ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಬಿತ್ತನೆ ಬೀಜಗಳ ಮಸೂದೆ–2025 ಅನ್ನು ಸಿದ್ಧಪಡಿಸಿದೆ. ಇಲಾಖೆಯ ವೆಬ್ಸೈಟ್ನಲ್ಲಿ ಮಸೂದೆಯ ಕರಡನ್ನು ಪ್ರಕಟಿಸಲಾಗಿದ್ದು, ರೈತರು, ಸಂಘ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ಉದ್ಯಮದ ಹಾಗೂ ರೈತರ ಸದ್ಯದ ಅಗತ್ಯಗಳನ್ನು ಆಧರಿಸಿ ಮಸೂದೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಆದರೆ, ಮಸೂದೆಯಲ್ಲಿನ ಹಲವು ಅಂಶಗಳಿಗೆ ರೈತರು, ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೈತರ ಹಕ್ಕುಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಬಿತ್ತನೆ ಬೀಜಗಳ ಗುಣಮಟ್ಟ ಮತ್ತು ರೈತರ ಹಕ್ಕುಗಳನ್ನು ಕಾಪಾಡುವ ದಿಸೆಯಲ್ಲಿ ಭಾರತದಲ್ಲಿ ಈಗಾಗಲೇ ಹಲವು ಕಾಯ್ದೆ, ನಿಯಮಗಳನ್ನು ಜಾರಿ ಮಾಡಲಾಗಿದೆ. ಬೀಜ ಕಾಯ್ದೆ (1966), ಬೀಜ ನಿಯಮಗಳು (1968), ಬೀಜ (ನಿಯಂತ್ರಣ) ಆದೇಶ (1983) ರಾಷ್ಟ್ರೀಯ ಬೀಜ ನೀತಿ (2002) ಸೇರಿದಂತೆ ಹಲವು ನಿಯಮಗಳಿವೆ. ದೇಶದ ಕಾನೂನುಗಳಲ್ಲಿ ಮುಖ್ಯವಾದದ್ದು ಸಸ್ಯ ವೈವಿಧ್ಯ ಮತ್ತು ರೈತರ ಹಕ್ಕುಗಳ ರಕ್ಷಣೆಯ ಕಾಯ್ದೆ–1970 (ಪಿಪಿವಿಎಫ್ಆರ್ಎ). ರೈತರ ಹಕ್ಕುಗಳ ಕುರಿತು ಜಗತ್ತಿನಲ್ಲಿರುವ ಉತ್ತಮ ಕಾಯ್ದೆಗಳಲ್ಲಿ ಇದೂ ಒಂದು ಎನ್ನಲಾಗಿದೆ. ಇವುಗಳನ್ನು ಬದಲಾಯಿಸುವ ದಿಸೆಯಲ್ಲಿ 2004 ಮತ್ತು 2019ರಲ್ಲಿ ಬೀಜ ಮಸೂದೆಗಳನ್ನು ರೂಪಿಸಲಾಗಿತ್ತು. ಆದರೆ, ರೈತರಿಂದ ತೀವ್ರ ವಿರೋಧ ವ್ಯಕ್ತವಾದದ್ದರಿಂದ ಅವು ಕಾಯ್ದೆಗಳಾಗಲಿಲ್ಲ.

ಈಗ ಬಿತ್ತನೆ ಬೀಜಗಳ ಗುಣಮಟ್ಟ, ಉತ್ಪಾದನೆ ಮತ್ತು ಮಾರಾಟವನ್ನು ನಿಯಂತ್ರಿಸುವ ಉದ್ದೇಶದಿಂದ ಬೀಜ ಕಾಯ್ದೆ 1966 ಮತ್ತು 1983ರ ಬೀಜ (ನಿಯಂತ್ರಣ) ಆದೇಶಕ್ಕೆ ತಿದ್ದುಪಡಿ ಮಾಡಿ ಬಿತ್ತನೆ ಬೀಜ ಮಸೂದೆ –2025 ಅನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ರೂಪಿಸಿದೆ. ಅದರ ವೆಬ್ಸೈಟ್ನಲ್ಲಿ ಮಸೂದೆಯ ಕರಡನ್ನು ಪ್ರಕಟಿಸಲಾಗಿದ್ದು, ರೈತರು, ಸಂಘ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ಉದ್ಯಮ ಹಾಗೂ ರೈತರ ಸದ್ಯದ ಅಗತ್ಯಗಳ ಆಧಾರದಲ್ಲಿ ಮಸೂದೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಮಸೂದೆ ಕುರಿತ ಆಕ್ಷೇಪಣೆಗಳನ್ನು ಎಂಎಸ್ ವರ್ಡ್ ಮತ್ತು ಪಿಡಿಎಫ್ ಮಾದರಿಯಲ್ಲಿ jsseeds-agri@gov.in ವಿಳಾಸಕ್ಕೆ 2025ರ ಡಿ.11ರ ಒಳಗೆ ಇ–ಮೇಲ್ ಕಳುಹಿಸಬಹುದು ಎಂದು ಅದು ತಿಳಿಸಿದೆ.

ಆದರೆ, ಮಸೂದೆಯಲ್ಲಿನ ಹಲವು ಅಂಶಗಳಿಗೆ ರೈತರು, ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೈತರ ಹಕ್ಕುಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಆಕ್ಷೇಪಗಳೇನು?

ಗುಣಮಟ್ಟದ ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಬಲಪಡಿಸುವುದು ಮಸೂದೆಯ ಉದ್ದೇಶ ಎಂದು ಕರಡಿನ ಆರಂಭದಲ್ಲೇ ಹೇಳಲಾಗಿದೆ. ಆದರೆ, ಮಸೂದೆಯಲ್ಲಿ ಎಲ್ಲಿಯೂ ರೈತರ ಹಕ್ಕುಗಳು, ಕಳಪೆ ಬೀಜದಿಂದ ಉಂಟಾದ ಬೆಳೆನಷ್ಟ ಪರಿಹಾರದ ಪ್ರಸ್ತಾಪವೇ ಇಲ್ಲ. ಕಂಪನಿಗಳ ವ್ಯಾಪಾರ/ವಹಿವಾಟು ಸುಗಮಗೊಳಿಸುವುದೇ ಮಸೂದೆಯ ಮುಖ್ಯ ಉದ್ದೇಶವಾಗಿದ್ದು, ರೈತರ ಹಿತಾಸಕ್ತಿ, ಹಕ್ಕುಗಳು ಕಡೆಗಣಿಸಲ್ಪಟ್ಟಿವೆ

ಹಲವು ಕಂಪನಿಗಳ ಕಳಪೆ ಗುಣಮಟ್ಟದ ಬೀಜದಿಂದ ನಷ್ಟ ಅನುಭವಿಸುವ ಪ್ರಕರಣಗಳು ಪ್ರತಿವರ್ಷ ಪುನರಾವರ್ತನೆಯಾಗುತ್ತಿವೆ. ಇಂಥ ಸಂದರ್ಭಗಳಲ್ಲಿ ಬೆಳೆನಷ್ಟ ಪರಿಹಾರ ಪಡೆಯಲು ರೈತರು ನ್ಯಾಯಾಲಯಗಳಿಗೆ ಹೋಗುವುದೊಂದೇ ಆಯ್ಕೆ. ಆದರೆ, ರೈತರಿಗೆ ಇದು ಸಾಧ್ಯವಿಲ್ಲ. ಮಸೂದೆಯು ಈ ಕುರಿತು ವಾಸ್ತವಿಕವಾದ ಯಾವುದೇ ಪರಿಹಾರ ಕ್ರಮವನ್ನು ಒಳಗೊಂಡಿಲ್ಲ

ಕಂಪನಿಗಳ ಹೊರೆಯನ್ನು ಕಡಿಮೆ ಮಾಡುವ ದಿಸೆಯಲ್ಲಿ ಸಣ್ಣ ತಪ್ಪುಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸಣ್ಣ, ಮಧ್ಯಮ ಮತ್ತು ಗಂಭೀರ– ಹೀಗೆ ಅಪರಾಧದ ಪ್ರಮಾಣವನ್ನು ಆಧರಿಸಿ ಮೂರು ಹಂತಗಳಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಕಳಪೆ ಗುಣಮಟ್ಟದ ಬೀಜ ಮಾರುವುದು, ಎಸ್ಎಟಿಎಚ್ಐ ಪೋರ್ಟಲ್ನಲ್ಲಿ ಮಾಹಿತಿ ಅಪ್ಡೇಟ್ ಮಾಡದೇ ಇರುವುದರಂಥ ಸಣ್ಣ ಅಪರಾಧಗಳಿಗೆ ದಂಡವು ₹1 ಲಕ್ಷದಿಂದ ಆರಂಭವಾಗುತ್ತದೆ. ನಕಲಿ ಅಥವಾ ನೋಂದಾಯಿತವಲ್ಲದ ಬೀಜಗಳನ್ನು ಮಾರುವುದರಂಥ ಗಂಭೀರ ಅಪರಾಧಗಳಿಗೆ ₹30 ಲಕ್ಷದವರೆಗೆ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ. ಆ ದಂಡವು ರಾಜ್ಯಗಳಿಗೆ ಪಾವತಿಯಾಗುತ್ತದೆಯೇ ವಿನಾ ರೈತರಿಗೆ ಸಿಗುವುದಿಲ್ಲ

ಕಾಯ್ದೆಯ ಅಡಿಯಲ್ಲಿ ಬಿತ್ತನೆ ಬೀಜಗಳನ್ನು ನೋಂದಣಿ ಮಾಡುವುದು ಕಡ್ಡಾಯ. ಉತ್ಪಾದಕರು (ಕಂಪನಿಗಳು), ಬೀಜ ಸಂಸ್ಕರಣ ಘಟಕಗಳು, ಡೀಲರ್ಗಳು, ವಿತರಕರು, ನರ್ಸರಿಗಳೂ ನೋಂದಣಿ ಮಾಡಬೇಕು. ಆದರೆ, ಕಾಯ್ದೆಯ ಅಡಿಯಲ್ಲಿ ನೋಂದಣಿ ಮಾಡಿದ ಬೀಜಗಳನ್ನು ರೈತರು ಬೆಳೆಯಬಹುದು, ಬಿತ್ತನೆ ಮಾಡಬಹುದು, ಮರುಬಿತ್ತನೆ ಮಾಡಬಹುದು, ಸಂರಕ್ಷಿಸಬಹುದು, ಬಳಸಬಹುದು, ಹಂಚಿಕೊಳ್ಳಬಹುದು ಅಥವಾ ಅವರ ಜಮೀನಿನಲ್ಲಿ ಬೆಳೆದ ಬೀಜವನ್ನು ಮಾರಾಟವನ್ನೂ ಮಾಡಬಹುದು. ಆದರೆ, ಆ ಬೀಜಗಳನ್ನು ಅಥವಾ ಗಿಡಗಳನ್ನು ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಇಲ್ಲ. ಕರಡು ಮಸೂದೆಯು ವ್ಯಕ್ತಿಗತ ರೈತರ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತದೆ. ರೈತರೇ ಸೇರಿ ಸ್ಥಾಪಿಸಿರುವ ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಘಗಳು, ಸಮುದಾಯ ಸಂಘಟನೆಗಳು ಸಂರಕ್ಷಿಸುತ್ತಿರುವ ಬೀಜ ತಳಿಗಳ ಮಾರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ರೈತ ಉತ್ಪಾದಕ ಕಂಪನಿಗಳು, ಸಮುದಾಯ ಸಂಘಟನೆಗಳು ಸ್ಥಳೀಯ ಬೀಜ ಬ್ಯಾಂಕ್ಗಳನ್ನು ತೆರೆದು ಅವುಗಳನ್ನು ಸಂರಕ್ಷಿಸಿ, ಅವುಗಳನ್ನೇ ಬಳಸಲು ರೈತರಿಗೆ ಪ್ರೇರೇಪಿಸುತ್ತಿವೆ. ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ ಇಂತಹ ಸಂಘ ಸಂಸ್ಥೆಗಳಿಗೆ ತೊಂದರೆಯಾಗಲಿದೆ

ಮಸೂದೆಯ ಪ್ರಕಾರ, ಬಿತ್ತನೆ ಬೀಜದ ಕೃಷಿ ಮತ್ತು ಬಳಕೆಯ ಮೌಲ್ಯದ (ವಿಸಿಯು) ಪರೀಕ್ಷೆ ನಡೆಸಲು ಸರ್ಕಾರವು ವಿದೇಶಿ ಸಂಸ್ಥೆಯನ್ನು ಗೊತ್ತುಪಡಿಸಬಹುದು (ಸೆಕ್ಷನ್ 16/3). ಸರ್ಕಾರವು ವಿದೇಶಿ ಬೀಜ ಪ್ರಮಾಣೀಕರಣ ಸಂಸ್ಥೆಗಳನ್ನು ಪರಿಗಣಿಸಬಹುದು (ಸೆಕ್ಷನ್ 27). ಈ ಮೂಲಕ ಮಸೂದೆಯು, ಭಾತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ (ಎಸ್ಎಯು) ಅಧಿಕಾರವನ್ನು ಮೊಟಕುಗೊಳಿಸಿದೆ. ಜತೆಗೆ, ಸ್ಥಳೀಯ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬದಲಿಗೆ ವಿದೇಶಿ ಸಂಸ್ಥೆಗಳಿಗೆ ಬೀಜ ಪರೀಕ್ಷೆಯ ಜವಾಬ್ದಾರಿ ವಹಿಸುವುದು ಭಾರತದ ವೈವಿಧ್ಯಮಯವಾದ, ಹವಾಮಾನಕ್ಕೆ ಹೊಂದುವ ಕೃಷಿ ಪದ್ಧತಿಗಳ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ರೈತರ ಆದಾಯ, ಕೃಷಿ, ಪರಿಸರದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದಲ್ಲಿ ಕುಲಾಂತರಿ ತಳಿ (ಜಿಎಂ) ಬೀಜ ಮಾರಾಟ ಹೆಚ್ಚಾಗಬಹುದು

ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಲು ಹೊರಟಿದೆ ಎನ್ನುವುದು ಇನ್ನೊಂದು ಆಕ್ಷೇಪ. ಮಸೂದೆಯ 17ನೇ ಸೆಕ್ಷನ್ನ 8ನೇ ಉಪ ಸೆಕ್ಷನ್ ಪ್ರಕಾರ, ಬಿತ್ತನೆ ಬೀಜಗಳ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಮತ್ತು ಸುಗಮ ವ್ಯಾಪಾರಕ್ಕೆ ಅನುವು ಮಾಡುವುದಕ್ಕಾಗಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಕಂಪನಿಗಳಿಗಾಗಿ ಪಾರದರ್ಶಕವಾದ ಕೇಂದ್ರ ಮಾನ್ಯತಾ ವ್ಯವಸ್ಥೆಯನ್ನು ರೂಪಿಸಲಿದೆ. ಈ ವ್ಯವಸ್ಥೆಯಡಿ ಮಾನ್ಯತೆ ಪಡೆದ ಕಂಪನಿಗಳು, ಮಾನ್ಯತೆ ಪಡೆದ ದಿನದಿಂದ ಈ ಸೆಕ್ಷನ್ ಅಡಿಯಲ್ಲಿ ನೋಂದಣಿಯಾಗಿವೆ ಎಂದು ಪರಿಗಣಿಸಲಾಗುತ್ತದೆ. ಇದು ಕಾರ್ಪೊರೇಟ್ ಕಂಪನಿಗಳಿಗೆ ಪ್ರಾಮುಖ್ಯ ನೀಡುವುದರ ಜೊತೆಗೆ, ರಾಜ್ಯಗಳ ಅಧಿಕಾರವನ್ನೂ ಕಸಿದುಕೊಳ್ಳುತ್ತದೆ. ದೊಡ್ಡ ಕಂಪನಿಗಳು ಮೂಲ ಮಾನ್ಯತಾ ಪ್ರಮಾಣಪತ್ರವನ್ನು ಸಲ್ಲಿಸಿದರೆ ರಾಜ್ಯಗಳು ಅದನ್ನು ಅಂಗೀಕರಿಸಿ, ರಾಜ್ಯದ ನೋಂದಣಿ ಪತ್ರದಲ್ಲಿ ಈ ಕಂಪನಿಗಳ ವಿವರಗಳನ್ನು ದಾಖಲಿಸಿಕೊಳ್ಳಬೇಕು. ಹೀಗಾದಾಗ, ರಾಜ್ಯ ಸರ್ಕಾರಗಳು ಆ ಕಂಪನಿಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿವೆ. ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಕಂಪನಿಗಳು ಈ ಮಾನ್ಯತೆಯನ್ನು ಪಡೆಯುವ ಮೂಲಕ ಇಡೀ ದೇಶದ ಮಾರುಕಟ್ಟೆಗೆ ತೆರೆದುಕೊಳ್ಳಲಿವೆ.

ಕೇಂದ್ರದ ಕೈಯಲ್ಲಿ ಅಧಿಕಾರ

ಮಸೂದೆಯು ಕೇಂದ್ರ ಸರ್ಕಾರಕ್ಕೆ ಹೆಚ್ಚು ಅಧಿಕಾರ ನೀಡುತ್ತದೆ ಎಂಬುದು ಮತ್ತೊಂದು ಆರೋಪ. 38ನೇ ಸೆಕ್ಷನ್, ಯಾವುದೇ ರಾಜ್ಯಗಳಿಗೆ ಮತ್ತು ಕೇಂದ್ರ ಬೀಜ ಸಮಿತಿಗೆ ಸಲಹೆ ನೀಡುವ ಅಧಿಕಾರವನ್ನು ಕೇಂದ್ರಕ್ಕೆ ಕೊಡುತ್ತದೆ. ‘ನೀತಿ’ಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವೂ ಅದರದ್ದೇ.

ಸೆಕ್ಷನ್ 41ರ ಪ್ರಕಾರ, ಈ ಕಾಯ್ದೆಯ ಅಡಿಯಲ್ಲಿ ಮಾಡಲಾಗುವ ಯಾವುದೇ ಆದೇಶವು, ಈ ಕಾಯ್ದೆಯನ್ನು ಬಿಟ್ಟು ಬೇರೆ ಯಾವುದೇ ಕಾನೂನು, ನಿಬಂಧನೆಗಳಿಗೆ ಒಳಪಡುವುದಿಲ್ಲ. ರಾಜ್ಯಗಳಲ್ಲಿ ಜಾರಿಯಲ್ಲಿರುವ ಬೀಜಕ್ಕೆ ಸಂಬಂಧಿಸಿದ ಕಾನೂನುಗಳು, ಆದೇಶಗಳ (ಬೆಲೆ ನಿಗದು, ವ್ಯಾಪಾರ, ಪರವಾನಗಿ ಇತ್ಯಾದಿ) ಅಡಿ ಕೈಗೊಂಡ ತೀರ್ಮಾನಗಳನ್ನು ಇದು ರದ್ದುಪಡಿಸಬಹುದಾಗಿದೆ. ಹೀಗಾದಲ್ಲಿ ರಾಜ್ಯಗಳ ಸ್ವಾಯತ್ತೆಗೆ ಧಕ್ಕೆಯಾಗಲಿದೆ ಎಂಬ ಕಳವಳವೂ ವ್ಯಕ್ತವಾಗಿದೆ.

ತುರ್ತು ಸಂದರ್ಭದಲ್ಲಷ್ಟೇ ಬೆಲೆ ನಿಯಂತ್ರಣ

ಸೆಕ್ಷನ್ 22 ಬೆಲೆಯ ನಿಯಂತ್ರಣದ ಬಗ್ಗೆ ಹೇಳುತ್ತದೆ. ಆದರೆ, ಇದು ರೈತರು ಹಿಂದಿನಿಂದಲೂ ಮುಂದಿಟ್ಟಿರುವ ಬೇಡಿಕೆಯ ರೀತಿಯಲ್ಲಿ ಇಲ್ಲ ಎಂಬುದು ರೈತ ಸಂಘಟನೆಗಳ ಆರೋಪ.

ಬಿತ್ತನೆ ಬೀಜಗಳ ಕೊರತೆ, ಕೃತಕ ಬೆಲೆ ಏರಿಕೆ ಅಥವಾ ಏಕಸ್ವಾಮ್ಯದ ಬೆಲೆ ನಿಗದಿಯಂತಹ ‘ತುರ್ತು ಸನ್ನಿವೇಶ’ಗಳಲ್ಲಿ ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ಅವಕಾಶ ನೀಡುತ್ತದೆ. ಬಿತ್ತನೆ ಬೀಜಗಳಿಗೆ ಶಾಶ್ವತವಾದ ಬೆಲೆ ಮತ್ತು ರಾಯಧನದ ವ್ಯವಸ್ಥೆ ಬೇಕು ಮತ್ತು ಇದಕ್ಕಾಗಿ ಒಂದು ಅಧಿಕೃತ ಸಂಸ್ಥೆ ಯ ಅಗತ್ಯವಿದೆ ಎಂಬುದು ರೈತರ ದೊಡ್ಡ ಬೇಡಿಕೆ. ಕರಡು ಮಸೂದೆಯಲ್ಲಿ ಇಂತಹ ಪ್ರಸ್ತಾಪಗಳಿಲ್ಲ.

26ಕ್ಕೆ ಪ್ರತಿಭಟನೆ

ತಕ್ಷಣವೇ ಈ ಕರಡು ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು 250ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾವು (ಎಸ್ಕೆಎಂ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

‘ಇದು ದೇಶದ ಬಿತ್ತನೆ ಬೀಜಗಳ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡಲಿದೆ. ಬೀಜ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ನೀಡಲಿದೆ, ಬಿತ್ತನೆ ಬೀಜವನ್ನು ಸಂರಕ್ಷಿಸುವ, ಬಳಸುವ, ಹಂಚುವ ರೈತರ ಹಕ್ಕನ್ನು ಕಸಿದುಕೊಳ್ಳಲಿದೆ’ ಎಂದು ಹೇಳಿದೆ.

ಅಖಿಲ ಭಾರತ ಕಿಸಾನ್ ಸಭಾ ಕೂಡ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಈ ಶಾಸನವು ವಿನಾಶಕಾರಿ. ದೇಶದ ಕೃಷಿಯನ್ನು ನಾಶಮಾಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ. ಮಸೂದೆಯು ಕಾನೂನು ಆಗಿ ಜಾರಿಗೆ ಬಂದರೆ, ಬಿತ್ತನೆ ಬೀಜಗಳು ದುಬಾರಿಯಾಗಲಿವೆ ಎಂದು ಹೇಳಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಐದನೇ ವರ್ಷಾಚರಣೆಯ ದಿನವಾದ ಇದೇ 26ರಂದು ಈ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಲೂ ಅದು ಕರೆ ನೀಡಿದೆ.

ಆಧಾರ: ಕರಡು ಬೀಜ ಮಸೂದೆ–2025, ಪಿಟಿಐ, ಡೌನ್ ಟು ಅರ್ಥ್, ಸೆಂಟರ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.