕಾಯುವಂತಾಗಿದೆ’ ಎಂದು ನಗರದ ಬೈಸಿಕಲ್ ಮೇಯರ್ ಸತ್ಯಾ ಶಂಕರನ್ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು