ಬುಧವಾರ, ಜೂನ್ 3, 2020
27 °C

ಕನ್ನಡನಾಡಿನ ಚಳಿಗಾಲದ ಪ್ರವಾಸಿ ತಾಣಗಳು: ಬಿಸಿಲೂರಿನ ತಣ್ಣನೆಯ ತಾಣಗಳು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ವರ್ಷಾಂತ್ಯಕ್ಕೆ ಕುಟುಂಬ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ಹೈದರಾಬಾದ್‌–ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಹಲವಾರು ಸುಂದರ ತಾಣಗಳಿವೆ. ಅಲ್ಲಲ್ಲಿ ಬೆಟ್ಟಗುಡ್ಡಗಳು ಇದ್ದರೆ, ಕೆಲ ಕಡೆ ಜಲಧಾರೆ ಇದೆ. ಸುಡುವ ಬಿಸಿಲ ಮಧ್ಯೆಯೂ ದಟ್ಟವಾದ ಅರಣ್ಯಪ್ರದೇಶ ತಂಪಾದ ಅನುಭೂತಿ ನೀಡಿದರೆ, ಬೃಹದಾಕಾರದ ಬಂಡೆಗಲ್ಲುಗಳ ರಾಶಿ ಟ್ರೆಕ್ಕಿಂಗ್‌ಗೆ ಪ್ರೇರೇಪಿಸುತ್ತವೆ. ಕಲಬುರ್ಗಿ, ಯಾದಗಿರಿ, ರಾಯಚೂರು ಭಾಗದಲ್ಲಿ ಇಂಥ ಖುಷಿಯ ತಾಣಗಳನ್ನು ಕಾಣಬಹುದು.

ಕಲಬುರ್ಗಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಚಿಂಚೋಳಿ ಅರಣ್ಯ ಪ್ರದೇಶದತ್ತ ಸಾಗಿದರೆ, ಸಾಲೇಬೀರನಹಳ್ಳಿ ಕೆರೆ, ಚಂದ್ರಂಪಳ್ಳಿ ಜಲಾಶಯ ಮತ್ತು ಗೊಟ್ಟಂಗೊಟ್ಟ ಅರಣ್ಯ ಪ್ರದೇಶ ಕಣ್ಮನ ಸೆಳೆಯುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಪ್ರಾಣಿಪಕ್ಷಿಗಳ ಕುರಿತ ಮಾಹಿತಿ ಮತ್ತು ಜಲಾಶಯದ ಮಹತ್ವ ಅರಿಯಬಹುದು. ಚಿಂಚೋಳಿಗೆ ತಲುಪಲು ಸರ್ಕಾರಿ ಬಸ್‌ ಸೌಲಭ್ಯವಿದೆ. ಅರಣ್ಯಪ್ರದೇಶ, ಜಲಾಶಯಕ್ಕೆ ಸ್ವಂತ ವಾಹನವಿದ್ದರೆ ಉತ್ತಮ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಹೊರವಲಯದ ನಜರಾಪೂರ ಗ್ರಾಮದ ರಸ್ತೆ ಬಳಿಯಿರುವ ಧಬ ಧಬಿ ಜಲಪಾತವು ಆಕರ್ಷಕ ತಾಣಗಳಲ್ಲೊಂದು. ಮಳೆಗಾಲದಲ್ಲಿ ಮಲೆನಾಡಿನಲ್ಲಿ ವಿಹರಿಸಿದಂತಹ ಅನುಭವ ನೀಡುತ್ತದೆ. ಚಳಿಗಾಲದಲ್ಲಿ ಸಣ್ಣಪುಟ್ಟ ಮತ್ತು ದೊಡ್ಡ ಕಲ್ಲುಬಂಡೆಗಳಲ್ಲಿ ಹೆಜ್ಜೆಯಿಡುತ್ತ ನಡೆಯುವುದೆ ಸೊಗಸು. ಇಲ್ಲಿ ಎಲ್ಲಿಯೂ ಮೊಬೈಲ್‌ಫೋನ್ ನೆಟ್‌ವರ್ಕ್ ಸಿಗುವುದಿಲ್ಲ. ಒಂದರ್ಥದಲ್ಲಿ ಜಗತ್ತಿನ ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡು ಪರಿಸರದಲ್ಲಿ ಲೀನವಾದವೆಂದೇ ಅರ್ಥ. ಯಾದಗಿರಿ, ಕಲಬುರ್ಗಿಯಿಂದ ಗುರುಮಠಕಲ್‌ಗೆ ಬಸ್ ಸೌಲಭ್ಯವಿದೆ. ಸೇಡಂನಿಂದಲೂ ಸಾಕಷ್ಟು ಬಸ್‌ಗಳ ಸೌಕರ್ಯವಿದೆ. ನಜರಾಪುರಕ್ಕೆ ತೆರಳಲು ಖಾಸಗಿ ವಾಹನಗಳು ಸಿಗುತ್ತವೆ. ಜಲಪಾತದತ್ತ ಹೋಗಲು ಬಾಡಿಗೆಗೆ ಆಟೊಗಳೂ ಸಿಗುತ್ತವೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಬಳಿಯಿರುವ ಜಲದುರ್ಗ ಕೋಟೆಗೆ ಭೇಟಿ ನೀಡಿದರೆ, ದೂರದೂರದವರೆಗೆ ಬಂಡೆಗಲ್ಲುಗಳ ರಾಶಿಯನ್ನೇ ಕಾಣಬಹುದು. ಪಾಳು ಬಿದ್ದ ಕೋಟೆಯ ಅವಶೇಷಗಳು, ಮುರಿದು ಬಿದ್ದ ಗೋಡೆಗಳ ಮಧ್ಯೆ ಹೆಜ್ಜೆ ಹಾಕುತ್ತ ನಡೆಯುವುದೇ ಸೊಗಸು. ಇಲ್ಲಿ ವಿಶಾಲ ಪ್ರದೇಶವಿದ್ದು, ಮನೆಯಿಂದ ಆಹಾರವನ್ನು ಮತ್ತು ಹೋಟೆಲ್‌, ಅಂಗಡಿಗಳಿಂದ ತಿಂಡಿಯ ಪೊಟ್ಟಣಗಳನ್ನು ಒಯ್ದು ಒಂದೆಡೆ ಕೂತು ಸವಿಯಬಹುದು.

ಮಾನ್ವಿ ತಾಲ್ಲೂಕಿನ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ರಾಜಲಬಂಡಾ ಗ್ರಾಮಕ್ಕೆ ತೆರಳಿದರೆ, ಅಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಸದಾ ನೀರು ಹರಿಯುವ ಕಾರಣ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. 31 ಅಡಿ ಎತ್ತರ ಮತ್ತು 2,690 ಅಡಿ ಉದ್ದನೆಯ ಅಣೆಕಟ್ಟೆಯ ತಡೆಗೋಡೆಯ ಮೇಲಿನಿಂದ ಬೀಳುವ ಜಲರಾಶಿ ನೋಡುವುದೇ ಕಣ್ಣಿಗೆ ಹಬ್ಬ. ಸಮೀಪದಲ್ಲೇ ಪ್ರವಾಸಿ ಮಂದಿರ ಮತ್ತು ಉದ್ಯಾನವಿದ್ದು, ಅಲ್ಲಿ ಕೆಲ ಹೊತ್ತು ವಿರಮಿಸಬಹುದು.

(ಪೂರಕ ಮಾಹಿತಿ: ಬಸವರಾಜ ಭೋಗಾವತಿ ಮಾನ್ವಿ, ಎಂ. ಪಿ. ಚಪೆಟ್ಲಾ – ಗುರುಮಠಕಲ್, ಕಲ್ಮೇಶ ಹ. ತೋಟದ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು