ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಉಳಿವಿಗಾಗಿ ಹಿಮನಾಡಿನ ಜನರ ಹೋರಾಟ

Last Updated 15 ಏಪ್ರಿಲ್ 2023, 0:45 IST
ಅಕ್ಷರ ಗಾತ್ರ

ಲಡಾಖ್‌: ಎಲ್ಲವೂ ಸರಿ ಇಲ್ಲ

ಬಾಲಿವುಡ್‌ ಸಿನಿಮಾ ‘3 ಈಡಿಯಟ್ಸ್‌’ನ ಪುನ್ಸುಕ್‌ ವಾಂಗ್ಡು ಪಾತ್ರಕ್ಕೆ ಸ್ಫೂರ್ತಿ ಎನ್ನಲಾದ ಲಡಾಖ್‌ನ ಶಿಕ್ಷಣ ತಜ್ಞ ‘ಸೊನಮ್ ವಾಂಗ್ಚುಕ್‌’ ಇದೇ ಜನವರಿಯಲ್ಲಿ ‘ಲಡಾಖ್‌ ಅನ್ನು ರಕ್ಷಿಸಿ’ ಎಂದು ಐದು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಒಬ್ಬರು ಆರಂಭಿಸಿದ ಉಪವಾಸವು, ನಂತರದ ದಿನಗಳಲ್ಲಿ ಒಂದು ಚಳವಳಿಯ ರೂಪ ಪಡೆಯಿತು. ‘ಲಡಾಖ್‌ ಅನ್ನು ರಕ್ಷಿಸಿ’ ಎಂದು ಸೊನಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ ವಿಡಿಯೊ ಸಂದೇಶವು, ಈಗ ‘ಆಲ್‌ ಇಸ್‌ ನಾಟ್‌ ವೆಲ್‌’ (ಎಲ್ಲವೂ ಸರಿಯಿಲ್ಲ) ಎಂಬ ಚಳವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಾಕಿತ್ತು. ಲಡಾಖ್‌ ರಕ್ಷಣೆಗೆ ನೀಡಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸುತ್ತಿಲ್ಲ ಎಂಬುದು ಚಳವಳಿಯಲ್ಲಿ ಭಾಗಿಯಾಗಿರುವವರ ಆರೋಪ. ಚುನಾಯಿತ ಸರ್ಕಾರ ಇಲ್ಲದೇ ಇರುವುದು ಮತ್ತು ಆಡಳಿತದಲ್ಲಿ ಜನರ ಪ್ರಾತಿನಿಧ್ಯ ಇಲ್ಲದೇ ಇರುವುದರಿಂದ ಜನವಿರೋಧಿ ನೀತಿಗಳು ಅನುಷ್ಠಾನಕ್ಕೆ ಬರುತ್ತಿವೆ ಎಂಬುದು ಇಲ್ಲಿನ ಜನರ ಕಳವಳ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿ ಲಡಾಕ್‌ ಇದ್ದಾಗ ಅದಕ್ಕೆ ಸಂವಿಧಾನದ 370ನೇ ವಿಧಿಯ ಅಡಿ ರಕ್ಷಣೆ ಮತ್ತು ವಿಶೇಷ ಸ್ಥಾನವಿತ್ತು. ಅನ್ಯರಾಜ್ಯದವರು ಅಲ್ಲಿ ಭೂಮಿ ಖರೀದಿ, ಉದ್ದಿಮೆ ಆರಂಭಿಸುವುದಕ್ಕೆ ಅವಕಾಶವಿರಲಿಲ್ಲ. ಆದರೆ, 2019ರ ಆಗಸ್ಟ್ 5ರಂದು ಈ ವಿಶೇಷ ಸ್ಥಾನವನ್ನು ರದ್ದುಪಡಿಸಲಾಯಿತು. ಜಮ್ಮು–ಕಾಶ್ಮೀರದ ರಾಜ್ಯ ಸ್ಥಾನವನ್ನು ರದ್ದುಪಡಿಸಲಾಯಿತು. ಲಡಾಖ್‌ ಅನ್ನು ಒಂದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಯಿತು. ಆನಂತರ ಅಗತ್ಯ ಕಾನೂನುಗಳಿಗೆ ಬದಲಾವಣೆ ತಂದು, ಹೊರ ರಾಜ್ಯದವರು ಲಡಾಖ್‌ನಲ್ಲಿ ಬಂಡವಾಳ ಹೂಡಲು ಮತ್ತು ಉದ್ದಿಮೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಲಾಯಿತು. ಹೊರಗಿನವರು ಬಂಡವಾಳ ಹೂಡಿ, ಉದ್ದಿಮೆ ಆರಂಭಿಸುತ್ತಿರುವುದೇ ಈಗ ಲಡಾಖ್‌ ಜನರ ಮತ್ತು ಸರ್ಕಾರದ ನಡುವಣ ಸಂಘರ್ಷಕ್ಕೆ ಕಾರಣವಾಗಿದೆ. ‘ಲಡಾಖ್‌ ರಕ್ಷಿಸಿ’ ಚಳವಳಿಯ ಕೇಂದ್ರಬಿಂದುವೂ ಇದೇ ಆಗಿದೆ.

ಸೊನಮ್ ತಮ್ಮ ವಿಡಿಯೊ ಸಂದೇಶದಲ್ಲಿ ಇದೇ ವಿಷಯಗಳನ್ನು ಪ್ರಸ್ತಾಪಿಸಿದ್ದರು. ‘ಲಡಾಖ್‌ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ವಾರ್ಷಿಕ 4 ಇಂಚಿಗಿಂತಲೂ ಕಡಿಮೆ ಮಳೆಯಾಗುವ ಈ ಪ್ರದೇಶದಲ್ಲಿ, ಕುಡಿಯುವ ಮತ್ತು ದಿನಬಳಕೆಯ ನೀರಿಗಾಗಿ ಜನರು ಹಿಮನದಿಗಳನ್ನೇ ಆಶ್ರಯಿಸಿದ್ದಾರೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ದೈನಂದಿನ ಬಳಕೆಗೆ ಐದು ಲೀಟರ್‌ಗಿಂತಲೂ ಕಡಿಮೆ ನೀರನ್ನು ಬಳಸುತ್ತಾನೆ. ನೀರಿನ ಕೊರತೆ ಯಥೇಚ್ಛವಾಗಿರುವ ಇಂತಹ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಆರಂಭಿಸಿದರೆ, ಅವುಗಳಿಗೆ ನೀರನ್ನು ಒದಗಿಸುವುದು ಹೇಗೆ? ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಹೊರಗಿನಿಂದ ಬರುವ ಜನರಿಗೆ ನೀರನ್ನು ಒದಗಿಸುವುದು ಹೇಗೆ’ ಎಂದು ಪ್ರಧಾನಿ ಅವರನ್ನು ಸೊನಮ್ ಪ್ರಶ್ನಿಸಿದ್ದರು.

‘ಇಲ್ಲಿ ಖನಿಜ ಸಂಪತ್ತು ಯಥೇಚ್ಛವಾಗಿದೆ. ಹೀಗಾಗಿ ಅವುಗಳ ಗಣಿಗಾರಿಕೆ ನಡೆಸಲು ಉದ್ಯಮಿಗಳು ಮತ್ತು ಉದ್ದಿಮೆ ಗುಂಪುಗಳು ಕಾದಿವೆ. ಈವರೆಗೆ ಅಂತಹ ಉದ್ದಿಮೆಗಳು ಇಲ್ಲಿ ಆರಂಭವಾಗಿಲ್ಲವಾದರೂ, ಅವು ಆರಂಭವಾಗುವ ದಿನ ದೂರವಿಲ್ಲ. ಉದ್ಯಮಿಗಳು ಮತ್ತು ಉದ್ದಿಮೆ ಗುಂಪಿನ ಪ್ರಭಾವಕ್ಕೆ ಕೇಂದ್ರಾಡಳಿತದ ತಳಮಟ್ಟದ ಅಧಿಕಾರಿಗಳು ಒಳಗಾದಂತೆ ಕಾಣುತ್ತಿದೆ’ ಎಂದು ಅವರು ವಿಡಿಯೊ ಸಂದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಈ ಉಪವಾಸ ಸತ್ಯಾಗ್ರಹವೇ ಚಳವಳಿಯು ತೀವ್ರತೆ ಪಡೆಯಲು ಕಾರಣವಾಯಿತು. ಜಗತ್ತಿನ ಅತ್ಯಂತ ಎತ್ತರದ ಮೋಟಾರು ರಸ್ತೆಯಾದ ಕಾರ್ದುಂಗ್‌ಲಾ ಪಾಸ್‌ನಲ್ಲಿ ಉಪವಾಸ ನಡೆಸಲು ಸೊನಮ್‌ ಸಿದ್ಧತೆ ನಡೆಸಿದ್ದರು. ಆದರೆ ಪೊಲೀಸರು ಅವರನ್ನು ತಡೆದು ತಮ್ಮ ಶಿಕ್ಷಣ ಸಂಸ್ಥೆಯಲ್ಲೇ ಉಪವಾಸ ಸತ್ಯಾಗ್ರಹ ಮಾಡುವಂತೆ ನಿರ್ಬಂಧ ಹೇರಿದರು. ತಮ್ಮ ಹೋರಾಟಕ್ಕೆ ಜತೆಯಾಗುವಂತೆ ಸೊನಮ್ ಟ್ವೀಟ್‌ನಲ್ಲಿ ಕೋರಿದ್ದರು. ಆನಂತರವೇ ಲಡಾಖ್‌ನ ಜನರು ಮೈಕೊರೆಯುವ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶದಲ್ಲಿ ಬೀದಿ–ಬೀದಿಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಐದನೇ ದಿನದ ಉಪವಾಸದ ವೇಳೆಗೆ ಹೀಗೆ ಚಳವಳಿಗೆ ಜತೆಯಾದವರ ಸಂಖ್ಯೆ ಸಾವಿರವನ್ನು ಮೀರಿತ್ತು. ಲಡಾಖ್‌ ಮಾತ್ರವಲ್ಲದೆ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಸೇರಿ ದೇಶದ ಹಲವೆಡೆ ನೂರಾರು ಮಂದಿ ಚಳವಳಿಗೆ ಜತೆಯಾದರು. ಈಗಲೂ ದೇಶದ ಬೇರೆಡೆಯಿಂದ ಲಡಾಖ್‌ಗೆ ಬರುವ ಪ್ರವಾಸಿಗರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಹೋಗುತ್ತಿದ್ದಾರೆ.

ಚಾರ್‌ಧಾಮ್ ತೀರ್ಥಕ್ಷೇತ್ರಗಳಲ್ಲಿ ಒಂದಾದ ಬದರೀನಾಥದ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ ಜೋಶಿಮಠ ಅಕ್ಷರಶಃ ಪ್ರಪಾತದ ಅಂಚಿಗೆ ಬಂದು ಕುಳಿತಿದೆ. ಧೌಲಿಗಂಗಾ ಮತ್ತು ಅಲಕನಂದಾ ನದಿಗಳ ಸಂಗಮದ ಬಳಿಯ ವಿಷ್ಣುಗಢಕ್ಕೆ ಆಗ್ನೇಯ ದಿಕ್ಕಿನಲ್ಲಿರುವ ಈ ಸಣ್ಣ ಊರು, ಬದರೀನಾಥ ಯಾತ್ರಾರ್ಥಿಗಳಿಗೆ ವಸತಿ ಕಲ್ಪಿಸುವ ಪ್ರಮುಖ ಸ್ಥಳವೂ ಆಗಿದೆ. ಜೋಶಿಮಠದಿಂದ ಸ್ವಲ್ಪ ಎತ್ತರದಲ್ಲಿರುವ ಔಲಿ ಸ್ಕೀಯಿಂಗ್‌ಗೆ ಹೆಸರುವಾಸಿ. ಉತ್ತರಕ್ಕೆ ಧೌಲಿಗಂಗಾ ಮತ್ತು ಪಶ್ಚಿಮಕ್ಕೆ ಅಲಕನಂದಾ ನದಿ ಕಣಿವೆಯ ಇಳಿಜಾರಿನಲ್ಲಿ ಈ ಪಟ್ಟಣ ಇದೆ. ಇಲ್ಲಿ ವಿಪರೀತ ಪ್ರಮಾಣದ ಕಟ್ಟಡಗಳ ನಿರ್ಮಾಣ ಮಾಡಿರುವ ಕಾರಣ, ಅವುಗಳ ಒತ್ತಡ ತಡೆಯಲಾರದೆ ನೆಲ ಕುಸಿಯುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸರ್ಕಾರ ಕೈಗೊಂಡಿರುವ ಜಲವಿದ್ಯುತ್ ಕಾಮಗಾರಿಯೇ ಜೋಶಿಮಠ ಕುಸಿಯಲು ಕಾರಣ ಎಂಬುದು ಸ್ಥಳೀಯರ ಆರೋಪ.

ಜೋಶಿಮಠದಿಂದ ಈಶಾನ್ಯ ದಿಕ್ಕಿನಲ್ಲಿರುವ ತಪೋವನದಲ್ಲಿ ಧೌಲಿಗಂಗಾ ನದಿಗೆ ಬೃಹತ್ ಅಣೆಕಟ್ಟೆಯನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ. ಅಲ್ಲಿ ಸಂಗ್ರಹಿಸುವ ನೀರನ್ನು, ಜೋಶಿಮಠದ ಅಡಿಯಲ್ಲಿ ಸಾಗುವ ಸುರಂಗದ ಮೂಲಕ ವಿಷ್ಣುಗಢ ಜಲವಿದ್ಯುತ್ ಘಟಕಕ್ಕೆ ಹರಿಸಲಾಗುವುದು. ಈ ಸುರಂಗ ಕೊರೆಯುವ ಕೆಲಸ ಆರಂಭಿಸಿದ ನಂತರ ಜೋಶಿಮಠ ಕುಸಿಯುತ್ತಿದೆ. 2022ರ ಅಕ್ಟೋಬರ್‌ನಿಂದ 2023ರ ಜನವರಿವರೆಗೆ 500ಕ್ಕೂ ಹೆಚ್ಚು ಮನೆಗಳು ಏಳೆಂಟು ಇಂಚಿನಷ್ಟು ಕೆಳಕ್ಕೆ ಕುಸಿದಿವೆ. ಆ ಮನೆಗಳಲ್ಲಿ ಇದ್ದವರನ್ನು ಮತ್ತು ಕುಸಿಯುವ ಅಪಾಯದ ಪ್ರದೇಶಗಳಲ್ಲಿ ಇದ್ದವರನ್ನು ಉತ್ತರಾಖಂಡ ಸರ್ಕಾರ ತೆರವು ಮಾಡಿದೆ. ಪಟ್ಟಣದ ಹೊರಭಾಗದಲ್ಲಿ ಶಿಬಿರಗಳನ್ನು ತೆರೆದು, ಆ ಜನರಿಗೆ ವಸತಿ ಕಲ್ಪಿಸಲಾಗಿದೆ. ಇದನ್ನು ಬಿಟ್ಟರೆ ಯಾವುದೇ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಜತೆಗೆ ಜೋಶಿಮಠದಲ್ಲಿನ ಪರಿಸ್ಥಿತಿಯನ್ನು ದೇಶದ ಎಂಟು ಅತ್ಯುನ್ನತ ವೈಜ್ಞಾನಿಕ ಸಂಸ್ಥೆಗಳು ಪರಿಶೀಲಿಸಿವೆ. ಅಧ್ಯಯನ ನಡೆಸಿ ಎರಡು ತಿಂಗಳು ಕಳೆದರೂ ಈವರೆಗೆ ಅಧ್ಯಯನ ವರದಿ ಸಲ್ಲಿಕೆಯಾಗಿಲ್ಲ.

ಸರ್ಕಾರದ ಈ ವಿಳಂಬ ನೀತಿಯ ವಿರುದ್ಧ ಜೋಶಿಮಠ ನಿವಾಸಿಗಳು ಜನವರಿ 2ರಿಂದ ಸತ್ಯಾಗ್ರಹ ಆರಂಭಿಸಿದ್ದರು. ಮನೆ ಕಳೆದುಕೊಂಡವರಿಗೆ ಬೇರೆಡೆ ಶಾಶ್ವತ ನೆಲೆ ಕಲ್ಪಿಸಬೇಕು ಮತ್ತು ತಪೋವನ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಯನ್ನು ರದ್ದುಪಡಿಸಬೇಕು ಎಂಬುದು ಈ ಹೋರಾಟಗಾರರ ಎರಡು ಪ್ರಮುಖ ಬೇಡಿಕೆ. ‘ಅಣೆಕಟ್ಟೆ ಮತ್ತು ಜಲವಿದ್ಯುತ್ ಯೋಜನೆ (ಎನ್‌ಟಿಪಿಸಿ) ಕಾಮಗಾರಿಯಿಂದ ಯಾವುದೇ ತೊಂದರೆಯಾಗಿಲ್ಲ. ಜನರು ಹೆಚ್ಚು ಕಟ್ಟಡಗಳನ್ನು ನಿರ್ಮಿಸಿದ್ದಕ್ಕೇ ಜೋಶಿಮಠದ ನೆಲ ಕುಸಿಯುತ್ತಿದೆ’ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಹೇಳುತ್ತಿವೆ. ಇದನ್ನು ಖಂಡಿಸಿ ಸ್ಥಳೀಯ ಹೋರಾಟಗಾರರು, ಬದರೀನಾಥದ ರಸ್ತೆಯನ್ನು ಬಂದ್‌ ಮಾಡುವ ಬೆದರಿಕೆ ಹಾಕಿದ್ದರು. ನಂತರದಲ್ಲಿ ಅದನ್ನು ಕೈಬಿಟ್ಟರು. ‘ಜೋಶಿಮಠ ಉಳಿಸಲು ಏಪ್ರಿಲ್‌ 27ರ ಒಳಗೆ ಒಂದು ನಿರ್ಧಾರಕ್ಕೆ ಬನ್ನಿ. ಇಲ್ಲವೇ ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಗಣಿಗಾರಿಕೆಯ ತೂಗುಗತ್ತಿ

‘ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಕಲ್ಲು ಮತ್ತು ಖನಿಜ ಗಣಿಗಾರಿಕೆಗೆ ವಿಫುಲ ಅವಕಾಶಗಳಿವೆ’– ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‌ಎಂಇ) ಅಭಿವೃದ್ಧಿ ಸಂಸ್ಥೆಯು ಸಿದ್ಧಪಡಿಸಿರುವ ‘ಲೆಹ್‌ ಜಿಲ್ಲೆಯಲ್ಲಿನ ಕೈಗಾರಿಕಾ ಸ್ಥಿತಿಗತಿಯ ಕಿರುಚಿತ್ರಣ’ ವರದಿಯಲ್ಲಿನ ಉಲ್ಲೇಖವಿದು.

ಲಡಾಖ್‌ ಕೇಂದ್ರಾಡಳಿತ ಪ್ರದೇಶವಾದ ನಂತರ, ಅಲ್ಲಿನ ಲೆಹ್‌ ಮತ್ತು ಕಾರ್ಗಿಲ್‌ ಜಿಲ್ಲೆಗಳಲ್ಲಿ ಹೊರಗಿನಿಂದ ಬಂಡವಾಳ ಹೂಡಿಕೆ ಮಾಡಲು ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಪ್ರದೇಶಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಕಾರ್ಯಸಾಧ್ಯತಾ ವರದಿಯನ್ನು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿತ್ತು. ಈ ಪ್ರದೇಶದಲ್ಲಿ ಕರಕುಶಲ ವಸ್ತುಗಳು ಮತ್ತು ಜವಳಿಗೆ ಸಂಬಂಧಿಸಿದ ಸಣ್ಣ ಕೈಗಾರಿಕೆಗಳು ಮಾತ್ರ ಇವೆ. ಉಳಿದಂತೆ ಸೇವಾ ವಲಯದ ಅಭಿವೃದ್ಧಿಗೆ ಅವಕಾಶಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ‘ಇಲ್ಲಿ ಕೈಗಾರಿಕೆ ನಡೆಸಲು ವಿದ್ಯುತ್ ಪೂರೈಕೆಯ ಕೊರತೆ, ಕೌಶಲ ಹೊಂದಿರುವ ಕಾರ್ಮಿಕರ ಕೊರತೆ, ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆಯ ಕೊರತೆ, ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಪೂರೈಕೆಯ ಕೊರತೆ ಹಾಗೂ ವಿಪರೀತ ಎನ್ನುವಷ್ಟು ಸಾಗಣೆ ವೆಚ್ಚದ ಹೊರೆಯ ಸಮಸ್ಯೆಗಳಿವೆ’ ಎಂದು ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.

ಆದರೆ, ‘ಲಡಾಖ್‌ ಪ್ರದೇಶದಲ್ಲಿ ಗ್ರಾನೇಟ್‌, ಚಿನ್ನ, ಆರ್ಸೆನಿಕ್‌, ಕೊಬಾಲ್ಟ್‌, ಜಿಪ್ಸಂ, ಸುಣ್ಣದಕಲ್ಲು, ನಿಕ್ಕಲ್, ಯುರೇನಿಯಂ ಮತ್ತು ಇನ್ನೂ ಅನೇಕ ಸ್ವರೂಪದ ಖನಿಜ ಸಂಪತ್ತು ಹೇರಳವಾಗಿದೆ. ಆದರೆ, ಅವುಗಳನ್ನು ಇನ್ನಷ್ಟೇ ಹೊರತೆಗೆಯಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖನಿಜ ನಿಕ್ಷೇಪಗಳ ಲಭ್ಯತೆ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಸರ್ವೇಕ್ಷಣೆ ಕೆಲಸ ನಡೆಸುತ್ತಿದೆ. ಇಲ್ಲಿ ಗಣಿಗಾರಿಕೆ ಆರಂಭವಾದರೆ, ಲಡಾಖ್‌ನ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಸಂಪೂರ್ಣವಾಗಿ ಧಕ್ಕೆಯಾಗುತ್ತದೆ ಎಂಬುದು ಚಳವಳಿಗಾರರ ಆತಂಕವಾಗಿದೆ.

‘ಲಡಾಖ್‌ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ರಚಿಸಿದ ನಂತರ ಅಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ದೊರೆತಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಜನವರಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಮಾಹಿತಿ ನೀಡಿತ್ತು. 2019ರ ಆಗಸ್ಟ್‌ ನಂತರ ಇಲ್ಲಿ ಹೊಸದಾಗಿ 1,006 ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂದು ಸರ್ಕಾರವು ಹೇಳಿದೆ. ಆದರೆ, ಇವುಗಳಲ್ಲಿ ಸ್ಥಳೀಯರು ಆರಂಭಿಸಿದ ಕೈಗಾರಿಕೆಗಳು ಎಷ್ಟು ಮತ್ತು ಹೊರರಾಜ್ಯದವರು ಸ್ಥಾಪಿಸಿದ ಕೈಗಾರಿಕೆಗಳು ಎಷ್ಟು ಎಂಬುದರ ಮಾಹಿತಿಯನ್ನು ಸಚಿವಾಲಯವು ನೀಡಿಲ್ಲ. ಜತೆಗೆ, ಎಂತಹ ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂಬ ಮಾಹಿತಿಯನ್ನೂ ನೀಡಿಲ್ಲ. ಆದರೆ, ರಾಜ್ಯದಲ್ಲಿ ಹೂಡಿಕೆಯಾದ ಬಂಡವಾಳದಲ್ಲಿ ಹೊರರಾಜ್ಯದವರ ಬಂಡವಾಳದ ಪಾಲು ಶೇ 55ಕ್ಕಿಂತಲೂ ಹೆಚ್ಚು ಎಂದು ಸಚಿವಾಲಯದ ದತ್ತಾಂಶಗಳು ಹೇಳುತ್ತವೆ.

‘ಆರನೇ ಷೆಡ್ಯೂಲ್‌ಗೆ ಸೇರಿಸಿ’

‘ಸಂವಿಧಾನದ ಆರನೇ ಷೆಡ್ಯೂಲ್‌ನ ಅಡಿಯಲ್ಲಿ ಲಡಾಖ್‌ ಅನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು’ ಎಂಬುದು ಲಡಾಖ್‌ ರಕ್ಷಿಸಿ ಹೋರಾಟದ ಪ್ರಧಾನ ಉದ್ದೇಶ.

ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಲಡಾಖ್‌ಗೂ ವಿಶೇಷ ಸ್ಥಾನವಿತ್ತು. ಇಲ್ಲಿನ ಭೂ ಒಡೆತನದ ಹಕ್ಕುಗಳು ಇಲ್ಲಿನ ಜನರಿಗೆ ಮಾತ್ರ ಇತ್ತು. ಆದರೆ, 370ನೇ ವಿಧಿಯಲ್ಲಿನ ವಿಶೇಷ ಸ್ಥಾನ ತೆಗೆದು, ಕೇಂದ್ರಾಡಳಿತ ಪ್ರದೇಶವಾದ ನಂತರ ಇಲ್ಲಿನ ಜನರಿಗೆ ಈ ಹಿಂದೆ ಇದ್ದ ರಕ್ಷಣೆಗಳು ಇಲ್ಲವಾಗಿವೆ. ಲಡಾಖ್‌ ಅನ್ನು ಆರನೇ ಷೆಡ್ಯೂಲ್‌ಗೆ ಸೇರಿಸುತ್ತೇವೆ ಎಂದು ಕೇಂದ್ರ ಸರ್ಕಾರ 2019ರಲ್ಲೇ ಹೇಳಿತ್ತು. ಆದರೆ, ಮೂರೂವರೆ ವರ್ಷಗಳ ನಂತರವೂ ಇದು ಅನುಷ್ಠಾನಕ್ಕೆ ಬಂದಿಲ್ಲ. ಸಂವಿಧಾನದ 244ನೇ ವಿಧಿಯ ಅಡಿ 5ನೇ ಅಥವಾ 6ನೇ ಷೆಡ್ಯೂಲ್‌ಗೆ ಒಂದು ಪ್ರದೇಶವನ್ನು ಸೇರಿಸಿದರೆ, ಅದು ಸ್ವಾಯತ್ತ ಪ್ರದೇಶವಾಗುತ್ತದೆ. ಅಂದರೆ, ಅಲ್ಲಿಗೆ ಸಂಬಂಧಿಸಿದ ಕೆಲವಾರು ಕಾನೂನುಗಳನ್ನು ರಚಿಸುವ ಅಧಿಕಾರ ಅಲ್ಲಿನ ಸ್ವಾಯತ್ತ ಜಿಲ್ಲಾ ಮಂಡಳಿಗಳಿಗೆ ದೊರೆಯುತ್ತದೆ. ಜಿಲ್ಲಾ ಮಂಡಳಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶಿತರಾದವರ ಪ್ರಾತಿನಿಧ್ಯವೂ ಇರುತ್ತದೆ. ತಮ್ಮ ಜಿಲ್ಲೆಗಳಲ್ಲಿನ ಜಮೀನನ್ನು ಯಾರಿಗೆ ನೀಡಬೇಕು ಮತ್ತು ಯಾರಿಗೆ ನೀಡಬಾರದು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಈ ಸ್ವಾಯತ್ತ ಜಿಲ್ಲಾ ಮಂಡಳಿಗಳಿಗೆ ಇರುತ್ತದೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶದ ಹಲವು ಜಿಲ್ಲೆಗಳಿಗೆ 6ನೇ ಷೆಡ್ಯೂಲ್‌ನಲ್ಲಿ ಸ್ಥಾನ ನೀಡಲಾಗಿದೆ.

ಆದರೆ, ‘ಲಡಾಖ್‌ನಲ್ಲಿ ಈಗ ಚುನಾಯಿತ ಸರ್ಕಾರವೂ ಇಲ್ಲ ಮತ್ತು ಸ್ವಾಯತ್ತ ಜಿಲ್ಲೆಗಳ ಅಧಿಕಾರವೂ ಇಲ್ಲ. ಇಲ್ಲಿ ಗಣಿಗಾರಿಕೆ ಮತ್ತು ಕೈಗಾರಿಕೆಗಳ ಸ್ಥಾಪನೆಯನ್ನು ತಡೆಯಲು ನಮ್ಮ ಬಳಿ ಸ್ವಲ್ಪವೂ ಅಧಿಕಾರ ಇಲ್ಲ. ಹೀಗಾಗಿಯೇ ನಮ್ಮ ನೆಲವನ್ನು ರಕ್ಷಿಸಿಕೊಳ್ಳಲೂ ನಮಗೆ ಸಾಧ್ಯವಾಗುತ್ತಿಲ್ಲ’ ಎಂಬುದು ಲಡಾಖ್‌ ರಕ್ಷಿಸಿ ಹೋರಾಟಗಾರರ ಅಳಲು. ಹೀಗಾಗಿಯೇ ಅವರು ಲಡಾಖ್‌ ಅನ್ನು 6ನೇ ಷೆಡ್ಯೂಲ್‌ಗೆ ಸೇರಿಸಿ ಎಂದು ಆಗ್ರಹಿಸುತ್ತಿದ್ದಾರೆ. ಯಾವುದೇ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದ್ದರೆ, ಆ ಪ್ರದೇಶವನ್ನು 6ನೇ ಷೆಡ್ಯೂಲ್‌ಗೆ ಸೇರಿಸಲು ಸಂವಿಧಾನದಲ್ಲಿ ಅವಕಾಶವಿದೆ. ಲಡಾಖ್‌ನಲ್ಲಿ ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಜನರ ಪ್ರಮಾಣ ಶೇ 79ರಷ್ಟಿದೆ. ಹೀಗಿದ್ದೂ, ಲಡಾಖ್‌ ಅನ್ನು 6ನೇ ಷೆಡ್ಯೂಲ್‌ಗೆ ಸೇರಿಸುತ್ತಿಲ್ಲ. ಇಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆ ಆರಂಭಿಸಲು ಅವಕಾಶ ಮಾಡಿಕೊಡಲೆಂದೇ ಸರ್ಕಾರವು ಈ ವಿಚಾರವನ್ನು ಕಡೆಗಣಿಸುತ್ತಿದೆ ಎಂದೂ ಲಡಾಖ್‌ ರಕ್ಷಿಸಿ ಹೋರಾಟಗಾರರು ಆರೋಪಿಸುತ್ತಿದ್ದಾರೆ.

ಆಧಾರ: ಸೊನಮ್ ವಾಂಗ್ಚುಕ್‌ ಅವರ ಟ್ವೀಟ್‌ಗಳು ಮತ್ತು ಯುಟ್ಯೂಬ್‌ ವಿಡಿಯೊ, ಸಂವಿಧಾನದ 244ನೇ ವಿಧಿಯ 6ನೇ ಷೆಡ್ಯೂಲ್‌, ಆಂತರಿಕ ವ್ಯವಹಾರಗಳ ಸಂಸದೀಯ ಸಮಿತಿ ವರದಿ–2022, ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಪತ್ರಿಕಾ ಪ್ರಕಟಣೆ, ಕೇಂದ್ರ ಸರ್ಕಾರದ ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ‘ಲೆಹ್‌ನಲ್ಲಿ ಕೈಗಾರಿಕಾ ಸ್ಥಿತಿಗತಿ’ ವರದಿ, ಪಿಟಿಐ, ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ರಾಕ್‌ ಮೆಕಾನಿಕ್ಸ್‌’ನ ಅಧ್ಯಯನ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT