ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಎಚ್‌ಎಸ್‌ಆರ್‌ಪಿ - ಹಲವು ತೊಡಕು

Published 13 ಫೆಬ್ರುವರಿ 2024, 0:30 IST
Last Updated 13 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌–ಎಚ್‌ಎಸ್‌ಆರ್‌ಪಿ ವಾಹನ ಖರೀದಿಯ ಸಂದರ್ಭದಲ್ಲೇ ಬರುತ್ತದೆ. ಆದರೆ 2019ರ ಏಪ್ರಿಲ್‌ಗೂ ಮುನ್ನ ಖರೀದಿಸಲಾದ ಎಲ್ಲಾ ವಾಹನಗಳಿಗೆ ಎಚ್‌ಎಸ್ಆರ್‌ಪಿಯನ್ನು ಈಗ ಅಳವಡಿಸಲೇಬೇಕು. ಇದೇ ಫೆಬ್ರುವರಿ 17ರ ಒಳಗೆ ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ, ದಂಡ ವಿಧಿಸಲು ಅವಕಾಶವಿದೆ. ಎಚ್‌ಎಸ್‌ಆರ್‌ಪಿ ಇಲ್ಲದೇ ಇದ್ದರೆ ವಾಹನ ಮಾರಾಟ, ವಿಳಾಸ ಬದಲಾವಣೆ, ಅರ್ಹತಾ ಪತ್ರ ನವೀಕರಣದಂತಹ ಹಲವು ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಿಲ್ಲ. ಆದರೆ ನಿಜಕ್ಕೂ ಸಮಸ್ಯೆ ಇರುವುದು ಎಚ್‌ಎಸ್‌ಆರ್‌‍ಪಿ ನೋಂದಣಿಯಲ್ಲಿ ಮತ್ತು ಎಚ್‌ಎಸ್‌ಆರ್‌ಪಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸದೇ ಇರುವುದರಲ್ಲಿ. ಎಚ್‌ಎಸ್‌ಆರ್‌ಪಿ ನೋಂದಣಿಯಲ್ಲಿ ಹಲವು ಹಂತದ ಸಮಸ್ಯೆಗಳಿವೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ಮುಗಿಯುವ ದಿನ ಹತ್ತಿರ ಬಂದಂತೆಯೇ, ಎಚ್‌ಎಸ್ಆರ್‌ಪಿ ನೋಂದಣಿ ಪೋರ್ಟಲ್‌ನ ಸರ್ವರ್‌ ಕೈಕೊಡಲಾರಂಭಿಸಿದೆ. ಸರ್ವರ್‌ ಸಮಸ್ಯೆ ಹೊರತುಪಡಿಸಿ ಇನ್ನೂ ಹಲವು ಗಂಭೀರ ತೊಡಕುಗಳಿವೆ. ಅವುಗಳನ್ನು ಸಾರಿಗೆ ಇಲಾಖೆ ಸರಿಪಡಿಸಬೇಕಿದೆ. ಅಂತಹ ಕೆಲವು ಸಮಸ್ಯೆಗಳು ಇಂತಿವೆ...

* ವಾಹನ್‌ ಪೋರ್ಟಲ್‌ನಲ್ಲಿ ವಿವರ ತಾಳೆಯಾಗದೇ ಇರುವುದು

ಸಾರಿಗೆ ಇಲಾಖೆಯ ಎಲ್ಲಾ ದಾಖಲಾತಿಗಳು ಈಗ ಸಂಪೂರ್ಣ ಡಿಜಿಟಲೀಕರಣ ಆಗಿವೆ. ಕಾಗದದ ರೂಪದಲ್ಲಿ ಇದ್ದ ದಾಖಲೆಗಳನ್ನು ಮೊದಲು ರಾಜ್ಯ ಮಟ್ಟದಲ್ಲಿ ಡಿಜಿಟಲೀಕರಣ ಮಾಡಲಾಗಿತ್ತು. ನಂತರ ಅವನ್ನು ಕೇಂದ್ರ ಸರ್ಕಾರದ ‘ವಾಹನ್‌ ಪೋರ್ಟಲ್‌’ಗೆ ಅಪ್‌ಲೋಡ್‌ ಮಾಡಲಾಗಿದೆ. ಆದರೆ ಹೀಗೆ ಡಿಜಿಟಲೀಕರಣ ಮಾಡುವಾಗ ಕೆಲವು ವಿವರ ಬಿಟ್ಟುಹೋಗಿದ್ದರೆ ಅಥವಾ ತಪ್ಪಾಗಿದ್ದರೆ ಅಂತಹ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಬುಕ್ಕಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ.

ಕೆಲವು ವಾಹನ ತಯಾರಕ ಕಂಪನಿಯ ಹೆಸರು ಆರ್‌ಸಿ (ನೋಂದಣಿ ಪತ್ರ) ಕಾರ್ಡ್‌ನಲ್ಲಿ ಸರಿಯಾಗಿ ನಮೂದಾಗಿದ್ದರೂ, ವಾಹನ್‌ ಪೋರ್ಟಲ್‌ನಲ್ಲಿ ‘ಅದರ್ಸ್‌’ ಎಂದು ನಮೂದಾಗಿರುತ್ತದೆ. ಅಂತಹ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಮುಂದಾದಾಗ ‘ವಿವರ ತಾಳೆಯಾಗುತ್ತಿಲ್ಲ’ ಅಥವಾ ‘ನಿಮ್ಮ ವಾಹನಕ್ಕೆ ಎಚ್‌ಎಸ್ಆರ್‌ಪಿ ನೀಡಲು ನಮ್ಮನ್ನು ನಿಯೋಜಿಸಿಲ್ಲ’ ಎಂಬ ಉತ್ತರಗಳು ಬರುತ್ತವೆ. ಏಳು–ಎಂಟು ವರ್ಷಗಳಷ್ಟು ಹಳೆಯಾದಾದ ವಾಹನಗಳಿಗೂ ಇಂಥದ್ದೇ ಸಮಸ್ಯೆ ಎದುರಾಗಿದೆ. 2018ರಲ್ಲಿ ಖರೀದಿಸಿದ ಕೆಲವು ವಾಹನಗಳಿಗೂ ಇದೇ ರೀತಿಯ ‘ಎರರ್‌’ ತೋರಿಸುತ್ತಿದೆ. ಎಲ್ಲಾ ದ್ವಿಚಕ್ರ ವಾಹನಗಳ ತಯಾರಕ ಕಂಪನಿಗಳು ಮತ್ತು ಎಲ್ಲಾ ಕಾರು ತಯಾರಕ ಕಂಪನಿಗಳ ವಾಹನಗಳಿಗೂ ಕೆಲವು ಬಾರಿ ಈ ‘ಎರರ್‌’ ತೊಡಕು ಎದುರಾಗುತ್ತಿದೆ. ಇದು ಸಾರಿಗೆ ಇಲಾಖೆಯ ಕಡೆಯಿಂದಲೇ ಆದ ಸಮಸ್ಯೆಯಾಗಿದ್ದು, ಇಲಾಖೆಯೇ ಅದನ್ನು ಸರಿಪಡಿಸಬೇಕಿದೆ

* ಕೆಲವು ಕಂಪನಿಗಳ ಹೆಸರೇ ಇಲ್ಲ

ಕೆಲವು ಕಂಪನಿಗಳ ಹೆಸರುಗಳು ವಾಹನ್‌ ಪೋರ್ಟಲ್‌ನಲ್ಲಿ ಇಲ್ಲ. ಅಂತಹ ಕಂಪನಿಗಳ ವಾಹನಗಳ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಯಮಾಹ ಕಂಪನಿಯ ಆರ್‌ಎಕ್ಸ್‌ ಮತ್ತು ಆರ್‌ಡಿ ಸರಣಿಯ ಬೈಕ್‌ಗಳನ್ನು ಭಾರತದಲ್ಲಿ ತಯಾರಿಕೆ ಮಾಡುತ್ತಿದ್ದದ್ದು ‘ಎಸ್ಕಾರ್ಟ್‌’ ಕಂಪನಿ. ಈ ಬೈಕ್‌ಗಳೆಲ್ಲವೂ ಕನಿಷ್ಠ 24 ವರ್ಷಕ್ಕಿಂತ ಹಳೆಯವೇ ಆಗಿವೆ.

ಈಗ ಯಮಾಹ ಕಂಪನಿಯು ಭಾರತದಲ್ಲಿ ನೇರವಾಗಿ ತಾನೇ ವ್ಯಾಪಾರ ವಹಿವಾಟು ನಡೆಸುತ್ತಿದೆ. ಯಮಾಹದಿಂದ ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಯಾವುದೇ ತೊಂದರೆ ಇಲ್ಲ. ಆದರೆ ವಾಹನ್‌ ಪೋರ್ಟಲ್‌ನಲ್ಲಿ, ‘ಎಸ್ಕಾರ್ಟ್‌’ ಕಂಪನಿಯ ವಿವರವನ್ನು ಬೈಕ್‌ ತಯಾರಕ–ಮಾರಾಟ ವಿಭಾಗದಲ್ಲಿ ತೋರಿಸದೇ ಇರುವುದರಿಂದ ಆ ಕಂಪನಿಯಿಂದ ಖರೀದಿಸಿದ ಬೈಕ್‌ಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸುವಲ್ಲಿ ತೊಡಕು ಎದುರಾಗಿದೆ.

* ಕಾರ್ಯಾಚರಣೆ ಸ್ಥಗಿತಗೊಳಿಸಿದ ಕಂಪನಿಗಳ ವಾಹನಗಳಿಗೂ ತೊಡಕು

ಕಳೆದ 10–15 ವರ್ಷಗಳಲ್ಲಿ ಹಲವಾರು ಕಾರು ತಯಾರಕ ಮತ್ತು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸಿವೆ. ಅವುಗಳಲ್ಲಿ ಅಧಿಕೃತವಾಗಿ ಸರ್ವಿಸಿಂಗ್‌ ಸೇವೆ ಒದಗಿಸುತ್ತಿರುವ ಕಂಪನಿಗಳ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿದೆ. ಬೇರೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ದೇವೊ, ಓಪೆಲ್‌, ಮಿತ್ಸುಬಿಶಿ ಕಂಪನಿಯ ಕೆಲವು ಮಾದರಿಗಳು, ಪ್ರೀಮಿಯರ್ ಆಟೊ ಲಿಮಿಟೆಡ್‌ನ ಕಾರುಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಎಸ್‌ಐಎಎಂ ಪೋರ್ಟಲ್‌ನಲ್ಲಿ ಈ ವಾಹನಗಳ ವಿವರ ನಮೂದಿಸಿದರೆ, ‘ಎಚ್‌ಎಸ್‌ಆರ್‌ಪಿ ನೀಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ವಾಹನದ ಡೀಲರ್‌ ಅನ್ನು ಸಂಪರ್ಕಿಸಿ’ ಎಂಬ ಸಂದೇಶ ಬರುತ್ತದೆ. ಭಾರತದಲ್ಲಿ ಎಲ್ಲಾ ಸ್ವರೂಪದ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕಂಪನಿಯ ಡೀಲರ್‌ ಅನ್ನು ಹುಡುಕುವುದು ಎಲ್ಲಿ ಎಂಬುದು ಹಲವರ ಪ್ರಶ್ನೆ.

ಹಾರ್ಲೆ ಡೇವಿಡ್‌ಸನ್‌ ಕಂಪನಿ ಬೈಕ್‌ಗಳದ್ದೂ ಇದೇ ಕತೆ. ಆ ಕಂಪನಿ ಭಾರತದಲ್ಲಿ ತನ್ನ ನೇರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಹಾರ್ಲೆ ಡೇವಿಡ್‌ಸನ್‌ನಿಂದ ನೇರವಾಗಿ ಬೈಕ್‌ ಖರೀದಿಸಿದ್ದವರಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಒಂದು ಎಚ್‌ಎಸ್‌ಆರ್‌ಪಿ ತಯಾರಕ ಕಂಪನಿಯು ಹಾರ್ಲೆ ಬೈಕ್‌ಗಳಿಗೆ ಎಚ್‌ಎಸ್‌ಆರ್‌ಪಿಯನ್ನು ‘ಹೋಂ ಡೆಲಿವರಿ’ ಮೂಲಕ ಒದಗಿಸುತ್ತಿದೆ. ಆದರೆ ಈ ಸೇವೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಲಭ್ಯವಿಲ್ಲ. ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಈ ಸೇವೆ ಲಭ್ಯವಿದ್ದರೆ, ಕೆಲವು ಪ್ರದೇಶದಲ್ಲಿ ಈ ಸೇವೆ ಇಲ್ಲ.

* ಮಿನಿ ಕಂಪನಿಯ ಕೆಲವು ಮಾದರಿಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ

* ಟಾಟಾ ಮೋಟರ್ಸ್‌ನ ಕೆಲವು ಮಾದರಿಗಳಿಗೆ (‘ಟಾಟಾ ಎಂಜಿನಿಯರಿಂಗ್‌ ಅಂಡ್‌ ಲೋಕೊಮೋಟಿವ್‌ ಕಂಪನಿ ಲಿಮಿಟೆಡ್‌–ಟೆಲ್ಕೊ’ ಹೆಸರಿನಲ್ಲಿ ಮಾರಾಟವಾಗಿದ್ದ ಮಾದರಿಗಳಿಗೆ) ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ

* ಸೇನಾ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದು, 2019ರ ಏಪ್ರಿಲ್‌ ನಂತರ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿ ಮಾಡಲಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ

* ಬೇರೆ ರಾಜ್ಯಗಳಲ್ಲಿ ಖರೀದಿಸಿ, ಕರ್ನಾಟಕದಲ್ಲಿ ಹೊಸದಾಗಿ ನೋಂದಣಿ ಮಾಡಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ

* ಒಂದು ಪ್ರಾದೇಶಿಕ ಕಚೇರಿಯಲ್ಲಿ (ಉದಾಹರಣೆಗೆ: KA02) ನೋಂದಣಿ ಮಾಡಿಸಿರುವ ವಾಹನಕ್ಕೆ ಎನ್‌ಒಸಿ ಪಡೆದು, ಬೇರೆ ಪ್ರಾದೇಶಿಕ ಕಚೇರಿಯಲ್ಲಿ (ಉದಾಹರಣೆಗೆ: KA04) ಮರುನೋಂದಣಿ ಮಾಡಿದ್ದರೆ, ಅಂತಹ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಖರೀದಿಯ ವೇಳೆ ತೊಡಕಾಗುತ್ತಿದೆ

15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೀಡುವುದಿಲ್ಲ ಎಂಬುದು ನಿಜವಲ್ಲ

15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೀಡುವುದಿಲ್ಲ ಎಂಬ ಸುಳ್ಳು ಸುದ್ದಿ ಜನಸಾಮಾನ್ಯರ ನಡುವೆ ಹರಿದಾಡುತ್ತಿದೆ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಮಧುಕುಮಾರ್‌ ಅವರ ಬಜಾಜ್ ಪಲ್ಸರ್‌–150 ಬೈಕ್‌ಗೆ 15 ವರ್ಷವಾಗಿದೆ. ಆರು ತಿಂಗಳ ಹಿಂದೆಯಷ್ಟೇ ಅದರ ಅರ್ಹತಾ ಪತ್ರವನ್ನು (ಎಫ್‌ಸಿ) ಅವರು ನವೀಕರಿಸಿದ್ದಾರೆ. ಆದರೆ ಅವರ ಬೈಕ್‌ಗೆ ಎಚ್‌ಎಸ್‌ಆರ್‌ಪಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಖರೀದಿ ವೇಳೆ ‘ನಿಮ್ಮ ವಾಹನದ ವಿವರ ತಾಳೆಯಾಗುತ್ತಿಲ್ಲ’ ಎಂಬ ಸಂದೇಶ ಬರುತ್ತಿದೆ. ‘15 ವರ್ಷಕ್ಕಿಂತ ಹಳೆಯ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನೀಡುವುದಿಲ್ಲ. ಹೀಗಾಗಿ ಬೈಕ್‌ ಮಾರಾಟ ಮಾಡುತ್ತೇನೆ ಎಂದು ಹೊರಟೆ. ಆದರೆ ಎಚ್‌ಎಸ್‌ಆರ್‌ಪಿ ಇಲ್ಲ ಎಂದು ಬೈಕ್‌ ಕೊಳ್ಳುವವರೇ ಇಲ್ಲ’ ಎಂದು ಅವರು ವಿವರಿಸಿದರು.

ಆದರೆ ಇದು ನಿಜವಲ್ಲ. ಎಚ್‌ಎಸ್‌ಆರ್‌ಪಿ ಪಡೆಯಲು ವಾಹನ ಎಷ್ಟೇ ಹಳೆಯದಾಗಿದ್ದರೂ ಸಮಸ್ಯೆ ಇಲ್ಲ. 25 ವರ್ಷಕ್ಕಿಂತ ಹಳೆಯ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ದೊರೆತಿದೆ. ವಾಹನದ ನೈಜ ವಿವರ ಮತ್ತು ವಾಹನ್‌ ಪೋರ್ಟಲ್‌ನಲ್ಲಿ ಇರುವ ವಿವರ ತಾಳೆಯಾಗದೇ ಇರುವುದರಿಂದ ಹೀಗೆ ಆಗಿರಬಹುದು. ಸಂಬಂಧಿತ ಆರ್‌ಟಿಒ ಕಚೇರಿಗೆ ಭೇಟಿ ನೀಡಿ, ನಿಗದಿತ ಅರ್ಜಿಯನ್ನು ಕೊಟ್ಟು ವಿವರನ್ನು ಸರಿಪಡಿಸಿಕೊಂಡರೆ ಈ ಸಮಸ್ಯೆ ಬಗೆಹರಿಯುತ್ತದೆ. ಎಚ್‌ಎಸ್‌ಆರ್‌ಪಿ ಬಗ್ಗೆ ಜನರಲ್ಲಿ ಇರುವ ಇಂತಹ ಸುಳ್ಳು ಮಾಹಿತಿಗಳನ್ನು ಹೋಗಲಾಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಬೇಕಿದೆ

IND ನೋಂದಣಿ ಫಲಕಗಳು ಎಚ್‌ಎಸ್‌ಆರ್‌ಪಿಗಳಲ್ಲ

ಬಹಳಷ್ಟು ಮಂದಿ ತಮ್ಮ ವಾಹನದಲ್ಲಿರುವ IND ನೋಂದಣಿ ಫಲಕಗಳನ್ನೇ ಎಚ್‌ಎಸ್‌ಆರ್‌ಪಿ ಎಂದು ಅಂದುಕೊಂಡಿದ್ದಾರೆ. ಆದರೆ ಎರಡೂ ಭಿನ್ನವಾದ ನೋಂದಣಿ ಫಲಕಗಳು. ರಸ್ತೆ ಬದಿಯ ಸ್ಟಿಕ್ಕರ್‌ ಕಟಿಂಗ್‌ ಅಂಗಡಿಯಿಂದ ಬರೆಸಿದ ಅಥವಾ ಕಟ್ಟಿಂಗ್‌ ಮಾಡಿಸಿದ ನೋಂದಣಿ ಫಲಕಗಳಿಗೆ ಎಷ್ಟು ಮಾನ್ಯತೆ ಇದೆಯೋ IND ನೋಂದಣಿ ಫಲಕಗಳಿಗೆ ಇರುವುದೂ ಅಷ್ಟೇ ಮಾನ್ಯತೆ.

IND ನೋಂದಣಿ ಫಲಕಗಳಲ್ಲಿ ಯಾವುದೇ ಸುರಕ್ಷತಾ ಸೌಲಭ್ಯಗಳು ಇರುವುದಿಲ್ಲ. ಎಚ್‌ಎಸ್‌ಆರ್‌ಪಿಯಲ್ಲಿ ಮುಂಬದಿಯ ನೋಂದಣಿ ಫಲಕಕ್ಕೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ಇರುತ್ತದೆ ಮತ್ತು ಹಿಂಬದಿಯಕ್ಕೆ ಬೇರೆಯದೇ ಗುರುತಿನ ಸಂಖ್ಯೆ ಇರುತ್ತದೆ. ವಾಹನದ ನೋಂದಣಿ ಸಂಖ್ಯೆ ಮತ್ತು ಎಚ್‌ಎಸ್‌ಆರ್‌ಪಿಯ ಗುರುತಿನ ಸಂಖ್ಯೆಯೂ ಒಂದೇ ಅಲ್ಲ. ಇಂತಹ ಗುರುತಿನ ಸಂಖ್ಯೆ ಇರುವ ಫಲಕಗಳು ಮಾತ್ರವೇ ಅಧಿಕೃತ. ಅವನ್ನಷ್ಟೇ ಎಚ್‌ಎಸ್‌ಆರ್‌ಪಿ ಎಂದು ಪರಿಗಣಿಸಲಾಗುತ್ತದೆ.  ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಚಕ್ರಗಳಿರುವ ಎಲ್ಲಾ ಸ್ವರೂಪದ ವಾಹನಗಳಿಗೆ ಮುಂಬದಿಯ ಗಾಜಿನ ಮೇಲೆ ಅಂಟಿಸಲು ಮೂರನೇ ಎಚ್‌ಎಸ್‌ಆರ್‌ಪಿಯನ್ನೂ ಕೊಡಲಾಗುತ್ತದೆ. ಎಚ್‌ಎಸ್‌ಆರ್‌ಪಿ ವೇಳೆ ಈ ಮೂರೂ ಫಲಕಗಳು ಇದ್ದರಷ್ಟೇ ಅದು ಅಧಿಕೃತ (ದ್ವಿಚಕ್ರ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ). ಈ ಮೊದಲು ಎಚ್‌ಎಸ್‌ಆರ್‌ಪಿಯಲ್ಲಿ ಬಾರ್‌ಕೋಡ್‌ ಸಹ ಇರಬೇಕು ಎಂಬ ನಿಯಮ ಇತ್ತು. ನಿಯಮಕ್ಕೆ ತಿದ್ದುಪಡಿ ಮಾಡಿ, ಅದನ್ನು ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT