ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

Published : 24 ಜನವರಿ 2023, 23:04 IST
ಫಾಲೋ ಮಾಡಿ
Comments

ಕ್ಯಾ ಲಿಫೋರ್ನಿಯಾದ ಕ್ಲಬ್‌ ಒಂದರಲ್ಲಿ ಬಂದೂಕುಧಾರಿಯೊಬ್ಬ ಬೇಕಾಬಿಟ್ಟಿ ಗುಂಡು ಹಾರಿಸಿ 11 ಜನರನ್ನು ಶನಿವಾರ ಹತ್ಯೆ ಮಾಡಿದ್ದ. ಒಂಬತ್ತು ಜನರನ್ನು ಗಾಯಗೊಳಿಸಿದ್ದ. ಅದಾಗಿ, ಮೂರನೇ ದಿನ ಅಂದರೆ ಮಂಗಳವಾರ ಸ್ಯಾನ್‌ಫ್ರಾನ್ಸಿಸ್ಕೊದ ತೋಟವೊಂದರಲ್ಲಿ ವ್ಯಕ್ತಿಯೊಬ್ಬ ನಾಲ್ಕು ಜನರನ್ನು ಕೊಂದಿದ್ದಾನೆ ಮತ್ತು ಇನ್ನೊಂದು ಪ್ರಕರಣದಲ್ಲಿ ಮತ್ತೊಬ್ಬ ಬಂದೂಕುಧಾರಿ ಮೂವರನ್ನು ಕೊಂದಿದ್ದಾನೆ. ಎಂಟು ದಿನದಲ್ಲಿ ಸಾಮೂಹಿಕ ಬಂದೂಕುದಾಳಿಯ ಮೂರು ಪ್ರಕರಣಗಳಾಗಿವೆ. ಫ್ಯೂ ರಿಸರ್ಚ್‌ ಸೆಂಟರ್‌ ನಡೆಸಿದ್ದ ಸಮೀಕ್ಷೆಯೊಂದರಲ್ಲಿ ದೇಶವು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಯಾವುದು ಎಂಬ ಪ್ರಶ್ನೆ ಕೇಳಲಾಗಿತ್ತು. ಶೇ 48ರಷ್ಟು ಮಂದಿ ಬಂದೂಕು ಹಿಂಸೆಯೇ ಅತ್ಯಂತ ದೊಡ್ಡ ಸಮಸ್ಯೆ ಎಂದಿದ್ದರು. ಶೇ 24ರಷ್ಟು ಮಂದಿ ದೊಡ್ಡ ಸಮಸ್ಯೆ ಎಂದಿದ್ದರು.

ಅಮೆರಿಕದಲ್ಲಿ ನಡೆಯುತ್ತಿರುವ ಸಾಮೂಹಿಕ ಬಂದೂಕುದಾಳಿಗಳನ್ನು ಗಮನಿಸಿದರೆ ಈ ಜನರ ಪ್ರತಿಕ್ರಿಯೆ ಸಮರ್ಪಕವಾಗಿದೆ ಎನಿಸುತ್ತದೆ. 2022ರಲ್ಲಿ 648 ಬಂದೂಕುದಾಳಿ ಪ್ರಕರಣಗಳು ನಡೆದಿವೆ. ಬಂದೂಕು ದಾಳಿಗಳಿಗೆ ಇಂತಹುದೇ ಕಾರಣ ಎಂದು ಹೇಳಲಾಗದು. ಆಟಿಕೆಗಳಿಗಿಂತ ಸುಲಭವಾಗಿ ಬಂದೂಕುಗಳು ದೊರೆಯುವುದು ಈ ರೀತಿಯ ಹತ್ಯಾಕಾಂಡಗಳಿಗೆ ಮುಖ್ಯ ಕಾರಣ. ತಮ್ಮ ವ್ಯಕ್ತಿತ್ವವೇ ಶ್ರೇಷ್ಠ ಎಂಬ ಅತಿಯಾದ ಭ್ರಮೆ ಇನ್ನೊಂದು ಕಾರಣ. ಎಲ್ಲರಿಂದ ದೂರವಾದ ವ್ಯಕ್ತಿಗಳು ತಮ್ಮ ವ್ಯಕ್ತಿತ್ವಕ್ಕೂ ಮಹತ್ವ ಇದೆ ಎಂದು ತೋರಿಸಬೇಕು ಎಂಬ ಭ್ರಮೆಯಲ್ಲಿಯೂ ಬಂದೂಕು ಕೈಗೆತ್ತಿಕೊಳ್ಳುತ್ತಾರೆ. ಬಿಳಿಯರೇ ಶ್ರೇಷ್ಠ ಎಂಬ ಭಾವನೆಯಿಂದಾಗಿ ಕೂಡ ಬಂದೂಕುದಾಳಿಗಳು ನಡೆದಿವೆ. ಮಾನಸಿಕ ಸಮಸ್ಯೆಯೂ ಇಂತಹ ಹತ್ಯೆಗಳಿಗೆ ಕಾರಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಂದೂಕುದಾಳಿಯ ಹೆಚ್ಚುತ್ತಲೇ ಇದೆ. ಹಾಗಾಗಿ ಬಂದೂಕು ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬ ಸಲಹೆಗಳು ಕೇಳಿಬಂದಿವೆ. ಇದರ ಪರಿಣಾಮವಾಗಿ ಬಂದೂಕುಗಳು ಮುಂದೆ ದೊರೆಯಲಿಕ್ಕಿಲ್ಲ ಎಂದು ಭಾವಿಸಿದ ಜನರು ಹೆಚ್ಚು ಹೆಚ್ಚಾಗಿ ಬಂದೂಕು ಖರೀದಿ ಮಾಡುತ್ತಿದ್ದಾರೆ.

ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್ ಪ್ರಿವೆನ್‌ಷನ್‌ ನಡೆಸಿದ ಅಧ್ಯಯನದಲ್ಲಿ ಸಾಮೂಹಿಕ ಬಂದೂಕು ದಾಳಿಗೆ ಸಂಬಂಧಿಸಿ ಕುತೂಹಲಕರ ಅಂಶಗಳು ತಿಳಿದು ಬಂದಿವೆ. 2014ರಿಂದ 2019ರ ವರೆಗೆ ನಡೆದ 128 ಸಾಮೂಹಿಕ ಬಂದೂಕು ದಾಳಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ದಾಳಿಕೋರರ ಗುರುತು ಪತ್ತೆಯಾಗದ ಪ್ರಕರಣಗಳನ್ನು ಅಧ್ಯಯನದಿಂದ ಹೊರಗೆ ಇರಿಸಲಾಗಿತ್ತು. ಹೀಗಾಗಿ ಅಧ್ಯಯನಕ್ಕೆ 110 ಪ್ರಕರಣಗಳು ದೊರಕಿದ್ದವು.

110 ಪ್ರಕರಣಗಳ ಪೈಕಿ 65 ಪ್ರಕರಣಗಳಲ್ಲಿ (ಶೇ 59.1) ದಾಳಿ ನಡೆಸಿದ ವ್ಯಕ್ತಿಯ ಸಂಗಾತಿ ಅಥವಾ ಕುಟುಂಬದ ಸದಸ್ಯರೇ ಮೃತಪಟ್ಟಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆ. 10 ಪ್ರಕರಣಗಳ (ಶೇ 9.1) ಬಂದೂಕುಧಾರಿಗಳಿಗೆ ಕೌಟುಂಬಿಕ ಹಿಂಸೆ ಎಸಗಿದ ಹಿನ್ನೆಲೆ ಇತ್ತು. ಉಳಿದ ಶೇ 31.8ರಷ್ಟು ಪ್ರಕರಣಗಳಿಗೆ ಮಾತ್ರ ಕೌಟುಂಬಿಕ ಹಿಂಸೆಯ ಹಿನ್ನೆಲೆ ಇರಲಿಲ್ಲ. 12 ಪ್ರಕರಣಗಳಲ್ಲಿ ಒಬ್ಬರಿಗಿಂತ ಹೆಚ್ಚು ಬಂದೂಕು ಧಾರಿಗಳಿದ್ದರು. ಮೂರು ಪ್ರಕರಣಗಳಲ್ಲಿ ಭಾಗಿಯಾದವರು ಹಿಂದೆ ಕೌಟುಂಬಿಕ ಹಿಂಸೆ ಎಸಗಿದವರು. ಎರಡು ಪ್ರಕರಣಗಳಿಗೆ ಕೌಟುಂಬಿಕ ಹಿಂಸೆಯ ನಂಟು ಇತ್ತು.

ಹಾಗಾಗಿ, ಕೌಟುಂಬಿಕ ಹಿಂಸೆಯೇ ಇಂತಹ ದಾಳಿಗಳಿಗೆ ಮುಖ್ಯ ಕಾರಣ ಎಂಬ ನಿರ್ಧಾರಕ್ಕೆ ಅಧ್ಯಯನವು ಬಂದಿತ್ತು. ಈ ಕಾರಣಕ್ಕಾಗಿಯೇ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿಗೆ ಬಂದೂಕು ಮಾರುವುದಕ್ಕೆ ನಿರ್ಬಂಧವೂ ಇದೆ.

ಸಾರ್ವಜನಿಕ ಬಂದೂಕು ದಾಳಿ ಏರಿಕೆ

ಎಲ್ಲಾ ದಾಳಿಗಳನ್ನು ಅಮೆರಿಕವು ಸಾರ್ವಜನಿಕ ಬಂದೂಕು ದಾಳಿ ಎಂದು ಪರಿಗಣಿಸುವುದಿಲ್ಲ. ಈ ಕಾರಣದಿಂದಲೇ, ಇಂತಹ ದಾಳಿಗಳ ಬಗ್ಗೆ ಜಾಗತಿಕ ಅಧ್ಯಯನ ಸಂಸ್ಥೆಗಳು ನೀಡುವ ಅಂಕಿಅಂಶಗಳಿಗೂ ಮತ್ತು ಅಮೆರಿಕದ ಸರ್ಕಾರವು ನೀಡುವ ಅಂಕಿಅಂಶಗಳಿಗೂ ತಾಳೆಯಾಗುವುದಿಲ್ಲ. 2022ರಲ್ಲಿ ಅಮೆರಿಕದಾದ್ಯಂತ ಒಟ್ಟು 648 ‘ಸಾರ್ವಜನಿಕ ಬಂದೂಕು ದಾಳಿ’ ಪ್ರಕರಣಗಳು ನಡೆದಿವೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. 2022ಕ್ಕೆ ಸಂಬಂಧಿಸಿದ ವರದಿಯನ್ನು ಎಫ್‌ಬಿಐ ಇನ್ನೂ ಬಿಡುಗಡೆ ಮಾಡಿಲ್ಲ. ಅಮೆರಿಕದಲ್ಲಿ ಬಂದೂಕು ಮತ್ತು ಪಿಸ್ತೂಲು ಬಳಸಿಕೊಂಡು ನಡೆಸಿದ ಕೃತ್ಯಗಳ ವಾರ್ಷಿಕ ಸರಾಸರಿ ಸಂಖ್ಯೆ 2 ಲಕ್ಷದಷ್ಟಿದೆ. 2021ರಲ್ಲಿ ಇಂತಹ ಒಟ್ಟು 2.08 ಲಕ್ಷ ಕೃತ್ಯಗಳು ನಡೆದಿವೆ. ಆದರೆ ಇವುಗಳಲ್ಲಿ ‘ಸಾರ್ವಜನಿಕ ಬಂದೂಕು ದಾಳಿ’ ಪ್ರಕರಣಗಳ ಸಂಖ್ಯೆ 61 ಮಾತ್ರ ಎನ್ನುತ್ತದೆ ಎಫ್‌ಬಿಐ. ಯಾವುದೇ ಬಂದೂಕು ದಾಳಿಯನ್ನು ‘ಸಾರ್ವಜನಿಕ ಬಂದೂಕು ದಾಳಿ’ ಅಥವಾ ‘ಬಂದೂಕಿನಿಂದ ಸಾಮೂಹಿಕ ಹತ್ಯೆ’ ಎಂದು ಪರಿಗಣಿಸಲು ಅಮೆರಿಕದ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್ಸ್ (ಎಫ್‌ಬಿಐ) ಈ ಮಾನದಂಡಗಳನ್ನು ಅನುಸರಿಸುತ್ತದೆ.

l ಸಾರ್ವಜನಿಕ ಪ್ರದೇಶದಲ್ಲಿ ದಾಳಿ ನಡೆದಿರಬೇಕು

l ದಾಳಿಯು ಸಂಪೂರ್ಣವಾಗಿ ಅಪ್ರಚೋದಿತವಾಗಿರಬೇಕು

l ಯಾವುದೋ ಬೇರೆ ಅಪರಾಧ ಕೃತ್ಯಗಳಿಗೆ ಪೂರಕವಾಗಿ ಅಥವಾ ಪ್ರತಿಕ್ರಿಯೆಯಾಗಿ ಇಂತಹ ದಾಳಿ ನಡೆದಿರಬಾರದು

l ದಾಳಿಕೋರನು ನಿರ್ದಿಷ್ಟ ಗುಂಪು, ವರ್ಗ, ಜನಾಂಗದ ಜನರನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರಬೇಕು (ಉದಾಹರಣೆಗೆ ಶಾಲೆಗಳು, ಚರ್ಚ್‌ಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸುವುದು)

l ಸ್ವತ್ತುಗಳಿಗೆ ಹಾನಿ ಮಾಡುವುದು ದಾಳಿಯ ಗುರಿಯಾಗಿರದೆ, ಜನರನ್ನು ಕೊಲ್ಲುವುದು ಅಥವಾ ಗಾಯವನ್ನುಂಟು ಮಾಡುವುದು ದಾಳಿಯ ಗುರಿಯಾಗಿರಬೇಕು

l ಗ್ಯಾಂಗ್‌ವಾರ್‌ಗಳು, ಸ್ವಯಂರಕ್ಷಣೆ ಉದ್ದೇಶದ ದಾಳಿ, ಆಸ್ತಿ ವ್ಯಾಜ್ಯದ ಕಾರಣ ನಡೆದ ದಾಳಿ, ದರೋಡೆ ಅಥವಾ ಕಳ್ಳತನ ಮೊದಲಾದ ಅಪರಾಧ ಕೃತ್ಯಗಳ ಸಂದರ್ಭದಲ್ಲಿ ನಡೆಯುವ ದಾಳಿಯಾಗಿರಬಾರದು

ಪಿಸ್ತೂಲು ಖರೀದಿಗೆ ಪರವಾನಗಿ ಬೇಕಿಲ್ಲ

ಅಮೆರಿಕದಲ್ಲಿ ಜನರು ಶಸ್ತ್ರಾಸ್ತ್ರ ಹೊಂದುವುದಕ್ಕೆ ಸಂಬಂಧಪಟ್ಟ ಕಠಿಣ ನಿಯಮಗಳು ಇಲ್ಲ. ಬಂದೂಕು ಅಥವಾ ಪಿಸ್ತೂಲು ಇಟ್ಟುಕೊಳ್ಳುವುದಕ್ಕೆ ಪರವಾನಗಿಯೇ ಬೇಕಿಲ್ಲ. ಅಮೆರಿಕದ ನಾಗರಿಕರೊಬ್ಬರು ಇಂತಹ ಆಯುಧಗಳನ್ನು ಇಟ್ಟುಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ‘ಪಿಸ್ತೂಲು ನಿಯಂತ್ರಣ ಕಾಯ್ದೆ–1968’ ಜಾರಿಯಲ್ಲಿದೆ. 18 ವರ್ಷ ವಯಸ್ಸಿನ ಅಮೆರಿಕದ ಯಾವುದೇ ನಾಗರಿಕ ರೈಫಲ್ ಆಥವಾ ಶಾಟ್‌ಗನ್ ಖರೀದಿಸಬಹುದು. 21 ವರ್ಷ ವಯಸ್ಸು ದಾಟಿದವರು ಪಿಸ್ತೂಲುಗಳನ್ನು ಖರೀದಿಸಬಹುದು. ಅರ್ಜಿ ಸಲ್ಲಿಸಿ, ₹7,000 ಪಾವತಿಸಿದರೆ ಸಾಕು. ಆನ್‌ಲೈನ್‌ನಲ್ಲಿ ಪಾವತಿಸಿ ಖರೀದಿಸಲು ಅವಕಾಶವಿದೆ. ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿ ಮಾಡಬೇಕು ಎಂದಷ್ಟೇ ಕಾಯ್ದೆ ಉಲ್ಲೇಖಿಸುತ್ತದೆ. ವಿವಿಧ ರಾಜ್ಯಗಳು ಈ ವಯಸ್ಸಿನ ಮಿತಿಯನ್ನು ಹೆಚ್ಚಿಸಬಹುದೇ ವಿನಾ, ಕಡಿಮೆ ಮಾಡುವಂತಿಲ್ಲ.

ಅಪರಾಧ ಕೃತ್ಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಜೈಲುವಾಸ ಅನುಭವಿಸಿದವರಿಗೆ, ಮಾನಸಿಕ ಅಸ್ವಸ್ಥರಿಗೆ ಪಿಸ್ತೂಲು ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಮರಿಜುವಾನಾದಂತಹ ಮಾದಕ ವಸ್ತುಗಳು ಸೇರಿದಂತೆ ಕಾನೂನುಬಾಹಿರ ವಸ್ತುಗಳನ್ನು ಇರಿಸಿ ಕೊಂಡವರಿಗೆ ಶಸ್ತ್ರಗಳನ್ನು ಖರೀದಿಸಲು ಅವಕಾಶವಿಲ್ಲ. ವಲಸಿಗರು, ಪ್ರವಾಸಿ ವೀಸಾದಡಿ ಅಮೆರಿಕಕ್ಕೆ ಬಂದವರು, ಪೌರತ್ವ ತ್ಯಜಿಸಿದವರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವಂತಿಲ್ಲ.

ಕಠಿಣ ನಿಯಮ ಜಾರಿಗೆ ಪ್ರಬಲ ಲಾಬಿ ಅಡ್ಡಿ

‘ನಾನು ಅಮೆರಿಕದ ಅಧ್ಯಕ್ಷನಾಗಿರುವವರೆಗೆ, ಪಿಸ್ತೂಲು ಹೊಂದುವ ನಿಮ್ಮ ಹಕ್ಕುಗಳನ್ನು (ಎರಡನೇ ತಿದ್ದುಪಡಿ) ರಕ್ಷಿಸುತ್ತೇನೆ’ ಎಂದು ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ನಂತರ ಅಧಿಕಾರಕ್ಕೆ ಬಂದ ಜೋ ಬೈಡನ್, ಬಂದೂಕು ಖರೀದಿ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದ್ದನ್ನು ಬಿಟ್ಟರೆ, ದೇಶದಲ್ಲಿ ಶಸ್ತ್ರಾಸ್ತ್ರ ಪರವಾನಗಿ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಹಸಕ್ಕೆ ಮುಂದಾಗಲಿಲ್ಲ. ಅಮೆರಿಕದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಶಸ್ತ್ರಾಸ್ತ್ರ ಬಳಕೆ ನಿಯಮಗಳನ್ನು ಕಠಿಣಗೊಳಿಸಲು ಸಾಧ್ಯವಾಗುವುದಿಲ್ಲ. ಇದರ ಹಿಂದೆ ಶಸ್ತ್ರಾಸ್ತ್ರ ಉದ್ಯಮದ ಬೃಹತ್‌ ಲಾಬಿ ಸದಾ ಕೆಲಸ ಮಾಡುತ್ತಿರುತ್ತದೆ.

ಅಮೆರಿಕನ್ನರು ಶಸ್ತ್ರಾಸ್ತ್ರಗಳನ್ನು ಹೊಂದುವ ಅಧಿಕಾರವನ್ನು ಸಂವಿಧಾನವೇ ನೀಡಿದೆ. ಸಂವಿಧಾನಕ್ಕೆ ಎರಡನೇ ತಿದ್ದುಪಡಿ ತರುವ ಮೂಲಕ ಅದಕ್ಕೆ ಕಾನೂನಿನ ಮಾನ್ಯತೆ ನೀಡಲಾಗಿತ್ತು. ಇದು ಅಮೆರಿಕದ ಕ್ರಾಂತಿಯ ಚೈತನ್ಯವನ್ನು ಪ್ರತಿನಿಧಿಸುವ ಸಂಕೇತ ಎಂದೇ ಭಾವಿಸಲಾಗಿದೆ. ಅಮೆರಿಕನ್ನರ ಈ ಭಾವನೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಮೆರಿಕದ ‘ನ್ಯಾಷನಲ್ ರೈಫಲ್ಸ್ ಅಸೋಸಿಯೇಷನ್’ (ಎನ್‌ಆರ್‌ಎ) ಸಂಸ್ಥೆಯು, ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ಜಾರಿ ಮಾಡಲು ಬಿಡುತ್ತಿಲ್ಲ.

ಪ್ರತಿ ಬಾರಿ ಅಮೆರಿಕದ ಚುನಾವಣೆ ಎದುರಾದಾಗ, ಶಸ್ತ್ರಾಸ್ತ್ರ ನಿಯಂತ್ರಣ ವಿಚಾರವು ಮುನ್ನೆಲೆಗೆ ಬರುತ್ತದೆ. ಬಂದೂಕುಗಳ ಮೇಲೆ ನಿಯಂತ್ರಣ ಹೇರುವಂತಹ ಯಾವುದೇ ಕಾನೂನು ಜಾರಿಯಾಗದಂತೆ ಎನ್‌ಆರ್‌ಎ ನೋಡಿಕೊಳ್ಳುತ್ತದೆ. ಪಕ್ಷವೊಂದರ ಪರವಾಗಿ ಚುನಾವಣಾ ಪ್ರಚಾರಕ್ಕೆ ದೊಡ್ಡ ಮೊತ್ತದ ಹಣವನ್ನು ವ್ಯಯಿಸುತ್ತದೆ. ಆ ಮೂಲಕ ತನ್ನ ಪ್ರಭಾವ ಸ್ಥಾಪಿಸುತ್ತದೆ.

ಆಧಾರ: ಎಫ್‌ಬಿಐನ ‘ಆ್ಯಕ್ಟಿವ್‌ ಶೂಟರ್‌ ಇನ್ಸಿಡೆಂಟ್ಸ್‌ ಇನ್‌ ಅಮೆರಿಕ’ ವಾರ್ಷಿಕ ವರದಿಗಳು 2020 ಮತ್ತು 2021, ನ್ಯೂಯಾರ್ಕ್‌ ಟೈಮ್ಸ್‌ ವರದಿ, ಹಾರ್ವರ್ಡ್ ವಿವಿ, ಫ್ಯೂ ರಿಸರ್ಚ್‌ ಸೆಂಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT