ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲುಗಣಿಗಾರಿಕೆ| ರಾಮನಗರದಲ್ಲಿ ಪ್ರಭಾವಿಗಳದ್ದೇ ಕಾರುಬಾರು

Last Updated 30 ಜನವರಿ 2021, 20:31 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ನಡೆದಿರುವ ಅಕ್ರಮ–ಸಕ್ರಮ ಗಣಿಗಾರಿಕೆಯು ಪ್ರಭಾವಿ ರಾಜಕಾರಣಿಗಳ ನಂಟು ಹೊಂದಿದೆ. ಈ ಸಂಬಂಧ ಅಧಿಕಾರಿಗಳು ನೀಡಿದ ತನಿಖಾ ವರದಿಗಳು ದೂಳು ಹಿಡಿಯುತ್ತಿವೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂಕಿ–ಅಂಶದಂತೆ ಜಿಲ್ಲೆಯಲ್ಲಿ 110 ಕಲ್ಲು ಕ್ವಾರಿಗಳು ಹಾಗೂ 53 ಕ್ರಷರ್‌ಗಳಿವೆ. ಆದರೆ, ಅನಧಿಕೃತವಾಗಿ ನಡೆದಿರುವ ಕ್ವಾರಿಗಳೇ ದುಪ್ಪಟ್ಟು ಸಂಖ್ಯೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಕಾವೇರಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡ ಪರಿಸರ ಸೂಕ್ಷ್ಮ ವಲಯದ ಪಕ್ಕವೇ ಗಣಿ ಸ್ಫೋಟದ ಸದ್ದು ಕೇಳಿಸುತ್ತಿದೆ. ವನ್ಯಜೀವಿ ವಲಯದ ಸರಹದ್ದನ್ನೇ ಬದಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಷ್ಟು ಗಣಿ ದಣಿಗಳು ಪ್ರಭಾವಶಾಲಿಗಳಾಗಿದ್ದಾರೆ.

ಜಿಲ್ಲೆಯಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಬೆಳಕು ಚೆಲ್ಲಿದ್ದು ಯು.ವಿ. ಸಿಂಗ್‌ ವರದಿ. ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಾಮನಗರ ಜಿಲ್ಲೆಯ ಅಕ್ರಮ ಗಣಿಗಾರಿಕೆ ತನಿಖೆಗಾಗಿ ಐಎಫ್‌ಎಸ್ ಅಧಿಕಾರಿ ಯು.ವಿ. ಸಿಂಗ್ ನೇತೃತ್ವದ ತಂಡವನ್ನು ರಚನೆ ಮಾಡಿತ್ತು. ಯು.ವಿ. ಸಿಂಗ್‌ ಈ ಕುರಿತು ಲೋಕಾಯುಕ್ತಕ್ಕೆ ಎರಡು ವರದಿಗಳನ್ನು ನೀಡಿದ್ದರು. 2007–08ರಲ್ಲಿ ನೀಡಲಾದ ವರದಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗ್ರಾನೈಟ್ ಮತ್ತು ಕಲ್ಲು ಗಣಿಗಾರಿಕೆ, ಅದರಿಂದ ಆಗುತ್ತಿರುವ ಅನಾಹುತ, ಪ್ರಾಕೃತಿಕ ಸಂಪತ್ತಿನ ನಷ್ಟವನ್ನು ಉಲ್ಲೇಖಿಸಿದ್ದರು. ಸುಮಾರು 487 ಕಡೆಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿತ್ತು. ಅದರಲ್ಲೂ 189 ಕಡೆ ಅರಣ್ಯದ ಅಂಚಿನಲ್ಲಿಯೇ ಗಣಿಗಾರಿಕೆ ನಡೆಯುತ್ತಿರುವುದಾಗಿ ಉಲ್ಲೇಖಿಸಲಾಗಿತ್ತು. 65 ಕಂಪನಿಗಳು ಇದರಲ್ಲಿ ಭಾಗಿಯಾಗಿದ್ದು, ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಮತ್ತವರ ಕುಟುಂಬದ ಸದಸ್ಯರ ಒಡೆತನದ ಕಂಪನಿಗಳೂ ಇದರಲ್ಲಿ ಸೇರಿವೆ ಎಂದು ವರದಿ ಹೇಳಿತ್ತು. ವರದಿ ಆಧರಿಸಿ 146 ಎಫ್‌ಐಆರ್‌ ಹಾಗೂ 46 ಚಾರ್ಜ್‌ಶೀಟ್‌ಗಳು ದಾಖಲಾಗಿದ್ದವು.

ಆದರೆ ನಂತರ ಬಂದ ಸರ್ಕಾರಗಳು ಯು.ವಿ. ಸಿಂಗ್‌ ವರದಿ ಅನುಷ್ಠಾನಕ್ಕೆ ಆಸಕ್ತಿ ತೋರಿರಲಿಲ್ಲ. ಈ ನಡುವೆ ರಾಮನಗರ ಡಿಸಿಎಫ್‌ ಆಗಿ ಬಂದ ತಾಕತ್‌ ಸಿಂಗ್ ರಣಾವತ್‌ ಈ ಹಿಂದೆ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ವರದಿ ಆಧರಿಸಿ ಜಿಲ್ಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಪರಿಷ್ಕೃತ ವರದಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ದಾವೆ

ಯು.ವಿ. ಸಿಂಗ್‌ ವರದಿ ಅನುಷ್ಠಾನಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕನಕಪುರದ ಸಾಮಾಜಿಕ ಹೋರಾಟಗಾರ ಎ.ಸಿ. ಶಿವರಾಜು ಹಾಗೂ ರೈತ ಮುಖಂಡ ಬಿ.ಸಿ. ನಾರಾಯಣಸ್ವಾಮಿ ಎಂಬುವರು 2013ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ವರದಿ ಆಧರಿಸಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರವನ್ನು ಎಚ್ಚರಿಸಿತ್ತು.

‘2020ರ ಮಾರ್ಚ್‌ನಲ್ಲಿ ಇದರ ಕಡೆಯ ವಿಚಾರಣೆ ನಡೆದಿದ್ದು, ಕೋವಿಡ್ ಕಾರಣಕ್ಕೆ ನಂತರ ವಿಚಾರಣೆ ಮುಂದುವರಿದಿಲ್ಲ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನ್ಯಾಯಾಲಯವನ್ನು ಕೋರಿದ್ದೇವೆ’ ಎಂದು ದೂರುದಾರ ಎ.ಸಿ. ಶಿವರಾಜು ತಿಳಿಸಿದರು.

ಡಿಕೆಶಿ–ಸಿಪಿವೈ ಗುದ್ದಾಟ

ಬಿಜೆಪಿ ಸರ್ಕಾರದಲ್ಲಿ 2011–12ರ ಅವಧಿಯಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್‌ ಕನಕಪುರದಲ್ಲಿನ ಕೆಲವು ಕಲ್ಲು ಗಣಿಗಾರಿಕೆ ಕ್ವಾರಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಂದ್ ಮಾಡಿಸಿದ್ದರು. ಇದು ಯೋಗೇಶ್ವರ್ ಹಾಗೂ ಸ್ಥಳೀಯ ಶಾಸಕ ಡಿ.ಕೆ. ಶಿವಕುಮಾರ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಯೋಗೇಶ್ವರ್‌ ಡಿಕೆಶಿ ವಿರುದ್ಧ ದಾಖಲೆ ಸಂಗ್ರಹಕ್ಕೂ ಮುಂದಾಗಿದ್ದರು ಎನ್ನಲಾಗಿದೆ. ಆದರೆ, ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಪ್ರಕರಣ ತಣ್ಣಗಾಯಿತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT