ಪರಿಸರಸ್ನೇಹಿ ಎಂದು ಕರೆಯಲಾಗುತ್ತಿದ್ದ ಅಡಿಕೆ ಹಾಳೆ ತಟ್ಟೆ, ಲೋಟಗಳ ತಯಾರಿಕಾ ಉದ್ಯಮಕ್ಕೆ ಈಗ ಸಂಕಷ್ಟ ಎದುರಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆಯು ಅಡಿಕೆ ಹಾಳೆಯಿಂದ ಮಾಡಿದ ತಟ್ಟೆ ಸೇರಿದಂತೆ ಇನ್ನಿತರ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಿದೆ. ಇದರಿಂದ ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳ ಸಾವಿರಾರು ರೈತರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಲ್ಲದೇ, ಸಾವಿರಾರು ಸಣ್ಣ ಉದ್ಯಮಿಗಳು, ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಇವರೆಲ್ಲರೂ ಈಗ ತಮಗೊದಗಿರುವ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರದತ್ತ ನೋಡುತ್ತಿದ್ದಾರೆ

ಏಕಬಳಕೆಯ ಅಡಿಕೆ ಹಾಳೆಯ ತಟ್ಟೆ ಹಾಗೂ ಲೋಟಗಳನ್ನು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ, ಜನರ ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ಗೆ ಅತ್ಯುತ್ತಮ ಪರ್ಯಾಯ ಎಂದೇ ಪರಿಗಣಿಸಲಾಗುತ್ತಿದೆ. ಬಳಸಿ ಬಿಸಾಡಿದ ನಂತರ ಮಣ್ಣಿನಲ್ಲಿ ಕೊಳೆತು ಗೊಬ್ಬರವಾಗುತ್ತಿದ್ದ ಇವುಗಳ ಬಳಕೆ ದೇಶದಲ್ಲಿ ಹೆಚ್ಚುತ್ತಿದ್ದು, ವಿದೇಶಗಳಲ್ಲೂ ಜನಪ್ರಿಯವಾಗಿವೆ. ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು ಜಿಲ್ಲೆಗಳ ಸಾವಿರಾರು ಮಂದಿ ಅಡಿಕೆ ಹಾಳೆಗಳಿಂದ ತಟ್ಟೆ, ಲೋಟ, ಬಟ್ಟಲುಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ಇದನ್ನು ಉದ್ಯಮ ಮಾಡಿಕೊಂಡಿದ್ದರೆ, ಅನೇಕ ಯುವಕ, ಯುವತಿಯರು ಇದನ್ನು ಗೃಹ ಕೈಗಾರಿಕೆಯನ್ನಾಗಿಯೂ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಸರ್ಕಾರದ ಒಂದು ನಿರ್ಧಾರ ಈ ಉದ್ಯಮದ ಬುಡವನ್ನು ಅಲುಗಾಡಿಸುತ್ತಿದೆ.

ಅಮೆರಿಕದ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಆಹಾರ ಮತ್ತು ಔಷಧ ಸಂಸ್ಥೆಯು (ಎಫ್ಡಿಎ) ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟ, ಬಟ್ಟಲುಗಳನ್ನು ನಿರ್ಬಂಧಿಸಿದೆ. ಈ ಕುರಿತು ಮೇ 8ರಂದು ಆಮದುದಾರರು, ವಿತರಕರು ಮತ್ತು ಚಿಲ್ಲರೆ ಮಾರಾಟಗಾರರಿಗೆ ಎಚ್ಚರಿಕೆ ರವಾನಿಸಿದೆ. ಇದರಿಂದಾಗಿ ಭಾರತದ, ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಸಾವಿರಾರು ಜನರ ಆದಾಯಕ್ಕೆ ಪೆಟ್ಟು ಬಿದ್ದಿದೆ.

‘ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟಗಳು ನಿರ್ದಿಷ್ಟ ಸಂದರ್ಭಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು (ಆಲ್ಕಲಾಯ್ಡ್ಗಳು) ಬಿಡುಗಡೆ ಮಾಡುತ್ತವೆ. ಅವು ಆಹಾರ, ಪಾನೀಯದೊಂದಿಗೆ ಬೆರೆತು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದು ವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ. ಅವು ಕಾನೂನಿನ ಸುರಕ್ಷಾ ಮಾನದಂಡಗಳಿಗೆ (ಜಿಆರ್ಎಎಸ್) ತಕ್ಕಂತೆ ಇಲ್ಲ. ಹೀಗಾಗಿ ಅವುಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ’ ಎಂದು ಎಫ್ಡಿಎ ಪ್ರಕಟಿಸಿದೆ.

ರಾಜ್ಯದ ಅಡಿಕೆ ತಟ್ಟೆ, ಲೋಟಗಳಿಗೆ ಅಮೆರಿಕ ಉತ್ತಮ ಮಾರುಕಟ್ಟೆಯಾಗಿತ್ತು. ಅಮೆರಿಕದ ಹಲವು ಕಂಪನಿಗಳು ಕರ್ನಾಟಕದಿಂದ ಪ್ರತಿವರ್ಷ ಕೋಟ್ಯಂತರ ತಟ್ಟೆ, ಲೋಟ, ಬಟ್ಟಲುಗಳನ್ನು ತರಿಸಿಕೊಳ್ಳುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಅಲ್ಲಿನ ಗ್ರಾಹಕರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದೇ ಕಂಪನಿಗಳು ಸಂತಸ ವ್ಯಕ್ತಪಡಿಸಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಅಡಿಕೆ ತಟ್ಟೆಗಳು ಅನಾರೋಗ್ಯಕಾರಿ ಎನ್ನುತ್ತಿದೆ ಅಮೆರಿಕ.

ಇದರಿಂದಾಗಿ ಅಮೆರಿಕಕ್ಕೆ ಮಾಡಲಾಗುತ್ತಿದ್ದ ರಫ್ತು ನಿಂತು ಹೋಗಿದೆ. ಹಾಳೆ ತಟ್ಟೆ ತಯಾರಕರು ದೇಶೀಯ ಮತ್ತು ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಹಾಳೆ ತಟ್ಟೆ ತಯಾರಿಸುತ್ತಿದ್ದ ಘಟಕಗಳು ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿವೆ. ಮನೆಗಳಲ್ಲೇ ಸಣ್ಣ ಪ್ರಮಾಣದಲ್ಲಿ ತಯಾರಿಸುತ್ತಿದ್ದವರು ಬೇಡಿಕೆ ಇಲ್ಲದೆ ತಟ್ಟೆ, ಲೋಟಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಸಾವಿರಾರು ಕುಶಲ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುವ ಆತಂಕ ಬಂದೊದಗಿದೆ. ಅಡಿಕೆ ಬೆಳೆಗಾರರು ಕೂಡ ಹಾಳೆಗಳನ್ನು ಮಾರಾಟ ಮಾಡಿ ಆದಾಯಗಳಿಸುತ್ತಿದ್ದರು, ಅದಕ್ಕೂ ಈಗ ಕುತ್ತು ಬಂದಿದೆ.

ಸಂಕಷ್ಟಕ್ಕೆ ಸಿಲುಕಿದ ಉದ್ಯಮ

ದಾವಣಗೆರೆ: ಅಡಿಕೆ ಹಾಳೆಯ ತಟ್ಟೆ, ಲೋಟಗಳಿಗೆ ಅಮೆರಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಕುಸಿದಿದೆ. ಉತ್ಪಾದನಾ ಘಟಕಗಳಲ್ಲಿ ಕೆಲವು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ತೋಟಗಾರಿಕಾ ಬೆಳೆ. ಚನ್ನಗಿರಿ ಹಾಗೂ ದಾವಣಗೆರೆಯಲ್ಲಿ ಅಡಿಕೆ ಹಾಳೆಯಿಂದ ತಟ್ಟೆ, ಲೋಟಗಳನ್ನು ಉತ್ಪಾದಿಸುವ ಘಟಕಗಳಿವೆ. ಇಲ್ಲಿನ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ರಫ್ತಿನ ಮೇಲೆ ನಿರ್ಬಂಧ ವಿಧಿಸುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿದ್ದು, ಬೇಡಿಕೆ ಕುಸಿದಿದೆ.

‘ತಮಿಳುನಾಡಿನ ಕೊಯಮತ್ತೂರಿನಿಂದ ₹4.30 ಲಕ್ಷಕ್ಕೆ ಯಂತ್ರ ಖರೀದಿಸಿ ತಂದು ಎರಡು ವರ್ಷಗಳಿಂದ ಅಡಿಕೆ ಹಾಳೆಯ ತಟ್ಟೆ ಮಾಡುತ್ತಿದ್ದೆ. ಇತ್ತೀಚೆಗೆ ಮಾರುಕಟ್ಟೆಯ ಸಮಸ್ಯೆ, ಕಾರ್ಮಿಕರ ಕೊರತೆಯ ಕಾರಣಕ್ಕೆ ಘಟಕವನ್ನು ಸ್ಥಗಿತಗೊಳಿಸಿದ್ದೇನೆ’ ಎನ್ನುತ್ತಾರೆ ಚನ್ನಗಿರಿ ತಾಲ್ಲೂಕಿನ ಮೆದುಗೊಂಡನಹಳ್ಳಿಯ ಲೋಕೇಶ್.

ಕಾರ್ಮಿಕರ ಬದುಕು ಡೋಲಾಯಮಾನ: ಶಿವಮೊಗ್ಗದಲ್ಲೂ ಇದೇ ಸ್ಥಿತಿ. ಜಿಲ್ಲೆಯಲ್ಲಿ ಅಂದಾಜು 2,000 ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಮೆರಿಕದ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಲಿವೆ.

ವಿವಿಧ ದೇಶಗಳಿಗೆ ಶಿವಮೊಗ್ಗದಿಂದಲೇ ಅತಿ ಹೆಚ್ಚು ಅಡಿಕೆ ಹಾಳೆ ತಟ್ಟೆಗಳನ್ನು ರಫ್ತು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 70,000 ನೇರ ಕಾರ್ಮಿಕರಿದ್ದಾರೆ. ಒಟ್ಟಾರೆ 1 ಲಕ್ಷಕ್ಕೂ ಹೆಚ್ಚು ಮಂದಿ ಈ ವೃತ್ತಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರೆಲ್ಲರ ಬದುಕು ಈಗ ಡೋಲಾಯಮಾನವಾಗಿದೆ.

‘ಶಿವಮೊಗ್ಗ, ಭದ್ರಾವತಿ ಹಾಗೂ ಹೊಳೆಹೊನ್ನೂರು ಭಾಗದಿಂದ ದಕ್ಷಿಣ ಭಾರತದ ವಿವಿಧೆಡೆ ಅಡಿಕೆ ಹಾಳೆಯ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಕೆಲವರು ತಮಿಳುನಾಡಿನಿಂದ ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರಗಳನ್ನು ಖರೀದಿಸಿ ತಂದು ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಿದ್ದಾರೆ. ಅವರ ಬದುಕು ಈಗ ಅಕ್ಷರಶಃ ಬೀದಿಗೆ ಬರುವಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಶಿವಮೊಗ್ಗ ಅಡಿಕೆ ಹಾಳೆ ತಟ್ಟೆ ತಯಾರಕರ ಮತ್ತು ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕನಸು ಮಂಜುನಾಥ ಆಗ್ರಹಿಸಿದರು.

ಸಿಪಿಸಿಆರ್ಐನಿಂದ ಸಂಶೋಧನೆ

ಅಡಿಕೆ ಕ್ಯಾನ್ಸರ್ಕಾರಕವಲ್ಲ ಎಂಬುದನ್ನು ದೃಢಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಅಗತ್ಯವೆಂದು ಕ್ಯಾಂಪ್ಕೊ ಹಾಗೂ ಅಡಿಕೆ ವಹಿವಾಟು ನಡೆಸುವ ರಾಜ್ಯದ ಇತರ ಸಹಕಾರ ಸಂಸ್ಥೆಗಳು, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದವು. ಇದರ ಫಲವಾಗಿ ಕೇಂದ್ರ ಸರ್ಕಾರವು ಸಂಶೋಧನಾ ಕಾರ್ಯಕ್ಕೆ ₹9.30 ಕೋಟಿ ಬಿಡುಗಡೆ ಮಾಡಿದ್ದು, ಈ ಸಂಬಂಧ ರೂಪುರೇಷೆ ಸಿದ್ಧಪಡಿಸಲು ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ (ಸಿಪಿಸಿಆರ್ಐ) ಮೇ 30ರಂದು ಸಂಘ–ಸಂಸ್ಥೆಗಳು, ರೈತರು, ವಿಜ್ಞಾನಿಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಮೆರಿಕವು ಅಡಿಕೆ ಹಾಳೆ ತಟ್ಟೆ ಆಮದು ಮೇಲೆ ನಿಷೇಧ ಹೇರಿರುವ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಜೊತೆಗೆ ಈ ಬಗ್ಗೆ ಸಂಶೋಧನೆ ನಡೆಸುವಂತೆ ಮನವಿಯನ್ನೂ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಪಿಸಿಆರ್ಐ ನಿರ್ದೇಶಕ ಕೆ.ಬಾಲಚಂದ್ರ ಹೆಬ್ಬಾರ್ ಅವರು ಅಡಿಕೆ ಜೊತೆಗೆ ಹಾಳೆ ತಟ್ಟೆಯ ಬಗ್ಗೆಯೂ ಸಂಶೋಧನೆ ನಡೆಸುವುದಾಗಿ ತಿಳಿಸಿದ್ದಾರೆ.

ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

ಪ್ರಧಾನಿಗೆ ಮನವಿ

ಅಮೆರಿಕದ ನಿರ್ಧಾರವು ಕರ್ನಾಟಕದ ಅಡಿಕೆ ತಟ್ಟೆ ತಯಾರಿಕಾ ಉದ್ಯಮದ ಮೇಲೆ ಗಂಭೀರವಾದ ಪರಿಣಾಮ ಬೀರಲಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಅಡಿಕೆ ಬೆಳೆಯುವ ಪ್ರದೇಶದ ವಿಜ್ಞಾನಿಗಳು, ಕೃಷಿ ತಜ್ಞರು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ಈ ಪ್ರತ್ರವನ್ನು ಬರೆದಿದ್ದು, 100 ಮಂದಿ ತಜ್ಞರು ಇದಕ್ಕೆ ಸಹಿ ಹಾಕಿದ್ದಾರೆ.

ಪತ್ರದಲ್ಲಿನ ಮನವಿಗಳು

l ಅಮೆರಿಕ ಹೇರಿರುವ ನಿರ್ಬಂಧ ತೆರವಿಗೆ ರಾಜತಾಂತ್ರಿಕ ಮತ್ತು ನಿಯಂತ್ರಣ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು

l ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರದ ಸಂಬಂಧ ಅಮೆರಿಕ ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಬೇಕು

l ಹಾಳೆಗಳ ಉಪ ಉತ್ಪನ್ನಗಳಲ್ಲಿ ಇರಬಹುದಾದ ಆಲ್ಕಲಾಯ್ಡ್ಗಳ ಸ್ವೀಕಾರಾರ್ಹ ಪ್ರಮಾಣವನ್ನು ವ್ಯಾಖ್ಯಾನಿಸುವಂತೆ ಅಮೆರಿಕವನ್ನು ಒತ್ತಾಯಿಸಬೇಕು

l ಅಮೆರಿಕ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವುದಕ್ಕಾಗಿ ಭಾರತದ ತಯಾರಕರಿಗೆ ತಾಂತ್ರಿಕ, ನಿಯಂತ್ರಣ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವು ನೀಡಬೇಕು

l ಅಡಿಕೆ ಸೇವನೆ ಮತ್ತು ಅದರ ಉಪ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳನ್ನು ತಳ್ಳಿ ಹಾಕುವುದಕ್ಕಾಗಿ ಕಾಸರಗೋಡಿನಲ್ಲಿರುವ ಸಿಪಿಸಿಆರ್ಐ, ಮೈಸೂರಿನಲ್ಲಿರುವ ಸಿಎಫ್ಟಿಆರ್ಐ ಮತ್ತು ನವದೆಹಲಿಯ ಐಸಿಎಂಆರ್ನಂತಹ ಸಂಸ್ಥೆಗಳಿಂದ ವೈಜ್ಞಾನಿಕ ಪರಿಶೀಲನೆ ಮತ್ತು ಹೊಸ ಸಂಶೋಧನೆ ನಡೆಸಲು ಕ್ರಮ ಕೈಗೊಳ್ಳಬೇಕು

ಕೋರ್ಟ್ ಕದ ತಟ್ಟಲು ಸಿದ್ಧತೆ

ಭಾರತದ ಅಡಿಕೆ ಹಾಳೆ ತಟ್ಟೆ ಖರೀದಿಸುವ ಅಮೆರಿಕದ ಸಂಸ್ಥೆಗಳು ಈ ಸಂಬಂಧ ವಕೀಲರನ್ನು ನೇಮಿಸಿ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿವೆ. ಅದಕ್ಕೆ ಅಗತ್ಯವಿರುವ ಪರೀಕ್ಷಾ ವರದಿಗಳು ಸಿಎಫ್ಟಿಆರ್ಐ ಅನೇಕ ಸಂಸ್ಥೆಗಳ ಸಂಶೋಧನಾ ಪ್ರಬಂಧಗಳು ಹಾಗೂ ಪೂರಕ ದಾಖಲೆಗಳನ್ನು ನಾವು ಅವರಿಗೆ ಒದಗಿಸಲಿದ್ದೇವೆ. ಅಡಿಕೆ ತಟ್ಟೆ ಉತ್ಪಾದಕ ಸಂಸ್ಥೆಗಳ ಪ್ರಮುಖರು ತಂಡ ರಚಿಸಿಕೊಂಡು ಈ ಕಾರ್ಯದಲ್ಲಿ ನಿರತರಾಗಿದ್ದೇವೆ

ಅವಿನಾಶ್ ರಾವ್ ಅಗ್ರಿಲೀಫ್ ಎಕ್ಸ್ಪೋರ್ಟ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಬೆಳ್ತಂಗಡಿ

ಅಪಪ್ರಚಾರ ಕೊನೆಗೊಳಿಸಬೇಕು

ಅಡಿಕೆ ಹಾಳೆ ತಟ್ಟೆಗಳ ನಿಷೇಧ ಕ್ರಮವು ಶತಮಾನದಿಂದ ಒಪ್ಪಿತ ಆಹಾರ ವ್ಯವಸ್ಥೆ ಹಾಗೂ ಅಡಿಕೆ ಬೆಳೆಗಾರರ ಆತ್ಮಾಭಿಮಾನದ ಮೇಲಿನ ದಾಳಿಯಾಗಿದೆ. ಅಡಿಕೆ ಹಾಳೆ ತಟ್ಟೆ ಲೋಟ ಬಟ್ಟಲುಗಳ ಬಳಕೆಯಿಂದ ಆಹಾರ ಮಲಿನವಾಗಿ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂಬುದರ ಬಗ್ಗೆ ಅಮೆರಿಕದಿಂದ ವೈಜ್ಞಾನಿಕ ಪುರಾವೆ ಪಡೆಯಬೇಕು. ದೇಶದ ಪ್ರತಿಷ್ಠಿತ ಆಹಾರ ಆರೋಗ್ಯ ಕೃಷಿ ವಿಚಾರಗಳ ಮೇಲೆ ಉನ್ನತ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ನೆರವಿನಿಂದ ಅಡಿಕೆಯ ಮೇಲಿನ ಈ ಅಪಪ್ರಚಾರಕ್ಕೆ ಪೂರ್ಣವಿರಾಮ ಹಾಕಬೇಕು

ಟಿ.ಎನ್.ಪ್ರಕಾಶ ಕಮ್ಮರಡಿ ರಾಜ್ಯ ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ

ದರ ಇಳಿಕೆಗೆ ದಲ್ಲಾಳಿಗಳ ಯತ್ನ

ಶಿರಸಿ: ಅಮೆರಿಕವು ಅಡಿಕೆ ಹಾಳೆಯ ತಟ್ಟೆ ಲೋಟಗಳ ಆಮದಿಗೆ ನಿಷೇಧ ಹೇರಿರುವ ಬೆನ್ನಲ್ಲೇ ಸ್ಥಳೀಯು ಉದ್ದಿಮೆದಾರರಿಂದ ಖರೀದಿಸಲಾಗುವ ಉತ್ಪನ್ನಗಳ ದರವನ್ನು ಇಳಿಸಲು ದಲ್ಲಾಳಿಗಳು ಯತ್ನಿಸುತ್ತಿದ್ದಾರೆ. ‘ಶಿರಸಿ ಸೇರಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಳೆ ತಟ್ಟೆಗಳು ವಿದೇಶಕ್ಕೆ ರಫ್ತು ಆಗುವುದಿಲ್ಲ. ಸ್ಥಳೀಯ ಮಾರುಕಟ್ಟೆ ಅವಲಂಬಿಸಿವೆ. ಹೀಗಾಗಿ ನಿಷೇಧದ ಬಿಸಿ ಪ್ರಸ್ತುತ ಸ್ಥಳೀಯ ಉದ್ದಿಮೆಗೆ ತಟ್ಟಿಲ್ಲ. ಆದರೆ ಸ್ಥಳೀಯ ದಲ್ಲಾಳಿಗಳು ಈ ವಿಷಯವನ್ನೇ ಮುಂದಿಟ್ಟು ಅಡಿಕೆ ತಟ್ಟೆ ಲೋಟಗಳ ದರ ಇಳಿಕೆಗೆ ಪ್ರಯತ್ನ ನಡೆಸಿದ್ದಾರೆ. ಅಡಿಕೆ ಹಾಳೆ ಆರೋಗ್ಯ ಗುಣಮಟ್ಟದ ನೆಪವೊಡ್ಡಿ ದರ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ’ ಎಂದು ಶಿರಸಿಯ ‘ವಿನಾಯಕ ಅರೇಕಾ ಲೀಫ್ ಕಪ್ಸ್’ ಮಾಲೀಕ ಮಂಜುನಾಥ ಹೆಗಡೆ ತಿಳಿಸಿದರು. ತಾಲ್ಲೂಕಿನ ಅಂಬಳಿಕೆಯಲ್ಲಿ ‘ಜೈ ಮಾರುತಿ ಸ್ವಸಹಾಯ ಸಂಘ’ ನಡೆಸುವ ಅಡಿಕೆ ಹಾಳೆ ತಟ್ಟೆ ತಯಾರಿಕಾ ಕೇಂದ್ರದಲ್ಲಿ ವರ್ಷಕ್ಕೆ 1 ಲಕ್ಷ ತಟ್ಟೆಗಳು ತಯಾರಾಗುತ್ತವೆ. ಎಲ್ಲವೂ ಸ್ಥಳೀಯ ಮಾರುಕಟ್ಟೆ ಅವಲಂಬಿಸಿವೆ. ‘ಅಡಿಕೆಯ ಆರೋಗ್ಯ ಅಂಶ ಅರಿತಿರುವ ಗ್ರಾಹಕರು ಇರುವವರೆಗೂ ಅಡಿಕೆ ತಟ್ಟೆ ಸೇರಿ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಇಳಿಕೆಯಾಗದು. ಆದರೆ ಅಡಿಕೆ ಉತ್ಪನ್ನಗಳ ಮೇಲೆ ಕ್ಯಾನ್ಸರ್ಕಾರಕ ಹಣೆಪಟ್ಟಿ ಹಚ್ಚುವ ಕೆಲಸ ಮುಂದುವರಿಯಬಾರದು. ಒಂದು ವೇಳೆ ಮುಂದುವರಿದರೆ ಸ್ಥಳೀಯ ಮಾರುಕಟ್ಟೆ ಮೇಲೂ ದೀರ್ಘಾವಧಿವರೆಗೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ಸಂಘದ ಪದಾಧಿಕಾರಿ ಸವಿತಾ ನಾಯ್ಕ ಹೇಳಿದರು.

* ಅಡಿಕೆ ಹಾಳೆ ಉತ್ಪನ್ನಗಳ ತಯಾರಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂದಿದೆ

* ಅಮೆರಿಕ ಆಸ್ಟ್ರೇಲಿಯಾ ಕೆನಡಾ ಜರ್ಮನಿ ನೆದರ್ಲೆಂಡ್ಸ್ ಇಸ್ರೇಲ್ ಬ್ರಿಟನ್ಗಳಿಗೆ ಕರ್ನಾಟಕದಿಂದ ಹಾಳೆ ತಟ್ಟೆಗಳ ರಫ್ತು ಮಾಡಲಾಗುತ್ತಿತ್ತು

* ಅಮೆರಿಕದ ರೀತಿಯಲ್ಲೇ ಕೆನಡಾ ಮತ್ತು ಆಸ್ಟ್ರೇಲಿಯಾ ಕೂಡ ಅಡಿಕೆ ಹಾಳೆ ಉತ್ಪನ್ನಗಳನ್ನು ನಿಷೇಧಿಸಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.