ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...
ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...
ಲೋಕ ರಾಜಕಾರಣ ಸರಣಿ–6
ಯೋಗೇಂದ್ರ ಯಾದವ್, ರಾಹುಲ್ ಶಾಸ್ತ್ರಿ, ಶ್ರೇಯಸ್‌ ಸರ್ದೇಸಾಯಿ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ನರೇಂದ್ರ ಮೋದಿ ಅವರು ಯಾಕಾಗಿ ಮತ್ತೊಮ್ಮೆ ಪ್ರಧಾನಿಯಾದರು?

ಎನ್‌ಡಿಎ ಮೈತ್ರಿಕೂಟವು ಬಹುಮತವನ್ನು ಉಳಿಸಿಕೊಂಡದ್ದು ಹೇಗೆ?

ತೀವ್ರತರವಾಗಿ ಸೋಲುಣ್ಣುವ ಸ್ಥಿತಿಯು ಬಿಜೆಪಿಗೆ ಯಾಕಾಗಿ ಒದಗಿ ಬರಲಿಲ್ಲ?

ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರೂಪುಗೊಂಡ, ಹುಸಿ ಸಂಕಥನಗಳ ಕಾರಣದಿಂದಾಗಿಯೇ ಇಂಥ ಪ್ರಶ್ನೆಗಳನ್ನು ಚರ್ಚಿಸುವ ಪ್ರಮೇಯಕ್ಕೇ ನಾವುಗಳು ಹೋಗಲಿಲ್ಲ. ಮಾಧ್ಯಮಗಳು ನಡೆಸಿದ ಮತ್ತು ನಡೆಸುತ್ತಿರುವ ಚುನಾವಣೋತ್ತರ ವಿಶ್ಲೇಷಣೆಗಳು ಕೆಲವು ತಪ್ಪು ತಿಳಿವಳಿಕೆಗಳ ಹಾಗೂ ತಮಗೆ ಅನುಕೂಲಕರವಾದ ಕಾರಣಗಳನ್ನು ತಮಗೆ ತಾವೇ ನೀಡಿಕೊಳ್ಳುವ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿವೆ. ‘ಬಿಜೆಪಿಯ ಈ ಅನಿರೀಕ್ಷಿತ ಹಿನ್ನಡೆ ಏನನ್ನು ಹೇಳುತ್ತಿವೆ’ ಎಂಬ ಪ್ರಶ್ನೆಯ ವಿಶ್ಲೇಷಣೆಯನ್ನಷ್ಟೇ ಮಾಧ್ಯಮ ನಡೆಸುತ್ತಿದೆ.

ಬಿಜೆಪಿಯದ್ದು ಅನಿರೀಕ್ಷಿತ ಹಿನ್ನಡೆ ಎಂಬುದೇ ಹುಸಿ ವಿಚಾರ. ಈ ಹುಸಿ ಸಂಕಥನದ ಆಧಾರದಲ್ಲಿ ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ವಿಶ್ಲೇಷಣೆಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಫಲಿತಾಂಶ ಅಥವಾ ಬಿಜೆಪಿಗೆ ಆದ ಹಿನ್ನಡೆ ಅನಿರೀಕ್ಷಿತವಾದುದೇನೂ ಆಗಿರಲಿಲ್ಲ. ಹೀಗಿದ್ದೂ ಕೆಟ್ಟ, ಉತ್ತರದಾಯಿತ್ವ ಇಲ್ಲದ, ಅಹಂಕಾರಿ ಸರ್ಕಾರವೊಂದು ಚುನಾವಣೆಯಲ್ಲಿ ಸೋಲುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನುವ ವಿಶ್ಲೇಷಣೆಯನ್ನು ಯಾವುದೇ ಮಾಧ್ಯಮವಾಗಲಿ ಅಥವಾ ವಿಶ್ಲೇಷಕರಾಗಲಿ ನೀಡುತ್ತಿಲ್ಲ. ಚುನಾವಣೆಯಲ್ಲಿನ ಹಿನ್ನಡೆಯು ಅಚ್ಚರಿಯಾದುದು ಎಂಬ ತರ್ಕವೆಲ್ಲಾ ಮಾಧ್ಯಮಗಳ ಸೃಷ್ಟಿಯಷ್ಟೆ.

ಚರ್ಚಿಸಲೇಬೇಕಾದ ವಿಚಾರಗಳಿಂದ ಗಮನವನ್ನು ಬೇರೆಡೆ ಸೆಳೆಯಲು, ಒಬ್ಬರ ಮೇಲೊಬ್ಬರು ಆರೋಪಗಳನ್ನು ಹೊರಿಸಿಕೊಳ್ಳುವುದಕ್ಕೆ ಸೀಮಿತವಾದ ಚರ್ಚೆಗಳನ್ನು ಮಾಧ್ಯಮಗಳು ನಡೆಸುತ್ತಿವೆ. ಈ ಚರ್ಚೆಗಳೆಲ್ಲಾ ಮುಗಿದ ಮೇಲೆ ನಿಜವಾದ ಪ್ರಶ್ನೆಗಳನ್ನು ಅಥವಾ ಈಗ ನಡೆಯುತ್ತಿರುವ ಚರ್ಚೆಗಳಿಗೆ ತದ್ವಿರುದ್ಧವಾದ ಹೊಳಹುಗಳಿರುವ ಪ್ರಶ್ನೆಗಳ ಕುರಿತು ಜನರು ಹೆಚ್ಚು ಗಮನ ಹರಿಸುತ್ತಾರೆ ಎಂಬ ಬಗ್ಗೆ ನಿರೀಕ್ಷೆ ಇದೆ. ಹಾಗಾದರೆ, ಆ ನಿಜವಾದ ಪ್ರಶ್ನೆ ಯಾವುದೆಂದರೆ: ‘ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣುವ ಕಷ್ಟಕರ ಸ್ಥಿತಿಯಲ್ಲಿದ್ದ ಬಿಜೆಪಿಯು ಹೇಗೆ ಗೆದ್ದಿತು?’

ಮರುಕಳಿಸಿದ ಇತಿಹಾಸ

2024ರ ಬಿಜೆಪಿಯ ಹಿನ್ನಡೆಯನ್ನು 2004ರಲ್ಲಿನ ಬಿಜೆಪಿಯ ಸೋಲಿನೊಂದಿಗೆ ಹೋಲಿಸಿ ನೋಡುವ ಕ್ರಮವು ಹಲವು ವಿಚಾರಗಳನ್ನು ನಮ್ಮ ಮುಂದಿಡುತ್ತದೆ. ನೆನಪಿಸಿಕೊಳ್ಳಿ, ಆಗ ಎನ್‌ಡಿಎ ಸರ್ಕಾರವು ತನ್ನ ‘ಯಶಸ್ವಿ’ಯಾದ ಐದು ವರ್ಷಗಳನ್ನು ಪೂರೈಸಿತ್ತು. ಈ ಸರ್ಕಾರದ ನೇತೃತ್ವವನ್ನು ವರ್ಚಸ್ವಿ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ ಅವರು ವಹಿಸಿಕೊಂಡಿದ್ದರು. ‘ಭಾರತವು ಪ್ರಕಾಶಿಸುತ್ತಿದೆ’ ಎನ್ನುವ ಘೋಷವಾಕ್ಯದೊಂದಿಗೆ ಬಿಜೆಪಿಯು ಚುನಾವಣೆ ಎದುರಿಸಿತ್ತು ಮತ್ತು ವಾಜಪೇಯಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ‘ಎಲ್ಲರೂ ನಿರೀಕ್ಷಿಸಿದ್ದರು’. ಚುನಾವಣಾ ಪೂರ್ವ ಸಮೀಕ್ಷೆಗಳೂ ಚುನಾವಣೋತ್ತರ ಸಮೀಕ್ಷೆಗಳೂ ಇದನ್ನೇ ಹೇಳಿದ್ದವು. ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಫಲಿತಾಂಶವು ಬಂದಿತ್ತು. ಫಲಿತಾಂಶವು ಎಲ್ಲರನ್ನೂ ಚಕಿತಗೊಳಿಸಿತ್ತು. 2024ರ ಫಲಿತಾಂಶವು ಇಂಥದ್ದೇ ಪರಿಣಾಮವನ್ನು ಉಂಟುಮಾಡಿದೆ.

2004ರಲ್ಲಿಯೂ ಲೋಕನೀತಿ–ಸಿಎಸ್‌ಡಿಎಸ್‌ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದವು. ಈ ಬಾರಿಯೂ ಸಮೀಕ್ಷೆ ನಡೆಸಿವೆ. 2004ರಲ್ಲಿ ಕೇಳಿದ ಪ್ರಶ್ನೆಗಳನ್ನೇ 2024ರಲ್ಲಿಯೂ ಕೇಳಲಾಗಿದೆ. 2004ರಲ್ಲಿ ವಾಜಪೇಯಿ ಅವರಿಗಿದ್ದ ಜನಪ್ರಿಯತೆಗೂ 2024ರಲ್ಲಿ ಮೋದಿ ಅವರಿಗೆ ಇರುವ ಜನಪ್ರಿಯತೆಗೂ ಹೆಚ್ಚೇನು ಅಂತರವಿಲ್ಲ. ಆಗ, ವಾಜಪೇಯಿ ಅವರ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂದು ಶೇ 48ರಷ್ಟು ಜನರು ಒಲವು ತೋರಿದ್ದರೆ, ಈಗ ಮೋದಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂದು ಶೇ 46ರಷ್ಟು ಜನರು ಒಲವು ತೋರಿಸಿದ್ದಾರೆ.

ಈ ಎಲ್ಲದ ಮಧ್ಯೆಯೂ ವಾಜಪೇಯಿ ಅವರು ಹೀನಾಯವಾಗಿ ಸೋತರು. ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎಗೆ 230ರಿಂದ 275 ಸ್ಥಾನಗಳು ದೊರೆಯಬಹುದು ಎಂದು ಹೇಳಿದ್ದವು. ಆದರೆ, ಎನ್‌ಡಿಎಗೆ ಬಂದಿದ್ದು 181 ಸ್ಥಾನಗಳು ಮಾತ್ರ. ಬಿಜೆಪಿಯು ಅಧಿಕಾರದಿಂದ ಕೆಳಗಿಳಿಯಿತು ಮತ್ತು ಯುಪಿಎ ಮೈತ್ರಿಕೂಟವು ಸರ್ಕಾರ ರಚಿಸಿತು.

2024ರಲ್ಲಿ ಇದೇ ಫಲಿತಾಂಶ ಯಾಕೆ ಮರುಕಳಿಸಲಿಲ್ಲ? ಇದಕ್ಕೆ ಸೂಕ್ತ ಉತ್ತರವೊಂದನ್ನು ನೀಡಬಹುದು. ಅದೇನೆಂದರೆ, 2024ರಲ್ಲಿ ಚುನಾವಣಾ ಪ್ರಕ್ರಿಯೆಗಳ ಆರಂಭಿಕ ಹಂತದಲ್ಲಿಯೇ ಎನ್‌ಡಿಎ ಸ್ಥಿತಿ ಉತ್ತಮವಾಗಿತ್ತು. 2004ರಲ್ಲಿ ಈ ರೀತಿ ಆಗಿರಲಿಲ್ಲ. 1999ರಲ್ಲಿ 182 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಜತೆಗೆ 23 ಪಕ್ಷಗಳನ್ನು ಎನ್‌ಡಿಎ ಅಡಿ ಒಗ್ಗೂಡಿಸಿ, ವಾಜಪೇಯಿ 2004ರಲ್ಲಿ ಚುನಾವಣೆಗೆ ಇಳಿದಿದ್ದರು. ಆದರೆ ಬಿಜೆಪಿಗೆ 44 ಸ್ಥಾನಗಳಷ್ಟು ನಷ್ಟವಾಯಿತು. 2019ರಲ್ಲಿ ಬಿಜೆಪಿ 303 ಸ್ಥಾನ ಗೆದ್ದಿತ್ತು, 2024ರಲ್ಲಿ ಸುಮಾರು 63 ಸ್ಥಾನಗಳನ್ನು ಕಳೆದುಕೊಂಡಿದೆ. ವಾಜಪೇಯಿ ಅವರಿದ್ದ ಬಿಜೆಪಿ ಮತ್ತು ಮೋದಿ ಅವರ ಈಗಿನ ಬಿಜೆಪಿಗೆ ಆದ ಹಿನ್ನಡೆ ಒಂದೇ ರೀತಿಯದ್ದು ಎಂಬುದನ್ನು ಇದು ಹೇಳುತ್ತದೆ.

ವ್ಯತಿರಿಕ್ತ ಸತ್ಯಗಳು

ಇದೇ ವೇಳೆಯಲ್ಲಿ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ: ಹಾಗಾದರೆ, ಈಗ ಬಂದಿರುವ ಫಲಿತಾಂಶಕ್ಕಿಂತ ಭಿನ್ನವಾದ ಫಲಿತಾಂಶ ಬರುವ ಸಾಧ್ಯತೆ ಇತ್ತೇ? ಹಾಗಾದರೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸಬಹುದಿತ್ತೇ? ಅರ್ಥವಿಲ್ಲದ ಪ್ರಶ್ನೆಗಳ ಕುರಿತು ಗಮನ ಕೇಂದ್ರೀಕರಿಸದೆ, ಫಲಿತಾಂಶವನ್ನು ತುಸು ಬೇರೆ ದೃಷ್ಟಿಕೋನದಿಂದ ನೋಡಲು ಮುಂದಾದರೆ, ಮೋದಿ ಅವರು ಸ್ವಲ್ಪದರಲ್ಲಿಯೇ ತಮ್ಮ ಸರ್ಕಾರವನ್ನು ಉಳಿಸಿಕೊಂಡರು ಎನ್ನುವ ವಾಸ್ತವಾಂಶ ತಿಳಿಯುತ್ತದೆ.

ಮೋದಿ ಅವರು ತಮ್ಮ ಸರ್ಕಾರವನ್ನು ಹೇಗೆ ಉಳಿಸಿಕೊಂಡರು ಎನ್ನುವ ಚರ್ಚೆಯನ್ನು ಚುನಾವಣಾ ಫಲಿತಾಂಶದಿಂದಲೇ ಆರಂಭಿಸೋಣ. 1 ಶೇಕಡಾವಾರು ಅಂಶಗಳಷ್ಟು ಮತಗಳೇನಾದರು ಎನ್‌ಡಿಎಗೆ ವಿರುದ್ಧವಾಗಿ ಬಿದ್ದಿದ್ದರೆ, ಮೈತ್ರಿಕೂಟವು (ಎನ್‌ಡಿಎ ವಿರುದ್ಧ ಬಿದ್ದ ಮತಗಳು ಅದರ ಮಿತ್ರಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟಿವೆ) ಇನ್ನೂ 18 ಕ್ಷೇತ್ರಗಳನ್ನು ಕಳೆದುಕೊಳ್ಳುತ್ತಿತ್ತು. ಒಂದು ವೇಳೆ 1.5 ಶೇಕಡಾವಾರು ಅಂಶಗಳಷ್ಟು ಮತಗಳು ಎನ್‌ಡಿಎಗೆ ವಿರುದ್ಧವಾಗಿ ಬಿದ್ದಿದ್ದರೆ, ಅದು 261 ಕ್ಷೇತ್ರಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಗುತ್ತಿತ್ತು ಮತ್ತು ‘ಇಂಡಿಯಾ’ ಮೈತ್ರಿಕೂಟಕ್ಕೆ 263 ಸ್ಥಾನಗಳು ದೊರಕುತ್ತಿದ್ದವು. ಒಂದು ವೇಳೆ, 2 ಶೇಕಡಾವಾರು ಅಂಶದಷ್ಟು ಹೆಚ್ಚು ಎನ್‌ಡಿಎ ವಿರುದ್ಧವಾಗಿ ಮತ ಚಲಾವಣೆಯಾಗಿದ್ದರೆ, ಎನ್‌ಡಿಎಗೆ 246 ಸ್ಥಾನಗಳಷ್ಟೇ ದೊರಕುತ್ತಿತ್ತು; ಇನ್ನಷ್ಟು ನಷ್ಟವನ್ನು ಬಿಜೆಪಿ ಎದುರಿಸಬೇಕಾಗುತ್ತಿತ್ತು. ಇದೇ ವೇಳೆ ‘ಇಂಡಿಯಾ’ ಮೈತ್ರಿಕೂಟಕ್ಕೆ 275ಕ್ಕಿಂತ ಹೆಚ್ಚಿನ ಸ್ಥಾನಗಳು ದೊರೆತು ಬಹುಮತ ಪಡೆದುಕೊಳ್ಳುತ್ತಿತ್ತು.

ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ ಹಾಗೂ ಹರಿಯಾಣ ರಾಜ್ಯಗಳಲ್ಲಿ ಒಂದು ವೇಳೆ 2 ಶೇಕಡಾವಾರು ಅಂಶಗಳಷ್ಟು ಮತಗಳು ಎನ್‌ಡಿಎ ವಿರುದ್ಧ ಬಿದ್ದಿದ್ದರೆ, ಮೈತ್ರಿಕೂಟಕ್ಕೆ 260 ಸ್ಥಾನಗಳನ್ನಷ್ಟೇ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಇದಂತೂ ಬಹುಮತಕ್ಕಿಂತ ತೀರ ದೂರದ ಸಂಖ್ಯೆಯಾಗಿತ್ತು. ಆಗ ಬಿಜೆಪಿಯು 214 ಸ್ಥಾನಗಳನ್ನು ಪಡೆದುಕೊಳ್ಳುತ್ತಿತ್ತು ಮತ್ತು ಸರ್ಕಾರ ರಚಿಸಲು ಅದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಬಿಜೆಪಿಯ ವಿರುದ್ಧ 1 ಶೇಕಡಾವಾರು ಅಂಶಗಳಷ್ಟು ಮತಪಲ್ಲಟ ನಡೆದಿದ್ದರೆ, ಇವೆಲ್ಲವೂ ಸಾಧ್ಯವಾಗುತ್ತಿತ್ತು.

ಒಂದನ್ನಂತೂ ನೆನಪಿಟ್ಟುಕೊಳ್ಳಿ: ಕೇವಲ 1 ಶೇಕಡಾವಾರು ಅಂಶಗಳಷ್ಟು ಮತಗಳ ಅಂತರದಲ್ಲಿ ಮೋದಿ ಅವರ ಬಿಜೆಪಿಯು ಹೀನಾಯವಾಗಿ ಸೋಲುವುದರಿಂದ ಪಾರಾಯಿತು. ಇಲ್ಲವಾಗಿದ್ದಲ್ಲಿ, ಬಿಜೆಪಿಯು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿತ್ತು.

ಇತಿಹಾಸಕಾರರು ಚರ್ಚಿಸಬೇಕಾದ ಮತ್ತು ನಮ್ಮೆಲ್ಲರ ಮುಂದಿರುವ ಪ್ರಶ್ನೆಗಳು: ಶೇ 1ರಷ್ಟು ಮತಗಳು ಯಾವೆಲ್ಲಾ ಬದಲಾವಣೆಗಳನ್ನು ಮಾಡುತ್ತಿತ್ತು? ಮತಪಲ್ಲಟ ನಡೆಯಲಿದೆ ಎಂಬ ಸೂಚನೆ ಒದಗಿದ್ದು ಹೇಗೆ ಮತ್ತು ಇದನ್ನು ಬಿಜೆಪಿ ತಡೆದಿದ್ದು ಹೇಗೆ? ನಮಗೆ ಯಾರಿಗೂ ತಿಳಿಯದಿದ್ದದ್ದು (ನಾವು ಆ ಕುರಿತು ಯೋಜನೆ ಮಾಡದಂತೆ ಮಾಡಿದ್ದೂ ಇರಬಹುದು) ಬಿಜೆಪಿ ನಾಯಕರಿಗೆ ತಿಳಿದದ್ದು ಹೇಗೆ?

ಇದಕ್ಕೆ ನೀಡಬಹುದಾದ ಒಂದು ಉತ್ತರವೆಂದರೆ ಮೈತ್ರಿಕೂಟ ರಚನೆ. ನಿತೀಶ್‌ ಕುಮಾರ್‌ ಹಾಗೂ ಜಯಂತ್‌ ಚೌಧರಿ ಅವರಂಥವರೊಂದಿಗೆ ಬಿಜೆಪಿಯು ವಿಚಿತ್ರ ಮೈತ್ರಿ ಮಾಡಿಕೊಂಡದ್ದು, ಆಂಧ್ರದಲ್ಲಿ ಚಂದ್ರಬಾಬು ನಾಯ್ದು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಯಾಕೆ ಎಂಬುದು ಈಗ ಸಾಬೀತಾಗಿದೆ. ಜೊತೆಗೆ ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಯಾಕಾಗಿ ಹಾತೊರೆಯಿತು ಎಂಬುದೂ ಈಗ ಗುಟ್ಟಲ್ಲ. ಈ ಮೈತ್ರಿಗಳು ಎನ್‌ಡಿಎಗೆ ಹೆಚ್ಚಿನ ಸ್ಥಾನಗಳನ್ನು ಮಾತ್ರ ತಂದುಕೊಡಲಿಲ್ಲ, ಬದಲಿಗೆ ಆಂಧ್ರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚುವರಿ 10 ಕ್ಷೇತ್ರಗಳನ್ನು ಗೆಲ್ಲುವಲ್ಲಿಯೂ ಸಹಕಾರ ನೀಡಿತು. ಮತ್ತೊಂದೆಡೆ, ಟಿಎಂಸಿ ಹಾಗೂ ಕಾಂಗ್ರೆಸ್‌ನ ಜಗಳದ ಕಾರಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮೂರು ಸ್ಥಾನಗಳು ದೊರೆತವು. ಪ್ರಕಾಶ್‌ ಅಂಬೇಡ್ಕರ್‌ ಅವರ ವಿಬಿಎ ಕಾರಣದಿಂದ 4 ಹಾಗೂ ಅಸಾದುದ್ದೀನ್ ಓವೈಸಿ ಅವರ ಕಾರಣಕ್ಕಾಗಿ ಒಂದು ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತಾಯಿತು.

ಮಾಧ್ಯಮ ಮತ್ತು ಕಡಿಮೆ ಪಕ್ಷಪಾತ ಧೋರಣೆ

ಶೇ 1ರಷ್ಟು ಮತಪಲ್ಲಟವನ್ನು ಬಿಜೆಪಿ ಹೇಗೆ ತಡೆಯಿತು ಎನ್ನುವ ಪ್ರಶ್ನೆಗೆ ಇನ್ನೊಂದು ಉತ್ತರವೂ ಇದೆ. ಈ ಬಾರಿಯ ಚುನಾವಣಾ ವರದಿಗಾರಿಕೆಯನ್ನು ಮಾಧ್ಯಮಗಳು ಪಕ್ಷಪಾತದಿಂದಲೇ ಮಾಡಿವೆ. ಊಹಿಸಿಕೊಳ್ಳಿ, ಒಂದು ವೇಳೆ ಮಾಧ್ಯಮಗಳು ತನ್ನ ವರದಿಗಾರಿಕೆಯನ್ನು ತುಸು ಕಡಿಮೆ ಪಕ್ಷಪಾತ ಧೋರಣೆಯಿಂದ ಮಾಡಿದ್ದಿದ್ದರೆ?

ಲೋಕನೀತಿ–ಸಿಎಸ್‌ಡಿಎಸ್‌ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ ದೇಶದಲ್ಲಿ ಶೇ 83ರಷ್ಟು ಮತದಾರರ ಮನೆಗಳಲ್ಲಿ ಟಿ.ವಿ ಇದೆ. ಶೇ 66ರಷ್ಟು ಮತದಾರರು ಪ್ರತಿನಿತ್ಯವೂ ಅಥವಾ ಕೆಲವೊಮ್ಮೆ ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತಾರೆ. ಶೇ 47ರಷ್ಟು ಜನರು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆಯುತ್ತಾರೆ. ಆದರೆ, ‘ಒಂದು ಅಥವಾ ಮತ್ತೊಂದು ಗೋದಿ ಮೀಡಿಯಾದಿಂದ ನಾವು ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುತ್ತೇವೆ’ ಎಂದು ಶೇ 66 ಜನರಲ್ಲಿ ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸರ್ಕಾರದ ಕುರಿತು ಈ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಮಾಡಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ? ಪ್ರಭುತ್ವದ ಕುರಿತು ಸತ್ಯ ಹೇಳುವುದು ಬಿಡಿ, ಕೊನೆಯ ಪಕ್ಷ ಆಡಳಿತ ಪಕ್ಷದ ಪರವಾಗಿ ಪ್ರಚಾರ ಮಾಡದೆ ಇದ್ದಿದ್ದರೆ, ಮಹಾಪ್ರಭುವಿನ ಸಂದರ್ಶನವನ್ನಾದರೂ ಸರಿಯಾಗಿ ಮಾಡಿದ್ದರೆ? ಅಥವಾ ಈ ಬಾರಿಯ ಚುನಾವಣೆಯು ಏಕಪಕ್ಷೀಯವಾಗಿ ಇರಲಿಲ್ಲ, ಬದಲಿಗೆ ತೀವ್ರ ಸ್ಪರ್ಧೆಯಿಂದ ಕೂಡಿದೆ ಎನ್ನುವ ಸತ್ಯವನ್ನಾದರೂ ವರದಿ ಮಾಡಿದ್ದದ್ದಿದ್ದರೆ?

ಸರ್ಕಾರದ ಪರ ಪ್ರಚಾರ ನಡೆಸುವ ಸುದ್ದಿ ವಾಹಿನಿಗಳನ್ನು ನೋಡುವ 66 ಜನರಲ್ಲಿ ಒಬ್ಬರಾದರೂ ತಮ್ಮ ಮನಸ್ಸನ್ನು ಬದಲಿಸಿಕೊಂಡಿದ್ದರೆ, ಮಹಾಪ್ರಭು ಇವತ್ತು ವಿರೋಧ ಪಕ್ಷದ ನಾಯಕನಾಗಿ ಇರುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT