ಹುಬ್ಬಳ್ಳಿಯು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ. ಚನ್ನಮ್ಮ ವೃತ್ತವು ಹುಬ್ಬಳ್ಳಿಯ ಹೃದಯ ಭಾಗ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಈ ವೃತ್ತವು ಪ್ರಸ್ತುತ ತನ್ನ ಮಹತ್ವ ಮತ್ತು ಅಂದ ಕಳೆದುಕೊಂಡು ಕಳಾಹೀನವಾಗಿರುವುದಲ್ಲದೇ, ಜನರು ಹಾಗೂ ವಾಹನ ಸವಾರರಿಗೆ ಸಮಸ್ಯೆಯೂ ಆಗಿ ಪರಿಣಮಿಸಿದೆ. ಅದಕ್ಕೆ ಕಾರಣ, ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ. ನಾಲ್ಕು ವರ್ಷದ ಹಿಂದೆ ಆರಂಭವಾದ ಮೇಲ್ಸೇತುವೆ ಕಾಮಗಾರಿ ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು; ಆದರೆ, ಹಾಗಾಗಿಲ್ಲ. ಇದು ಉತ್ತರ ಕರ್ನಾಟಕದ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿವೆ
ಮುಗಿಯದ ಕಾಮಗಾರಿ:
2021ರ ಜನವರಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಗೆ ಚಾಲನೆ ನೀಡಿದ್ದರು. ಕಾಮಗಾರಿ ಅನುಷ್ಠಾನದ ಉಸ್ತುವಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ. ದೆಹಲಿಯ ಜಂಡು ಕನ್‌ಸ್ಟ್ರಕ್ಸನ್ ಪ್ರೈ.ಲಿ. ಮತ್ತು ರಾಮಕುಮಾರ ಕಾಂಟ್ರಾಕ್ಟರ್ ಕಂಪನಿ ಗುತ್ತಿಗೆ ಪಡೆದಿವೆ. 3.9 ಕಿ.ಮೀ. ಉದ್ದದ ಯೋಜನೆಯ ₹349.49 ಕೋಟಿ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಿದೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಸುತ್ತ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನಿತ್ಯ 2.5 ಲಕ್ಷ ವಾಹನ ಸಂಚಾರ:
ಚನ್ನಮ್ಮ ವೃತ್ತದ ಸುತ್ತಮುತ್ತ ಪ್ರತಿನಿತ್ಯ ನಾಲ್ಕು ಲಕ್ಷದಷ್ಟು ವಾಹನಗಳು ಸಂಚರಿಸುತ್ತವೆ. ನಗರದಲ್ಲಿಯೇ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರಗಳಿರುವುದರಿಂದ ಉತ್ತರ ಕನ್ನಡ, ಹಾವೇರಿ, ಗದಗ, ಬೆಳಗಾವಿ ಭಾಗದಿಂದ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ನಾಲ್ಕು ಸಾವಿರದಷ್ಟು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, 50 ಸಾವಿರದಷ್ಟು ದ್ವಿಚಕ್ರ ವಾಹನಗಳು, 20 ಸಾವಿರ ಆಟೊಗಳು, 1 ಲಕ್ಷದಷ್ಟು ಕಾರ್, ಲಾರಿ, ಟ್ರಕ್ ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. 2027ರ ವೇಳೆಗೆ ಒಂದು ತಾಸಿಗೆ 21 ಸಾವಿರ, 2037ರ ವೇಳೆಗೆ ಒಂದು ತಾಸಿಗೆ 40,742 ವಾಹನಗಳು ವೃತ್ತದ ಮೂಲಕ ಸಾಗಲಿವೆ.
ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ದೃಶ್ಯ
ಹದಗೆಟ್ಟ ರಸ್ತೆಯಲ್ಲೇ ಸಂಚಾರ:
ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ 3.3 ಕಿ.ಮೀ. ಉದ್ದದ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ವ್ಯವಸ್ಥಿತ ವಾಹನ ಸಂಚಾರ ಅಸಾಧ್ಯದ ಮಾತಾಗಿದ್ದು, ಸಂಚಾರ ಪೊಲೀಸರು ಹೈರಾಣಾಗುತ್ತಿದ್ದಾರೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಸುತ್ತ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಮುಗಿಯದ ಭೂಸ್ವಾಧೀನ:
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಶೋಕ ಟವರ್ ಹೋಟೆಲ್‌ವರೆಗಿನ ಅಕ್ಕಪಕ್ಕದ ಜಾಗ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಪರಿಹಾರ ಹಂಚಿಕೆ ಸಮಸ್ಯೆ ಇತ್ಯರ್ಥದ ಕೊನೆ ಹಂತದಲ್ಲಿದ್ದು, ಅದು ಪೂರ್ಣಗೊಂಡ ನಂತರ ಆ ಭಾಗದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ ಪಕ್ಕ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಮೇಲ್ಸೇತುವೆ ನಿರ್ಮಾಣ ರಾಜ್ಯ ಸರ್ಕಾರದ ಯೋಜನೆಯಾಗಿದ್ದರೂ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಿದೆ. ಕಾಮಗಾರಿ ಶೀಘ್ರ ಮುಗಿಸುವುದು ರಾಜ್ಯ ಸರ್ಕಾರದ ಹೊಣೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಬೃಹತ್ ಕಾಮಗಾರಿ ಆಗಿರುವುದರಿಂದ ತುಸು ವಿಳಂಬವಾಗಿದೆ. ಇದೀಗ ಕಾಮಗಾರಿ ವೇಗ ಪಡೆದಿದ್ದು ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
ದಿವ್ಯಪ್ರಭು ಜಿಲ್ಲಾಧಿಕಾರಿ ಧಾರವಾಡ
ಮೇಲ್ಸೇತುವೆಯನ್ನು 2026ರ ಮಾರ್ಚ್‌ಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಶೇ 20ರಷ್ಟು ಕಾಮಗಾರಿ ಮಾತ್ರ ಬಾಕಿಯಿದೆ
ಸತೀಶ ನಾಗನೂರು ಸಹಾಯಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ
ಎರಡು–ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಹಕರಿಲ್ಲದೆ ಬೇಕರಿ ಅಂಗಡಿಗೆ ಬಾಡಿಗೆ ನೀಡಲು ಕಷ್ಟವಾಗುತ್ತಿದೆ
ನಿಜಗುಣಸ್ವಾಮಿ ಬೇಕರಿ ಅಂಗಡಿ ಮಾಲೀಕಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ದೃಶ್ಯ
ಷರತ್ತು ಉಲ್ಲಂಘನೆ; ಎಎಸ್‌ಐ ಸಾವು
ಕಾಮಗಾರಿ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಷರತ್ತುಗಳನ್ನು ಉಲ್ಲಂಘಿಸಲಾಗಿದ್ದು, ಮೂರು ವರ್ಷದಲ್ಲಿ ಮೂರು ಅವಘಡಗಳು ಸಂಭವಿಸಿವೆ. ಪಿಲ್ಲರ್ ಸೆಂಟ್ರಿಂಗ್ ಕುಸಿದು ಕಾರ್ಮಿಕ ಗಾಯಗೊಂಡಿದ್ದು, ಕ್ರೇನ್ ನಿಯಂತ್ರಣ ತಪ್ಪಿ ಉರುಳಿದ್ದರಿಂದ ಮೂರು ಬೈಕ್, ಆಂಬುಲೆನ್ಸ್ ಜಖಂಗೊಂಡು, ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವರದಿಯಾಗಿವೆ. ಮುಖ್ಯವಾಗಿ, ಹಳೇಕೋರ್ಟ್ ವೃತ್ತದ ಬಳಿ ಕಬ್ಬಿಣದ ರಾಡ್ ಬಿದ್ದು ಎಎಸ್‌ಐ ನಾಭಿರಾಜ ಮೃತರಾಗಿರುವುದು ಆತಂಕ ಮೂಡಿಸಿದೆ.
ಅಭಿವೃದ್ಧಿಗೆ ಹಿನ್ನಡೆ
ಉತ್ತರ ಕರ್ನಾಟಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸಬೇಕು ಎನ್ನುವುದು ಜನರ ಒತ್ತಡ ಮತ್ತು ಸರ್ಕಾರದ ಆಶಯ. ಆದರೆ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ನಡೆಯುತ್ತಿರುವ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳ ಕಥೆಯು ಮೇಲ್ಸೇತುವೆಗಿಂತ ಭಿನ್ನವಾಗಿಯೇನೂ ಇಲ್ಲ. ಬೆಂಗಳೂರು-ಪುಣೆ ಸಂಪರ್ಕಿಸುವ ಎಂಟು ಪಥಗಳ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯು ₹1,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಗಡುವು ಮೀರಿದ್ದರೂ ಕಾಮಗಾರಿ ಮುಗಿದಿಲ್ಲ. ಹುಬ್ಬಳ್ಳಿ-ಧಾರವಾಡ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಭಾಗದಲ್ಲಿ ಮೂಲಸೌಕರ್ಯ ವೃದ್ಧಿಗೆ ಇದರಿಂದ ತೊಡಕಾಗಿದೆ.