ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ದಿ ಎಲಿಫೆಂಟ್ ವಿಸ್ಪರರ್ಸ್‌, ನಾಟು ನಾಟು: ಆಸ್ಕರ್‌ ಪ್ರಭಾವಳಿಯಲ್ಲಿ

Last Updated 13 ಮಾರ್ಚ್ 2023, 21:59 IST
ಅಕ್ಷರ ಗಾತ್ರ

ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರದಾನವಾಗಿದೆ. 95ನೇ ಆಸ್ಕರ್‌ ಪ್ರಶಸ್ತಿಯಲ್ಲಿ ಭಾರತದ ಒಂದು ಕಿರು ಸಾಕ್ಷ್ಯಚಿತ್ರ, ಒಂದು ಸಿನಿಮಾದ ಹಾಡು ಗೌರವಕ್ಕೆ ಪಾತ್ರವಾಗಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ಎಂಬ ಕಿರು ಸಾಕ್ಷ್ಯಚಿತ್ರ, ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಎಂಬ ಹಾಡು ಪ್ರಶಸ್ತಿಯ ಗರಿ ಮುಡಿಸಿಕೊಂಡಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ತಮಿಳು ಸಾಕ್ಷ್ಯಚಿತ್ರವಾದರೆ ಆರ್‌ಆರ್‌ಆರ್‌ ತೆಲುಗು ಭಾಷೆಯ ನಿರ್ಮಾಣವಾಗಿರುವ ಸಿನಿಮಾ

––––––

ಅದು ತಮಿಳುನಾಡಿನ ಮುದುಮಲೈ ಕಾಡು. ಸೇಲಂಗೆ ಹೋಗಿದ್ದ ಕುಟ್ಟುನಾಯಕ ಸಮುದಾಯದ ಬೊಮ್ಮ ಪುಟ್ಟದೊಂದು ಆನೆಯ ಜೊತೆ ತೆಪ್ಪಕಾಡು ಆನೆ ಶಿಬಿರಕ್ಕೆ ವಾಪಸಾಗುತ್ತಾನೆ. ಆ ಮರಿಯಾನೆ ನಡೆಯಲೂ ಆಗದಷ್ಟು ದಯನೀಯ ಸ್ಥಿತಿಯಲ್ಲಿತ್ತು. ಏನೆಂದು ಕೇಳಿದಾಗ, ಆನೆಯ ಪೂರ್ವಾಪರವನ್ನು ಪತ್ನಿ ಬೆಳ್ಳಿಗೆ ವಿವರಿಸುತ್ತಾನೆ.

ನೀರು ಹುಡುಕಿಕೊಂಡು ಊರಿನತ್ತ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ತಾಯಿ ಆನೆಯೊಂದು ವಿದ್ಯುದಾಘಾತದಿಂದ ಮೃತಪಟ್ಟಿತ್ತು. ಅದರ ಮರಿಯು ಆನೆಗಳ ಹಿಂಡಿನಿಂದ ದೂರಾಯಿತು. ಗುಂಪಿನಿಂದ ಪರಿತ್ಯಕ್ತವಾಗಿದ್ದ ಅದು ಬೀದಿನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿತ್ತು. ಅದು ಬದುಕಿದ್ದೇ ಪವಾಡ. ಅದರ ಪೋಷಣೆಯ ಹೊಣೆಯನ್ನು ಬೊಮ್ಮನಿಗೆ ವಹಿಸಲಾಯಿತು.

ಬೊಮ್ಮ ಹಾಗೂ ಬೆಳ್ಳಿ ಇಬ್ಬರೂ ಕಾಡಿನ ಮಕ್ಕಳು. ಕಾಡಿನಲ್ಲೇ ಹುಟ್ಟಿ, ಅಲ್ಲೇ ಬೆಳೆದು ಜೀವನ ಸಾಗಿಸುವವರು. ಕಾಡು ಅಂದರೆ ಅವರ ಮನೆಯೇ. ಅಲ್ಲಿನ ಸಾಕಾನೆ ಶಿಬಿರದಲ್ಲಿ ಅವರ ಕೆಲಸ. ಗಾಯಾಳು ಆನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಅವರು ಕಂಕಣ ತೊಟ್ಟರು. ಮೈತೊಳೆದರು, ಹಲ್ಲುಜ್ಜಿದರು, ಹಾಲು ಕುಡಿಸಿದರು, ಕೈತುತ್ತು ತಿನ್ನಿಸಿದರು. ಆರೋಗ್ಯ ಸುಧಾರಿಸಲಿ ಎಂದು ಹರಕೆ ಹೊತ್ತರು. ‘ರಘು’ ಎಂದು ಹೆಸರನ್ನೂ ಇಟ್ಟು ತಮ್ಮ ಮಕ್ಕಳಂತೆಯೇ ಜತನ ಮಾಡಿದರು. ಬೊಮ್ಮ ಹಾಗೂ ಬೆಳ್ಳಿಯರ ಜೀವನದಲ್ಲಿ ರಘು ಬೆರೆತುಹೋದ. ನಂತರದ ದಿನಗಳಲ್ಲಿ, ಈ ಕುಟುಂಬಕ್ಕೆ ‘ಅಮ್ಮು’ ಎಂಬ ಮತ್ತೊಂದು ಪರಿತ್ಯಕ್ತ ಮರಿಯಾನೆಯೂ ಜೊತೆಯಾಯಿತು.

ವಯಸ್ಸಿಗೆ ಬಂದ ಬಳಿಕ ರಘು ಆನೆಯನ್ನು ಬೇರೊಂದು ಶಿಬಿರಕ್ಕೆ ಕಳಿಸಲಾಯಿತು. ಆಗ ಬೊಮ್ಮ ಹಾಗೂ ಬೆಳ್ಳಿ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ರಘು ದೂರಾಗಿದ್ದಕ್ಕೆ ಮಕ್ಕಳಂತೆ ಕಣ್ಣೀರಿಡುತ್ತಾರೆ. ಅಮ್ಮು ತನ್ನ ಸೊಂಡಿಲಿನಿಂದ ಬೆಳ್ಳಿಯ ಕಣ್ಣೀರು ಒರೆಸುತ್ತದೆ. ಇಂತಹ ಭಾವುಕತೆ ತುಂಬಿದ ಹತ್ತಾರು ದೃಶ್ಯಗಳು ‘ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಮೈದಳೆದಿವೆ.

ಈ ಮೂರು ನೈಜ ಪಾತ್ರಗಳೇ ಕಿರುಸಾಕ್ಷ್ಯಚಿತ್ರದ ಜೀವಾಳ. ಕಾಡಿನ ಅವಿಭಾಗ್ಯ ಅಂಗವೇ ಆಗಿರುವ ಅಲ್ಲಿನ ಸ್ಥಳೀಯ ಬುಡಕಟ್ಟು ಜನರು ಹಾಗೂ ಅವರು ಕಾಡಿನ ಜೊತೆ ಹೊಂದಿರುವ ಅನ್ಯೋನ್ಯ ಸಂಬಂಧವನ್ನು ಕತೆಯು ಗಟ್ಟಿಯಾಗಿ ಕಟ್ಟಿಕೊಡುತ್ತದೆ. ಹವಾಮಾನ ಬದಲಾವಣೆ, ಅದರಿಂದ ಆನೆಗಳ ಆವಾಸ ಸ್ಥಾನವು ಬದಲಾಗಿರುವುದು, ಕಾಡೊಳಗಿನ ನೀರಿನ ಸೆಲೆ ಬತ್ತಿರುವುದರಿಂದ ಅವು ನಾಡಿನತ್ತ ವಲಸೆ ಬರುತ್ತಿರುವ ವಿದ್ಯಮಾನಗಳನ್ನು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಇಲ್ಲಿ ಸೂಕ್ಷ್ಮವಾಗಿ ಹೇಳುತ್ತಾ ಹೋಗುತ್ತಾರೆ.

ತಲೆಮಾರುಗಳಿಂದ ಮಾವುತ ವೃತ್ತಿಯಲ್ಲಿರುವ ಕುಟ್ಟುನಾಯಕ ಸಮುದಾಯದ ಸಂಸ್ಕೃತಿ, ಬದುಕು, ಆಚರಣೆಗಳು, ಆನೆಗಳ ಜೊತೆಗಿನ ಅವರ ಅವಿನಾಭಾವ ಸಂಬಂಧವನ್ನು ಚಿತ್ರ ತೆರೆದಿಡುತ್ತದೆ. ಕಾಡಿನ ಹಸಿರು, ಕೆರೆ–ತೊರೆಗಳ ವೈಭವವನ್ನು ನೋಡುವುದೇ ಚೆಂದ. ಅನುಭವಕ್ಕೆ ಮಾತ್ರ ನಿಲುಕಬಲ್ಲ ಕಾಡಿನ ಸೌಂದರ್ಯವು ಚಿತ್ರದುದ್ದಕ್ಕೂ ಪ್ರಮುಖ ಪಾತ್ರವೇ ಆಗಿಬಿಡುತ್ತದೆ.

ಭಾರತದಲ್ಲೇ ನಿರ್ಮಾಣವಾದ ಹಾಗೂ ಭಾರತೀಯರೇ ನಿರ್ಮಿಸಿದ ಚಿತ್ರವೊಂದಕ್ಕೆ ಆಸ್ಕರ್ ಬಂದಿದ್ದು ಇದೇ ಮೊದಲು. ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದ ಆನೆ ಶಿಬಿರದಲ್ಲಿ ನಡೆದ ನೈಜ ಘಟನೆಗೆ ಸಾಕ್ಷ್ಯಚಿತ್ರದ ರೂಪ ಕೊಟ್ಟಿದ್ದಾರೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ. ಕಾರ್ತಿಕಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಆಸ್ಕರ್ ಪಡೆಯುವಂತಹ ಶ್ರೇಷ್ಠ ದರ್ಜೆಯ ಸಾಕ್ಷ್ಯಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಮೊಂಗಾ ಅವರು ಸಹ ನಿರ್ಮಾಪಕರಾಗಿದ್ದ ‘ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರವು 2019ರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿತ್ತು.

ಎಲಿಫೆಂಟ್ ವಿಸ್ಪರರ್ಸ್ ಚಿತ್ರವನ್ನು ಸಿಖ್ಯ ಎಂಟರ್‌ಟೈನ್‌ಮೆಂಟ್‌‌ ನಿರ್ಮಿಸಿದೆ. 2022ರಲ್ಲಿ ನ್ಯೂಯಾರ್ಕ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಡಿ. 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ತೆರೆಕಂಡಿತ್ತು.

ನಿರ್ದೇಶಕಿ ಕಂಡ ನಿಜದ ಕತೆ...
ಸಿನಿಮಾ ತಂತ್ರಜ್ಞಾನದಲ್ಲಿ ಪದವಿ ಪಡೆದ ಕಾರ್ತಿಕಿ ಗೊನ್ಸಾಲ್ವೆಸ್, ವನ್ಯಜೀವಿ ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಿದರೂ, ಫೋಟೊಗ್ರಫಿ ಬಗೆಗಿನ ಅವರ ಸೆಳೆತ ಕಡಿಮೆಯಾಗಲಿಲ್ಲ. ಕೆಲಸವನ್ನು ತೊರೆದ ಅವರು ತಮ್ಮ ಊರು ಊಟಿಗೆ ವಾಪಸಾಗುವಾಗ, ಮುದುಮಲೈ ಕಾಡಿನ ತೆಪ್ಪಕಾಡು ಆನೆಶಿಬಿರಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಬೊಮ್ಮ ಹಾಗೂ ಬೆಳ್ಳಿ ಎಂಬ ದಂಪತಿಯ ಜತೆ ಅನ್ಯೋನ್ಯತೆಯಿಂದ ಇದ್ದ ಮರಿಯಾನೆಯು ಅವರ ಗಮನ ಸೆಳೆಯುತ್ತದೆ. ಅಲ್ಲಿಯೇ ಕೆಲದಿನ ಇದ್ದು, ಮರಿಯಾನೆ ಜತೆ ಬೆರೆಯುತ್ತಾರೆ. ಅದರ ಮೈ ಉಜ್ಜಿ, ಆಹಾರ ತಿನ್ನಿಸಿ ಖುಷಿಪಡುತ್ತಾರೆ. ನಂತರದ ಐದು ವರ್ಷಗಳಲ್ಲಿ ಇದೇ ಸಾಕ್ಷ್ಯಚಿತ್ರದ ರೂಪ ತಾಳುತ್ತದೆ. ಭರ್ತಿ ಐದು ವರ್ಷಗಳ ಕನಸು ಆಸ್ಕರ್‌ ಗರಿಯೊಂದಿಗೆ ಸಾರ್ಥಕ್ಯ ಕಾಣುತ್ತದೆ.

ತ್ಯಾಗ, ಸವಾಲು ಹಾಗೂ ಮುಗ್ಧತೆ: ‘ಆಸ್ಕರ್ ಪ್ರಶಸ್ತಿ ಅಂದರೆ ಏನು ಅಂತಾ ನನಗೆ ತಿಳಿದಿಲ್ಲ’ – ‘ಎಲಿಫೆಂಟ್ ವಿಸ್ಪರರ್ಸ್’ನ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬೆಳ್ಳಿ ಅವರ ಮುಗ್ಧ ಮಾತಿದು.

ಆನೆಗಳನ್ನು ಮಕ್ಕಳಂತೆ ಕಾಣುವ ಬೆಳ್ಳಿಗೆ ಒಂದು ಸಮಯದಲ್ಲಿ ಕಾಡು ಪ್ರಾಣಿಗಳೆಂದರೇ ಅತೀವ ಭಯ ಇತ್ತು. ಮೊದಲ ಗಂಡ ಹುಲಿಗೆ ಬಲಿಯಾಗಿದ್ದರಿಂದ ಆಕೆಯಲ್ಲಿ ಭೀತಿ ಆವರಿಸಿತ್ತು. ನಂತರ ಬೊಮ್ಮ ಜೊತೆಯಾದರು. ಶಿಬಿರದಲ್ಲಿ ಆನೆಗಳ ಪೋಷಣೆ ಮಾಡುತ್ತಾ, ಈ ಭೀತಿ ಮರೆಯಾಯಿತು. ಆದರೆ ಎರಡೂ ಅನೆಗಳನ್ನು ಸಲಹುವಾಗ ಈ ದಂಪತಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ತನ್ನ ಮಗಳು ಬೆಂಕಿ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೂ, ಆನೆಗಳನ್ನು ಒಂಟಿಯಾಗಿ ಬಿಟ್ಟುಹೋಗಲು ಬೆಳ್ಳಿ ಸಿದ್ಧ ಇರಲಿಲ್ಲ. ಆ ಮಟ್ಟಿಗೆ ಬೆಳ್ಳಿಯ ಜೀವನದ ಜೊತೆ ರಘು, ಅಮ್ಮು ಬೆರೆತು ಹೋಗಿದ್ದರು. ವನ್ಯಜೀವಿಗಳ ಪಾಲನೆಯಲ್ಲಿ ಬೊಮ್ಮ ಹಾಗೂ ಬೆಳ್ಳಿ ದಂಪತಿ ಮಾಡಿದ ತ್ಯಾಗ, ಎದುರಿಸಿದ ಸವಾಲುಗಳನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಯು ಗುರುತಿಸಿದೆ.

‘ಆನೆಗಳು ನಮ್ಮ ಮಕ್ಕಳಂತೆಯೇ. ಮಕ್ಕಳನ್ನು ನೋಡಿಕೊಳ್ಳುವಂತೆಯೇ, ಪರಿತ್ಯಕ್ತ ಆನೆಗಳನ್ನು ಸೇವಾ ಭಾವದಿಂದ ಪೋಷಿಸಿದ್ದೇವೆ. ನನ್ನ ಜೀವನದಲ್ಲಿ ಎಷ್ಟೋ ಆನೆಗಳನ್ನು ತಾಯಿಯಾಗಿ ಪೊರೆದಿದ್ದೇನೆ. ಅವುಗಳ ಪೋಷಣೆಯಲ್ಲಿ ನಾನು ನನ್ನ ಮಕ್ಕಳನ್ನು ಕಂಡಿದ್ದೇನೆ. ನಮ್ಮ ಮಾವುತ ಪರಂಪರೆಯಲ್ಲಿ ಇಂತಹ ಪ್ರೀತಿಯೇ ಇಡೀ ಬದುಕಾಗಿರುತ್ತದೆ’ ಎನ್ನುತ್ತಾರೆ ಬೆಳ್ಳಿ.

ಜನರ ಹುಚ್ಚೆಬ್ಬಿಸಿದ ‘ನಾಟು ನಾಟು’
ಎಸ್‌.ಎಸ್‌. ರಾಜಮೌಳಿ ನಿರ್ದೇಶನದ, ಗಳಿಕೆಯಲ್ಲಿ ಅಭೂತಪೂರ್ವ ದಾಖಲೆ ಸೃಷ್ಟಿಸಿದ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯ ‘ನಾಟು ನಾಟು’ ಹಾಡು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಎ. ಆರ್‌. ರೆಹಮಾನ್‌ ಸಂಗೀತ ಸಂಯೋಜನೆಯ ‘ಜೈ ಹೋ’ ಹಾಡಿಗೆ 2009ರಲ್ಲಿ ಆಸ್ಕರ್ ಪ್ರಶಸ್ತಿ ಬಂದಿತ್ತು. ಅದಾದ ಬಳಿಕ, ಇಂಗ್ಲಿಷೇತರ ಸಿನಿಮಾದ ಹಾಡಿಗೆ ಆಸ್ಕರ್‌ ಗೌರವ ಸಿಕ್ಕಿದ್ದು ಇದೇ ಮೊದಲು.

ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಕೀರವಾಣಿ ಅವರ ಸಂಭ್ರಮ ಮುಗಿಲು ಮುಟ್ಟಿತ್ತು.‘ದಿ ಕಾರ್ಪೆಂಟರ್‌ ಜೋಡಿಯ (ಅಮೆರಿಕದ ಗಾಯಕರಾದ ರಿಚರ್ಡ್‌ ಕಾರ್ಪೆಂಟರ್‌ ಮತ್ತು ಅವರ ತಂಗಿ ಕರೆನ್‌ ಕಾರ್ಪೆಂಟರ್‌) ಹಾಡುಗಳನ್ನು ಕೇಳುತ್ತಾ ಬೆಳೆದವನು ನಾನು. ಈಗ ನಾನು ಆಸ್ಕರ್‌ ಜೊತೆಗಿದ್ದೇನೆ. ನನ್ನಲ್ಲಿ, ರಾಜಮೌಳಿಯ ಮನದಲ್ಲಿ ನಮ್ಮ ಕುಟುಂಬಗಳಲ್ಲಿ ಇದ್ದದ್ದು ಒಂದೇ ಬಯಕೆ. ‘ಆರ್‌ಆರ್‌ಆರ್‌’ ಗೆಲ್ಲಬೇಕು. ಅದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಅದು ನನ್ನನ್ನು ಜಗತ್ತಿನ ಶಿಖರಕ್ಕೆ ಏರಿಸಬೇಕು’ ಎಂದು ಕೀರವಾಣಿ ಹೇಳಿದ್ದಾರೆ.

ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಹಾಡಿನ ದೃಶ್ಯ
ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಹಾಡಿನ ದೃಶ್ಯ

‘ನಾಟು ನಾಟು’ ಗೀತರಚನೆಕಾರ ಚಂದ್ರಬೋಸ್ ಅವರಿಗೂ ಇದು ಅತೀವ ಹೆಮ್ಮೆಯ ಕ್ಷಣ. ‘ನಮಸ್ತೆ’ ಎಂಬುದಷ್ಟೇ ಅವರ ಪ್ರತಿಕ್ರಿಯೆಯಾಗಿತ್ತು. ‘ನಾಟು ನಾಟು’ ಹಾಡಿನ ಲಯಕ್ಕೆ ಜನರು ಎಷ್ಟು ಮರುಳಾಗಿದ್ದಾರೆ ಎಂದರೆ, ನಟಿ ದೀಪಿಕಾ ಪಡುಕೋಣೆ ಅವರು ‘ನಾಟು ನಾಟು’ ಹಾಡನ್ನು ಪರಿಚಯಿಸಲು ಬಂದಾಗ ಜನರ ಹರ್ಷೋದ್ಗಾರದ ಕಾರಣಕ್ಕೆ ಮೂರು ಬಾರಿ ಸುಮ್ಮನಾಗಬೇಕಾಯಿತು.

‘ನಿಮಗೆ ನಾಟು ನಾಟು ಗೊತ್ತೇ?, ಗೊತ್ತಿಲ್ಲದಿದ್ದರೆ ಈಗ ನಿಮಗೆ ಗೊತ್ತಾಗಲಿದೆ’ ಎಂದು ದೀಪಿಕಾ ಹೇಳಿದರು. ಉಕ್ರೇನ್‌ ಅಧ್ಯಕ್ಷರ ಅರಮನೆಯ ಚಿತ್ರವನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡು ಜಗತ್ತಿನ ವಿವಿಧ ಭಾಗಗಳ ಜನರು ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದರು. ‘ನಾಟು ನಾಟು’ ಹಾಡನ್ನು ಉಕ್ರೇನ್‌ ಅರಮನೆಯ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ.

ನೂರಕ್ಕೂ ಹೆಚ್ಚು ರೀತಿಯ ಹೆಜ್ಜೆಗಳನ್ನು ರೂಪಿಸಿ ತಾಲೀಮು ಮಾಡಿ, ಹಾಡಿನ ನೃತ್ಯವನ್ನು ಅಂತಿಮಗೊಳಿಸಲಾಗಿದೆ ಎಂದು ನೃತ್ಯ ನಿರ್ದೇಶಕ ಪ್ರೇಮ್‌ ರಕ್ಷಿತ್‌ ಹೇಳಿದ್ದಾರೆ.

ಗೋಲ್ಡನ್‌ ಗ್ಲೋಬ್‌ ಮತ್ತು ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್ ನಂತರ ‘ನಾಟು ನಾಟು’ ಹಾಡಿಗೆ ಅಂತರರಾಷ್ಟ್ರೀಯ ಮಟ್ಟದ ಮೂರನೇ ಮಹತ್ವದ ಗೌರವ ಈಗ ದೊರೆತಂತಾಗಿದೆ.

ಕೀರವಾಣಿ: ಕೋಡೂರಿ ಮರಕಥಮಣಿ ಕೀರವಾಣಿ ಅಥವಾ ಎಂ. ಎಂ. ಕೀರವಾಣಿ ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲಿಯೂ ಬಹುಬೇಡಿಕೆಯ ಸಂಗೀತ ನಿರ್ದೇಶಕ. ತೆಲುಗು ಮತ್ತು ಮಲಯಾಳ ಸಿನಿಮಾ ವಲಯದಲ್ಲಿ ಕೀರವಾಣಿ ಎಂದು ಗುರುತಿಸಿಕೊಂಡಿರುವ ಇವರು ತಮಿಳು ಸಿನಿಮಾ ಕ್ಷೇತ್ರದಲ್ಲಿ ಮರಕಥಮಣಿ ಎಂದು ಪರಿಚಿತ. ಬಾಲಿವುಡ್‌ನಲ್ಲಿ ಅವರ ಹೆಸರು ಎಂ.ಎಂ. ಕ್ರೀಮ್‌.

1990ರಲ್ಲಿ ‘ಮನಸು ಮಮತ’ ಎಂಬ ಸಿನಿಮಾದ ಸಂಗೀತ ನಿರ್ದೇಶಕರಾಗಿ ಸಿನಿಮಾ ಕ್ಷೇತ್ರಕ್ಕೆ ಬಂದರು. ಮರುವರ್ಷವೇ ಅವರಿಗೆ ಬಹುದೊಡ್ಡ ಯಶಸ್ಸು ದಕ್ಕಿತು. ರಾಮಗೋಪಾಲ್‌ ವರ್ಮಾ ನಿರ್ದೇಶನದ ‘ಕ್ಷಣ ಕ್ಷಣಂ’ ಭಾರಿ ಯಶಸ್ಸು ಪಡೆಯಿತು.

ಕೀರವಾಣಿ ಅವರು ಆಂಧ್ರ ಪ್ರದೇಶದ ಕೊವ್ವೂರು ಎಂಬಲ್ಲಿ ಜನಿಸಿದವರು. ಅವರ ತಂದೆ ಕೋಡೂರಿ ಶಿವ ಶಕ್ತಿ ದತ್ತ ಅವರು ಗೀತರಚನೆಕಾರ ಮತ್ತು ಚಿತ್ರಕತೆಗಾರ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಶಿವಶಕ್ತಿ ದತ್ತ ಅವರ ತಮ್ಮ.
ಭಾನು ಅತಯ್ಯಾ

ಆಸ್ಕರ್‌ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ವ್ಯಕ್ತಿ ಭಾನು ಅತಯ್ಯಾ. 1983ರಲ್ಲಿ ಅವರಿಗೆ ಈ ಗೌರವ ದೊರೆತಿದೆ. ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ ಚಲನಚಿತ್ರದ ವಸ್ತ್ರ ವಿನ್ಯಾಸಕ್ಕೆ ಅವರು ಪ್ರಶಸ್ತಿ ಪಡೆದಿದ್ದರು. ರಿಚರ್ಡ್‌ ಅಟೆನ್‌ಬರೊ ಅವರು ಭಾರತದ ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮದ ಜತೆಗೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಇದು ಮಹಾತ್ಮ ಗಾಂಧಿ ಜೀವನವನ್ನು ಆಧರಿಸಿದ ಸಿನಿಮಾ.

ಭಾರತೀಯರ ಆಸ್ಕರ್ ಸಾಧನೆ
ಸತ್ಯಜಿತ್‌ ರೇ
ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಎಂದೇ ಹೆಸರಾಗಿದ್ದ ಸತ್ಯಜಿತ್ ರೇ ಅವರಿಗೆ 1992ರಲ್ಲಿ ಆಸ್ಕರ್‌ ಪ್ರಶಸ್ತಿ ನೀಡಲಾಗಿತ್ತು. ಜೀವಮಾನ ಸಾಧನೆಗಾಗಿ ಅವರನ್ನು ಗೌರವಿಸಲಾಗಿದೆ. ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ರೇ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಅವರು ಪ್ರಶಸ್ತಿ ಸ್ವೀಕರಿಸಲು ಲಾಸ್ ಏಂಜಲೀಸ್‌ಗೆ ಹೋಗಲು ಸಾಧ್ಯವಾಗಲಿಲ್ಲ. 1992ರ ಮಾರ್ಚ್‌ 30ರಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಮುಂದಿನ ತಿಂಗಳು ಅಂದರೆ, ಏಪ್ರಿಲ್‌ 23ರಂದು ರೇ ಅವರು ನಿಧನರಾದರು.

ಎ.ಆರ್‌. ರೆಹಮಾನ್‌ ಮತ್ತು ಗುಲ್ಜಾರ್‌
ಹಲವು ವರ್ಷಗಳ ಬಳಿಕ, ಭಾರತೀಯರಿಗೆ ಆಸ್ಕರ್‌ ಗೆಲ್ಲುವ ಅವಕಾಶ 2009ರಲ್ಲಿ ಬಂತು. ಎ.ಆರ್. ರೆಹಮಾನ್‌ ಸಂಗೀತ ಸಂಯೋಜನೆಯ ಗುಲ್ಜಾರ್‌ ರಚನೆಯ ಹಾಡಿಗೆ ಪ್ರಶಸ್ತಿ ಬಂತು. ‘ಸ್ಲಂಡಾಗ್‌ ಮಿಲಿಯನೇರ್‌’ ಸಿನಿಮಾದ ‘ಜೈ ಹೋ’ ಹಾಡಿನ ಸಂಗೀತಕ್ಕೆ ಪ್ರಶಸ್ತಿ ಬಂತು. ಈ ಸಿನಿಮಾದ ಮತ್ತೊಂದು ಹಾಡಿಗೂ ರೆಹಮಾನ್‌ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಹೀಗಾಗಿ, ಎರಡು ಆಸ್ಕರ್‌ ಪ್ರಶಸ್ತಿ ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ರಸೂಲ್‌ ಪೂಕುಟ್ಟಿ
‘ಸ್ಲಂಡಾಗ್‌ ಮಿಲಿಯನೇರ್‌’ ಸಿನಿಮಾದಿಂದಾಗಿ ಭಾರತದ ಹಲವರಿಗೆ ಆಸ್ಕರ್‌ ಪ್ರಶಸ್ತಿ ಸಿಕ್ಕಿತು. ಅದರಲ್ಲಿ ರಸೂಲ್‌ ಪೂಕುಟ್ಟಿ ಅವರೂ ಒಬ್ಬರು. ಈ ಸಿನಿಮಾದ ಶಬ್ದಗ್ರಹಣಕ್ಕಾಗಿ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದರು.

ಏನಿದು ಆಸ್ಕರ್‌?
ಚಲನಚಿತ್ರ ಉದ್ಯಮದ ಸೃಜನಶೀಲ ಮತ್ತು ತಾಂತ್ರಿಕ ಉತ್ಕೃಷ್ಟತೆಗೆ ನೀಡುವ ಪ್ರಶಸ್ತಿಯೇ ಆಸ್ಕರ್‌. ಪ್ರತಿ ವರ್ಷ ಲಾಸ್‌ ಏಂಜಲೀಸ್‌ನಲ್ಲಿ ಈ ‍ಪ್ರಶಸ್ತಿ ಪ್ರದಾನ ನಡೆಯುತ್ತದೆ. ಅಕಾಡೆಮಿ ಆಫ್‌ ಮೋಷನ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸಸ್‌ ಈ ಪ್ರಶಸ್ತಿ ನೀಡುತ್ತದೆ. ಸಿನಿಮಾ ಮತ್ತು ಮನರಂಜನೆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದೇ ಇದನ್ನು ಪರಿಗಣಿಸಲಾಗುತ್ತಿದೆ. ವಿಜೇತರಿಗೆ ಚಿನ್ನದ ಪ್ರತಿಮೆಯೊಂದನ್ನು ನೀಡಲಾಗುತ್ತದೆ. ಈ ಪ್ರತಿಮೆಯ ಹೆಸರು ಕೂಡ ಆಸ್ಕರ್‌.

ಈ ವರ್ಷ 95ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಒಟ್ಟು 23 ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯೇ ಆಸ್ಕರ್‌ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಅತ್ಯುತ್ತಮ ವಿದೇಶಿ ಸಿನಿಮಾ ಎಂಬ ವರ್ಗದ ಪ್ರಶಸ್ತಿಗೂ ಬಹಳ ಗೌರವ ಇದೆ.

ಆಧಾರ: ಆಸ್ಕರ್‌ ವೆಬ್‌ಸೈಟ್, ಪಿಟಿಐ, ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT