ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ | ಯುವ ಭಾರತ: ಉತ್ಪಾದಕ ಜನಸಂಖ್ಯೆ 97 ಕೋಟಿ

Last Updated 19 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯೆಯ ಅಂದಾಜಿನ ಪ್ರಕಾರ, ವಿಶ್ವದ ಅತ್ಯಂತ ದೊಡ್ಡ ಯುವರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತದ ಒಟ್ಟು ಜನಸಂಖ್ಯೆ ಶೇ 68ರಷ್ಟು ಮಂದಿ 15–64 ವರ್ಷ ವಯಸ್ಸಿನವರಾಗಿದ್ದಾರೆ. ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಈ ವಯಸ್ಸಿನ ಜನರನ್ನು ‘ಉತ್ಪಾದಕ ಜನಸಂಖ್ಯೆ’ ಎಂದು ಕರೆಯಲಾಗುತ್ತದೆ. ಉತ್ಪಾದಕ ಜನಸಂಖ್ಯೆಯು ಹೆಚ್ಚು ಇರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿ ಇತ್ತು. ಈಗಲೂ ಅದೇ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ ಮೊದಲ ಸ್ಥಾನದಲ್ಲಿ ಚೀನಾ ಇದ್ದು, ಚೀನಾ ಮತ್ತು ಭಾರತದ ಉತ್ಪಾದಕ ಜನಸಂಖ್ಯೆಯ ಅಂತರ ಒಂದು ಕೋಟಿ ಮಾತ್ರ. ವಿಶ್ವದ ಒಟ್ಟು ಜನಸಂಖ್ಯೆ ಮತ್ತು ವಿಶ್ವದ ಒಟ್ಟು ಉತ್ಪಾದಕ ಜನಸಂಖ್ಯೆಗೆ ಹೋಲಿಸಿದರೂ, ಭಾರತದ ಉತ್ಪಾದಕ ಜನಸಂಖ್ಯೆಯ ಪ್ರಮಾಣ ಹೆಚ್ಚೇ ಇದೆ. ಈ ಕಾರಣದಿಂದಲೇ ಭಾರತವನ್ನು ಯುವರಾಷ್ಟ್ರ ಎಂದು ಕರೆಯಲಾಗುತ್ತದೆ.

804.5 ಕೋಟಿ/ ವಿಶ್ವದ ಒಟ್ಟು ಜನಸಂಖ್ಯೆ

522.92 ಕೋಟಿ/ ವಿಶ್ವದ ಒಟ್ಟು ಉತ್ಪಾದಕ ಜನಸಂಖ್ಯೆ (15–64 ವರ್ಷದವರು)

––––––––

522.92 ಕೋಟಿ/ ವಿಶ್ವದ ಒಟ್ಟು ಉತ್ಪಾದಕ ಜನಸಂಖ್ಯೆ (15–64 ವರ್ಷದವರು)

97 ಕೋಟಿ/ ಭಾರತದ ಉತ್ಪಾದಕ ಜನಸಂಖ್ಯೆ

98 ಕೋಟಿ/ ಚೀನಾದ ಉತ್ಪಾದಕ ಜನಸಂಖ್ಯೆ

327.92 ಕೋಟಿ/ ವಿಶ್ವದ ಬೇರೆಲ್ಲಾ ದೇಶಗಳ ಉತ್ಪಾದಕ ಜನಸಂಖ್ಯೆ

–––––––––––

ಉತ್ಪಾದಕ ಜನಸಂಖ್ಯೆ 97 ಕೋಟಿ

ಭಾರತದಲ್ಲಿ ಈಗ (2023ರಲ್ಲಿ) 15ರಿಂದ 64 ವರ್ಷ ವಯಸ್ಸಿನ 97 ಕೋಟಿಯಷ್ಟು ಜನರು ಇದ್ದಾರೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. ಇದು ವಿಶ್ವದಲ್ಲೇ ಹೆಚ್ಚು. ವಿಶ್ವಸಂಸ್ಥೆಯು ಎಲ್ಲಾ ದೇಶಗಳ ಜನಸಂಖ್ಯಾ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದ್ದು 1950ರಲ್ಲಿ. ಅಲ್ಲಿಂದ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜನಸಂಖ್ಯಾ ಅಂದಾಜನ್ನು ಬಿಡುಗಡೆ ಮಾಡುತ್ತದೆ. ಆನಂತರ ಆಯಾ ನೈಜ ಜನಸಂಖ್ಯೆಯ ದತ್ತಾಂಶಗಳಿಗೆ ತಾಳೆ ಮಾಡಿ, ನೈಜ ಜನಸಂಖ್ಯೆಯ ದತ್ತಾಂಶಗಳನ್ನು ವರದಿಗೆ ಸೇರಿಸುತ್ತದೆ. ಹೀಗೆ ವಿಶ್ವಸಂಸ್ಥೆಯು ಸಿದ್ಧಪಡಿಸಿರುವ ಭಾರತದ ಜನಸಂಖ್ಯಾ ವರದಿಯಲ್ಲಿ, ‘ಭಾರತದ ಉತ್ಪಾದಕ ಜನಸಂಖ್ಯೆ’ಯ ದತ್ತಾಂಶಗಳೂ ಇವೆ. 1950ರಲ್ಲಿ ಭಾರತದಲ್ಲಿ ಈ ವಯಸ್ಸಿನ ಒಟ್ಟು 22 ಕೋಟಿ ಜನರಿದ್ದರು. 2023ರಲ್ಲಿ ಈ ಜನಸಂಖ್ಯೆಯು 97 ಕೋಟಿಗೆ ಏರಿಕೆಯಾಗಿದೆ. ಮುಂದಿನ ದಶಕಗಳಲ್ಲೂ ಈ ಸಂಖ್ಯೆ ಏರಿಕೆಯಾಗಲಿದೆ. 2050ರ ವೇಳೆಗೆ ಈ ವಯಸ್ಸಿನ ಜನರ ಸಂಖ್ಯೆ 113 ಕೋಟಿಗೆ ಏರಿಕೆಯಾಗಲಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ

ವರ್ಷ;15–65 ವರ್ಷದವರ ಜನಸಂಖ್ಯೆ

1950;22 ಕೋಟಿ

1960;26 ಕೋಟಿ

1970;31 ಕೋಟಿ

1980;38 ಕೋಟಿ

1990;50 ಕೋಟಿ

2000;64 ಕೋಟಿ

2010;78 ಕೋಟಿ

2020;94 ಕೋಟಿ

2030;104 ಕೋಟಿ

2040;110 ಕೋಟಿ

2050;113 ಕೋಟಿ

ದುಡಿಯುವ ವಯಸ್ಸಿನವರ ಪಾಲೇ ಅಧಿಕ

ವಿಶ್ವದ ಜನಸಂಖ್ಯೆಯನ್ನು ವಿವಿಧ ವಯೋಮಾನಗಳಲ್ಲಿ ವರ್ಗೀಕರಿಸಲಾಗಿದೆ. ಜನಸಂಖ್ಯಾ ಅನುಪಾತವನ್ನು ಗಮನಿಸಿದರೆ, 15–64 ವರ್ಷದ ವಯೋಮಾನದ ಜನರು ಅಧಿಕ ಪ್ರಮಾಣದಲ್ಲಿ ಇದ್ದಾರೆ. ಅನುತ್ಪಾದಕ ವರ್ಗ ಎಂದು ಕರೆಯಲಾಗುವ 14 ವರ್ಷದೊಳಗಿನವರು (ಶೇ 25) ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು (ಶೇ 10) ನಂತರದ ಸ್ಥಾನದಲ್ಲಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಈ ವಿವಿಧ ವರ್ಗದ ಜನರ ಹಂಚಿಕೆ ಭಿನ್ನವಾಗಿದೆ.

ಜಾಗತಿಕ

0–14 ವರ್ಷ;25%

15–64 ವರ್ಷ;65%

65 ವರ್ಷ ಮೇಲ್ಪಟ್ಟು;10%

ಭಾರತ

0–14 ವರ್ಷ;25%

15–64 ವರ್ಷ;68%

65 ವರ್ಷ ಮೇಲ್ಪಟ್ಟು;7%

ಚೀನಾ

0–14 ವರ್ಷ;17%

15–64 ವರ್ಷ;69%

65 ವರ್ಷ ಮೇಲ್ಪಟ್ಟು;14%

ಜಪಾನ್

0–14 ವರ್ಷ;11.1%

15–64 ವರ್ಷ;58.6%

65 ವರ್ಷ ಮೇಲ್ಪಟ್ಟು;30.3%

0–14 ವರ್ಷ ವಯೋಮಾನ:

*14 ವರ್ಷದೊಳಗಿನ ವಯೋಮಾನದವರ ಸಂಖ್ಯೆ ಜಗತ್ತಿನ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟಿದೆ

*ದುಡಿಯುವ ವಯಸ್ಸಿನ ಜನಸಂಖ್ಯೆಯ ನಂತರದ ಅತಿಹೆಚ್ಚಿನ ಜನಸಂಖ್ಯೆಯು ಈ ವಯೋಮಾನದವರದ್ದು

*ಈ ವಯೋಮಾನದವರನ್ನು ಅನುತ್ಪಾದಕ ವಲಯ ಎಂದು ಗುರುತಿಸಲಾಗುತ್ತದೆ; ಆರ್ಥಿಕ ಲೆಕ್ಕಾಚಾರದಲ್ಲಿ ಇದು ಹೊರೆ ಎನ್ನಲಾಗಿದೆ

*ಇನ್ನೂ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಹಂತದಲ್ಲಿರುವ ಇವರು ತಕ್ಷಣಕ್ಕೆ ದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗುವುದಿಲ್ಲ

*ಭಾರತದ ಜನಸಂಖ್ಯೆಯಲ್ಲೂ ಇವರ ಪ್ರಮಾಣ ಶೇ 25ರಷ್ಟಿದ್ದರೆ, ಚೀನಾದಲ್ಲಿ ಶೇ 17ರಷ್ಟು ಹಾಗೂ ಜಪಾನ್‌ನಲ್ಲಿ ಶೇ 11.1ರಷ್ಟಿದೆ

15–64 ವರ್ಷ ವಯೋಮಾನ:

* ಜಾಗತಿಕವಾಗಿ, 15 ವರ್ಷದಿಂದ 64 ವರ್ಷ ವಯೋಮಾನದ ಒಳಗಿನ ದುಡಿಯುವ ವರ್ಗದವರೇ ಎಲ್ಲ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿದ್ದಾರೆ

* ಈ ವಯೋಮಾನದ ಜನರು ಭಾರತವೂ ಸೇರಿದಂತೆ ಎಲ್ಲ ದೇಶಗಳ ಆರ್ಥಿಕತೆಯನ್ನು ಮುನ್ನಡೆಸುವ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಾರೆ

* ಈ ವಯೋಮಾನದವರು ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಚೀನಾ (ಶೇ 69) ಹಾಗೂ ಭಾರತದಲ್ಲಿ (ಶೇ 68) ಅತ್ಯಧಿಕವಾಗಿದ್ದಾರೆ

* ಒಂದು ದೇಶದಲ್ಲಿ ದುಡಿಯುವ ವರ್ಗದವರ ಸಂಖ್ಯೆ ಕಡಿಮೆಯಿದ್ದಲ್ಲಿ, ಅಲ್ಲಿ ಕಾರ್ಮಿಕರ ಲಭ್ಯತೆಯ ಕೊರತೆ, ಆರ್ಥಿಕ ಹಿನ್ನಡೆ ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ

65 ವರ್ಷ ಮೇಲ್ಪಟ್ಟವರು:

* 65 ವರ್ಷಕ್ಕಿಂತ ಮೇಲ್ಪಟ್ಟವರು ಜಾಗತಿಕ ಜನಸಂಖ್ಯೆಯಲ್ಲಿ ಶೇ 10ರಷ್ಟು ಪಾಲು ಹೊಂದಿದ್ದಾರೆ

* ಅನುತ್ಪಾದಕ ವಲಯ ಎಂದು ಗುರುತಿಸಲಾಗುವ ಈ ವಯೋಮಾನದವರ ಪ್ರಮಾಣವು ಉಳಿದೆಲ್ಲ ವಯೋಮಾನದ ಜನರಿಗೆ ಹೋಲಿಸಿದರೆ ಅತಿ ಕಡಿಮೆಯಿದೆ

* ಈ ವಯೋಮಾನದವರ ಪ್ರಮಾಣ ಭಾರತದಲ್ಲಿ ತೀರಾ (ಶೇ 7ರಷ್ಟು ಮಾತ್ರ) ಕಡಿಮೆಯಿದೆ

* 65 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣವು ಚೀನಾದಲ್ಲಿ ಭಾರತಕ್ಕಿಂತ ಒಂದು ಪಟ್ಟು (ಶೇ 14) ಹೆಚ್ಚಿದ್ದರೆ, ಇವರು ಜಪಾನ್‌ ಜನಸಂಖ್ಯೆಯ ಶೇ 30ರಷ್ಟು ಪಾಲು ಹೊಂದಿದ್ದಾರೆ

ಭಾರತೀಯರ ನಿರೀಕ್ಷಿತ ಜೀವಿತಾವಧಿ ಹೆಚ್ಚಳ

ಕಾಲದಿಂದ ಕಾಲಕ್ಕೆ ಜನರ ನಿರೀಕ್ಷಿತ ಜೀವಿತಾವಧಿಯು ಸಾಕಷ್ಟು ಸುಧಾರಿಸಿದೆ ಎಂದು ವಿಶ್ವಸಂಸ್ಥೆಯ ದತ್ತಾಂಶಗಳು ಹೇಳುತ್ತವೆ. ಆಧುನಿಕ ತಂತ್ರಜ್ಞಾನಗಳು ಬೆಳೆದಂತೆಲ್ಲಾ ಜನರ ಆಯಸ್ಸು ಹೆಚ್ಚಳವಾಗಿದೆ. ಜಾಗತಿಕವಾಗಿ, ಪುರುಷರಿಗೆ ಹೋಲಿಸಿದರೆ ಮಹಿಳೆಯ ನಿರೀಕ್ಷಿತ ಜೀವಿತಾವಧಿಯು ಎಲ್ಲ ಸಮಯದಲ್ಲೂ ಹೆಚ್ಚೇ ಇದೆ. ಈ ಪ್ರವೃತ್ತಿ ಈಗಲೂ ಮುಂದುವರಿದಿದೆ. ಜಪಾನ್‌ ದೇಶದ ಜನರು ಹೆಚ್ಚು ಆಯಸ್ಸು ಹೊಂದಿದ್ದಾರೆ. ಅವರಲ್ಲಿ ಮರಣ ಪ್ರಮಾಣ ದರ ಕಡಿಮೆಯಿದೆ. ಹೀಗಾಗಿ ದೇಶದ ಜನಸಂಖ್ಯೆಯಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ ಶೇ 30ರಷ್ಟಿದೆ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ, ಈ ವಯೋಮಾನದ ಜನರು ಜಗತ್ತಿನಲ್ಲೇ ಅಧಿಕ ಪ್ರಮಾಣದಲ್ಲಿದ್ದಾರೆ. ಜಪಾನ್‌ನ ಪುರುಷ ಸರಾಸರಿ 82 ವರ್ಷ ಬದುಕಿದರೆ, ಮಹಿಳೆಯು ಸರಾಸರಿ 88 ವರ್ಷದವರೆಗೂ ಜೀವಿಸುತ್ತಾರೆ. ಜಾಗತಿಕ ಸರಾಸರಿ ಜೀವಿತಾವಧಿಗಿಂತ ಜಪಾನ್‌ ಜನರ ಜೀವಿತಾವಧಿ ಅತ್ಯಧಿಕವಾಗಿದೆ ಎಂದು ವಿಶ್ವಸಂಸ್ಥೆಯ ದತ್ತಾಂಶಗಳು ಹೇಳುತ್ತವೆ.

ಚೀನಾದಲ್ಲೂ ಪುರುಷರು ಸರಾಸರಿ 76 ವರ್ಷ ಹಾಗೂ ಮಹಿಳೆಯರು ಸರಾಸರಿ 82 ವರ್ಷದವರೆಗೂ ಬದುಕುತ್ತಾರೆ. ಜಪಾನ್, ಚೀನಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜೀವಿತಾವಧಿ ಕಡಿಮೆಯಿದೆ. ಭಾರತದಲ್ಲಿ ಪುರುಷನೊಬ್ಬ ಸರಾಸರಿ 71 ವರ್ಷ ಆಯಸ್ಸು ಹೊಂದಿದ್ದರೆ, ಮಹಿಳೆಯು ಸರಾಸರಿ 74 ವರ್ಷ ಆಯಸ್ಸು ಹೊಂದಿದ್ದಾರೆ.

ಜನರ ಜೀವಿತಾವಧಿಯು ಭಾರತದಲ್ಲೂ ಸಾಕಷ್ಟು ಸುಧಾರಿಸಿದೆ. 2000ರಲ್ಲಿ ಪುರುಷನೊಬ್ಬನ ಸರಾಸರಿ ಆಯಸ್ಸು ಕೇವಲ 53 ವರ್ಷ ಇತ್ತು. ಆದರೆ, 2023ರ ಹೊತ್ತಿಗೆ ಈ ಅವಧಿಯು 71 ವರ್ಷಕ್ಕೆ ಜಿಗಿದಿದೆ. ಅಂದರೆ, ಈ 23 ವರ್ಷಗಳಲ್ಲಿ 18 ವರ್ಷದಷ್ಟು ಆಯಸ್ಸು ಹೆಚ್ಚಳವಾಗಿದೆ. 2000ರಲ್ಲಿ 62 ವರ್ಷ ಸರಾಸರಿ ಆಯಸ್ಸು ಹೊಂದಿದ್ದ ಮಹಿಳೆಯು 2023ರಲ್ಲಿ ಸರಾಸರಿ 74 ವರ್ಷ ಬದುಕುತ್ತಿದ್ದಾಳೆ ಎಂದು ದತ್ತಾಂಶಗಳು ಹೇಳುತ್ತವೆ. ಭಾರತದಲ್ಲಿ ಸುಮಾರು 20 ವರ್ಷಗಳ ಹಿಂದೆ ಪುರುಷ ಹಾಗೂ ಮಹಿಳೆಯ ಜೀವಿತಾವಧಿಯ ನಡುವೆ ಸುಮಾರು 10 ವರ್ಷಗಳ ಅಂತರವಿತ್ತು. ಆದರೆ, ಇದೀಗ ಅಂತರವು ಮೂರು ವರ್ಷಗಳಿಗೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಪುರುಷ ಮಹಿಳೆಯರ ಜೀವಿತಾವಧಿಯ ಹೆಚ್ಚಿರುವುದರ ಜೊತೆಗೆ, ಪುರುಷರ ಸರಾಸರಿ ಆಯಸ್ಸು ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ಮಹಿಳೆಯರ ಸರಾಸರಿ ಜೀವಿತಾವಧಿಯ ಸನಿಹಕ್ಕೆ ಬಂದಿದೆ.

ಆಧಾರ: ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಅಂದಾಜು–2022 ವರದಿ, ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯಾ ಡ್ಯಾಶ್‌ಬೋರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT