ಶನಿವಾರ, ಮೇ 30, 2020
27 °C
ಸ್ವಂತ ಹಣದಿಂದ ತೊಟ್ಟಿಗಳಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿರುವ ಅರಣ್ಯ ಸಿಬ್ಬಂದಿ l ವಾರಕ್ಕೊಮ್ಮೆ ಭರ್ತಿ

Explainer | ಪ್ರಾಣಿಗಳ ದಾಹ ಇಂಗಿಸಲು ‘ನೀರು ಸೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ (ಉತ್ತರ ಕನ್ನಡ): ವನ್ಯಜೀವಿಗಳು ದಾಹದಿಂದ ಪರಿತಪಿಸಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿರುವ ತೊಟ್ಟಿಗಳಿಗೆ, ಸ್ವಂತ ಹಣದಿಂದ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.

ಇಲ್ಲಿನ ಅರಣ್ಯ ಸಿಬ್ಬಂದಿ ಕಾಡಿನಲ್ಲಿರುವ ನೀರಿನ ಸಂಗ್ರಹಾಗಾರಗಳನ್ನು ಟ್ಯಾಂಕರ್ ಮೂಲಕ ತುಂಬಿಸುತ್ತಿದ್ದಾರೆ. ನೀರಿಗಾಗಿ ಜಿಂಕೆ ಮತ್ತಿತರ ಪ್ರಾಣಿಗಳು, ಪಕ್ಷಿಗಳು ನಾಡಿನ ಅಂಚಿನವರೆಗೆ ಬಂದು ಹೋಗುತ್ತಿವೆ. ಜಲಮೂಲಗಳು ಬತ್ತಿರುವಲ್ಲಿ ಈ ಹಿಂದೆ ನಿರ್ಮಿಸಿರುವ ಸಂಗ್ರಹಾಗಾರಗಳಲ್ಲಿ ನೀರು ತುಂಬಿಸುತ್ತಿದ್ದಾರೆ.

ನ್ಯಾಸರ್ಗಿ ರಸ್ತೆಯ ಪಾರ್ವತಿ ಪರಮೇಶ್ವರ ದೇವಸ್ಥಾನದಿಂದ ಎಡಬಲದ ಅರಣ್ಯ ಪ್ರದೇಶ, ಸಾಲಗಾಂವ ಅರಣ್ಯ ಸ.ನಂ.199, ಮಳಗನಕೊಪ್ಪ ಸ.ನಂ.7 ಸೇರಿದಂತೆ ಅರಣ್ಯದಂಚಿನ ಡೋಣಿಗಳಲ್ಲಿ ನೀರು ತುಂಬಿಸಲಾಗಿದೆ. ವಾರಕ್ಕೊಮ್ಮೆ ನೀರು ಭರ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

‘ಅರಣ್ಯ ಸಿಬ್ಬಂದಿಯೇ ಸ್ವಂತ ಹಣದಿಂದ ನೀರು ತುಂಬಿಸಲು ಮುಂದಾಗಿದ್ದಾರೆ. ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶದಲ್ಲಿ ಸದ್ಯ ನೀರು ತುಂಬಿಸಲಾಗುತ್ತದೆ. ಒಂದೆರೆಡು ದೊಡ್ಡ ಮಳೆಯಾದರೆ ತಕ್ಕ ಮಟ್ಟಿಗೆ ಅನುಕೂಲವಾಗುತ್ತದೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ಹೇಳಿದರು.

ಲಾಕ್ ಡೌನ್‍ನಿಂದ ಅನುಕೂಲ: ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಘೋಷಿಸಿರುವುದು ಅರಣ್ಯ ಸಂಪತ್ತು ಉಳಿವಿಗೆ ಅನುಕೂಲವಾಗಿದೆ. ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಅರಣ್ಯದಲ್ಲಿ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದವು. ಆದರೆ ಲಾಕ್ ಡೌನ್ ಪರಿಣಾಮ, ಅರಣ್ಯಕ್ಕೆ ಅಡ್ಡದಾರಿ ಹಿಡಿದು ಬರುವ ಕಳ್ಳರ ಸಂಖ್ಯೆ ಸಂಪೂರ್ಣವಾಗಿ ಬಂದ್‌ ಆಗಿದೆ. ಇದರಿಂದ ಕೃತಕವಾಗಿರುತ್ತಿದ್ದ ಬೆಂಕಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಅಲ್ಲದೇ ಬೆಂಕಿ ಬಿದ್ದ ತಕ್ಷಣವೇ ಅರಣ್ಯ ಸಿಬ್ಬಂದಿಗೆ ಮಾಹಿತಿ ಲಭಿಸುವ ವ್ಯವಸ್ಥೆ ಮಾಡಿರುವುದು ಬೆಂಕಿ ನಿಯಂತ್ರಣಕ್ಕೆ ಕಾರಣವಾಗಿದೆ’ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಹೆಣ್ಣಾನೆಗಳ ಸಾವು

ಹನೂರು (ಚಾಮರಾಜನಗರ): ಕಾವೇರಿ ವನ್ಯಧಾಮದಲ್ಲಿ ಮೂರು ದಿನಗಳ ಅಂತರದಲ್ಲಿ ತುಂಬು ಗರ್ಭಿಣಿ ಸೇರಿದಂತೆ ಎರಡು ಹೆಣ್ಣಾನೆಗಳು ಮೃತಪಟ್ಟಿರುವುದು ತಡವಾಗಿ ಗೊತ್ತಾಗಿದೆ.

ಕೌದಳ್ಳಿ ವನ್ಯಜೀವಿ ವಲಯದ ದಬ್ಬಗುಳಿ ಬೀಟ್‌ ಹಾಗೂ ಉಗನಿಯ ಬೀಟ್‌ನ ಕೊಂಗಮಡುಹಳ್ಳ ಅರಣ್ಯ ಪ್ರದೇಶದಲ್ಲಿ ಆನೆಗಳು ಮೃತಪಟ್ಟಿವೆ. ಗರ್ಭಿಣಿ ಆನೆ ಬೆಟ್ಟದಿಂದ ಜಾರಿ ಬಿದ್ದು ಮೃತಪಟ್ಟರೆ, ಮತ್ತೊಂದು ಆನೆ ಕಾಲು ಜಾರಿ ಬಿದ್ದು ಸತ್ತಿದೆ. 

ಮಾರ್ಚ್‌ 30ರಂದು ದಬ್ಬಗುಳಿ ಬೀಟ್‌ನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಗರ್ಭಿಣಿ ಆನೆ ಮೃತಪಟ್ಟಿರುವುದು ಕಂಡು ಬಂದಿದೆ. ಮೇವಿಗಾಗಿ ಬೆಟ್ಟದಿಂದ ಇಳಿಯುವಾಗ ಕಾಲು ಜಾರಿ ಬಿದ್ದು, ಹೊಟ್ಟೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದೆ. ಆನೆಯ ಹೊಟ್ಟೆಯೊಳಗಿದ್ದ ಮರಿಯಾನೆಯನ್ನು ಮರಣೋತ್ತರ ಪರೀಕ್ಷೆ ವೇಳೆ ತೆಗೆದು ಜತೆಯಾಗಿ ಅಂತ್ಯಸಂಸ್ಕಾರ ಮಾಡಲಾಯಿತು.

ಮಾರ್ಚ್‌ 30ರಂದು ಕೊಂಗಮಡುಹಳ್ಳ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಮತ್ತೊಂದು ಹೆಣ್ಣಾನೆ ಮೃತದೇಹ ಪತ್ತೆಯಾಗಿದೆ. ನೀರು ಕುಡಿಯಲು ಬಂದ ಆನೆ ನದಿ ದಡದಲ್ಲಿ ಬಂಡೆಗಳ ಮೇಲೆ ನಡೆದಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯದೊಳಗೆ ಸುಡಲಾಯಿತು.‌

ಕಾಡಾನೆಗಳ ವಾಕಿಂಗ್‌!

ಮಡಿಕೇರಿ: ಕೊರೊನಾಕ್ಕೆ ಹೆದರಿ ಜನರು ಮನೆಯಲ್ಲಿದ್ದರೆ, ಕಾಡಾನೆಗಳು ಮಾತ್ರ ಕೊಡಗಿನ ರಸ್ತೆಗಳಲ್ಲಿ ಸಂಚರಿಸುತ್ತಿವೆ.

ಲಾಕ್‌ಡೌನ್‌ ಬಳಿಕ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಹೀಗಾಗಿ, ಕಾಡಾನೆಗಳು ಭೀತಿಯಿಲ್ಲದೇ ಅರಣ್ಯ ಪ್ರದೇಶದಿಂದ ರಸ್ತೆಗೆ ಬರುತ್ತಿವೆ. ಆನೆಗಳು ಯಾವುದೇ ಅಳುಕು ಇಲ್ಲದೇ ಸಂಚರಿಸುತ್ತಿರುವ ದೃಶ್ಯ ಒಂದು ವಾರದಿಂದ ಸಾಮಾನ್ಯವಾಗಿದೆ. ಮಾಲ್ದಾರೆ, ಆನೆಚೌಕೂರು, ಸಿದ್ದಾಪುರ, ಗುಹ್ಯದಲ್ಲಿ ಆನೆಗಳು ರಸ್ತೆಗೆ ಬರುತ್ತಿವೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗೇಟ್ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ರಸ್ತೆಯಲ್ಲಿ ನಡೆದಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಕಾಡಾನೆಗಳು ಸಂಚರಿಸುತ್ತಿದ್ದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ತಲೆ, ಕಾಲು ಕತ್ತರಿಸಿದ ಚಿರತೆ ದೇಹ ಪತ್ತೆ

ಅಂಕೋಲಾ (ಉತ್ತರ ಕನ್ನಡ): ಹಲ್ಲು, ಉಗುರು, ತಲೆ ಕತ್ತರಿಸಿ, ದೇಹಕ್ಕೆ ಕಲ್ಲು ಕಟ್ಟಿದ ಸ್ಥಿತಿಯಲ್ಲಿ ಚಿರತೆಯೊಂದರ ದೇಹ ತಾಲ್ಲೂಕಿನ ಮೊರಳ್ಳಿ ಅರಣ್ಯ ವ್ಯಾಪ್ತಿಯ ಕೆರೆಯಲ್ಲಿ ಭಾನುವಾರ ಪತ್ತೆಯಾಗಿದೆ.

ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ, ಉಪ ವಲಯ ಅರಣ್ಯಾಧಿಕಾರಿ ಸತೀಶ ಕಾಂಬ್ಳೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು