ಮಂಗಳವಾರ, ಆಗಸ್ಟ್ 9, 2022
20 °C

Explainer| ನೇತನ್ಯಾಹುರನ್ನು ಕೆಳಗಿಳಿಸಿ ಇಸ್ರೇಲ್‌ ಪ್ರಧಾನಿಯಾದ ಬೆನೆಟ್ ಯಾರು?

ಪ್ರಜಾವಾಣಿ ವೆಬ್‌ಡೆಸ್ಕ್‌ ‌ Updated:

ಅಕ್ಷರ ಗಾತ್ರ : | |

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರನ್ನು ಭಾನುವಾರ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್‌ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನೇತನ್ಯಾಹು ಬೆಂಬಲಿಗರ ಗದ್ದಲದ ನಡುವೆಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ ಅನುಮೋದನೆ ನೀಡಿತು. ಇದರೊಂದಿಗೆ 12 ವರ್ಷಗಳ ನೇತನ್ಯಾಹು ಯುಗ ಅಂತ್ಯಗೊಂಡಿತು.

ಇದನ್ನೂ ಓದಿ: 

ಹೊಸ ಪ್ರಧಾನಿ ಬೆನೆಟ್‌ ಅವರು ಮಾಜಿ ಪ್ರಧಾನಿ ನೇತನ್ಯಾಹು ಅವರಿಗೆ ಒಂದು ಕಾಲದ ಆಪ್ತರು. ಆದರೆ, ಈಗ ಅವರೇ ಪ್ರಧಾನಿ ಹುದ್ದೆಗೇರಿದ್ದಾರೆ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ಅರಬ್‌ ಪಕ್ಷಗಳ ಮೈತ್ರಿಕೂಟದ ನಾಯಕರಾಗಿದ್ದಾರೆ. ಹಣಕಾಸು ಸಚಿವ, 51 ವರ್ಷದ ಯೇರ್ ಲ್ಯಾಪಿಡ್ ಅವರು ಬೆನೆಟ್‌ ಅವರಿಗೆ ಪರ್ಯಾಯ ಪ್ರಧಾನಿಯಗಿದ್ದಾರೆ. 2023ರಲ್ಲಿ ಅವರಿಗೆ ಪ್ರಧಾನಿ ಹುದ್ದೆ ಹಸ್ತಾಂತರ ಮಾಡುವ ಮಾತುಕತೆ ಮೈತ್ರಿಕೂಟದಲ್ಲಿ ನಡೆದಿದೆ.

ಬೆನೆಟ್ ಮತ್ತು ಲ್ಯಾಪಿಡ್ ಎಂಟು-ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿದ್ದಾರೆ. ಈ ಕೂಟದಲ್ಲಿ ಎಡ, ಬಲ, ಜಾತ್ಯತೀತ ಮತ್ತು ಧಾರ್ಮಿಕ ಪಕ್ಷಗಳೂ ಇವೆ. ನೇತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಒಂದೇ ಉದ್ದೇಶದಿಂದ ಈ ಎಲ್ಲ ಪಕ್ಷಗಳು ಒಟ್ಟುಗೂಡಿವೆ.

ಇದನ್ನೂ ಓದಿ: 

ಬೆನೆಟ್‌ ಅವರ ತಂದೆ ತಾಯಿಯರು ಅಮೆರಿಕನ್ನರು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ತಮ್ಮ ಸ್ಟಾರ್ಟ್‌ಅಪ್‌ ಅನ್ನು 2005ರಲ್ಲಿ ಮಾರಾಟ ಮಾಡಿದ ನಂತರ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಬಲಪಂಥೀಯ ವಿಚಾರಧಾರೆಯ ಮತದಾರರನ್ನೇ ಓಲೈಸುತ್ತಾ ಬಂದಿರುವ ಅವರು, ವೆಸ್ಟ್‌ ಬ್ಯಾಂಕ್‌ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಇಸ್ರೇಲ್‌ನ ನಿಲುವನ್ನು ಬೆಂಬಲಿಸುತ್ತಾರೆ. 2013ರಲ್ಲಿ ಅವರು ಇಸ್ರೇಲ್‌ ರಾಜಕೀಯ ರಂಗಕ್ಕೆ ಬಂದಾಗಿನಿಂದಲೂ ಇದು ಅವರ ದೃಢ ನಿಲುವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲ್‌ನ ರಾಜಕೀಯ ವಿಮರ್ಶಕರು ಮತ್ತು ಪತ್ರಿಕೆಗಳು ಬೆನೆಟ್‌ ಅವರಿಗೆ ‘ಉಗ್ರ ರಾಷ್ಟ್ರವಾದಿ’ ಎಂದು ಹಣೆಪಟ್ಟಿ ಕಟ್ಟಿವೆ. ಯಾಮಿನಾ ಪಕ್ಷದ ಮುಖಂಡ ಬೆನೆಟ್ ಈ ಫೆಬ್ರವರಿಯಲ್ಲಿ ‘ಟೈಮ್ಸ್ ಆಫ್ ಇಸ್ರೇಲ್‌ಗೆ‘ ನೀಡಿದ್ದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು. "ನಾನು ಬೀಬಿ (ನೇತನ್ಯಾಹು) ಗಿಂತ ಪ್ರಬಲ ಬಲಪಂಥೀಯ ಸಿದ್ದಾಂತ ಪ್ರತಿಪಾದಕ. ಆದರೆ ನನ್ನ ರಾಜಕೀಯ ಏಳ್ಗೆಗಾಗಿ ನಾನು ದ್ವೇಷ ಅಥವಾ ಧ್ರುವೀಕರಣದ ಅಸ್ತ್ರ ಬಳಸುವುದಿಲ್ಲ,‘ ಎಂದು ಹೇಳಿದ್ದರು.

ಇದನ್ನೂ ಓದಿ: 

ಬೆನೆಟ್ 2006 ಮತ್ತು 2008 ರ ನಡುವೆ ಈ ಹಿಂದಿನ ಪ್ರಧಾನಿ ನೇತನ್ಯಾಹು ಅವರಿಗೆ ಅತ್ಯಾಪ್ತರಾಗಿದ್ದರು. ಆದರೆ ಮನಸ್ತಾಪದ ಹಿನ್ನೆಲೆಯಲ್ಲಿ ನೇತನ್ಯಾಹು ಅವರ ಲಿಕುಡ್ ಪಕ್ಷವನ್ನು ತೊರೆಯಬೇಕಾಯಿತು. ಅದರ ನಂತರ ಬೆನೆಟ್, ಬಲಪಂಥೀಯ ರಾಷ್ಟ್ರೀಯ, ಧಾರ್ಮಿಕ ವಿಚಾರಧಾರೆಯ ‘ಜ್ಯೂಸ್‌ ಹೋಮ್‌ ಪಾರ್ಟಿ‘ ಸೇರಿದರು. 2013 ರಲ್ಲಿ ಇಸ್ರೇಲ್‌ ಸಂಸತ್ತನ್ನೂ ಪ್ರವೇಶಿಸಿದರು.

ಬೆನೆಟ್ ರಾಜಕೀಯ ಸಿದ್ಧಾಂತಗಳೇನು?

ಬೆನೆಟ್ ಯಹೂದಿ ರಾಷ್ಟ್ರವಾದದ ಪ್ರಬಲ ಪ್ರತಿಪಾದಕರು. 1967ರ ಯುದ್ಧದಲ್ಲಿ ಇಸ್ರೇಲ್-ಸಿರಿಯಾ ಗಡಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿರುವ ವೆಸ್ಟ್‌ ಬ್ಯಾಂಕ್, ಪೂರ್ವ ಜೆರುಸಲೆಮ್ ಮತ್ತು ಗೋಲನ್ ಶ್ರೇಣಿಗಳ ಮೇಲೆ ಯಹೂದಿಗಳ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳಿವೆ ಎಂಬುದನ್ನು ಬೆನೆಟ್‌ ಪ್ರತಿಪಾದಿಸುತ್ತಾರೆ.

ಯಹೂದಿ ವಸಾಹತುಶಾಹಿಗಳನ್ನು ಪ್ರತಿನಿಧಿಸುವ ರಾಜಕೀಯ ಸಮೂಹವಾದ ಯೆಶಾ ಕೌನ್ಸಿಲ್‌ನ ಮುಖ್ಯಸ್ಥರಾಗಿದ್ದ ಬೆನೆಟ್, ವೆಸ್ಟ್‌ ಬ್ಯಾಂಕ್‌ನಲ್ಲಿನ ಯಹೂದಿಗಳ ಹಕ್ಕುಗಳನ್ನು ದೀರ್ಘಕಾಲದಿಂದಲೂ ಪ್ರತಿಪಾದಿಸಿದವರು. ಅದರೆ, ಗಾಜಾದ ಮೇಲಿನ ಇಸ್ರೇಲಿ ಹಕ್ಕುಗಳನ್ನು ಬೆನೆಟ್‌ ಈ ವರೆಗೆ ಸಮರ್ಥಿಸಿಕೊಂಡಿಲ್ಲ.

ಇದನ್ನೂ ಓದಿ: 

ಆದರೆ, ಗಾಜಾದ ಹಮಸ್‌ ಉಗ್ರರ ಮೇಲೆ ಇಸ್ರೇಲ್‌ ದಾಳಿ ನಡೆಸಿದ ವೇಳೆ ಸಾವಿಗೀಡಾದವರು, ಪ್ಯಾಲೆಸ್ಟೀಯನ್ನರಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಬೆನೆಟ್‌ ಹೇಳಿಕೊಂಡಿದ್ದಾರೆ. ಹಮಸ್‌ ಉಗ್ರರಿಗೆ ಮರಣದಂಡನೆಯಾಗಬೇಕು ಎಂದು ಬೆನೆಟ್‌ ವಾದಿಸುತ್ತಾರೆ. ಹೀಗಾಗಿ ಬೆನೆಟ್‌ ಅವರ ಆಗಮನವು ಗಾಜಾ ನಗರದಲ್ಲಿನ ಹಮಸ್‌ ಉಗ್ರರಿಗೆ ಮತ್ತು ಪ್ಯಾಲೆಸ್ಟೀನಿಯನ್ನರ ಮಟ್ಟಿಗೆ ಉತ್ತಮ ಬೆಳವಣಿಗೆಯಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು