ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬ್ಯಾಂಕ್‌ ಖಾತೆಗೆ ಕನ್ನ ಗ್ರಾಹಕರೇ ಜೋಪಾನ

ಡೆಬಿಟ್ ಕಾರ್ಡ್/‌ಕ್ರೆಡಿಟ್ ಕಾರ್ಡ್ ವಂಚನೆ
Last Updated 15 ಅಕ್ಟೋಬರ್ 2020, 1:49 IST
ಅಕ್ಷರ ಗಾತ್ರ

ಡಿಜಿಟಲೀಕರಣದ ಪರಿಣಾಮವಾಗಿ ಗ್ರಾಹಕರು ಬ್ಯಾಂಕುಗಳಿಗೆ ಹೋಗುವುದೇ ವಿರಳ. ಗ್ರಾಹಕರು ಡಿಜಿಟಲ್‌ ಮಾಧ್ಯಮದ ಮೂಲಕವೇ ವ್ಯವಹಾರ ಮಾಡಿಕೊಳ್ಳಲಿ, ಬ್ಯಾಂಕುಗಳಿಗೆ ಬರುವುದೇ ಬೇಡ ಎಂಬುದು ಬ್ಯಾಂಕುಗಳ ಆಶಯವೂ ಆಗಿದೆ. ಡಿಜಿಟಲ್‌ ವಹಿವಾಟಿಗೆ ಸರ್ಕಾರವೂ ಉತ್ತೇಜನ ನೀಡುತ್ತಿದೆ. ಡಿಜಿಟಲ್‌ ವಹಿವಾಟಿನ ಮೇಲೆ ಹೆಚ್ಚಿನ ಅವಲಂಬನೆ ಈಗ ಇದೆ. ಅದನ್ನೇ ದುರುಪಯೋಗ ಮಾಡಿಕೊಳ್ಳುವ ವಂಚಕರು, ಡಿಜಿಟಲ್‌ ಮಾಹಿತಿ ಕದ್ದು, ಬ್ಯಾಂಕ್‌ ಖಾತೆಯಿಂದ ಹಣ ಲಪಟಾಯಿಸುವುದು ಹೆಚ್ಚಾಗಿದೆ. ಆದರೆ, ಗ್ರಾಹಕ ಎಚ್ಚರವಾಗಿದ್ದರೆ ವಂಚನೆ ಸುಲಭವಲ್ಲ.

ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಬಳಸಿಕೊಂಡು ವಂಚನೆ ಎಸಗುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಸ್ವರೂಪದ ವಂಚನೆ ಎಸಗಲು ಎಸ್‌ಎಂಎಸ್, ಫೋನ್‌ಕರೆ ಮತ್ತು ಇ–ಮೇಲ್ ಬಳಸಿಕೊಳ್ಳಲಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಬ್ಯಾಂಕ್‌ನ ಹೆಸರು ಹೇಳಿಕೊಂಡು ಇಂತಹ ಕೃತ್ಯ ಎಸಗಲಾಗುತ್ತದೆ.

‘ನಿಮ್ಮ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ನಿಷ್ಕ್ರಿಯವಾಗಲಿದೆ. ಅದನ್ನು ತಡೆಗಟ್ಟಲು ಕಾರ್ಡ್‌ನ ವಿವರ ನೀಡಿ’ ಎಂಬ ಒಕ್ಕಣೆ ಇರುವ ಎಸ್‌ಎಂಎಸ್‌ಗಳು ಮತ್ತು ಇ–ಮೇಲ್‌ಗಳು ಬರುತ್ತವೆ. ಈ ಎಸ್‌ಎಂಎಸ್‌ ಮತ್ತು ಇ–ಮೇಲ್‌ಗಳಿಗೆ ಪ್ರತಿಕ್ರಿಯಿಸಿ, ಕಾರ್ಡ್‌ನ ವಿವರ ನೀಡಿದರೆ ಅದು ವಂಚಕರಿಗೆ ಸೇರುತ್ತದೆ. ಈ ವಿವರಗಳನ್ನು ಬಳಸಿಕೊಂಡು ವಂಚಕರು ಯಾವುದಾದರೂ ವಹಿವಾಟು ನಡೆಸುತ್ತಾರೆ. ಸರಕು–ಸೇವೆಯನ್ನು ಖರೀದಿಸುವುದೋ ಅಥವಾ ಹಣ ವರ್ಗಾವಣೆ ಮಾಡಿಕೊಳ್ಳುವ ವ್ಯವಹಾರವನ್ನು ನಡೆಸುತ್ತಾರೆ. ಇಂತಹ ವ್ಯವಹಾರಗಳನ್ನು ಪೂರ್ಣಗೊಳಿಸಲು ಒಟಿ‍ಪಿ ಅಗತ್ಯವಿರುತ್ತದೆ. ವಂಚಕರು, ಖಾತೆದಾರರಿಂದಲೇ ಒಟಿಪಿ ಪಡೆದುಕೊಳ್ಳುತ್ತಾರೆ. ಒಟಿಪಿ ನೀಡಿದರೆ, ಹಣ ಕಳೆದುಕೊಂಡಂತೆಯೇ ಸರಿ.

ಬ್ಯಾಂಕ್‌ನಿಂದಲೇ ಈ ಕರೆ ಮಾಡಲಾಗುತ್ತಿದೆ/ಎಸ್‌ಎಂಎಸ್‌ ಕಳುಹಿಸಲಾಗಿದೆ/ಇ–ಮೇಲ್‌ ಕಳುಹಿಸಲಾಗಿದೆ ಎಂದು ಗ್ರಾಹಕರನ್ನು ನಂಬಿಸಲಾಗುತ್ತದೆ. ಇದಕ್ಕಾಗಿ ಅಸಲಿ ಇ–ಮೇಲ್‌ ವಿಳಾಸವನ್ನು ಹೋಲುವ ಇ–ಮೇಲ್ ವಿಳಾಸ, ಅಸಲಿ ಎಸ್‌ಎಂಎಸ್‌ ಸೆಂಡರ್ ವಿಳಾಸಗಳನ್ನು ಸೃಷ್ಟಿಸಿರುತ್ತಾರೆ.

ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳನ್ನು ಸ್ವೈಪಿಂಗ್ ಯಂತ್ರಗಳಲ್ಲಿ ಬಳಸಿದಾಗ, ಅವುಗಳ ವಿವರ ದಾಖಲಾಗುವಂತಹ ತಂತ್ರಜ್ಞಾನವನ್ನು ಬಳಸಿ ವಂಚನೆ ಎಸಗಲಾಗುತ್ತದೆ. ಕಾರ್ಡ್‌ನ ಸಂಪೂರ್ಣ ವಿವರ ಯಂತ್ರಗಳಲ್ಲಿ ದಾಖಲಾಗುತ್ತದೆ, ಪಾಸ್‌ವರ್ಡ್‌ ಸಹ ದಾಖಲಾಗುತ್ತದೆ. ಇಷ್ಟು ವಿವರಗಳನ್ನು ಬಳಸಿಕೊಂಡು ಹಣ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ಎಟಿಎಂ ಘಟಕಗಳಲ್ಲಿ ಈ ಸ್ವರೂಪದಲ್ಲಿ ವಿವರ ಕಳವು ಮಾಡಲು ಸ್ಕಿಮ್ಮಿಂಗ್ ಯಂತ್ರ ಬಳಸಲಾಗುತ್ತದೆ.

ಒಟಿಪಿ ಯಾರಿಗೂ ಕೊಡಬೇಡಿ

ಒಟಿಪಿ ಎಂಬುದು ‘ಒನ್ ಟೈಮ್ ಪಾಸ್‌ವರ್ಡ್‌‌’ನ ಸಂಕ್ತಿಪ್ತ ರೂಪ. ಆನ್‌ಲೈನ್ ಮಾರುಕಟ್ಟೆಯಲ್ಲಿ ಸರಕು ಖರೀದಿಸಿದಾಗ ಗ್ರಾಹಕರ ಮೊಬೈಲ್ ಸಂಖ್ಯೆಗೆ ಇದು ರವಾನೆಯಾಗುತ್ತದೆ. ಇದು ಒಂದು ಅವಧಿಗೆ ಮಾತ್ರ ಊರ್ಜಿತವಾಗಿರುತ್ತದೆ. ಮತ್ತೊಮ್ಮೆ ಖರೀದಿ ಮಾಡಿದರೆ, ಮತ್ತೆ ಒಟಿಪಿ ಬೇಕು.ಖದೀಮರು ಖಾತೆಯಿಂದ ಹಣ ಲಪಟಾಯಿಸುವುದನ್ನು ತಡೆಯಲು ಒಟಿಪಿ ನೆರವಾಗುತ್ತದೆ.

ಒಟಿಪಿ ಪಡೆಯಲು ಖದೀಮರು ಹೊಸ ತಂತ್ರ ಹೂಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿ ಅಥವಾ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡಿ, ಒಟಿಪಿ ಕೊಡಿ ಎಂದು ಗ್ರಾಹಕರನ್ನು ಕೇಳುವ ಜಾಲ ಸಕ್ರಿಯವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ, ಒಟಿಪಿ ಕದಿಯುವವರೂ ಇದ್ದಾರೆ. ನಿಮ್ಮ ಬ್ಯಾಂಕ್ ಖಾತೆ ಜತೆ ಜೋಡಿಸಲಾಗಿರುವ ಫೋನ್ ಸಂಖ್ಯೆ ಬದಲಾಯಿಸಬೇಕಿದೆ ಎಂದು ಬ್ಯಾಂಕ್‌ಗೆ ನಿಮ್ಮ ಪರವಾಗಿ ಬೇಡಿಕೆ ಇಡುವ ಖದೀಮ, ತನ್ನ ಫೋನ್ ಸಂಖ್ಯೆಯನ್ನು ಬ್ಯಾಂಕ್‌ಗೆ ನೀಡಿ, ಒಟಿಪಿಯನ್ನು ಸುಲಭವಾಗಿ ಪಡೆದುಕೊಳ್ಳುತ್ತಾನೆ.

ಡೂಪ್ಲಿಕೇಟ್ ಸಿಮ್: ವಂಚಕನು ಮೊಬೈಲ್ ಸೇವಾದಾತ ಕಂಪನಿಗೆ ನಿಮ್ಮ ಹೆಸರಲ್ಲಿ ಕರೆಮಾಡಿ, ನಕಲಿ ಗುರುತಿನ ಪತ್ರ ನೀಡಿ ಡೂಪ್ಲಿಕೇಟ್ ಸಿಮ್ ಪಡೆಯುತ್ತಾನೆ. ನಿಮ್ಮ ಬಳಿ ಇರುವ ಮೂಲ ಸಿಮ್ ನಿಷ್ಕ್ರಿಯಗೊಂಡು, ವಂಚಕನ ಬಳಿ ಇರುವ ಹೊಸ ಸಿಮ್‌ ಆ್ಯಕ್ಟಿವೇಟ್ ಆಗುತ್ತದೆ. ಹೊಸ ಸಿಮ್ ಮೂಲಕ ಸುಲಭವಾಗಿ ಸಿಗುವ ಒಟಿಪಿ ಬಳಸಿಕೊಂಡು, ಅವನು‌ ಆನ್‌ಲೈನ್‌ನಲ್ಲಿ ಖರೀದಿಯ ಹಬ್ಬವನ್ನೇ ಮಾಡುತ್ತಾನೆ.

ಏನು ಮಾಡಬೇಕು:

*ಯಾರೊಂದಿಗೂ ಒಟಿಪಿ ಅಥವಾ ಪಿನ್ ಸಂಖ್ಯೆ ಹಂಚಿಕೊಳ್ಳಬೇಡಿ

*ಯಾವ ಬ್ಯಾಂಕ್ ಸಿಬ್ಬಂದಿಯೂ ಒಟಿಪಿ, ಪಿನ್, ಸಿವಿವಿ ಸಂಖ್ಯೆ ಅಥವಾ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕೇಳುವುದಿಲ್ಲ ಎಂದು ನೆನಪಿಡಿ

*ಟ್ರೂಕಾಲರ್‌ನಲ್ಲಿ ಬ್ಯಾಂಕ್ ಅಥವಾ ಮ್ಯಾನೇಜರ್ ಎಂದು ಹೆಸರು ಡಿಸ್‌ಪ್ಲೇ ಆಗಿದ್ದರೆ, ತಕ್ಷಣಕ್ಕೆ ಅವರನ್ನು ನಂಬಬೇಡಿ. ಪರಿಶೀಲಿಸಿ

*ಕರೆ ಮಾಡಿದವನಿಗೆ ನಿಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಹೇಳಿ ಅಥವಾ ಹತ್ತಾರು ಪ್ರಶ್ನೆ ಕೇಳಿ ಖಚಿತಪಡಿಸಿಕೊಳ್ಳಿ

*‘ನೇರವಾಗಿ ಬ್ಯಾಂಕ್ ಶಾಖೆಗೆ ಬರುತ್ತೇನೆ. ಅಲ್ಲೇ ಮಾತನಾಡೋಣ’ ಎಂದು ಕರೆ ಮಾಡಿದವನಿಗೆ ತಿಳಿಸಿ

ಇ–ಮೇಲ್‌ ವಹಿವಾಟಿನಲ್ಲಿ ಎಚ್ಚರಿಕೆ ಅಗತ್ಯ

ಸೈಬರ್ ಅಪರಾಧ ಕೃತ್ಯಗಳಲ್ಲಿ ಬ್ಯಾಂಕಿಂಗ್ ವಂಚನೆಯು ಪ್ರಮುಖವಾದುದು. ಬ್ಯಾಂಕ್ ಖಾತೆದಾರರ ವಿವರಗಳನ್ನು ಕದಿಯುವ ಅಥವಾ ಲಪಟಾಯಿಸುವ ಮೂಲಕ, ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿಕೊಳ್ಳುವುದು ಈ ಸ್ವರೂಪದ ಕೃತ್ಯಗಳ ಗುರಿ. ಬ್ಯಾಂಕ್‌ ಖಾತೆ, ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ ವಿವರಗಳನ್ನು ಪಡೆದುಕೊಳ್ಳುವ ಮೂಲಕ ಇಂತಹ ವಂಚನೆಗಳನ್ನು ಎಸಗಲಾಗುತ್ತದೆ. ಈ ವಿವರಗಳನ್ನು ಪಡೆದುಕೊಳ್ಳಲು ಇ–ಮೇಲ್ ಮತ್ತು ಎಸ್‌ಎಂಎಸ್‌ ಅನ್ನು ಬಳಸಿಕೊಳ್ಳಲಾಗುತ್ತದೆ.

ಇ–ಮೇಲ್ ಹ್ಯಾಕಿಂಗ್‌ನ ಬಲಿಪಶುಗಳಾಗುವವರಲ್ಲಿ ಬಹುಪಾಲು ಮಂದಿ ಆಮದು ಉದ್ಯಮದಲ್ಲಿ ಇರುವವರು ಎಂದು ಸೈಬರ್ ಅಪರಾಧ ಪೊಲೀಸ್ ವಿಭಾಗವು ಹೇಳುತ್ತದೆ. ಈ ಉದ್ದಿಮೆಯಲ್ಲಿ ಇರುವವರ ವಿದೇಶಿ ಪೂರೈಕೆದಾರರ ಇ–ಮೇಲ್‌ ಖಾತೆಗಳನ್ನು ಹ್ಯಾಕ್‌ ಮಾಡಲಾಗುತ್ತದೆ. ಆ ನಂತರ ಭಾರತದಲ್ಲಿನ ಅವರ ಗ್ರಾಹಕರ ಜತೆ ಹ್ಯಾಕರ್‌ಗಳು ವಹಿವಾಟು ಮುಂದುವರಿಸುತ್ತಾರೆ. ಈ ವಹಿವಾಟುಗಳು ಬಹುಪಾಲು ಇ–ಮೇಲ್ ಮೂಲಕ ನಡೆಯುವ ಕಾರಣ, ವಂಚನೆ ಸುಲಭ.

ವಿದೇಶಿ ಪೂರೈಕೆದಾರರ ಹೆಸರಿನಲ್ಲಿ ಹ್ಯಾಕರ್‌ಗಳು, ಭಾರತದಲ್ಲಿನ ಗ್ರಾಹಕರನ್ನು ಸಂಪರ್ಕಿಸುತ್ತಾರೆ. ವಿದೇಶದಿಂದ ಪೂರೈಕೆಯಾಗಬೇಕಿರುವ ಸರಕಿನ ಮೊತ್ತವನ್ನು ಪಾವತಿ ಮಾಡುವಂತೆ ಕೋರಲಾಗುತ್ತದೆ. ಹಣ ವರ್ಗಾವಣೆ ಮಾಡಲು ಈ ಹಿಂದೆ ಬಳಸುತ್ತಿದ್ದ ಖಾತೆಯ ಬದಲಿಗೆ ಬೇರೊಂದು ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗುತ್ತದೆ. ಭಾರತದಲ್ಲಿನ ಗ್ರಾಹಕರು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ. ಹ್ಯಾಕರ್ ಆ ಹಣವನ್ನು ಪಡೆದುಕೊಂಡು, ನಿರ್ಗಮಿಸುತ್ತಾನೆ. ವಿದೇಶಿ ಪೂರೈಕೆದಾರನಿಗೂ ವಂಚನೆಯಾಗುತ್ತದೆ, ಭಾರತದ ಗ್ರಾಹಕನಿಗೂ ವಂಚನೆಯಾಗುತ್ತದೆ.

ಎಷ್ಟೋ ಬಾರಿ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡುವುದರ ಬಗ್ಗೆ ಭಾರತದ ಗ್ರಾಹಕರು ವಿದೇಶಿ ಪೂರೈಕೆದಾರರಿಗೆ ಕರೆ ಮಾಡಿ ಖಾತರಿ ಪಡಿಸಿಕೊಳ್ಳುತ್ತಾರೆ. ಆದರೆ, ಪೂರೈಕೆದಾರರ ಫೋನ್ ಸಂಖ್ಯೆಗೆ ಬರುವ ಕರೆಗಳೂ ಹ್ಯಾಕರ್‌ಗಳಿಗೆ ಹೋಗುವಂತೆ ‘ರಿಡೈರೆಕ್ಟ್’ ಮಾಡಲಾಗಿರುತ್ತದೆ. ಹೀಗಾಗಿ ಎಚ್ಚರವಹಿಸಿದರೂ, ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗೇ ಇರುತ್ತದೆ.

ಈ ಸ್ವರೂಪದ ವಹಿವಾಟು ನಡೆಸುವವರು ತಮ್ಮ ಪೂರೈಕೆದಾರರ ಜತೆ ಸದಾ ಸಂಪರ್ಕದಲ್ಲಿ ಇರುವುದು ಅತ್ಯಗತ್ಯ. ದೀರ್ಘಕಾಲದಿಂದ ವಹಿವಾಟು ನಡೆಸುತ್ತಿದ್ದರೂ, ಹಣ ವರ್ಗಾವಣೆ ವಿಚಾರದಲ್ಲಿ ಸದಾ ಎಚ್ಚರಿಕೆ ವಹಿಸುವುದು ಅನಿವಾರ್ಯ. ಉದ್ದಿಮೆ/ವಹಿವಾಟುಗಳಿಗೆ ಸಂಬಂಧಿಸಿದಂತೆ ಉಚಿತ ಇ–ಮೇಲ್‌ ಸೇವೆಯನ್ನು ಪಡೆದುಕೊಳ್ಳುವುದರ ಬಗ್ಗೆ ಎಚ್ಚರಿಕೆ ಅಗತ್ಯ. ಬದಲಿಗೆ ‘ಪೇಯ್ಡ್ ವರ್ಷನ್‌’ ಇ–ಮೇಲ್‌ ಬಳಸುವುದು ಹೆಚ್ಚು ಸುರಕ್ಷಿತ ಎನ್ನುತ್ತಾರೆ ಸೈಬರ್ ಅಪರಾಧ ವಿಭಾಗದ ಪೊಲೀಸರು.

ಇ–ಮೇಲ್ ಹ್ಯಾಕಿಂಗ್ ತಡೆ ಕ್ರಮಗಳು

* ವಹಿವಾಟಿಗೆ ಸಂಬಂಧಿಸಿದ ಹಣ ವರ್ಗಾವಣೆ ವಿಧಾನದಲ್ಲಿ ಬದಲಾವಣೆಯಾದರೆ, ಪೂರೈಕೆದಾರರು/ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವುದು ಅತ್ಯಗತ್ಯ

* ವಹಿವಾಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿ ಬದಲಾವಣೆಯಾದರೆ, ಅದನ್ನು ಎರಡೆರಡು ಬಾರಿ ದೃಢಪಡಿಸಿಕೊಳ್ಳಬೇಕು

* ಆರ್ಥಿಕ ವಹಿವಾಟು, ವಹಿವಾಟು ಒಪ್ಪಂದಕ್ಕೆ ಸಂಬಂಧಿಸಿದ ಇ–ಮೇಲ್‌ಗಳಿಗೆ ಸಾರಾಸಗಟಾಗಿ ‘ರಿಪ್ಲೆ’ ಒತ್ತಬಾರದು. ಆ ಇ–ಮೇಲ್‌ಗಳು ಹ್ಯಾಕರ್‌ಗಳ ಇ–ಮೇಲ್ ಖಾತೆಗೆ ರಿಡೈರೆಕ್ಟ್ ಆಗಿರುವ ಸಾಧ್ಯತೆ ಇರುತ್ತದೆ

* ಇ–ಮೇಲ್ ಸಿಗ್ನೇಚರ್‌ನಲ್ಲಿ ಬಂದಿರುವ ಫೋನ್‌ಸಂಖ್ಯೆ ಮತ್ತು ಫ್ಯಾಕ್ಸ್‌ಸಂಖ್ಯೆಯನ್ನು ಬಳಸಬಾರದು. ಇ–ಮೇಲ್ ಡೈರೆಕ್ಟರಿಯಲ್ಲಿ ಇರುವ ಸಂಪರ್ಕ ವಿವರಗಳ ಮೂಲಕವೇ ಇ–ಮೇಲ್ ವ್ಯವಹಾರ ನಡೆಸಬೇಕು

* ವಹಿವಾಟು ನಡೆಸುತ್ತಿರುವ ಕಂಪನಿಯಲ್ಲಿ ಪರಿಚಿತರಿರುವ ವ್ಯಕ್ತಿಯ ಜತೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇರಬೇಕು. ಪ್ರತಿ ವಹಿವಾಟಿನ ಮಾಹಿತಿಯನ್ನು ಹಂಚಿಕೊಳ್ಳಬೇಕು ಮತ್ತು ದೃಢಪಡಿಸಿಕೊಳ್ಳಬೇಕು

ಕಸ್ಟಮರ್ ಕೇರ್ ಸಂಖ್ಯೆಯ ಅನಾಹುತ

ಬೆಂಗಳೂರಿನ ನಯನಾ ಎಂಬುವರ ಖಾತೆ ಇರುವ ಬ್ಯಾಂಕ್ ಮತ್ತೊಂದು ಬ್ಯಾಂಕ್ ಜೊತೆ ಇತ್ತೀಚೆಗೆ ವಿಲೀನವಾಗಿದೆ. ವಿಲೀನ ಪ್ರಕ್ರಿಯೆಯ ಕಾರಣ ಎರಡು ದಿನ ಅವರ ಎಟಿಎಂ ಕಾರ್ಡ್ ಕೆಲಸ ಮಾಡಲಿಲ್ಲ. ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸುವ ಬದಲು ಅವರು ಆನ್‌ಲೈನ್‌ನಲ್ಲಿ ಸಿಗುವ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದರು. ಕಾರ್ಡ್ ಸರಿಪಡಿಸಲು ಒಟಿಪಿ ಅಗತ್ಯ ಎಂದು ಹೇಳಿದ ಆ ವ್ಯಕ್ತಿ, ಇವರ ಬಳಿಯಿಂದ ಮೂರು ಬಾರಿ ಒಟಿಪಿ ಪಡೆದುಕೊಂಡ. ನಯನಾ ಅವರ ಖಾತೆಯಿಂದ ಮೂರು ಬಾರಿ ಹಣ ವಿತ್‌ಡ್ರಾ ಆಯ್ತು. ತಾವು ಮೋಸ ಹೋಗಿರುವುದು ಗೊತ್ತಾಗಿ, ಮತ್ತೆ ಆ ಸಂಖ್ಯೆಗೆ ಕರೆ ಮಾಡಿದರೆ ವ್ಯಕ್ತಿಯ ಸುಳಿವೇ ಇಲ್ಲ.

ಇದು ಆನ್‌ಲೈನ್‌ನಲ್ಲಿ ಸಿಗುವ ಸಂಖ್ಯೆಗೆ ಕರೆ ಮಾಡಿ ಆದ ಅನಾಹುತಕ್ಕೆ ಒಂದು ಉದಾಹರಣೆ.ಇಲ್ಲಿ ಆಗಿರುವುದಿಷ್ಟು. ಬ್ಯಾಂಕ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ ವಂಚಕ, ಕಸ್ಟಮರ್ ಕೇರ್ ಸಂಖ್ಯೆ ಎಂಬುದಾಗಿ ತನ್ನ ಸಂಖ್ಯೆಯನ್ನು ನಮೂದಿಸಿದ್ದಾನೆ. ಬ್ಯಾಂಕ್‌ ಸಿಬ್ಬಂದಿ ಜತೆ ಮಾತನಾಡಲು ಬಯಸುವ ಗ್ರಾಹಕರು ನೇರವಾಗಿ ಗೂಗಲ್‌ನಿಂದ ಕಸ್ಟಮರ್ ಕೇರ್ ಸಂಖ್ಯೆ ಪಡೆದು, ಅದಕ್ಕೆ ಕರೆ ಮಾಡಿ ಮೋಸ ಹೋಗುತ್ತಾರೆ.

ಮುನ್ನೆಚ್ಚರಿಕೆ:

* ಬ್ಯಾಂಕ್‌ ಹೆಸರಿನಲ್ಲಿ ಸೃಷ್ಟಿಯಾಗಿರುವ ನಕಲಿ ವೆಬ್‌ಸೈಟ್ ಬಗ್ಗೆ ಜಾಗ್ರತೆ ಅತ್ಯಗತ್ಯ

* ಆನ್‌ಲೈನ್‌ನಲ್ಲಿ ಸಿಗುವ ಕಸ್ಟಮರ್ ಕೇರ್ ಸಂಖ್ಯೆಗಳು ಅಧಿಕೃತವೇ ಎಂದು ಪರೀಕ್ಷಿಸಿಕೊಳ್ಳಿ

* ಕಸ್ಟಮರ್ ಕೇರ್ ಸಿಬ್ಬಂದಿ ಸಹ ಒಟಿಪಿ ಕೇಳುವುದಿಲ್ಲ. ಅವರು ಕೇಳಿದ್ದಾರೆ ಎಂದರೆ, ಅವರು ವಂಚಕರು ಎಂಬುದು ಪಕ್ಕಾ

* ತುರ್ತು ಕೆಲಸಗಳನ್ನು ಹೊರತುಪಡಿಸಿ, ಪ್ರತಿಯೊಂದಕ್ಕೂ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಲು ಹೋಗಬೇಡಿ

* ಕಸ್ಟಮರ್ ಕೇರ್‌ ಬದಲು, ನಿಮ್ಮ ಖಾತೆ ಇರುವ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಿ

ಎಟಿಎಂನಲ್ಲಿ ಎಚ್ಚರ

ತುರ್ತಾಗಿ ಹಣದ ಅವಶ್ಯಕತೆ ಇದ್ದಿದ್ದರಿಂದ ಸಮೀಪದ ಎಟಿಎಂ ಒಳಗೆ ನುಗ್ಗಿದ ವ್ಯಕ್ತಿಯೊಬ್ಬರು ಲಗುಬಗೆಯಿಂದ ಒಂದಿಷ್ಟು ಹಣ ಡ್ರಾ ಮಾಡಿಕೊಂಡು ಹೋದರು. ಹಣ ಕಡಿತವಾದ ಬಗ್ಗೆ ಎಸ್‌ಎಂಎಸ್ ಬಂದಿತು. ಸಂಜೆಯಾಗುವಷ್ಟರಲ್ಲಿ ಅವರ ಖಾತೆಯಿಂದ ಮತ್ತೊಂದಿಷ್ಟು ಹಣ ವಿತ್‌ಡ್ರಾ ಆಗಿರುವ ಬಗ್ಗೆ ಇನ್ನೊಂದು ಮೆಸೇಜ್ ಬಂದಿತು. ಮೊದಲ ಬಾರಿ ಬಳಸಿದ ಎಟಿಎಂನಲ್ಲೇ ಎರಡನೇ ಬಾರಿಯೂ ಹಣ ವಿತ್‌ಡ್ರಾ ಆಗಿತ್ತು. ಯಾರೋ ಹಣ ಲಪಟಾಯಿಸಿದ್ದಾರೆ ಎಂದು ತಿಳಿದ ಆ ವ್ಯಕ್ತಿ ಕುಗ್ಗಿಹೋದರು.

ಇದು ಸ್ಕಿಮ್ಮರ್ ಮಾಯೆ:ಈ ಘಟನೆಯಲ್ಲಿ ಹಣ ಡ್ರಾ ಮಾಡಿದ ವ್ಯಕ್ತಿಯ ತಪ್ಪು ಮೇಲ್ನೋಟಕ್ಕೆ ಕಾಣುವುದಿಲ್ಲ. ಇದು ಎಟಿಎಂ ಯಂತ್ರದಲ್ಲಿ ಅಳವಡಿಸಿರುವ ‘ಸ್ಕಿಮ್ಮರ್’ನ ಚಮತ್ಕಾರ. ಕಾರ್ಡನ್ನು ಎಟಿಎಂನೊಳಗೆ ಇರಿಸುವ ಜಾಗದಲ್ಲಿ, ಗೊತ್ತಿಲ್ಲದ ಹಾಗೆ ತೆಳು ಹಾಳೆಯೊಂದನ್ನು ಅಳವಡಿಸಲಾಗಿರುತ್ತದೆ. ಕಾರ್ಡ್ ಹಾಕಿದ ಕೂಡಲೇ ಅದರಲ್ಲಿರುವ ಮಾಹಿತಿ ವಂಚಕರ ಕಂಪ್ಯೂಟರ್‌ಗೆ ರವಾನೆಯಾಗುತ್ತದೆ. ಕೀಪ್ಯಾಡ್ ಮೇಲ್ಭಾಗದಲ್ಲಿ ಪುಟ್ಟ ಕ್ಯಾಮೆರಾವನ್ನು ವಂಚಕರು ಅಳವಡಿಸಿರುತ್ತಾರೆ. ಎಟಿಎಂ ಕಾರ್ಡ್‌ನ ಪಿನ್ ಸಂಖ್ಯೆಯನ್ನು ಕ್ಯಾಮೆರಾ ದಾಖಲಿಸಿಕೊಳ್ಳುತ್ತದೆ. ಖದೀಮರು ನಿಮ್ಮ ಕಾರ್ಡ್‌ ದತ್ತಾಂಶಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ.

ಮುಂಜಾಗ್ರತಾ ಕ್ರಮಗಳು:

* ಸ್ಕಿಮ್ಮರ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ

* ಕೀಪ್ಯಾಡ್‌ ಮೇಲ್ಭಾಗದಲ್ಲಿ ಕ್ಯಾಮೆರಾ,ಕಣ್ಣಿಗೆ ಕಾಣದ ತೆಳು ಪದರ ಅಥವಾ ಅನವಶ್ಯಕ ಉಪಕರಣಗಳು ಇವೆಯೇ ಎಂದು ಪರಿಶೀಲಿಸಿ

* ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಹಣ ಡ್ರಾ ಮಾಡಬೇಡಿ. ಬ್ಯಾಂಕ್‌ಗೆ ಹೊಂದಿಕೊಂಡ ಎಟಿಎಂ ಬಳಕೆ ಸೂಕ್ತ

ಬ್ಯಾಂಕ್ ಲೋನ್ ಹೆಸರಲ್ಲಿ ಮೋಸ

ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಮೊತ್ತದ ಸಾಲ ನೀಡುವುದಾಗಿ ಕರೆ ಮಾಡುವವರ ಬಗ್ಗೆ ಎಚ್ಚರದಿಂದ ಇರಿ. ಬ್ಯಾಂಕ್ ಸಿಬ್ಬಂದಿ, ಏಜೆಂಟ್ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿ, ನಿಮ್ಮ ಗುರುತಿನ ಪತ್ರ, ವಿಳಾಸ ದಾಖಲೆ, ಬ್ಯಾಂಕ್ ಪಾಸ್‌ಬುಕ್ ಮೊದಲಾದ ದಾಖಲೆಗಳನ್ನು ಕೇಳುತ್ತಾನೆ. ಸಾಲ ಮಂಜೂರಾಗಿದೆ, ಫಾರ್ಮ್ ಭರ್ತಿಮಾಡಿ ಎಂದು ಹೇಳುತ್ತಾನೆ. ಬ್ಯಾಂಕ್‌ ಅರ್ಜಿಯ ರೀತಿಯಲ್ಲೇ ಕಾಣುವಫಾರ್ಮ್‌ ಅನ್ನು ಭರ್ತಿ ಮಾಡಿ ಕಳುಹಿಸಿದ ಕೂಡಲೇ ಪ್ರೊಸೆಸಿಂಗ್ ಶುಲ್ಕ ಮತ್ತು ಠೇವಣಿ ಹಣಕ್ಕೆ ಬೇಡಿಕೆ ಇಡುತ್ತಾನೆ. ಇದು ಸಾಲದ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆಯ ಮತ್ತೊಂದು ಮುಖ.

ಏನು ಮಾಡಬೇಕು:

*ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ಕರೆ ಮಾಡುವ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಿ

*ಸಾಲ ಬೇಕೆಂದರೆ ನೇರವಾಗಿ ಬ್ಯಾಂಕ್‌ ಶಾಖೆಗೆ ಭೇಟಿ ನೀಡುವುದು ಒಳಿತು

*ಪ್ರೊಸೆಸಿಂಗ್ ಶುಲ್ಕ ಪಾವತಿಸಿ ಎಂದು ಕೇಳುವುದು ವಂಚನೆಯ ಸೂಚನೆ. ಸಾಲದ ಹಣದಲ್ಲಿ ಆ ಶುಲ್ಕ ಕಡಿತವಾಗಿಯೇ ಉಳಿದ ಹಣ ನಿಮ್ಮ ಕೈ ಸೇರುತ್ತದೆ ಎಂಬುದು ಗೊತ್ತಿರಲಿ

*ಸಾಲ ಕೊಡಲು ಮುಂದೆ ಬರುವ ವ್ಯಕ್ತಿಯನ್ನು ನೇರವಾಗಿ ಭೇಟಿಯಾಗಿ ಮಾತನಾಡಿ. ಗುರುತಿನ ಪತ್ರ ಪರಿಶೀಲಿಸಿ

*ಮೋಸ ಹೋಗಿದ್ದರೆ, ಸಂಬಂಧಪಟ್ಟ ದಾಖಲೆಗಳೊಂದಿಗೆ ಹತ್ತಿರದ ಪೊಲೀಸ್/ಸೈಬರ್ ಠಾಣೆಗೆ ದೂರು ಸಲ್ಲಿಸಿ

(ಮಾಹಿತಿ:cyberpolicebangalore.nic.in, ವರದಿ: ಜಯಸಿಂಹ ಆರ್., ಅಮೃತಕಿರಣ್ ಬಿ.ಎಂ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT