ಬೂದಿ ಮೆತ್ತಿದ, ರಕ್ತ ಮೆತ್ತಿದ ಪುಟ್ಟ ಕಂದಮ್ಮಗಳನ್ನು ಎದೆಗವಚಿಕೊಂಡ ತಂದೆ, ತಾಯಿಯರು ಗಾಜಾಪಟ್ಟಿಯ ಬೀದಿ ಬೀದಿಗಳಲ್ಲಿ, ಆಸ್ಪತ್ರೆಗಳಲ್ಲಿ ಆಕ್ರಂದಿಸುತ್ತಿದ್ದಾರೆ. ತನ್ನ ಇಷ್ಟದ ಬೊಂಬೆಯ ಜೊತೆ ಮಲಗಿದ್ದ ಮಗು ಈಗ ಹೆಣವಾಗಿದೆ. ತಾಯಿಯ ಮಡಿಲಲ್ಲಿ ಮಲಗಿದ್ದ ಕೂಸು, ತಾಯಿಯ ಜೊತೆಯಲ್ಲಿಯೇ, ಮಲಗಿದ ಹಾಗೆಯೇ ಚಿರನಿದ್ರೆಗೆ ಜಾರಿದೆ. ಬಾಂಬ್ ಬಿದ್ದ ಮನೆಗಳ ಅವಶೇಷಗಳ ಅಡಿಗಳಿಂದ ಮಕ್ಕಳನ್ನು ಎತ್ತಿ ಓಡುತ್ತಿರುವ, ಭುಜದ ಮೇಲೆ ಶಿಶುಗಳ ಹೆಣಗಳನ್ನು ಹೊತ್ತು ಕೂತಿರುವ ತಂದೆಯರು. ಬಾಂಬುಗಳ ಶಬ್ದಗಳಿಂದ ಬೆದರಿದ, ಕೈ ಕಾಲು ನಡುಗುತ್ತಿರುವ ಪುಟ್ಟ ಮಕ್ಕಳನ್ನು ಸಂತೈಸುತ್ತಿರುವ ವೈದ್ಯರು, ಪೋಷಕರು...

ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧದ ವರದಿಗಾರಿಕೆಗೆ ದುಡಿಯುತ್ತಿರುವ ಸುದ್ದಿಸಂಸ್ಥೆಗಳ ಛಾಯಾಚಿತ್ರ ಪತ್ರಕರ್ತರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಚಿತ್ರಗಳು ಮತ್ತು ವಿಡಿಯೊಗಳ ದೃಶ್ಯಗಳಿವು. ಸುದ್ದಿಸಂಸ್ಥೆಗಳು ಜಗತ್ತಿಗೆ ಹಂಚುತ್ತಿರುವ ಚಿತ್ರಗಳೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

‘ಗಾಜಾಪಟ್ಟಿಯ ಮೇಲಿನ ದಾಳಿಯ ದುಷ್ಪರಿಣಾಮಗಳಿಗೆ ಗುರಿಯಾಗುತ್ತಿರುವುದು ಏನೂ ಅರಿಯದ ಕಂದಮ್ಮಗಳು. ದಾಳಿಗೆ ಬಲಿಯಾದವರು ಒಂದೆಡೆ, ದಾಳಿಯಿಂದ ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತರಾಗುತ್ತಿರುವ ಮಕ್ಕಳು ಇನ್ನೊಂದಡೆ. ಈ ಯುದ್ಧದ ಪರಿಣಾಮವನ್ನು ಈ ಮಕ್ಕಳು ತಮ್ಮ ಬದುಕಿನುದ್ದಕ್ಕೂ ಹೊತ್ತು ನಡೆಯಬೇಕಿದೆ’. ಅಕ್ಟೋಬರ್ ಕಡೆಯ ವಾರದಲ್ಲಿ ಯುನಿಸೆಫ್ ಬಿಡುಗಡೆ ಮಾಡಿದ ವರದಿಯಲ್ಲಿರುವ ಮಾತಿದು.

ಗಾಜಾದಲ್ಲಿ 15–19 ವರ್ಷದ ಸುಮಾರು 2.5 ಲಕ್ಷ ಮಕ್ಕಳಿದ್ದಾರೆ. ಈ ಮಕ್ಕಳು ಐದು ಯುದ್ಧ ಕಂಡಿದ್ದಾರೆ. 10 ವರ್ಷದ ಸುಮಾರು 2.7 ಲಕ್ಷ ಮಕ್ಕಳು, ನಾಲ್ಕು ಯುದ್ಧಕ್ಕೆ ಸಾಕ್ಷಿಯಾಗಿದ್ದಾರೆ. 2.8 ಲಕ್ಷದಷ್ಟಿರುವ 8 ವರ್ಷದ ಮಕ್ಕಳು ಮೂರು ಯುದ್ಧಗಳನ್ನು, ಅದರ ಪರಿಣಾಮಗಳನ್ನು ಎದುರಿಸಿವೆ. 3.3 ಲಕ್ಷದಷ್ಟಿರುವ 5 ವರ್ಷದ ಮಗು ಕೂಡ ಎರಡು ಯುದ್ಧಗಳನ್ನು ಕಂಡಿದೆ. ಗಾಜಾಪಟ್ಟಿಯಲ್ಲಿರುವ ಅಂದಾಜು 15 ಲಕ್ಷ ಮಕ್ಕಳಲ್ಲಿ 11 ಲಕ್ಷಕ್ಕೂ ಹೆಚ್ಚು ಮಕ್ಕಳು ಯುದ್ಧದ ಮಧ್ಯೆಯೇ ಹುಟ್ಟಿ, ಅಲ್ಲಿಯೇ ಬೆಳೆಯುತ್ತಿವೆ. ಆದರೆ ಇಷ್ಟೂ ಯುದ್ಧದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಸಾವಿರ ಮುಟ್ಟುವುದಿಲ್ಲ. ಆದರೆ, ಈ ಬಾರಿಯ ಯುದ್ಧ ಮಕ್ಕಳನ್ನು ಗುರಿಯಾಗಿಸಿಯೇ ನಡೆಯುತ್ತಿರುವ ಯುದ್ಧದಂತೆ ಭಾಸವಾಗುತ್ತಿದೆ. ಇಸ್ರೇಲ್ನ ಬಾಂಬುಗಳು ಪ್ಯಾಲೆಸ್ಟೀನ್ ಮಕ್ಕಳ ದೇಹಗಳನ್ನು ಛಿದ್ರವಾಗಿಸಿವೆ. ಇದೊಂದೇ ಯುದ್ಧದಲ್ಲಿ ಇಸ್ರೇಲ್ನ ದಾಳಿಗೆ ಬಲಿಯಾದ ಮಕ್ಕಳ ಸಂಖ್ಯೆ 4,000 ದಾಟಿದೆ. ಇನ್ನೊಂದೆಡೆ ಹಮಾಸ್ನ ರಾಕೆಟ್ಗಳು ಇಸ್ರೇಲ್ನ 150ಕ್ಕೂ ಹೆಚ್ಚು ಮಕ್ಕಳನ್ನು ರಕ್ತದ ಮಡುವಿಗೆ ದೂಡಿವೆ.

ಮಕ್ಕಳ ಕಾಡುವ ಕತ್ತಲು, ಬಾಂಬುಗಳ ಶಬ್ದ...: ‘ರಾತ್ರಿ ವೇಲೆ ಮಕ್ಕಳ ಸಂಕಟ ಹೇಳತೀರದು. ರಾತ್ರಿ ಇಡೀ ಅಳುತ್ತವೆ. ಮಲಗಿದಲ್ಲೇ ಮೂತ್ರ ಮಾಡುತ್ತವೆ. ಅವರಿಗೆ ಮೂತ್ರ ಬಂದಿದ್ದೂ ತಿಳಿಯುತ್ತಿಲ್ಲ. ಕುರ್ಚಿಯನ್ನು ಅತ್ತಿತ್ತ ಎಳೆದಾಡಿದರೆ ಸಾಕು ಮಕ್ಕಳು ಬೆದರುತ್ತವೆ. ಯಾರೂ ದೊಡ್ಡ ದನಿಯಲ್ಲಿ ಮಾತನಾಡುವಂತಿಲ್ಲ. ಶಬ್ದ ಅವರನ್ನು ಆತಂಕಕ್ಕೆ ತಳ್ಳುತ್ತದೆ’ ಎನ್ನುತ್ತಾರೆ ಗಾಜಾದ ಆರು ಮಕ್ಕಳ ತಾಯಿ ತಹ್ರೀರ್.

‘ಪಕ್ಕದ ಕಟ್ಟಡಕ್ಕೆ ಬಾಂಬು ಬಿದ್ದ ಶಬ್ದ ಕೇಳಿದರೆ, ಸಾಕು ಮಕ್ಕಳು ಚೀರಾಡುತ್ತವೆ. ಯಾವಾಗಲು ಹೆದರಿಕೊಂಡೇ ಇರುತ್ತವೆ. ಎನೂ ಆಗುವುದಿಲ್ಲ. ಇದು ಪಟಾಕಿಯಷ್ಟೇ ಎನ್ನುತ್ತಾ ಸಣ್ಣ ಮಕ್ಕಳನ್ನು ಸಂತೈಸುತ್ತಿದ್ದೇವೆ. ಕಟ್ಟಡಗಳ ಅವಶೇಷಗಳ ಮಧ್ಯೆ ತಮ್ಮವರಿಗಾಗಿ ಕೂಗಾಡುವ, ಹುಡುಕಾಡುವ ಮಹಿಳೆಯರನ್ನು ನೋಡುತ್ತಾ ಕುಳಿತು ಬಿಡುತ್ತಾರೆ. ಅವರ ಮುಖದಲ್ಲಿ ಯಾವ ಭಾವವೂ ಹೊಮ್ಮುವುದಿಲ್ಲ’ ಎನ್ನುತ್ತಾರೆ ಖಾನ್ ಯೂನಿಸ್ನ ಇಬ್ರಾಹಿಂ.

‘ಕುಡಿಯಲು ನೀರಿಲ್ಲ. ಅಡುಗೆಗೂ ನೀರಿಲ್ಲ. ಸಮುದ್ರದ ಉಪ್ಪು ನೀರನ್ನೇ ಕುದಿಸಿ ಕೋಡುತ್ತೇನೆ. ನನ್ನ ನಾಲ್ಕು ವರ್ಷದ, ಏಳು ವರ್ಷದ ಮಕ್ಕಳು ಕುಡಿಯುವ ನೀರಿಗಾಗಿ ನನ್ನ ಬಳಿ ಗೋಗರೆಯುತ್ತವೆ. ನನ್ನ ಎದೆ ಒಡೆದೇ ಹೋಗುತ್ತದೆ. ಎಲ್ಲಿಂದ ನೀರು ತರುವುದು? 7 ವರ್ಷದ ಮಗಳಂತೂ ರಚ್ಚೆ ಹಿಡಿದು ಕೂರುತ್ತಾಳೆ; ಕೂದಲು ಕೆದರಿಕೊಂಡು, ರಕ್ತ ಬರುವವರೆಗೆ ಕಾಲುಗಳನ್ನು ನೆಲೆದ ಮೇಲೆ ಉಜ್ಜಿಕೊಳ್ಳುತ್ತಾ...’ ಎಂದು ಕಣ್ಣೀರು ಹಾಕುತ್ತಾರೆ ನೆಸ್ಮಾ. ‘ಮಕ್ಕಳ ಮೇಲಿನ ಯುದ್ಧ ನಿಲ್ಲಿಸಿ’ ಎನ್ನುತ್ತಿದ್ದಾರೆ ಗಾಜಾದ ಪೋಷಕರು.

ಮಾನಸಿಕವಾಗಿ ಕುಗ್ಗಿರುವ ಮಕ್ಕಳು: ‘ನನ್ನ ಮನೆಗೆ ಏನಾಯಿತು ಎಂದು ನನಗೆ ತಿಳಿಯದು. ಬಹುಶಃ ನನ್ನ ಪುಸ್ತಕಗಳು ನನ್ನ ಆಟಿಕೆಗಳು ಹಾಳಾಗಿರಬಹುದು’... ‘ನನಗೆ ಆಟವಾಡಬೇಕು. ಹೆದರಿಕೆ ಇಲ್ಲದೆಯೇ ಆಟವಾಡಬೇಕು. ನಾನು ವಾಪಾಸು ಮನೆಗೆ ಹೋಗಬೇಕು’... ಗಾಜಾಪಟ್ಟಿಯಲ್ಲಿನ ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿ ಇರುವ ಪುಟ್ಟ ಮಕ್ಕಳ ಬೇಡಿಕೆ ಇದು.

ಶಿಬಿರಗಳಲ್ಲಿ ಜಾಗವಿಲ್ಲದಷ್ಟು ನಿರಾಶ್ರಿತರು ತುಂಬಿದ್ದಾರೆ. ಕೆಲವೆಡೆಯಂತೂ ಪಾಳಿ ಮೇಲೆ ಜನರು ಮಲಗುತ್ತಾರೆ. ನೀರಿಲ್ಲದೆ ಶೌಚಾಲಯಗಳ ಸ್ಥಿತಿಗಳನ್ನು ಊಹಿಸಿಕೊಳ್ಳುವಂತೆಯೂ ಇಲ್ಲ. ಯಾವ ಜಾಗವು ಸುರಕ್ಷಿತವಲ್ಲ. ಅಡಗಿಕೊಳ್ಳಲು ಜಾಗವಿಲ್ಲ. ಆಹಾರ, ಕುಡಿಯುವ ನೀರೂ ಇಲ್ಲ. ಈ ಎಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ.

‘ಸ್ನಾಯು ಸೆಳೆತದಿಂದಾಗಿ ಮಕ್ಕಳು ತೀವ್ರವಾಗಿ ನಡುಗುತ್ತಿದ್ದಾರೆ. ನೀರಿಲ್ಲದೆ ನಿರ್ಜಲೀಕರಣದಿಂದ ಮಕ್ಕಳು ಬಳಲುತ್ತಿದ್ದಾರೆ. ಆಹಾರವಿಲ್ಲದೆ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಕ್ರೋಧದ ಸ್ವಭಾವ ಬೆಳೆದಿದೆ, ಯಾವಾಗಲೂ ಬೆದರಿಕೊಂಡಂತಿರುತ್ತಾರೆ, ಪೋಷಕರನ್ನು ಒಂದು ಕ್ಷಣವೂ ಬಿಟ್ಟು ಇರುವುದಿಲ್ಲ. ಯುದ್ಧದ ನಂತರ ಆಘಾತದಿಂದ ಉಂಟಾದ ಒತ್ತಡದ ಕಾಯಿಲೆಯು ಗಾಜಾದ ಮಕ್ಕಳನ್ನು ಅವರ ಜೀವಿತಾವಧಿಯವರೆಗೂ ಕಾಡಲಿದೆ. ಪದೇ ಪದೇ ನಡೆಯುವ ಯುದ್ಧವು ಅವರನ್ನು ಹೈರಾಣಾಗಿಸುತ್ತದೆ’ ಎನ್ನುತ್ತಾರೆ ಗಾಜಾದ ಮನಃಶಾಸ್ತ್ರಜ್ಞ ಫಾದೆಲ್ ಅಬು ಹೀನ್.

‘ನನಗೆ ನನ್ನ ಕಾಲುಗಳೇ ಬೇಕು’

‘ನನಗೆ ಈ ಪ್ಲಾಸ್ಟಿಕ್ ಕಾಲುಗಳು ಬೇಡ. ನನಗೆ ನನ್ನ ಕಾಲುಗಳೇ ಬೇಕು. ನನಗೆ ನನ್ನ ಕಾಲುಗಳನ್ನೇ ಹಾಕಿ’.

ದಕ್ಷಿಣ ಗಾಜಾಪಟ್ಟಿಯ ಖಾನ್ ಯೂನಿಸ್ನ ನಸ್ಸೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಲಯಾನಾ ಅಲ್–ಬಜ್ ಪ್ರತಿದಿನ ತನ್ನನ್ನು ನೋಡಲು ಬರುವ ವೈದ್ಯರಿಗೆ ಹೇಳುವ ಮಾತಿದು.

ಅಕ್ಟೋಬರ್ ಕೊನೆಯ ವಾರದಲ್ಲಿ ಖಾನ್ ಯೂನಿಸ್ ಬಳಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಲಯಾನಾ ತೀವ್ರವಾಗಿ ಗಾಯಗೊಂಡಿದ್ದಳು. ಇಸ್ರೇಲ್ ನಡೆಸಿದ ವಾಯುದಾಳಿಗೆ ಲಯಾನಾಳ ಮನೆ ನೆಲಕಚ್ಚಿತ್ತು. ಆಕೆಯ ಇಬ್ಬರು ಸೋದರರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದರು. ತಾಯಿಗೂ ಹೆಚ್ಚು ಗಾಯಗಳಾಗಿರಲಿಲ್ಲ. ಆದರೆ, ಗೋಡೆಯೊಂದು ಲಯಾನಾಳ ಕಾಲುಗಳ ಮೇಲೆ ಬಿದ್ದಿತ್ತು. ಅವಳ ಕಾಲು ನುಜ್ಜುಗುಜ್ಜಾಗಿದ್ದವು. ಅವಳ ಜೀವ ಉಳಿಸಲು ಕಾಲುಗಳನ್ನು ಕತ್ತರಿಸದೇ ಬೇರೆ ದಾರಿ ಇರಲಿಲ್ಲ.

‘ನನ್ನ ಗೆಳೆಯರೆಲ್ಲಾ ಅವರದ್ದೇ ಕಾಲುಗಳಲ್ಲಿ ನಡೆದುಕೊಂಡು ಶಾಲೆಗೆ ಬರುತ್ತಾರೆ. ನಾನು ಈ ಪ್ಲಾಸ್ಟಿಕ್ ಕಾಲು ಹಾಕಿಕೊಂಡು ಅವರ ಜೊತೆ ಹೇಗೆ ಹೋಗುವುದು?’ ಲಯಾನಾ ಕೇಳುವ ಪ್ರಶ್ನೆ ಇದು.

ಭೀಕರ ಚಿತ್ರಗಳು

* ‘ಈ ಜಗತ್ತು ಈ ಮಕ್ಕಳನ್ನು ಮರೆಯಬಾರದು. ಇಸ್ರೇಲ್ನಿಂದ ಹತ್ಯೆಯಾದ ಈ ಮಕ್ಕಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಗಾಜಾದಲ್ಲಿ ಎಷ್ಟು ಮಕ್ಕಳು ಸತ್ತರು ಎಂಬ ಸಂಖ್ಯೆಯನ್ನಲ್ಲ, ಮಕ್ಕಳ ಹೆಸರನ್ನು ನೆನಪಿಡಬೇಕು. ಅವರ ಕಥೆಗಳನ್ನು, ಅವರ ಕನಸುಗಳನ್ನು ಈ ಜಗತ್ತು ನೆನಪಿಟ್ಟುಕೊಳ್ಳಬೇಕು’ ಎನ್ನುತ್ತಾ, ಸಾರಾ ತನ್ನ ಸತ್ತ ಮಗುವಿನ ದೇಹದ ಮೇಲೆ ಅದರ ಹೆಸರುಗಳನ್ನು ಅಚ್ಚೆ ಹಾಕಿಸಿದಳು. ಪ್ಯಾಲೆಸ್ಟೀನ್ನ ನೂರಾರು ಪೋಷಕರು ಹೀಗೆ ತಮ್ಮ ಮೃತ ಮಕ್ಕಳ ದೇಹಗಳ ಮೇಲೆ ಹೆಸರುಗಳನ್ನು ಅಚ್ಚೆ ಹಾಕಿಸುತ್ತಿದ್ದಾರೆ

* ‘ಹಮಾಸ್ನ ಅ.7ರ ದಾಳಿಯಲ್ಲಿ ನನ್ನ ಪೋಷಕರನ್ನು ಕಳೆದುಕೊಂಡೆ. 7.35ಕ್ಕೆ ಅವರಿಗೆ ಕರೆ ಮಾಡಿದ್ದೆ. 7.45ರ ಹೊತ್ತಿಗೆ ಕರೆ ಮಾಡುವುದರಲ್ಲಿ ಅವರು ಹತ್ಯೆಯಾಗಿ ಹೋಗಿದ್ದರು. ಶಾಂತಿ ನೆಲೆಸಲು ಹೋರಾಡುವ ಕಾರ್ಯಕರ್ತನಾಗಬೇಕು ಎಂದು ಆಗ ನಿರ್ಧರಿಸಿದೆ. ಪ್ರತೀಕಾರ ನನ್ನ ಪೋಷಕರನ್ನು ವಾಪಸು ತಂದುಕೊಡುವುದಿಲ್ಲ’ ಎನ್ನುತ್ತಾರೆ ಇಸ್ರೇಲ್ನ ಮೋಜ್ ಇನನ್

* ಮಕ್ಕಳನ್ನು ಗುರಿ ಮಾಡಿ ಯುದ್ಧ ಮಾಡಬಾರದು ಎಂಬ ಯುದ್ಧ ನಿಯಮವೇನೊ ಇದೆ. ಆದರೆ, ಇಸ್ರೇಲ್–ಹಮಾಸ್ ಯುದ್ಧದಲ್ಲಿ ಅದು ಪಾಲನೆಯಾಗುತ್ತಿಲ್ಲ. 1949ರ ಜಿನೀವಾ ಒಪ್ಪಂದವನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ. ಆದರೆ, ಆಕ್ರಮಿತ ಪ್ರದೇಶದ ನಾಗರಿಕ ರಕ್ಷಣೆಯ ಕುರಿತು ಇರುವ ನಾಲ್ಕನೇ ಜಿನೀವಾ ಸಮಾವೇಶದ ಒಪ್ಪಂದಕ್ಕೆ ಇಸ್ರೇಲ್ ಒಪ್ಪಿಗೆ ನೀಡಲಿಲ್ಲ. ಯಾಕೆಂದರೆ, ಪ್ಯಾಲೆಸ್ಟೀನ್ ಅನ್ನು ‘ಆಕ್ರಮಿತ ಪ್ರದೇಶ’ ಎಂದು ಇಸ್ರೇಲ್ ಪರಿಗಣಿಸಿಯೇ ಇಲ್ಲ. ಇದರ ಅಡಿಯಲ್ಲಿ ಮಕ್ಕಳಿಗೆ ಇರುವ ರಕ್ಷಣೆಯನ್ನೂ ಇಸ್ರೇಲ್ ಪಾಲಿಸುತ್ತಿಲ್ಲ.

ಆಧಾರ: ವಿಶ್ವಸಂಸ್ಥೆ ವರದಿಗಳು, ಯುನಿಸೆಫ್ ವರದಿಗಳು, ಎಎಫ್ಪಿ, ರಾಯಿಟರ್ಸ್, ಅಲ್ಜಜೀರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.