ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಲೆಕ್ಕಕ್ಕಿಲ್ಲ ಸೋಂಕಿನ ಅಪಾಯ, ಸಮಾಜಕ್ಕಿದೆ ಇವರ ಸಹಾಯ

Civic Workers
Last Updated 13 ಏಪ್ರಿಲ್ 2020, 21:23 IST
ಅಕ್ಷರ ಗಾತ್ರ
ADVERTISEMENT
""

‘ಕೊಳೆಗೇರಿಯಲ್ಲಿ ನಾಲ್ಕು ಗೋಡೆಯ ನಡುವಿನ ಪುಟ್ಟ ಕೋಣೆಯೇ ನಮ್ಮ ಮನೆ. ಆ ಮನೆಯ ತುಂಬಾ ಮಕ್ಕಳು, ಅದರಲ್ಲೇ ಅಡುಗೆ, ನಿದ್ರೆ, ಸ್ನಾನ ಎಲ್ಲವೂ ಆಗಬೇಕು. ಹೀಗಿರುವಾಗ ಕೊರೊನಾ ವೈರಸ್‌ಗೆ ಹೆದರಿ ಪ್ರತ್ಯೇಕವಾಗಿ ಇರುವುದಾದರೂ ಹೇಗೆ...’

– ಇದು ಪೌರ ಕಾರ್ಮಿಕ ಮಹಿಳೆಯರು ಕೇಳುವ ಪ್ರಶ್ನೆ. ಸೋಂಕು ಹರಡುತ್ತಿರುವ ಈ ಸನ್ನಿವೇಶದಲ್ಲಿ ಸುರಕ್ಷಿತವಾಗಿರಲು ಮುಖ್ಯವಾಗಿ ಕೇಳಿ ಬರುತ್ತಿರುವ ಎರಡು ಸಲಹೆಗಳೆಂದರೆ ಒಂದು ಸಾಮಾಜಿಕ ಅಂತರದ್ದು, ಮತ್ತೊಂದು ಮನೆಯಿಂದಲೇ ಕೆಲಸ ಮಾಡುವಂಥದ್ದು. ಆದರೆ, ಪೌರಕಾರ್ಮಿಕರಿಗೆ ಎರಡೂ ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಬೀದಿಗೆ ಇಳಿಯಲೇಬೇಕು.

ಕೊರೊನಾ ಸೋಂಕಿನ ವಿರುದ್ಧದ ಸೆಣಸಾಟಕ್ಕೆ ಎದೆಯೊಡ್ಡಿ ನಿಂತಿರುವ ಪೌರ ಕಾರ್ಮಿಕರು ತಮ್ಮ ವೃತ್ತಿಯನ್ನು ಒಂದೇ ಒಂದು ದಿನವೂ ನಿಲ್ಲಿಸಿಲ್ಲ. ರೋಗ ಹರಡುವುನ್ನು ತಡೆಯುವುದಕ್ಕಾಗಿ ನಗರಗಳನ್ನು ಇನ್ನಷ್ಟುಸ್ವಚ್ಛವಾಗಿಡಲು ಮತ್ತಷ್ಟು ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ.

‘ಕೊರೊನಾ ವೈರಸ್ ಬಂದಿದೆ ಸರಿ, ಹಾಗಂತ ಅನ್ನ ಕೊಟ್ಟಿರುವ ವೃತ್ತಿ ನಿಲ್ಲಿಸಲು ಆದೀತೇ? ಕಸ ಗುಡಿಸದೆ ನಮ್ಮ ಜೀವನ ನಡೆದೀತೇ? ಆ ಕೊರೊನಾಕ್ಕೆ ನಮ್ಮ ಜೀವವೇ ಬೇಕೆಂದು ಬರೆದಿದ್ದರೆ ಯಾರುತಾನೆ ತಡೆಯಲು ಆದೀತು? ಕಾಲು ಚಾಚಿಕೊಂಡು ಮಲಗಲೂ ಆಗದ ಮನೆಯಲ್ಲಿ ನಾನೊಬ್ಬಳು ಎಲ್ಲಿ ಪ್ರತ್ಯೇಕವಾಗಿರಲಿ’ –ರಾಜಾಜಿನಗರದಲ್ಲಿ ಬಂಗಲೆಯೊಂದರ ಮುಂದೆ ತರಗೆಲೆಗಳನ್ನು ಬಾಚಿ ತನ್ನ ತಳ್ಳುವಗಾಡಿಗೆ ತುಂಬಿಕೊಳ್ಳುತ್ತಿದ್ದ ಮಂಜುಳಾ ಅವರಲ್ಲಿ ಇಂತಹ ಹತ್ತಾರು ಪ್ರಶ್ನೆಗಳು.

‘ಜನ ನಿದ್ರೆಯಿಂದ ಎಚ್ಚರಗೊಳ್ಳುವಮುನ್ನವೇ ಅವರ ಮನೆ ಮುಂದಿನ ಬೀದಿಯನ್ನು ಗುಡಿಸಿರುತ್ತೇವೆ. ಬಾಗಿಲು ತೆರೆದಾಗ ಆಕಸ್ಮಿಕವಾಗಿ ಎದುರಾದರೆ ನಮಗೇನು ಗುಡ್ ಮಾರ್ನಿಂಗ್ ಹೇಳುತ್ತಾರೆಯೇ? ಮೈಕ್ ಮುಂದೆ ನಿಂತಾಗ ನಮ್ಮನ್ನು ಇಂದ್ರ–ಚಂದ್ರರಿಗೆ ಹೋಲಿಸುವ ಜನವೇ ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಂಡು ಹೋಗುತ್ತಾರೆ’ ಎಂದು ಹೇಳುತ್ತಾರೆ.

‘ನಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇದೆ. ನಂಬಿರುವ ವೃತ್ತಿಗೆ ಒಂದು ದಿನವೂ ಮೋಸ ಮಾಡುವುದಿಲ್ಲ. ಈಗ ಕೊರೊನಾ ಸೋಂಕು ಬಂದಿದೆ. ಕೆಲಸ ಮುಗಿಸಿ ಮನೆಗೆ ಹೋದರೆ ಮಕ್ಕಳೊಂದಿಗೆ ಬೆರೆಯಬೇಡಿ, ಆದಷ್ಟು ಪ್ರತ್ಯೇಕವಾಗಿ ಇರಿ ಎಂದು ಹಲವರು ಉಚಿತ ಸಲಹೆ ನೀಡುತ್ತಿದ್ದಾರೆ. ಅವರು ಹೇಳಿದಂತೆ ಮಾಡಲು ನಾನು ವಾಸವಿರುವುದೇನು ಐದಾರು ಬೆಡ್ ರೂಮ್‌ ಇರುವಂತಹ ಈ ಮನೆಯೇ’ ಎಂದು ಕಣ್ಣೆದುರಿನ ಬಂಗಲೆಯನ್ನು ತೋರಿಸಿ ಮರುಪ್ರಶ್ನೆ ಹಾಕುತ್ತಾರೆ.‌

‘ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಕಸ ತೆಗೆಯುತ್ತಿದ್ದೇವೆ. ಅದನ್ನೂ ಮೀರಿ ವೈರಸ್ ನಮ್ಮ ದೇಹಕ್ಕೆ ಹೊಕ್ಕಿದರೆ ನಮಗೆ ಗೊತ್ತಾಗುವುದಾದರೂ ಹೇಗೆ? ಭಯ ಇದೆ, ಹಾಗೆಂದ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ. ಸತ್ತರೂ ಬೀದಿಯಲ್ಲೇ ಸಾಯುತ್ತೇವೆ, ಸೇವೆ ನಿಲ್ಲಿಸುವುದಿಲ್ಲ’ ಎಂದು ವೀಳ್ಯದೆಲೆ ಮತ್ತು ಅಡಿಕೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾ ಬಗಲಲ್ಲಿದ್ದ ‍ಪೊರಕೆ ಹಿಡಿದ ಹೊರಡುತ್ತಾರೆ ಮಲ್ಲಮ್ಮ.

ಲಾಕ್‌ಡೌನ್‌ ಶುರುವಾದ ಕಸದ ಮಿಶ್ರಣದಲ್ಲೂ ತುಂಬಾ ಬದಲಾಗಿದೆ ಎನ್ನುವುದು ಪೌರಕಾರ್ಮಿಕರ ಅಭಿಮತ. ಬಳಕೆ ಮಾಡಿದ ಮಾಸ್ಕ್‌, ಗ್ಲೌಸ್‌, ಪ್ಯಾಡ್‌ಗಳು ಕಸದ ರಾಶಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿದ್ದಿರುತ್ತವೆ. ಮನೆಯಲ್ಲೇ ಎಲ್ಲರೂ ಅಡುಗೆ ಮಾಡುತ್ತಿರುವ ಕಾರಣ ಹಸಿಕಸದ ಪ್ರಮಾಣವೂ ಹೆಚ್ಚಾಗಿದೆ ಎನ್ನವುದು ಅವರ ವಿಶ್ಲೇಷಣೆ.

‘ಏರಿಯಾದ ಜನ ಮುಖಕ್ಕೆ ಧರಿಸಿಕೊಳ್ಳುವ ಮಾಸ್ಕ್‌ಗಳೆಲ್ಲವೂ ಕೊನೆಗೆ ನನ್ನ ಕಾಲ ಬುಡಕ್ಕೆ ಬಂದು ಬೀಳುತ್ತವೆ. ಟಿಪ್ಪರ್‌ಗೆ ಸುರಿಯುವ ಕಸದೊಂದಿಗೆ ಮಾಸ್ಕ್, ಗ್ಲೌಸ್ ಎಲ್ಲವೂ ಇರುತ್ತವೆ. ಕೊರೊನಾ ವೈರಸ್ ಯಾವ ಮಾಸ್ಕ್‌ನಲ್ಲಿದೆ ಎಂಬುದನ್ನು ಹೇಗೆ ಹುಡುಕಲಿ. ಎಲ್ಲವನ್ನೂ ಬಾಚಿ ಮೇಲೆಳೆದು ಸಮ ಮಾಡಿಕೊಳ್ಳುತ್ತೇನೆ. ಯಾವುದರಲ್ಲೂ ಕೊರೊನಾ ವೈರಸ್ ಇಲ್ಲ ಎಂದು ಭಾವಿಸಿಕೊಳ್ಳುತ್ತೇನೆ ಅಷ್ಟೆ’ ಎಂದು ಮನೆ–ಮನೆಯಿಂದ ಕಸ ಸಂಗ್ರಹಿಸುವ ಮುನಿರಾಜು ಹೇಳುತ್ತಾರೆ.

‘ಮನೆಯಿಂದ ಹೊರ ಹೋದರೆ ಏನನ್ನೂ ಮುಟ್ಟ ಬೇಡಿ, ಆಗಾಗ ಕೈ ತೊಳೆಯಿರಿ ಎನ್ನುತ್ತಾರೆ. ನಾವು ಕಸ ಮುಟ್ಟದೆ ಊರು ಸ್ವಚ್ಛವಾಗದು. ಭಯದ ನಡುವೆ ಅಧಿಕಾರಿಗಳು ನೀಡಿರುವ ಸೂಚನೆಯಂತೆ ಎಚ್ಚರಿಕೆಯನ್ನೂ ವಹಿಸಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮತ್ತೊಬ್ಬ ಪೌರಕಾರ್ಮಿಕ ಸೋಮು.

ಕಸವನ್ನು ಈಗಲಾದರೂ ಪ್ರತ್ಯೇಕಿಸಿ ಕೊಡೋಣ

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲ ಮನೆಯಲ್ಲಿಯೇ ಇದ್ದಾರೆ. ಮೂಲದಲ್ಲೇ ಕಸ ವಿಂಗಡಣೆಯನ್ನು ಆರಂಭಿಸಲು ಇದು ಸಕಾಲ. ಅಲ್ಲದೆ, ಪೌರಕಾರ್ಮಿಕರು ಈ ಕಸವನ್ನು ಅಗತ್ಯ ಸುರಕ್ಷತಾ ಸಾಧನಗಳಿಲ್ಲದೆ ನೇರವಾಗಿ ನಿರ್ವಹಣೆ ಮಾಡುವುದರಿಂದ ಕಸದಲ್ಲಿನ ಅಪಾಯಕಾರಿ ವಸ್ತುಗಳಿಂದ ಅವರ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇದೆ. ಊರಿನ ಸ್ವಚ್ಛತೆಗಾಗಿ ಜೀವ ಪಣಕ್ಕಿಟ್ಟು ಮನೆಯಿಂದ ಆಚೆ ಬಂದವರಿಗೆ ಏನೂ ಆಗದಂತೆ ನೋಡಿಕೊಳ್ಳುವುದು ಸಮಾಜದ ಹೊಣೆ. ನಾವು ಮಾಡಬೇಕಾದುದು ಇಷ್ಟೆ:

* ಹಸಿಕಸದ ಡಬ್ಬ ಅಡುಗೆಮನೆಯಲ್ಲಿರಲಿ. ಅದನ್ನು ಶುಚಿಗೊಳಿಸುವುದು ನಿಮಗೆ ಸುಲಭವಾಗಬೇಕೆಂದರೆ ಅದರೊಳಗೆ ಹಳೆಯ ಪೇಪರ್ ಹರಡಿ, ಆದರೆ ಪ್ಲಾಸ್ಟಿಕ್ ಮಾತ್ರ ಬೇಡವೇ ಬೇಡ

* ಒಣಕಸದ ಡಬ್ಬ ವರಾಂಡದಲ್ಲಿರಲಿ. ಇದಕ್ಕೆ ಪೇಪರ್ ಲೈನಿಂಗ್ ಬೇಕೆಂದೇನಿಲ್ಲ

* ಅಪಾಯಕಾರಿ ಪದಾರ್ಥಗಳ ಡಬ್ಬ ಬಚ್ಚಲು ಮನೆಯಲ್ಲಿರಲಿ. ಇದಕ್ಕೆ ಬೇಕಾದಲ್ಲಿ ಕವರ್ ಹಾಕಿ

* ಶಿಸ್ತಾಗಿ ಆಯಾ ಕಸವನ್ನು ಅಲ್ಲಲ್ಲೇ ಹಾಕಿ. ತಿಂದುಳಿದ ಆಹಾರ ಪದಾರ್ಥ, ತರಕಾರಿ ಸಿಪ್ಪೆ, ಹಾಳಾದ ದವಸ ಧಾನ್ಯವನ್ನು ಹಸಿಕಸದ ಡಬ್ಬದಲ್ಲಿ ಹಾಕಿ. ಆಹಾರ ಪದಾರ್ಥಗಳ ಖಾಲಿ ಪೊಟ್ಟಣಗಳು, ಹಾಲು, ಎಣ್ಣೆ ಪಾಕೇಟ್‌ಗಳು, ರದ್ದಿ ಕಾಗದದಂತಹ ವಸ್ತುಗಳನ್ನು ಒಣಕಸದ ಡಬ್ಬದಲ್ಲಿ ಹಾಕಿ

* ಬಳಸಿದ ಮಾಸ್ಕ್‌ ಹಾಗೂ ಗ್ಲೌಸ್‌ಗಳನ್ನು ಕಸದ ಡಬ್ಬಕ್ಕೆ ಹಾಕದೆ ಸುಡಬೇಕು

* ಅಪಾಯಕಾರಿ ವಸ್ತುಗಳು, ಬಳಕೆಯಾದ ಔಷಧಿ ಬಾಟಲಿಗಳು, ಸ್ಯಾನಿಟರಿ ಪ್ಯಾಡ್‌ಗಳನ್ನು (ಮಾಸ್ಕ್‌, ಗ್ಲೌಸ್‌ಗಳನ್ನು ಸುಡಲು ಜಾಗವಿಲ್ಲದೆ ಎಸೆಯುವುದಾದರೆ) ಪೇಪರ್‌ನಲ್ಲಿ ಚೆನ್ನಾಗಿ ಸುತ್ತಿ ಬಚ್ಚಲು ಮನೆಯಲ್ಲಿರುವ ಇನ್ನೊಂದು ಡಬ್ಬದಲ್ಲಿ ಹಾಕಿ. ಅದರ ಮೇಲೆ ಕೆಂಪುಬಣ್ಣದ ಪೆನ್‌ನಿಂದ ‘x’ ಗುರುತು ಹಾಕಿ. ಆ ಗುರುತು ಪೊಟ್ಟಣದಲ್ಲಿ ಅಪಾಯಕಾರಿ ವಸ್ತುಗಳಿವೆ ಎನ್ನುವುದರ ಸೂಚನೆ. ಇದರಿಂದ ಹುಷಾರಾಗಿ ನಿಭಾಯಿಸಲು ಪೌರ ಕಾರ್ಮಿಕರಿಗೆ ಅನುಕೂಲ

‘ಜೀವಕ್ಕೆ ಬೆಲೆ ಕೊಡದ ಸಮಾಜ’

‘ಪೌರ ಕಾರ್ಮಿಕರ ಆರೋಗ್ಯ ತುಂಬಾ ಮುಖ್ಯ. ಈ ಸಂದಿಗ್ಧ ಪರಿಸ್ಥಿತಿ
ಯಲ್ಲಿ ಅವರ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ’ ಎಂದು ಗುತ್ತಿಗೆ ಪೌರ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಹೇಳುತ್ತಾರೆ.

‘ಅವರ ಜೀವಕ್ಕೆ ಈ ಸಮಾಜ ಎಂದೂ ಬೆಲೆ ಕೊಟ್ಟಿಲ್ಲ. ಈಗಲಾದರೂ ಬೆಲೆ ಕೊಡಬೇಕು. ಮಾಸ್ಕ್, ಹ್ಯಾಂಡ್‌ ಗ್ಲೌಸ್‌ ಗಳನ್ನು ಆಗಾಗ ನೀಡಬೇಕು. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಅವರಿಗೆ ತಿಳುವಳಿಕೆ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸುತ್ತಾರೆ.

‘ಕೊರೊನಾ ವೈರಸ್ ಕಾರಣಕ್ಕೆ ಆಗಾಗ ಕೈ ತೊಳೆದುಕೊಳ್ಳಬೇಕು ಎನ್ನುತ್ತಾರೆ. ನೀರು ಕೊಡುವವರು ಯಾರು? ಸುತ್ತಮತ್ತಲ ಮನೆಗಳ ಜನ ಕುಡಿಯಲೂ ನೀರು ಕೇಳಿದರೂ ಕೊಡಲ್ಲ. ಇನ್ನು ಕೈ ತೊಳೆಯಲು ಯಾರು ಕೊಡುತ್ತಾರೆ’ ಎಂದು ಗುತ್ತಿಗೆ ಪೌರ ಕಾರ್ಮಿಕರ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಪಿ.ಎನ್. ಮತ್ಯಾಲಪ್ಪ ಕೇಳುತ್ತಾರೆ.

ಬಸ್ ಇಲ್ಲದೆ ನಡೆದೇ ಸಾಗುತ್ತಿದ್ದೆವು

‘ಬೆಂಗಳೂರಿನ ಗೌರಿಪಾಳ್ಯ, ಚಂದ್ರಪ್ಪನಗರ, ಜಕ್ಕರಾಯನಕೆರೆ, ಶ್ರೀರಾಮಪುರ, ವಿನೋಭಾನಗರ ರೀತಿಯ ಸ್ಲಂಗಳಲ್ಲೇ ನಮ್ಮ ಮನೆಗಳಿವೆ. ಎಲ್ಲಾ ಊರಿನಲ್ಲೂ ಇದೇ ಸ್ಥಿತಿ. ಮನೆಯಿಂದ ಕೆಲಸದ ಸ್ಥಳಕ್ಕೆ ಕಡಿಮೆ ಎಂದರೂ ಐದಾರು ಕಿಲೋ ಮೀಟರ್ ದೂರ ಇರುತ್ತದೆ. 10 ಕಿಲೋ ಮೀಟರ್ ದೂರದಿಂದ ಬರುವವರೂ ಇದ್ದಾರೆ. ಬಸ್‌, ಆಟೊ ಏನೂ ಇಲ್ಲದಿದ್ದ ಕಾರಣ ನಡೆದೇ ಸಾಗುತ್ತಿದ್ದೆವು. ಈಗ ಬಸ್‌ನ ವ್ಯವಸ್ಥೆ ಮಾಡಿದ್ದಾರೆ’ ಎಂದು ಗುತ್ತಿಗೆ ಪೌರ ಕಾರ್ಮಿಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ಆಂಜನೇಯಲು ಹೇಳುತ್ತಾರೆ.

‘ಬೆಳಿಗ್ಗೆ 6.30ಕ್ಕೆ ಹಾಜರಾತಿ ಪಡೆಯುತ್ತಾರೆ. ಅಷ್ಟೊರೊಳಗೆ ಕೆಲಸದ ಸ್ಥಳ ತಲುಪಲು ಬೆಳಿಗ್ಗೆ 5 ಗಂಟೆಗೆ ಮನೆ ಬಿಡುತ್ತಿದ್ದೇವೆ. ಬಸ್‌ ವ್ಯವಸ್ಥೆ ಮಾಡಿಕೊಡಲಾಗಿದೆ. ಕೆಲವೊಂದು ಕಡೆ ಸಮಸ್ಯೆ ಇದೆ. ಬಿಬಿಎಂಪಿ ಅಧಿಕಾರಿಗಳು ಅದನ್ನೂ ಬಗೆಹರಿಸಬೇಕು’ ಎಂದು ಮನವಿ ಮಾಡುತ್ತಾರೆ.

‘ಎಲ್ಲರಿಗೂ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ನೀಡಿದ್ದಾರೆ. ಉಪಾಹಾರ ಮೊದಲ ದಿನವಷ್ಟೇ ರುಚಿಯಾಗಿತ್ತು. ನಂತರ ರುಚಿಯೂ ಇಲ್ಲ, ಹೊಟ್ಟೆ ತುಂಬ ಕೊಡುವುದೂ ಇಲ್ಲ’ ಎಂದು ದೂರುತ್ತಾರೆ.

* ರಾಜ್ಯದಲ್ಲಿರುವ ಗುತ್ತಿಗೆ ಪೌರ ಕಾರ್ಮಿಕರು; 46,000

* ರಾಜ್ಯದ ಕಾಯಂ ಪೌರ ಕಾರ್ಮಿಕರು; 11,200

* ಬೆಂಗಳೂರಿನಲ್ಲಿರುವ ಗುತ್ತಿಗೆ ಪೌರ ಕಾರ್ಮಿಕರು; 16,300

* ಬೆಂಗಳೂರಿನಲ್ಲಿರುವ ಕಾಯಂ ಪೌರ ಕಾರ್ಮಿಕರು; 3,800

ಪೌರಕಾರ್ಮಿಕರಿಗೆ ಗೌರವ ವಂದನೆ

ತಮಿಳುನಾಡಿನ ತಿರುನಲ್ವೇಲಿ ಪಾಲಿಕೆಯ ಪೌರ ಕಾರ್ಮಿಕಳಾಗಿ ಸೇವೆ ಸಲ್ಲಿಸುತ್ತಿರುವ ಎಂ.ಲಕ್ಷ್ಮಿ ಅವರಿಗೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಆ ಕಾರ್ಯಕ್ರಮಗಳ ಸಂದರ್ಭದಲ್ಲಿ ನಡೆಯುವ ಗೌರವ ವಂದನೆ ಸಲ್ಲಿಸುವಂತಹ ಶಿಷ್ಟಾಚಾರಗಳು ಹೊಸದೇನಲ್ಲ. ಹಾಗೆ ನೋಡಿದರೆ ಕಾರ್ಯಕ್ರಮಗಳು ನಡೆಯುವಕ್ರೀಡಾಂಗಣವನ್ನು ಶುಚಿಗೊಳಿಸಿ ಅಣಿಗೊಳಿಸುವುದೇ ಲಕ್ಷ್ಮಿ ಅವರ ತಂಡ. ಕ್ರೀಡಾಂಗಣದ ಮೂಲೆಯಲ್ಲಿನಿಂತು ಅವರು ಗೌರವ ವಂದನೆ ಸಲ್ಲಿಕೆ ಸಮಾರಂಭವನ್ನು ನೋಡುತ್ತಿದ್ದುದು ವಾಡಿಕೆಯಾಗಿತ್ತು.

ಮೂರ್ನಾಲ್ಕು ದಿನಗಳ ಹಿಂದೆ ಪೊಲೀಸರು ಮತ್ತೆ ಗೌರವ ವಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಈ ಸಲ ಲಕ್ಷ್ಮಿ ಹಾಗೂ ಅವರ ಜತೆಗಾರ್ತಿಯರಿಗೆ ಸೋಜಿಗವೊಂದು ಕಾದಿತ್ತು. ಏಕೆಂದರೆ, ಈ ಸಲ ಪೊಲೀಸರು ಗೌರವ ವಂದನೆಯನ್ನು ಸಲ್ಲಿಸಿದ್ದು ಕೊರೊನಾ ಮಾರಿಯ ಸಂದರ್ಭದಲ್ಲೂ ಅಂಜದೆ ನಗರವನ್ನು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿರುವ ತಮಗೇ ಎನ್ನುವುದು ಕೊನೆಯ ಕ್ಷಣದಲ್ಲಿ ಅವರಿಗೆ ಗೊತ್ತಾಗಿತ್ತು.

ಪಾಲಿಕೆ ಆಯುಕ್ತರು ಪೌರ ಕಾರ್ಮಿಕರನ್ನೆಲ್ಲ ಗೌರವ ವಂದನೆ ಸ್ವೀಕರಿಸುವಂತೆ ಕಾರ್ಮಿಕರನ್ನು ಕೇಳಿಕೊಂಡಾಗ ಅವರೆಲ್ಲ ಪುಳಕಗೊಂಡಿದ್ದರು. ‘ನಮಗೆ ಗೌರವ ವಂದನೆಯನ್ನು ಸ್ವೀಕರಿಸುವಂತಹ ಅವಕಾಶ ಸಿಕ್ಕಿದ್ದು ಒಂದು ಅವಿಸ್ಮರಣೀಯ ಕ್ಷಣ. ಇನ್ನೂ ಸಮರ್ಪಣಾಭಾವದಿಂದ ಕೆಲಸ ಮಾಡಲು ಇದರಿಂದ ಪ್ರೇರೇಪಣೆ ಸಿಕ್ಕಿದೆ’ ಎಂದು ಲಕ್ಷ್ಮಿ ಹೇಳುತ್ತಾರೆ.

ಹರಿಯಾಣದ ಅಂಬಾಲಾದ ನಿವಾಸಿಗಳು ಪೌರಕಾರ್ಮಿಕರನ್ನು ಗೌರವಿಸಲು ವಿಶಿಷ್ಟ ಹಾದಿಯನ್ನು ತುಳಿದರು. ಬಾಲ್ಕನಿಯಲ್ಲಿ ನಿಂತು ಪೌರಕಾರ್ಮಿಕರ ಮೇಲೆ ಹೂವಿನ ಮಳೆಗೈದಿದ್ದರು. ಪ್ರತಿಯೊಬ್ಬರ ಕೊರಳಿಗೂ ಹೂವಿನಹಾರ ಹಾಕಿ, ತಮ್ಮ ಕೃತಜ್ಞತೆ ಅರ್ಪಿಸಿದ್ದರು. ಉತ್ತರ ಪ್ರದೇಶದ ಲಖೀಂಪುರದಲ್ಲೂ ಪೌರ ಕಾರ್ಮಿಕರಿಗೆ ಇಂತಹದ್ದೇ ಸ್ವಾಗತಸಿಕ್ಕಿತ್ತು. ನಿತ್ಯದಂತೆ ಕೆಲಸಕ್ಕೆ ಬಂದ ಅವರನ್ನು
ಹೂವು ನೀಡುವ ಮೂಲಕ ನಿವಾಸಿಗಳು ಸ್ವಾಗತ ಕೋರಿದ್ದರು. ಉಪಾಹಾರದ ವ್ಯವಸ್ಥೆಯನ್ನೂ ಮಾಡಿದ್ದರು.

‘ಪೌರಕಾರ್ಮಿಕರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಅವರು ನೀಡುತ್ತಿರುವ ಸೇವೆ ಅನುಪಮವಾದುದು. ಅವರಿಗೆ ಈ ಮೂಲಕ ಕೃತಜ್ಞತೆ ಅರ್ಪಿಸಿದ್ದೇವೆ’ ಎಂದು ಅಲ್ಲಿನ ಜನ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT