ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?
ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?
Published 5 ಸೆಪ್ಟೆಂಬರ್ 2023, 20:52 IST
Last Updated 5 ಸೆಪ್ಟೆಂಬರ್ 2023, 20:52 IST
ಅಕ್ಷರ ಗಾತ್ರ

ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಅಣಿಯಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದು ಸಹಜವಾಗಿ ಕೆಲವು ವಕೀಲರು, ಮಹಿಳಾ ಹಕ್ಕುಗಳ ಹೋರಾಟಗಾರರರು, ಕಾನೂನು ತಜ್ಞರು, ಧಾರ್ಮಿಕ ಮುಖಂಡರು ಮತ್ತು ಜನಸಾಮಾನ್ಯರನ್ನೂ ಚಿಂತೆಗೆ ದೂಡಿದೆ.

ಹಾಗಿದ್ದರೆ, ಏನಿದು ಏಕರೂಪ ನಾಗರಿಕ ಸಂಹಿತೆ ಮತ್ತು ನಾವು ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು?

ಈ ಸಂಹಿತೆಯ ಬೇರುಗಳು ನಮ್ಮ ಸಂವಿಧಾನದಲ್ಲಿಯೇ ಇವೆ. ‘ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಬಹುದು’ ಎಂದು ನಮ್ಮ ಸಂವಿಧಾನದ 44ನೇ ವಿಧಿ ಹೇಳುತ್ತದೆ. ಆದರೆ, ಈ ಸಂಹಿತೆಯನ್ನು ಹೇಗೆ ಜಾರಿ ಮಾಡಬೇಕು ಅಥವಾ ಈ ಸಂಹಿತೆಯು ಹೇಗೆ ಕೆಲಸ ಮಾಡುಬೇಕು ಎನ್ನುವ ಕುರಿತು ಈ ವಿಧಿಯಲ್ಲಿ ಸ್ಪಷ್ಟವಾದ ವಿವರಣೆ ಇಲ್ಲ.

ವಿವಾಹ, ವಿಚ್ಛೇದನ, ಮಕ್ಕಳ ಪಾಲನೆ–ನಿರ್ವಹಣೆ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿ ಆಯಾ ಧರ್ಮಕ್ಕೆ ಅನುಗುಣವಾದ ಕಾನೂನುಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿವೆ. ಈ ಎಲ್ಲವೂ ಆಯಾ ಧರ್ಮದ ವೈಯಕ್ತಿಕ ಕಾನೂನುಗಳಿಗೆ ಅನುಗುಣವಾಗಿ ಇದೆ. ಹಿಂದೂಗಳಿಗೆ, ಕ್ರೈಸ್ತರಿಗೆ, ಪಾರ್ಸಿಗಳಿಗೆ ಇಂತಹ ಪ್ರತ್ಯೇಕ ಕಾಯ್ದೆಗಳಿವೆ. ಮುಸ್ಲಿಮರಿಗೂ ವೈಯಕ್ತಿಕ ಕಾನೂನುಗಳಿದ್ದು, ಅವೆಲ್ಲವೂ ಸಂಹಿತೆಯಾಗಿಲ್ಲ. ಇತ್ತೀಚೆಗಷ್ಟೇ ತಿದ್ದುಪಡಿ ತಂದುದರಿಂದ, ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕಿನ ರಕ್ಷಣೆ) ಕಾಯ್ದೆ–1986 ಮಾತ್ರ ಸಂಹಿತೆಯ ರೂಪ ಪಡೆದಿದೆ. ಈ ವಿವಿಧ ಧಾರ್ಮಿಕ ವೈಯಕ್ತಿಕ ಕಾನೂನುಗಳ ಜೊತೆಯಲ್ಲಿಯೇ ವಿಶೇಷ ವಿವಾಹ ಕಾಯ್ದೆ–1954 ಅನ್ನು ಕೂಡ ನಾವು ರೂಪಿಸಿಕೊಂಡಿದ್ದೇವೆ. ಯಾವುದೇ ಧರ್ಮದ ವ್ಯಕ್ತಿಗಳು ಈ ಕಾಯ್ದೆಯ ಅಡಿಯಲ್ಲಿ ವಿವಾಹವಾಗಬಹುದು. ಈ ಕಾಯ್ದೆಯು ವಿವಾಹ, ವಿಚ್ಛೇದನ ಹಾಗೂ ಮಕ್ಕಳ ಪಾಲನೆಯ ಹಕ್ಕುಗಳನ್ನು ನಿರ್ವಹಿಸುತ್ತದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಅಂದ ತಕ್ಷಣ ಎಲ್ಲಾ ಧರ್ಮದ ಜನರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ ಎಂಬ ಸಾಮಾನ್ಯ ಗ್ರಹಿಕೆ ಜನರದ್ದು. ಆದರೆ, ಕೌಟುಂಬಿಕ ಕಾನೂನುಗಳಲ್ಲಿ ಲಿಂಗ ಸಮಾನತೆ ಇರಬೇಕು ಎಂಬುದು ಯುಸಿಸಿ ಜಾರಿಯ ಹಿಂದಿನ ಉದ್ದೇಶ. ಯುಸಿಸಿ ಜಾರಿ ಹಿಂದಿನ ಉದ್ದೇಶ ಸಮಾನತೆಯೇ ಆಗಿದ್ದರೆ, ಅದನ್ನು ಜಾರಿಗೆ ತರುವ ಮುನ್ನ ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿರುವ ‘ಸಮಾನವಾಗಿ ಕಾಣುವ’ ಮತ್ತು ‘ತಾರತಮ್ಯವಿಲ್ಲದ’ ಸ್ಥಿತಿಯನ್ನು ಅನುಷ್ಠಾನಕ್ಕೆ ತರಬೇಕು.

ಯುಸಿಸಿಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳಲ್ಲಿ ಕೆಲವು ಇಂತಿವೆ

ಪ್ರಸ್ತಾವಿತ ಯುಸಿಸಿ ಕಡ್ಡಾಯವೇ ಅಥವಾ ಸ್ವಯಂಪ್ರೇರಿತವೇ ಎಂಬುದು ಮೊದಲ ಪ್ರಶ್ನೆ. ಇದನ್ನು ಭವಿಷ್ಯದಲ್ಲಿ ಸಂಸತ್ತು ನಿರ್ಧರಿಸಬೇಕು ಎಂದು ಸಂವಿಧಾನ ರಚನೆಯ ವೇಳೆಯೇ ನಿರ್ಧರಿಸಲಾಗಿತ್ತು. ಯಾವ ವ್ಯಕ್ತಿಯು ಈ ಸಂಹಿತೆಗೆ ಬದ್ಧವಾಗಿರುತ್ತೇನೆ ಎಂದು ಘೋಷಿಸಿಕೊಳ್ಳುತ್ತಾನೋ ಅಂಥ ವ್ಯಕ್ತಿಗೆ ಮಾತ್ರ ಈ ಕಾನೂನು ಅನ್ವಯವಾಗುವಂತೆ ಕಾನೂನಿನಲ್ಲಿ ಅವಕಾಶ ಮಾಡಿಕೊಡುವ ಕೆಲಸವನ್ನು ಸಂಸತ್ತು ಮಾಡಬೇಕು. ಇದು ಯುಸಿಸಿ ಜಾರಿಯ ಆರಂಭಿಕ ಸ್ವರೂಪವಾಗಿರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆ ಪ್ರಕಾರ ನೋಡುವುದಾದರೆ ಸಂಪೂರ್ಣವಾಗಿ ಸ್ವಯಂಪ್ರೇರಿತವೇ ಆಗಿರುವ ವಿಶೇಷ ವಿವಾಹ ಕಾಯ್ದೆ–1954 ನಮ್ಮಲ್ಲಿ ಈಗಾಗಲೇ ಇದೆ.

90ರ ದಶಕದಲ್ಲೂ ಯುಸಿಸಿಯ ಚರ್ಚೆ ಮುನ್ನೆಲೆಗೆ ಬಂದಿತ್ತು. ಯುಸಿಸಿ ಜಾರಿಗೆ ಬಂದರೆ, ಅದರಿಂದ ವಾಪಸಾಗುವ ಆಯ್ಕೆಯನ್ನೂ ಅದು ಹೊಂದಿರಬೇಕು ಎಂಬ ಒತ್ತಾಯ ಆಗ ಕೇಳಿಬಂದಿತ್ತು. ‘ಯುಸಿಸಿಯಲ್ಲಿ ‘ವಾಪಸಾತಿ ಆಯ್ಕೆ’ಯನ್ನು ನೀಡಬೇಕು. ಒಬ್ಬ ವ್ಯಕ್ತಿ ಯುಸಿಸಿಯನ್ನು ಒಪ್ಪಿಕೊಂಡಿದ್ದು ಮುಂದೊದು ದಿನ ಅವನು ತನ್ನ ಧರ್ಮದ ವೈಯಕ್ತಿಕ ಕಾನೂನುಗಳಿಗೆ ಮರಳಬೇಕು ಎಂದುಕೊಂಡರೆ, ಹಾಗೆ ಮರಳುವ ಆಯ್ಕೆಯನ್ನು ಯುಸಿಸಿಯಲ್ಲಿ ಸೇರಿಸಿರಬೇಕು’ ಎಂದು ಮಹಿಳಾ ಹಕ್ಕುಗಳ ಕಾರ್ಯನಿರತ ಗುಂಪೊಂದು ಒತ್ತಾಯಿಸಿತ್ತು. ಈಗ ಜಾರಿಯಲ್ಲಿರುವ ವಿಶೇಷ ವಿವಾಹ ಕಾಯ್ದೆಯಲ್ಲಿ ‘ಆಯ್ಕೆ’ಯ (ಆಪ್ಟ್‌ ಇನ್‌) ಅವಕಾಶವಷ್ಟೇ ಇದೆ. ವಿಶೇಷ ವಿವಾಹ ಕಾಯ್ದೆಯಿಂದ ವಾಪಸಾಗಲು (ಆಪ್ಟ್‌ ಔಟ್‌) ಅವಕಾಶವಿಲ್ಲ. ಆದರೆ ಯುಸಿಸಿಯನ್ನು ಜಾರಿಗೆ ತರುವಾಗ, ಅದರಿಂದ ವೈಯಕ್ತಿಕ ಕಾನೂನುಗಳಿಗೆ ವಾಪಸಾಗುವ ಅವಕಾಶವನ್ನು ಸೇರಿಸಲೇಬೇಕು. 

ಮಾಯ್ರಾ ಅಲಿಯಾಸ್‌ ವೈಷ್ಣವಿ ವಿಲಾಸ್‌ ಶಿರ್‌ಶಿಕಾರ್‌ ಮತ್ತು ಇತರರು ಹಾಗೂ ಉತ್ತರ ಪ್ರದೇಶ ಸರ್ಕಾರದ ನಡುವಣ ಪ್ರಕರಣದಲ್ಲಿ, ಕೆಲವು ಅಂತರಧರ್ಮೀಯ ಮದುವೆಗಳ ವಿಚಾರಣೆ ನಡೆಸುವಾಗ 2021ರಲ್ಲಷ್ಟೇ ಯುಸಿಸಿಯ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ಚರ್ಚಿಸಿತ್ತು. ಯುಸಿಸಿಯ ಅಗತ್ಯವಿದೆ. ಆದರೆ ಅದು, 75 ವರ್ಷಗಳ ಹಿಂದೆ ಅಂಬೇಡ್ಕರ್ ಅವರು ಹೇಳಿದಂತೆ ಸಂಪೂರ್ಣ ಸ್ವಯಂಪ್ರೇರಿತ ಸ್ವರೂಪದ್ದು ಆಗಬಾರದು. ಅಂಬೇಡ್ಕರ್ ಹೇಳಿದ್ದು ಅಂದಿನ ಸಂದರ್ಭಕ್ಕೆ ಅನುಗುಣವಾಗಿತ್ತು. ಆದರೆ ಈಗ ಹಾಗೆ ಮಾಡಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ‘ಆಯ್ಕೆ ಮಾಡಿಕೊಳ್ಳುವ’ ಮತ್ತು ‘ವೈಯಕ್ತಿಕ ಕಾನೂನುಗಳಿಗೆ ಮರಳುವ’ ಅವಕಾಶಗಳು ಇರುವ ಯುಸಿಸಿಯೇ ಹೆಚ್ಚು ಕಾರ್ಯಸಾಧ್ಯವಾದುದು. ಯುಸಿಸಿ ಬಗ್ಗೆ ಚರ್ಚೆ ಆರಂಭಿಸುವ ಮುನ್ನ ಈ ಎಲ್ಲಾ ವಿವರಗಳು ಲಭ್ಯವಾಗಬೇಕು. 

ಎರಡನೆಯದಾಗಿ, ಕಾನೂನು ಸುಧಾರಣೆ ಮೂಲಕ ಲಿಂಗ ಸಮಾನತೆ ಸಾಧಿಸಬೇಕಿರುವ ಅವಶ್ಯಕತೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮಾತ್ರ ಎಂಬ ಗ್ರಹಿಕೆ ಇದೆ. ಆದರೆ, ವಾಸ್ತವದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲಾ ಧರ್ಮಗಳಲ್ಲೂ ಕಾನೂನು ಸುಧಾರಣೆ ತರುವ ಅವಶ್ಯಕತೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 

ಮುಸ್ಲಿಮರ ವೈಯಕ್ತಿಕ ಕಾನೂನಿನಡಿಯಲ್ಲಿ ಬಹುಪತ್ನಿತ್ವಕ್ಕೆ ಇರುವ ಅವಕಾಶವನ್ನು ತೊಡೆದುಹಾಕಬೇಕು ಎಂಬ ಆಗ್ರಹವಿರುವಂತೆಯೇ, ಹಿಂದೂ ಕಾನೂನುಗಳಲ್ಲಿಯೂ ಸುಧಾರಿಸಬೇಕಾದ ಹಲವು ಅಂಶಗಳಿವೆ. ಹಿಂದೂ ವಿವಾಹ ಕಾಯ್ದೆಯಲ್ಲಿರುವ ‘ದಾಂಪತ್ಯದ ಹಕ್ಕು ಮರುಸ್ಥಾಪನೆ’ ಅಂತಹ ಅಂಶಗಳಲ್ಲಿ ಒಂದು. ದಬ್ಬಾಳಿಕೆ ಸ್ವರೂಪದ ವೈವಾಹಿಕ ಸಂಬಂಧದಿಂದ ಮಹಿಳೆ ಹೊರಬರುವುದನ್ನು ದಾಂಪತ್ಯದ ಹಕ್ಕು ತಡೆಯುತ್ತದೆ. ಉತ್ತರಾಧಿಕಾರವನ್ನು ನಿರ್ಧರಿಸುವ ಹಿಂದೂ ಅವಿಭಕ್ತ ಕುಟುಂಬಗಳ ಅಧಿಕಾರವೂ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿನ ದೊಡ್ಡ ಸವಾಲಾಗಿದೆ. ಯುಸಿಸಿ ಅಡಿಯಲ್ಲಿ ಈ ಎಲ್ಲಾ ಅಂಶಗಳನ್ನೂ ಸುಧಾರಣೆ ಮಾಡಲಾಗುವುದೇ?

ಎಲ್‌ಜಿಬಿಟಿಕ್ಯೂ ಸಮುದಾಯದ ಜನರ ವಿವಾಹ, ದತ್ತು ಮತ್ತು ಇತರೆ ವಿಷಯಗಳನ್ನೂ ಯುಸಿಸಿ ಒಳಗೊಳ್ಳುತ್ತದೆಯೇ ಎನ್ನುವುದು ಮೂರನೆಯ ಮತ್ತು ಬಹುಮುಖ್ಯವಾದ ಪ್ರಶ್ನೆ.

ಕಾನೂನು ಸುಧಾರಣೆ ಮೂಲಕ ಲಿಂಗ ಸಮಾನತೆ ಸಾಧಿಸಬೇಕಿರುವ ಅವಶ್ಯಕತೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮಾತ್ರ ಎಂಬ ಗ್ರಹಿಕೆ ಇದೆ. ಆದರೆ, ವಾಸ್ತವದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲಾ ಧರ್ಮಗಳಲ್ಲೂ ಕಾನೂನು ಸುಧಾರಣೆ ತರುವ ಅವಶ್ಯಕತೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ವಿವಾಹದ ಸಮಾನ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್‌ ವಾದ–ಪ್ರತಿವಾದವನ್ನು ಆಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲೇ ಯುಸಿಸಿ ಚರ್ಚೆ ಮುನ್ನೆಲೆಗೆ ಬಂದಿದೆ. 1954ರ ವಿಶೇಷ ವಿವಾಹ ಕಾಯ್ದೆಯ ಅಂಶಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕೆಲಸ ನ್ಯಾಯಾಲಯದ್ದಲ್ಲ, ಬದಲಿಗೆ ಕಾನೂನು ತರುವ ಮೂಲಕ ಇದನ್ನು ನಿರ್ಧರಿಸುವ ಅಧಿಕಾರ ಸಂಸತ್ತಿನದ್ದು ಎಂದೇ ಕೇಂದ್ರ ಸರ್ಕಾರ ವಾದಿಸುತ್ತಿದೆ. 

ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ತನ್ನದೇ ಎಂಬುದು ಸರ್ಕಾರದ ದೃಢ ನಿಲುವಾದರೆ, ಪ್ರಸ್ತಾವಿತ ಯುಸಿಸಿ ಸಲಿಂಗ ವಿವಾಹ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವಿವಾಹದ ಹಕ್ಕುಗಳನ್ನೂ ಒಳಗೊಂಡಿರಬೇಕಿತ್ತು. ಆದರೆ, ಯುಸಿಸಿ ಕುರಿತಾದ ಸರ್ಕಾರದ ಪ್ರಸ್ತಾವ, ಸಂವಾದಗಳೆಲ್ಲವೂ ಈ ವಿಚಾರದಲ್ಲಿ ಸಂಶಯಕ್ಕೆ ಎಡೆಮಾಡಿಕೊಡುವಂತೆ ಮೌನವಹಿಸಿವೆ.

ಕೌಟುಂಬಿಕ ಕಾನೂನುಗಳಲ್ಲಿ ಲಿಂಗ ಸಮಾನತೆ ಸಾಧಿಸಬೇಕು ಎಂಬುದರ ಜತೆಗೆ ಬೇರೆ ಜಾತಿ, ಬೇರೆ ಧರ್ಮದವರನ್ನು ಮದುವೆ ಆಗುವ ಮೂಲಭೂತ ಹಕ್ಕಿನ ಕುರಿತು ಮೊದಲು ಕಾನೂನು ರೂಪಿಸಬೇಕಾಗಿದೆ. ಮನೆಯವರನ್ನು, ಸಮಾಜವನ್ನು ಎದುರು ಹಾಕಿಕೊಂಡು ಅಂತರ್ಜಾತಿ, ಅಂತರಧರ್ಮೀಯ ವಿವಾಹ ಆಗುವವರ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಬೇಕಿದೆ. ಪ್ರಸ್ತಾವಿತ ಯುಸಿಸಿ ಈ ಎಲ್ಲಾ ಅಂಶಗಳನ್ನು ಒಳಗೊಳ್ಳುವುದೇ?

ಈ ಹೊತ್ತಿನ ಮಟ್ಟಿಗೆ ಏಕರೂಪ ನಾಗರಿಕ ಸಂಹಿತೆಯು ಖಾಲಿ ವಾಗ್ದಾನವಷ್ಟೆ. ಈ ಸಂಹಿತೆಯಲ್ಲಿ ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚಿವೆ. ಲಿಂಗ ಸಮಾನತೆಯ ಸಮಾಜದ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದಾದರೆ, ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇದಕ್ಕೆ ಚರ್ಚೆ ನಡೆಯಬೇಕಿದೆ ಮತ್ತು ಒಮ್ಮತ ಮೂಡಬೇಕಿದೆ. ಹಾಗಿದ್ದಾಗ ಮಾತ್ರವೇ ಈ ಏಕರೂಪ ನಾಗರಿಕ ಸಂಹಿತೆಯಲ್ಲಿ ಏನೇನಿರಬೇಕು ಎಂಬುದರ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯ.

ಲೇಖಕಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ

ಕಾಲ ಪಕ್ವವಾಗಿಲ್ಲ

ಏಕರೂಪ ನಾಗರಿಕ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಭಾರತದ ಸಂವಿಧಾನದಲ್ಲಿ ಹೇಳಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸರ್ಕಾರಗಳು ಪ್ರಯತ್ನ ಮಾಡಬೇಕು ಎಂಬ ಅಂಶ ಸಂವಿಧಾನದಲ್ಲಿದೆ.  ಈ ವಿಷಯ ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಅಲ್ಲಿ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗದ ಕಾರಣಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಕಡ್ಡಾಯ ಮಾಡಲಿಲ್ಲ. ಯುಸಿಸಿಯ ಸ್ವರೂಪ ಏನು ಎಂಬುದರ ಕುರಿತು ಸಂವಿಧಾನ ಅಥವಾ ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯದ ತೀರ್ಪಿನಲ್ಲಿ ಸ್ಪಷ್ಟಪಡಿಸಿಲ್ಲ. ಅದರ ಸ್ವರೂಪ ಏನು ಎಂಬುದು ಮೊದಲು ಸ್ಪಷ್ಟವಾಗಬೇಕು. ಪ್ರಧಾನಿ, ಉಪ ರಾಷ್ಟ್ರಪತಿ, ಆಡಳಿತ ಪಕ್ಷದ ಮುಖಂಡರಲ್ಲೇ ಈ ಬಗ್ಗೆ ಸ್ಪಷ್ಟತೆ ಇಲ್ಲ.

ಏಕರೂಪ ನಾಗರಿಕ ಸಂಹಿತೆಗೆ ನನ್ನ ವಿರೋಧ ಇಲ್ಲ. ಆದರೆ, ಅದನ್ನು ತರಲು ಈಗ ಕಾಲ ಪಕ್ವವಾಗಿಲ್ಲ. ಕೆಲವು ಪ್ರಮುಖ ವಿಷಯಗಳಲ್ಲಿ ಸಮಾನ ಸಂಹಿತೆಯನ್ನು ತರುವ ಪ್ರಯತ್ನ ಆಗಬೇಕು. ಮಹಿಳೆಯರಿಗೆ ಜೀವನಾಂಶ, ದತ್ತು ಪಡೆಯುವುದು, ಆಸ್ತಿ ಹಕ್ಕು ಮತ್ತಿತರ ವಿಷಯಗಳಲ್ಲಿ ಏಕರೂಪತೆ ಇರಬೇಕೆಂಬ ತೀರ್ಪುಗಳು ಬಂದಿವೆ. ಅವುಗಳ ಆಧಾರದಲ್ಲಿ ಸಮಾನ ಸಂಹಿತೆಗಳನ್ನು (ಕೋಡ್‌) ತರಬೇಕು. ಆ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿಗೆ ವೇದಿಕೆ ಸಿದ್ಧಗೊಳಿಸಬೇಕು. ಅದರ ಜತೆಯಲ್ಲೇ ನಮ್ಮಲ್ಲಿ ಇರುವ ಧರ್ಮಗಳಲ್ಲಿನ ಅವೈಜ್ಞಾನಿಕ, ಅಪ್ರಸ್ತುತ ಅಂಶಗಳಿಗೆ ತಿಲಾಂಜಲಿ ನೀಡಿ, ಸುಧಾರಣೆ ತರುವ ಕೆಲಸ ಧರ್ಮ ಗುರುಗಳಿಂದ ಆರಂಭವಾಗಬೇಕು.

–ಎಚ್.ಎನ್.‌ ನಾಗಮೋಹನ್‌ ದಾಸ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ಸರ್ವಧರ್ಮಗಳ ಅಭಿಪ್ರಾಯ ಸಂಗ್ರಹವಾಗಲಿ

ಏಕರೂಪ ನಾಗರಿಕ ಸಂಹಿತೆ ಭಾರತದ ಸಂವಿಧಾನ ಕರ್ತೃಗಳ ಒಂದು ಅದ್ವಿತೀಯ ಪರಿಕಲ್ಪನೆ. ಇದನ್ನು ನ್ಯಾಯಾಲಯಗಳ ಮುಖೇನ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಇದನ್ನು ನಿಭಾಯಿಸುವ ಜವಾಬ್ದಾರಿ ಕೇವಲ ಸರ್ಕಾರಕ್ಕೆ ಬಿಟ್ಟದ್ದು. ಆದರೆ, ಈ ಪರಿಕಲ್ಪನೆ ಇನ್ನೂ ಕಾರ್ಯಾನುಷ್ಠಾನಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಧರ್ಮೀಯ ಮತ್ತು ಸಾಂಸ್ಕೃತಿಕ ವೈವಿಧ್ಯ ಹಾಳಾಗುತ್ತದೆ ಎಂಬ ಕೂಗು. ಹಿಂದೂ ಸಂಪ್ರದಾಯದಲ್ಲಿನ ಆಸ್ತಿ ಉತ್ತರದಾಯಿತ್ವ, ಕೇರಳದಲ್ಲಿ ಚಾಲ್ತಿಯಲ್ಲಿರುವ ಮರಮಕ್ಕತಾಯಂ ಕಾಯ್ದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಬರುವ ಅಳಿಯ ಕಟ್ಟು( ಸಂತಾನ ನೀತಿ), ಮಿತಾಕ್ಷರ ಮತ್ತು ದಯಾಬಾಗ, ವರ್ಗವಿಭಜನೆ ನೀತಿಗಳು ಮುಂತಾದ ವಿಭಿನ್ನತೆಗಳು ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದರೆ ನೀತಿ ಬಾಹಿರವಾಗುತ್ತವೆ.

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಸಭಾ ಬಲದ ಆಧಾರದಲ್ಲಿ ಜಾರಿಗೆ ತರುವ ಮುನ್ನ ಸರ್ವಧರ್ಮಗಳ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಸಹಯೋಗದೊಂದಿಗೆ ತಂದರೆ ಏಕಭಾರತೀಯತೆ ಸ್ಥಾಪಿತವಾಗುವುದರಲ್ಲಿ ಸಂದೇಹವಿಲ್ಲ. ಕೇವಲ ಸಂಸತ್‌ ಬಲದ ಆಧಾರದಲ್ಲಿ ಔಪಚಾರಿಕ ಕಾನೂನಿನ ರೂಪದಲ್ಲಿ ಇದನ್ನು ಹೇರಿದರೆ ಖಂಡಿತವಾಗಿಯೂ ವಿಷಮ ಪರಿಸ್ಥಿತಿ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹ ಬೇಡ. 

–ಎಂ.ಎಸ್.ಶ್ಯಾಮಸುಂದರ್‌, ಹಿರಿಯ ವಕೀಲ, ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT