ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ವಕ್ಫ್ (ತಿದ್ದುಪಡಿ) ಮಸೂದೆ–2024ಕ್ಕೆ ಸಂಸತ್ತಿನ ಒಳಗೂ ಹೊರಗೂ ಪರ–ವಿರೋಧ ವ್ಯಕ್ತವಾಗಿದೆ. ಮಸೂದೆಯಲ್ಲಿರುವ ಅಂಶಗಳ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಮಸೂದೆಯನ್ನು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ. ಮಸೂದೆಯಲ್ಲಿ ಮಾಡಿರುವ ತಿದ್ದುಪಡಿಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ
ವಕ್ಫ್ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ಆಡಳಿತದ ಉದ್ದೇಶದಿಂದ ಕೇಂದ್ರ ಸರ್ಕಾರ 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತಂದಿತ್ತು. ನಂತರದಲ್ಲಿ ಈ ಕಾಯ್ದೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದ ನ್ಯಾಯಮೂರ್ತಿ (ನಿವೃತ್ತ) ರಾಜೀಂದರ್ ಸಾಚಾರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸುಗಳು ಮತ್ತು ವಕ್ಫ್ ಮತ್ತು ಕೇಂದ್ರ ವಕ್ಫ್ ಮಂಡಳಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ವರದಿಗಳ ಆಧಾರದಲ್ಲಿ ಮತ್ತು ಸಂಬಂಧಿಸಿದ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದ ನಂತರ 2013ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಯಿತು.
‘ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರ, ನೋಂದಣಿ ಮತ್ತು ವಕ್ಫ್ ಆಸ್ತಿಗಳ ಸರ್ವೆ, ಒತ್ತುವರಿ ತೆರವು ಮತ್ತು ವಕ್ಫ್ ವ್ಯಾಖ್ಯಾನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ, ವಕ್ಫ್ ಆಸ್ತಿಗಳ ನಿರ್ವಹಣೆ, ಆಡಳಿತದಲ್ಲಿ ಇನ್ನಷ್ಟು ಕಾರ್ಯ ದಕ್ಷತೆ ತರಲು, ಇರುವ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶದೊಂದಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
l→ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಯನ್ನು ‘ಏಕೀಕೃತ ವಕ್ಫ್ ನಿರ್ವಹಣೆ, ಮೌಲ್ಯವರ್ಧನೆ, ಕಾರ್ಯದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ–1995’ ಎಂದು ಮರು ನಾಮಕಾರಣ ಮಾಡುತ್ತದೆ
l→‘ವಕ್ಫ್’ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಅದರಂತೆ, ಕನಿಷ್ಠ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವ ವ್ಯಕ್ತಿ ತನ್ನ ಒಡೆತನದಲ್ಲಿರುವ ಆಸ್ತಿಯನ್ನು ವಕ್ಫ್‌ಗೆ ನೀಡಬಹುದು
l→ದಾನ ನೀಡುವ ಕುಟುಂಬದೊಂದಿಗೆ ದತ್ತಿ ಒಪ್ಪಂದ (ವಕ್ಫ್–ಅಲಲ್–ಔಲಾದ್) ಮಾಡಿಕೊಳ್ಳುವಾಗ ಮಹಿಳೆಯರಿಗೆ ಪಿತ್ರಾರ್ಜಿತವಾಗಿ ಸಿಗುವ ಹಕ್ಕುಗಳನ್ನು ನಿರಾಕರಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ
l→ವಕ್ಫ್ ಆಸ್ತಿಗಳನ್ನು ಸರ್ವೆ ಮಾಡಲು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿ ಅವರಿಗೆ ಅಧಿಕಾರ ನೀಡುತ್ತದೆ
l→ಮಹಿಳೆಯರು ಮತ್ತು ಮುಸ್ಲಿಮೇತರರನ್ನು ಒಳಗೊಂಡ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆಗೆ ಅವಕಾಶ ಕಲ್ಪಿಸುತ್ತದೆ
l→ಬೊಹರಾ ಮತ್ತು ಆಗಾಖಾನಿ ಸಮುದಾಯದವರಿಗೆ ಪ್ರತ್ಯೇಕ ವಕ್ಫ್ ಮಂಡಳಿ ರಚಿಸುವುದಕ್ಕೆ ಅವಕಾಶ ಕೊಡುತ್ತದೆ
l→ಶಿಯಾ, ಸುನ್ನಿ, ಬೊಹರಾ, ಆಗಾಖಾನಿ ಮತ್ತು ಮುಸ್ಲಿಂ ಸಮುದಾಯಗಳಲ್ಲಿರುವ ಇತರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡುತ್ತದೆ
l→ವಕ್ಫ್ ಆಸ್ತಿಗಳ ನೋಂದಣಿಗೆ ಕೇಂದ್ರೀಕೃತ ಪೋರ್ಟಲ್ ಮತ್ತು ಡಾಟಾಬೇಸ್ ವ್ಯವಸ್ಥೆ ರೂಪಿಸುತ್ತದೆ
l→ಆಸ್ತಿ ಹಕ್ಕು ಬದಲಾವಣೆಗೆ ಕಂದಾಯ ಕಾನೂನುಗಳ ಅಡಿಯಲ್ಲಿ ವಿಸ್ತೃತ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ದಾಖಲು ಮಾಡುವುದಕ್ಕೂ ಮೊದಲು ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಲಾಗುತ್ತದೆ.
l→ನಿರ್ದಿಷ್ಟ ಆಸ್ತಿಯು ವಕ್ಫ್ ಆಸ್ತಿಯೇ ಎಂಬುದನ್ನು ನಿರ್ಧರಿಸಲು ವಕ್ಫ್ ಮಂಡಳಿಗೆ ಅಧಿಕಾರ ನೀಡುವ ಸಂಬಂಧಿಸಿದ ಸೆಕ್ಷನ್ 40 ಅನ್ನು ತೆಗೆದು ಹಾಕುತ್ತದೆ
l→ಇಬ್ಬರು ಸದಸ್ಯರ ನ್ಯಾಯಮಂಡಳಿಯ ಸ್ವರೂಪದಲ್ಲಿ ಸುಧಾರಣೆ ತರುತ್ತದೆ. ನ್ಯಾಯಮಂಡಳಿಯ ಆದೇಶದ ವಿರುದ್ಧ 90 ದಿನಗಳ ಒಳಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ.
ಆಧಾರ: ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆ, ಪಿಟಿಐ
l ಸೆಕ್ಷನ್ 55ಎಗೆ ತಿದ್ದುಪಡಿ ಮಾಡಲಾಗಿದ್ದು, ಇದು ವಕ್ಫ್ ಆಸ್ತಿಗಳ ಮೇಲಿನ ಅನಧಿಕೃತ ಸ್ವಾಧೀನದಾರರನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದೆ. ಹಿಂದಿನ ಕಾಯ್ದೆಯಲ್ಲಿರುವ ‘ನ್ಯಾಯಮಂಡಳಿಯ ನಿರ್ಣಯವೇ ಅಂತಿಮ’ ಎನ್ನುವುದನ್ನು ಕೈಬಿಡಲಾಗಿದೆ
l ಸೆಕ್ಷನ್ 64ಕ್ಕೆ ತಿದ್ದುಪಡಿ ತರಲಾಗಿದೆ. ವಕ್ಫ್‌ನ ಮುತವಲ್ಲಿ ತಮ್ಮ ನಿರ್ದಿಷ್ಟ ಕಾರ್ಯನಿರ್ವಹಣೆಯಲ್ಲಿ (ಲೆಕ್ಕಪತ್ರ ನಿರ್ವಹಣೆ ಸೇರಿದಂತೆ) ವಿಫಲವಾದರೆ, ಅವರನ್ನು ಹುದ್ದೆಯಿಂದ ತೆಗೆಯಲು ಈ ಹಿಂದೆ ಎರಡು ವರ್ಷಗಳ ಅವಧಿ ಪರಿಗಣಿಸಲಾಗುತ್ತಿತ್ತು. ಮಸೂದೆಯಲ್ಲಿ ಅದನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ. ಜತೆಗೆ ಮುತವಲ್ಲಿ ಕಾನೂನುಬಾಹಿರ ಎಂದು ಘೋಷಿತವಾದ ಸಂಘಟನೆಯ ಜತೆಗೆ ಸಂಪರ್ಕದಲ್ಲಿದ್ದರೆ, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅಡಿ ಕ್ರಮ ಜರುಗಿಸಲೂ ಅವಕಾಶ ಕಲ್ಪಿಸಲಾಗಿದೆ
l ವಕ್ಫ್ ಮಂಡಳಿಯ ಹಣಕಾಸು ವ್ಯವಹಾರ ಮತ್ತಿತರ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಲು ಕಾಯ್ದೆಯಲ್ಲಿ ಕಾಲಮಿತಿ ನಿಗದಿಪಡಿಸಿರಲಿಲ್ಲ. ಸೆಕ್ಷನ್ 65ಕ್ಕೆ ತಿದ್ದುಪಡಿ ತಂದು ಅದಕ್ಕೆ ಕಾಲಮಿತಿ ನಿಗದಿಪಡಿಸಲಾಗಿದ್ದು, ಹಣಕಾಸು ವರ್ಷ ಮುಗಿದ ಆರು ತಿಂಗಳ ಒಳಗೆ ಮಾಹಿತಿ ನೀಡಬೇಕು
l ವಕ್ಫ್ ಮಂಡಳಿಯ ಅಧಿಕಾರ ನಡೆಸುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 69ರ ಉಪಸೆಕ್ಷನ್ (4)ಕ್ಕೆ ತಿದ್ದುಪಡಿ ತರಲಾಗಿದ್ದು, ಸರ್ಕಾರದ ನಿಯಮಾವಳಿಯಂತೆ, ಬಾಧಿತ ವ್ಯಕ್ತಿಯಿಂದ ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಲಿಖಿತ ನೋಟಿಸ್ ಪ್ರಕಟಿಸಬೇಕು
l ಸೆಕ್ಷನ್ 72ರ ಪ್ರಕಾರ, ಮಂಡಳಿಯಲ್ಲಿ ಸೇವೆ ಸಲ್ಲಿಸುವವರಿಗೆ ವಕ್ಫ್‌ನ ವಾರ್ಷಿಕ ಆದಾಯದ ಪೈಕಿ ಶೇ 7ರಷ್ಟನ್ನು ಭತ್ಯೆಯಾಗಿ ಪಾವತಿಸಬೇಕು ಎಂದು ಇತ್ತು. ತಿದ್ದುಪಡಿ ಮಸೂದೆಯಲ್ಲಿ ಅದನ್ನು ಶೇ 5ಕ್ಕೆ ಇಳಿಸಲಾಗಿದೆ. ಜತೆಗೆ, ಆದಾಯ ನಿಷ್ಕರ್ಷೆಯಲ್ಲಿ ಮುತವಲ್ಲಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಡುವೆ ಭಿನ್ನಮತ ತಲೆದೋರಿದರೆ, ಮಂಡಳಿಯ ನಿರ್ಣಯವೇ ಅಂತಿಮ ಎಂದು ಕಾಯ್ದೆಯಲ್ಲಿ ಇತ್ತು. ‘ಮಂಡಳಿಯ ನಿರ್ಣಯವೇ ಅಂತಿಮ’ ಎನ್ನುವುದನ್ನು ಮಸೂದೆಯಲ್ಲಿ ತೆಗೆದುಹಾಕಲಾಗಿದೆ
l ಸೆಕ್ಷನ್ 104 ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇಸ್ಲಾಂ ಅನ್ನು ಆಚರಿಸದೇ ಇರುವವರು ದಾನವಾಗಿ ನೀಡಿರುವ ಚರ ಮತ್ತು ಸ್ಥಿರಾಸ್ತಿಗಳಿಗೂ ವಕ್ಫ್ ಕಾಯ್ದೆ ಅನ್ವಯವಾಗುತ್ತದೆ ಎಂದು ಹಿಂದಿನ ಕಾಯ್ದೆಯಲ್ಲಿ ಇತ್ತು
l ಸೆಕ್ಷನ್ 108ಕ್ಕೆ ಉಪಸೆಕ್ಷನ್ ಬಿ ಸೇರಿಸಲಾಗಿದೆ (108ಬಿ). ಇದರ ಅನ್ವಯ, ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಕಾಯ್ದೆ ಜಾರಿ ಸಂಬಂಧದ ನಿಯಮ ರೂಪಿಸಬಹುದು. ಜತೆಗೆ, ನೋಂದಣಿ, ಲೆಕ್ಕಪತ್ರ ಮತ್ತಿತರೆ ವಕ್ಫ್ ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಹಾಗೂ ವಿಧವೆಯರು, ವಿಚ್ಛೇದಿತರು, ಅನಾಥೆಯರಿಗೆ ನೀಡಲಾಗುವ ಹಣದ ಸಂಬಂಧ ಕೇಂದ್ರ ಸರ್ಕಾರ ನಿಯಮ ರೂಪಿಸಬಹುದು
l ಸೆಕ್ಷನ್ 109, ಉಪಸೆಕ್ಷನ್ 2ರಲ್ಲಿ ವಕ್ಫ್ ಮಂಡಳಿ ಸಭೆ ಸೇರುವ ಸ್ಥಳ ಮತ್ತು ಸಮಯ ಹಾಗೂ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಭತ್ಯೆ ನೀಡುವ ಸಂಬಂಧದ ಕಾಯ್ದೆಯ ನಿಯಮಗಳನ್ನು ಮಸೂದೆಯು ತೆಗೆದುಹಾಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.