ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಒಕ್ಕೂಟ ವ್ಯವಸ್ಥೆಯತ್ತ ನೋಟ

Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಸಂವಿಧಾನದ 1ನೇ ವಿಧಿಯು ಹೇಳುತ್ತದೆ.ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಆದರೆ, ಸಂವಿಧಾನದ 245ರಿಂದ 261ರವರೆಗಿನ ವಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅಧಿಕಾರ ಹಂಚಿಕೆಯನ್ನು ಸ್ಪಷ್ಟಪಡಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರವನ್ನು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ ಎಂದು ವರ್ಗೀಕರಿಸಲಾಗಿದೆ. ಇವೆಲ್ಲವೂ ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿವೆ

ಕೇಂದ್ರ ಪಟ್ಟಿ

ಸಂವಿಧಾನದ 7ನೇ ಷೆಡ್ಯೂಲ್‌ನ 1ನೇ ಭಾಗದಲ್ಲಿ ಇದನ್ನು ವಿವರಿಸಲಾಗಿದೆ.ಕೇಂದ್ರ ಸರ್ಕಾರವು ಕಾನೂನು ರಚಿಸಬಹುದಾದ ವಿಷಯಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಚಿಸುವ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಪಾಲಿಸಲೇಬೇಕಾಗುತ್ತದೆ. ರಾಷ್ಟ್ರೀಯ ಭದ್ರತೆ, ಅಂತರರಾಷ್ಟ್ರೀಯ ಸಂಬಂಧ, ಪೌರತ್ವ ಸೇರಿದಂತೆ 100 ವಿಷಯಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

ರಾಜ್ಯ ಪಟ್ಟಿ

ಸಂವಿಧಾನದ 7ನೇ ಷೆಡ್ಯೂಲ್‌ನ 2ನೇ ಭಾಗದಲ್ಲಿ ಇದನ್ನು ವಿವರಿಸಲಾಗಿದೆ.ರಾಜ್ಯ ಸರ್ಕಾರಗಳು ಕಾನೂನು ರಚಿಸಿ, ಅನುಷ್ಠಾನಕ್ಕೆ ತರಬಹುದಾದ ವಿಷಯಗಳನ್ನು ಈ ಪಟ್ಟಿ ಹೊಂದಿದೆ. ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ, ಸ್ಥಳೀಯಾಡಳಿತ, ಕಂದಾಯ ಸೇರಿದಂತೆ 61 ವಿಷಯಗಳು ಈ ಪಟ್ಟಿಯಲ್ಲಿವೆ. ತುರ್ತು ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ರಚಿಸುವ ಅಧಿಕಾರ ಹೊಂದಿದೆ.

ಸಮವರ್ತಿ ಪಟ್ಟಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಾಧ್ಯತೆ ಹೊಂದಿರುವ, ಕಾನೂನು ರಚಿಸುವ ಅಧಿಕಾರ ಹೊಂದಿರುವ ವಿಷಯಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.‌ಸಂವಿಧಾನದ 7ನೇ ಷೆಡ್ಯೂಲ್‌ನ 3ನೇ ಭಾಗದಲ್ಲಿ ಇದನ್ನು ವಿವರಿಸಲಾಗಿದೆ. ನ್ಯಾಯಾಂಗ, ಪರಿಸರ, ಅಪರಾಧ ಕಾನೂನು, ವಿವಾಹ, ಸಾಮಾಜಿಕ ಭದ್ರತೆ ಮತ್ತು ನ್ಯಾಯ ಸೇರಿದಂತೆ 52 ವಿಷಯಗಳನ್ನು ಈ ಪಟ್ಟಿ ಹೊಂದಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಚಿಸುವ ಕಾನೂನಿಗೆ ಪೂರಕವಾಗಿ ರಾಜ್ಯ ಸರ್ಕಾರಗಳೂ ಕಾನೂನು ರಚಿಸಬಹುದು.

131(ಎ) ವಿಧಿ, ಪ್ರಶ್ನಿಸುವ ಅಧಿಕಾರ ಮತ್ತು ರಾಷ್ಟ್ರಪತಿ ಆಳ್ವಿಕೆ

ಸಂವಿಧಾನಕ್ಕೆ 1976ರಲ್ಲಿ ತಿದ್ದುಪಡಿ ತರುವ ಮೂಲಕ ‘131(ಎ)’ ವಿಧಿಯನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರವು ರಚಿಸುವ ಯಾವುದೇ ಕಾಯ್ದೆಗಳು ಸಂವಿಧಾನಕ್ಕೆ ಬದ್ಧವಾಗಿವೆಯೇ ಎಂಬುದನ್ನು ಪ್ರಶ್ನಿಸುವ ಅಧಿಕಾರವನ್ನು, ಈ ಕಾಯ್ದೆ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಆದರೆ, ಈ ಕಾಯ್ದೆ ಅಡಿ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅರ್ಜಿಗಳನ್ನು ಪರಿಶೀಲಿಸಲು ಸಂವಿಧಾನ ಪೀಠ ರಚಿಸಬೇಕು ಎಂದು ಸಂವಿಧಾನದ ‘144(ಎ)’ ವಿಧಿ ಹೇಳುತ್ತದೆ.

ಕೇಂದ್ರ ಪಟ್ಟಿಯಲ್ಲಿ ಇರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಚಿಸುವ ಕಾಯ್ದೆ ವಿರುದ್ಧವೂ, ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನ ಮೊರೆ ಹೋಗಬಹುದು. ಆದರೆ, ಆ ಕಾಯ್ದೆ ಸಂವಿಧಾನ ಬದ್ಧವೇ ಅಥವಾ ಸಂವಿಧಾನ ಬಾಹಿರವೇ ಎಂಬುದನ್ನು ಇತ್ಯರ್ಥಪಡಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಮಾತ್ರ ಇದೆ. ಈ ವಿಚಾರ ಇತ್ಯರ್ಥವಾಗುವವರೆಗೆ ಕೇಂದ್ರ ಸರ್ಕಾರದ ಕಾನೂನನ್ನು ರಾಜ್ಯ ಸರ್ಕಾರಗಳು ಪಾಲಿಸಲೇಬೇಕು.

ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವುದನ್ನು ರಾಜ್ಯ ಸರ್ಕಾರಗಳು ನಿರಾಕರಿಸುವಂತಿಲ್ಲ. ಕೇಂದ್ರ ಸರ್ಕಾರವು ರಚಿಸಿದ ಕಾನೂನಿಗೆ ಮಾನ್ಯತೆ ಇಲ್ಲ ಎಂದು ಹೇಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಸಂವಿಧಾನದ 245ನೇ ವಿಧಿ ಹೇಳುತ್ತದೆ.

ತಾವು ರಚಿಸಿರುವ ಕಾನೂನನ್ನು ಜಾರಿಗೆ ತನ್ನಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಸಂವಿಧಾನದ 256ನೇ ವಿಧಿಯು ಕೇಂದ್ರ ಸರ್ಕಾರಕ್ಕೆ ನೀಡಿದೆ.

ಕೇಂದ್ರ ಸರ್ಕಾರದ ಕಾನೂನು ಮತ್ತು ನಿರ್ದೇಶನವನ್ನು ರಾಜ್ಯ ಸರ್ಕಾರಗಳು ಪಾಲಿಸದೇ ಇದ್ದರೆ, ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಇದೆ. ಸಂವಿಧಾನದ 356ನೇ ವಿಧಿ ಕೇಂದ್ರ ಸರ್ಕಾರಕ್ಕೆ ಈ ಅಧಿಕಾರ ನೀಡಿದೆ. ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

ಪೌರತ್ವ (ತಿದ್ದುಪಡಿ) ಕಾಯ್ದೆ...

ಪೌರತ್ವ ವಿಚಾರವು ಕೇಂದ್ರ ಪಟ್ಟಿಯಲ್ಲಿ ಬರುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಪಾಲಿಸಲೇಬೇಕು. ಈ ಕಾಯ್ದೆ ವಿರುದ್ಧ ಕೇರಳ ಮತ್ತು ಛತ್ತೀಸಗಡ ಸರ್ಕಾರಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ. ಈ ಕಾಯ್ದೆ ಸಂವಿಧಾನಬದ್ಧವೇ ಎಂಬುದನ್ನು ಸುಪ್ರಿಂ ಕೋರ್ಟ್‌ ಇನ್ನಷ್ಟೇ ಇತ್ಯರ್ಥಪಡಿಸಬೇಕಿದೆ. ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶದವರೆಗೂ ಈ ಕಾನೂನು ಜಾರಿಯಲ್ಲಿ ಇರುತ್ತದೆ. ಇದನ್ನು ಜಾರಿಗೆ ತರುವುದಿಲ್ಲ ಎಂದು ಹೇಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ.

ರಾಜ್ಯಗಳ ಮರು ವಿಂಗಡಣೆ

ಸಂವಿಧಾನದ ಅಂಗೀಕಾರದಿಂದ ಭಾರತವು ಒಕ್ಕೂಟ ವ್ಯವಸ್ಥೆಯಾಗಿ ಬದಲಾದರೂ, ದೇಶದೊಳಗೆ 570ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಾಜರ ಆಡಳಿತ ಜಾರಿಯಲ್ಲಿತ್ತು. ಕೆಲವು ರಾಜರು ತಮ್ಮ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲು ಒಪ್ಪಿದರು. ಆದರೆ ನೂರಾರು ರಾಜರು, ‘ನಾವು ಭಾರತದಲ್ಲಾಗಲಿ, ಪಾಕಿಸ್ತಾನದಲ್ಲಾಗಲಿ ವಿಲೀನವಾಗುವುದಿಲ್ಲ. ಸ್ವತಂತ್ರವಾಗಿ ಆಡಳಿತ ನಡೆಸುತ್ತೇವೆ’ ಎಂದು ಘೋಷಿಸಿಕೊಂಡರು. ಇಂಥ ರಾಜಾಡಳಿತದ ಪ್ರದೇಶಗಳನ್ನು ಒಕ್ಕೂಟ ವ್ಯವಸ್ಥೆಯೊಳಗೆ ತರುವುದು ಅಂದಿನ ಆಡಳಿತಗಾರರಿಗೆ ದೊಡ್ಡ ಸವಾಲಾಗಿತ್ತು.

-1948ರಲ್ಲಿ ಅಲಹಾಬಾದ್‌ ಕೋರ್ಟ್‌ನ ನ್ಯಾಯಾಧೀಶ ಎಸ್‌.ಕೆ. ಧಾರ್‌ ನೇತೃತ್ವದಲ್ಲಿ ಸಮಿತಿ ರಚನೆ. ಭಾಷಾವಾರು ರಾಜ್ಯ ರಚನೆ ಕುರಿತು ಸಲಹೆ ನೀಡುವುದು ಇದರ ಉದ್ದೇಶ

-ಅದೇ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌, ಜವಾಹರಲಾಲ್‌ ನೆಹರೂ, ವಲ್ಲಭಭಾಯಿ ಪಟೇಲ್‌ ಹಾಗೂ ಪಟ್ಟಾಭಿ ಸೀತಾರಾಂ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿತು. ಈ ಸಮಿತಿಯು 1949ರ ಏಪ್ರಿಲ್‌ನಲ್ಲಿ ನೀಡಿದ ವರದಿಯಲ್ಲಿ ಭಾಷಾವಾರು ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಜನರು ಭಾಷಾವಾರು ರಾಜ್ಯ ರಚನೆ ಬಯಸಿದರೆ ಅಭಿಪ್ರಾಯವನ್ನು ಮರುಪರಿಶೀಲಿಸಲು ಸಿದ್ಧ ಎಂದಿತು. ರಾಜಾಡಳಿತದ ಪ್ರಾಂತಗಳನ್ನು ಒಕ್ಕೂಟ ವ್ಯವಸ್ಥೆಯೊಳಗೆ ತರುವಲ್ಲೂ ಈ ಸಮಿತಿ ಮಹತ್ವದ ಪಾತ್ರ ವಹಿಸಿತು

-ಭಾಷಾವಾರು ರಾಜ್ಯಗಳ ರಚನೆಗೆ ಆಗ್ರಹಿಸಿ ಪೊಟ್ಟಿ ಶ್ರೀರಾಮುಲು ನೇತೃತ್ವದಲ್ಲಿ ಆಂಧ್ರದಲ್ಲಿ ಸತತ 56 ದಿನಗಳ ಕಾಲ ನೂರಾರು ಪ್ರತಿಭಟನೆಗಳು ನಡೆದವು. ಪರಿಣಾಮ, 1953ರಲ್ಲಿ ಭಾಷೆ ಆಧಾರದಲ್ಲಿ ಪ್ರತ್ಯೇಕ ಆಂಧ್ರಪ್ರದೇಶ ರಚಿಸುವುದು ಅನಿವಾರ್ಯವಾಯಿತು. ಅದು ಭಾಷೆ ಆಧಾರದಲ್ಲಿ ರಚನೆಯಾದ ಮೊದಲ ರಾಜ್ಯವಾಗಿದೆ

-ಇದಾಗುತ್ತಿದ್ದಂತೆ ಇತರ ರಾಜ್ಯಗಳಲ್ಲೂ ಪ್ರತಿಭಟನೆಗಳು ತೀವ್ರಗೊಂಡವು

-1953ರ ಡಿಸೆಂಬರ್‌ 23ರಂದು ಫಜಲ್‌ ಅಲಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಯಿತು. ಈ ಸಮಿತಿಯು ಭಾಷಾವಾರು 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶ ರಚನೆಯ ಸಲಹೆ ನೀಡಿತು

-1956ರಲ್ಲಿ ರಾಜ್ಯ ಮರುವಿಂಗಡಣಾ ಕಾಯ್ದೆ ರೂಪಿಸಿ, ಅದರ ಅಡಿಯಲ್ಲಿ 14 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳ ರಚನೆ

ಗಣರಾಜ್ಯ– ಸಂವಿಧಾನ ದಿವಸ

ಭಾರತದ ಸಂವಿಧಾನಕ್ಕೆ ಸಂಬಂಧಿಸಿದಂತೆ ಗಣರಾಜ್ಯೋತ್ಸವ ಮತ್ತು ಸಂವಿಧಾನ ದಿವಸ ಮಹತ್ವದ ದಿನಗಳಾಗಿವೆ.

1947ರ ಆಗಸ್ಟ್‌ 29ರಂದು ಸಂವಿಧಾನ ಸಭೆಯು ನಿರ್ಣಯವನ್ನು ಅಂಗೀಕರಿಸಿ, ದೇಶಕ್ಕೆ ಒಂದು ಸಂವಿಧಾನ ರಚಿಸುವ ಸಲುವಾಗಿ ಡಾ. ಅಂಬೇಡ್ಕರ್‌ ನೇತೃತ್ವದಲ್ಲಿ ಕರಡು ಸಂವಿಧಾನ ರಚನಾ ಸಮಿತಿಯೊಂದನ್ನು ರೂಪಿಸಿತು. ಈ ಸಮಿತಿಯು ವಿವಿಧ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಹಾಗೂ ಸಾಕಷ್ಟು ವಿಚಾರ ವಿಮರ್ಶೆಗಳನ್ನು ನಡೆಸಿ ಭಾರತಕ್ಕಾಗಿ ಶ್ರೇಷ್ಠವಾದ ಸಂವಿಧಾನವೊಂದನ್ನು ರಚಿಸಿತು.

ಅಂಬೇಡ್ಕರ್‌ ನೇತೃತ್ವದ ಸಮಿತಿಯು ಮಂಡಿಸಿದ ಸಂವಿಧಾನದ ಕರಡು ಪ್ರತಿಗೆ 1949ರ ನವೆಂಬರ್‌ 26ರಂದು ಸಂಸತ್ತು ಅಂಗೀಕಾರ ನೀಡಿತು. ಇತ್ತೀಚಿನವರೆಗೂ ಈ ದಿನಕ್ಕೆ ಅಷ್ಟೊಂದು ಮಹತ್ವ ನೀಡುತ್ತಿರಲಿಲ್ಲ.

2015ರ ಅಕ್ಟೋಬರ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು,‘ಇನ್ನು ಮುಂದೆ ಪ್ರತಿವರ್ಷವೂ ನವೆಂಬರ್‌ 26ರಂದು ‘ಸಂವಿಧಾನ ದಿನ’ ಆಚರಿಸಲಾಗುವುದು’ ಎಂದು ಘೋಷಿಸಿದರು. ಅದಕ್ಕೂ ಹಿಂದೆ ಈ ದಿನವನ್ನು ‘ಕಾನೂನು ದಿನ’ವಾಗಿ ಆಚರಿಸಲಾಗುತ್ತಿತ್ತು. ದೇಶದ ಮೊದಲ ಕಾನೂನು ಸಚಿವ ಡಾ. ಅಂಬೇಡ್ಕರ್‌ ಅವರ ಗೌರವಾರ್ಥವಾಗಿ ಮತ್ತು ಸಂವಿಧಾನಕ್ಕೆ ಅಂಗೀಕಾರ ನೀಡಿದ ದಿನ ಎಂಬ ಕಾರಣಕ್ಕೆ 2015ರಿಂದ ಆ ದಿನವನ್ನು ‘ಸಂವಿಧಾನ ದಿನ’ವಾಗಿ ಆಚರಿಸಲು ತೀರ್ಮಾನಿಸಲಾಯಿತು. ಅದೇ ವರ್ಷ ನವೆಂಬರ್‌ 19ರಂದು ಆ ಕುರಿತು ರಾಜ್ಯಪತ್ರ ಹೊರಡಿಸಲಾಯಿತು.

ಆದರೆ ಗಣರಾಜ್ಯೋತ್ಸವ ಆಚರಣೆಯು 1950ರಿಂದಲೇ ನಡೆಯುತ್ತಿದೆ. 1949ರ ನವೆಂಬರ್‌ ತಿಂಗಳಲ್ಲಿ ಸಂವಿಧಾನವನ್ನು ಅಂಗೀಕರಿಸಿದರೂ ಅದನ್ನು ಮುಂದಿನ ವರ್ಷದ (1950ರ) ಜನವರಿ 26ರಿಂದ ಜಾರಿಗೊಳಿಸಲು ತೀರ್ಮಾನಿಸಲಾಯಿತು.

ಇದೇ ದಿನ ಯಾಕೆ?

ಗಣರಾಜ್ಯೋತ್ಸವ ದಿನವಾಗಿ ಜನವರಿ 26 ಅನ್ನು ಆಯ್ಕೆ ಮಾಡುವುದಕ್ಕೂ ಕಾರಣವಿದೆ. ಶತಮಾನಗಳ ಕಾಲ ಬ್ರಿಟಿಷ್‌ ಆಳ್ವಿಕೆಯನ್ನು ಅನುಭವಿಸಿದ್ದ ಭಾರತಕ್ಕೆ, 19ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್‌ ಆಡಳಿತವು ‘ಡೊಮೀನಿಯನ್‌’ (ಅರೆ ಸ್ವಾತಂತ್ರ್ಯ) ಸ್ಥಾನಮಾನ ನೀಡಿತ್ತು. ಇದನ್ನು ವಿರೋಧಿಸಿ, 1930ರ ಜನವರಿ 26ರಂದು ಲಾಹೋರ್‌ನಲ್ಲಿ ನಡೆದ ಭಾರತೀಯ ಕಾಂಗ್ರೆಸ್‌ನ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್ಯ’ದ ಘೋಷಣೆಯನ್ನು ಮೊಳಗಿಸಲಾಯಿತು. ಈ ಕಾರಣಕ್ಕಾಗಿಯೇ ಜನವರಿ 26ನೇ ದಿನಾಂಕವನ್ನುಸಂವಿಧಾನ ಜಾರಿಗಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ಎರಡು ವರ್ಷಗಳಲ್ಲಿ 11 ಅಧಿವೇಶನ

1947ರ ಡಿಸೆಂಬರ್‌ 9ರಿಂದ 1949ರ ನವೆಂಬರ್‌ 26ರವರೆಗೆ 308 ಮಂದಿ ಸದಸ್ಯಬಲದ ಸಂವಿಧಾನ ಸಭೆಯು ಒಟ್ಟು 11 ಅಧಿವೇಶನಗಳನ್ನು ನಡೆಸಿತ್ತು.

ಸಂವಿಧಾನದ ಕರಡು ರಚನಾ ಸಮಿತಿ ರಚನೆಯಾಗಿ, ಸಂವಿಧಾನಕ್ಕೆ ಅಂಗೀಕಾರ ನೀಡುವವರೆಗಿನ 2 ವರ್ಷ, 11 ತಿಂಗಳು ಹಾಗೂ 18 ದಿನಗಳಲ್ಲಿ ಸಂವಿಧಾನ ಸಭೆಯು 166 ದಿನಗಳ ಕಲಾಪ ನಡೆಸಿತ್ತು. ಸಂವಿಧಾನದ ಕರಡು ಪ್ರತಿಯನ್ನು ಕುರಿತ ಸಾಕಷ್ಟು ಗಂಭೀರ ಚರ್ಚೆಗಳು ಈ ಸಭೆಗಳಲ್ಲಿ ನಡೆದಿವೆ. ಅಂತಿಮವಾಗಿ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಕೈಬರಹದಲ್ಲಿರುವ ಸಂವಿಧಾನದ ಎರಡು ಪ್ರತಿಗಳನ್ನು ಸಭೆಗೆ ಒಪ್ಪಿಸಲಾಯಿತು. 1950ರ ಜನವರಿ 24ರಂದು ಪುನಃ ಅಧಿವೇಶನ ಆಯೋಜಿಸಿ ಸಂವಿಧಾನದ ಮೂಲ ಪ್ರತಿಯಲ್ಲಿ ಸಮಿತಿಯಲ್ಲಿದ್ದ ಎಲ್ಲಾ ಸದಸ್ಯರ ಸಹಿಯನ್ನು ಪಡೆಯಲಾಗಿತ್ತು.

1950ರ ಜನವರಿ 26ರಂದು ಬೆಳಿಗ್ಗೆ 10.18ಕ್ಕೆ ಸಂವಿಧಾನ ಜಾರಿಯಾಗುವ ಮೂಲಕ ಭಾರತವು ಗಣತಂತ್ರ ದೇಶವಾಯಿತು. ಅಂದಿನಿಂದ ಒಕ್ಕೂಟ ವ್ಯವಸ್ಥೆಯು ಜಾರಿಗೆ ಬಂದಿತು. ಇದಾಗಿ ಕೆಲವೇ ನಿಮಿಷಗಳಲ್ಲಿ, 10.24ಕ್ಕೆ ಡಾ. ರಾಜೇಂದ್ರಪ್ರಸಾದ್‌ ಅವರು ದೇಶದ ಮೊದಲ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಯವರೆಗೂ ಜಾರಿಯಲ್ಲಿದ್ದ ‘ಸಂವಿಧಾನ ಸಭೆ’ಯು ಸಂವಿಧಾನ ಜಾರಿಯಾಗುತ್ತಿದ್ದಂತೆಯೇ ‘ಭಾರತೀಯ ಸಂಸತ್‌’ ಆಗಿ ಬದಲಾಯಿತು.

ಕೈಬರಹದ ಪ್ರತಿ

- ಸಂವಿಧಾನದ ಕೈಬರಹದ ಮೂಲ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಕಾಪಿಡಲಾಗಿದ್ದು, ಇದನ್ನು ಸ್ವತಂತ್ರ ಭಾರತದ ಮಹತ್ವದ ದಾಖಲೆ ಎಂದು ಪರಿಗಣಿಸಲಾಗುತ್ತದೆ.

- ಕಳೆದ ಕೆಲವು ದಶಕಗಳಿಂದ ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಆದರೆ, 1950ರಿಂದ 1954ರವರೆಗೆ ಈ ದಿನದ ಕಾರ್ಯಕ್ರಮಕ್ಕಾಗಿ ಒಂದು ನಿಶ್ಚಿತ ಜಾಗವೇ ಇರಲಿಲ್ಲ. ಒಮ್ಮೆ ಕೆಂಪುಕೋಟೆಯಲ್ಲಿ, ಇನ್ನೊಮ್ಮೆ ನ್ಯಾಷನಲ್‌ ಸ್ಟೇಡಿಯಂನಲ್ಲಿ, ಮತ್ತೊಮ್ಮೆ ರಾಮಲೀಲಾ ಮೈದಾನದಲ್ಲಿ... ಹೀಗೆ ಬೇರೆಬೇರೆ ಕಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 1955ರ ಬಳಿಕ ಶಾಶ್ವತವಾಗಿ ರಾಜಪಥದಲ್ಲೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಯಿತು.

- ರವೀಂದ್ರನಾಥ ಟ್ಯಾಗೋರರು ರಚಿಸಿದ ‘ಜನಗಣ ಮನ’ ಗೀತೆಯನ್ನುಸಂವಿಧಾನ ಸಭೆಯ ಸದಸ್ಯರೇ 1950ರ ಜನವರಿ 24ರಂದು ರಾಷ್ಟ್ರಗೀತೆಯಾಗಿ ಅಂಗೀಕರಿಸಿದ್ದರು. ಮೂಲತಃ ಇದು ಬಂಗಾಳಿ ಭಾಷೆಯ ಗೀತೆಯಾಗಿದ್ದು, ಹಿಂದಿ ಭಾಷೆಗೆ ಅನುವಾದಿಸಲಾಗಿದೆ.

ಅತಿ ದೀರ್ಘ ಲಿಖಿತ ಸಂವಿಧಾನ

ಭಾರತದ ಸಂವಿಧಾನವು ಜಗತ್ತಿನ ಅತಿ ದೀರ್ಘಾವಾದ ಲಿಖಿತ ಸಂವಿಧಾನ

ಆಧಾರ: ಭಾರತ ಸಂವಿಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT