ಭಾರತ ಮತ್ತು ಅಮೆರಿಕದ ನಡುವೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಒದಗಿಸಲಿದೆ ಎಂದು ಹೇಳಲಾಗುತ್ತಿದೆಯಾದರೂ, ಅದರಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪವೂ ವ್ಯಕ್ತವಾಗಿದೆ. ಅಮೆರಿಕದಿಂದ ಆಮದು ಮಾಡಲಾಗುವ ಕೆಲವು ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಪಶುಆಹಾರಕ್ಕೆ ಬಳಸುವ ಗೋವಿನ ಜೋಳ, ಸೋಯಾಬೀನ್ ಎಣ್ಣೆಯ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಿದರೆ, ಭಾರತದ ರೈತರಿಗೆ, ಪಶು ಆಹಾರ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ರಷ್ಯಾದಿಂದ ತೈಲ ಖರೀದಿ ಸ್ಥಗಿತ, ಐದು ವರ್ಷಗಳಲ್ಲಿ ಅಮೆರಿಕದಿಂದ 50 ಸಾವಿರ ಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಟ್ರಂಪ್ ಅವರ ಒತ್ತಡಕ್ಕೆ ಮಣಿದು, ಅವರ ಷರತ್ತುಗಳಿಗೆ ಒಪ್ಪಿದಂತೆ ಕಾಣುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ