ಸೋಮವಾರ, ಅಕ್ಟೋಬರ್ 18, 2021
24 °C

ಉದಾರೀಕರಣಕ್ಕೆ 30 ವರ್ಷ: ವ್ಯಾಪ್ತಿ ವಿಸ್ತರಿಸಿದ ವಿಜ್ಞಾನ–ತಂತ್ರಜ್ಞಾನ

ಶ್ರೀಕಾಂತ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಕಳೆದ ಮೂರು ದಶಕಗಳಲ್ಲಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಬಹಳಷ್ಟು ಬದಲಾಗಿವೆ. ಈ ಬದಲಾವಣೆಗಳಲ್ಲಿ ಆರ್ಥಿಕ ಉದಾರೀಕರಣದ ನೇರ ಪರಿಣಾಮಗಳ ಜೊತೆಗೆ ಪ್ರಪಂಚದಾದ್ಯಂತ ಆಗಿರುವ ವ್ಯಾಪಕ ಬದಲಾವಣೆಗಳ ಪರಿಣಾಮಗಳೂ ಸೇರಿವೆ (ಉದಾಹರಣೆಗೆ, 1991 world wide web ನ ಪ್ರಾರಂಭ ವರ್ಷ ಕೂಡ. ಇಂಟರ್ನೆಟ್ ಸೃಷ್ಟಿಸಿರುವ ಅಂತರ ಸಂಪರ್ಕದ ತೀವ್ರತೆಯು, ಸಂಶೋಧನಾ ಕ್ಷೇತ್ರವನ್ನೂ ಆಳವಾಗಿ ಪ್ರಭಾವಿಸಿದೆ). ಈ ಎಳೆಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸದೆ, ವೈಜ್ಞಾನಿಕ ಸಂಶೋಧನಾ ಕ್ಷೇತ್ರವನ್ನು ಮುಖ್ಯವಾಗಿ ಮನಸ್ಸಿನಲ್ಲಿಟ್ಟುಕೊಂಡು, ಅದರ ವಿಸ್ತಾರ, ರೂಪುರೇಷೆಗಳು, ಮೌಲ್ಯಗಳು ಮತ್ತು ಆದ್ಯತೆಗಳು ಕಳೆದ ಮೂರು ದಶಕಗಳಲ್ಲಿ ಹೇಗೆ ಬದಲಾಗಿವೆಯೆನ್ನುವುದರ ಚಿತ್ರಣ ಈ ಲೇಖನದ ಉದ್ದೇಶ.

ಉದಾರೀಕರಣದ ಹಿಂದಿನ ದಶಕಗಳಲ್ಲಿ ವೈಜ್ಞಾನಿಕ ಸಂಶೋಧನೆಗೆ ಕೊಡಲಾದ ಪೋಷಣೆಗೆ ಮುಖ್ಯ ಆಧಾರಗಳು ಎರಡು. ಒಂದು, ರಾಷ್ಟ್ರದ ಭದ್ರತೆ, ರಾಷ್ಟ್ರನಿರ್ಮಾಣ, ಮತ್ತು ಅಭಿವೃದ್ಧಿಗೆ ಅಗತ್ಯವಾದ ಜ್ಞಾನ ಮತ್ತು ಸಾಮರ್ಥ್ಯಗಳ ಗಳಿಕೆ. ಎರಡು, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳು ಅಪೇಕ್ಷಣೀಯ ಸಾಮಾಜಿಕ ಮೌಲ್ಯಗಳೆಂಬ ನಿಲುವು. 

ಉದಾರೀಕರಣದ ನಂತರದ ದಶಕಗಳಲ್ಲಿಯೂ ಈ ಆಲೋಚನೆಗಳು, ವಿಶೇಷವಾಗಿ ಮೊದಲನೆಯ ಗಣನೆ, ದೇಶದ ವಿಜ್ಞಾನ, ತಂತ್ರಜ್ಞಾನ ಸಂಬಂಧಿತ ನಿಲುವುಗಳನ್ನು ಪ್ರಭಾವಿಸಿವೆ. ಇಂದಿಗೂ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ವೆಚ್ಚದಲ್ಲಿ ರಕ್ಷಣೆ, ಅಣುಶಕ್ತಿ, ಬಾಹ್ಯಾಕಾಶ ವಿಭಾಗಗಳ ಪಾಲು ಸರಿಸುಮಾರು ಶೇಕಡಾ 60ರಷ್ಟಿದೆ. ಕೃಷಿ ಸಂಶೋಧನೆಯ ಪಾಲು ಶೇಕಡಾ 10ರಷ್ಟು. ಈ ಅಂಶಗಳ ಜೊತೆಗೆ ಈಚೆಗೆ (ಕಳೆದ 15–20 ವರ್ಷಗಳಲ್ಲಿ) ಸೇರಿರುವ ಮುಖ್ಯ ಪರಿಗಣನೆ, ವೈಜ್ಞಾನಿಕ ಸಂಶೋಧನೆಯ ಉತ್ಪನ್ನಗಳು ಮಾರುಕಟ್ಟೆಯ ಮೂಲಕ ಸಮಾಜದ ಅವಶ್ಯಕತೆಗಳನ್ನು ನೇರವಾಗಿ ಪೂರೈಸಬೇಕೆನ್ನುವ ಮತ್ತು ಆದಾಯಕ್ಕೆ ಮೂಲವಾಗಬೇಕೆನ್ನುವ ನಿರೀಕ್ಷೆ.

ಕಳೆದ 30 ವರ್ಷಗಳಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಹತ್ತುಪಟ್ಟಾಗಿ ಬೆಳೆದಿದೆ. ಇದರ ನೇರ ಪರಿಣಾಮವಾಗಿ, 90ರ ದಶಕದ ಎರಡನೆಯ ಭಾಗದಿಂದ ಶುರುವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೂ ಅದೇ ಅಳತೆಯಲ್ಲಿ ಸಂಪನ್ಮೂಲಗಳು ಹೆಚ್ಚಿವೆ. ಇದರಿಂದ ಸಂಶೋಧನಾ ಕ್ಷೇತ್ರದಲ್ಲಿ ಹಲವು ಗುಣಾತ್ಮಕ ಬದಲಾವಣೆಗಳಾಗಿವೆ ಮತ್ತು ಅದರ ವಿಸ್ತಾರವೂ ಹೆಚ್ಚಿದೆ. ಹಿಂದಿನ ತಲೆಮಾರಿನಲ್ಲಿ ಸಾಮಾನ್ಯ ಅನುಭವವಾಗಿದ್ದ ಸಂಪನ್ಮೂಲಗಳ ಕೊರತೆ, ತಕ್ಕ ವೈಜ್ಞಾನಿಕ ಉಪಕರಣಗಳ ಅಭಾವ, ಇತ್ಯಾದಿ ಇತಿಮಿತಿಗಳು ದೇಶದ ಹಲವು ಸಂಶೋಧನಾ ಸಂಸ್ಥೆಗಳಲ್ಲಿ ಇಂದು ಇಲ್ಲ. ಇಂತಹ ಸಂಸ್ಥೆಗಳಲ್ಲಿನ ಸಂಶೋಧಕರು, ಸಾಮಾನ್ಯವಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಪಂಚದ ಯಾವುದೇ ಸಂಸ್ಥೆಗಳಲ್ಲಿ ನಿರೀಕ್ಷಿಸಬಹುದೋ ಅದೇ ಮಟ್ಟದ ಸೌಕರ್ಯಗಳು ಮತ್ತು ಉಪಕರಣಗಳನ್ನು ಇಂದು ನಿರೀಕ್ಷಿಸಬಹುದು.

ಈ ಮಾತು ಸಂಶೋಧನೆಯಲ್ಲಿ ತೊಡಗಿದ ಎಲ್ಲ ಸಂಸ್ಥೆಗಳಿಗೂ ಅನ್ವಯಿಸದಿದ್ದರೂ, ಇದು ಅನ್ವಯಿಸುವ ಮಟ್ಟದ ಸಂಸ್ಥೆಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆಗಳ ಪ್ರಮಾಣ ಬೆಳೆದಿದೆ. ಈ ವಿಚಾರವನ್ನು ಹಲವಾರು ಅಂಕಿಅಂಶಗಳು ವಿಶದಗೊಳಿಸುತ್ತವೆ– ಉನ್ನತ ಮಟ್ಟದಲ್ಲಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ತೊಡಗಿರುವ ಹಲವಾರು ಹೊಸ ಐಐಟಿ, ಐಐಎಸ್‌ಇಆರ್‌ ಇತ್ಯಾದಿ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು, ಒಟ್ಟಾರೆ ಸಂಶೋಧಕರ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟಾದರೂ ಹೆಚ್ಚಾಗಿದೆ. ಡಾಕ್ಟರೇಟ್ ಪದವೀಧರರ ಸಂಖ್ಯೆ 2018ರಲ್ಲಿ 24000 ಮೀರಿದ್ದು, ಕೇವಲ 7 ವರ್ಷಗಳ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಿದೆ. ಕಳೆದ ಎರಡು ದಶಕಗಳಲ್ಲಿ ಭಾರತೀಯ ವಿಜ್ಞಾನಿಗಳು ಪ್ರಕಟಿಸಿರುವ ವೈಜ್ಞಾನಿಕ ವರದಿಗಳ ಸಂಖ್ಯೆ (ಬೇರೆ ಬೇರೆ ಸಂಕಲನಗಳ ಆಧಾರವಾಗಿ) ಮೂರರಿಂದ ಎಂಟುಪಟ್ಟು ಹೆಚ್ಚಿವೆ. ಪ್ರಪಂಚಾದ್ಯಂತ ವೈಜ್ಞಾನಿಕ ವರದಿಗಳ ಸಂಖ್ಯೆ ಹೆಚ್ಚುತ್ತಾ ಬಂದಿದ್ದರೂ ಭಾರತದಲ್ಲಿ ಆಗಿರುವ ಹೆಚ್ಚಳ ಆ ಬೆಳವಣಿಗೆಯನ್ನು ಮೀರಿದ್ದು, ಪ್ರತಿಷ್ಠಿತ ಪ್ರಕಾಶನಗಳಲ್ಲೂ ಕೂಡ ಭಾರತದ ಪಾಲು ಹೆಚ್ಚುತ್ತಾ ಬಂದಿದೆ. 

ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಎಂಡ್‌ ಡಿ) ಕ್ಷೇತ್ರಗಳಲ್ಲಿ ಒಟ್ಟು ಹೂಡಿಕೆ (ಸರ್ಕಾರ ಮತ್ತು ಖಾಸಗಿ ವಲಯಗಳು ಸೇರಿ) ಹೆಚ್ಚಾಗಿದ್ದರೂ, ಶೇಕಡಾವಾರು ಲೆಕ್ಕದಲ್ಲಿ ನೋಡಿದಾಗ ಕಾಣುವ ಚಿತ್ರ ಬೇರೆಯಾಗಿದೆ. 90ರ ದಶಕದಲ್ಲಿ ಜಿಡಿಪಿಯ ಶೇ 0.7ರಷ್ಟಿದ್ದ ಈ ಬಜೆಟ್‌ ನಡುವಿನ ವರ್ಷಗಳಲ್ಲಿ ಕ್ರಮೇಣ ಏರಿ, ಎಂಟು ವರ್ಷಗಳ ಹಿಂದೆ ಶೇ 0.91ರಷ್ಟಾಗಿದೆ. ಕಳೆದ 7 ವರ್ಷಗಳಲ್ಲಿ ಶೇ 0.7ರಲ್ಲಿ ಸ್ಥಗಿತವಾಗಿದೆ. ಇದರಲ್ಲಿ ಖಾಸಗಿ ವಲಯದ ಕಾಣಿಕೆ ಕಾಲುಭಾಗದಿಂದ ಸುಮಾರು ಮೂರರಲ್ಲೊಂದು ಭಾಗದವರೆಗೆ ಹೆಚ್ಚಿದೆ. ತಂತ್ರಜ್ಞಾನ ಆಧಾರಿತವಾದ, ಅಭಿವೃದ್ಧಿಶೀಲ ಸಮಾಜಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಪರಿಶೀಲಿಸಿರುವ ತಜ್ಞರ ಪ್ರಕಾರ, ಅಪೇಕ್ಷಣೀಯವಾದ ಹೂಡಿಕೆಯ ಮಟ್ಟ ಜಿಡಿಪಿಯ  ಶೇ 3ರಷ್ಟು; ಅದರಲ್ಲಿ ಖಾಸಗಿ ವಲಯದ ಪಾಲು ಶೇ 65ರಷ್ಟು. ವಿಜ್ಞಾನ ವಲಯಕ್ಕೆ ನೀಡುವ ಅನುದಾನವು ಜಿಡಿಪಿಯ ಶೇ 2ರಷ್ಟು ಆದಷ್ಟು ಶೀಘ್ರವಾಗಿ ತಲುಪಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ. ಈ ಗುರಿಗಳು ಸದ್ಯದಲ್ಲಿ ಬಹು ದೂರದಲ್ಲಿವೆ.


ಶ್ರೀಕಾಂತ ಶಾಸ್ತ್ರಿ

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರ– ಸಂಶೋಧನಾ ವಿಷಯಗಳನ್ನು ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಗಳೆಂದು ವಿಂಗಡಿಸಿದಾಗ, ಸರ್ಕಾರಗಳು ಮುಖ್ಯವಾಗಿ ಮೂಲಭೂತ ಸಂಶೋಧನೆಗೆ ಬೆಂಬಲ ಕೊಡಬೇಕೆನ್ನುವುದು ತಜ್ಞರ ಅಭಿಪ್ರಾಯ. ಇದರ ತರ್ಕ ಹೀಗೆ: ತಂತ್ರಜ್ಞಾನವನ್ನು ಅವಲಂಬಿಸಿದ ಆರ್ಥಿಕ ವ್ಯವಸ್ಥೆಗಳಲ್ಲಿ ಮೂಲಭೂತ ವಿಜ್ಞಾನದಲ್ಲಾಗುವ ಬೆಳವಣಿಗೆಗಳಿಗೆ ಸ್ಪಷ್ಟವಾದ ಪಾತ್ರವಿದೆಯೆಂಬುದು ಚಾರಿತ್ರಿಕ ಉದಾಹರಣೆಗಳ ಮೂಲಕವೂ, ಪರಿಣತರ ವಿಶ್ಲೇಷಣೆಗಳ ಮೂಲಕವೂ ಮುಟ್ಟಲಾಗಿರುವ ತೀರ್ಮಾನ. ಆದರೆ, ಮೂಲಭೂತ ಸಂಶೋಧನೆಗಳ ಆರ್ಥಿಕ ಫಲ ಹೊಮ್ಮುವ ದಾರಿ ಬಳಸು, ದೇಶ, ಕಾಲ ಸೀಮಿತವಲ್ಲದ್ದು. ಇದಕ್ಕೆ ಬೇಕಾದ ಬೆಂಬಲವನ್ನು, ಹೂಡಿಕೆಯ ಮೇಲಿನ ಪ್ರತಿಫಲವನ್ನು ಸದ್ಯದಲ್ಲೇ ನಿರೀಕ್ಷಿಸುವ, ಖಾಸಗಿ ವಲಯದಿಂದ ನಿರೀಕ್ಷಿಸಲಾಗದು. ಮೂಲ ವಿಜ್ಞಾನಕ್ಕೆ ಬೇಕಾದ ಬೆಂಬಲವನ್ನು ಕೊಡುವ ಪಾತ್ರ ದೀರ್ಘಕಾಲಿಕ ದೃಷ್ಟಿಯುಳ್ಳ ಸರ್ಕಾರಗಳಿಗೆ ಸೇರಿದ್ದು.

ವರ್ತಮಾನ ದೃಷ್ಟಿಯಿಂದ ನಿರೀಕ್ಷಿಸಬಹುದಾದದ್ದೇನೂ ಇಲ್ಲವೆಂದಲ್ಲ. ಆರ್ಥಿಕತೆಯ ಕಣ್ಣು ಕಪ್ಪಡವನ್ನು ಒಂದು ಕ್ಷಣ ಕಳಚಿ ನೋಡಿದಲ್ಲಿ, ಮೂಲಭೂತ ವಿಜ್ಞಾನ ಸಮುದಾಯವನ್ನು ಒಂದು ಸಾಂಸ್ಕೃತಿಕ ಸಂಪತ್ತಾಗಿ ಕಾಣಬಹುದು. ಇದಕ್ಕಿಂತ ಪ್ರತ್ಯಕ್ಷವಾದ ಗಳಿಕೆ, ಆಧುನಿಕ ಸಂಶೋಧನಾ ವಿಧಾನಗಳು ಮತ್ತು ವಿಚಾರಗಳಲ್ಲಿ ಡಾಕ್ಟರೇಟ್ ವಿದ್ಯಾಥಿಗಳಿಗೆ ಒದಗುವ ತರಬೇತಿ. ಹೀಗೆ ತರಬೇತಿ ಪಡೆದ ಪದವೀಧರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಕ್ರಿಯರಾಗಬಹುದು. ಮೂಲಭೂತ ವೈಜ್ಞಾನಿಕ ಪರಿಣತಿಯ ಸಾಮೀಪ್ಯವನ್ನು ಲಾಭಕರವಾಗಿ ಬಳಸುವ ಇತರ ಮಾರ್ಗಗಳೂ ಉಂಟು. ಆದರೆ, ಈ ದೃಷ್ಟಿಕೋನಕ್ಕೆ ಪ್ರಾಶಸ್ತ್ಯ ಈಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. 

ಇತ್ತೀಚಿನ ವರ್ಷಗಳಲ್ಲಿ, ಭಾರತದ ಆರ್‌ ಎಂಡ್‌ ಡಿ   ಸಮುದಾಯವನ್ನು ಅನ್ವಯಿಕ ಸಂಶೋಧನೆಯಲ್ಲಿ, ತಾಂತ್ರಿಕ ಉತ್ಪನ್ನಗಳ ನಿರ್ಮಾಣದಲ್ಲಿ ತೊಡಗಲು ಹಲವು ರೀತಿಗಳಲ್ಲಿ ಉತ್ತೇಜಿಸಲಾಗುತ್ತಿದೆ. ಈ ಚಟುವಟಿಕೆಗಳು ಸರ್ಕಾರದ ಸಂಶೋಧನಾ ವಿಭಾಗಗಳಲ್ಲಿ (ಉದಾ. ಬಾಹ್ಯಾಕಾಶ), ಮತ್ತು ಖಾಸಗಿ ವಲಯದ ಆರ್‌ ಎಂಡ್‌ ಡಿ ವಿಭಾಗಗಳಲ್ಲಿ (ಉದಾ. ಔಷಧ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಹನ ಉದ್ಯಮ) ಗಣನೀಯ ಪ್ರಮಾಣದಲ್ಲಿ ನಡೆದುಬಂದಿದೆ (ಉದಾ. ಪ್ರಪಂಚದಾದ್ಯಂತ ಸುದ್ದಿ ಮಾಡಿದ ಮಂಗಳಯಾನ) ಮತ್ತು ಬೆಳೆದಿವೆ. ಆರ್‌ ಎಂಡ್‌ ಡಿ ವಿಭಾಗದ ಬಗ್ಗೆ ಚರ್ಚಿಸಬೇಕಾದ್ದು ಬಹಳಷ್ಟಿದ್ದರೂ, ಇಲ್ಲಿ ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳನ್ನು ವಿವರಿಸಲಾಗುತ್ತಿದೆ. ಅನ್ವಯಿಕ ಸಂಶೋಧನೆಯ ದಿಕ್ಕಿನಲ್ಲಿ ಪೇಟೆಂಟ್ ಪಡೆಯುವಿಕೆ, ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು (incubation centres) ಮತ್ತು ಇತ್ತೀಚಿಗೆ ನವೋದ್ಯಮಗಳ ಸ್ಥಾಪನೆ, ಇತ್ಯಾದಿ ಆಯಾಮಗಳು ಐಐಟಿ, ಸಿಎಸ್‌ಐಆರ್‌ ಮತ್ತಿತರ ಸಂಶೋಧನಾ ಕೇಂದ್ರಗಳ ಕಾರ್ಯ ವ್ಯಾಪ್ತಿಯಲ್ಲಿ ಸೇರಿ ಬರುತ್ತಿವೆ. ಪ್ರಸ್ತುತ ಕಡಿಮೆ ಮಟ್ಟದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಗಳ ಉತ್ತೇಜನ ಸೂಕ್ತ.

ಆದರೆ, ಈ ಸಂಸ್ಥೆಗಳ ಸಂಶೋಧನೆ, ಶೈಕ್ಷಣಿಕ, ಸಾಮಾಜಿಕ ಆಯಾಮಗಳು ಪರಸ್ಪರ ಪೂರಕವಾಗಲು ಬೇಕಾದ ಸಮತೋಲನವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅನ್ವಯಿಕ ಸಂಶೋಧನೆಯ ಬೆಳವಣಿಗೆ ಮೂಲಭೂತ ಸಂಶೋಧನೆಗೆ ಅಡಚಣೆಯಾಗಿ ಬೆಳೆಯಬಾರದೆಂಬುದೊಂದು ಕಾಳಜಿ. ಅನ್ವಯಿಕ ಸಂಶೋಧನೆಗೆ ಬೇಕಾದ ಸಂಪನ್ಮೂಲಗಳು ಸರ್ಕಾರ ಮತ್ತು ಖಾಸಗಿ ವಲಯಗಳ ಹೆಚ್ಚುವರಿ ಹೂಡಿಕೆಗಳಿಂದ ಬರುವುದು ಅಪೇಕ್ಷಣೀಯ. ಈ ದಿಕ್ಕಿನಲ್ಲಿ ಉದ್ಯಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಮೂಲಕ ಸಂಶೋಧನೆಗೆ ಬೆಂಬಲ ಕೊಡಬಹುದೆಂಬ ಇತ್ತೀಚಿನ ಬೆಳವಣಿಗೆ ಸ್ವಾಗತಾರ್ಹ.

ಗಮನಾರ್ಹವಾದ ಇತರ ಕೆಲವು ಅಂಶಗಳು ಹೀಗಿವೆ: ವಿಜ್ಞಾನ ಸಂಶೋಧನೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ರಾಜ್ಯ ಸರ್ಕಾರಗಳು ನೀಡುವ ಬೆಂಬಲ ಕೂಡ ಹೆಚ್ಚುವುದು ಅಪೇಕ್ಷಣೀಯ. ವಿಜ್ಞಾನ ವೇದಿಕೆ, ಬೆಂಗಳೂರು, ಅನ್ನು ಸ್ಥಾಪಿಸುವಲ್ಲಿ ಕರ್ನಾಟಕ ಸರ್ಕಾರದ ಪಾಲುದಾರಿಕೆ ಈ ರೀತಿಯ ಬೆಂಬಲಕ್ಕೆ ಒಳ್ಳೆಯ ಉದಾಹರಣೆ.

ವೈಜ್ಞಾನಿಕ ಸಂಶೋಧನೆಯನ್ನು ಉನ್ನತ ಮಟ್ಟದಲ್ಲಿ ಸಾಧಿಸುವುದರ ಜೊತೆಗೆ, ಸಮಾಜಕ್ಕೆ ಅದರ ಆಸಕ್ತಿಕರ ಆಗುಹೋಗುಗಳನ್ನು ತಿಳಿಸುವುದೂ ಬಹು ಮುಖ್ಯ. ಈ ಸಂವಹನದಲ್ಲಿ ಮಾಧ್ಯಮ, ಸರ್ಕಾರ, ವಿಜ್ಞಾನ ಸಂಸ್ಥೆಗಳ ಆಸಕ್ತಿ ಹೆಚ್ಚಾಗುತ್ತಾ ಬಂದಿರುವುದು ಸಂತೋಷದಾಯಕ. ದೇಶದ ಒಟ್ಟಾರೆ ಸಂಶೋಧನಾ ಪ್ರಕ್ರಿಯೆಯ ವಿಸ್ತಾರ ಬೆಳೆದಿದ್ದರೂ, ಇದರಲ್ಲಿ ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆ ಕಾಳಜಿಗೆ ಮೂಲವಾಗಿದೆ. ಇದಕ್ಕೆ ಪರಿಹಾರವಾಗಿ, ಹೊಸ ಶಿಕ್ಷಣ ನೀತಿಯ ಶಿಫಾರಸಿನಂತೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ಇನ್ನಷ್ಟು ಪ್ರೋತ್ಸಾಹಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆಯ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.

ಡಾಕ್ಟರೇಟ್ ಮತ್ತಿತರ ಪದವೀಧರರ ಸಂಖ್ಯೆ ಬೆಳೆದಂತೆ ಸೂಕ್ತ ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ಕಾಳಜಿಯೂ ಬೆಳೆದಿದೆ. ಖಾಸಗಿ ವಲಯದಲ್ಲಿ ಸಂಶೋಧನೆ ಮಟ್ಟದ ಉದ್ಯೋಗಾವಕಾಶಗಳು ಹೆಚ್ಚುವುದು, ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಇದಕ್ಕೆ ಪರಿಹಾರಗಳಾಗಬಹುದು. ಒಟ್ಟಾರೆ, ವಿಜ್ಞಾನ ಮತ್ತು ತಂತ್ರಜ್ಞಾನ ವಲಯವು ಕಳೆದ ಮೂರು ದಶಕಗಳಲ್ಲಿ ಹಲವು ಪಟ್ಟು ಬೆಳೆದು, ಹೊಸ ಆಯಾಮಗಳಲ್ಲಿ ಹರಡಿದೆ. ಈ ಬೆಳವಣಿಗೆಯಲ್ಲಿ ತೃಪ್ತಿದಾಯಕವಾದ ಹಲವು ಅಂಶಗಳಿದ್ದರೂ, ಮುಂದೆ ಎದುರಿಸಬೇಕಾದ ಗಂಭೀರ ಪ್ರಶ್ನೆಗಳೂ, ಸವಾಲುಗಳೂ ಇವೆ.

***

ಉನ್ನತ ಮಟ್ಟದಲ್ಲಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ತೊಡಗಿರುವ ಹಲವಾರು ಹೊಸ ಐಐಟಿ, ಐಐಎಸ್‌ಇಆರ್‌ ಇತ್ಯಾದಿ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು, ಒಟ್ಟಾರೆ ಸಂಶೋಧಕರ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟಾದರೂ ಹೆಚ್ಚಾಗಿದೆ. ಡಾಕ್ಟರೇಟ್ ಪದವೀಧರರ ಸಂಖ್ಯೆ 2018ರಲ್ಲಿ 24000 ಮೀರಿದ್ದು, ಕೇವಲ 7 ವರ್ಷಗಳ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಿದೆ. ಕಳೆದ ಎರಡು ದಶಕಗಳಲ್ಲಿ ಭಾರತೀಯ ವಿಜ್ಞಾನಿಗಳು ಪ್ರಕಟಿಸಿರುವ ವೈಜ್ಞಾನಿಕ ವರದಿಗಳ ಸಂಖ್ಯೆ (ಬೇರೆ ಬೇರೆ ಸಂಕಲನಗಳ ಆಧಾರವಾಗಿ) ಮೂರರಿಂದ ಎಂಟು ಪಟ್ಟು ಹೆಚ್ಚಿವೆ.

ಲೇಖಕ: ಪ್ರಾಧ್ಯಾಪಕ, ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಸರ್ಚ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು