ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?
ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?
ಲೋಕ ರಾಜಕಾರಣ ಸರಣಿ–7
ಯೋಗೇಂದ್ರ ಯಾದವ್, ರಾಹುಲ್ ಶಾಸ್ತ್ರಿ, ಶ್ರೇಯಸ್‌ ಸರ್ದೇಸಾಯಿ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಇದೊಂದು ಅಸಾಮಾನ್ಯ ಲೋಕಸಭಾ ಚುನಾವಣೆಯಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಹಾಗಾದರೆ, ಇಂಥ ಅಸಾಮಾನ್ಯ ಚುನಾವಣೆಯ ಫಲಿತಾಂಶವು ಏನ್ನನ್ನು ಸಾರುತ್ತಿದೆ ಎನ್ನುವ ಪ್ರಶ್ನೆಯನ್ನೂ ನಾವು ಹಾಕಿಕೊಳ್ಳಬೇಕಲ್ಲವೇ. ಬಹುಶಃ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು, ಪ್ರಜಾಪ್ರಭುತ್ವವಾದಿ ಹಾಗೂ ಜಾತ್ಯತೀತ ಭಾರತದ ಉಳಿವನ್ನು ಅಪೇಕ್ಷಿಸಿ ಜನರು ನೀಡಿದ ಆದೇಶ ಎಂದು ಭಾವಿಸಿಕೊಳ್ಳಬಹುದೇ? ಈ ಎಲ್ಲ ಪ್ರಮುಖ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮೂಲಕ ನಮ್ಮ ಈ ಲೇಖನಗಳ ಸರಣಿಯನ್ನು ಮುಗಿಸುತ್ತಿದ್ದೇವೆ.

ಒಂದರ್ಥದಲ್ಲಿ ಹೌದು. ಭಾರತವು ಜಾತ್ಯತೀತವಾಗಿ ಹಾಗೂ ಪ್ರಜಾಪ್ರಭುತ್ವವಾದಿಯಾಗಿಯೇ ಉಳಿಯಬೇಕು ಎಂದು ಜನರು ಅಪೇಕ್ಷಿಸಿದ್ದಾರೆ ಎಂದೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇದು ‘ಸರ್ವಶ್ರೇಷ್ಠ ನಾಯಕ’ನ ಕುರಿತು ಬಂದ ಜನಾದೇಶ. ಕಳೆದ 10 ವರ್ಷಗಳ ತನ್ನ ಸರ್ವಾಧಿಕಾರಿ ವರ್ತನೆಗಾಗಿ, ಮುಂದಿನ ಐದು ವರ್ಷಗಳಲ್ಲಿ ದೇಶದ ಗಣತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತೇನೆ ಎನ್ನುವುದಕ್ಕಾಗಿ ತನಗೆ ಅಭೂತಪೂರ್ವ ಗೆಲುವು ತಂದುಕೊಡಿ ಎಂದು ನರೇಂದ್ರ ಮೋದಿ ಅವರು ಜನರಲ್ಲಿ ಕೇಳಿಕೊಂಡಿದ್ದರು. ಆದರೆ, ಮೋದಿ ಅವರ ಈ ಬೇಡಿಕೆಯನ್ನು ಜನರು ತಿರಸ್ಕರಿಸಿದ್ದಾರೆ.

ಹಿಂದೂ ಬಹುಸಂಖ್ಯಾತವಾದ ಪ್ರತಿಪಾದಿಸುವ ರಾಜಕಾರಣದ ಪ್ರಭಾವವಿದ್ದರೂ, ಮೋದಿ ಅವರು ಹತಾಶೆಯಿಂದ ಕೂಡಿದ್ದ ಮುಸ್ಲಿಂ ವಿರೋಧ ಎಂಬ ಅತಿರೇಕ ನಡೆಸಿದರೂ, ಕೋಮುಧ್ರುವೀಕರಣ ಯತ್ನ ನಡೆಸಿದರೂ ಗೆಲುವು ಮಾತ್ರ ದೊರೆಯಲಿಲ್ಲ. ಈ ಫಲಿತಾಂಶವು ಪ್ರಧಾನಿ ಮೋದಿ ಅವರ ವೈಯಕ್ತಿಕ ಸೋಲು. ತಾನು ಅಜೇಯ ಎಂಬಂತೆ ಬಿಂಬಿಸಿಕೊಂಡಿದ್ದ ಮೋದಿ ಅವರ ಬಲೂನಿಗೆ ಈ ಫಲಿತಾಂಶವು ಸೂಜಿ ಚುಚ್ಚಿದೆ.

ಇವೆಲ್ಲವೂ ಘಟಿಸಲೇ ಬೇಕಿತ್ತು: ಸ್ವತಂತ್ರ ಮತ್ತು ಮುಕ್ತ ಚುನಾವಣೆಯೇ ನಡೆಯದ, ನಾಗರಿಕ ಹಕ್ಕುಗಳಿಗೆ ರಕ್ಷಣೆಯೇ ಇಲ್ಲದ ಹಾಗೂ ವಿರೋಧ ಪಕ್ಷಗಳಿಗೆ ಸಮಾನ ಅವಕಾಶವೇ ಇಲ್ಲದಂಥ ‘ಅರೆ ಸರ್ವಾಧಿಕಾರ’ದಿಂದ ‘ಪೂರ್ಣ ಸರ್ವಾಧಿಕಾರ’ದತ್ತ ದೇಶವು ಹೊರಳುತ್ತಿತ್ತು. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಹಿನ್ನೆಲೆಗೆ ಸರಿಯುತ್ತಿತ್ತು. ಈ ಎಲ್ಲದಕ್ಕೂ ಈ ಫಲಿತಾಂಶ ತಡೆ ಒಡ್ಡಿದೆ.

ಆಡಳಿತ ಪಕ್ಷದ ಒಳಗೂ ಹೊರಗೂ, ಸಂಸತ್ತಿನ ಒಳಗೂ ಹೊರಗೂ ಪ್ರಜಾಪ್ರಭುತ್ವವಾದಿ ನಿಲುವುಗಳು ಮತ್ತೆ ತಲೆಎತ್ತಿವೆ. ಸಂವಿಧಾನದತ್ತವಾಗಿ ಬಂದಿರುವ ಜಾತ್ಯಾತೀತ ನಿಲುವನ್ನು ಛಿದ್ರಗೊಳಿಸಿ, ಭಾರತವನ್ನು ಹಿಂದೂ ಬಹುಸಂಖ್ಯಾತವಾದಿ ರಾಷ್ಟ್ರವನ್ನಾಗಿಸುವ ಸಿದ್ಧಾಂತ ಪ್ರೇರಿತ ಕಾರ್ಯಯೋಜನೆಯನ್ನು ಈ ಫಲಿತಾಂಶವು ತಡೆದು ನಿಲ್ಲಿಸಿದೆ.

ಇವೆಲ್ಲವೂ ಬಹಳ ಮುಖ್ಯವಾದ ಬದಲಾವಣೆಗಳೇನೋ ಹೌದು. ಆದರೆ, ಇಷ್ಟುಮಾತ್ರಕ್ಕೆ ಈ ಫಲಿತಾಂಶವು ಪ್ರಜಾಪ್ರಭುತ್ವವಾದಿ ಹಾಗೂ ಜಾತ್ಯತೀತ ಭಾರತವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಬಂದಿದೆ ಎನ್ನಲಾಗದು. ಪ್ರಜಾಪ್ರಭುತ್ವವಾದಿ ಭಾರತವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಮತದಾನ ಮಾಡುತ್ತಿದ್ದೇವೆ ಎಂದು ಜನರು ಮತ ಹಾಕಿಲ್ಲ. ಆದರೆ, ಈ ಸ್ವರೂಪದ ಮತದಾನದಿಂದ ಪ್ರಜಾಪ್ರಭುತ್ವ ಉಳಿಯಿತು. ಫಲಿತಾಂಶವು ಈ ಚುನಾವಣೆಯ ಕುರಿತು ಒಟ್ಟಾರೆಯಾಗಿ ಏನನ್ನು ಹೇಳುತ್ತಿದೆ ಎಂಬುದರ ಕುರಿತಷ್ಟೇ ವಿಶ್ಲೇಷಣೆಗಳನ್ನು ನಡೆಸಲಾಗುತ್ತಿದೆ. ಮತದಾರನ ಅಭಿಪ್ರಾಯವನ್ನು ತಿಳಿಯದ ಹೊರತು ಈ ವಿಶ್ಲೇಷಣೆಗಳು ಎಷ್ಟರ ಮಟ್ಟಿಗೆ ಸೂಕ್ತವಾಗಿವೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ.

ಲೋಕನೀತಿ–ಸಿಎಸ್‌ಡಿಎಸ್‌ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ. 20 ಸಾವಿರ ಜನರನ್ನು ಮುಖಾಮುಖಿ ಸಂದರ್ಶಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಸಂದರ್ಶನವನ್ನು ಮತದಾನ ನಡೆದ ನಂತರ ಮತ್ತು ಮತ ಎಣಿಕೆಗೂ ಮುನ್ನ ನಡೆಸಲಾಗಿದೆ. ಕಳೆದ 30 ವರ್ಷಗಳಿಂದಲೂ ಈ ಸಂಸ್ಥೆಗಳು ಇಂಥ ಸಮೀಕ್ಷೆಯನ್ನು ನಡೆಸುತ್ತಿವೆ. (ಅರಿಕೆ: ಲೇಖಕರಲ್ಲಿ ಇಬ್ಬರು ಈ ಹಿಂದೆ ಈ ಸಂಸ್ಥೆಗಳ ಸಮೀಕ್ಷಾ ತಂಡದ ಭಾಗವಾಗಿದ್ದರು. ಆದರೆ, ಈಗ ಅವರಿಗೂ ಈ ಸಮೀಕ್ಷೆಗೂ ಯಾವುದೇ ಸಂಬಂಧ ಇಲ್ಲ) ಈ ಸಮೀಕ್ಷೆಯ ಮೂಲಕ ಮತದಾರನ ಮನದಾಳವನ್ನು ತುಸುಮಟ್ಟಿಗೆ ಗ್ರಹಿಸಬಹುದಾಗಿದೆ.

ಮತದಾರನು ಯಾರಿಗೆ ಮತ ನೀಡಿದ್ದಾನೆ, ಆತನ ಸಾಮಾಜಿಕ ಹಿನ್ನೆಲೆಯನ್ನು ಮುಖ್ಯವಾಗಿಸಿಕೊಂಡು ಚುನಾವಣೋತ್ತರ ಸಮೀಕ್ಷೆಗಳು ನಡೆಯುತ್ತವೆ. ಆದರೆ, ಈ ಸಮೀಕ್ಷೆಯು ಈ ತೆರನಾಗಿಲ್ಲ. ಇಲ್ಲಿ ಮತದಾರನ ಅಭಿಪ್ರಾಯವನ್ನೂ ಸೇರಿಸಿಕೊಳ್ಳಲಾಗಿದೆ. ಈ ಸಮೀಕ್ಷೆಯ ದತ್ತಾಂಶಗಳ ಕುರಿತು ಈ ಸಂಸ್ಥೆಗಳೊಟ್ಟಿಗೆ ಕೆಲಸ ಮಾಡುವ ಪ್ರಾಜ್ಞರು ವಿವರವಾದ ಹಾಗೂ ಸೂಕ್ಷ್ಮವಾದ ಹೊಳಹುಗಳಿರುವ ವಿಶ್ಲೇಷಣೆಗಳನ್ನು ನೀಡಲಿದ್ದಾರೆ. ಆದರೆ, ಲಭ್ಯವಿರುವ ದತ್ತಾಂಶಗಳಿಂದಲೇ ನಾವು ಕೆಲವು ವಿಶ್ಲೇಷಣೆಗಳನ್ನು ಮಾಡಬಹುದು.

ಜೀವನಾಡಿಯಂತಿರುವ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವದ ಕುರಿತು ಮಾತನಾಡುವುದಾದರೆ, ಒಂದಂತು ಸ್ಪಷ್ಟ: ನೈಜ ಸ್ವರೂಪದ ಪ್ರಜಾಪ್ರಭುತ್ವವು ಏಳು ದಶಕ ದೇಶದಲ್ಲಿ ಜಾರಿಯಲ್ಲಿತ್ತು. ಈ ಕಾರಣದಿಂದಾಗಿಯೇ ಪ್ರಜಾಪ್ರಭುತ್ವವು ಜನರ ಜೀವನಾಡಿಯಂತಾಗಿದೆ. ಹೀಗಿರುವಾಗ ಜನರ ಜೀವನಾಡಿಯ ಮೇಲೆ ಬುಲ್ಡೋಜರ್‌ ಹತ್ತಿಸಲು ಸಾಧ್ಯವಿಲ್ಲ.

ನ್ಯಾಯಸಮ್ಮತ ಚುನಾವಣೆಯ ಮೂಲಕ ಸರ್ಕಾರವನ್ನು ಬದಲಿಸುವ ಅವಕಾಶವನ್ನು ಪ್ರಜಾಪ್ರಭುತ್ವ ನೀಡುತ್ತದೆ ಎಂಬುದನ್ನು ಭಾರತೀಯರು ನಂಬುತ್ತಾರೆ. ಈ ಸಮೀಕ್ಷೆಯಲ್ಲಿ ಶೇ 46ರಷ್ಟು ಜನರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಹಳ ವರ್ಷ ಒಂದೇ ಪಕ್ಷದ ಸರ್ಕಾರವು ಅಧಿಕಾರ ನಡೆಸುವುದಿಕ್ಕಿಂತ ಸರ್ಕಾರಗಳನ್ನು ಬದಲಾಯಿಸಿದರೇ ದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎನ್ನುವ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ ಮೂವರಲ್ಲಿ ಇಬ್ಬರು ವ್ಯಕ್ತಪಡಿಸಿದ್ದಾರೆ. 

ಚುನಾವಣೆಗಳ ಮೂಲಕ ಸರ್ಕಾರವನ್ನು ಬದಲಿಸಬಹುದು ಎಂಬುದಕ್ಕೆ ಮಾತ್ರವೇ ಜನರು ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಿಲ್ಲ. ಇದಕ್ಕೆ ಹಲವು ಆಯಾಮಗಳಿವೆ. ಜನರಿಂದಲೇ ಚುನಾಯಿತವಾದ ಸರ್ಕಾರವನ್ನು ಜನರೇ ನಿಯಂತ್ರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಇಂಥದ್ದು ಸಾಧ್ಯವಿದೆ ಎನ್ನುವುದು ಜನರಿಗೆ ತಿಳಿದಿದೆ. ಇದೇ ಕಾರಣಕ್ಕಾಗಿಯೇ ಭಾರತೀಯರು ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಾರೆ. ವಾಸ್ತವದಲ್ಲಿ, ಭಾರತೀಯ ಮತದಾರನ ಈ ಪ್ರವೃತ್ತಿಯನ್ನು ಮೋದಿ ಅವರು ಸಹಿಸುತ್ತಿರಲಿಲ್ಲ.

ತಮ್ಮ ನಾಯಕನ ನಿರ್ಧಾರವನ್ನು ಪ್ರಭಾವಿಸುವ ಮತ್ತು ಕೆಲವು ಬಾರಿ ವಿರೋಧಿಸುವ ಹಕ್ಕು ಜನರಿಗೆ ಇದೆ ಎಂದು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 77ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಜನರ ಈ ಅಭಿಪ್ರಾಯವು ಪ್ರಸ್ತುತ ಮೋದಿ ಆಡಳಿತಕ್ಕೆ ನೀಡಿದ ಉತ್ತರ ಎಂದೇ ಭಾವಿಸಬೇಕಾಗುತ್ತದೆ. ಸರ್ಕಾರದ ಯೋಜನೆಯೊಂದು ತಮಗೆ ಅನುಕೂಲಕರವಾಗಿಲ್ಲ ಎಂದಾದರೆ, ನಾವು ಅದನ್ನು ವಿರೋಧಿಸಬಹುದು, ಅದು ನಮ್ಮ ಹಕ್ಕು ಎಂಬ ಅಭಿಪ್ರಾಯವನ್ನು ಇಷ್ಟೇ ಸಂಖ್ಯೆಯ (ಶೇ 77ರಷ್ಟು) ಜನರು ವ್ಯಕ್ತಪಡಿಸುತ್ತಾರೆ.

ಸಾಂವಿಧಾನಿಕ ಸಂಸ್ಥೆಗಳು ಹಾಗೂ ನ್ಯಾಯಾಲಯಗಳು ಚುನಾಯಿತ ಸರ್ಕಾರದ ಅಧಿಕಾರವನ್ನು ನಿಯಂತ್ರಣದಲ್ಲಿ ಇರಿಸುವ ಕೆಲಸ ಮಾಡಬೇಕು ಎಂಬುದನ್ನು ಶೇ 68ರಷ್ಟು ಜನರು ಹೇಳುತ್ತಾರೆ. ಭಾರತೀಯ ಮತದಾರರಿಗೆ ಉದಾರವಾದಿ ಪ್ರಜಾಪ್ರಭುತ್ವದ ಕುರಿತು ತಿಳಿವಳಿಕೆ ಇಲ್ಲದೆ ಇರಬಹುದು, ಅದರ ವ್ಯಾಖ್ಯಾನವನ್ನು ಮಾಡಲು ಬರದೇ ಇರಬಹುದು. ಆದರೆ, ಭಾರತೀಯರು ಸರ್ವಾಧಿಕಾರವನ್ನು, ಸರ್ಕಾರವು ಉತ್ತರದಾಯಿಯಾಗಿ ಇಲ್ಲದಿರುವುದನ್ನು ಹಾಗೂ ನಿರಂಕುಶ ಆಡಳಿತವನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ.

ಜನರು ಪ್ರಜಾಪ್ರಭುತ್ವದ ಕುರಿತು ಇಷ್ಟೆಲ್ಲಾ ಸೂಕ್ಷ್ಮವಾದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ ಎಂದು ಸಂಭ್ರಮಿಸುವುದಕ್ಕೆ ಆತುರಬೇಡ. ಕೆಲವು ಆತಂಕಕಾರಿ ಅಂಶಗಳೂ ಈ ಸಮೀಕ್ಷೆಗಳಿಂದ ತಿಳಿದುಬಂದಿವೆ. ಅದೇನೆಂದರೆ, ‘ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಒಬ್ಬ ಪ್ರಬಲ ನಾಯಕ ನಮಗೆ ಬೇಕು’ ಎಂಬ ಪ್ರಶ್ನೆಯನ್ನು ಜನರಿಗೆ ಕೇಳಲಾಯಿತು. ಇಂಥ ಮೃದು ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನಾಲ್ವರಲ್ಲಿ ಒಬ್ಬರು ಮಾತ್ರ. ಉಳಿದ ಮೂವರು ಇಂಥ ಮೃದು ಸರ್ವಾಧಿಕಾರವನ್ನು ಒಪ್ಪಿಕೊಳ್ಳುತ್ತಾರೆ.

ಆತಂಕದ ಮಧ್ಯೆ ತುಸು ಸಮಾಧಾನಕರ ವಿಚಾರವೂ ಇದೆ. 2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇದೇ ಮೃದು ಸರ್ವಾಧಿಕಾರದ ಕುರಿತು ಪ್ರಶ್ನೆ ಕೇಳಲಾಗಿತ್ತು. ಆ ಸಮೀಕ್ಷಾ ಅಂಕಿ–ಅಂಶಗಳಿಗೆ ಹೋಲಿಸಿದರೆ, ಈ ಬಾರಿ ಮೃದು ಸರ್ವಾಧಿಕಾರಿ ಧೋರಣೆಯನ್ನು ಒಪ್ಪಿಕೊಳ್ಳುವವರ ಪ್ರಮಾಣದಲ್ಲಿ ‌10 ಶೇಕಡಾವಾರು ಅಂಶಗಳಷ್ಟು ಕಡಿಮೆಯಾಗಿದೆ. ಈ ಧೋರಣೆಯನ್ನು ಒಪ್ಪಿಕೊಳ್ಳದವರ ಪ್ರಮಾಣದಲ್ಲಿ 2 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದೆ. ಸರ್ಕಾರವು ಸರ್ವಾಧಿಕಾರದತ್ತ ಹೊರಳುತ್ತಿದ್ದರೆ, ಜನರು ಅದರ ವಿರುದ್ಧ ಇದ್ದರು.

ಕಳೆದ ಐದು ವರ್ಷಗಳಲ್ಲಂತೂ ಪ್ರಜಾಪ್ರಭುತ್ವವು ತೀವ್ರ ದಾಳಿಗೆ ಒಳಗಾಗಿದೆ. ಇಂಥ ಸಂದರ್ಭದಲ್ಲಿಯೂ, ನಮ್ಮ ಮತದ ಮೂಲಕ ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬಹುದು ಅಥವಾ ಬದಲಾವಣೆಗಳನ್ನು ತರಬಹುದು ಎಂದು ಶೇ 67ರಷ್ಟು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಂದರ್ಭವು ಕಠಿಣವಾಗಿದ್ದಿರಬಹುದು, ಆದರೆ, ಈ ಸಂಖ್ಯೆಯು ಆತಂಕ ಹುಟ್ಟಿಸುತ್ತದೆ. ಏಕೆಂದರೆ, ಇದೇ ಪ್ರಶ್ನೆಯನ್ನು 2019ರಲ್ಲಿ ಕೇಳಿದ್ದಾಗ, ಶೇ 83ರಷ್ಟು ಜನರು, ತಮ್ಮ ಮತದಿಂದ ಬದಲಾವಣೆ ಸಾಧ್ಯ ಎಂದು ಹೇಳಿದ್ದರು. ಈ ಸಮೀಕ್ಷೆಗೆ 30 ವರ್ಷಗಳ ಇತಿಹಾಸವಿದೆ. ಹಿಂದೆಂದೂ ಇಷ್ಟೊಂದು ಕಡಿಮೆ ಸಂಖ್ಯೆಯ ಜನರು ಈ ಅಭಿಪ್ರಾಯವನ್ನು ನೀಡಿರಲಿಲ್ಲ.

ಚುನಾವಣಾ ಪ್ರಕ್ರಿಯೆಯಲ್ಲಿಯೂ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. 2019ರಲ್ಲಿ ಚುನಾವಣಾ ಆಯೋಗದ ಕುರಿತು ಜನರು ಹೆಚ್ಚಿನ ಆತ್ಮವಿಶ್ವಾಸವನ್ನು (ಶೇ 57ರಷ್ಟು ಜನರು) ಇಟ್ಟುಕೊಂಡಿದ್ದರು. ಆದರೆ, 2024ರಲ್ಲಿ ಆಯೋಗದಲ್ಲಿ ವಿಶ್ವಾಸ ಇರಿಸಿರುವ ಜನರ ಸಂಖ್ಯೆಯು ಶೇ 47ಕ್ಕೆ ಕುಸಿದಿದೆ. ಇವಿಎಂಗಳ ಕುರಿತೂ ಹೆಚ್ಚಿನ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. 2019ರಲ್ಲಿ ಇವಿಎಂ ಕುರಿತು ಶೇ 57ರಷ್ಟು ಜನರಿಗೆ ವಿಶ್ವಾಸವಿತ್ತು. ಆದರೆ, ಈಗ ಪ್ರಮಾಣವು ಶೇ 34ರಷ್ಟಕ್ಕೆ ಕುಸಿದಿದೆ.

ಮೋದಿ ಸರ್ಕಾರವು ಪ್ರಜಾಪ್ರಭುತ್ವದ ಮೇಲೆ ನಡೆಸಿದ ದಾಳಿಯ ಕಾರಣಕ್ಕಾಗಿಯೇ, ಸರ್ಕಾರವನ್ನು ಜನರು ಶಿಕ್ಷಿಸಿದ್ದಾರೆ ಎಂದು ಬಿಡುಬೀಸಾಗಿ ಹೇಳಲು ಸಾಧ್ಯವಿಲ್ಲ. ಸಮೀಕ್ಷೆ ಕೂಡ ಈ ಅಂಶವನ್ನು ಅಷ್ಟೇನು ಶೋಧಿಸಿಲ್ಲ. ಆದರೂ, ಮತದಾನದ ಮೂಲಕ ಜನರು ತಮ್ಮ ಅಭಿಪ್ರಾಯವನ್ನಂತೂ ಹೇಳಿದ್ದಾರೆ. ಮೇಲುನೋಟಕ್ಕೇ ಕೆಲವು ವಿಚಾರಗಳನ್ನು ನಾವು ಗಮನಿಸಬಹುದು. ಚುನಾವಣಾ ಸಮಯದಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುವ ಸರ್ಕಾರದ ಕ್ರಮವನ್ನು ಜನರು ಇಷ್ಟಪಡಲಿಲ್ಲ. ಇಂತಹ ಬಂಧನವನ್ನು ಸಮರ್ಥಿಸುವವರ ಸಂಖ್ಯೆ ಒಂದರಷ್ಟಿದ್ದರೆ, ಅದೇ ಸಂದರ್ಭದಲ್ಲಿ ಇದು ರಾಜಕೀಯಪ್ರೇರಿತ ಬಂಧನ ಎನ್ನುವವರ ಸಂಖ್ಯೆ ಎರಡರಷ್ಟಿತ್ತು.

ಮೋದಿ ಅವರ ಬಿಜೆಪಿಯ ಕುರಿತು ಯಾವುದನ್ನು ನೀವು ಇಷ್ಟಪಡುವುದಿಲ್ಲ ಎಂದು ಜನರನ್ನು ಕೇಳಲಾಯಿತು. ಇದಕ್ಕೆ ಶೇ 0.8ರಷ್ಟು ಜನರು ‘ಸರ್ಕಾರವು ಸರ್ವಾಧಿಕಾರಿ’ಯಾಗಿತ್ತು ಎಂದು ಉತ್ತರಿಸಿದ್ದರು. ‘ಮೋದಿ ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದು ಎಂಬುದಕ್ಕೆ ಕೆಲವು ಕಾರಣಗಳನ್ನು ನೀಡಿ’ ಎಂದು ಕೇಳಲಾಯಿತು. ಇದಕ್ಕೆ ಶೇ 1.1ರಷ್ಟು ಜನರು, ‘ಸರ್ಕಾರವು ಬಹಳ ಅಸಹಿಷ್ಣುವಾಗಿತ್ತು. ಜೊತೆಗೆ ಸರ್ಕಾರವು ನಾಗರಿಕರ ಹಕ್ಕುಗಳನ್ನು ದಮನ ಮಾಡಿತ್ತು’ ಎಂದು ಉತ್ತರಿಸಿದರು. ಶೇ 0.8 ಅಥವಾ ಶೇ 1.1ರಷ್ಟು ಎನ್ನುವುದು ಬಹಳ ಕಡಿಮೆ ಸಂಖ್ಯೆಯಾಯಿತು ನಿಜ. ಆದರೆ, ನಮ್ಮ ಸರಣಿ ಲೇಖನಗಳ ಉದ್ದಕ್ಕೂ ಇಂಥ ಕಡಿಮೆ ಸಂಖ್ಯೆಗಳಷ್ಟಿರುವ ಜನರೇ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬುದನ್ನು ಸಾಬೀತುಪಡಿಸಿದ್ದೇವೆ.

ಚುನಾವಣೆಯ ಫಲಿತಾಂಶ, ಸಮೀಕ್ಷೆಯಲ್ಲಿ ದೊರೆತ ದತ್ತಾಂಶಗಳು ಮತ್ತು ಅಭಿಪ್ರಾಯಗಳು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಭಾರತದ ಭವಿತವ್ಯಕ್ಕೆ ಒದಗಿಸಿಕೊಟ್ಟ ಭದ್ರತೆ ಅಲ್ಲ. ಆದರೆ ಗಣತಂತ್ರದ ನೆಲೆಗಟ್ಟನ್ನು ಮರುಸ್ಥಾಪಿಸಲು ಒಂದು ರಾಜಕೀಯ ಅವಕಾಶವನ್ನು ಇದು ಒದಗಿಸಿಕೊಟ್ಟಿದೆ ಎಂಬುದಂತೂ ನಿಜ. ಭಾರತವೆಂಬ ಸಿದ್ಧಾಂತವನ್ನು ಛಿದ್ರಮಾಡಲೆಂದೇ ನಡೆಸಲಾದ ಈ ಚುನಾವಣೆ ಒಂದರಿಂದಲೇ ಇದಕ್ಕಿಂತ ಹೆಚ್ಚಿನದನ್ನೇನೂ ನಿರೀಕ್ಷಿಸಲಾಗದು.

ಜಾತ್ಯತೀತ ನೆಲೆ ಸಡಿಲವಾಗಿಸದ ಬಹುಸಂಖ್ಯಾತವಾದ

ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಜನರ ನಿಲುವುಗಳು ಖಚಿತವಾಗಿ ಇರುವಂತೆ ಜಾತ್ಯತೀತ ನಿಲುವುಗಳಲ್ಲಿ ಇದ್ದಂತಿಲ್ಲ. ಜಾತ್ಯತೀತ ನಿಲುವುಗಳ ಬಗ್ಗೆ ಜನರ ಅಭಿಪ್ರಾಯ ಮಿಶ್ರ ಸ್ವರೂಪದ್ದು. ಈಚಿನ ವರ್ಷಗಳಲ್ಲಿ ಬಹುಸಂಖ್ಯಾತವಾದದ ಪರವಾಗಿ ಪ್ರಬಲ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಅಥವಾ ಜನಾಭಿಪ್ರಾಯ ಬದಲಾಗುವಂತೆ ಮಾಡುವಲ್ಲಿ ಬಿಜೆಪಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು.

ಅಲ್ಪಸಂಖ್ಯಾತರ ಹಕ್ಕುಗಳ ಕುರಿತಾಗಿ ‘ಸರ್ವಶ್ರೇಷ್ಠ ನಾಯಕ’ ಲಂಗುಲಗಾಮಿಲ್ಲದೆ ನಡೆಸಿದ ದಾಳಿಯಿಂದ ಎಲ್ಲ ಮತಗಳೂ ಪಲ್ಲಟವಾಗುತ್ತವೆ ಎಂದು ನಿರೀಕ್ಷಿಸಬಾರದು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹೇಳಿಕೆ ಮತ್ತು ಭರವಸೆಗಳನ್ನು ನಿರಾಕರಿಸುವಂತಹ ದತ್ತಾಂಶಗಳನ್ನು ಈ ಸಮೀಕ್ಷೆಯು ಒದಗಿಸಿಕೊಟ್ಟಿದೆ. ಮೋದಿ ಸರ್ಕಾರವು ಮಾಡಿದ ಕೆಲಸದಲ್ಲಿ ತಮಗೆ ಅತಿಹೆಚ್ಚು ಇಷ್ಟವಾದದ್ದು ರಾಮಮಂದಿರ ಲೋಕಾರ್ಪಣೆ ಎಂದು ಹೇಳಿದ ಜನರ ಪ್ರಮಾಣ ಶೇ 22ಷ್ಟು ಮಾತ್ರ. ರಾಮ ಮಂದಿರದ ವಿಚಾರದ ಕಾರಣಕ್ಕೆ ಬಿಜೆಪಿಗೆ ಮತ್ತೊಂದು ಅವಕಾಶ ನೀಡಬೇಕು ಎಂದವರು ನಗಣ್ಯ ಎನ್ನಬಹುದಾದ ಶೇ 5ರಷ್ಟು ಜನರು ಮಾತ್ರ. ಆದರೂ ರಾಮ ಮಂದಿರ ವಿಚಾರವು, ಜನರು ಬಿಜೆಪಿ ಜತೆಗೇ ಉಳಿಯುವಲ್ಲಿ ಕೆಲಸ ಮಾಡಿದೆ. ಆದರೆ ಈ ವಿಚಾರವು ಎಲ್ಲಾ ಮತಗಳನ್ನು ಬಿಜೆಪಿಯತ್ತ ಸೆಳೆಯುವಂತೆ ಮಾಡಿದೆ ಎನ್ನಲಾಗದು.

ಎಲ್ಲರನ್ನೂ ಒಳಗೊಳ್ಳುವ ಭಾರತದ ಪರಿಕಲ್ಪನೆಗೆ ಸಮೀಕ್ಷೆಯಲ್ಲಿ ಬಹುತೇಕ ಸರ್ವಾನುಮತ ದೊರೆತಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ರೂಪಿಸಿದ ‘ನುಸುಳುಕೋರರು’ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧ ಎಂಬಂತೆ ಜನರು ತಮ್ಮ ಅಭಿಪ್ರಾಯಗಳನ್ನು ಸಮೀಕ್ಷೆಯಲ್ಲಿ ದಾಖಲಿಸಿದ್ದರು. ‘ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದು’ ಎಂಬ ಹೇಳಿಕೆಯನ್ನು ಒಪ್ಪುವ ಒಬ್ಬ ವ್ಯಕ್ತಿ ಮಾತ್ರ ಇದ್ದರೆ, ‘ಭಾರತವು ಹಿಂದೂಗಳಿಗೆ ಮಾತ್ರವಲ್ಲ. ಬದಲಿಗೆ ದೇಶದ ಎಲ್ಲಾ ಧರ್ಮದ ಜನರಿಗೂ ಸೇರಿದ್ದು’ ಎಂಬ ಹೇಳಿಕೆಯನ್ನು ಬೆಂಬಲಿಸುವ ಏಳು ಮಂದಿ ಇದ್ದಾರೆ. 

ಬಹುಸಂಖ್ಯಾತವಾದವನ್ನು ಒಪ್ಪುವವರ ಪ್ರಮಾಣದಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂಬುದನ್ನೂ ಈ ಸಮೀಕ್ಷೆ ದಾಖಲಿಸಿದೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಇಚ್ಛೆಗೇ ಪ್ರಾಧಾನ್ಯ ಇರಬೇಕು’ ಎಂಬ ಹೇಳಿಕೆಯನ್ನು ಒಪ್ಪುವವರ ಪ್ರಮಾಣ ಇಳಿಕೆಯಾಗುತ್ತಲೇ ಇದೆ. 2014ರಲ್ಲಿ ಶೇ 40ರಷ್ಟು ಜನರು ಈ ಹೇಳಿಕೆಯನ್ನು ಒಪ್ಪಿದ್ದರು. 2019ರಲ್ಲಿ ಅಂತಹ ಜನರ ಪ್ರಮಾಣ ಶೇ 29ರಷ್ಟಕ್ಕೆ ಕುಸಿದಿತ್ತು. ಈಗ 2024ರಲ್ಲಿ ಆ ಪ್ರಮಾಣ ಶೇ 21ರಷ್ಟಕ್ಕೆ ಕುಸಿದಿದೆ. 

ಆದರೆ, ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಇದ್ದ ಬೆಂಬಲ ಗಣನೀಯ ಪ್ರಮಾಣದಲ್ಲಿ ಏರಿಕೆಯೂ ಆಗಿಲ್ಲ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ಭಾವನೆಗಳನ್ನು ಉದ್ದೀಪಿಸಿದ್ದರ ಪರಿಣಾಮ ಹೀಗಾಗಿರಬಹುದು. 2004ರಲ್ಲಿ,
‘ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಚುನಾಯಿತ ಸರ್ಕಾರದ ಕರ್ತವ್ಯ’ ಎಂಬುದನ್ನು ಸಂಪೂರ್ಣವಾಗಿ ಒಪ್ಪುವವರ ಪ್ರಮಾಣ ಶೇ 67ರಷ್ಟು ಇತ್ತು. 2019ರಲ್ಲಿ ಇದು ಶೇ 47ಕ್ಕೆ ಮತ್ತು 2024ರಲ್ಲಿ ಶೇ 38ಕ್ಕೆ ಕುಸಿದಿದೆ. ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರದಲ್ಲಿ ಪ್ರಜಾಸತ್ತಾತ್ಮಕ ನಿಲುವುಗಳನ್ನು ಒ‍ಪ್ಪುವವರ ಪ್ರಮಾಣ ಹೀಗೆಯೇ ಕುಸಿದಿದೆ. ಜತೆಯಲ್ಲಿ ಇಂತಹ ಪ್ರಜಾಸತ್ತಾತ್ಮಕ ನಿಲುವುಗಳನ್ನು ಸಂಪೂರ್ಣವಾಗಿ ಒಪ್ಪದೇ ಇರುವವರ ಪ್ರಮಾಣವೂ ಕುಸಿದಿದೆ ಎಂಬುದನ್ನು ಗಮನಿಸಬೇಕು. ಜನಾಭಿಪ್ರಾಯದಲ್ಲಿ ಆದ ಈ ಬದಲಾವಣೆಗಳಿಗೂ, ಧಾರ್ಮಿಕ ಧ್ರುವೀಕರಣದ ಯತ್ನಕ್ಕೂ ಸಂಬಂಧವಿಲ್ಲ ಎಂಬುದನ್ನೇ ಇದು ಹೇಳುತ್ತದೆ.

ಬಹುಸಂಖ್ಯಾತವಾದದ ರಾಜಕೀಯ ಆಯಾಮವು ಮೃದುವಾದಂತೆ ತೋರಿದರೂ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಆಚಾರವಿಚಾರಗಳನ್ನು ಅನುಸರಿಸಬೇಕು ಎಂಬಂತಹ ಒತ್ತಡ ಹೆಚ್ಚುತ್ತಲೇ ಇದೆ. ಅಲ್ಪಸಂಖ್ಯಾತರು ಬಹುಸಂಖ್ಯಾತರ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುವವರ ಪ್ರಮಾಣ ಶೇ 7ರಷ್ಟಕ್ಕೆ ಏರಿಕೆಯಾಗಿದೆ. ಆದರೆ ಈ ಹೇಳಿಕೆಯನ್ನು ತಿರಸ್ಕರಿಸುವವವರ ಪ್ರಮಾಣ ಶೇ 6ಕ್ಕೆ ಕುಸಿದಿದೆ. ಇಂತಹ ಹೇಳಿಕೆಯನ್ನು ವಿರೋಧಿಸುವವರಿಗಿಂತ ಒಪ್ಪುವವರ ಪ್ರಮಾಣವೇ ಹೆಚ್ಚಾಗಿದ್ದು ಇದೇ ಮೊದಲು ಎಂಬುದೇ ಬಹಳ ಎಚ್ಚರದಿಂದ ಗಮನಿಸಬೇಕಾದ ಅಂಶ.

ಈ ಎಲ್ಲಾ ಅಂಶಗಳು ಜಾತ್ಯತೀತವಾದಕ್ಕೆ ದೊರೆತ ಬೆಂಬಲ ಎಂದು ಭಾವಿಸಲಾಗದು. ಆದರೆ, ಭಾರತೀಯ ಮತದಾರರ ಜಾತ್ಯತೀತ ನೆಲೆಯನ್ನು ಸಡಿಲಗೊಳಿಸುವಲ್ಲಿ ‘ಬಹುಸಂಖ್ಯಾತವಾದದ ಬಿರುಗಾಳಿ’ ಯಶಸ್ವಿಯಾಗಿಲ್ಲ ಎಂದಂತೂ ಗಟ್ಟಿಯಾಗಿ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT