ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಸಗೊಬ್ಬರ ದರ ಏರಿಕೆ ಗೊಂದಲ

Last Updated 9 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಭಾರತದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಕಂಪನಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಡೆಟ್ (ಇಫ್ಕೊ), ಯೂರಿಯವನ್ನು ಬಿಟ್ಟು ಇತರ ರಸಗೊಬ್ಬರಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಡಿಎಪಿ, ಎನ್‌ಪಿಕೆ ಮತ್ತು ಎಂಒಪಿ ಗೊಬ್ಬರಗಳ ಬೆಲೆಯಲ್ಲಿ ಶೇ 42ರಿಂದ ಶೇ 58ರವರೆಗೂ ಏರಿಕೆಯಾಗಿದೆ. ಆದರೆ, ‘ರಸಗೊಬ್ಬರಗಳ ಬೆಲೆಯಲ್ಲಿ ಯಾವುದೇ ಏರಿಕೆಯಿಲ್ಲ. ಹಳೆಯ ಬೆಲೆಯಲ್ಲೇ ಮಾರಾಟ ಮಾಡಲು ನಿರ್ದೇಶನ ನೀಡಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬೆಲೆ ಏರಿಕೆ ಮಾಡಲಾಗಿದೆ. ಬೇರೆ ಎಲ್ಲಾ ಖಾಸಗಿ ಕಂಪನಿಗಳು ಮಾರ್ಚ್ ತಿಂಗಳಿನಲ್ಲೇ ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಿವೆ. ಅಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಯೂರಿಯಯೇತರ ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಲೇಬೇಕಿದೆ’ ಎಂದು ಇಫ್ಕೊ ತನ್ನ ಪ್ರಕಟಣೆಯಲ್ಲಿ ಹೇಳಿತ್ತು.

ದೇಶದಲ್ಲಿ ಯೂರಿಯಾ ನಂತರ ಅತಿಹೆಚ್ಚು ಬಳಕೆಯಾಗುವ ಡಿಎಪಿ ರಸಗೊಬ್ಬರದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಖಾಸಗಿ ಕಂಪನಿಗಳು ಮಾರ್ಚ್ ತಿಂಗಳಿನಲ್ಲೇ ಡಿಎಪಿ ಗೊಬ್ಬರದ ಬೆಲೆ ಏರಿಕೆ ಮಾಡಿದ್ದವು.ಸಿಎಫ್‌ಸಿಎಲ್‌ ಕಂಪನಿಯು 50 ಕೆ.ಜಿ. ಡಿಎಪಿ ಗೊಬ್ಬರದ ಚೀಲದ ಬೆಲೆಯನ್ನು₹ 1,600ಕ್ಕೆ, ಐಐಪಿಎಲ್‌ ಡಿಎಪಿ ಬೆಲೆಯನ್ನು ₹ 1,200ರಿಂದ ₹ 1,495ಕ್ಕೆ ಏರಿಕೆ ಮಾಡಿದ್ದವು. ಕ್ರಿಬ್ಕೊ, ಎಂಸಿಎಫ್‌ಎಲ್, ಜುವಾರಿ ಆಗ್ರೊ, ಪ್ರದೀಪ್ ಫಾಸ್ಪಟ್ಸ್‌ ಕಂಪನಿಗಳು ಡಿಎಪಿ ರಸಗೊಬ್ಬರದ ಬೆಲೆಯನ್ನು ₹ 1,700ಕ್ಕೆ ಏರಿಕೆ ಮಾಡಿದ್ದವು. ಇದರ ಬೆನ್ನಲ್ಲೇ ಇಫ್ಕೊ ಸಹ 50 ಕೆ.ಜಿ ಡಿಎಪಿ ರಸಗೊಬ್ಬರದ ಬೆಲೆಯನ್ನು ₹ 1,200ರಿಂದ ₹ 1,700ಕ್ಕೆ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿತ್ತು. ನೂತನ ಬೆಲೆಯನ್ನು ಮುದ್ರಿಸಿರುವ ರಸಗೊಬ್ಬರದ ಚೀಲಗಳು ಈಗಾಗಲೇ ಗೋದಾಮುಗಳಿಗೆ ಪೂರೈಕೆಯಾಗಿವೆ.

‘ಹಳೆಯ ದರದಲ್ಲಿ ಮಾರಾಟ’
ಬೆಲೆ ಏರಿಕೆ ಪ್ರಕಟಣೆಯು ಗುರುವಾರ ಮಧ್ಯಾಹ್ನ ಹೊರಬಿದ್ದಿತ್ತು. ಈ ಪ್ರಕಟಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರ ರಸಗೊಬ್ಬರ ಸಚಿವಾಲಯವು ಗುರುವಾರ ರಾತ್ರಿ ತುರ್ತು ಸಭೆ ನಡೆಸಿತು. ದೇಶದ ಗೊಬ್ಬರ ತಯಾರಿಕಾ ಖಾಸಗಿ ಕಂಪನಿಗಳ ಜತೆಯೂ ಸಭೆ ನಡೆಸಿತು.

ಇದರ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ, ‘ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆಯಿಲ್ಲ. ಏರಿಕೆ ಮಾಡಿಲ್ಲ. ಹಳೆಯ ದರದಲ್ಲೇ ಗೊಬ್ಬರಗಳನ್ನು ಮಾರಾಟ ಮಾಡುವಂತೆ ಖಾಸಗಿ ಕಂಪನಿಗಳಿಗೆ ನಿರ್ದೇಶನ ನೀಡಿದ್ದೇವೆ. ಖಾಸಗಿ ಕಂಪನಿಗಳೂ ಇದಕ್ಕೆ ಒಪ್ಪಿಕೊಂಡಿವೆ. ರೈತರ ಹಿತಾಸಕ್ತಿಯೇ ನಮ್ಮ ಆದ್ಯತೆ’ ಎಂದು ರಸಗೊಬ್ಬರಗಳ ರಾಜ್ಯ ಖಾತೆ ಸಚಿವ ಮನ್ಸುಖ್‌ ಮಾಂಡವೀಯ ಹೇಳಿಕೆ ನೀಡಿದ್ದಾರೆ. ಆದರೆ, ಬೆಲೆಯನ್ನು ಇಳಿಕೆ ಮಾಡುವ ಸಂಬಂಧ ಯಾವ ಕಂಪನಿಯೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಇಫ್ಕೊ ಸ್ಪಷ್ಟನೆಯೂ ಅಸ್ಪಷ್ಟ
ಇಫ್ಕೊ ಸಹ ಈ ಬಗ್ಗೆ ಗುರುವಾರವೇ ಸ್ಪಷ್ಟನೆ ನೀಡಿತ್ತು. ‘50 ಕೆ.ಜಿ ಡಿಎಪಿ ಗೊಬ್ಬರದ ಚೀಲದ ಮೇಲೆ ₹ 1,700 ಎಂದು ತಾತ್ಕಾಲಿಕ ಬೆಲೆ ಮುದ್ರಿಸಿದ್ದೇವೆ. ಆ ಬೆಲೆಯಲ್ಲಿ ರೈತರಿಗೆ ಗೊಬ್ಬರ ಮಾರಾಟ ಮಾಡುವುದಿಲ್ಲ’ ಎಂದು ಇಫ್ಕೊ ಸಿಇಒ ಯು.ಸಿ.ಅಶ್ವಥಿ ಹೇಳಿದ್ದಾರೆ.

‘ಇಫ್ಕೊ ಗೋದಾಮುಗಳಲ್ಲಿ 11.7 ಲಕ್ಷ ಟನ್‌ನಷ್ಟು ಗೊಬ್ಬರ ಸಂಗ್ರಹ ಇದೆ. ಈ ರಸಗೊಬ್ಬರವನ್ನು ಹಳೆಯ ದರದಲ್ಲೇ ಮಾರಾಟ ಮಾಡುತ್ತೇವೆ. 50 ಕೆ.ಜಿ. ಡಿಎಪಿ ಚೀಲ ₹ 1,200ಕ್ಕೆ ಮಾರಾಟ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ. ಆದರೆ ಇಫ್ಕೊ ಪ್ರಕಟಣೆ ಬೇರೆ ರೀತಿಯ ಸ್ಪಷ್ಟನೆ ನೀಡಿದೆ.

‘ಏಪ್ರಿಲ್‌ನಲ್ಲಿ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ತಯಾರಿಸಲಾದ ಡಿಎಪಿ ಗೊಬ್ಬರಗಳ ಚೀಲದ ಮೇಲೆ ₹ 1,700 ಎಂದು ಮುದ್ರಿಸಲಾಗಿದೆ. ಇವುಗಳನ್ನು ಸಂಗ್ರಹದ ಉದ್ದೇಶದಿಂದ ಮಾತ್ರವೇ ಗೋದಾಮುಗಳಿಗೆ ಸಾಗಿಸಲಾಗಿದೆ. ಅವುಗಳನ್ನು ರೈತರಿಗೆ ಮಾರಾಟ ಮಾಡುವುದಿಲ್ಲ’ ಎಂದು ಇಫ್ಕೊ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

‘ಹಳೆಯ ದಾಸ್ತಾನು ಹಳೆಯ ದರಕ್ಕೇ ಮಾರಾಟವಾಗಲಿದೆ. ಹೊಸ ದಾಸ್ತಾನು ಮುಗಿದ ಮೇಲೆ, ರಸಗೊಬ್ಬರದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ’ ಎಂದೂ ಅದೇ ಪ್ರಕಟಣೆಯಲ್ಲಿ ಹೇಳಿದೆ.

‘ಹಳೆಯ ದಾಸ್ತಾನನ್ನು ಹಳೆಯ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಇಫ್ಕೊ ಸಿಇಒ ಹೇಳಿದ್ದಾರೆ. ಹೊಸ ದಾಸ್ತಾನನ್ನು ರೈತರಿಗೆ ಮಾರಾಟ ಮಾಡುವುದಿಲ್ಲ. ಆದರೆ ಹೊಸ ದಾಸ್ತಾನು ಖಾಲಿಯಾದ ಮೇಲೆ ಬೆಲೆ ಇಳಿಕೆಯಾಗುತ್ತದೆ ಎಂದು ಇಫ್ಕೊ ಪ್ರಕಟಣೆ ಹೇಳಿದೆ. ಇದರಲ್ಲಿ ಯಾವುದು ನಿಜ. ಹೊಸ ದಾಸ್ತಾನನ್ನು ಮಾರಾಟ ಮಾಡದಿದ್ದರೆ, ಅದು ಖಾಲಿಯಾಗುವುದು ಹೇಗೆ? ಹೊಸ ದಾಸ್ತಾನು ಖಾಲಿಯಾದ ಮೇಲೆ ಬೆಲೆ ಇಳಿಕೆಯಾಗುತ್ತದೆ ಎಂದರೆ ಅರ್ಥವೇನು’ ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ.

ಬೆಲೆ ನಿಯಂತ್ರಣ ಸಾಧ್ಯವೇ?
ರಸಗೊಬ್ಬರಗಳ ಬೆಲೆ ನಿಯಂತ್ರಣವು ಸುಮಾರು ಐದು ದಶಕಕ್ಕೂ ಹೆಚ್ಚು ಕಾಲದಿಂದ ಚರ್ಚೆಯ ವಿಚಾರವಾಗಿದೆ. ಈ ಕುರಿತು ಸ್ಪಷ್ಟವಾದ ನೀತಿ ರೂಪಿಸಲು 1977ರಲ್ಲಿ ಮರಾಠೆ ಸಮಿತಿ, 1992ರಲ್ಲಿ ಜಂಟಿ ಸಂಸದೀಯ ಸಮಿತಿ, 1998ರಲ್ಲಿ ಬೆಲೆ ನೀತಿ ಪರಿಶೀಲನೆಗಾಗಿ ಹನುಮಂತರಾವ್‌ ಸಮಿತಿ, 2000ದಲ್ಲಿ ವೆಚ್ಚ ಸುಧಾರಣಾ ಸಮಿತಿ, 2001ರಲ್ಲಿ ರಸಗೊಬ್ಬರಗಳ ತಯಾರಿಕಾ ವೆಚ್ಚ ಅಧ್ಯಯನ ಸಮಿತಿ, 2005 ಫಾಸ್ಫೆಟಿಕ್‌ ರಸಗೊಬ್ಬರಗಳ ನೀತಿ ರಚನೆಗೆ ತಜ್ಞರ ಸಮಿತಿ... ಹೀಗೆ ಹತ್ತಾರು ಸಮಿತಿಗಳು ರಚನೆಯಾಗಿವೆ. ಅವು ಕಾಲಕಾಲಕ್ಕೆ ವರದಿಗಳನ್ನೂ ನೀಡುತ್ತಾ ಬಂದಿವೆ.

1977ರ ಮರಾಠೆ ಸಮಿತಿಯ ಸಲಹೆಗಳ ಆಧಾರದಲ್ಲಿ, ಯೂರಿಯಾದ ಬೆಲೆ ನಿಗದಿ ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಅದರಂತೆ ಇತರ ಸಮಿತಿಗಳು ಕಾಲಕಾಲಕ್ಕೆ ನೀಡಿದ ಸಲಹೆಗಳ ಆಧಾರದಲ್ಲಿ ಗೊಬ್ಬರದ ಬೆಲೆ, ಸಬ್ಸಿಡಿ ಮುಂತಾದ ವಿಚಾರಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುತ್ತಾ ಬರಲಾಗಿದೆ.

1991ರಲ್ಲಿ ರಚನೆಯಾಗಿದ್ದ ಜಂಟಿ ಸಂಸದೀಯ ಸಮಿತಿಯು ಪಾಸ್ಫೇಟ್‌ ಮತ್ತು ಪೊಟಾಷ್‌ ಮೇಲಿನ ಬೆಲೆ ನಿಯಂತ್ರಣವನ್ನು ರದ್ದು ಪಡಿಸಿ, ಯೂರಿಯಾ ಬೆಲೆಯಲ್ಲಿ ಶೇ 10ರಷ್ಟು ಇಳಿಕೆ ಮಾಡುವ ಪ್ರಸ್ತಾವವನ್ನು ನೀಡಿತು. ಇದು ಜಾರಿಯಾಗುತ್ತಿದ್ದಂತೆ ಪಾಸ್ಫೇಟ್‌ ಹಾಗೂ ಪೊಟಾಷ್‌ ಬೆಲೆ ಹೆಚ್ಚಳವಾಗಿ, ಅದರ ಬಳಕೆಯಲ್ಲಿ ಭಾರಿ ಇಳಿಕೆ ಕಂಡುಬಂತು. ಎನ್‌ಪಿಕೆ ಬಳಕೆ ಪ್ರಮಾಣವು ಮತ್ತೆ ಹಿಂದಿನ ಸ್ಥಿತಿಗೆ ಹೋಗಬೇಕಾದರೆ ಸಾಕಷ್ಟು ವರ್ಷಗಳೇ ಬೇಕಾದವು. ಆದರೆ, ಇತರ ಸಮಿತಿಗಳ ವರದಿಗಳು ಹೆಚ್ಚಿನವುಗಳಿಗೆ ಸಬ್ಸಿಡಿ ಸಹಿತವಾದ ಪರಿಹಾರ ಕ್ರಮಗಳನ್ನೇ ಸೂಚಿಸಿದ್ದವು.

ಈ ವಿಚಾರದಲ್ಲಿ ಎಷ್ಟೇ ಬದಲಾವಣೆಗಳಾಗಿದ್ದರೂ ಇತ್ತೀಚಿನವರೆಗೂ ದೇಶದಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಸಂಪೂರ್ಣವಾಗಿ ನಿಯಂತ್ರಣ ಮುಕ್ತವಾಗಿರಲಿಲ್ಲ. ಆದ್ದರಿಂದ ಈ ಕ್ಷೇತ್ರದಲ್ಲಿ ಆಗಿರುವ ಹೂಡಿಕೆ ಕಡಿಮೆ ಎಂದು ಉದ್ದಿಮೆ ವಲಯ ಹೇಳುತ್ತದೆ.

ದೀರ್ಘಕಾಲದಿಂದ ರಸಗೊಬ್ಬರಗಳ ಅನಿಯಂತ್ರಿತವಾದ ಬಳಕೆಯಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿರುವುದನ್ನು ಮನಗಂಡ ಸರ್ಕಾರವು 2009ರಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ ವ್ಯವಸ್ಥೆ ಜಾರಿಮಾಡಿತು. ಇದರಿಂದ ಈ ಕ್ಷೇತ್ರಕ್ಕೆ ಇನ್ನಷ್ಟು ಹೂಡಿಕೆ ಬರಬಹುದು ಎಂದೂ ನಿರೀಕ್ಷಿಸಲಾಗಿತ್ತು. ಯೂರಿಯಾ ಅನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಯಿತು. ಆದರೆ,
ಈ ವ್ಯವಸ್ಥೆಯ ಅನುಷ್ಠಾನವು ಸರಿಯಾಗಿ ಆಗಲಿಲ್ಲ.

ಚುನಾವಣೆ ಕಾರಣ?
ರಸಗೊಬ್ಬರಗಳ ಬೆಲೆ ಏರಿಕೆಗೆ ಕಂಪನಿಗಳು ಈಗ ನಿರ್ಧರಿಸಿದ್ದರೂ ಅದನ್ನು ತಡೆಯುವಂತೆ ಸರ್ಕಾರ ಕಂಪೆನಿಗಳಿಗೆ ಸೂಚನೆ ನೀಡಿದೆ. ಆದರೆ ಯೂರಿಯಯೇತರ ರಸಗೊಬ್ಬರಗಳನ್ನು ಬೆಲೆ ನಿಯಂತ್ರಣದಿಂದ ಮುಕ್ತಗೊಳಿಸಿರುವುದರಿಂದ ಬೆಲೆ ಏರಿಕೆ ತಡೆ ಸರ್ಕಾರದಿಂದ ಸಾಧ್ಯವಾಗಬಹುದೇ ಎಂಬ ಪ್ರಶ್ನೆ ಮೂಡಿದೆ. ಪಶ್ಚಿಮ ಬಂಗಾಳದಲ್ಲಿ ಐದು ಹಂತದ ಮತದಾನ ಬಾಕಿ ಇರುವುದರಿಂದ ಸರ್ಕಾರವು ಕಂಪೆನಿಗಳ ಮೇಲೆ ಒತ್ತಡ ಹೇರಿ, ಸದ್ಯಕ್ಕೆ ಬೆಲೆ ಏರಿಕೆಯನ್ನು ತಡೆಹಿಡಿದಿದೆ. ಚುನಾವಣಾ ಫಲಿತಾಂಶದ ಬಳಿಕ ಬೆಲೆ ಏರಿಕೆ ಖಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ಸರ್ಕಾರಕ್ಕೆ ಹೊಸ ಸಂಕಷ್ಟ
ತೈಲಬೆಲೆ ಹಾಗೂ ಅಡುಗೆ ಅನಿಲದ ಬೆಲೆ ಈಗಾಗಲೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಜತೆಯಲ್ಲೇ ರಸಗೊಬ್ಬರದ ಬೆಲೆ ಏರಿಕೆಯು ಸರ್ಕಾರಕ್ಕೆ ಭಾರಿ ತಲೆನೋವಾಗಲಿದೆ. ಇದು ರಾಜಕೀಯ ಮತ್ತು ಆರ್ಥಿಕವಾಗಿ ದೇಶದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಹೇಳಿದ್ದರೂ ಆ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಗೊಬ್ಬರದ ಬೆಲೆ ಏರಿಕೆಯಿಂದಾಗಿ, ಎಕರೆವಾರು ಕೃಷಿ ವೆಚ್ಚದಲ್ಲಿ ಕನಿಷ್ಠವೆಂದರೂ ₹1000 ಏರಿಕೆ ಆಗಬಹುದು. ಇದರ ಪರಿಣಾಮ ವಿವಿಧ ಕ್ಷೇತ್ರಗಳ ಮೇಲೆ ಆಗುತ್ತದೆ ಎಂದು ಅವರು ಹೇಳುತ್ತಾರೆ.

ಆಹಾರಧಾನ್ಯ ಉತ್ಪಾದನಾ ವೆಚ್ಚ ಹೆಚ್ಚಾಗುವುದರಿಂದ ರೈತರಿಗೆ ನೆರವಾಗಲು ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕಾಗುತ್ತದೆ ಎಂದೂ ಅವರು ಹೇಳುತ್ತಾರೆ.

ಸಬ್ಸಿಡಿ ಇಳಿಕೆ, ಬೆಲೆ ಏರಿಕೆ
ರಸಗೊಬ್ಬರಕ್ಕೆ ನೀಡುತ್ತಿರುವ ಸಹಾಯಧನವನ್ನು ಕೇಂದ್ರ ಸರ್ಕಾರವು ಪ್ರತಿ ಆರ್ಥಿಕ ವರ್ಷದಲ್ಲಿ ಇಳಿಕೆ ಮಾಡುತ್ತಲೇ ಬಂದಿದೆ. 2019-20ನೇ ಸಾಲಿನಿಂದ ಈ ಇಳಿಕೆ ಆರಂಭವಾಗಿತ್ತು. 2020-21ನೇ ಸಾಲಿನಲ್ಲಿ ಕೋವಿಡ್‌ ಲಾಕ್‌ಡೌನ್ ಕಾರಣ ರಸಗೊಬ್ಬರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಸಹಾಯಧನ ನೀಡಲಾಗಿತ್ತು. ಆದರೆ, 2021-22ನೇ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಈ ಕಾರಣದಿಂದಲೇ ಕಂಪನಿಗಳು ರಸಗೊಬ್ಬರದ ಬೆಲೆ ಏರಿಕೆ ಮಾಡಿವೆ ಎಂದು ವಿರೋಧ ಪಕ್ಷಗಳು ವಿಶ್ಲೇಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT