ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ
ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ
Published 11 ಜೂನ್ 2023, 19:49 IST
Last Updated 11 ಜೂನ್ 2023, 19:49 IST
ಅಕ್ಷರ ಗಾತ್ರ

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ’ಯ (ಎಂಜಿಎನ್‌ಆರ್‌ಇಜಿಎಸ್–ನರೇಗಾ) ಫಲಾನುಭವಿ ಕುಟುಂಬಗಳ ಸಂಖ್ಯೆಯು ಕೋವಿಡ್‌ ನಂತರದ ಆರ್ಥಿಕ ವರ್ಷದಲ್ಲಿ ಇಳಿಕೆಯಾಗುತ್ತ ಸಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗದ ‘ಗ್ಯಾರಂಟಿ’ ನೀಡಲು 2005ರಲ್ಲಿ ಅಂದಿನ ಯುಪಿಎ ನೇತೃತ್ವದ ಸರ್ಕಾರ ಆರಂಭಿಸಿದ್ದ ಯೋಜನೆಯು ಕೋವಿಡ್ ಬಾಧಿಸಿದ್ದ ವರ್ಷಗಳಲ್ಲಿ ಗ್ರಾಮೀಣರ ಬದುಕಿಗೆ ಹೆಚ್ಚು ಆಸರೆಯಾಗಿತ್ತು. 2020–21ರ ಆರ್ಥಿಕ ವರ್ಷದಲ್ಲಿ 7.55 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಂಡಿದ್ದವು. ಇದು ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಆದರೆ ಕೋವಿಡ್‌ ನಂತರದ ಆರ್ಥಿಕ ವರ್ಷಗಳಲ್ಲಿ ಫಲಾನುಭವಿ ಕುಟುಂಬಗಳ ಸಂಖ್ಯೆ ಕುಸಿಯುತ್ತಿದೆ. 2022–23ರ ಆರ್ಥಿಕ ವರ್ಷದಲ್ಲಿ ಫಲಾನುಭವಿ ಕುಟುಂಬಗಳ ಸಂಖ್ಯೆ 6.19 ಕೋಟಿಗೆ ಇಳಿಕೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ದತ್ತಾಂಶಗಳು ತಿಳಿಸುತ್ತವೆ. ಫಲಾನುಭವಿ ಕುಟುಂಬಗಳ ಸಂಖ್ಯೆ ಈಗ ಕೋವಿಡ್‌ ಪೂರ್ವ ಅವಧಿಗೆ ಬಂದಿದೆ. 

ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದಾದ್ಯಂತ ವಿಧಿಸಲಾದ ಲಾಕ್‌ಡೌನ್‌ನಿಂದ ನಗರವಾಸಿ ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾದರು. ಅವರು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದರು. ಗ್ರಾಮೀಣ ಭಾಗದಲ್ಲಿ ಜಾರಿಯಲ್ಲಿದ್ದ ಉದ್ಯೋಗ ಖಾತರಿ ಯೋಜನೆಯು ವಲಸೆ ಕಾರ್ಮಿಕರ ಹಸಿವನ್ನು ನೀಗಿಸಿತು. ತಮ್ಮ ಗ್ರಾಮದಲ್ಲಿಯೇ ಕಾರ್ಮಿಕರು ಕೆಲಸ ಪಡೆದುಕೊಂಡರು. ಕೋವಿಡ್ ಬಾಧಿಸಿದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಇದ್ದ ಏಕೈಕ ಆಸರೆ ಇದಾಗಿತ್ತು.  

ಕೋವಿಡ್ ಬಳಿಕ ಒಂದಷ್ಟು ಜನರು ತಮ್ಮ ಊರುಗಳಲ್ಲೇ ಕಾಯಂ ಆಗಿ ನೆಲೆ ನಿಂತರೆ, ಇನ್ನೊಂದಿಷ್ಟು ಜನರು ನಗರ ಪ್ರದೇಶಗಳಿಗೆ ಮತ್ತೆ ವಲಸೆ ಹೋದರು. ಇನ್ನೂ ಕೆಲವರು ಇತರೆ ಉದ್ಯೋಗಗಳತ್ತ ಮುಖ ಮಾಡಿದರು. ಆದರೆ ಫಲಾನುಭವಿ ಕುಟುಂಬಗಳ ಸಂಖ್ಯೆಯಲ್ಲಿ ಕುಸಿತ ಕಾಣಲು ಬೇರೆಯೇ ಕಾರಣಗಳಿವೆ ಎಂದು ಸಾಮಾಜಿಕ ಕಾರ್ಯಕರ್ತರು ಪಟ್ಟಿ ಮಾಡಿದ್ದಾರೆ. ಕಾರ್ಮಿಕರ ದಿನಗೂಲಿ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಇದು, ಕಾರ್ಮಿಕರು ಅನ್ಯ ಕೆಲಸಗಳತ್ತ ಮುಖಮಾಡಲು ಕಾರಣ ಎನ್ನಲಾಗಿದೆ. ಕೆಲಸ ಮುಗಿದ  ಬಳಿಕ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸ್ಥಾಯಿ ಸಮಿತಿಯೂ ಬೊಟ್ಟು ಮಾಡಿದೆ. ಸಮಿತಿ ಸದಸ್ಯರು ಖುದ್ದು ಭೇಟಿ ನೀಡಿ, ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವರದಿ ಮಾಡಿದ್ದಾರೆ. ಒಂದು ವೇಳೆ ಪಾವತಿ ವಿಳಂಬವಾದರೆ, ಅದಕ್ಕೆ ಪರಿಹಾರ ನೀಡಬೇಕು ಎಂದು ನರೇಗಾ ಕಾಯ್ದೆಯ ಎರಡನೇ ಪರಿಚ್ಛೇದದ 29ನೇ ಪ್ಯಾರಾದಲ್ಲಿ ಹೇಳಲಾಗಿದೆ. ಆದರೆ ಅದು ಸಹ ಪಾಲನೆಯಾಗುತ್ತಿಲ್ಲ ಎಂದು 2022–23ನೇ ಸಾಲಿನ ಸ್ಥಾಯಿ ಸಮಿತಿ ವರದಿ ಆಕ್ಷೇಪ ವ್ಯಕ್ತಪಡಿಸಿದೆ. 2023ರ ಜನವರಿ 25ರ ಮಾಹಿತಿಯಂತೆ, ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ರಾಜ್ಯಗಳಿಗೆ /₹6,231 ಕೋಟಿ/ ವೇತನ ಬಾಕಿ ಪಾವತಿಸಬೇಕಿದೆ. 

ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಕೋವಿಡ್ ಇದ್ದ ಎರಡು ಆರ್ಥಿಕ ವರ್ಷಗಳಲ್ಲಿ ಅತಿಹೆಚ್ಚು ಕಾರ್ಮಿಕರು ಯೋಜನೆಯಡಿ ಕೆಲಸ ಮಾಡಿದ್ದರೂ ಈ ಆರ್ಥಿಕ ವರ್ಷದಲ್ಲಿ ಅನುದಾನವನ್ನು ಇಳಿಸಿದೆ. ಅನುದಾನ ಕಡಿತದ ಬಗ್ಗೆ ಗ್ರಾಮೀಣಾಭಿವೃದ್ಧಿ  ಸಚಿವಾಲಯದ ಸ್ಥಾಯಿ ಸಮಿತಿಯ ವರದಿಯಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡಬೇಕಿರುವ ಅನುದಾನವೂ ವಿಳಂಬವಾಗುತ್ತಿದೆ. 

ಕಾರ್ಮಿಕರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಜಾರಿಗೆ ತಂದಿರುವ ಆಧಾರ್ ಆಧಾರಿತ ‘ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ’ ಪಾವತಿ ವ್ಯವಸ್ಥೆ ಕೂಡಾ ಇದಕ್ಕೆ ಒಂದು ಕಾರಣ ಎಂದು ಸ್ಥಾಯಿ ಸಮಿತಿ ಆರೋಪಿಸಿತ್ತು. ಅಂಚಿನ ಸಮುದಾಯಗಳಿಗೆ ಸೇರಿದ ಹಾಗೂ ಆರ್ಥಿಕವಾಗಿ ದುರ್ಬಲರಾದ ಕೂಲಿಕಾರ್ಮಿಕರು ದಿನಗೂಲಿ ಪಡೆಯಬೇಕಾದರೆ, ಅವರು ಆ್ಯಪ್ ಆಧಾರಿತ ಪಾವತಿ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿರಬೇಕು ಎಂದು ಸರ್ಕಾರ ಬಯಸುವುದು ಸರಿಯಲ್ಲ ಎಂದು ಕನಿಮೊಳಿ ಅಧ್ಯಕ್ಷತೆಯ ಸ್ಥಾಯಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿತ್ತು. 

ಕೋವಿಡ್‌ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಗ್ರಾಮೀಣ ಭಾಗದ ಆರ್ಥಿಕತೆ ಸುಧಾರಿಸಿದೆ ಎಂದು 2022–23ರ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಉತ್ತಮ ಕೆಲಸದ ಅವಕಾಶಗಳ ಬಾಗಿಲು ತೆರೆದಿದ್ದರಿಂದ, ಗ್ರಾಮೀಣ ಜನರಿಗೆ ಉದ್ಯೋಗ ಖಾತರಿಯ ಮೇಲಿನ ಅವಲಂಬನೆ ಕಡಿಮೆಯಾಯಿತು ಎಂದು ವರದಿ ಹೇಳಿತ್ತು. 

ಆರಂಭದಲ್ಲಿ ದೇಶದ ಅತಿ ಹಿಂದುಳಿದಿರುವ 200 ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. 2007–08ರಲ್ಲಿ ಇದಕ್ಕೆ 130 ಜಿಲ್ಲೆಗಳನ್ನು ಸೇರಿಸಲಾಯಿತು. 2008–09ರ ಅವಧಿಯಲ್ಲಿ ಇಡೀ ದೇಶಕ್ಕೆ ಅನ್ವಯ ಮಾಡಲಾಯಿತು. ಗ್ರಾಮೀಣ ಭಾಗದ ಪ್ರತಿ ಕುಟುಂಬದ ವಯಸ್ಕ ವ್ಯಕ್ತಿಗೆ ಒಂದು ವರ್ಷದಲ್ಲಿ ಗರಿಷ್ಠ 100 ದಿನಗಳ ಕೆಲಸವನ್ನು ಖಚಿತವಾಗಿ ನೀಡುವುದು ಈ ಯೋಜನೆಯ ಉದ್ದೇಶ. ಯೋಜನೆಯಡಿ, ಕೌಶಲರಹಿತ ಕೆಲಸಗಳಿಗೆ ಕೇಂದ್ರ ಸರ್ಕಾರ ಕೂಲಿ ನಿಗದಿಪಡಿಸಿದೆ. ವಿವಿಧ ರಾಜ್ಯಗಳ ಕಾರ್ಮಿಕರಿಗೆ ವಿವಿಧ ದರ ನಿಗದಿಪಡಿಸಲಾಗಿದೆ. ದಿನಕ್ಕೆ ಒಬ್ಬ ಕೂಲಿ ಕಾರ್ಮಿಕನಿಗೆ ₹204ರಿಂದ ₹311ರ ನಡುವೆ ದರ ನಿಗದಿಪಡಿಸಲಾಗಿದೆ. ಹರಿಯಾಣದ ಕಾರ್ಮಿಕರು ಈ ಯೋಜನೆಯಡಿ ಗರಿಷ್ಠ ದಿನಗೂಲಿ ಪಡೆಯುತ್ತಾರೆ. 

ಆಧಾರ:ನರೇಗಾ ಜಾಲತಾಣದ ಡ್ಯಾಶ್‌ಬೋರ್ಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿಸಮಿತಿಯ 2022–23ರ ವರದಿ, ಕೇಂದ್ರ ಬಜೆಟ್‌ 2023–24, ಪಿಐಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT