ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ವ್ಯಾಪಾರದ ಹೊಸ ಮಾದರಿ: ಬೆಳವಣಿಗೆಯ ಬಗೆಯೇ ಅಚ್ಚರಿ

ನವೋದ್ಯಮಗಳ ಕಥನ
Last Updated 25 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಆ್ಯಪ್ ಮೂಲಕ ಜನರಿಗೆ ಸರಕು ಮತ್ತು ಸೇವೆ ಒದಗಿಸುವುದಕ್ಕಾಗಿ ಹುಟ್ಟಿಕೊಂಡ ಭಾರತದ ಹಲವು ಕಂಪನಿಗಳು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಉದ್ಯಮ ಸಂಸ್ಥೆಗಳಾಗಿ ಬೆಳೆದಿವೆ. ಸಾವಿರಾರು ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸುವುದಲ್ಲದೆ, ಲಕ್ಷಾಂತರ ಮಂದಿಗೆ ಉದ್ಯೋಗವನ್ನೂ ನೀಡಿವೆ. ಜಾಗತೀಕರಣ ಮತ್ತು ಡಿಜಿಟಲೀಕರಣದ ಸಾಧ್ಯತೆಗಳನ್ನು ಇಂತಹ ಕಂಪನಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ.ಒಯೊ, ಫ್ಲಿಪ್‌ಕಾರ್ಟ್‌, ಪೇಟಿಎಂನಂತಹ ಕಂಪನಿಗಳು ಸಣ್ಣ ಸ್ಟಾರ್ಟ್‌ಅಪ್‌ಗಳ ರೀತಿ ಕಾರ್ಯ ಆರಂಭಿಸಿದವು. ಆದರೆ, ಅತಿ ಕಡಿಮೆ ಅವಧಿಯಲ್ಲಿ ಇವು ಸಾಧಿಸಿದ ಬೆಳವಣಿಗೆ ಅಚ್ಚರಿ ಮೂಡಿಸುವಂತಿದೆ.

ಸಂಪೂರ್ಣವಾಗಿ ಆ್ಯಪ್ ಆಧಾರದಲ್ಲಿ ಕೆಲಸ ಮಾಡುವುದರಿಂದ ಅತ್ಯಂತ ಕಡಿಮೆ ಬಂಡವಾಳದಲ್ಲಿ ಇವು ಕಾರ್ಯಾರಂಭ ಮಾಡುವುದು ಸಾಧ್ಯವಾಯಿತು. ಈ ಕಂಪನಿಗಳ ವಹಿವಾಟು ಮಾದರಿ ವಿನೂತನವಾಗಿತ್ತು. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ವೇಗ ಪಡೆದ ಹೊತ್ತಿನಲ್ಲಿ ಮತ್ತು ಆನ್‌ಲೈನ್ ಮಾರುಕಟ್ಟೆ ಆರಂಭವಾಗುತ್ತಿರುವ ಸಂದರ್ಭದಲ್ಲಿ ಈ ಕಂಪನಿಗಳು ಉದ್ಯಮ ಆರಂಭಿಸಿದ್ದವು. ಇವು ಸ್ವತಃ ಬೆಳೆಯುವುದಲ್ಲದೆ, ಭಾರತದಲ್ಲಿ ಆನ್‌ಲೈನ್ ವಹಿವಾಟು ಮತ್ತು ಆನ್‌ಲೈನ್‌ ಮಾರುಕಟ್ಟೆಯ ಪರಿಕಲ್ಪನೆಗೆ ಒಂದು ಸ್ವರೂಪ ನೀಡಲು ನೆರವಾದವು.

ಒಯೊ ಕಂಪನಿಯು ಲಾಡ್ಜ್‌ಗಳು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವ ಮಧ್ಯವರ್ತಿಯಾಗಿ ಕೆಲಸ ಆರಂಭಿಸಿತು. ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಮತ್ತು ಪ್ರವಾಸಿ ಸ್ಥಳಗಳಲ್ಲಿ ಇರುವ ಹೋಟೆಲ್‌/ಲಾಡ್ಜ್‌ಗಳ ಜತೆ ಒಪ್ಪಂದ ಮಾಡಿಕೊಂಡಿದ್ದ ಕಂಪನಿಯು, ಅತ್ಯಂತ ಕಡಿಮೆ ದರದಲ್ಲಿ ಕೊಠಡಿಗಳನ್ನು ಒದಗಿಸಲು ಆರಂಭಿಸಿತು. ದೂರವಾಣಿ ಮೂಲಕ ಕರೆ ಮಾಡಿ ಅಥವಾ ನೇರವಾಗಿ ಲಾಡ್ಜ್‌ಗಳಿಗೆ ಹೋಗಿ ಕೊಠಡಿ ಪಡೆದುಕೊಳ್ಳುವುದಕ್ಕೆ ಹಲವು ಷರತ್ತುಗಳನ್ನು ಪೂರೈಸಬೇಕಿತ್ತು. ಆದರೆ, ಒಯೊ ಮೂಲಕ ಸುಲಭವಾಗಿ ಕೊಠಡಿ ಬುಕ್‌ ಮಾಡಲು ಸಾಧ್ಯವಿತ್ತು. ಇದು ಈ ಕಂಪನಿಯ ಯಶಸ್ಸಿಗೆ ಕಾರಣವಾಯಿತು. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ, ಕಂಪನಿಯ ವಹಿವಾಟು ಬೇರೆ ದೇಶಗಳಿಗೂ ವಿಸ್ತರಿಸಿತು. ಗ್ರಾಹಕರಿಗೆ ಕಡಿಮೆ ದರದಲ್ಲಿ ಕೊಠಡಿ ಒದಗಿಸುವುದು ಮತ್ತು ಹೋಟೆಲ್‌ಗಳಿಗೆ ಗ್ರಾಹಕರನ್ನು ಒದಗಿಸುವ ಈ ಮಧ್ಯವರ್ತಿಯ ಕೆಲಸವನ್ನು ಕೇವಲ ಆ್ಯಪ್‌ ಮೂಲಕ ನಿರ್ವಹಿಸಲಾಗುತ್ತಿತ್ತು. ಒಮ್ಮೆ ಬಂದ ಗ್ರಾಹಕರಿಗೆ ಮತ್ತಷ್ಟು ಕೊಡುಗೆಗಳನ್ನು ನೀಡುವ ಮೂಲಕ, ಅವರನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಯಿತು.

ಆ್ಯಪ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಬಹುತೇಕ ಕಂಪನಿಗಳು ಇದೇ ಸ್ವರೂಪದಲ್ಲಿ ವಹಿವಾಟು ನಡೆಸುತ್ತಿವೆ. ಗ್ರಾಹಕರು ಮತ್ತು ಸೇವಾದಾತರು/ಮಾರಾಟಗಾರರ ಮಧ್ಯೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡುತ್ತಿವೆ. ಪ್ರಚಾರ, ಜಾಹೀರಾತಿನ ವೆಚ್ಚ ಇಲ್ಲದ ಕಾರಣ ಸೇವಾದಾತರು/ಮಾರಾಟಗಾರರು ಕಡಿಮೆ ದರದಲ್ಲಿ ಸೇವೆ/ಸರಕುಗಳನ್ನು ಒದಗಿಸುವುದು ಸಾಧ್ಯವಿದೆ. ಗ್ರಾಹಕರಿಗೂ ಕಡಿಮೆ ದರದಲ್ಲಿ ಸರಕು/ಸೇವೆಗಳು ದೊರೆಯುತ್ತಿವೆ. ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಕ್ವಿಕರ್‌ನಂತಹ ಪ್ಲಾಟ್‌ಫಾರಂಗಳು ಇದೇ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಂಪನಿಗಳು ಸಹ ಹೆಚ್ಚಿನ ಬಂಡವಾಳ ಇಲ್ಲದೆ ಈ ಉದ್ಯಮ ಆರಂಭಿಸಿದ್ದವು. ಹೀಗಾಗಿಯೇ ಆನ್‌ಲೈನ್ ಆಧರಿತ ಮಾರುಕಟ್ಟೆ ರೂಪುಗೊಳ್ಳುತ್ತಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳು, ಆಫ್ರಿಕಾದ ರಾಷ್ಟ್ರಗಳಲ್ಲಿ ಉದ್ದಿಮೆ ವಿಸ್ತರಿಸಲು ಸಾಧ್ಯವಾಗಿದೆ. ಅಂತಹ ದೇಶಗಳಲ್ಲಿ ಮಾರುಕಟ್ಟೆ ಇರುವುದನ್ನು ಗುರುತಿಸಿ, ಪಾಶ್ಚಾತ್ಯ ಕಂಪನಿಗಳು ಪ್ರವೇಶಿಸುವ ಮುನ್ನವೇ ಈ ಕಂಪನಿಗಳು ವಹಿವಾಟು ಆರಂಭಿಸಿವೆ. ಜಾಗತಿಕ ಮಟ್ಟದಲ್ಲಿ ಈ ಕಂಪನಿಗಳು ಬೆಳೆಯಲು ಇದೂ ಒಂದು ಪ್ರಮುಖ ಕಾರಣವಾಗಿದೆ.

ಜಾಗತಿಕ ಬೇಡಿಕೆ ಸೃಷ್ಟಿಸಿದ ಭಾರತದ ಕಂಪನಿಗಳು

ಪೇಟಿಎಂ

ವಿಮಾನ, ಸಿನಿಮಾ ಟಿಕೆಟ್‌ ಕಾಯ್ದಿರಿಸುವಿಕೆ, ವಿದ್ಯುತ್‌ ಮತ್ತು ಇತರ ಬಿಲ್‌ ಪಾವತಿ, ಮೊಬೈಲ್‌, ಡಿಟಿಎಚ್‌ ರೀಚಾರ್ಜ್‌ನಂತಹ ಸೇವೆಗಳನ್ನು ಆ್ಯಪ್‌ ಮೂಲಕ ಒದಗಿಸುವುದಕ್ಕಾಗಿ ಸ್ಥಾಪನೆಯಾದ ಕಂಪನಿ ಪೇಟಿಎಂ. ವಿಜಯ್‌ ಶಂಕರ್‌ ಶರ್ಮಾ ಅವರು2010ರ ಆಗಸ್ಟ್‌ನಲ್ಲಿ ಈ ಕಂಪನಿ ಆರಂಭಿಸಿದರು.ನೊಯ್ಡಾದಲ್ಲಿ ಕೇಂದ್ರ ಕಚೇರಿ ಇದೆ. ಈಗ 16 ದೇಶಗಳಿಗೆ ವ್ಯಾಪ್ತಿ ವಿಸ್ತರಿಸಿದೆ. ಅತಿ ವೇಗದಲ್ಲಿ ಬೆಳೆಯುವ ಕಂಪನಿಗಳಲ್ಲಿ ಇದೂ ಒಂದಾಗಿದೆ.

ಅಲಿಬಾಬಾ ಗ್ರೂಪ್, ಬರ್ಕ್‌ಷೈರ್ ಹಾತ್‌ವೇ ಸೇರಿ ಇತರ ಸಂಸ್ಥೆಗಳು ಪೇಟಿಎಂನಲ್ಲಿ ಬಂಡವಾಳ ತೊಡಗಿಸಿವೆ. ಪೇಟಿಎಂ ಮಾಲ್, ಪೇಮೆಂಟ್ಸ್ ಬ್ಯಾಂಕ್, ಪೇಟಿಎಂ ಮನಿ, ಸ್ಮಾರ್ಟ್ ರಿಟೇಲ್ ಮೊದಲಾದ ಸೇವೆಗಳನ್ನು ಇದು ಪರಿಚಯಿಸಿದೆ.

ಫ್ಲಿಪ್‌ಕಾರ್ಟ್

ಸಚಿನ್‌ ಬನ್ಸಲ್ ಮತ್ತು ಬಿನ್ನಿ ಬನ್ಸಲ್‌ ಎಂಬ ಯುವ ಉದ್ಯಮಿಗಳು ಆರಂಭಿಸಿದ ‘ಫ್ಲಿಪ್‌ಕಾರ್ಟ್’‌ ದೇಶದ ಜನರ (ಮುಖ್ಯವಾಗಿ ನಗರವಾಸಿಗಳು) ಶಾಪಿಂಗ್‌ ಕಲ್ಪನೆಯಲ್ಲಿಯೇ ಕ್ರಾಂತಿ ತಂದಿತು. ‘ಅಮೆಜಾನ್‌’ ಕಂಪನಿಯ ಉದ್ಯೋಗ ತೊರೆದ ಈ ಇಬ್ಬರು ಆನ್‌ಲೈನ್‌ನಲ್ಲಿ ಬೃಹತ್‌ ಮಳಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಎಲೆಕ್ಟ್ರಾನಿಕ್‌ ಉಪಕರಣಗಳು, ಫ್ಯಾಷನ್‌, ಗೃಹೋಪಯೋಗಿ ವಸ್ತುಗಳು, ದಿನಸಿ ಸೇರಿ ಲಕ್ಷಾಂತರ ವಸ್ತುಗಳು ಒಂದೇ ಆ್ಯಪ್‌ನಲ್ಲಿ ಲಭ್ಯ. ಸಂಸ್ಥೆಯು 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು.

ಆರಂಭದಲ್ಲಿ, ಪುಸ್ತಕ ಮಾರಾಟ ಫ್ಲಿಪ್‌ಕಾರ್ಟ್‌ನ ಉದ್ದೇಶವಾಗಿತ್ತು. ಈಗಂತೂ ಇಲ್ಲಿ ಎಲ್ಲವೂ ಲಭ್ಯ ಎನ್ನುವಂತಾಗಿದೆ.

ಬೃಹತ್ ಸಂಸ್ಥೆ ವಾಲ್‌ಮಾರ್ಟ್‌, ಇದರ ಶೇ 81ರಷ್ಟು ಪಾಲನ್ನುಇತ್ತೀಚೆಗೆ ತನ್ನದಾಗಿಸಿಕೊಂಡಿತು. ಟೈಗರ್ ಮ್ಯಾನೇಜ್‌ಮೆಂಟ್, ಮೈಕ್ರೊಸಾಫ್ಟ್‌, ಅಸೆಲ್ ಸಂಸ್ಥೆಗಳು ಇಲ್ಲಿ ಬಂಡವಾಳ ಹೂಡಿವೆ. ಮೈಂತ್ರಾ, ಜಬಾಂಗ್, ಫೋನ್‌ಪೇ, ಇ–ಕಾರ್ಟ್ ಮೊದಲಾದ ಸಂಸ್ಥೆಗಳು ಇಂದು ಫ್ಲಿಪ್‌ಕಾರ್ಟ್ ಒಡೆತನದಲ್ಲಿವೆ.

ಓಲಾ ಕ್ಯಾಬ್ಸ್

ಗ್ರಾಹಕ ಇದ್ದಲ್ಲಿಗೇ ಹೋಗಿ, ಆತನಿಗೆ ಎಲ್ಲಿ ಹೋಗಬೇಕೊ ಅಲ್ಲಿಗೆ ಕರೆದೊಯ್ಯುವ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆ ಓಲಾ ಕ್ಯಾಬ್ಸ್‌.ಭವಿಶ್ ಅಗರ್ವಾಲ್ ಹಾಗೂ ಅಂಕಿತ್ ಭಾಟಿ 2010ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ ಕಂಪನಿ ಈಗ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಬ್ರಿಟನ್‌ನಲ್ಲಿಯೂ ಸೇವೆ ಒದಗಿಸುತ್ತಿದೆ.ಕಂಪನಿಯ ಬೆಳವಣಿಗೆಯ ವೇಗವು ಬಂಡವಾಳ ಹೂಡಿಕೆದಾರರನ್ನು ಬಹುಬೇಗನೇ ಸೆಳೆಯಿತು. ಹಾಗಾಗಿ, ಈ ಕಂಪನಿಗೆ ಬಂಡವಾಳದ ಕೊರತೆ ಎಂದೂ ಆಗಿಲ್ಲ.ಬಾಡಿಗೆ ವಾಹನ, ವಾಣಿಜ್ಯ ಸರಕು ಸಾಗಣೆ ಹಾಗೂ ಆಹಾರ ಪೂರೈಕೆ ಸೇವೆಗಳು ಆ್ಯಪ್‌ ಮೂಲಕ ಸಿಗುತ್ತಿವೆ. ಫುಡ್‌ಪಾಂಡಾ ಹಾಗೂ ಎಲೆಕ್ಟ್ರಿಕ್ ಮೊಬಿಲಿಟಿ ಸೇವೆಗಳಿಗೂ ಸಂಸ್ಥೆ ತನ್ನನ್ನು ವಿಸ್ತರಿಸಿಕೊಂಡಿದೆ.

ಸ್ನ್ಯಾಪ್‌ಡೀಲ್

ಆನ್‌ಲೈನ್ ಖರೀದಿ ತಾಣ ಸ್ನ್ಯಾಪ್‌ಡೀಲ್ ಶುರುವಾಗಿದ್ದೇ ಭಿನ್ನ ನೆಲೆಯಲ್ಲಿ. ದೈನಂದಿನ ಡಿಸ್ಕೌಂಟ್ ವೆಬ್‌ಸೈಟ್ ಆಗಿ ಆರಂಭವಾದ ಸ್ನ್ಯಾಪ್‌ಡೀಲ್, ನಂತರ ಆನ್‌ಲೈನ್‌ ಶಾಪಿಂಗ್‌ಗೆ ತನ್ನನ್ನು ತೆರೆದುಕೊಂಡಿತು.

2010ರಲ್ಲಿ ರೋಹಿತ್ ಬನ್ಸಾಲ್ ಮತ್ತು ಕುನಾಲ್ ಬಹ್ಲ್ ಎಂಬುವರು ಕಂಪನಿ ಆರಂಭಿಸಿದರು. ಸಾವಿರಾರು ಉತ್ಪನ್ನಗಳನ್ನು ಸಂಸ್ಥೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದೆ. ಸುಮಾರು 3 ಲಕ್ಷ ಮಾರಾಟಗಾರರಿದ್ದು, 6 ಸಾವಿರಕ್ಕೂ ಹೆಚ್ಚು ನಗರಗಳಲ್ಲಿ ಜಾಲ ಹರಡಿದೆ. ಅಲಿಬಾಬಾ ಗ್ರೂಪ್, ಫಾಕ್ಸ್‌ಕಾನ್, ಸಾಫ್ಟ್‌ಬ್ಯಾಂಕ್, ನೆಕ್ಸಸ್ ವೆಂಚರ್ ಪಾರ್ಟ್‌ನರ್ಸ್, ಬೆಸ್ಸೆಮರ್ ವೆಂಚರ್ಸ್ ಪಾರ್ಟ್‌ನರ್ಸ್, ಇ–ಬೇ ಇದರಲ್ಲಿ ಬಂಡವಾಳ ತೊಡಗಿಸಿವೆ.ಪ್ರತೀವರ್ಷ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಸ್ಥೆಯು ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗೆ ಪೈಪೋಟಿ ನೀಡುತ್ತಿದೆ.

ಒಯೊ

ಹೋಟೆಲ್‌ ಕೊಠಡಿ ಕಾಯ್ದಿರಿಸುವ ಸೇವೆ ಒದಗಿಸುವ ಒಯೊ ಕಂಪನಿ ಆರಂಭವಾದದ್ದು 2013ರಲ್ಲಿ. ರಿತೇಶ್ ಅಗರ್‌ವಾಲ್ ಇದರ ಸ್ಥಾಪಕ.ಗುರುಗ್ರಾಮದಲ್ಲಿ ಕಂಪನಿಯ ಕೇಂದ್ರ ಕಚೇರಿ ಇದೆ. ಆದರೆ ಅದರ ಹರವು ಮಾತ್ರ ಏಷ್ಯಾ, ಯುರೋಪ್ ಹಾಗೂ ಅಮೆರಿಕಗಳನ್ನೂ ಆವರಿಸಿದೆ.ಜಗತ್ತಿನಾದ್ಯಂತ 17 ಸಾವಿರ ಸಿಬ್ಬಂದಿ ಕಂಪನಿಗಾಗಿ ದುಡಿಯುತ್ತಿದ್ದಾರೆ.

ಕ್ವಿಕರ್

ಪ್ರಣಯ್ ಚುಲೆಟ್ ಎಂಬುವರು 2008ರಲ್ಲಿ ಹುಟ್ಟುಹಾಕಿದ ಕ್ವಿಕರ್, ಇದೀಗ ಭಾರತದ ಬೃಹತ್ ಆನ್‌ಲೈನ್ ಕ್ಲಾಸಿಫೈಡ್ಸ್ ಪೋರ್ಟಲ್ ಎನಿಸಿಕೊಂಡಿದೆ. ಬಳಕೆದಾರರು ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಸುಲಭವಾಗಿ ಮಾರಾಟ ಮಾಡಲು ಅವರು ಆನ್‌ಲೈನ್‌ನಲ್ಲಿ ವೇದಿಕೆ ಕಲ್ಪಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಉಪಕರಣಗಳು, ದಿರಿಸುಗಳು, ‍ಪೀಠೋಪಕರಣಗಳೂ ಇಲ್ಲಿ ಲಭ್ಯ. ಪೋಸ್ಟ್ ಮಾಡಿದವರನ್ನು ಸಂಪರ್ಕಿಸಿ ಖರೀದಿ ಪ್ರಕ್ರಿಯೆ ನಡೆಸಬಹುದು.ದೇಶದ 1,000 ಸ್ಥಳಗಳಲ್ಲಿ ಸೇವೆ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಬರುವ ಜಾಹೀರಾತುಗಳಿಂದ ಆದಾಯ ಸಿಗುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಇದೆ.

ಜೊಮ್ಯಾಟೊ

ಹೋಟೆಲ್‌ ಊಟ, ಉಪಹಾರಗಳನ್ನು ಗ್ರಾಹಕ ಇದ್ದಲ್ಲಿಗೇ ಒಯ್ದು ಕೊಡುವ ಕಂಪನಿ ಜೊಮ್ಯಾಟೊ. ದೀಪಿಂದರ್ ಗೋಯಲ್ ಎಂಬ ಯುವ ಉತ್ಸಾಹಿ 2008ರಲ್ಲಿ ಆನ್‌ಲೈನ್ ರೆಸ್ಟೋರೆಂಟ್ ಸರ್ಚ್ ವೆಬ್‌ಸೈಟ್ ಶುರುಮಾಡಿದರು. ದೇಶದ ಬಹುತೇಕ ನಗರಗಳಲ್ಲಿ ಇದು ರುಚಿಯ ಜಾಲ ವಿಸ್ತರಿಸಿಕೊಂಡಿದ್ದು, ದೇಶದಲ್ಲಿ ಅತಿಹೆಚ್ಚು ಜನರು ಭೇಟಿ ನೀಡುವ ವೆಬ್‌ಸೈಟ್ ಎನಿಸಿಕೊಂಡಿದೆ. ಸುಮಾರು 10 ಲಕ್ಷ ರೆಸ್ಟೋರೆಂಟ್‌ಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದ್ದು, ಗ್ರಾಹಕರು ತಮಗಿಷ್ಟದ ಭಕ್ಷ್ಯಗಳನ್ನು ಆ್ಯಪ್‌ನಲ್ಲಿ ಆರ್ಡರ್‌ ಮಾಡಿ ಸವಿಯಬಹುದು. ಜಾಹೀರಾತುಗಳಿಂದಲೂ ಕಂಪನಿ ವರಮಾನ ಗಳಿಸುತ್ತಿದೆ.

ಹರಿಯಾಣದ ಗುರುಗ್ರಾಮದಲ್ಲಿ ಆರಂಭವಾದ ಇದರ ಪಯಣ ಈಗ 24 ದೇಶಗಳಿಗೆ ತಲುಪಿದೆ. ಅಮೆರಿಕದಲ್ಲಿ ಅರ್ಬನ್‌ಸ್ಪೂನ್ ಎಂಬ ಕಂಪನಿಯನ್ನು ಇದು ತೆಕ್ಕೆಗೆ ಹಾಕಿಕೊಂಡಿದೆ.

ಮೇಕ್ ಮೈ ಟ್ರಿಪ್

ಅಮೆರಿಕದಲ್ಲಿರುವ ಭಾರತೀಯರು ಸ್ವದೇಶಕ್ಕೆ ಸುಲಭವಾಗಿ ಬಂದು ಹೋಗಲು ಅನುಕೂಲವಾಗುವಂತೆ ಏನಾದರೊಂದು ಸೌಲಭ್ಯ ಕಲ್ಪಿಸಬೇಕು ಎಂದು ಯೋಚಿಸಿದ ದೀಪ್ ಕಲ್ರಾ ಅವರಿಗೆ ಸಿಕ್ಕಿದ್ದು ಮೇಕ್‌ ಮೈ ಟ್ರಿಪ್ ಎಂಬ ಮಂತ್ರದಂಡ. ಹರಿಯಾಣದ ಗುರುಗ್ರಾಮದಲ್ಲಿ 2000ನೇ ಇಸ್ವಿಯಲ್ಲಿ ಇದಕ್ಕೆ ಅಡಿಪಾಯ ಬಿದ್ದಿತು.ಅವರು ರೂಪಿಸಿದ್ದ ಆ್ಯಪ್ ಇಂದು ಜಗತ್ತಿನಾದ್ಯಂತ ಮನೆಮಾತಾಗಿದೆ.ನ್ಯೂಯಾರ್ಕ್, ಸಿಂಗಪುರ, ಕ್ವಾಲಾಲಂಪುರ, ಫುಕೆಟ್ ಮೊದಲಾದ ಕಡೆ ಕಚೇರಿ ಹೊಂದಿದೆ. ಪ್ರಯಾಣಿಕರಿಗೆ ಒಂದೇ ವೇದಿಕೆಯಲ್ಲಿ ಎಲ್ಲ ಮಾಹಿತಿ ಹಾಗೂ ಸವಲತ್ತು ನೀಡುವುದು ಕಂಪನಿಯ ಉದ್ದೇಶವಾಗಿತ್ತು.ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕಿಂಗ್, ರೈಲು, ಬಸ್‌ಗಳ ಟಿಕೆಟ್ ಖರೀದಿ, ಹಾಲಿಡೇ ಪ್ಯಾಕೇಜ್, ಹೋಟೆಲ್ ಬುಕಿಂಗ್ ಮೊದಲಾದ ಸೇವೆಗಳನ್ನು ಒಂದೇ ತಾಣದಲ್ಲಿ ಪಡೆಯಬಹುದು. ಹತ್ತಾರು ಟ್ರಾವೆಲ್ ಬುಕಿಂಗ್ ಏಜೆನ್ಸಿಗಳನ್ನು ಖರೀದಿ ಮಾಡಿ, ಮಾರುಕಟ್ಟೆಯನ್ನು ಸಂಸ್ಥೆ ವಿಸ್ತರಿಸಿಕೊಂಡಿದೆ. ನಾಸ್ಡಾಕ್‌ನಲ್ಲಿ 2010ರಲ್ಲಿ ಸ್ಥಾನ ಪಡೆಯಿತು. ತನ್ನ ಪ್ರತಿಸ್ಪರ್ಧಿ ಐಬಿಬೊ ಟ್ರಾವೆಲ್ ಕಂಪನಿಯನ್ನೂ ಸ್ವಾಧೀನಪಡಿಸಿಕೊಂಡಿತು. ರೆಡ್‌ಬಸ್ ಕೂಡಾ ಇದರ ನಿರ್ವಹಣೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT