ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ಆಳ –ಅಗಲ: ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ಅಪಘಾತ ತಪ್ಪಿಸಲು ಬೇಕು ವೇಗಕ್ಕೆ ಕಡಿವಾಣ
ಆಳ –ಅಗಲ: ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ಅಪಘಾತ ತಪ್ಪಿಸಲು ಬೇಕು ವೇಗಕ್ಕೆ ಕಡಿವಾಣ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ದೇಶದಲ್ಲಿ ಅಪಘಾತಗಳಿಗಾಗಿ ಅತಿಹೆಚ್ಚು ಸುದ್ದಿಯಾಗುತ್ತಿರುವುದು ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿ ಮತ್ತು ಕರ್ನಾಟಕದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ. ಸಾಮಾನ್ಯ ದಶಪಥ ಹೆದ್ದಾರಿಗಳಿಗೂ, ಎಕ್ಸ್‌ಪ್ರೆಸ್‌ ಹೆದ್ದಾರಿಗಳಿಗೂ ಬಹಳ ವ್ಯತ್ಯಾಸವಿದೆ. ವೇಗದ ಚಾಲನೆ ಸಾಧ್ಯವಿರುವ ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ, ಅತಿ ವೇಗದ ಕಾರಣಕ್ಕೇ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತವೆ ದತ್ತಾಂಶಗಳು. ಅತಿ ವೇಗದ ಚಾಲನೆಯನ್ನು ನಿಯಂತ್ರಿಸಲು ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆಯಾದರೂ, ಅವನ್ನು ಇನ್ನಷ್ಟು ಬಿಗಿಯಾಗಿ ಅನುಷ್ಠಾನಕ್ಕೆ ತರಬೇಕು ಎಂಬ ಅಭಿಪ್ರಾಯವಿದೆ

ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ ಮಧ್ಯೆ ಇರುವ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಕಳೆದ ವಾರ ಸಂಭವಿಸಿದ ಬಸ್‌ ಬೆಂಕಿ ಅವಘಡದಲ್ಲಿ 25 ಮಂದಿ ಸಜೀವವಾಗಿ ಸುಟ್ಟುಹೋಗಿದ್ದರು. ಆನಂತರ ಆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ವಾಹನಗಳ ಅತಿವೇಗ ನಿಯಂತ್ರಣಕ್ಕೆ ಮತ್ತು ವಾಹನಗಳ ತಪಾಸಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೊದಲೂ ಅಂತಹ ಕ್ರಮಗಳು ಇದ್ದವಾದರೂ, ಈಗ ಅವುಗಳನ್ನು ಬಿಗಿಗೊಳಿಸಲಾಗಿದೆ. ಇದೇ ಮಾರ್ಚ್‌ನಲ್ಲಿ ಉದ್ಘಾಟನೆಯಾಗಿ ಬಳಕೆಗೆ ಮುಕ್ತವಾದ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಈವರೆಗೆ 500ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿವೆ. 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೆದ್ದಾರಿಯಲ್ಲೂ ಅತಿವೇಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಇರುವ ಕ್ರಮಗಳು ಹೆಚ್ಚು ವ್ಯವಸ್ಥಿತವಾಗಿವೆ.

ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯ ಉದ್ದಕ್ಕೂ ಇಂತಿಷ್ಟು ಮೀಟರ್‌ಗೆ ಎಂದು ವೇಗಮಾಪನ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗಂಟೆಗೆ 150 ಕಿ.ಮೀ. ವೇಗದಲ್ಲಿ ಚಾಲನೆ ಸಾಧ್ಯವಿರುವಂತೆ ಈ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ವಿನ್ಯಾಸ ಮಾಡಲಾಗಿದೆಯಾದರೂ, ಗರಿಷ್ಠ ವೇಗವನ್ನು ಗಂಟೆಗೆ 120 ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಚಾಲಕರು ಗರಿಷ್ಠ ವೇಗಮಿತಿಯನ್ನು ಮೀರದಂತೆ ಎಚ್ಚರವಹಿಸಲು ಪ್ರಬಲ ಕಣ್ಗಾವಲು, ದಂಡ ಮತ್ತು ವಾಹನ ಮುಟ್ಟುಗೋಲು ವ್ಯವಸ್ಥೆ ಈ ಹೆದ್ದಾರಿಯಲ್ಲಿ ಇದೆ. ಹೆದ್ದಾರಿಯ ಉದ್ದಕ್ಕೂ ಇಂತಿಷ್ಟು ಕಿ.ಮೀ.ಗೆ ಒಂದರಂತೆ ವೇಗಮಾಪನ ಮತ್ತು ವಾಹನಗಳ ನೋಂದಣಿ ಫಲಕ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗಂಟೆಗೆ 120 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಸಂಚರಿಸುವ ವಾಹನಗಳನ್ನು ಈ ಕ್ಯಾಮೆರಾಗಳು ಗುರುತಿಸುತ್ತವೆ. ಅಂತಹ ವಾಹನಗಳು ಟೋಲ್‌ ಘಟಕಗಳನ್ನು ಸಮೀಪಿಸುತ್ತಿದ್ದಂತೆಯೇ, ಸಿಬ್ಬಂದಿಗೆ ಸೂಚನೆ ನೀಡುವ ವ್ಯವಸ್ಥೆ ಇದೆ. 

ಕ್ಯಾಮೆರಾಗಳಿಂದ ಸೂಚನೆ ಪಡೆದ ಸಿಬ್ಬಂದಿ ಅಂತಹ ವಾಹನಗಳನ್ನು ತಡೆದು ನಿಲ್ಲಿಸುತ್ತಾರೆ. ಅಲ್ಲಿಯೇ ಇರುವ ಹೆದ್ದಾರಿ ಗಸ್ತು ಪೊಲೀಸ್‌ ಸಿಬ್ಬಂದಿ ವಾಹದನ ಚಾಲಕನಿಗೆ ದಂಡ ವಿಧಿಸುತ್ತಾರೆ. ಆ ಚಾಲಕ ಮತ್ತು ವಾಹನ ಈಗಾಗಲೇ ಹಲವು ಬಾರಿ ಗರಿಷ್ಠ ವೇಗಮಿತಿಯನ್ನು ಮೀರಿದ್ದರೆ, ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಚಾಲಕನ ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ. ಏಪ್ರಿಲ್‌ನಿಂದ ಈವರೆಗೆ ಅಂತಹ 234 ವಾಹನಗಳ ಚಾಲಕರಿಗೆ ದಂಡ ವಿಧಿಸಲಾಗಿದೆ. ಅತಿವೇಗ ನಿಯಂತ್ರಣಕ್ಕೆ ಬಿಗಿಕ್ರಮ ತೆಗೆದುಕೊಂಡಿರುವ ಕಾರಣದಿಂದಲೇ ಇಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಮಹಾರಾಷ್ಟ್ರ ಸಂಚಾರ ಪೊಲೀಸರು.

601 ಕಿ.ಮೀ.ನಷ್ಟು ಉದ್ದವಿರುವ ಈ ಹೆದ್ದಾರಿಯಲ್ಲಿ ಇದೇ ಜನವರಿ 1ರಿಂದ ಈವರೆಗೆ 450 ಅಪಘಾತಗಳು ಸಂಭವಿಸಿವೆ. ಜೂನ್‌ 11ರವರೆಗೆ ಈ ಹೆದ್ದಾರಿಯಲ್ಲಿ 449 ಅಪಘಾತಗಳು ಸಂಭವಿಸಿದ್ದು, ಅವುಗಳಲ್ಲಿ 70 ಜನರು ಮೃತಪಟ್ಟಿದ್ದರು. ಆದರೆ ಕಳೆದ ವಾರ ಸಂಭವಿಸಿದ ಬಸ್‌ ಬೆಂಕಿ ಅವಘಡದಲ್ಲಿ 25 ಜನ ಬಲಿಯಾಗಿದ್ದರು. ಹೀಗಾಗಿ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 95ರಷ್ಟಾಗಿದೆ. ಆದರೆ, 118 ಕಿ.ಮೀ.ನಷ್ಟು ಉದ್ದವಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಜನವರಿಯಿಂದ ಈವರೆಗೆ ಸಂಭವಿಸಿದ ಅಪಘಾತಗಳಲ್ಲಿ 132 ಜನರು ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ, ಈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 500ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. 

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಸಂಚಾರ ಪೊಲೀಸರು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅತಿವೇಗದ ಚಾಲನೆಯಲ್ಲಿರುವ ವಾಹನಗಳನ್ನು ಗುರುತಿಸಿ, ತಡೆದು ನಿಲ್ಲಿಸಿ ದಂಡ ಹಾಕಲು ಇಂಟರ್‌ಸೆಪ್ಟರ್‌ ವಾಹನಗಳನ್ನು ಹೆದ್ದಾರಿಯ ಅಲ್ಲಲ್ಲಿ ನಿಯೋಜನೆ ಮಾಡಿದ್ದಾರೆ. ಅತಿವೇಗದ ಚಾಲನೆಯನ್ನು ಗುರುತಿಸುವ ಕ್ಯಾಮೆರಾಗಳ ಅಳವಡಿಕೆಗೆ ಸಲಹೆ ನೀಡಿದ್ದಾರೆ. ವಾಹನ ಚಾಲಕರಲ್ಲಿ ಸುರಕ್ಷಿತ ಚಾಲನೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇವಿಷ್ಟೂ ಕೆಲಸಗಳನ್ನು ಪೊಲೀಸರಷ್ಟೇ ಮಾಡುತ್ತಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇನ್ನಷ್ಟೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. 

ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಲೇ–ಬೇಗಳು ಮತ್ತು ರೆಸ್ಟೋರೆಂಟ್‌ಗಳ ಬಳಿ ಮಾತ್ರವೇ ವಾಹನಗಳನ್ನು ನಿಲುಗಡೆ ಮಾಡಬೇಕು. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವವರಿಗೂ ದಂಡ ವಿಧಿಸಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದ್ದ 3,169 ವಾಹನ ಚಾಲಕರಿಗೆ ದಂಡ ವಿಧಿಸಲಾಗಿದೆ. ಚಾಲನೆ ವೇಳೆ ಲೇನ್‌ ಶಿಸ್ತು ಉಲ್ಲಂಘಿಸಿದ 2,204 ವಾಹನಗಳ ಚಾಲಕರಿಗೆ ದಂಡ ವಿಧಿಸಲಾಗಿದೆ. ಇದೂ ಸಹ ಅಪಘಾತಗಳ ಸಂಖ್ಯೆ ಕಡಿಮೆ ಇರುವ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲೂ ಇಂತಹ ವ್ಯವಸ್ಥೆ ಜಾರಿಯಾಗಬೇಕಿದೆ.

ಆಧಾರ: ಪಿಟಿಐ, ಪಿಐಬಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಟಣೆಗಳು, ರಾಷ್ಟ್ರೀಯ ರಸ್ತೆ ಕಾಂಗ್ರೆಸ್‌ ಕೈಪಿಡಿಗಳು, ಕರ್ನಾಟಕ ರಾಜ್ಯ ಸಂಚಾರ ಪೊಲೀಸ್‌ ಅಧಿಕಾರಿಗಳ ಟ್ವೀಟ್‌ಗಳು

ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬಸ್‌ ಸುಟ್ಟುಹೋಗಿರುವ ದೃಶ್ಯ
ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬಸ್‌ ಸುಟ್ಟುಹೋಗಿರುವ ದೃಶ್ಯ

ಟೈರ್‌ಗಳ ತಪಾಸಣೆ

ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಪ್ರವೇಶಿಸುವ ವಾಹನಗಳ ಟೈರ್‌ಗಳ ತಪಾಸಣೆ ನಡೆಸುವ ವ್ಯವಸ್ಥೆಯನ್ನು ಎರಡು ತಿಂಗಳ ಹಿಂದೆ ಜಾರಿಗೆ ತರಲಾಗಿದೆ. ಪ್ರತಿ ವಾಹನಗಳ ಟೈರ್‌ಗಳ ತಪಾಸಣೆ ನಡೆಸಿ ಹೆದ್ದಾರಿಯ ವೇಗದ ಚಾಲನೆಗೆ ಅವು ಯೋಗ್ಯವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸವೆದು ಹೋದ ಐದು ವರ್ಷಕ್ಕಿಂತ ಹಳೆಯದಾದ ಟೈರ್‌ಗಳು ಇರುವ ವಾಹನಗಳು ಎಕ್ಸ್‌ಪ್ರೆಸ್‌ ಹೆದ್ದಾರಿ ಪ್ರವೇಶಿಸುವುದನ್ನು ತಡೆಯಲಾಗುತ್ತದೆ.

ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೈರ್‌ ಸಿಡಿದು ನಡೆದ ಅಪಘಾತಗಳ ಸಂಖ್ಯೆಯೂ ದೊಡ್ಡದು. ಹೀಗಾಗಿ ಟೈರ್‌ಗಳ ತಪಾಸಣೆಯನ್ನು ಜಾರಿಗೆ ತರಲಾಯಿತು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ಟೈರ್‌ಗಳು ಸವೆದು ಹೋಗಿದ್ದರೆ ಮತ್ತು ಐದು ವರ್ಷಕ್ಕಿಂತ ಹಳೆಯದಾಗಿದ್ದರೆ ವೇಗದ ಚಾಲನೆ ವೇಳೆ ಅವು ಸಿಡಿದುಹೋಗುವ ಅಪಾಯದ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಅಂತಹ ವಾಹನಗಳನ್ನು ತಡೆದು ನಿಲ್ಲಿಸುತ್ತಿರುವುದರಿಂದ ಟೈರ್ ಸಿಡಿದು ಸಂಭವಿಸುವ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟೈರ್‌ಗಳ ಸ್ಥಿತಿಗತಿ ಮಾತ್ರವಲ್ಲದೆ ಟೈರ್‌ಗಳಲ್ಲಿ ಸರಿಯಾದ ಪ್ರಮಾಣದ ಗಾಳಿ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಟೈರ್‌ಗಳಲ್ಲಿ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಗಾಳಿ ಇದ್ದರೂ ದೀರ್ಘಾವಧಿಯ ವೇಗದ ಚಾಲನೆ ವೇಳೆ ಹೆಚ್ಚು ಅಪಾಯ ಇರುವುದಿಲ್ಲ. ಆದರೆ ಅಗತ್ಯಕ್ಕಿಂತ ಕಡಿಮೆ ಗಾಳಿ ಇದ್ದರೆ ರಸ್ತೆ ಮತ್ತು ಟೈರ್‌ ಮಧ್ಯೆ ಘರ್ಷಣೆ ಹೆಚ್ಚುತ್ತದೆ. ಇದರಿಂದ ಟೈರ್‌ ಬೇಗ ಬಿಸಿಯಾಗುತ್ತದೆ. ಹೆಚ್ಚು ಬಿಸಿಯಾದಾಗ ಟೈರ್‌ ಸಿಡಿಯುವ ಅಪಾಯವಿರುತ್ತದೆ. ಹೀಗಾಗಿ ಟೈರ್‌ಗಳಲ್ಲಿ ಸರಿಯಾದ ಪ್ರಮಾಣದ ಗಾಳಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ಸರಿಪಡಿಸಲಾಗುತ್ತದೆ. ಇದರಿಂದಲೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್‌ನಿಂದ ಈವರೆಗೆ ಚಾಲನಾಯೋಗ್ಯವಲ್ಲದ ಟೈರ್‌ಗಳು ಇದ್ದ 978 ವಾಹನಗಳನ್ನು ತಡೆದು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೈರ್‌ ಸರಿಯಿಲ್ಲದ ಮತ್ತು ಸರಿಯಾದ ಪ್ರಮಾಣದ ಗಾಳಿ ಇಲ್ಲದ ವಾಹನಗಳ 21000ಕ್ಕೂ ಹೆಚ್ಚು ಚಾಲಕರಿಗೆ ಆ ಬಗ್ಗೆ ಅರಿವು ಮೂಡಿಸಲಾಗಿದೆ.

ಅಡೆತಡೆಗಳೇ ಇರಬಾರದು

ಆರು ಪಥಗಳ ಹೆದ್ದಾರಿ ಇದ್ದರೂ ಅದರಲ್ಲಿ ಯಾವುದೇ ಅಡೆತಡೆ ಇರದಿದ್ದರೆ ಮಾತ್ರ ಅದನ್ನು ಎಕ್ಸ್‌ಪ್ರೆಸ್‌ ಹೆದ್ದಾರಿ ಎಂದು ವರ್ಗೀಕರಿಸಲಾಗುತ್ತದೆ. ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್‌ ಘಟಕಗಳ ಮೂಲಕ ಮಾತ್ರ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಅವಕಾಶವಿದೆ. 601 ಕಿ.ಮೀ. ಉದ್ದಕ್ಕೂ ಎಲ್ಲಿಯೂ ಜಾನುವಾರುಗಳು ಪಾದಚಾರಿಗಳು ಹೆದ್ದಾರಿ ಪ್ರವೇಶಿಸಲು ಅವಕಾಶವಿಲ್ಲ. ಬೀದಿ ನಾಯಿಗಳು ಕಾಡುಪ್ರಾಣಿಗಳೂ ಹೆದ್ದಾರಿ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಅಲ್ಲಿ ವಾಹನಗಳು ಪಾದಚಾರಿಗಳಿಗೆ ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಪರಿಸ್ಥಿತಿ ಈ ರೀತಿ ಇಲ್ಲ.

ಹೆದ್ದಾರಿಯ ಅಲ್ಲಲ್ಲಿ ತಂತಿಬೇಲಿಯನ್ನು ತುಂಡರಿಸಲಾಗಿದೆ. ಸರ್ವಿಸ್ ರಸ್ತೆಯಿಂದ ವಾಹನಗಳು ತಂತಿಬೇಲಿ ತುಂಡರಿಸಿದ ಜಾಗದಿಂದ ಹೆದ್ದಾರಿಗೆ ಪ್ರವೇಶ ಪಡೆಯುತ್ತವೆ. ಜಾನುವಾರುಗಳು ಮತ್ತು ಕಾಡು ಪ್ರಾಣಿಗಳೂ ಸುಲಭವಾಗಿ ಹೆದ್ದಾರಿ ಪ್ರವೇಶಿಸಲು ಅವಕಾಶವಿದೆ. ಅಗತ್ಯವಿರುವ ಎಲ್ಲೆಡೆ ಪಾದಚಾರಿ ಮೇಲ್ಸೇತುವ ಇಲ್ಲ. ಹೀಗಾಗಿ ಪಾದಚಾರಿಗಳು ಹೆದ್ದಾರಿ ದಾಟುವಾಗ ವಾಹನಗಳಿಗೆ ಸಿಲುಕಿದ ನಿದರ್ಶನಗಳಿವೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರೆ ಮಾತ್ರವೇ ಅದು ನಿಜವಾಗಿಯೂ ಎಕ್ಸ್‌ಪ್ರೆಸ್‌ ಹೆದ್ದಾರಿ ಎನಿಸಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT